ದಿನಕ್ಕೊಂದು ಕಥೆ 889
*🌻ದಿನಕ್ಕೊಂದು ಕಥೆ🌻*
*ಬಂಗಾರವನ್ನು ಕಾಣುವವರಿಗೆ ಭಗವಂತ ಕಾಣುವುದಿಲ್ಲ !*
ಬಂಗಾರದ ಮತ್ತು ಭಗವಂತನ ಕಾಣುವಿಕೆಯ ಬಗೆಗಿನ ಈ ಕತೆಯನ್ನು ಹೇಳಿದವರು ನಮ್ಮ ಸ್ವಾಮಿಅವರ ಪುಣ್ಯಸ್ಮರಣೆಗೆ ಪ್ರಣಾಮಗಳು.
ಬಹಳ ಹಿಂದೆ ಮಹಾರಾಷ್ಟ್ರದಲ್ಲಿ ರಮ್ಜಾ ಎಂಬ ಶ್ರೀಮಂತ ರೈತರಿದ್ದರಂತೆ. ಕುರಿಸಾಕಣೆ ಅವರ ವೃತ್ತಿ. ಅವರಿಗೆ ಖಂಡೋಬಾ ದೇವರಲ್ಲಿ ಅನನ್ಯ ಭಕ್ತಿ. ಖಂಡೋಬಾ ದೇವಸ್ಥಾನ ಪುಣೆಯ ಬಳಿಯಿರುವ ಜೇಬೂರಿಯಲ್ಲಿದೆ. ಒಕ್ಕಲುತನ ಮಾಡುವವರು, ಕುರುಬರು, ಬೇಡರು, ಯೋಧರು ಖಂಡೋಬಾ ದೇವರನ್ನು ‘ಖಂಡೇರಾವ್’, ‘ಖಂಡೇರಾಯ’, ‘ಮಲ್ಹಾರಿ’, ‘ಮಾರ್ತಾಂಡ’ ಮುಂತಾದ ಹೆಸರುಗಳಿಂದ ಪೂಜಿಸುತ್ತಾರೆ. ಬಹಳ ನಂಬುತ್ತಾರೆ. ಮುಸಲ್ಮಾನರು ಈ ದೇವರನ್ನು ಮಲ್ಲೂ ಖಾನ್ ಅಥವಾ ಅಜ್ಮಲ್ ಖಾನ್ ಎಂಬ ಕರೆದರೆ, ಕನ್ನಡಿಗರು ’ಮೈಲಾರಲಿಂಗ’ ನೆಂದು ಪೂಜಿಸುತ್ತಾರೆ. ಸಾಮಾನ್ಯವಾಗಿ ಎತ್ತನ್ನೋ, ಕುದುರೆಯನ್ನೋ ವಾಹನವಾಗಿ ಹೊಂದಿರುವ ಖಂಡೋಬಾ ದೇವರು ಕೈಯಲ್ಲಿ ಖಟ್ವಾಂಗಿಯನ್ನು ಆಯುಧವಾಗಿ ಹಿಡಿದಿರುತ್ತಾರೆ.
ಶ್ರೀಮಂತರಾದ ರಮ್ಜಾ ಅವರು ಖಂಡೋಬಾ ದೇವರ ಚಿನ್ನದ ಪ್ರತಿಮೆಯನ್ನು ಮಾಡಿಸಿಟ್ಟುಕೊಂಡಿದ್ದರು. ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಒಮ್ಮೆ ಇದ್ದಕ್ಕಿದ್ದಂತೆ ಸಾಂಕ್ರಾಮಿಕ ಪೀಡೆಗೆ ತುತ್ತಾಗಿ ರಮ್ಜಾರವರ ಸಾವಿರಾರು ಕುರಿಗಳು ಸಾವನ್ನಪ್ಪಿದವು. ದಿನಬೆಳಗಾಗುವುದರಲ್ಲಿ ರಮ್ಜಾ ಬರಿಗೈಯವರಾಗಿಬಿಟ್ಟರು. ಸಿರಿತನ ಮಾಯವಾಗಿತ್ತು. ಬಡತನ ಬಂದೆರಗಿತ್ತು. ಆದರೆ ಅವರು ದಿಕ್ಕೆಡಲಿಲ್ಲ. ಆತ್ಮಹತ್ಯೆಯ ಚಿಂತೆಮಾಡಲಿಲ್ಲ. ಮತ್ತೆ ತಮ್ಮ ಪುನರಾರಂಭಿಸಿದರು. ಬಂಡವಾಳಕ್ಕಾಗಿ ಪರದಾಡುತ್ತಿದ್ದರು.
