ದಿನಕ್ಕೊಂದು ಕಥೆ 918

*🌻ದಿನಕ್ಕೊಂದು ಕಥೆ🌻*
*ಕ್ರಾಂತಿಕಾರಿ  ರಾಸ್ ಬಿಹಾರಿ ಬೋಸ್*

ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು ರಾಸ್ ಬಿಹಾರಿ ಬೋಸ್ . ಎಲ್ಲರೂ ಅವರನ್ನು ಪ್ರೀತಿಯಿಂದ ರಾಸುದಾ ಎಂದೇ ಕರೆಯುತ್ತಿದ್ದರು .

ರಾಸುದಾ ಅವರ ತಂದೆ ವಿನೋದ ಬಿಹಾರಿ ಬೋಸ್ . ತಾಯಿ ಬಂಗಾಳಿ ಕುಲೀನ ಮನೆತನದ ಸರಳ ಮಹಿಳೆ.

ಹೂಗ್ಲಿ ಜಿಲ್ಲೆಯ ಭದ್ರೇಶ್ವರದ ಪರಲವಿಘಟಿ ಎಂಬ ಹಳ್ಳಿಯಲ್ಲಿ ಜನನ ( 25 ಮೇ 1886 ) .

ಮೂರು ವರ್ಷಗಳಾದಾಗ ತಾಯಿ ಸ್ವರ್ಗವಾಸಿಯಾದರು. ರಾಮಕೃಷ್ಣ ಪರಮಹಂಸರ ಪರಮ ಭಕ್ತರಾದ ತಾತ ಕಾಳಿಚರಣ ಬೋಸ್​ರಿಂದ ಭರತಖಂಡದ ಧಾರ್ವಿುಕ , ಐತಿಹಾಸಿಕ , ಸಾಂಸ್ಕೃತಿಕ , ರಾಜಕೀಯ ವಿಚಾರಗಳ ಅರಿವು ರಾಸುದಾಗಾಯಿತು .

ಚಿಕ್ಕಂದಿನಲ್ಲಂತೂ ಬಲು ತುಂಟ . ಜಗಳಗಂಟ. ಆದರೆ ಸಾಹಿತ್ಯಪ್ರೇಮಿ . ಒಂದು ದಿನ ಶಾಲೆಯಲ್ಲಿ ಇಂಗ್ಲಿಷರ ವಿರುದ್ಧ ಮಾತಾಡಿದ್ದರಿಂದ ಶಾಲೆಯಿಂದಲೇ ಅರ್ಧಚಂದ್ರ !
ಅಪ್ಪ ಛೀಮಾರಿ ಹಾಕಿ ಕಲ್ಕತ್ತೆಗೆ ಅಟ್ಟಿದರು.

ವಿವೇಕಾನಂದರ ಕೃತಿಗಳು , ಜದುನಾಥ ಸರ್ಕಾರರ ಉಪನ್ಯಾಸಗಳು ಪ್ರಭಾವಿಸಿದವು . ಸುಳ್ಳು ಹೇಳಿ ಪೋರ್ಟ್ ವಿಲಿಯಂ ಸೇನಾವಿಭಾಗದಲ್ಲಿ ಗುಮಾಸ್ತನಾದ .

ಬಂಗಾಳಿ ಎಂದು ತಿಳಿದೊಡನೆ ಆ ಕೆಲಸಕ್ಕೆ ಸಂಚಕಾರ! ಮಗ ತನ್ನ ಕಣ್ಣೆದುರೇ ಇರಲೆಂದು ತಾನು ಕೆಲಸ ಮಾಡುತ್ತಿದ್ದ ಶಿಮ್ಲಾದ ಸರ್ಕಾರಿ ಪ್ರೆಸ್​ನಲ್ಲಿಯೇ ಕೆಲಸ ಕೊಡಿಸಿದರು . ಆದರೆ ಮ್ಯಾನೇಜ್​ ವೆುಂಟ್ ಮತ್ತು ಕೆಲಸಗಾರರ ನಡುವೆ ಘರ್ಷಣೆಯಾದಾಗ ರಾಸು ಕೆಲಸಗಾರರ ಪರ ವಕಾಲತ್ತು ವಹಿಸಿದ . ಹೀಗಾಗಿ ದಿನಂಪ್ರತಿ ಮನೆಯಲ್ಲಿ ಜಗಳ . ಪರಿಣಾಮ ಕೆಲಸಕ್ಕೆ ರಾಜೀನಾಮೆ . ಮನೆಯಿಂದ ಪರಾರಿ .

ಡೆಹ್ರಾಡೂನಿನಲ್ಲಿ ವಸತಿಗಾಗಿ ಪರದಾಡುತ್ತಿದ್ದಾಗ ಟ್ಯಾಗೋರ್ ವಿಲ್ಲಾ ಎಸ್ಟೇಟ್ ಮ್ಯಾನೇಜರ್ ಅತುಲ್ ಚಂದ್ರ ಬೋಸನ ಪರಿಚಯವಾಗಿ ಅದೇ ತೋಟದಲ್ಲಿ ವಾಸಕ್ಕೆ ಮನೆಯೂ ಸಿಕ್ಕಿತು .
ಮೊದಲೇ ಅದ್ಭುತ ಮಾತುಗಾರನಾಗಿದ್ದ ರಾಸುದಾ ತರುಣರ ಸಂಘಟನೆಗಾರಂಭಿಸಿದರು . ತನ್ನ ಮನೆಯಲ್ಲೇ ತರುಣರಿಗೆ ಬಾಂಬ್ ತಯಾರಿಸುವ ವಿಧಾನ ಮತ್ತು ಕ್ರಾಂತಿಯ ತರಬೇತಿಗಳನ್ನಾರಂಭಿಸಿದರು .

ಭಾರತದ ವೈಸರಾಯ್ ಆಗಿದ್ದ ಲಾರ್ಡ್ ಹಾರ್ಡಿಂಜನ ಮೆರವಣಿಗೆಯ ಸಂದರ್ಭದಲ್ಲಿ ದೆಹಲಿಯ ಚಾಂದಿನಿ ಚೌಕದಲ್ಲಿ 1912 ರ ಡಿಸೆಂಬರ್ 23 ರಂದು ಬಾಂಬ್ ಎಸೆದಾಗ ರಾಸುದಾರ ಹೆಸರು ಪ್ರಖ್ಯಾತಿ ಪಡೆಯಿತು .

ಈ ಬಾಂಬ್ ಎಸೆದ ನಂತರದಲ್ಲಿ ಬೋಸರು ಚಾಣಾಕ್ಷತನದಿಂದ ಪೊಲೀಸರ ಕಣ್ಣು ತಪ್ಪಿಸಿಕೊಂಡು ವಾರಾಣಸಿಯಲ್ಲಿ ಅವಿತು , ಏಕಕಾಲದಲ್ಲಿ ಉತ್ತರಭಾರತದಲ್ಲೆಲ್ಲ ಧ್ವನಿಸುವಂತೆ ವಿವಿಧ ಕ್ರಾಂತಿಕಾರಕ ಹೋರಾಟಗಳಿಗೆ ಸೂತ್ರಧಾರಿಯಾದರು.

ಪೊಲೀಸರ ಕಾರಣದಿಂದ ಅಡಗಿಕೊಂಡು ಸುಮ್ಮನೆ ಕೂರುವುದು ವ್ಯರ್ಥವೆಂದು ಜಪಾನಿಗೆ ತೆರಳಿ ಸಂಘಟನೆ , ಶಸ್ತ್ರ ಸರಬರಾಜು ಮಾಡುವುದಾಗಿ ಸಂಗಡಿಗರ ಸಭೆಯಲ್ಲಿ ಹೇಳಿದರು .

ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಜಪಾನ್​ಗೆ ತೆರಳಿದ ರಾಸುದಾರ ಬಗ್ಗೆ ಆತಂಕಗೊಂಡ ಬ್ರಿಟಿಷರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಬಂಧನಕ್ಕೆ ಯತ್ನಿಸಿ ವಿಫಲರಾದರು .

ಲಾಲಾ ಲಜಪತ್ ರಾಯ್ ಜಪಾನಿಗೆ ಬಂದಾಗ ರಾಸುದಾ ಹೇರಂಭಗುಪ್ತನೊಡನೆ ಸೇರಿಕೊಂಡು ಬಹಿರಂಗ ಸಭೆ ಏರ್ಪಡಿಸಿ ಜಪಾನಿನಲ್ಲಿ ನೆಲೆಸಿರುವ ಭಾರತೀಯರು ಸ್ವಾತಂತ್ರ ಸಂಗ್ರಾಮಕ್ಕೆ ಸಹಕರಿಸಬೇಕೆಂದು ಕರೆ ಕೊಟ್ಟರು .

ಲಾಲ್ ಅಮೆರಿಕಕ್ಕೆ ಹೋದರೆ ರಾಸುದಾ ಜಪಾನಿನಲ್ಲೇ ಉಳಿದರು . ಬ್ರಿಟಿಷ್ ಸರ್ಕಾರ ದ ಎಚ್ಚರಿಕೆಗೆ ಬೆದರಿದ ಜಪಾನ್ ಬಂಧನದ ವಾರಂಟ್ ಹೊರಡಿಸಿತು.

