ದಿನಕ್ಕೊಂದು ಕಥೆ 919

*🌻ದಿನಕ್ಕೊಂದು ಕಥೆ🌻*
ಅಂದು *ಕಡಿದಾಳು ಮಂಜಪ್ಪ(ತೀರ್ಥಹಳ್ಳಿ)ನವರು ತಿರಸ್ಕರಿಸಿದ ಪ್ಯಾಲೇಸ್ ಗ್ರೌಂಡಿನ ಆ ಒಂದು ಎಕರೆ ಭೂಮಿ ಬೆಲೆ ಇಂದು ನೂರಾರು ಕೋಟಿ. ಇಂದು ಅವರ ಜನುಮ ದಿನ*

*ಮುಖ್ಯಮಂತ್ರಿಯಂತಹ ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನದಿಂದ ಹೊರ ಬಂದಿರುತ್ತಾರೆ.ವೈಭವೋಪೇತ ಬಂಗಲೆಯಿಂದ ಬೆಂಗಳೂರಿನ ಆಂಡ್ರಿ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಬಂದಿದ್ದ ಸಮಯ.ತಮ್ಮ ಜೀವನೋಪಾಯಕ್ಕಾಗಿ ಮತ್ತೆ ಕರಿಕೋಟು ಹಾಕಿ ಹೈಕೋರ್ಟಿನ ಲಾಯರ್ ಆಗಿ ಹೋಗುತ್ತಿರುತ್ತಾರೆ.ಸಮರ್ಥ ಲಾಯರ್ ಆಗುವಲ್ಲಿ ದಾಪುಗಾಲಿಡುತ್ತಾ ಮುಂದುವರಿಯುತ್ತಿರುವಾಗ ಮುಖ್ಯಮಂತ್ರಿಯಂತಹ ಅತ್ಯುನ್ನತ ಹುದ್ದೆ ಹೊಂದಿದವರು ಮತ್ತೆ ಲಾಯರ್ ಗಿರಿ ಮಾಡುವ ಬಗ್ಗೆ ಇವರ ಹಿತೈಷಿಗಳನೇಕರು ಅಪಸ್ವರ ಎತ್ತಿದರೂ ಜೀವನೋಫಾಯಕ್ಕಾಗಿ ಮನೆ ಆಸ್ತಿ ಮಾಡಿಕೊಳ್ಳದೆ ಕೇವಲ ಪ್ರಾಮಾಣಿಕತೆಯನ್ನೇ ಮೈತುಂಬಾ ಹೊದ್ದುಕೊಂಡಿದ್ದ  ಈ ಪ್ರವಾದಿಗೆ ಲಾಯರಾಗಿ ಪ್ರಾಕ್ಟೀಸ್ ಮಾಡುವುದು ಅವಮಾನವೆನಿಸಲಿಲ್ಲ.ಮುಖ್ಯಮಂತ್ರಿ ಆದವನೊಬ್ಬ ಮತ್ತೆ ತನ್ನಗ ಹಿಂದಿನ ವೃತ್ತಿಗೆ ಮರಳಿದ ಘಟನೆ ಭಾರತದಂತಹ ದೇಶದಲ್ಲಿ ಬಹು ಅಪರೂಪವೇ ಸರಿ*.
