ದಿನಕ್ಕೊಂದು ಕಥೆ 847

*🌻ದಿನಕ್ಕೊಂದು ಕಥೆ🌻*                                                                                                           ಕವಿ ಕಾಳಿದಾಸನಿಗೆ ತಾನು ಜ್ಞಾನಿಯಾಗಿರುವುದರ ಅರಿವು ಕೊಂಚ ಹೆಚ್ಚೆ ಆಗಿತ್ತು. ಒಂದು ಬಾರಿ ಪರ್ಯಟನೆ ಮಾಡುತ್ತ ಒಂದು ಊರಿನ ಬಳಿ ಬಂದಾಗ ಬಹಳ ಬಾಯಾರಿಕೆ ಆಯಿತು. ಊರ ಹೊರಗಿನ ಬಾವಿಯ ಬಳಿ ಒಬ್ಬ ವೃದ್ಧ ಸ್ತ್ರೀ ನೀರು ಸೇದುತ್ತಿದ್ದಳು. ಕಾಳಿದಾಸ ಸ್ತ್ರೀಯ ಬಳಿಸಾರಿ, ತಾಯೆ ನನ್ನ ದಾಹ ಅಡಗಿಸಲು ಕೊಂಚ ನೀರು ಕೊಡುವ ಕೃಪೆ ಮಾಡುತ್ತೀರಾ?? ಎಂದು ಕೇಳಿದ.  ವೃದ್ಧ ಸ್ತ್ರೀ, ನನಗೆ ನಿನ್ನ ಪರಿಚಯವಿಲ್ಲವಲ್ಲ ಮಗೂ, ನೀನು ನಿನ್ನ ಪರಿಚಯ ಹೇಳು, ನಾನು ನೀರು ಕೊಡುತ್ತೇನೆ ಎಂದಳು.
ಆಗ ಕಾಳಿದಾಸ ತನ್ನ ಪರಿಚಯ ನೀಡಲು ಪ್ರಾರಂಭಿಸಿದ.
ಕಾ -  ನಾನೊಬ್ಬ ಪ್ರವಾಸಿ
ಸ್ತ್ರೀ - ಲೋಕದಲ್ಲಿ ಪ್ರವಾಸಿಗರು ಇಬ್ಬರೇ. ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ.
ಕಾ - ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ?
ಸ್ತ್ರೀ - ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ.
ನಿಜ ಹೇಳು, ನೀನು ಯಾರು?
ಕಾ - ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ?
ಸ್ತ್ರೀ - ಲೋಕದಲ್ಲಿ ಸಹನಶೀಲರೂ ಇಬ್ಬರೇ!! ಒಂದು ಭೂಮಿ, ಮತ್ತೊಂದು ವೃಕ್ಷ.  ಭೂಮಿ ಪುಣ್ಯವಂತರೊಡನೆ ಪಾಪಿಷ್ಟರನ್ನೂ ಸಹಿಸುತ್ತಾಳೆ. ಹಾಗೆಯೇ ಮರವು ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ.
ಈಗ ಕಾಳಿದಾಸ ಹತಾಶನಾಗತೊಡಗಿದ.
ಕಾ - ನಾನೊಬ್ಬ ಹಠಮಾರಿ
ಸ್ತ್ರೀ - ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾದ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ...ಒಂದು ಉಗುರು, ಇನ್ನೊಂದು ಕೂದಲು.  ಎಷ್ಟು ಬಾರಿ ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ.
ಕಾಳಿದಾಸನಿಗೀಗ ಬೇಸರವಾಗತೊಡಗಿತು.
ಕಾ - ನಾನೊಬ್ಬ ಮುರ್ಖ!!
ಸ್ತ್ರೀ - ಆದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ!! ಒಬ್ಬ ರಾಜ- ಯೋಗ್ಯತೆ ಇಲ್ಲದಿದ್ದರೂ ಎಲ್ಲರ ಮೇಲೂ ಆಳ್ವಿಕೆ ಮಾಡುತ್ತ ದರಬಾರು ಮಾಡುತ್ತಾನೆ.  ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ. ರಾಜನನ್ನು ಓಲೈಸುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ!!
ಈಗ ಕಾಳಿದಾಸ ಏನೂ ಹೇಳುವ ಮನಸ್ಥಿತಿಯಲ್ಲಿ ಉಳಿದಿರಲಿಲ್ಲ. ಆ ವೃದ್ಧ ಸ್ತ್ರೀಯ ಕಾಲಿಗೆ ಬಿದ್ದು ನೀರಿಗಾಗಿ ಬೇಡತೊಡಗಿದ.
ಆಗ ಏಳು ಮಗೂ ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿದ.  ಅಲ್ಲಿ ವೃದ್ಧ ಸ್ತ್ರೀಯ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ದೇವಿ ನಿಂತಿದ್ದಳು. ಆಕೆಗೆ ಕೈಮುಗಿದಾಗ ಸರಸ್ವತಿ ದೇವಿ ಹೇಳಿದಳು. "ವಿದ್ಯೆಯಿಂದ ಜ್ಞಾನ ಸಂಪಾದನೆ ಆಗುತ್ತದೆ, ಗರ್ವ ಅಹಂಕಾರವಲ್ಲ!! ನಿನ್ನ ವಿದ್ಯೆಗೆ ದೊರೆತ ಮಾನ ಸನ್ಮಾನಗಳನ್ನೇ ನೀನು ಸರ್ವಸ್ವವೆಂದು ಭಾವಿಸಿದೆ, ನಿನ್ನ ಕಣ್ಣು ತೆರೆಸುವುದು ಅವಶ್ಯಕವಾಗಿತ್ತು."
ಕಾಲಿದಾಸನಿಗೆ ತನ್ನ ತಪ್ಪಿನ ಅರಿವಾಯಿತು. ಕ್ಷಮೆ ಯಾಚಿಸಿ, ದಾಹ ತಣಿಸಿಕೊಂಡು ತನ್ನ ಮುಂದಿನ ದಾರಿ ಹಿಡಿದು ಸಾಗಿದ.
*ನೀತಿ: ವಿದ್ಯೆಗೆ ವಿನಯವೇ ಭೂಷಣ*.                                        ಕೃಪೆ: ಸುಧಾಕರ ಆರ್ ಬಂಡ್ರಿ.              ಸಂಗ್ರಹ ವೀರೇಶ್ ಅರಸಿಕೆರೆ******************************************************************* 🌻 *ದಿನಕ್ಕೊಂದು ಕಥೆ*🌻

💐 *ಕಷ್ಟಕ್ಕಾದವನೆ ಗೆಳೆಯಾ*💐

ದೊಡ್ಡ ಕಾಡಿನಲ್ಲಿ ಮೊಲವೊಂದಿತ್ತು. ಬಹಳ ಸಾಧು ಸ್ವಭಾವದ ಆ ಮೊಲಕ್ಕೆ ಅನೇಕ ಗೆಳೆಯರಿದ್ದರು. ಒಂದು ದಿನ ಚಿಗುರು ಹುಲ್ಲು ತಿನ್ನುತ್ತಿರುವ ವೇಳೆಯಲ್ಲಿ ದೂರದಿಂದ ಬೇಟೆಯ ನಾಯಿಗಳು ತನ್ನ ಕಡೆಗೆ ಧಾವಿಸಿ ಬರುತ್ತಿರುವುದನ್ನು ಕಂಡಿತು.

ಕೂಡಲೇ ಮೊಲವು ಅಲ್ಲಿಯೇ ಮೇಯುತ್ತಾ ನಿಂತಿದ್ದ ಕುದುರೆಯ ಬಳಿಗೆ ಹೋಗಿ "ಕುದುರೆ ಅಣ್ಣ, ಅಲ್ಲಿ ನೋಡು ಬೇಟೆ ನಾಯಿಗಳು ನನ್ನನ್ನು ಕೊಲ್ಲಲು ಓಡಿ ಬರುತ್ತಿವೆ. ನೀನು ತಕ್ಷಣ ನನ್ನನ್ನು ನಿನ್ನ ಬೆನ್ನ ಮೇಲೆ ಕೂಡಿಸಿಕೊಂಡು ದೂರ ಒಯ್ದು ಬಿಡು" ಎಂದು ವಿನಂತಿಸಿತು. ಆಗ ಕುದುರೆಯು "ಮೊಲರಾಯ, ನಿನಗೆ ಸಹಾಯ ಮಾಡಬಹುದಿತ್ತು, ಆದರೆ ನನ್ನ ಒಡೆಯನು ನನಗೆ ಹೊಸ ಕೆಲಸವೊಂದನ್ನು ವಹಿಸಿದ್ದಾನೆ. ಅದನ್ನು ನಾನು ತಕ್ಷಣ ಮಾಡಿ ಮುಗಿಸಬೇಕಿದೆ ನಿನ್ನಂತಹ ಒಳ್ಳೆಯ ಗೆಳೆಯನಿಗೆ ಹೀಗೆ ಹೇಳಲು ಬೇಸರವೆನಿಸುತ್ತದೆ. ಆದರೇನು ಮಾಡಲಿ?
ಅನಿವಾರ್ಯವಾಗಿ ಹೇಳಲೇಬೇಕಾಗಿದೆ. ನಿನಗೇನು ಬಹಳ ಸ್ನೇಹಿತರಿದ್ದಾರೆ ಯಾರಾದರೂ ಸಹಾಯ ಮಾಡುತ್ತಾರೆ" ಎಂದಿತು.

