ದಿನಕ್ಕೊಂದು ಕಥೆ 914
*🌻ದಿನಕ್ಕೊಂದು ಕಥೆ🌻*
*ಶಾರದಾ ಟೀಚರ್*
ಶಾರದಾ ಟೀಚರ್ ಇಂದು ಮತ್ತೆ ನೆನಪಾದರು. ಅವರು ತೀರಿಹೋಗಿ ಎರಡು ವರುಷಗಳಾದವು. ನನ್ನ ಅಪ್ಪನಿಗೆ ಸಹಿ ಹಾಕಲು ಹೇಳಿಕೊಟ್ಟದ್ದು ಅವರೇ. ಓದಲು, ಸಾಮನ್ಯ ಮಟ್ಟಿಗೆ ಬರೆಯಲು ಅಪ್ಪನಿಗೆ ಇಂದು ಸಾಧ್ಯವಾದರೆ ಅದು ಶಾರದಾ ಟೀಚರ್ ನಿಂದ. ಟೀಚರ್ ಅಂದರೆ ಅವರು ಶಾಲೆಯಲ್ಲಿ ಅಧ್ಯಾಪಕಿ ಆಗಿರಲಿಲ್ಲ. ಕೆಲವು ಮಕ್ಕಳಿಗೆ ಮನೆಪಾಠ ಹೇಳಿಕೊಡುತ್ತಿದ್ದರು. ಸ್ವ ಇಚ್ಛೆಯಿಂದ ವಯಸ್ಕರ ಶಿಕ್ಷಣ ಸುರುಮಾಡಿ ಮನೆ ಮಾತಾದವರು. ಅವರ ಗಂಡ ರಾಮಸೆಟ್ಟಿಗಾರರು ತೀರಿಕೊಂಡು ವರುಷಗಳೆ ಕಳೆದಿದ್ದವು. ಒಬ್ಬ ಮಗ ಶಶಿಕಾಂತ ಕೆಲಸ ಅಂತ ಬೆಂಗಳೂರಿಗೆ ಹೋದಾಗ ಮನೆಯಲ್ಲಿ ಟೀಚರ್ ಒಬ್ಬರೇ ಆದರು. ಸೆಟ್ಟಿಗಾರರು ಮಾಡಿದ್ದ ಸ್ವಲ್ಪ ಹಣ ಬ್ಯಾಂಕಲಿತ್ತು. ಮಗ ಖರ್ಚಿಗೆ ಕಳಿಸ್ತಿದ್ದ. ಅಮ್ಮನ ಮೇಲೆ ಅಗಾಧ ಪ್ರೀತಿ ಅಲ್ಲದಿದ್ದರೂ ಅಪ್ಪ ಇಲ್ಲದೆ ಬೆಳೆದವನು ಮಗನ ಮೇಲೆ ಟೀಚರಿಗೆ ವಿಪರೀತ ಪ್ರೀತಿ. ಎಡೆಯೆಡೆಯಲ್ಲಿ ಬಂದು ಅಮ್ಮನನ್ನು ನೋಡಿ ಹೋಗುತ್ತಿದ್ದ ಶಶಿಕಾಂತ ವಯಸ್ಸಿಗೆ ಬಂದಾಗ ಮದುವೆ ಮಾಡಲು ಹುಡುಗಿ ನೋಡುವುದು ಎಂದು ಟೀಚರ್ ಎಲ್ಲರಲ್ಲಿ ಹೇಳಿಟ್ಟರು.
