ದಿನಕ್ಕೊಂದು ಕಥೆ 844
*🌻ದಿನಕ್ಕೊಂದು ಕಥೆ🌻 ನೆಲದ ನಿವೃತ್ತಿಯ ನಂತರವೂ ವೃತ್ತಿ ಪ್ರೇಮ ಮೆರೆಯುತ್ತಿರುವ ಶಿವಮೂರ್ತಿಯವರ ವಿದ್ಯಾದಾನದ ಕಥೆಯಿದು*
ಕೆಲವರು ತಮಗೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪ ಎಂದು ಹಪಹಪಿಸುತ್ತಾರೆ. ಸಿಕ್ಕ ಮೇಲೆ ಹಲವರೋ ನೌಕರಿಯ ಅವಧಿ ಯಾವಾಗ ಮುಗಿಯತ್ತದೋ ಎಂದು ದಿನಗಳನ್ನು ಎಣಿಸುತ್ತಾ ಕಾಲ ದೂಡುತ್ತಾರೆ. ಕೆಲವರಿಗೋ ನೌಕರಿ ಎಂಬುದೊಂದು ಕೇವಲ ಹೊಟ್ಟೆಪಾಡಿನ ಕಾಯಕ. ಈ ಎಲ್ಲದರ ನಡುವೆ ನಿವೃತ್ತಿಯ ನಂತರವೂ ಮತ್ತೇ ತಮ್ಮ ಕಾಯಕವನ್ನು ಮುಂದುವರೆಸಬೇಕು, ತಮ್ಮ ನಿವೃತ್ತಿಯ ಸಮಯ ವ್ಯರ್ಥವಾಗಿ ಹರಣವಾಗದೆ ಯಾರಿಗಾದರೂ ಪ್ರಯೋಜನವಾಗಬೇಕು ಎಂಬ ಸತ್ ಚಿಂತನೆ – ಸದ್ಭಾವದೊಂದಿಗೆ ಮತ್ತೇ ಉತ್ಸಾಹದಿಂದ ಕ್ರೀಯಾಶೀಲರಾಗಿ ವೃತ್ತಿಪ್ರೇಮ ಮೆರೆಯುವವರೂ ಸಹ ಇದ್ದಾರೆ ಎಂದರೆ ಅಚ್ಚರಿಯಾಗದೆ ಇದ್ದೀತೆ !?. ಈ ಅಚ್ಚರಿಯ ಪ್ರಶ್ನೆಗೆ ಉತ್ತರವೆಂಬಂತಿದ್ದರೂ, ಸದ್ದಿಲ್ಲದೆ ತಮ್ಮ ಪಾಡಿಗೆ ತಾವು ನಿವೃತ್ತಿಯ ನಂತರವೂ ಕಾಯಕದಲ್ಲಿ ತೊಡಗಿದ್ದಾರೆ ದಾವಣಗೆರೆಯ ನಿವೃತ್ತ ಗಣಿತ ಮೇಷ್ಟ್ರು ಶ್ರೀಯುತ ಹೆಚ್.ಎಸ್.ಶಿವಮೂರ್ತಿಯವರು.
*ನಿಸ್ವಾರ್ಥ ಸೇವೆ*
ಎಲ್ಲರಿಗೂ ಗೊತ್ತಿರುವಂತೆ ದುಡ್ಡಿದ್ದರೆ ದುನಿಯಾ ಎಂಬ ಕಾಲವಿದು. ಹಾಗಾಗಿ ಎಲ್ಲರೂ ದುಡ್ಡಿನ ದುಡಿಮೆಗಾಗಿಯೇ ಹೆಚ್ಚೆಚ್ಚು ಸಂಬಳ ಕೊಡುವ ನೌಕರಿಯ ತಲಾಶಿನಲ್ಲಿರುತ್ತೇವೆ. ಅದರಲ್ಲೂ ಗಣಿತ ವಿಷಯ ಓದಿಕೊಂಡಿರುವ ಈ ಮೇಷ್ಟ್ರು ಮನಸ್ಸು ಮಾಡಿದ್ದಿದ್ದರೆ – ಶಾಲಾ ಅವಧಿಯ ಮೊದಲು ಮತ್ತು ನಂತರ ಅಥವಾ ಬಿಡುವಿನ ವೇಳೆಯಲ್ಲಿ ಖಾಸಗಿಯಾಗಿ ಪಾಠ ಹೇಳಿದ್ದರೆ ಸಾಕಿತ್ತು, ಬರೀ ಟ್ಯೂಷನ್ ಮಾಡಿಯೇ ಸಾಕಷ್ಟು ಹಣ ಗಳಿಸಬಹುದಿತ್ತು. ಆದರೆ ಆ ಯೋಚನೆ ಅವರ ತಲೆಯೊಳಗೆ ಎಂದಿಗೂ ಬರಲೇ ಇಲ್ಲ.