ರಾಸುದಾ ಭೂಗತರಾದರು .
ಒಂದು ದಿನ ರಾಸುದಾ ಹಾಗೂ ಹೇರಂಭಗುಪ್ತ ಟೋಕಿಯೋ ರಸ್ತೆಯಲ್ಲಿ ನಡೆಯುತ್ತಿದ್ದಾಗ ಪೊಲೀಸರ ಕಣ್ಣಿಗೆ ಬಿದ್ದರು . ಇನ್ನೇನು ಪೊಲೀಸರು ಅವರನ್ನು ಬಂಧಿಸಬೇಕೆನ್ನುವಷ್ಟರಲ್ಲಿ ಕಾರೊಂದು ಭರ್ರನೆ ಬಂದು ಅವರನ್ನು ಹತ್ತಿಸಿಕೊಂಡು ಹೋಯಿತು. ಮತ್ತೆ ಅದು ನಿಂತದ್ದು ಜಪಾನಿನ ಸಮುರಾಯ್ ಯೋಧರ ನಾಯಕ ತೊಯಾಮ ಮನೆಯಲ್ಲಿ .

ರಾಸುದಾಗೆ ಐಸೋಸೋಮಾ ದಂಪತಿ ಆಶ್ರಯ ಒದಗಿಸಿದರು . ಸಂಪೂರ್ಣ ರಕ್ಷಣೆ ಸಿಗಬೇಕಾದರೆ ರಾಸುದಾ ಜಪಾನ್ ಪ್ರಜೆಯಾಗುವುದೇ ಸೂಕ್ತ ಎಂದು ಸೂಚಿಸಿದರು . ಅದಕ್ಕೆ ಜಪಾನಿ ಯುವತಿಯನ್ನು ಮದುವೆಯಾಗುವುದೊಂದೇ ದಾರಿ .

ಆಗ ಸೋಮಾ ದಂಪತಿ ತಮ್ಮ ಸಂಪ್ರದಾಯಕ್ಕೆ ವಿರುದ್ಧವಾದರೂ ರಾಸುದಾ ರಕ್ಷಣೆಗಾಗಿ ತಮ್ಮ ಮಗಳು ತೋಷಿಕೋಳನ್ನು 1918 ರಲ್ಲಿ ಮದುವೆ ಮಾಡಿಸಿದರು . ಆದರೂ ಗೂಢಚಾರರಿಂದಾಗಿ ವಾರಕ್ಕೊಮ್ಮೆ ಮನೆ ಬದಲಾಯಿಸಬೇಕಾದ ಪರಿಸ್ಥಿತಿ .

ಹೀಗೆ ಐದು ವರ್ಷಗಳ ತರುವಾಯ ಜಪಾನಿ ಪೌರತ್ವ ಸಿಕ್ಕಿತು .
1924 ರಲ್ಲಿ ರಾಸುದಾ ‘ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ’ ಹುಟ್ಟುಹಾಕಿದರು .

ಸ್ವಾತಂತ್ರ್ಯ ಸಾಧನೆಗಾಗಿ ಅದರ ಚಟುವಟಿಕೆಗಳು ನಿರಂತರವಾಗಿ ಸಾಗಿದವು .

ಸುಭಾಷ್ ಜಪಾನಿಗೆ ಬಂದಿಳಿದಾಗ ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಹೆಮ್ಮರವಾಗಿ ಬೆಳೆದಿತ್ತು .

ಸ್ವಾತಂತ್ರ್ಯ ವೀರ ಸಾವರ್ಕರರ ಸಲಹೆಯಂತೆ ವಿದೇಶದಿಂದ ಹೋರಾಟ ನಡೆಸಲು ಬರುತ್ತಿದ್ದ ಸುಭಾಷರಿಗೆ

ರಾಸುದಾ ಜಪಾನಿನಲ್ಲಿ ಎಲ್ಲ ಸಿದ್ಧಗೊಂಡಿರುವುದಾಗಿ ಸಂದೇಶ ಕಳುಹಿಸಿದರು . ಈ ನಡುವೆ ರಾಸುದಾ ಆರೋಗ್ಯ ಕೆಟ್ಟಿತು. 1943 ರ ಜುಲೈ 4 ರಂದು ಸಿಂಗಾಪುರದ ಸಾರ್ವಜನಿಕ ಸಮಾರಂಭದಲ್ಲಿ ತನ್ನ ಇಂಡಿಯನ್ ಇಂಡಿಪೆಂಡೆನ್ಸ್ ಲೀಗನ್ನು ಸುಭಾಷರಿಗೊಪ್ಪಿಸಿ ತಾವು ನೇಪಥ್ಯಕ್ಕೆ ಸರಿದರು .

ಲೇಖಕ , ಪತ್ರಕರ್ತರಾಗಿದ್ದ ರಾಸುದಾರಿಗೆ ಜಪಾನ್ ಸರ್ಕಾರ ‘ ಆರ್ಡರ್ ಆಫ್ ದಿ ರೈಸಿಂಗ್ ಸನ್ ’ ಎಂಬ ಗೌರವ ನೀಡಿತ್ತು .

ದೇಶಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟ ರಾಸುದಾ 1945 ರ ಜನವರಿ 21 ರಂದು ಟೋಕಿಯೋದಲ್ಲಿ ನಿಧನರಾದರು . ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಅನನ್ಯ, ಅವಿಸ್ಮರಣೀಯ

ಸಂಗ್ರಹ : ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059