ಚಿಪ್ಪಾರಿನ ಸೆಟ್ಟಿಗಾರ ಮನೆತನದ ಒಬ್ಬಾಕೆ ವಿಧವೆಯನ್ನು ಬಾಯಾರಿನ ಜಾತ್ರೆಯಲ್ಲಿ ಕಂಡು ಮಾತನಾಡಿದಾಗ ಅವಳನ್ನೇ ಮಗನಿಗೆ ಮದುವೆ ಮಾಡಬಹುದೆಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕಿ ಪತ್ರ ಬರೆದರು. ಆಕೆಗೆ ಮದುವೆ ಮಾತ್ರ ಹೆಸರಿಗೆ ಆಗಿತ್ತು. ಹುಡುಗನ ಮನೆಯಲ್ಲಿ ಸಮಾರಂಭದಲ್ಲಿ ಚಪ್ಪರ ಬಿದ್ದದ್ದರಲ್ಲಿ ಮದುಮಗ ಮದುಮಗಳು ಸೇರಿ ಹಲವರಿಗೆ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಮದುಮಗ ಕೊನೆಯುಸಿರೆಳೆದರೆ ಮದುಮಗಳು ಪ್ರಾಣಾಪಾಯದಿಂದ ಪಾರಾಗಿ ವಿಧವೆಯಾದಳು. ಹುಡುಗಿಯ ಕಾಲ್ಗುಣ ಅಂತ ಮದುಮಗನ ಮನೆಯವರು ತಿರುಗಿ ನೋಡಲಿಲ್ಲ. ಕಟ್ಟಿದ ಸರವನ್ನೂ ಬಿಚ್ಚಿಸಿದವರು.
ಶಾರದಾ ಟೀಚರಿಗೆ ಭರವಸೆ ಇತ್ತು ತನ್ನ ಮಗ ಶಶಿಕಾಂತ ಅಮ್ಮನ ಮಾತನ್ನು ಮೀರಲಾರನು ಎಂದು. ಆದರೆ ಮಗ ಪತ್ರ ತಲಪಿದ ಕೂಡಲೇ ಅಮ್ಮನನ್ನು ನೋಡಲು ಬಂದನು..
“ಅಮ್ಮ…ನಿನ್ನ ಆಸೆಗೆ ನಾನು ತಣ್ಣೀರೆರೆಯುತ್ತಿದ್ದೇನೆ ಅನ್ನದಿರು. ನನಗೂ ಒಂದಾಸೆ ಇದೆಯಲ್ಲ. ನಾನು ಒಬ್ಬಳನ್ನು ಪ್ರೀತಿಸ್ತಾ ಇದ್ದೇನೆ…” ಹುಡುಗಿಯ ವಿವರಗಳನ್ನು ಹೇಳಿದನು.
ಶಾರದಾ ಟೀಚರಿಗೆ ಇಷ್ಟವಾಗಲಿಲ್ಲ. ತಮಗೆ ಏನೂ ಇಲ್ಲ ಹೃದಯಶ್ರೀಮಂತಿಕೆ ಬಿಟ್ಟರೆ. ಅಗರ್ಭ ಶ್ರೀಮಂತರೆದುರು ಹೃದಯ ಶ್ರೀಮಂತಿಕೆ ನಡೆಯುವುದು ದೂರದ ಮಾತು. ನಡೆಸುವುದೂ ಕಷ್ಟ. ಹಾಗಿದ್ದಾಗ ಬೇಕೆ ಎಂದು ತಮ್ಮಲ್ಲಿ ತಾವೇ ಕೇಳಿದರು. ಹೂ ಮಗ ಅಲ್ವ..ಅವನಿಚ್ಛೆ ಎಷ್ಟಾದರೂ ದೂರ ಇರೋದು..ಅವನಿಷ್ಟ ನಡೆಯಲಿ..ಒಪ್ಪಿಗೆ ಸಂತೋಷದಿಂದ ಕೊಟ್ಟರು.