*ಒಂದು ಸಂಜೆ  ಒಳಕೋಣೆಯ ಬಾಗಿಲು ಹಾಕಿಕೊಂಡು ತಮ್ಮ ಕಕ್ಷಿಗಾರರೊಂದಿಗೆ ಚರ್ಚೆಮಾಡುತ್ತಿದ್ದಾರೆ.ಹೊರಗಡೆ ಆಡುತ್ತಿದ್ದ ಇವರ ಮಕ್ಕಳಿಬ್ಬರು ಓಡೋಡಿ ಒಳಗಡೆ ಬಂದು ಯಾರೋ ವಿಶ್ವೇಶರಯ್ಯ ಎಂಬುವರು ನಿಮ್ಮನ್ನು ನೋಡಲು ಬಂದಿದ್ದಾರೆ ಎಂದಾಗ ಇವರ ಪರಿಚಿತರಾಗಿದ್ದ ತಾಲೂಕು ಮ್ಯಾಜಿಸ್ಟ್ರೇಟ್ ಆಗಿದ್ದ ವಿಶ್ವೇಶ್ವರಯ್ಯ ಇರಬೇಕೆಂದು ತಿಳಿದು  ಅರ್ಧ ಗಂಟೆ ಕಾಯಲು ಹೇಳುತ್ತಾರೆ.ಒಳಗಡೆ ಬಂದ ಮಕ್ಕಳು ಹಾಗೇ ಹೊರಗಿದ್ದ ವ್ಯಕ್ತಿಗೆ ಹೇಳುತ್ತಾರೆ.ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದು ಮಂಜಪ್ಪನವರು ನೋಡುತ್ತಾರೆ! ನೋಡುವುದೆಂತ?ಸರ್ .ಎಂ ವಿಶ್ವೇಶ್ವರಯ್ಯನವರೇ ಬಂದಿದ್ದಾರೆ.ಇವರನ್ನು ಇಷ್ಟು ಹೊತ್ತು ಕಾಯಿಸಿದ್ದರ ಬಗ್ಗೆ ಸಂಪೂರ್ಣ ಕುಗ್ಗಿ ಹೋಗುತ್ತಾರೆ.ಅತೀವ ನಾಚಿಕೆಯಿಂದ ವಿಶ್ವೇಶ್ವರಯ್ಯನವರ ಕ್ಷಮೆಯಾಚಿಸುತ್ತಾರೆ. ಆಗ ವಿಶ್ವೇಶ್ವರಯ್ಯನವರು ''ನಾನೊಬ್ಬ ನಿವೃತ್ತ ವ್ಯಕ್ತಿ.ನನಗೇನೂ ಕೆಲಸವಿಲ್ಲ.ನಿಮ್ಮನ್ನು ನೋಡುವುದಕ್ಕಾಗಿಯೇ ಬಂದಿದ್ದೇನೆ.ನಿಮ್ಮ ಸಮಯಕ್ಕಾಗಿ ಕಾಯುವುದು ನನ್ನ ಕರ್ತವ್ಯ" ಎನ್ನುತ್ತಾರೆ*
*ತಿಂಗಳಿಗೊಮ್ಮೆಯಾದರೂ ಇವರಿರುವ ಆಂಡ್ರಿ ರಸ್ತೆಯ ಮನೆಗೆ ವಿಶ್ವೇಶ್ವರಯ್ಯನವರು ಹುಡುಕಿಕೊಂಡು ಬರುತ್ತಿದ್ದರು.ಹೀಗೆ ಬರುವ ಶ್ರಮ* *ತೆಗೆದುಕೊಳ್ಳಬಾರದೆಂದೂ, ಫೋನ್ ಮಾಡಿದರೆ ತಾನೇ ನೀವಿರುವಲ್ಲಿಗೆ ಬಂದು ನಿಮ್ಮನ್ನು ನೋಡುತ್ತೇನೆಂದು ವಿಶ್ವೇರಯ್ಯನವರಲ್ಲಿ ಕೇಳಿಕೊಳ್ಳುತ್ತಾರೆ. . ಆಗ ವಿಶ್ವೇಶ್ವರಯ್ಯನವರು ಹೇಳುವ ಮಾತು ಕೇಳಿದರೆ ಕಡಿದಾಳು ಮಂಜಪ್ಪನವರ* *ಪ್ರಾಮಾಣಿಕತೆಯ ಕಾಠಿಣ್ಯ ಎಷ್ಟು ಜಗತ್ತ್ಪಸಿದ್ದ ಎಂಬ ಅರಿವು ಮೂಡಿಸುತ್ತದೆ.''ಬಹಳ ವರ್ಷಗಳ ನಂತರ ಮೈಸೂರು ರಾಜ್ಯದಲ್ಲಿ ನಾನೊಬ್ಬ ಒಳ್ಳೆಯ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಿದ್ದೇನೆ.ಅದಕ್ಕಾಗಿ ನಿಮ್ಮ ಮನೆಗೆ ಸ್ಪೂರ್ತಿಪಡೆಯಲು ಬರುತ್ತೇನೆ"ಎನ್ನುತ್ತಾರೆ*.
೧೯೫೭ ರ *ಕೊನೆಯ ದಿನಗಳಲ್ಲಿ ನಡೆದ ಮತ್ತೊಂದು ಘಟನೆ.ಅಂದಿನ ರಾಜ್ಯಪಾಲರಾಗಿದ್ದವರು ಮಹಾರಾಜರಾದ ಜಯಚಾಮ ರಾಜ ಒಡೆಯರ್ ರವರು. ಅವರು ಮೈಸೂರಿನಿಂದ ಬೆಂಗಳೂರಿಗೆ ಬಂದವರು ಬೆಂಗಳೂರು ಅರಮನೆಯಲ್ಲಿ ಉಳಿದುಕೊಂಡಿದ್ದಾಗ ಅವರನ್ನು ನೋಡಲು ಮಂಜಪ್ಪನವರು ಬೆಂಗಳೂರು ಪ್ಯಾಲೇಸ್ ಗೆ ಹೋಗುತ್ತಾರೆ.ಕುಶಲೋಪರಿಗಳನ್ನು ಮುಗಿಸಿ  ಹೊರಬರುವಾಗ ಅವರ ಹಿಂದಯೇ ಮಹರಾಜರ ಕಾರ್ಯದರ್ಶಿಯಾಗಿದ್ದ ಮಹದೇವಯ್ಯನವರು ಬಂದು 'ಬೆಂಗಳೂರು ಅರಮನೆಗೆ ಸೇರಿರುವ ಪ್ಯಾಲೇಸ್ ಆರ್ಕಿಡ್ಸ್ ನ  ಒಂದು ಎಕರೆ ಭೂಮಿಯನ್ನು ನಿಮ್ಮ ಹೆಸರಿಗೆ ಮಾಡಿಕೊಡಲು ಮಹರಾಜರು ಬಯಸಿದ್ದಾರೆ. ನೀವು ಇದನ್ನು ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ತಮಗೆ ಅನುಕೂಲವಾಗುತ್ತದೆ ಎಂಬ ಸಂದೇಶವನ್ನು ಕಡಿದಾಳರಿಗೆ ಕೊಡುತ್ತಾರೆ. ಆದರೆ ಅದಕ್ಕುತ್ತರವಾಗಿ ಮಹಾರಾಜ ಔದಾರ್ಯಕ್ಕೆ ಕೃತಜ್ಷತೆಗಳನ್ನೂ ಹೇಳಿ ಮಹರಾಜರ ದಾರಾಳತನವನ್ನು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಭೂಮಿಯ ಅಗತ್ಯ ತನಗಿಲ್ಲ ಎಂದು ಹೇಳಿ ಮಹರಾಜರ ಔದಾರ್ಯವನ್ನು ತಿರಸ್ಕರಿಸುತ್ತಾರೆ. ಆಗ ಮಾಜಿ ಮುಖ್ಯ ಮಂತ್ರಿ ಮಂಜಪ್ಪನವರ ಹತ್ತಿರ ಒಂದು ಸೈಟೂ ಸಹಾ ಇರದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಆ ಒಂದು ಎಕರೆ ಭೂಮಿಯ ಬೆಲೆ ಈಗ ನೂರಾರು ಕೋಟಿಗಟಿಗಳಾಗಿರಬಹುದು ಎಂಬುದನ್ನು ಪ್ರತ್ಯೇಕವಾಗಿ ಹೇಳ ಬೇಕಿಲ್ಲ*
*ಕವಿ ಮತ್ತು ಚಿಂತಕ ಎಲ್. ಸಿ ನಾಗರಾಜ್ ಆಗ ಬೆಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ.ತಮ್ಮ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಇವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲು ಇವರ ಆಂಡ್ರಿ ರಸ್ತೆಯಲ್ಲಿರುವ ಮನೆಗೆ ಗೆಳೆಯರೊಂದಿಗೆ ಹೋಗುತ್ತಾರೆ. ಬಿಳಿಯ ನಿಕ್ಕರ್ ಮತ್ತು ಬನಿಯನ್ ಹಾಕಿಕೊಂಡ ವ್ಯಕ್ತಿಯೋರ್ವರು ಅಂಗಳದಲ್ಲಿರುವ ಗಿಡಗಳಿಗೆ ನೀರುಣಿಸುತ್ತಿರುತ್ತಾರೆ.''ಯಾರನ್ನು ನೋಡಬೇಕಿತ್ತು'' ಎಂಬ ಪ್ರಶ್ನೆ ಆ ವ್ಯಕ್ತಿಯಿಂದ ಬಂದಾಗ ''ಕಡಿದಾಳರನ್ನು ನೋಡಲು ಬಂದಿದ್ದೇವೆ.'' ಎನ್ನುತ್ತಾರೆ.ಸರಿ ಕರೆಯುತ್ತೇನೆ ಎಂದು ಒಳಹೋದ ವ್ಯಕ್ತಿಯೇ ಕಡಿದಾಳರಾಗಿ ಪಂಚೆ ಮತ್ತು ಜುಬ್ಬದೊಂದಿಗೆ ಹೊರ ಬಂದಾಗ ಎಲ್.ಸಿ ನಾಗರಾಜ್ ಮತ್ತು ಗೆಳೆಯರಿಗೆ ಒಂದು ಕ್ಷಣ ಮಾತೇ ಹೊರಡಲಿಲ್ಲ.ಇವರ ತೊಳಲಾಟವನ್ನು ಅರ್ಥ ಮಾಡಿಕೊಂಡ ಕಡಿದಾಳರೇ ಮುಂದುವರಿದು ''ಏನೀಗ ನಿಮ್ಮ ಕಾರ್ಯಕ್ರಮಕ್ಕೆ ಬರಬೇಕಲ್ಲವೆ? ಚಿಂತೆ ಮಾಡಬೇಡಿ ಖಂಡಿತ ಬರುತ್ತೇನೆ'' ಎಂದು ಹೇಳಿ ಅವರನ್ನು ಕಳುಹಿಸಿಕೊಟ್ಟಿದ್ದನ್ನು ಮೊನ್ನೆ ಎಲ್ಸಿಯವರ ಫೇಸ್ ಬುಕ್ ಬರಹದಲ್ಲಿ ಗಮನಿಸಿದೆ. ರಾಜಕಾರಣದಲ್ಲಿನ ಅನೇಕ ಘಟನೆಗಳನ್ನು ರಸವತ್ತಾಗಿ ಬರೆದು ಬೆರಗುಗೊಳಿಸುವ ಜನಪರ ಪತ್ರಕರ್ತ ಮಿತ್ರ ಆರ್.ಟಿ ವಿಠಲ ಮೂರ್ತಿಯವರು ಸದಾಶಿವ ನಗರದ ಕಡಿದಾಳರ ಮನೆಗೆ ಹೋಗುತ್ತಾರೆ.ಸಾಮಾನ್ಯವಾಗಿ ಸಕ್ರಿಯ ರಾಜಕಾರಣದ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವಿದ್ದ ಕಡಿದಾಳರನ್ನು ಮಾತಾಡಿಸತೊಡಗುತ್ತಾರೆ.ಅಪರೂಪದ ವಿಷಯಗಳನ್ನು ಹೆಕ್ಕಿ ತೆಗೆವ ಕಲೆಯಲ್ಲಿ ವಿಠಲಮೂರ್ತಿಯವರಂತವರು ಪ್ರಸಕ್ತ ಸನ್ನಿವೇಶದಲ್ಲಿ ಕಡಿಮೆ ಪ್ರಮಾಣದಲ್ಲಿದ್ದಾರೆಂಬುದು ನನ್ನ ಭಾವನೆ.ಅದೂ ಇದೂ ಮಾತಾಡುತ್ತಾ ಕಡಿದಾಳರಿಗೆ ತಮ್ಮ ಜೀವನದಲ್ಲಿ ತಮ್ಮ ಮೇಲೆ ಪರಿಣಾಮ ಬೀರಿದ ಬಹು ಮುಖ್ಯವಾದ ಘಟನೆಯೊಂದನ್ನು ಹೇಳಲು ವಿನಂತಿಸುತ್ತಾರೆ..ಐವತ್ತರ ದಶಕದ ಆರಂಭದಲ್ಲಿ ಮಂತ್ರಿಯಾಗಿದ್ದ ಕಡಿದಾಳರ ಕಾರು ಬೆಂಗಳೂರಿನಿಂದ ಹೊರಡುತ್ತದೆ.ಹಳ್ಳಿಯೊಂದರ ಹತ್ತಿರ ಕಾರು ಬಂದಾಗ ತಲೆ ಬಿಚ್ಚಿಕೊಂಡ,ಮಾಸಲು ಸೀರೆಯುಟ್ಟ ಮಹಿಳೆಯೊಬ್ಬಳು ಇವರ ಕಾರನ್ನು ತಡೆದು ಬಳ ಬಳನೆ ಅಳತೊಡಗುತ್ತಾಳೆ. ಕಾರು ನಿಲ್ಲಿಸಿದ ಮಂಜಪ್ಪನವರಿಗೆ ವಿಷಯವೇನೆಂಬುದೇ ಅರ್ಥವಾಗದು. ಮಂಜಪ್ಪನವರನ್ನುದ್ದೇಶಿಸಿ ಆ ಮಹಿಳೆ ''ನೀನು ಮಂಜಪ್ಪ. ದೊಡ್ಡ ಹುದ್ದೆಯಲ್ಲಿದ್ದೀಯ. ಸಾಹುಕಾರರ ಭೂಮಿಯನ್ನು ಉಳುಮೆ ಮಾಡುತ್ತೇವೆ. ಬಂದ ಬೆಳೆ ಪೂರಾ ಗೇಣಿಗೆ ಹೋಗುತ್ತಿದೆ.ಅರ್ಧಹೊಟ್ಟೆಯಲ್ಲಿ ನನ್ನ ಮಗ ಸತ್ತೇ ಹೋದ,.ನನ್ನ ಗಂಡ ರೋಗ ಹಿಡಿದು ಮೂಲೆ ಸೇರಿದ್ದಾನೆ. ಅವನೂ ಇವತ್ತೋ ನಾಳೆಯೋ ಸಾಯುವ ಹಂತದಲ್ಲಿದ್ದಾನೆ. ನಮ್ಮ ಊರಿನ ಎಲ್ಲರ ಸ್ಥಿತೀನು ಇದೇ ರೀತಿ. ಇದಕ್ಕೆ ಏನಾದರೊಂದು  ಪರಿಹಾರ ಕಂಡು ಹಿಡಿಯಪ್ಪಾ. ಹೆಂಗಾದ್ರು ನಮ್ಮನ್ನು ಬದುಕಿಸು "ಎಂದು ಗೋಳೋ ಎಂದು ಅಳುತ್ತಿದ್ದಾಗ ಮಂಜಪ್ಪನವರ ಕರುಳೇ ಹೊರ ಬಂದಂತಾಗುತ್ತದೆ.ಆ ಮಹಿಳೆಯ ಆಕ್ರಂದನ ಗೇಣಿ ವ್ಯವಸ್ಥೆಯ ಕರಾಳತೆಯನ್ನು ಬಿಂಬಿಸತೊಡಗುತ್ತದೆ. ಆ ಹಳ್ಳಿಯ ಜನರ ಸ್ಥಿತಿ ಗತಿ ಮಂಜಪ್ಪನವರ ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಾ ಹೋಗುತ್ತದೆ. ಅಲ್ಲಿಂದ ಮಂಜಪ್ಪನವರ ಕಾರ್ಯಾಚರಣೆಗಳು ಗೇಣಿ ಶಾಸನ ತರುವುದರತ್ತ ಹೋಗುವುದನ್ನು ವಿವರಿಸಿ ಹೇಳಬೇಕಿಲ್ಲ*

*ಸಾರ್ವಜನಿಕ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ತಮ್ಮ ಹೆಸರಿನ ಜೊತೆ ಸೇರಿಕೊಂಡ ಜಾತಿ ಸೂಚಕ ಗೌಡ ಎಂಬ ಪದವನ್ನು ತಾವು ಮಾತ್ರ ತೆಗೆದು ಹಾಕಲಿಲ್ಲ. ತಮ್ಮ ಸಹೋದರರುಗಳಾದ ತಮ್ಮಯ್ಯ, ಅಣ್ಣಯ್ಯ, ನಾಗಪ್ಪ,ಶ್ರೀನಿವಾಸ್ ಇವರುಗಳ ಹೆಸರಿನಲ್ಲಿ ಸೇರಿಕೊಂಡಿದ್ದ ಗೌಡ ಎಂಬ ಪದವನ್ನು ಆ ಕಾಲದಲ್ಲೇ ಇವರುಗಳೆಲ್ಲ ತೆಗೆದು ಹಾಕಿರುವುದನ್ನು ಸಹಾ ಗಮನಿಸಬೇಕಾದ ಅಂಶ. ನಮ್ಮ ಹಳ್ಳಿಯಲ್ಲಿ ಇಂದಿಗೂ ಮಂಜಪ್ಪಗೌಡ ಎಂದೇ ಕರೆಯುತ್ತಿರುವುದನ್ನು ಕಾಣಬಹುದು.ಇಂತಹ ಆಲೋಚನೆ ಅಂದೇ ಇವರಿಗೆ ಹೊಳೆದಿದೆ.ಆದರೆ ಇಂದು ಜಾತಿ ಸೂಚಕ ಪದಗಳ ಬಳಕೆ ಎಲ್ಲೆ ಮೀರಿ ಸೇರ್ಪಡೆಯಾಗುತ್ತಿರುವುದನ್ನು ಗಮನಿಸದರೆ ನಮ್ಮ ಪಯಣ ಎತ್ತ ಹೋಗುತ್ತಿದೆ ಎಂಬುದೇ ಅರ್ಥವಾಗದ ಸಂಗತಿಯಾಗಿದೆ.*
*ಇಂದು ಸತ್ಯ ಮತ್ತು ಪ್ರಾಮಾಣಿಕತೆಯ ಪ್ರವಾದಿಯ ಜನುಮ ದಿನ .ಒಂದಷ್ಟು ನೆನಪುಗಳು.*

ಬರವಣಿಗೆ:
*ನೆಂಪೆ ದೇವರಾಜ್*
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097