ನಿವೃತ್ತಿಯ ನಂತರವಾದರೂ ಆ ವಿಚಾರ ಮನಸ್ಸೊಳಗೆ ಸುಳಿದಿದ್ದರೆ ಸಾಮಥ್ರ್ಯ ಇರುವರೆಗೂ ದುಡಿಮೆ ಮಾಡಲಂತೂ ಅಡ್ಡಿಯೇನಿರಲಿಲ್ಲ. ಆದರೆ ಅವರ ಚಿಂತೆನೆಯೇ ಬೇರೆ ಇತ್ತು. ಹಾಗಾಗಿಯೇ ಅವರು ಆಯ್ದು ಕೊಂಡದ್ದು ಬಡ ಮಕ್ಕಳು ಓದುತ್ತಿರುವ ಸರ್ಕಾರಿ ಶಾಲೆಯ ಸೇವೆಯನ್ನ. ಸಂಭಾವನೆಯನ್ನೇ ಬಯಸದೆ ಈಗಲೂ ಆ ಮಕ್ಕಳಿಗೆ ಪಾಠ ಹೇಳಿ ಅವರ ಶೈಕ್ಷಣಿಕ ಅಭಿವೃದ್ಧಿಯ ಕಂಡು ಸಂತಸ ಕಾಣುತ್ತಿದ್ದಾರೆ ಶಿವಮೂರ್ತಿಯವರು.
*ಓದು – ಬರಹ – ಬದುಕು*
ಹರಪನಹಳ್ಳಿ ತಾಲ್ಲೂಕಿನ ಹೊಸಕೋಟೆ ಗ್ರಾಮದ ಶ್ರೀ ಬಸವನಗೌಡ ಮತ್ತು ಶ್ರೀಮತಿ ಸಿದ್ದಮ್ಮ ದಂಪತಿಗಳ ಪುತ್ರರಾದ ಶಿವಮೂರ್ತಿಯವರು ಮಾದಿಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮುಗಿಸಿ, ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ ಪಿಯುಸಿಯಿಂದ ಪದವಿವರೆಗೆ ಓದಿ, ದಾವಣಗೆರೆಯ ಮಾಗನೂರು ಬಸಪ್ಪ ಕಾಲೇಜಿನಲ್ಲಿ ಬಿ.ಇಡಿ ವಿದ್ಯಾಭ್ಯಾಸ ಪೂರೈಸಿದರು. 1984ರ ವರ್ಷಾರಂಭದಲ್ಲಿ ಕೆಲ ತಿಂಗಳುಗಳ ಕಾಲ ಮಲ್ಪೆಯ ಮಲ್ಪೆ ಸಂಯುಕ್ತ ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಮನಮುಟ್ಟುವಂತೆ ಬೋಧಿಸುವ ತಮ್ಮ ಗಣಿತ ಬೋಧನೆಯ ಶೈಲಿಯಿಂದಾಗಿ ಅಲ್ಪಾವಧಿಯಲ್ಲಿಯೇ ಅಲ್ಲಿನ ವಿದ್ಯಾರ್ಥಿಗಳು ಸೇರಿದಂತೆ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದದವರ ಪ್ರೀತಿಗೂ ಪಾತ್ರರಾದರು.