ಮದುವೆ ಆಯಿತು. ಶಶಿಕಾಂತನ ಹೆಂಡತಿ ರಂಜನಾ ಪಾಪದವಳೇ ಅತ್ತೆ ಅಂದರೆ ಇಷ್ಟಾನೇ..ಅವರ ನಡುವೆ ಅರ್ಥ ಆಗಲು ಹೆಚ್ಚು ಕಾಲ ಅವರು ಜತೆಯಲ್ಲಿ ಇರಲೇ ಇಲ್ಲ. ಅಷ್ಟರಲ್ಲಿ ಮಾವನ ಕೃಪಾಕಟಾಕ್ಷದಿಂದ ಆಸ್ಟ್ರೇಲಿಯಾಗೆ ಹಾರಿದನು. ಅಮ್ಮನನ್ನು ಬಿಟ್ಟು ಹೋಗಬೇಕಲ್ವಾ ಅನ್ನುವ ಬೇಜಾರು ಮಗನಿಗೆ.ಶಾರದಾ ಟೀಚರೇ ಸಂತೈಸಿ ಕಳಿಸಿಕೊಟ್ಟಿದ್ದರು. ಮನೆಗೆ ಬಂದು ಕಣ್ಣೀರು ಹಾಕಿದ್ದು ಅಡುಗೆ ಮನೆಯ ಒಲೆಯಲ್ಲಿ ಬೆಂಕಿ ನಂದಿ ಹೋಗಿತ್ತು.
ಕಳೆದ ಸಲ ರಜದಲ್ಲಿ ಬಂದಿದ್ದಾಗ ಒಂದು ಮೊಬೈಲ್ ತಂದಿದ್ದ ಶಶಿಕಾಂತ. ವಾಟ್ಸಪ್ ಎಲ್ಲ ಅಮ್ಮನಿಗೆ ಹೇಳಿಕೊಟ್ಟಿದ್ದ. ಈಗ ಅಷ್ಟು ಅಮ್ಮನನ್ನು ಕಳಕೊಂಡೆ ಅನ್ನುವ ಭಾವನೆ ಮಗನಿಗೂ ಇಲ್ಲ. ಮಗನನ್ನು ನೋಡುತ್ತಾ ಶಾರಾದಾ ಟೀಚರ್ ಹೆಚ್ಚು ದಪ್ಪ ಆಗತೊಡಗಿದರು. ಖುಷಿ ಅಧಿಕ ಆದರೂ ಕಷ್ಟವೇ!!?
“ ಮಗಾ, ನನಗೆ ತಿಂಗಳಿಗೆ ಸ್ವಲ್ಪ ಹೆಚ್ಚು ಹಣ ಕಳಿಸೋ..” ಅಮ್ಮನ ಮಾತು ಕೇಳಿ ಶಶಿಕಾಂತ್ ಗೆ ಆಶ್ಚರ್ಯ. ಎಂದೂ ಅಮ್ಮನತ್ರ ಹಣ ಕಳಿಸ್ಲಾ ಹೆಚ್ಚು ಕೇಳಿದ್ರೆಬ
ಕಳೆದ ತಿಂಗಳಿನದ್ದೇ ಇದೆ..ಸಾಕು ನಿನಗೂ ಹೆಂಡತಿ ಮಕ್ಕಳಿಲ್ವ ಅಂತ ಹಾರಿಕೆಯ ಉತ್ತರ ಕೊಡುತ್ತಿದ್ದರು. ಅಮ್ಮ ಕೇಳಿದ್ದೆಂದು ಅಮ್ಮ ಕೇಳಿದಷ್ಟು ಹಣ ಕಳಿಸುತ್ತಿದ್ಸನು ಮಗ.
“ ರೀ, ಅತ್ತೆ ಏನ್ಮಾಡ್ತಾರೆ ಈ ಹಣವನ್ನು ಕೇಳ್ರಿ…,ನಾವಿಬ್ರು ದುಡಿಯೋದು ಅಲ್ಲುಗೆ ಕಳ್ಸೋದಿಕ್ಕಾಯ್ತು…” ರಂಜನಾ ರೇಗಿದಳು.
“ ಸುಮ್ನಿರು..ಅಮ್ಮನಲ್ಲಿ ಕೇಳೊದಕ್ಕಾಗತ್ತಾ..ಏನಾದ್ರು ಚಾರಿಟಿ ದಾನ ಧರ್ಮ ಇರಬಹುದು ಮಾಡ್ಲಿ..ಪಾಪ” ಅವಳ ಬಾಯಿ ಮುಚ್ಚಿಸಿದ್ದನು.
