ದಿನಕ್ಕೊಂದು ಕಥೆ 866

*🌻ದಿನಕ್ಕೊಂದು ಕಥೆ🌻                                                    ಹಾಡುಗರು ನೀವು! ಕೇಳುಗರು ನಾವು! ದೇವರ ದಯೆ ಎಲ್ಲಿಂದ?*

ಇಲ್ಲಿ ಎರಡು ಕುತೂಹಲಕಾರಿ ಘಟನೆಗಳು ಇವೆ. ಎರಡೂ ದೇವರ ದಯೆಯ ಬಗೆಗೇ ಇವೆ!

ನಮ್ಮ ಸ್ವಾಮೀಜಿಯವರು ಉತ್ತಮ ಉಪನ್ಯಾಸಕರು ಮತ್ತು ಹಾಡುಗಾರರು. ಸಭೆಯಲ್ಲಿ ನೂರು ಜನರಿರಲಿ ಅಥವಾ ಸಾವಿರ ಜನರಿರಲಿ, ಅವರು ಸಭಿಕರತ್ತ ನೋಡುತ್ತಿರಲಿಲ್ಲ. ತಮ್ಮ ಪಾಡಿಗೆ ತಾವು ಕಣ್ಮುಚ್ಚಿಕೊಂಡು ತನ್ಮಯರಾಗಿ ಸಭಿಕರೂ ಅಷ್ಷೇ ತನ್ಮಯರಾಗಿ ಕೇಳುತ್ತಿದ್ದರು. ಕಾರ್ಯಕ್ರಮದ ನಂತರ, ಸಭಿಕರು ಸ್ವಾಮೀಜಿಯವರ ಗಾಯನ ಅದ್ಭುತವಾಗಿತ್ತೆಂದು ಅಭಿನಂದಿಸಿದರೆ, ಅವರು ನಗುನಗುತ್ತಲೇ ನನ್ನದೇನಿದೆ? ಹಾಡುವ ಪ್ರಯತ್ನ ಮಾತ್ರ ನನ್ನದು! ಅದು ನಿಮಗೆ ಅದ್ಭುತವೆನಿಸಿದ್ದರೆ, ಅದೆಲ್ಲಾ ದೇವರ ದಯೆ! ಎಂದುಬಿಡುತ್ತಿದ್ದರು.

ಒಮ್ಮೆ ಸ್ವಾಮೀಜಿಯವರು ಉಪನ್ಯಾಸ ಕಾರ್ಯಕ್ರಮದ ನಂತರ ಭಕ್ತರ ಮೆಚ್ಚುಗೆಗೆ ಯಾವಾಗಲೂ ಕೊಡುತ್ತಿದ್ದ ‘ಎಲ್ಲ ದೇವರ ದಯೆ’ ಎಂಬ ಉತ್ತರವನ್ನೇ ಕೊಟ್ಟಾಗ, ಆ ಭಕ್ತರೊಬ್ಬರು, ‘ಸ್ವಾಮೀಜಿ! ಹಾಡುಗರು ನೀವು! ಕೇಳುಗರು ನಾವು! ಇದರಲ್ಲಿ ದೇವರ ಎಲ್ಲಿಂದ ಬಂತು?’ ಎಂದು ಕೇಳಿದರು. ಸ್ವಾಮೀಜಿಯವರು ನಸುನಗುತ್ತಾ ನಾನು ಹಾಡಲು ಪ್ರಯತ್ನಿಸಬಹುದು.

