ದಿನಕ್ಕೊಂದು ಕಥೆ 930

*🌻ದಿನಕ್ಕೊಂದು ಕಥೆ🌻*
*ಬ್ರಿಟಿಷರನ್ನು ಕಂಗೆಡಿಸಿದ ಇನ್ನೊಬ್ಬ ವೀರ ಅಭಿಮನ್ಯು*

ಆಜಾದ್ ಎಚ್.ಎಸ್.ಆರ್.ಎ. ಸಂಘಟನೆಯ ಪ್ರಧಾನ ದಂಡನಾಯಕನಾಗಿದ್ದಾಗ ಅನೇಕ ಯುವಕರನ್ನು ಸಂಸ್ಥೆಯತ್ತ ಆಕರ್ಷಿಸಿದ್ದ. ಹಲವು ಕಡೆ ಕಾರ್ಯಾಚರಣೆಗಳನ್ನು ನಡೆಸಿ ಹಣ ಸಂಗ್ರಹಿಸಿದ ಆಜಾದ್ ಕೆಲವು ಕೇಂದ್ರಗಳನ್ನೂ ತೆರೆದು ಅವುಗಳಿಗೆ ಒಬ್ಬೊಬ್ಬ ಪ್ರಮುಖನನ್ನು ನೇಮಿಸಿ ಜವಾಬ್ದಾರಿ ವಹಿಸಿದ್ದ.

ಭಾರತದ ಸ್ವಾತಂತ್ರ್ಯದ ಸಲುವಾಗಿ ಸರ್ವಸ್ವವನ್ನೂ ಮುಡಿಪಿಟ್ಟು ಹೋರಾಡುತ್ತಿದ್ದ ಯುವ ಕ್ರಾಂತಿರತ್ನಗಳು ಒಂದು ಕಡೆಯಾದರೆ, ಮನೆಮುರುಕರು ಸ್ವಾರ್ಥಪಿಪಾಸೆಯಿಂದಾಗಿ ಕ್ರಾಂತಿ ಸಂಘಟನೆಗೆ ಕುಠಾರಾಘಾತ ಉಂಟು ಮಾಡಿದ್ದು ಇನ್ನೊಂದು ಕಡೆ. ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಭಗವತಿ ಚರಣ್, ದುರ್ಗಾಭಾಭಿ ಮುಂತಾದ ನೂರಾರು ಕ್ರಾಂತಿಕಾರಿಗಳು ತಮ್ಮ ಬೆವರು, ನೆತ್ತರುಗಳಿಂದ ಕ್ರಾಂತಿಸೌಧವನ್ನು ನಿರ್ವಿುಸಿದ್ದರೆ ಒಳಗೊಳಗೆ ಸುರಂಗ ಕೊರೆದು ಅದನ್ನು ಕೆಡವಿದ ದ್ರೋಹಿಗಳು ಕೆಲವರು.