ಅದೇ ವರ್ಷ ದಾವಣಗೆರೆ ಸಮೀಪದ ತೋಳಹುಣಸೆಯ ಶ್ರೀ ಲಿಂಗೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ಖಾಯಂ ನೌಕರಿ ಸಿಕ್ಕ ಕಾರಣ ಅಲ್ಲಿಂದ ತೆರಳಿದ ಶಿವಮೂರ್ತಿಯವರು ಸುಧೀರ್ಘ 33 ವರ್ಷಗಳ ಕಾಲ ಆ ಶಾಲೆಯ ಮಕ್ಕಳಿಗೆ ಅಚ್ಚುಮೆಚ್ಚಿನ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸಿ 2017 ರಲ್ಲಿ ನಿವೃತ್ತಿ ಹೊಂದಿದರು.
ಪ್ರಸ್ತುತ ದಾವಣಗೆರೆಯ ನಿಟುವಳ್ಳಿಯಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಗಣಿತ ಪಾಠ ಹೇಳುವ ಮೂಲಕ ನಿಸ್ವಾರ್ಥ ಸೇವಾಭಾವದೊಂದಿಗೆ ವಿದ್ಯಾದಾನ ಮಾಡುತ್ತಿದ್ದಾರೆ.
*ಬೋಧನೆಯ ಕಲೆ*
ನಮ್ಮಲ್ಲಿ ಬಹುತೇಕರಿಗೆ ಗಣಿತ ಎಂದರೆ ಕಬ್ಬಿಣದ ಕಡಲೆ, ಇತರೆ ವಿಷಯಗಳಿಗಿಂತಲೂ ಕಠಿಣ ಅಥವಾ ಬೋರಿಂಗ್ ಸಬ್ಜಕ್ಟ್ ಎಂತಲೋ ಅಥವಾ ಗಣಿತವನ್ನು ಬಹಳ ಬುದ್ಧಿವಂತರು ಮಾತ್ರ ಕಲಿಯಬಲ್ಲರೆಂಬ ಪೂರ್ವಾಗ್ರಹ ಭಾವನೆಯೋ ಅಥವಾ ಗಣಿತ ಕಲಿತ ಮಾತ್ರಕ್ಕೆ ತಲೆಗೆ ಕೋಡು ಹೇರಿತೆಂಬ ಅಹಮಿಕೆಯ ಧೋರಣೆಯೋ ಮನೆ ಮಾಡಿ ಬಿಟ್ಟಿದೆ.
ಆದರೆ ಈ ಯಾವ ಭಾವನೆಗಳನ್ನೂ ಮೈಗಂಟಿಸಿಕೊಳ್ಳದೆ 33 ವರ್ಷಕ್ಕೂ ಅಧಿಕ ಕಾಲ ಬೋಧಿಸಿರುವ ಶಿವಮೂರ್ತಿಯವರಿಗೆ ಗಣಿತ ಬೋಧನೆಯನ್ನು ಸರಳೀಕರಿಸಿ ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ ಹಾಗೂ ಗಣಿತದಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ ಮತ್ತು ಅಭಿರುಚಿ ಮೂಡುವಂತೆ ಬೋಧಿಸುವ ಕಲೆ ಅವರಿಗೊಲಿದಿದ್ದ ಕಾರಣ, ಒಮ್ಮೊಮ್ಮೆ ಕೊನೆಯ ಅವಧಿಯಲ್ಲಿ ಇವರ ಕ್ಲಾಸ್ ಇದ್ದರೂ ವಿದ್ಯಾರ್ಥಿಗಳು ಆಸಕ್ತಿಯಿಂದ ಕೂತು ಪಾಠ ಆಲಿಸುತ್ತಿದ್ದರಂತೆ. ಪ್ರಸ್ತುತ ನಿಟುವಳ್ಳಿಯ ಸರ್ಕಾರಿ ಶಾಲೆಯಲ್ಲೂ ಸಹ ಈ ಪರಿಪಾಠ ಮುಂದುವರೆದಿದೆ.
*ವಿದ್ಯಾದಾನದ ತುಡಿತ*
1984 ರಲ್ಲಿ ತೋಳಹುಣಸೆಯ ಶ್ರೀ ಲಿಂಗೇಶ್ವರ ಪ್ರೌಢಶಾಲೆಯಲ್ಲಿ ತಮಗೆ ಖಾಯಂ ನೌಕರಿ ದೊರೆತ ನಂತರ ದಾವಣಗೆರೆ ಹೆಚ್.ಕೆ.ಆರ್ ಸರ್ಕಲ್ ಬಳಿಯ ಲೆನಿನ್ ನಗರದ ನಿವಾಸಿಯಾಗಿರುವ ಶಿವಮೂರ್ತಿಯವರು ಈಗ್ಗೆ ಏಳೆಂಟು ವರ್ಷಗಳಿಂದಲೂ ನಿಟುವಳ್ಳಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರ ಸಂಪರ್ಕದೊಂದಿಗೆ ಆ ಶಾಲೆಯ ನಂಟು ಬೆಳೆಸಿಕೊಂಡಿದ್ದರು. ಲೆನಿನ್ ನಗರ, ಚಿಕ್ಕನಳ್ಳಿ ಬಡಾವಣೆ, ನಿಟುವಳ್ಳಿ ಹೊಸ ಬಡಾವಣೆ, ಕೆಟಿಜೆ ನಗರ ಸೇರಿದಂತೆ ಆಜುಬಾಜಿನ ಬಡ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಅಲ್ಲಿ ಓದುತ್ತಿರುವುದನ್ನು ಗಮನಿಸುತ್ತಿದ್ದರು. ಆ ಶಾಲೆಗೆ ಹೋದ ಪ್ರತಿ ಬಾರಿಯೂ ಅವರ ಮನಸ್ಸಿನಲ್ಲಿ ಆ ಬಡಮಕ್ಕಳಿಗಾಗಿ ತನ್ನ ಕೈಲಾದ ಸಹಾಯವನ್ನೇನಾದರೂ ಮಾಡಬೇಕೆಂಬ ತುಡಿತ ಕಾಡುತ್ತಲೇ ಇತ್ತು. ಕೊನೆಗೊಮ್ಮೆ ತಮ್ಮ ಮನದ ಇಂಗಿತವನ್ನು ಆ ಶಾಲೆಯ ಮುಖ್ಯೋಪಾಧ್ಯಾಯರ ಬಳಿ ವ್ಯಕ್ತಪಡಿಸಿದರು.
ಗಣಿತ ವಿಷಯ ಬೋಧನೆಯಲ್ಲಿ ಅಪಾರ ಅನುಭವಿಗಳು ಹಾಗೂ ಪರಿಣಿತರೂ ಆದ ಶಿವಮೂರ್ತಿಯವರಂತಹ ನುರಿತ ಶಿಕ್ಷಕರು ತಮ್ಮ ಶಾಲೆಗೆ ಬಂದು ಅದರಲ್ಲೂ ಉಚಿತವಾಗಿ ಬೋಧಿಸುತ್ತಾರೆಂದರೆ ಯಾರಿಗಾದರೂ ಸಂತಸ ಉಕ್ಕಿ ಬರದಿದ್ದೀತೇ !?. ಆ ಶಾಲೆಯ ಮುಖ್ಯೋಪಾಧ್ಯಾಯರು ಅತ್ಯಂತ ಹರ್ಷಪಟ್ಟು ಪಾಠ ಬೋಧನೆಗೆ ಹೃತ್ಪೂರ್ವಕ ಸ್ವಾಗತ ನೀಡಿದರು. ಅಂದಿನಿಂದ ತಮ್ಮ ಶಾಲಾವಧಿಯ ಕರ್ತವ್ಯದ ಬಿಡುವಿನ ವೇಳೆಯಲ್ಲಿ ಬೆಳಗ್ಗೆ ಅಥವಾ ಸಂಜೆ ಆ ಶಾಲೆಯ S.S.ಐ.ಅ ವಿದ್ಯಾರ್ಥಿಗಳಿಗೆ ಪಾಠ ಹೇಳಲು ತೊಡಗಿದರು. 2017 ರಲ್ಲಿ ನಿವೃತ್ತಿಯಾದ ನಂತರ ಆ ಅವಧಿ ಹೆಚ್ಚಿತು. ಕಲಿಕೆ ಹಾಗೂ ಫಲಿತಾಂಶದಲ್ಲೂ ಸಹ ಏರಿಕೆ ಕಂಡಿತು.