ಅದೊಂದು ದಿನ ಶಶಿಕಾಂತನ ಪೋನು ರಿಂಗಣಿಸಿತು. ಊರಿನಿಂದ ಮಾವನ ಕರೆ..” ಆದಷ್ಟು ಬೇಗ ಬಾ..ಅಮ್ಮನಿಗೆ ಸಿರಿಯಸ್ ಆಸ್ಪತ್ರೆಯಲ್ಲಿ ಎಡ್ಮಿಟ್ ಆಗಿದ್ದಾರೆ..”
ಶಶಿಕಾಂತ ಮನೆಯವರೊಡನೆ ಓಡೋಡಿ ಬಂದಿದ್ಸ. ಬರುವಷ್ಟರಲ್ಲಿ ಶಾರಾದಾ ಟೀಚರ್ ಉಹಲೋಕ ತ್ಯಜಿಸಿದ್ದರು. ಶಶಿಕಾಂತ್ ಗೆ ಇದನ್ನು ಅರಗಿಸಿಕೊಳ್ಳಲಾಗಲಿಲ್ಲ.ಮಮ್ಮಲ ಮರುಗಿದನು. ಎಷ್ಟು ಮರುಗಿದರೂ ಅಮ್ಮ ಮರಳಿ ಬರಲಾರಳು ಎಂಬುದಂತೂ ಸತ್ಯ.
ಶಶಿಕಾಂತ್ ಆ ದಿನ ನಮ್ಮ ಮನೆಗೆ ಬಂದಿದ್ದ. ತುಂಬಾ ಹೊತ್ತು ಅತ್ತ. ಅಮ್ಮನಿಗೆ ನಾನು ಏನು ಮಾಡಿದ್ದೇನೆ..ಏನೂ ಮಾಡಿಲ್ಲ” ಅಂದ. “ ಅದಕ್ಕೆ ಬೇಸರಿಸದಿರು ಶಶಿ. ನಾವೆಲ್ಲ ಶಾರದಾ ಟೀಚರ್ ಗೆ ಮಕ್ಕಳಂತೆ. ಆ ಚಿಪ್ಪಾರಿನ ಹುಡುಗಿಗೆ ಮದುವೆ ಮಾಡಿಸಿದರು. ನನ್ನ ಮಗಳಿಗೆ ಬ್ಯಾಂಕ್ ನಲ್ಲಿ ಕೆಲಸ ತೆಗೆಸಿ ಕೊಟ್ಟರು.ಹತ್ತು ಹಲವು ಕಾರ್ಯಗಳು ಮಾಡಿ ನೆಮ್ಮದಿಯಾಗಿ ಹೋಗಿಬಿಟ್ಟರು. ಆದರೆ ಅವರಿಗೆ ಮಾರಣಾಂತಿಕ ಕಾಯಿಲೆ ಇತ್ತೆಂದು ಗೊತ್ತಿದ್ದೂ ಹೇಳಲೇ ಇಲ್ಲ. ಹೃದಯಾಘಾತವಾಗಿ ತೀರಿಕೊಂಡದ್ದು ನೋಡು ....ಅದೇ ನಮಗೆ ತಂದ ದುಃಖ” ಹೇಳಿ ಅವನನ್ನು ಸಂತೈಸಿದರು.
ಓ ಅಮ್ಮ ಈ ಹಣದಿಂದ ಒಳ್ಳೆ ಕೆಲಸ ಮಾಡಿದ್ದಾರೆ. ಸ್ವಂತ ಮಗನು ಇಲ್ಲಿ ಮಗನಾಗಲಿಲ್ಲ.. ಊರವರು ಸ್ವಂತ ಮಕ್ಕಳಾದರು. ರಕ್ತಬಂಧಕ್ಕಿಂತ ಇಲ್ಲಿ ಹಿರಿದಾಯಿತು ಈ ಬಂಧಗಳು. ಅಂತ ಹೇಳಿ ಮನೆಗೆ ಹೊರಟನು.