ಅಂಥವರ ಪೈಕಿ ಯಶ್​ಪಾಲ್, ವೀರಭದ್ರ ತಿವಾರಿ, ಫಣೀಂದ್ರ ಘೊಷ್ ಮುಂತಾದವರ ಜತೆ ಕಪ್ಪುಪಟ್ಟಿಯಲ್ಲಿ ಸೇರ್ಪಡೆಯಾಗಬೇಕಾದವನು ಕೈಲಾಸಪತಿ. ಅವನು ಸಂಸ್ಥೆಗೆ ದಾಖಲಾದಾಗ ಅಂಥ ದೌರ್ಬಲ್ಯಗಳಿಲ್ಲದ ಉತ್ತಮ ವ್ಯಕ್ತಿಯಾಗಿದ್ದ. ಆದರೆ ಬರಬರುತ್ತ ಭ್ರಷ್ಟ ಕ್ರಾಂತಿಕಾರಿಗಳ ಪ್ರಭಾವದಿಂದ ದಾರಿತಪ್ಪಿದ ಅವನಿಂದ ಕೆಲವರು ಕ್ರಾಂತಿಕಾರಿಗಳು ವಿನಾಕಾರಣ ಮೃತ್ಯುವನ್ನಪ್ಪಿ ಹುತಾತ್ಮರಾಗಬೇಕಾಗಿಬಂತು. ಸಾಲಿಗ್ರಾಮ ಶುಕ್ಲನದು ಅಂತಹ ಒಂದು ಉದಾಹರಣೆಯಾದರೆ ಸುಮಾರು ಅದೇ ವೇಳೆ ಹುತಾತ್ಮನಾದ ವಿಶ್ವೇಶ್ವರ ಎಂಬ ಹದಿನಾರು ವಯಸ್ಸಿನ ಕ್ರಾಂತಿಕಾರಿಯದು ಇನ್ನೊಂದು ಉದಾಹರಣೆ. ಅವನೊಬ್ಬ ಕಾಲೇಜು ವಿದ್ಯಾರ್ಥಿ. ಹೊರನೋಟಕ್ಕೆ ನಿಷ್ಠಾವಂತ ಕ್ರಾಂತಿಕಾರಿಯಂತಿದ್ದ ಕೈಲಾಸಪತಿ ಅಂತರಂಗದಲ್ಲಿ ದುರ್ಬಲ ಮನಸ್ಸಿನವನಾಗಿದ್ದ. ಯಶ್​ಪಾಲ್, ವೀರಭದ್ರ ತಿವಾರಿಯರಂತೆ ಧ್ಯೇಯವಾದಿ ಕ್ರಾಂತಿಕಾರಿಗಳಂತೆ ನಟಿಸುತ್ತಿದ್ದರೂ ಒಳಗೊಳಗೆ ಕ್ರಾಂತಿಕಾರಿ ಜೀವನಕ್ಕೆ ಹೊಂದಾಣಿಕೆಯಾಗದಂಥ ಹೆಣ್ಣುಗಳ ವ್ಯಾಮೋಹದಲ್ಲಿ ಸಿಲುಕಿಕೊಂಡು ಸಂಸ್ಥೆಯ ಶಿಸ್ತು, ಸಂಯಮಗಳಿಗೆ ಆಘಾತ ಉಂಟು ಮಾಡಿದವರು ಇವರೆಲ್ಲ.

ಆಜಾದ್ ಎಚ್.ಎಸ್.ಆರ್.ಎ. ಸಂಘಟನೆಯ ಪ್ರಧಾನ ದಂಡನಾಯಕನಾಗಿದ್ದಾಗ ಅನೇಕ ಯುವಕರನ್ನು ಸಂಸ್ಥೆಯತ್ತ ಆಕರ್ಷಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಿದ್ದ. ಹಾಗೆ ಸೇರಿಕೊಂಡವನೇ ಈ ಕೈಲಾಸಪತಿ. ಹಲವು ಕಡೆ ಕಾರ್ಯಾಚರಣೆಗಳನ್ನು ನಡೆಸಿ ಹಣ ಸಂಗ್ರಹಿಸಿದ ಆಜಾದ್ ಕೆಲವು ಕೇಂದ್ರಗಳನ್ನೂ ತೆರೆದು ಅವುಗಳಿಗೆ ಒಬ್ಬೊಬ್ಬ ಪ್ರಮುಖನನ್ನು ನೇಮಿಸಿ ಅವರ ಕೈಗೆ ಹಣ ನೀಡಿ ಕೇಂದ್ರವನ್ನು ನಡೆಸುವ ಜವಾಬ್ದಾರಿ ವಹಿಸಿದ್ದ. ಆದರೆ ಕೆಲವೇ ಕೆಲವರು ಸಡಿಲ ಚಾರಿತ್ರ್ಯದ ಕಾರಣ ಸಂಸ್ಥೆಯ ಪವಿತ್ರವಾದ ಹಣವನ್ನು ತಮ್ಮಕೀಳು ಆಸೆಗಳನ್ನು ತೀರಿಸಿಕೊಳ್ಳುವ ದಾರಿಯಲ್ಲಿ ಅಪವ್ಯಯ ಮಾಡುತ್ತಿದ್ದರು. ದೆಹಲಿಯ ಕೇಂದ್ರದ ಪ್ರಮುಖನಾಗಿದ್ದ ಕೈಲಾಸಪತಿ ಈ ಸಾಲಿಗೆ ಸೇರಿದವನು.

ದೆಹಲಿಯ ಶಾಲೆಯೊಂದರಲ್ಲಿ ವ್ಯಾಯಾಮ ಶಿಕ್ಷಕನಾಗಿದ್ದ ಮಾಸ್ಟರ್ ಸೂರಜ್ ಬಲಿ ಎಂಬುವನು ಗೃಹಸ್ಥನಾಗಿದ್ದರೂ ಎಚ್.ಎಸ್.ಆರ್.ಎ.ಯ ಸಂಪೂರ್ಣ ನಿಷ್ಠಾವಂತ ಹಿತೈಷಿ ಸದಸ್ಯ. ಕ್ರಾಂತಿಕಾರಿಗಳಿಗೆ ಆಶ್ರಯ ನೀಡುವುದು, ಹಣ ನೀಡುವುದು, ಇನ್ನಷ್ಟು ಹಿತೈಷಿಗಳನ್ನು ಸಂಸ್ಥೆಗೆ ಪರಿಚಯಿಸುವುದು ಹಾಗೂ ಆಜಾದನ ಆದೇಶಗಳನ್ನು ಪಾಲಿಸುವುದೇ ಮುಂತಾದ ಎಲ್ಲ ಕೆಲಸಗಳಿಗೆ ಅವನದು ಏಕನಿಷ್ಠೆ. ಆತನಿಗೆ ಸುರಸುಂದರಿ ಎಂಬಂತಿದ್ದ ಪತ್ನಿ. ಹೆಸರು ಚಂದ್ರಾವತಿ. ಅವಳು ಚಂಚಲ ಮನಸ್ಕಳು. ಆತನ ಮನೆ ಅನೇಕ ಕ್ರಾಂತಿಕಾರಿಗಳಿಗೆ ತೆರೆದ ಬಾಗಿಲಾಗಿತ್ತು. ಚಂದ್ರಾವತಿಯ ಕೈ ಊಟ ಮಾಡುವ ಅವಕಾಶ ಅವರಿಗೆ ದೊರೆತಿತ್ತು. ಹಾಗೆ ತನ್ನ ಮನೆಗೆ ಊಟಕ್ಕೆ ಕೈಲಾಸಪತಿಯನ್ನು ಆಹ್ವಾನಿಸಿದ ಮಾಸ್ಟರ್ ಸೂರಜ್ ಬಲಿ. ಆಗಾಗ ಊಟಕ್ಕೆ ಅವನ ಮನೆಗೆ ಹೋಗುತ್ತಿದ್ದ ಕೈಲಾಸಪತಿ ಉಂಡಮನೆಗೇ ಕನ್ನ ಹಾಕುವ ದ್ರೋಹಕಾರ್ಯಕ್ಕೆ ಮುಂದಾದ. ಚಂದ್ರಾವತಿಯನ್ನು ಬಲೆಯಲ್ಲಿ ಹಾಕಿಕೊಂಡು ಅವಳೊಂದಿಗೆ ಅಕ್ರಮ ಸಂಪರ್ಕವಿರಿಸಿಕೊಂಡ. ಇಂಥ ಆಮಿಷಕ್ಕೆ ಬಲಿಯಾದ ಕೈಲಾಸಪತಿ ಸಂಸ್ಥೆಯ ಹಣವನ್ನು ದುರ್ವಿನಿಯೋಗ ಮಾಡಲಾರಂಭಿಸಿದ. ಇದು ಆಜಾದನ ಅರಿವಿಗೆ ಬಾರದ ಸಂಗತಿಯಾಗಿತ್ತು.

ಮಾರಣಾಂತಿಕ ಪೆಟ್ಟು: ಕೈಲಾಸಪತಿಯ ವಾಸಕ್ಕಾಗಿ ದೆಹಲಿಯ ಬಾಜಾರ್ ಸೀತಾರಾಮ್ ಎಂಬ ಮೊಹಲ್ಲೆಯಲ್ಲಿ ಸೂರಜ್ ಬಲಿಯೇ ಹುಡುಕಿಕೊಟ್ಟಿದ್ದ ಒಂದು ಮನೆ ಇತ್ತು. ಅಲ್ಲಿ ಅವನು ರಹಸ್ಯವಾಗಿ ಚಂದ್ರಾವತಿಯನ್ನು ಕರೆದೊಯ್ದು ನೀತಿಗೆಟ್ಟ ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ. ಈ ಸಂಗತಿ ಪೊಲೀಸರಿಗೆ ತಿಳಿಯಿತು. ಅವನು ಒಮ್ಮೆ ಆ ಮನೆಯಲ್ಲಿ ಚಂದ್ರಾವತಿ ಜೊತೆ ಏಕಾಂತದಲ್ಲಿದ್ದಾಗ ಪೊಲೀಸರು ದಾಳಿ ಮಾಡಿ ಅವರಿಬ್ಬರನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದರು. ಅವನಿಗೆ ತೀವ್ರ ಶಿಕ್ಷೆಗಳನ್ನು ನೀಡಿ, ಚಂದ್ರಾವತಿಯ ಮೇಲೆ ಅವನ ಕಣ್ಮುಂದೆಯೇ ಅತ್ಯಾಚಾರ ಮಾಡುವುದಾಗಿ ಹೆದರಿಸಿ ಅವನನ್ನು ಅಪೂ›ವರ್ ಆಗಿ ಮಾಡಿಕೊಂಡರು. ಈ ವಿಷಯ ತಿಳಿದು ಮಾಸ್ಟರ್ ಸೂರಜ್ ಬಲಿ ಹುಚ್ಚು ಹಿಡಿದು ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಭಿಕ್ಷೆ ಬೇಡುತ್ತ ತಿರುಗಾಡುತ್ತಿದ್ದನಂತೆ.

ಕೈಲಾಸಪತಿ ಎಚ್.ಎಸ್.ಆರ್.ಎ.ಗೆ ಮಾರಣಾಂತಕ ಪೆಟ್ಟು ಕೊಟ್ಟು ಅಪೂ›ವರ್ ಆದ ಆ ದಿನ 1930ರ ಅಕ್ಟೋಬರ್ 30!

ಕೈಲಾಸಪತಿಯ ದ್ರೋಹಕ್ಕೆ ಮೊದಲನೆಯ ಆಹುತಿ ಧನ್ವಂತರಿ ಎಂಬ ಅದ್ಭುತ ಸಾಮರ್ಥ್ಯದ ಕ್ರಾಂತಿಕಾರಿ. ಆಜಾದನ ಆಜ್ಞೆಗಳ ನಿಷ್ಠಾವಂತ ಪರಿಪಾಲಕ. ಬಹಳ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡು ಯಶಸ್ವಿಯಾಗಿ ಪೂರೈಸುತ್ತಿದ್ದ ಕಾರ್ಯಸಾಧಕ.

1930ರ ನವೆಂಬರ್ 1. ಧನ್ವಂತರಿ ತನ್ನ ಇನ್ನೊಬ್ಬ ಗೆಳೆಯ ಕ್ರಾಂತಿಕಾರಿಯೊಂದಿಗೆ ದೆಹಲಿಯ ಚಾಂದನಿ ಚೌಕ್​ಗೆ ಸಾಮಾನುಗಳನ್ನು ಕೊಳ್ಳಲು ಹೋಗಿದ್ದ. ಇಬ್ಬರು ಪೊಲೀಸರು ಹಠಾತ್ತನೆ ಕಾಣಿಸಿಕೊಂಡರು. ಕೈಲಾಸಪತಿಯ ಹೇಳಿಕೆಯಿಂದ ಧನ್ವಂತರಿ ಮತ್ತು ಸಂಗಾತಿಯನ್ನು ಗುರುತಿಸಲು ಪೊಲೀಸರಿಗೆ ಕಷ್ಟವಾಗಲಿಲ್ಲ. ಎಂದಿನ ಮಾಮೂಲು ರೀತಿಯಲ್ಲಿ ಪೊಲೀಸರು ‘ಕಳ್ಳರು… ಕಳ್ಳರು… ಹಿಡಿಯಿರಿ ಅವರನ್ನು’ ಎಂದು ಗಟ್ಟಿಯಾಗಿ ಬೊಬ್ಬಿಡಲಾರಂಭಿಸಿದರು. ಕ್ರಾಂತಿಕಾರಿಗಳನ್ನು ಜನರ ಸಹಾಯದಿಂದಲೇ ಹಿಡಿಯಲು ಪೊಲೀಸರು ಆಡುತ್ತಿದ್ದ ಆಟ ಅದು. ಕ್ಷಣಾರ್ಧದಲ್ಲಿ ಜನ ಅವರನ್ನು ಅಟ್ಟಿಸಿಕೊಂಡು ಹೋಗಲಾರಂಭಿಸಿದರು. ಎದುರಿಗೆ ಒಬ್ಬ ಬಲಿಷ್ಠ ಮನುಷ್ಯ ಕೈನಲ್ಲಿದ್ದ ಬಲವಾದ ಲಾಠಿಯಿಂದ ಧನ್ವಂತರಿಯ ತಲೆಗೆ ಹೊಡೆದ. ಧನ್ವಂತರಿ ಜೇಬಿನಿಂದ ಪಿಸ್ತೂಲು ತೆಗೆದು ಗುಂಡು ಹಾರಿಸಿದ. ಅದು ಒಬ್ಬ ಪೊಲೀಸನಿಗೆ ತಗಲಿತು. ಆದರೆ ಪೊಲೀಸರು ಅವನ ಮೇಲೆ ಮುಗಿಬಿದ್ದು ಬಂಧಿಸಿ ಸ್ಟೇಷನ್ನಿಗೆ ಎಳೆದೊಯ್ದರು. ಕೈಲಾಸಪತಿಯ ಮಿತ್ರದ್ರೋಹ ಕೆಲಸ ಮಾಡಿತ್ತು.

ಭಗತ್ ಸಿಂಗ್​ಗೆ ದ್ರೋಹ ಬಗೆದವನು: ಧನ್ವಂತರಿ ಬಂಧನವಾಗಿ ಮೂರು ದಿನಗಳು ಕಳೆದಿದ್ದವು. 1930ರ ನವೆಂಬರ್ 4. ಪಂಜಾಬಿನ ಗುರುದಾಸಪುರದಲ್ಲಿ ಖಾನ್ ಬಹದ್ದೂರ್ ಅಬ್ದುಲ್ ಅಜೀಜ್ ಎಂಬ ವ್ಯಕ್ತಿ ಇದ್ದ. ಅವನು ಲಾಹೋರ್ ಮೊಕದ್ದಮೆಯಲ್ಲಿ ಭಗತ್ ಸಿಂಗ್​ನ ವಿರುದ್ಧ ಸಾಕ್ಷ್ಯಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ನೀಡಿ ಮರಣ ದಂಡನೆಗೆ ಕಾರಣನಾದ ಧೂರ್ತ.

ಆಜಾದ್ ಧನ್ವಂತರಿ ಮತ್ತು ವಿಶ್ವೇಶ್ವರ ಎಂಬ ಇನ್ನೊಬ್ಬ ಕ್ರಾಂತಿಕಾರಿಗೆ ಅಬ್ದುಲ್ ಅಜೀಜನನ್ನು ವಿಚಾರಿಸಿಕೊಳ್ಳುವ ಕೆಲಸ ನೀಡಿದ್ದ. ಅವರಿಬ್ಬರೂ ಅಜೀಜನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದರು. ಆನಂತರವೇ ಧನ್ವಂತರಿ ದೆಹಲಿಗೆ ತೆರಳಿ ಅಲ್ಲಿ ಬಂಧಿತನಾಗಿದ್ದು. ವಿಶ್ವೇಶ್ವರ ಮಾತ್ರ ಗುರುದಾಸಪುರದಲ್ಲಿಯೇ ಉಳಿದುಕೊಂಡಿದ್ದ.

ಆತ ಕ್ರಾಂತಿಕಾರಿಗಳೆಲ್ಲರಿಗೂ ಪ್ರೀತಿಪಾತ್ರನಾಗಿದ್ದ. ನೋಡಲು 12-13 ವರ್ಷದ ಹುಡುಗನಂತೆ ಕಾಣುತ್ತಿದ್ದ ಪೀಚು ಶರೀರ ಅವನದು. ಅವನಲ್ಲಿದ್ದ ಸ್ವಾತಂತ್ರ್ಯಪ್ರೇಮ, ಏಕನಿಷ್ಠೆ, ಶಿಸ್ತು, ಹೊಣೆಗಾರಿಕೆ ಎಲ್ಲರಿಗೂ ಮಾದರಿ ಎಂದು ಆಜಾದ್ ಹೇಳುತ್ತಿದ್ದುದುಂಟು. ವಿಶ್ವೇಶ್ವರ ವಯಸ್ಸಿನಲ್ಲಿ ಕಿರಿಯನಾದರೂ ಆಜಾದ್, ಭಗವತಿ ಚರಣರು ಅವನಿಗೆ ಅನೇಕ ಸಲ ಅನೇಕ ಮುಖ್ಯ ಕೆಲಸಗಳನ್ನು ಒಪ್ಪಿಸುತ್ತಿದ್ದರು. ಆದರೆ ಏಕೋ ಏನೋ ಅವನಿಗೆ ಸಂಸ್ಥೆ ಪಿಸ್ತೂಲನ್ನು ಕೊಟ್ಟಿರಲಿಲ್ಲ. ಆದ್ದರಿಂದ ವಿಶ್ವೇಶ್ವರ ಸದಾ ಕಾಲ ಹರಿತವಾದ ಚೂರಿಯನ್ನು ಇಟ್ಟುಕೊಂಡಿರುತ್ತಿದ್ದ.

ಅವನದು ಪಾದರಸದ ಚಟುವಟಿಕೆ. ಮರದಿಂದ ಮರಕ್ಕೆ ನೆಗೆಯುವುದರಲ್ಲಿ ಕೋತಿಗಳನ್ನು ಮೀರಿಸುವ ನೈಪುಣ್ಯ ಅವನದು. ಅವನ ಈ ಕಾರ್ಯಕ್ಷಮತೆ ನೋಡಿ ಭಗವತಿ ಚರಣ್ ‘ಹೀ ಈಸ್ ಎ ಬುಲೆಟ್’ ಎಂದು ಶ್ಲಾಘಿಸುತ್ತಿದ್ದ.

ಕೈಲಾಸಪತಿ ಅಪೂ›ವರ್ ಆದ ನಾಲ್ಕನೆಯ ದಿನ. ನವೆಂಬರ್ 4ರಂದು ಗುರುದಾಸಪುರದ ಬೀದಿಗಳಲ್ಲಿ ವಿಶ್ವೇಶ್ವರ ಟಹಲ್ ಸಿಂಗ್ ಎಂಬ ಇನ್ನೊಬ್ಬ ಕ್ರಾಂತಿಕಾರಿಯೊಂದಿಗೆ ನಡೆದು ಹೋಗುತ್ತಿದ್ದ. ಅವರಿಬ್ಬರನ್ನು ಗುರುತಿಸಿದ್ದ ಪೊಲೀಸರು ಸ್ವಲ್ಪ ಸಮಯದ ಮುಂಚಿನಿಂದಲೇ ಹಿಂಬಾಲಿಸಲಾರಂಭಿಸಿದ್ದರು. ಸೂಕ್ತ ಸಮಯ ಮತ್ತು ಸ್ಥಳಕ್ಕಾಗಿ ಕಾಯುತ್ತಿದ್ದ ಪೊಲೀಸರು ಒಂದೆಡೆ ಹಠಾತ್ತನೆ ಅವರನ್ನು ಮುತ್ತಿದರು. ಟಹಲ್ ಸಿಂಗ್ ಪಿಸ್ತೂಲಿನಿಂದ ಗುಂಡು ಹಾರಿಸಲು ಹೋದರೂ ಯಶಸ್ವಿಯಾಗಲಿಲ್ಲ. ಪೊಲೀಸರು ಹಿಡಿದುಬಿಟ್ಟರು.

ಇನ್ನೊಬ್ಬ ವೀರ ಅಭಿಮನ್ಯು: ವಿಶ್ವೇಶ್ವರ ಮಾತ್ರ ಹೆದರಿದಂತೆ ತೋರಿಸಿಕೊಳ್ಳದೆ ಸಮಾಧಾನಚಿತ್ತದಿಂದ ಸುತ್ತಲೂ ಅವಲೋಕಿಸಿದ. ತಪ್ಪಿಸಿಕೊಂಡು ಹೋಗಲು ದಾರಿ ಇದೆಯೇ ಎಂದು ನೋಡುತ್ತಿದ್ದ. ಅಷ್ಟರಲ್ಲಿ ಪೊಲೀಸರು ಅವನ ಸುತ್ತ ನೆರೆದರು.

ಕ್ಷಣಾರ್ಧದಲ್ಲಿ ಜೇಬಿನಿಂದ ಚೂರಿ ತೆಗೆದ ವಿಶ್ವೇಶ್ವರ ‘ದಾರಿ ಬಿಡಿ… ದಾರಿ ಬಿಡಿ’ ಎಂದು ಕೂಗುತ್ತ ತಪ್ಪಿಸಿಕೊಂಡು ಹೋಗಲು ಯತ್ನಿಸಿದ. ಕೈಯಲ್ಲಿ ಚೂರಿ ಹಿಡಿದು ಒಂದು ಕಡೆಯಿಂದ ಇನ್ನೊಂದು ಕಡೆಗೆ ನೆಗೆಯುತ್ತ ಹೆದರಿಸುತ್ತಿದ್ದ ಆ ಹುಡುಗನ ಚಲನವಲನಗಳು ಪೊಲೀಸರನ್ನು ಕಕ್ಕಾಬಿಕ್ಕಿ ಮಾಡಿದವು. ಚೂರಿಯನ್ನು ಹಿಡಿದ ಹದಿನಾರು ವರ್ಷಗಳ ವಿಶ್ವೇಶ್ವರ ಮಧ್ಯದಲ್ಲಿ. ಸುತ್ತಲೂ ನಾಲ್ಕೈದು ಮಂದಿ ಬಂದೂಕುಧಾರಿ ಪೊಲೀಸರು. ಆದರೆ ಅವನಲ್ಲಿದ್ದ ಕೆಚ್ಚು, ಪೌರುಷಗಳು ಪೊಲೀಸರಿಗೆ ಎಲ್ಲಿಂದ ಬರಬೇಕು?

ಪೊಲೀಸರು ಎಚ್ಚರಿಸಿದರು- ‘ಏಯ್ ಹುಡುಗ, ಚೂರಿಯನ್ನು ಪಕ್ಕಕ್ಕೆ ಎಸೆದು ಶರಣಾಗು. ಇಲ್ಲವಾದರೆ ನಿನ್ನ ಪ್ರಾಣಕ್ಕೇ ಅಪಾಯ’.

‘ಕ್ರಾಂತಿಕಾರಿ ಎಂದಿಗೂ ಶಸ್ತ್ರವನ್ನು ಎಸೆಯುವುದಿಲ್ಲ. ಪ್ರಾಣ ಅವನಿಗೆ ಹುಲ್ಲುಕಡ್ಡಿ ಸಮಾನ’ ವಿಶ್ವೇಶ್ವರನ ಬಾಯಿಂದ ಹೊರಹೊಮ್ಮಿದವು ವೀರಾವೇಶ ನುಡಿಗಳು. ಚಿರತೆಯಂತೆ ಹಾರಿದ ವಿಶ್ವೇಶ್ವರ ಸನಿಹದಲ್ಲಿದ್ದ ಪೊಲೀಸನ ಹೊಟ್ಟೆಗೆ ಚೂರಿಯಿಂದ ತಿವಿದ. ಆ ಪೊಲೀಸ್ ರಕ್ತ ಕಾರುತ್ತ ಪಕ್ಕಕ್ಕೆ ಸರಿದ. ತಪ್ಪಿಸಿಕೊಂಡು ಹೋಗಲು ಆ ದಿಕ್ಕಿನಲ್ಲಿ ನುಗ್ಗುತ್ತಿದ್ದಾಗಲೇ ಪೊಲೀಸನೊಬ್ಬನ ಬಂದೂಕಿನಿಂದ ಗುಂಡು ಹಾರಿ ವಿಶ್ವೇಶ್ವರನ ಹೊಟ್ಟೆಗೆ ಹೊಕ್ಕಿತು. ಹೊಟ್ಟೆಯಿಂದ ರಕ್ತ ಚಿಮ್ಮಿತು. ನೆಲಕ್ಕೆ ಬೀಳುತ್ತಿದ್ದಂತೆ ವಿಶ್ವೇಶ್ವರ ಘೊಷಿಸಿದ ‘ಭಾರತ್ ಮಾತಾ ಕೀ ಜೈ!’. ಆತ ನೆಲದಲ್ಲಿ ಬಿದ್ದು ವಿಲವಿಲ ಒದ್ದಾಡುತ್ತಿದ್ದರೂ ಘೊಷಣೆ ಹೊರಬರುತ್ತಲೇ ಇತ್ತು. ಜನರೂ ಪೊಲೀಸರೂ ನೋಡುತ್ತಿದ್ದಂತೆಯೇ ಅವನ ದೇಹದ ನರಳಾಟ, ಒದ್ದಾಟ ನಿಂತಿತು. ಪ್ರಾಣಪಕ್ಷಿ ಹಾರಿಹೋಯಿತು. ವಿಶ್ವೇಶ್ವರನ ಹೆಸರು ಯಾವ ಪುಸ್ತಕದಲ್ಲೂ ಕಾಣಸಿಗುವುದಿಲ್ಲ.

ಕೈಲಾಸಪತಿಯ ಸಡಿಲ ಚಾರಿತ್ರ್ಯದ ಕಾರಣ ಸಂಸ್ಥೆಗೆ ಬಲವಾದ ಪೆಟ್ಟು ಬಿದ್ದಿತ್ತು. ಅನೇಕ ನಿಷ್ಠಾವಂತ ಕ್ರಾಂತಿಕಾರಿಗಳು ಸಿಕ್ಕಿಬಿದ್ದಿ್ದ್ದರು ಅಥವಾ ಅಸುನೀಗಿದ್ದರು. ವಿಶ್ವೇಶ್ವರನ ಅನಂತರ ಬಲಿಯಾದವನು ಸಾಲಿಗ್ರಾಮ ಶುಕ್ಲಾ. ಅನೇಕ ದಿನಗಳ ಕಾಲ ಹದಿನಾರು ವರ್ಷದ ಕಿಶೋರ ವಿಶ್ವೇಶ್ವರನ ಮೂರ್ತಿ ಆಜಾದನ ಮನಸ್ಸಿನಿಂದ ಮಾಯವಾಗಲಿಲ್ಲ.

ಕೃಪೆ:ಡಾ||ಬಾಬು ಕೃಷ್ಣ ಮೂರ್ಉ.ಲೇಖಕರು ಹಿರಿಯ ಪತ್ರಕರ್ತರು.
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059