ಆಗ ಹಿತೈಷಿಗಳು ಬಂಡವಾಳಕ್ಕಾಗಿ ಪರದಾಡುವ ಬದಲು ನಿಮ್ಮ ಬಳಿಯಿರುವ ಬಂಗಾರದ ಖಂಡೋಬಾರವರ ಪ್ರತಿಮೆಯನ್ನು ಮಾರಿದರೆ ಲಕ್ಷಾಂತರ ರೂಪಾಯಿಗಳು ಸಿಗುತ್ತವೆ. ಅದನ್ನು ಬಳಸಿ ನಿಮ್ಮ ವೃತ್ತಿಯನ್ನು ಪುನರಾರಂಭಿಸಿ. ನಿಮ್ಮ ಬಡತನ ನಿವಾರಣೆಯಾಗಿ, ಮತ್ತೆ ಸಿರಿವಂತರಾದ ಮೇಲೆ ಮತ್ತೆ ಬಂಗಾರದ ಪ್ರತಿಮೆ ಮಾಡಿಸಿದರಾಯಿತು ಎಂದು ಸೂಚಿಸಿದರು. ರಮ್ಜಾರವರಿಗೂ ಇದು ಸೂಕ್ತವೆನಿಸಿತು.
ಅವರು ತಮ್ಮ ಬಳಿಯಿದ್ದ ಬಂಗಾರದ ಪ್ರತಿಮೆಯನ್ನು ಬಂಗಾರದ ಅಂಗಡಿಗೊಯ್ದು ಮಾರಲು ಯತ್ನಿಸಿದರು. ಅಂಗಡಿಯವರು ಕುದುರೆಯನ್ನೇರಿ ಕುಳಿತಿರುವ ದೇವರ ಪ್ರತಿಮೆಯನ್ನು ಅಚ್ಚ ಬಂಗಾರವೇ ಎಂದು ಪರೀಕ್ಷಿಸಿದರು. ತೂಕ ಹಾಕಿದರು. ಲೆಕ್ಕ ಹಾಕಿದರು. ಪ್ರತಿಮೆಯಲ್ಲಿ ಕುದುರೆಯಿದೆ. ಅದರ ಮೇಲೆ ಸವಾರನಿದ್ದಾನೆ. ಕುದುರೆಯ ತೂಕ ಸವಾರನ ತೂಕದ ಎರಡರಷ್ಟಿದೆ. ಕುದುರೆ ಭಾಗಕ್ಕೆ ಎರಡು ಲಕ್ಷ ಮತ್ತು ಸವಾರನ ಮೂರ್ತಿಗೆ ಒಂದು ಲಕ್ಷ ಹಣ ಕೊಡುತ್ತೇವೆ ಎಂದರು.
