ದಿನಕ್ಕೊಂದು ಕಥೆ 890

*🌻ದಿನಕ್ಕೊಂದು ಕಥೆ🌻                                 ಬಡತನದಲ್ಲಿ ಬೆಳೆದ ವಿಜಯ ಸಂಕೇಶ್ವರ್ ಯಶಸ್ವಿ ಉದ್ಯಮಿಯಾಗಿದ್ದು ಹೇಗೆ ಗೊತ್ತಾ..?*

ವಿಜಯ ಸಂಕೇಶ್ವರ್… ಇವತ್ತು ಈ ಹೆಸರು ಕೇಳದೇ ಇರೋರು ಯಾರೂ ಇಲ್ಲ..! ಯಶಸ್ವಿ ಉದ್ಯಮಿ. ಸಾರಿಗೆ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಸಾಧನೆಯ ಶಿಖರವನ್ನೇರೋ ಮಹಾನ್ ಸಾಧಕರು.
ಇವತ್ತು ಇವರಿಗೆ ಕೀರ್ತಿ, ಹೆಸರು, ಹಣ, ಅನೇಕ ಜನರ ಪ್ರೀತಿ ಸಿಕ್ಕಿದೆ. ಇಷ್ಟೆಲ್ಲಾ ಸಂಪಾದಿಸೋಕೆ ಸಂಕೇಶ್ವರ್ ತುಂಬಾನೇ ಕಷ್ಟಪಟ್ಟಿದ್ದಾರೆ. ಹುಟ್ಟಿನಿಂದಲೇ ಕಷ್ಟದೊಂದಿಗೆ ಬೆಳೆದವರು.
ಗದಗದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ಇವರು ಇವತ್ತು ನಾಡಿನ ಹೆಸರಾಂತ ಉದ್ಯಮಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ತಾರೆ..! ಇವರ ತಂದೆ ಪುಸ್ತಕ ಪ್ರಕಾಶನ, ಮುದ್ರಣಾಲಯ ಆರಂಭಿಸಿದ್ರು.

ಸಂಕೇಶ್ವರ್ 10ನೇ ತರಗತಿಯಲ್ಲಿರುವಾಗ, ಅಂದರೆ ತನ್ನ 15 ವರ್ಷದಲ್ಲಿ ಮುದ್ರಣಾಲಯದ ಜವಬ್ದಾರಿಯನ್ನು ಹೊತ್ತುಕೊಳ್ತಾರೆ. ಸಾಲ ಮಾಡಿ ಹೊಸ ಮುದ್ರಣ ಯಂತ್ರಗಳನ್ನು ಅಳವಡಿಸಿದ್ರು. 10ನೇ ತರಗತಿ ಮುಗಿದ ಬಳಿಕ ಕಾಲೇಜಿಗೆ ಹೋಗಬೇಕೆಂದು ವಿಜಯ ಸಂಕೇಶ್ವರ್ ಅವರ ಆಸೆ. ಆದರೆ, ಮುದ್ರಣಾಲಯಕ್ಕಾಗಿ ಸಾಲ ಮಾಡಿದ್ದೀಯ.. ಕಾಲೇಜಿಗೆ ಹೋದ್ರೆ ಇದನ್ನು ನೋಡಿಕೊಳ್ಳೋದು ಯಾರು? ಎಂಬುದು ಅವರ ತಂದೆಯ ಪ್ರಶ್ನೆಯಾಗಿತ್ತು..! ಎರಡನ್ನೂ ನಿಭಾಯಿಸುತ್ತೇನೆ, ಮುದ್ರಣಾಲಯಕ್ಕೆ ಮೊದಲ ಆಧ್ಯತೆ ನೀಡ್ತೀನಿ ಅಂತ ಕಾಲೇಜು ಮೆಟ್ಟಿಲೇರಿದ್ರು..! ಇವರ ಶಿಕ್ಷಣ ಕುಂಠುತ್ತಾ ಸಾಗಿತು. ಕೆಲವೊಂದು ಸಬ್ಜೆಕ್ಟ್‍ಗಳಲ್ಲಿ ಫೇಲಾಗಿ ಮತ್ತೆ ಪಾಸಾದರು. 1972ರಲ್ಲಿ ಬಿಕಾಂ ಪದವೀದರರಾದ್ರು..! ಅದೇ ವರ್ಷ ಮದುವೆಯೂ ಆಯ್ತು..
ಕುಟುಂಬದವರೆಲ್ಲಾ ಪ್ರಕಾಶನ, ಮುದ್ರಣಾಲಯ.. ಅಪ್ಪ ಆರಂಭಿಸಿದ ಉದ್ಯಮವನ್ನೇ ನೆಚ್ಚಿಕೊಂಡು ಹೋದ್ರೆ ಮುಂದಿನ ದಿನಗಳಲ್ಲಿ ಕಷ್ಟ ಆಗುತ್ತೆ.. ಬೇರೆ ಉದ್ಯಮವನ್ನು ಆರಂಭಿಸಬೇಕು ಎಂದು ಸಂಕೇಶ್ವರ್ ನಿರ್ಧರಿಸಿದರು.

1976ರಲ್ಲಿ 1 ಲಾರಿಯಿಂದ ತನ್ನ ಕನಸಿನ ಉದ್ಯಮವನ್ನು ಆರಂಭಿಸಿಯೇ ಬಿಟ್ಟರು. ತುಂಬಾ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದ್ರು. ಲಾರಿ ತೆಗೆದುಕೊಂಡು ಇನ್ನೂ 3 ತಿಂಗಳಾಗಿತ್ತಷ್ಟೇ..,ಹುಬ್ಬಳ್ಳಿಯಿಂದ ಮುಂಬೈಗೆ ಹೋಗುವಾಗ ನಡುವೆ ಲಾರಿಯ ಎರಡು ಟೆಯರ್‍ಗಳು ಒಡೆದು ಮುಂದೆ ಹೋಗಲಾಗಲಿಲ್ಲ..! ತನ್ನ ಸ್ಕೂಟರ್ ಮಾರಿ, ಬೇರೆ ಕಡೆಗಳಿಂದ ಸಾಲ ಪಡೆದು ಲಾರಿಗೆ ಎರಡು ಟಯರ್ ಹಾಕಿಸಿ ಮುಂಬೈಗೆ ಕಳುಹಿಸಲು 12 ದಿನ ಹಿಡಿದಿತ್ತಂತೆ..!
ಸಂಕೇಶ್ವರ್ ಅವರು ಲಾರಿ ಉದ್ಯಮ ಆರಂಭಿಸುವ ಮುನ್ನ ಸಾರಿಗೆ ಉದ್ಯಮದಲ್ಲಿ ಸಾಕಷ್ಟು ಅನುಭವವಿದ್ದವರು, ವಾಮ ಮಾರ್ಗ ಅನುಸರಿದೇ ಇದ್ರೆ, ಕಾನೂನು ಉಲ್ಲಂಘನೆ ಮಾಡ್ದೆ ಇದ್ರೆ ಇದರಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರಂತೆ. ಸತ್ಯಕ್ಕೆ, ಪ್ರಾಮಾಣಿಕತೆಗೆ ಬೆಲೆ ಇದ್ದೇ ಇದೆ ಎಂದು ಪ್ರಾಮಾಣಿಕವಾಗಿ ಮುಂದುವರೆದಿದ್ದರಿಂದ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಾಯ್ತು ಎಂದು ಸಂಕೇಶ್ವರ್ ಕೆಲವು ಸಂದರ್ಶನಗಳಲ್ಲಿ ಹೇಳಿದ್ದುಂಟು.
ಎರಡು ವರ್ಷದ ಬಳಿಕ ಮತ್ತೊಂದು ಲಾರಿಯನ್ನು ಕೊಂಡರು. ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿದರು. ಆಗಲೂ ತುಂಬಾ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆದರೂ, ಛಲ ಬಿಡಲಿಲ್ಲ ಲಾರಿಯ ಸಂಖ್ಯೆ ಒಂದೊಂದೇ ಹೆಚ್ಚಾಯ್ತು..!
ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ನೀಡಲು ಸಾಧ್ಯವಾಗದಿದ್ದಾಗ ಅವುಗಳಿಂದ ನೋಟಿಸ್ ಬರುವುದಕ್ಕಿಂತ ಮುನ್ನವೇ ಸಂಸ್ಥೆಗಳಿಗೆ ಪತ್ರ ಬರೆದು ನಿಮ್ಮ ಸಾಲವನ್ನು ತೀರುಸುತ್ತೇನೆ. ಈಗ ಕಷ್ಟ ಇದೆ ಎಂದು ವಿಜಯ ಸಂಕೇಶ್ವರ್ ಅವರೇ ಹೇಳುತ್ತಿದ್ದರು. ಸಾಲ ಕೊಟ್ಟವರು ನೋಟಿಸ್ ನೀಡುವುದು ಸಹಜ.. ಸಾಲ ಪಡೆದವರೇ ಪತ್ರ ಬರೆದು ತಿಳಿಸುವುದ..? ಹ್ಞೂಂ.. ಸಂಕೇಶ್ವರವರ ಈ ಗುಣ ಸಾಲಕೊಟ್ಟವರಿಗೆ ತುಂಬಾ ಇಷ್ಟವಾಯ್ತು.. ಅವರ ಮೇಲೆ ನಂಬಿಕೆಯಿಟ್ಟು ಸಾಲ ನೀಡುತ್ತಿದ್ದರಂತೆ.
ಈ ನಡುವೆ ರಾಜಕಾರಣಕ್ಕೂ ಎಂಟ್ರಿಕೊಟ್ಟ ವಿಜಯ ಸಂಕೇಶ್ವರ್ 1996ರಲ್ಲಿ ಸಂಸದರೂ ಆದರು. ನಂತರದ ದಿನಗಳಲ್ಲಿ ವೃತ್ತಪತ್ರಿಕೆಯನ್ನು ಆರಂಭಿಸಲು ನಿರ್ಧರಿಸಿದ್ರು. ಆಗ ಹುಟ್ಟಿಕೊಂಡಿದ್ದೇ ‘ವಿಜಯ ಕರ್ನಾಟಕ’.

1999ರಲ್ಲಿ ಸಂಕೇಶ್ವರ್ ಅವರು ವಿಜಯ ಕರ್ನಾಟಕ ದಿನ ಪತ್ರಿಕೆಯನ್ನು ಆರಂಭಿಸುವಾಗ 3-4 ಪತ್ರಿಕೆಗಳ ಒಟ್ಟಾರೆ ಪ್ರಸರಣ (ಸಕ್ರ್ಯುಲೇಷನ್) 5-6 ಲಕ್ಷವಿತ್ತು. ಆಗ, ವಿಜಯ ಸಂಕೇಶ್ವರ್ ಇನ್ನು 3 ವರ್ಷದಲ್ಲಿ ವಿಜಯ ಕರ್ನಾಟಕದ ಸಕ್ರ್ಯುಲೇಷನ್ ಅನ್ನು 6 ಲಕ್ಷಕ್ಕೆ ಏರಿಸುವುದಾಗಿ ಹೇಳಿಕೊಂಡರು. ಮಾಧ್ಯಮ ಕ್ಷೇತ್ರದಲ್ಲಿ ಅನುಭವವಿದ್ದವರು, ಇದು ಸಾಧ್ಯವಿಲ್ಲ. ಇದರಲ್ಲಿ ಯಶಸ್ಸು ಸಿಗಲ್ಲ ಅಂದ್ರು. 1 ಲಕ್ಷ ಪ್ರಸರಣ ಸಂಖ್ಯೆ ಮುಟ್ಟಲಿಕ್ಕೆ 10 ವರ್ಷ ಬೇಕು ಎಂದು ಉತ್ಸಾಹಕ್ಕೆ ತಣ್ಣೀರೆರಚುವ ಕೆಲಸ ಮಾಡಿದ್ರು..! ಅಂದಿನ ಪತ್ರಿಕೆಗಳು 1-2 ಕೇಂದ್ರದಿಂದ ಮುದ್ರಣ ಆಗುತ್ತಿದ್ದವು. ಮುಂದಿನ 2 ವರ್ಷದಲ್ಲಿ 10 ಕೇಂದ್ರದಿಂದ ಪತ್ರಿಕೆಯನ್ನು ತರುವುದಾಗಿ ಸಂಕೇಶ್ವರ್ ಅವರು ಹೇಳಿದಾಗ ಅದಕ್ಕೂ ಪ್ರೋತ್ಸಾಹ ಸಿಗಲಿಲ್ಲ. 10 ಸೆಂಟರ್‍ಗಳಿಂದ ಪತ್ರಿಕೆ ತರಲು 25 ವರ್ಷ ಬೇಕಾಗುತ್ತೆ ಎಂದು ಹೇಳಿದವರೂ ಇದ್ದಾರೆ. ಆದರೆ, ಅದ್ಯಾವುದಕ್ಕೂ ಸಂಕೇಶ್ವರ್ ಅವರು ತಲೆ ಕೆಡಿಸಿಕೊಳ್ಳಲಿಲ್ಲ.

ಕಷ್ಟಪಟ್ಟು ಕೆಲಸ ಮಾಡಿದ್ರೆ, ಪ್ರಾಮಾಣಿಕತೆ, ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆ ಗುಣಗಳಿಂದ ಸಂಕೇಶ್ವರ್ ಅವರಿಗೆ ಯಶಸ್ಸು ಸಿಕ್ತು. 2 ವರ್ಷದೊಳಗೇ ವಿಜಯ ಕರ್ನಾಟಕ 2 ಲಕ್ಷ ಪ್ರಸರಣ ಸಂಖ್ಯೆಯನ್ನು ತಲುಪಿತು. 1 ವರ್ಷ 10 ತಿಂಗಳ ಅವಧಿಯಲ್ಲಿ 10 ಕೇಂದ್ರಗಳಿಂದ ಪತ್ರಿಕೆ ಕೆಲಸ ನಿರ್ವಹಿಸಿತು. 2000 ನೇ ಇಸವಿಯಿಂದ ವಿಜಯ ಕರ್ನಾಟಕ ಪ್ರತಿಷ್ಠಿತ ಟೈಮ್ಸ್ ಗ್ರೂಪ್‍ಗೆ ಸೇರಿತು. 2011ರಲ್ಲಿ ವಿಜಯ ಸಂಕೇಶ್ವರ್ ವಿಜಯ ವಾಣಿ ಪತ್ರಿಕೆಯನ್ನು ಆರಂಭಿಸಿದರು.
1976ರಲ್ಲಿ 1 ಲಾರಿಯಿಂದ ಉದ್ಯಮ ಆರಂಭಿಸಿದ ಸಂಕೇಶ್ವರ್ ಇವತ್ತು ವಿಆರ್‍ಎಲ್ ಎಂಬ ದೊಡ್ಡ ಸಂಸ್ಥೆಯ ಮಾಲೀಕರು. ಗದಗದಿಂದ ಆರಂಭವಾದ ಉದ್ಯಮ ಇಂದು ದೇಶವ್ಯಾಪಿ ಹಬ್ಬಿದೆ. ಸಾವಿರಾರು ಕಚೇರಿಗಳಿವೆ. ಸುಮಾರು 3900 ಟ್ರಕ್ ಗಳು, 400 ಬಸ್‍ಗಳಿವೆ. ವಿಜಯ ವಾಣಿ ದಿನ ಪತ್ರಿಕೆ ಹಾಗೂ ದಿಗ್ವಿಜಯ ಸುದ್ದಿವಾಹಿನಿ ವಿಜಯ ಸಂಕೇಶ್ವರ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿವೆ.

ನೆನಪಿರಲಿ, ಟೀಕೆಗಳಿಗೆ ಸಾಧನೆಯ ಉತ್ತರ ಕೊಡಬೇಕು. ಕೈಲಾಗದು ಎಂದು ಕುಳಿತುಕೊಳ್ಳಬಾರದು. ಕಷ್ಟಪಟ್ಟು ಕೆಲಸ ಮಾಡಿದರೆ, ಹಗಲಿರುಳು ದುಡಿದರೆ, ಪ್ರಾಮಾಣಿಕರಾಗಿದ್ದರೆ ಯಶಸ್ಸು ಖಂಡಿತಾ ಸಿಗುತ್ತೆ.

ಕೃಪೆ:ಸುಕನ್ಯಾ ಗೌಡ
(The new Indian time)
ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059