ಮನೆಯಲ್ಲಿ ಶಾರದಾ ಟೀಚರ ಮೊಬೈಲಿಗೆ ಕಾಲ್ ಬಂತು.” ಶಾರದಾ ಟೀಚರ ಮಗನಾ?”
“ ಹೌದು, “
“ ತಾವೊಮ್ಮೆ ಬ್ಯಾಂಕ್ ಗೆ ಬನ್ನಿ” ಅತ್ತಲಿಂದ ಪೋನು…
ಬೈಕ್ ಏರಿ ಬ್ಯಾಂಕ್ ಗೆ ಹೊರಟ ಶಶಿಗೆ ಮೇನೆಜರ್ ಒಳ ಬರಮಾಡಿಕೊಂಡರು
“ ಮಿ.ಶಶಿ..ಶಾರದಾ ಟೀಚರ್ ಪ್ರತಿ ತಿಂಗಳು ದೊಡ್ಡ ಮೊತ್ತದ ಹಣವನ್ನು ಸೇರಿಸಿ ಎಪ್ .ಡಿ ಮಾಡಿದ್ದಾರೆ. ನೊಮಿನಿ ನೀವಿದ್ದೀರಿ. ಅದೇನೋ ಪೇಪರಲ್ಲಿ ಆಸ್ಟ್ರೇಲಿಯಾದಲ್ಲಿ ರೆಸೆಶನ್ ನಿಂದ ಕೆಲಸಕ್ಕೆ ಹೊಡೆತ ಅಂತ ಪೇಪರಲ್ಲಿ ಓದಿದ್ರಂತೆ. ಅದರ ನಂತರ ಇಲ್ಲಿ ಮಗ ಬಂದರೆ ಅವನಿಗೆ ಕಷ್ಟ ಆಗಬಾರದು ಅಂತ ಪ್ರತಿ ತಿಂಗಳು ಬ್ಯಾಂಕಲ್ಲಿ ಜಮೆ ಮಾಡುತ್ತಿದ್ದರು. ಈ ಮೊತ್ತ ಏನು ಮಾಡಲಿ ಹೇಳಿ” ಅಂತ ಮೇನೇಜರ್ ವಿವರಗಳನ್ನು ಕೊಟ್ಟರು. ಅದನ್ನು ನೋಡಿದ ಶಶಿಕಾಂತ್ ತಾನು ಕಳಿಸಿದಕ್ಕಿಂತ ಹೆಚ್ಚೇ ಮೊತ್ತವಿದೆ ಅದು ಬಡ್ಡಿ ಸೇರಿ ಆದದ್ದಾಗಿತ್ತು. ಹಾಗಿದ್ರೆ ತಾನು ಕಳಿಸಿದ ಹಣವನ್ನು ಒಂದು ಪೈಸೆಯೂ ಮುಟ್ಟದೆ ಅಮ್ಮ ಸಾಮಾಜಿಕ ಸೇವೆ ಮಾಡಿದರು. ಅಮ್ಮನನ್ನು ನೆನೆದು ಶಶಿಕಾಂತನ ಕಣ್ಣುಗಳು ಮಂಜಾದವು. ತನ್ನ ಕುಬ್ಜತನಕ್ಕೆ ತಾನೇ ನಾಚಿಕೊಂಡನು ಆ ದುಃಖದಲ್ಲೂ …ಎದುರಿರುವ ಮೇನೆಜರ್ ನ ಸ್ವರವೂ ಸ್ವರೂಪವೂ ಶಶಿಕಾಂತನಿಗೆ ಕಣ್ಣೀರಲ್ಲಿ ಅಸ್ಪಷ್ಟವಾಗಿ ಕಾಣತೊಡಗಿತು ಕೇಳತೊಡಗಿದವು.
ಕೃಪೆ:ರಜನಿ.ಭಟ್.
ಸಂಗ್ರಹ ವೀರೇಶ್ ಅರಸಿಕೆರೆ.
Comments
Post a Comment