ಆದರೆ ನನಗೇ ಗೊತ್ತಿಲ್ಲದ ಕಾರಣಕ್ಕಾಗಿ ನನ್ನ ಗಂಟಲು ಕೆಡಬಹುದು. ಧ್ವನಿವರ್ಧಕ ಸರಿಯಾಗಿ ಕೆಲಸ ಮಾಡದಿರಬಹುದು. ಸಭೆಗೆ ಬರಲು ಕೇಳುಗರಿಗೆ ಸಾಧ್ಯವಾಗದಿರಬಹುದು. ಬಂದವರದ್ದೂ ಮನಸ್ಥಿತಿ ಸರಿಯಿಲ್ಲದಿರಬಹುದು. ಸಭೆಯಲ್ಲಿ ಏನೋ ಗುಜುಗುಜು, ಏನೋ ಗದ್ದಲ ನಡೆಯುತ್ತಿರಬಹುದು. ಹೀಗೆ ಹತ್ತಾರು ವಿಘ್ನಗಳು ಬರಬಹುದು. ಇವುಗಳನ್ನು ನಿಯಂತ್ರಿಸುವುದು ನಮ್ಮ ಕೈಯ್ಯಲ್ಲಿಲ್ಲ. ಹಾಗಾಗಿ ಎಲ್ಲವೂ ಸರಿಯಾಗಿ ನಡೆದರೆ ಅದೆಲ್ಲ ದೇವರ ದಯೆ ಎಂದು ತಪ್ಪೇನಿದೆ? ಎಂದರು.

ಪ್ರಶ್ನೆ ಕೇಳಿದ ಭಕ್ತರು ಅಹುದಹುದು ಎನ್ನುವಷ್ಟರಲ್ಲಿ, ಸ್ವಾಮೀಜಿಯವರು ನಿಮಗೆ ಮತ್ತೊಂದು ಘಟನೆಯನ್ನು ಹೇಳಬೇಕು. ನನ್ನ ಗೆಳೆಯರೊಬ್ಬರು ಮಾನಸಿಕ ಅಸ್ವಸ್ಥರ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ಅವರೊಮ್ಮೆ ನನ್ನನ್ನು ಅವರ ಆಸ್ಪತ್ರೆಗೆ ಆಹ್ವಾನಿಸಿದ್ದರು. ನನ್ನನ್ನು ಗೌರವಾದರಗಳಿಂದ ಬರಮಾಡಿಕೊಂಡು ಆಸ್ಪತ್ರೆಯನ್ನೆಲ್ಲ ತೋರಿಸಿದರು. ಆನಂತರ ರೋಗಿಗನ್ನುದ್ದೇಶಿಸಿ ಒಂದರ್ಧ ಗಂಟೆ ಮಾತನಾಡಲು ಕೇಳಿಕೊಂಡರು. ಮಾನಸಿವಾಗಿ ಅಸ್ವಸ್ಥರಾಗಿರುವ ರೋಗಿಗಳನ್ನುದ್ದೇಶಿಸಿ ಮಾತನಾಡುವುದೇನೆಂದು ನಾನು ಕೊಂಚ ಯೋಚಿಸಿದೆ. ಆನಂತರ ಅವರೂ ಭಗವಂತ ಸ್ವರೂಪವೇ ಅಲ್ಲವೇ? ಎಂದು ಯೋಚಿಸಿ, ಅವರನ್ನುದ್ದೇಶಿಸಿ ಗಂಟೆಕಾಲ ‘ದೇವರ ದಯೆ’ ಎನ್ನುವ ವಿಷಯವಾಗಿಯೇ ಮಾತನಾಡಿದೆ. ರೋಗಿಗಳು ಕೆಲವರು ಕೇಳಿಸಿಕೊಳ್ಳುತ್ತಿದ್ದರು. ಕೆಲವರು ಎಲ್ಲೋ ನೋಡುತ್ತಿದ್ದರು. ಮತ್ತೆ ಕೆಲವರು ತಮ್ಮದೇ ಆದ ಪ್ರಪಂಚದಲ್ಲಿದ್ದರು. ಆದರೆ ಒಬ್ಬರು ಮಾತ್ರ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದರು. ಕಣ್ಣರಳಿಸಿ, ಕಿವಿಗೊಟ್ಟು ಕೇಳುತ್ತಿದ್ದರು. ಗಮನವಿಟ್ಟು ಕೇಳುವ ಒಳ್ಳೆಯ ಶ್ರೋತೃ ಒಬ್ಬರಾದರೂ ಸಿಕ್ಕರಲ್ಲ ಎಂದು ಮನಸ್ಸಿನಲ್ಲೇ ಸಂತೋಷಪಟ್ಟೆ.