ರಮ್ಜಾರವರಿಗೆ ಇದು ಹಿಡಿಸಲಿಲ್ಲ. ನಿಮ್ಮ ಲೆಕ್ಕಾಚಾರ ಸರಿಯಿಲ್ಲ. ಸವಾರನ ಮೂರ್ತಿಗೆ ಅಂದರೆ ದೇವರಿಗೆ ಒಂದು ಲಕ್ಷ ಕೊಡುತ್ತೇನೆನ್ನುತ್ತೀರಿ. ಕುದುರೆಗೆ ಎರಡು ಲಕ್ಷ ಕೊಡುತ್ತೇನೆನ್ನುತ್ತೀರಿ. ಕಡಿಮೆ ಹಣ ದೇವರಿಗೆ ಸಿಗುತ್ತದೆ ಎನ್ನುವುದನ್ನು ನಾನು ಒಪ್ಪಲಾರೆ ಎನ್ನುತ್ತ ತಾಳ್ಮೆ ಕಳೆದುಕೊಂಡರು. ತಕರಾರು ತೆಗೆದರು. ಜಗಳಕ್ಕೇ ನಿಂತರು. ಅಂಗಡಿಯವರು ವ್ಯಾಪಾರಸ್ಥರು. ತಾಳ್ಮೆ ಕಳೆದುಕೊಳ್ಳಲಿಲ್ಲ. ಅವರು ನಿಮಗೆ ಪ್ರತಿಮೆಯಲ್ಲಿ ಭಗವಂತ ಕಾಣಿಸುತ್ತಾರೆ. ನಮಗೆ ಕೇವಲ ಬಂಗಾರ ಕಾಣಿಸುತ್ತದೆ ಎಂದರು.
ಕೊನೆಗೆ ಯಾರೋ ಮದ್ಯಸ್ತಿಕೆ ಮಾಡಿ ವ್ಯಾಪಾರ ಕುದುರಿಸಿದರಂತೆ. ರಮ್ಜಾರವರು ಹಣವನ್ನು ಪಡೆದು ಹೋದರಂತೆ. ಶ್ರದ್ಧೆಯಿಂದ ಕಷ್ಟಪಟ್ಟು ದುಡಿದರು. ಕೆಲವೇ ವರ್ಷಗಳಲ್ಲಿ ಮೊಲಿನ ಸಿರಿವಂತಿಕೆಯನ್ನು ಗಳಿಸಿದರು. ಮತ್ತೆ ಮೊದಲಿದ್ದ ಪ್ರತಿಮೆಗಿಂತ ದೊಡ್ಡ ಪ್ರತಿಮೆಯನ್ನು ಮಾಡಿಸಿಕೊಂಡರಂತೆ.
ಸ್ವಾಮಿ ಮುಕ್ತಾನಂದರು ಕೇವಲ ಬಂಗಾರವನ್ನು ಕಾಣುವವರಿಗೆ ಭಗವಂತ ಕಾಣಿಸುವುದಿಲ್ಲ. ಭಗವಂತನನ್ನು ಕಂಡವರಿಗೆ ಬಂಗಾರ ಕಾಣಿಸುವುದಿಲ್ಲ ಎಂದು ಹೇಳಿ ಕತೆಯನ್ನು ಮುಗಿಸಿದರು.
ನಾವೀಗ ಮೇಲಿನ ಹೋಲಿಕೆಯನ್ನು ನಾವು ಮಾಡುವ ಕೆಲಸಗಳಿಗೆ ಅನ್ವಯ ಮಾಡೋಣವೇ? ನಾವು ಕೆಲಸ ಮಾಡುವಾಗ ಸಂಬಳ, ಸಂಭಾವನೆಗಳನ್ನೇ ಮುಖ್ಯವಾಗಿ ಗಮನಿಸಿದರೆ, ಕೆಲಸ ನಿರ್ವಹಣೆಯ ಆನಂದ, ಸಂತೃಪ್ತಿ, ಸಮಾಧಾನಗಳು ಗಮನಕ್ಕೆ ಬಾರದೇ ಹೋಗುತ್ತವಲ್ಲವೇ? ಕಾರ್ಯನಿರ್ವಹಣೆಯಲ್ಲಿ ಸಂತೃಪ್ತಿ ಕಾಣುವವರು ಸಂಭಾವನೆಯನ್ನು ಮುಖ್ಯವೆಂದು ಭಾವಿಸುವುದಿಲ್ಲ ಅಲ್ಲವೇ?
ಕೃಪೆ :ಷಡಕ್ಷರಿ.ವಿಶ್ವ ವಾಣಿ
ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment