ದಿನಕ್ಕೊಂದು ಕಥೆ 892
*🌻ದಿನಕ್ಕೊಂದು ಕಥೆ🌻*
*ಸಾಧ್ಯವೆಂದರೆ ಸಾಧ್ಯ! ಅಸಾಧ್ಯವೆಂದರೆ ಅಸಾಧ್ಯ!*
ನವೆಂಬರ್ ಒಂದರಂದು ನಮಗೆಲ್ಲ ರಾಜ್ಯೋತ್ಸವದ ಸಂಭ್ರಮ. ಏಕೆಂದರೆ ಅಂದು ‘ಉದಯವಾಯಿತು ನಮ್ಮ ಚೆಲುವ ಕನ್ನಡನಾಡು’. ಬಹು ದೂರದ ಅಮೆರಿಕದಲ್ಲಿನ ಮಿಚಿಗನ್ ರಾಜ್ಯದ ಜನರಿಗೂ ಅಂದು ಸಂಭ್ರಮ. ಆದರೆ ಕಾರಣ ಮಾತ್ರ ಬೇರೆ! ಅವರ ರಾಜ್ಯದ ಎರಡು ಪ್ರಮುಖ ನಗರಗಳಾದ ‘ಮೆಕಿನಾ ಸಿಟಿ’ ಮತ್ತು ‘ಸೇಂಟ್ ಇಗ್ನೇಸ್’ಗಳನ್ನು ಜೋಡಿಸುವ ಮೈಲಿ ಉದ್ದದ ತೂಗುಸೇತುವೆ 1957ರ ನವೆಂಬರ್ ಒಂದರಂದು ಜನರ ಉಪಯೋಗಕ್ಕೆ ಸಂಭ್ರಮ ಸಡಗರಗಳಿಂದ ತೆರೆಯಲ್ಪಟ್ಟಿತ್ತು! ಸಂಭ್ರಮಕ್ಕೆ ಕಾರಣ ನೋಡೋಣ!
ಎರಡು ನಗರಗಳ ಮಧ್ಯೆ ಒಂದು ಆಳವಾದ, ಐದು ಮೈಲಿ ಅಗಲದ ಸರೋವರವಿದೆ. ಜನಗಳ, ವಾಹನಗಳ ಮತ್ತು ಸಾಮಾನು ಸರಂಜಾಮುಗಳ ಸಾಗಣೆ ಫೆರಿಗಳ (ದೊಡ್ಡ ಗಾತ್ರದ ದೋಣಿಗಳು) ಮೂಲಕವೇ ನಡೆಯಬೇಕಿತ್ತು. ಇದು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಚಳಿಗಾಲದಲ್ಲಿ ಸರೋವರದ ನೀರು ಮಂಜುಗಟ್ಟಿದಾಗ ಸಂಪರ್ಕ ಕಡಿದೇ ಹೋಗುತ್ತಿತ್ತು. ಸೇತುವೆಯೊಂದರ ನಿರ್ಮಾಣ ಸಮಸ್ಯೆಗೆ ಎಲ್ಲರೂ ಹೇಳುತ್ತಿದ್ದರು. ನಿರ್ಮಾಣದ ಬಗ್ಗೆ ಹಲವಾರು ದಶಕಗಳ ಕಾಲ ಚರ್ಚಿಸಲಾಯಿತು. ಅನೇಕ ಸಮಿತಿಗಳ ನೇಮಕವಾಯಿತು. ಆದರೆ ಎಲ್ಲರೂ ಸಮಸ್ಯೆಗಳ ಪಟ್ಟಿಯನ್ನೇ ಮಾಡಿ ಸೇತುವೆ ನಿರ್ಮಾಣ ಅಸಾಧ್ಯವೆಂದೇ ತೋರಿಸುತ್ತಿದ್ದರು. ಎಂಬತ್ತು ವರ್ಷಗಳಾದರೂ ಸೇತುವೆ ನಿರ್ಮಾಣವಾಗಲಿಲ್ಲ. ಕೊನೆಗೆ 1953ರಲ್ಲಿ ಡೇವಿಡ್ ಸ್ಟೇನ್ ಮ್ಯಾನ್ ಎಂಬ ಎಂಜಿನಿಯರನ್ನು ನೇಮಕ ಮಾಡಲಾಯಿತು. ಆತ ನಿರ್ಮಾಣ ಸಾಧ್ಯವೆಂಬ ಸಕಾರಾತ್ಮಕ ಚಿಂತನೆಯೊಂದಿಗೆ ಕಾರ್ಯಾರಂಭ ಮಾಡಿದ. ಸಮಸ್ಯೆಗಳನ್ನು ಒಂದೊಂದಾಗಿ ಅಧ್ಯಯನ ಮಾಡಿ ಪರಿಹಾರ ಕಂಡುಕೊಳ್ಳುತ್ತಾ ಹೋದ.
ಮೊದಲನೆಯ ಸಮಸ್ಯೆ: 70 ಮೈಲಿಗಳಿಗೂ ಹೆಚ್ಚು ವೇಗದಲ್ಲಿ ಅಪ್ಪಳಿಸುತ್ತಿದ್ದ ಗಾಳಿ ನಿರ್ಮಾಣ ಕಾರ್ಯಕ್ಕೆ ತಡೆಯೊಡ್ಡುತ್ತಿತ್ತು. ಆತ, ದೀರ್ಘ ಸಂಶೋಧನೆಯ ನಂತರ ಗಂಟೆಗೆ 180 ಮೈಲಿ ವೇಗದ ಗಾಳಿಯನ್ನೂ ತಡೆಯಬಲ್ಲ ಸೇತುವೆಯ ವಿನ್ಯಾಸಗೊಳಿಸಿದ.
ಎರಡನೆಯ ಸಮಸ್ಯೆ: ಚಳಿಗಾಲದಲ್ಲಿ ನೀರು ಮಂಜುಗಟ್ಟುವುದರಿಂದ ಸೇತುವೆಯ ಸ್ತಂಭಗಳು ದುರ್ಬಲವಾಗುತ್ತದೆಂದು ಹೇಳಲಾಗುತ್ತಿತ್ತು. ಆತ ಮೈನಸ್ 25 ಸೆಲ್ಶಿಯಸ್ ತಂಪನ್ನು ತಡೆಯುವಂತೆ ಅವನ್ನು ವಿನ್ಯಾಸಗೊಳಿಸಿದ.
ಮೂರನೆಯ ಸಮಸ್ಯೆ: ಸೇತುವೆಯ ಭಾರವನ್ನು ಸರೋವರದ ಕೆಳಗಿನ ನೆಲ ತಡೆಯುವಷ್ಟು ಗಟ್ಟಿಯಿಲ್ಲವೆಂದು ಹೇಳಲಾಗುತ್ತಿತ್ತು. ಆತ ಭಾರ ಒಂದೇ ಕಡೆ ಬೀಳದಂತೆ, ಸೇತುವೆಯ ಉದ್ದಗಲಕ್ಕೂ ಹರಡುವಂತೆ ವಿನ್ಯಾಸಗೊಳಿಸಿದ.
ನಾಲ್ಕನೆಯ ಸಮಸ್ಯೆ: ಕೆಳಗಿನಿಂದ ಬೀಸುವ ಗಾಳಿಯ ಒತ್ತಡ, ಸೇತುವೆಯನ್ನು ಎತ್ತಿ ಒಗೆಯುತ್ತದೆಂದು ಭಾವಿಸಲಾಗುತ್ತಿತ್ತು. ಆತ ಸೇತುವೆಯ ಉದ್ದಕ್ಕೂ ರಂಧ್ರಗಳಿರುವಂತೆ, ಆ ಮೂಲಕ ಗಾಳಿ ಹಾಯ್ದುಹೋಗುವಂತೆ ವಿನ್ಯಾಸಗೊಳಿಸಿದ.
ವಿನೂತನ ವಿನ್ಯಾಸಗಳೊಂದಿಗೆ, ಸತತ ನಾಲ್ಕು ವರ್ಷಗಳ ಶ್ರಮದಿಂದ ಸೇತುವೆ ಯಶಸ್ವಿಯಾಗಿ ನಿರ್ಮಾಣಗೊಂಡಿತು. 1957ರ ನವೆಂಬರ್ ಒಂದರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಇದೀಗ ಸೇತುವೆ ಐವತ್ತು ವರ್ಷಗಳ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ಗಾಳಿ ವೇಗವಾಗಿ ಬೀಸುತ್ತಿದೆ. ಸೇತುವೆಯ ಕೆಳಗಿನ ನೀರು ಮಂಜುಗಟ್ಟುತ್ತದೆ. ಆದರೂ ಸೇತುವೆ ಭದ್ರವಾಗಿ ನಿಂತಿದೆ. ಸ್ಟೇನ್ ಮ್ಯಾನ್‌ಅನ್ನು ಅಸಾಧ್ಯ ಸೇತುವೆ ಹೇಗೆ ಸಾಧ್ಯವಾಯಿತೆಂದು ಕೇಳಿದಾಗ, ‘ಎಲ್ಲರೂ ಅಸಾಧ್ಯವೆಂದೇ ಸೇತುವೆಯ ನಿರ್ಮಾಣದ ಕಡೆ ಗಮನ ಹರಿಸುತ್ತಿದ್ದರು. ನಾನು ಮಾತ್ರ ಸಾಧ್ಯ ಎಂದುಕೊಂಡು ಸೇತುವೆ ನಿರ್ಮಾಣದತ್ತ ಗಮನ ಹರಿಸಿದೆ. ಹಾಗಾಗಿ ನಾನು ಯಶಸ್ವಿಯಾದೆ!’ ಎಂದು ಉತ್ತರಿಸುತ್ತಿದ್ದರು.
ನಮಗೂ ಡೇವಿಡ್ ಸ್ಟೇನ್ ಮ್ಯಾನ್ ಮಾದರಿ ಆಗಬಹುದು! ನಾವು ಕೂಡ ಯಾವುದೇ ಕಾರ್ಯವನ್ನು ಅಸಾಧ್ಯವೆಂದುಕೊಳ್ಳುತ್ತಾ ಸುಮ್ಮನೆ ಸಾಧ್ಯ ಎಂದುಕೊಂಡು ಕಾರ್ಯಾರಂಭ ಮಾಡಿದರೆ ನಾವೂ ಯಶಸ್ವಿಯಾಗಬಹುದು!
ಕೃಪೆ :ಷಡಕ್ಷರಿ.ವಿಶ್ವ ವಾಣಿ.
ಸಂಗ್ರಹ :ವೀರೇಶ್ ಅರಸಿಕೆರೆ.
Comments
Post a Comment