ನನ್ನ ಉಪನ್ಯಾಸ ಮುಗಿಯಿತು. ಎಲ್ಲರೂ ಹೊರಟರು. ಮಾತನ್ನು ಗಮನವಿಟ್ಟು ಕೇಳುತ್ತಿದ್ದ ಆ ಏಕಮಾತ್ರ ಶ್ರೋತೃ ಹೋಗುವ ಮುಂಚೆ ವೈದ್ಯರಾದ ಗೆಳೆಯರೊಂದಿಗೆ ಏನೋ ಮಾತನಾಡಿಕೊಂಡು ಹೋದರು. ನಾನು ಗೆಳೆಯರನ್ನು ‘ಉಪನ್ಯಾಸವನ್ನು ಗಮನವಿಟ್ಟು ಕೇಳುತ್ತಿದ್ದ ಶ್ರೋತೃ ಅವರೊಬ್ಬರೇ! ನಿಮ್ಮೊಂದಿಗೆ ಅವರೇನು ಹೇಳಿದರು?’ ಎಂದು ಪ್ರಶ್ನಿಸಿದೆ. ಗೆಳೆಯರು ತಕ್ಷಣ ಉತ್ತರಿಸಲು ಹಿಂದೆಮುಂದೆ ನೋಡಿದರು. ನಾನು ಒತ್ತಾಯ ಮಾಡಿದಾಗ, ಅವರು ಸಂಕೋಚಪಟ್ಟುಕೊಳ್ಳುತ್ತಲೇ ಆತ ‘ಅವರು ಉಪನ್ಯಾಸದಲ್ಲಿ ಏನೇನೋ ಹೇಳಿದರು. ನನಗೆ ಒಂಚೂರೂ ಅರ್ಥವಾಗಲಿಲ್ಲ. ಅವರು ಹುಚ್ಚಾಸ್ಪತ್ರೆಯ ಹೊರಗಿದ್ದಾರೆ. ನಾನು ಒಳಗಿದ್ದೇನೆ. ಅದೇ ದೇವರ ದಯೆ!’ ಎಂದು ಹೇಳಿದರು, ಎಂದಾಗ, ಏನು ಹೇಳಲೂ ನನಗೆ ತೋಚಲಿಲ್ಲ. ಅಲ್ಲಿಂದ ಹೊರಬಂದೆ.

ಅಂದಿನಿಂದ ನಾನು ಎಲ್ಲೇ ಇದ್ದರೂ, ಏನೇ ಆದರೂ ಅದು ದೇವರ ದಯೆ ಎಂದೇ ಭಾವಿಸುತ್ತೇನೆ. ಅದಿಲ್ಲದಿದ್ದರೆ ನಾನು ಹುಚ್ಚಾಸ್ಪತ್ರೆಯ ಒಳಗಿರುತ್ತಿದ್ದೆನೋ, ಹೊರಗಿರುತ್ತಿದ್ದೆನೋ ನನಗೆ ಹೇಗೆ ಗೊತ್ತಾಗಬೇಕು ಎಂದುಕೊಳ್ಳುತ್ತೇನೆ ಎಂದು ಹೇಳಿ ಮಾತು ಮುಗಿಸಿದರಂತೆ!

ಸ್ವಾಮೀಜಿಯವರ ಮಾತು ನಮಗೂ ಅನ್ವಯವಾಗುತ್ತದಲ್ಲವೇ?                                                         ಕೃಪೆ: ಷಡಕ್ಷರಿ ವಿಶ್ವ ವಾಣಿ.                                            ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059