ಪತ್ನಿ ಶಶಿಕಲಾ ಅವರೊಂದಿಗೆ ಶಿಕ್ಷಕ ಶಿವಕುಮಾರ್
*ಅಪರೂಪದ ವ್ಯಕ್ತಿತ್ವ*
ತಮ್ಮ ಸೇವಾವಧಿಯಲ್ಲಿ ಡಿಡಿಪಿಐ ಮತ್ತು ದಾವಣಗೆರೆ ದಕ್ಷಿಣ ವಲಯ ಬಿಇಓ ಕಚೇರಿಗಳಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಹತ್ತಾರು ತರಬೇತಿ ಮತ್ತು ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಯಾಗಿ, ತಾಲ್ಲೂಕು ಮಟ್ಟದ ಪ್ರಶ್ನೆ ಪತ್ರಿಕೆಗಳ ತಯಾರಕರಾಗಿ, ಗಣಿತ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಹಿಂದುಳಿದ ವರ್ಗಗಳ/ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಕಲಿಕಾ ಪ್ರೋತ್ಸಾಹಕ್ಕಾಗಿ ಶಿಕ್ಷಣ ಇಲಾಖೆಯವರು ರಜಾ ಅವಧಿಯಲ್ಲಿ ನಡೆಸಿದ ವಿಶೇಷ ತರಗತಿಗಳ ಸಂಪನ್ಮೂಲ ವ್ಯಕ್ತಿಯಾಗಿಯೂ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಶ್ರೀಯುತರು ಸಲ್ಲಿಸಿರುವ ಸೇವೆ ಸ್ಮರಣೀಯ. ಆ ಸೇವೆಗಾಗಿ ಇಲಾಖೆ ಹಾಗೂ ಸಾರ್ವಜನಿಕವಾಗಿಯೂ ಅನೇಕ ಪ್ರಶಸ್ತಿ – ಪುರಸ್ಕಾರ, ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದವು. ಆದರೆ ಬಡಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಶ್ರೇಯೋಭಿವೃದ್ಧಿಯೇ ನನ್ನ ಗುರಿ. ಅವರ ಸೇವೆಯಲ್ಲಿಯೇ ನನಗೆ ಸಂತೃಪ್ತಿ – ಸಂತಸ ಎನ್ನುವ ಶಿವಮೂರ್ತಿಯವರು ಶ್ರೀ ಲಿಂಗೇಶ್ವರ ಪ್ರೌಢಶಾಲೆಯು ನನಗೆ – ನನ್ನ ಕುಟುಂಬಕ್ಕೆ ಅನ್ನ ನೀಡಿದೆ, ನಿಟುವಳ್ಳಿಯ ಈ ಸರ್ಕಾರಿ ಶಾಲೆ ತನಗೆ ಕೀರ್ತಿಯನ್ನು ತಂದುಕೊಟ್ಟಿದೆ. ಅದರ ಮುಂದೆ ಇನ್ನ್ಯಾವ ಪ್ರಶಸ್ತಿ – ಪುರಸ್ಕಾರ ದೊಡ್ಡದಿದೆ ಹೇಳಿ ಎಂದು ನಿರಾಳ ಭಾವದಿಂದ ನುಡಿಯುತ್ತಾರೆ.
ಹಣ, ಪ್ರಶಸ್ತಿ-ಪುರಸ್ಕಾರ ಇತ್ಯಾದಿಗಳಿಗಾಗಿ ಶಿಕ್ಷಕ ವೃತ್ತಿಯಲ್ಲೂ ಲಾಬಿ, ರಾಜಕೀಯ ಮಾಡುವ ಮಂದಿಯ ನಡುವೆ ಶಿವಮೂರ್ತಿಯವರಂತಹ ಶಿಕ್ಷಕರು ಸಿಗುವುದು ಅಪರೂಪವೇ ಸರಿ … ಓಂ ಗುರುಭ್ಯೋ ನಮಃ. ಕೃಪೆ: ಗಂಗಾಧರ.ಬಿ.ಎಲ್ & ಸದಾ ಶಿವ.ಶಿಕ್ಷಕರು.ತೋಳುಹುಣಸೆ. ಸಂಗ್ರಹ :ವೀರೇಶ್ ಅರಸಿಕೆರೆ.
Thanks u a lot mestre
ReplyDeleteThanks u a lot mestre
ReplyDelete