ಕುದುರೆಯ ಮಾತುಗಳನ್ನು ಕೇಳಿ ಮೊಲ ಮುಂದಕ್ಕೆ ಹೊರಟಿತು. ಅಲ್ಲಿ ಒಂದು ಎತ್ತು ಮೇಯುತ್ತಿತ್ತು. ಎತ್ತಿಗೂ ಮೊಲಕ್ಕೂ ಬಹಳ ಸ್ನೇಹ ಈ ಆಪತ್ಸಮಯದಲ್ಲಿ ಎತ್ತು ತನಗೆ ಸಹಾಯ ಮಾಡಬಹುದು ಅನಿಸಿತು, ಅಂತೆಯೇ ಅದು, "ಎತ್ತಣ್ಣಾ, ಬೇಟೆ ನಾಯಿಗಳಿಂದ ನನ್ನನ್ನು ರಕ್ಷಿಸು ಅಂದಿತು." ಆಗ ಆ ಎತ್ತು "ತಮ್ಮಾ, ನಿನ್ನಂತಹ ಗೆಳೆಯನಿಗೆ ಕಷ್ಟ ಬಂದಾಗ ಸಹಾಯ ಮಾಡುವುದು ನನಗೂ ಹೆಮ್ಮೆಯ ವಿಷಯವೇ, ಆದರೆ ಈಗ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ವ್ಯಥೆಯಾಯಿತು, ಏಕೆಂದರೆ ನಾನು ಈಗ ತಕ್ಷಣ ಒಬ್ಬ ದೂರದ ನೆಂಟರನ್ನು ನೋಡಲು ಹೋಗಬೇಕಾಗಿದೆ. ಅಲ್ಲಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನನ್ನು ಕ್ಷಮಿಸು, ಆಗೋ ಅಲ್ಲಿರುವ ಕತ್ತೆಯ ಸಹಾಯ ಕೇಳು" ಎಂದು ಸಲಹೆ ನೀಡಿತು.

ಆಗ ಮೊಲವು ಕತ್ತೆಯ ಬಳಿಗೆ ಹೋಯಿತು. ಆ ಕತ್ತೆಯೂ ಏನೋ ಸಬೂಬು ಹೇಳಿ ಸಹಾಯ ಮಾಡದೆ ತಪ್ಪಿಸಿಕೊಂಡಿತು. ಅಷ್ಟೊತ್ತಿಗೆ ನಾಯಿಗಳು ಸಮೀಪಕ್ಕೆ ಬಂದಿದ್ದವು. ಆಗ ಮೊಲ ಗೆಳೆಯರನ್ನು ನಂಬುವ ಹುಚ್ಚು ಹವ್ಯಾಸ ಬಿಟ್ಟು ಕಾಲುಗಳ ಶಕ್ತಿಯ ಮೇಲೆ ನಂಬಿಕೆಯಿರಿಸಿ ಓಡಲು ಶುರುಮಾಡಿ ಕ್ಷಣಗಳಲ್ಲಿ ನಾಯಿಗಳ ಕಣ್ಣಿಗೆ ಬೀಳದಷ್ಟು ದೂರ ಓಡಿ ಹೋಗಿ ತನ್ನ ಪ್ರಾಣ ಕಾಪಾಡಿಕೊಂಡಿತು.


*ನೀತಿ :*
*ಕಷ್ಟದ ಸಮಯದಲ್ಲಿ ಗೆಳೆತನದ ಗುಟ್ಟು ತಿಳಿಯುವುದು, ಆ ಸಮಯದಲ್ಲಿ ಸಹಾಯ ಮಾಡುವವನೇ ನಿಜವಾದ ಗೆಳೆಯ.*

ಕೃಪೆ: ಕಿಶೋರ್.                                             ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059