ದಿನಕ್ಕೊಂದು ಕಥೆ 946

*🌻ದಿನಕ್ಕೊಂದು ಕಥೆ🌻*

*ಮಾದರಿ ಅಧ್ಯಾಪಿಕೆ* ..💧
................................

ನಾಪಿ ಪೆರಡಾಲ✍
*****************

*ಆಕಸ್ಮಿಕವಾಗಿ* ಸುಶೀಲಾ ಟೀಚರನ್ನು ಒಂದು ಬಟ್ಟೆ ಅಂಗಡಿ ಯಲ್ಲಿ ಭೇಟಿಯಾದೆ. ಹಲವಾರು ವರುಷಗಳ ನಂತರದ ಭೇಟಿಯಾಗಿತ್ತು ಅದು. ಟೀಚರಿಗೆ ನನ್ನ ಪರಿಚಯ ಸಿಕ್ಕಲು ಸಾದ್ಯತೆ ಕಡಿಮೆಯಾಗಿತ್ತು. ಪ್ರಾಯ ಸಾಧಾರಣ 80, 82 ಆಗಿರಬಹುದು. ಸಣ್ಣದಾಗಿ ಬಾಗಿದ ಬೆನ್ನು... ತಲೆಗೂದಲು ಹಣ್ಣಾಗಿದ್ದರೂ ಕೂದಲಿನ ಉದ್ದ ಕಡಿಮೆಯಾಗಿರಲಿಲ್ಲ. ಕನ್ನಡಕ ಧರಿಸಿದ್ದರೂ ಮುಖದ ವರ್ಚಸ್ಸು  ಮಾಸಿರಲಿಲ್ಲ.

ಟೀಚರ್ ಕಾಣದಂತೆ ತಪ್ಪಿಸಿ ಕೊಂಡು ಹೋಗಬೇಕೆಂದುಕೊಂಡಿದ್ದೆ . ಟೀಚರ್ ಎಲ್ಲಿಯಾದರೂ ಆ ಹಳೆಯ ವಾಚು ಕಳ್ಳತನದ ಬಗ್ಗೆ ನೆನಪಿಸಿಕೊಂಡರೆ..... ಛೇ!!
ನಾಚಿಕೆಯ ವಿಷಯ. ನನ್ನ ಜೊತೆಗೆ ಹೆಂಡತಿಯೂ ಇದ್ದಾಳೆ. ಅವಳೆಲ್ಲಿಯಾದರೂ ನನ್ನ ಪೂರ್ವ ಚರಿತ್ರೆ ತಿಳಿದರೆ....

ಟೀಚರನ್ನು ಕಾಣದಂತೆ ತಪ್ಪಿಸಿಕೊಳ್ಳುವುದೇ ಬುದ್ಧಿ.

ಆದರೂ, ಸುಶೀಲಾ ಟೀಚರ್ ( ಚಿಟ್ಟೆ) ಅಂದು ಆ ವಿಷಯ ವನ್ನು ಆ ರೀತಿಯಲ್ಲಿ ಮುಗಿಸಿದರಿಂದಲ್ಲವೆ ನಾನು ದೊಡ್ಡ ಅವಮಾನದಿಂದ ಪಾರಾದದ್ದು....

ಇಲ್ಲದಿದ್ದರೆ ....

ನೆನಪಿಸಿಕೊಳ್ಳಲೇ ಸಾದ್ಯವಿಲ್ಲ.
ಗೋಪಾಲ ( ಕನ್ನಡಿ)ಮಾಶ್ ಸತ್ಯನಾರಾಯಣ ( ಗಡಿಬಿಡಿ)ಮಾಶ್ ,  ಸವಿತಾ(ಈಚ) ಟೀಚರ್ , ಇವರ್ಯಾರಾದರು ಆಗಿದ್ದರೆ ನಾನು ಅಂದೇ ಆತ್ಮಹತ್ಯೆ ಮಾಡಬೇಕಾಗಿ ಬರುತ್ತಿತ್ತು.

ಸುಶೀಲಾ ಟೀಚರನ್ನು ಕಡೆಗಣಿಸಿ ಮುಂದೆ ಹೋಗಲು ಮನಸ್ಸಾಕ್ಷಿ ಒಪ್ಪಲಿಲ್ಲ. ಎಲ್ಲಿಯಾದರೂ ಟೀಚರ್ ಆ ವಿಷಯವನ್ನು ನೆನಪಿಸಿದರೂ ಅದು ಹಳೆಯ ಘಟನೆಯಲ್ವಾ ಎಂದು ನಕ್ಕು ಸುಮ್ಮನಾಗಿಸಬಹುದಲ್ಲಾ..

ಅವರಿಗೆ 80,82 ರ ಪ್ರಾಯದವರಿಗಿರುವ ನೆನಪಿನ ಶಕ್ತಿ ಮಾತ್ರವೇ ಕಾಣಬಹುದು. ಇನ್ನು ಎಲ್ಲಾದರೂ ಕಾಣಲು ಸಿಗದಿದ್ದರೆ...? ನಾನು ಕೂಡ ಒಬ್ಬ ಅಧ್ಯಾಪಕನಲ್ವೇ ?, ಅದು ಕೂಡ ರಾಷ್ಟ್ರಪತಿಯಿಂದ ಉತ್ತಮ ಅಧ್ಯಾಪಕನಿಗಿರುವ ಪ್ರಶಸ್ತಿ ಪಡೆದ ಅಧ್ಯಾಪಕ!

ಇದ್ದ ಧೈರ್ಯವನ್ನೆಲ್ಲ  ಒಗ್ಗೂಡಿಸಿ ಕೊಂಡು ಟೀಚರ ಬಳಿಗೆ ನಡೆದೆ.

ನಮಸ್ತೆ ಟೀಚಾ.....

ನಮಸ್ತೆ

ನನ್ನ ಗುರುತು ಸಿಕ್ಕಿತೇ...

ಒಮ್ಮೆ  ನನ್ನನ್ನೇ ಎವೆಯಿಕ್ಕದೆ ನೋಡಿ

ಇಲ್ಲ. ನಾನು ಕಲಿಸಿದ್ದೇನೆಯೇ.?

ಹೌದು, ಟೀಚರ್ 10ನೇ ತರಗತಿಯಲ್ಲಿ ನನ್ನ ಕ್ಲಾಸ್ ಟೀಚರ್ ಆಗಿದ್ದೀರಿ, ಲೆಕ್ಕ ಕೂಡಾ ಕಲಿಸಿದ್ದೀರಿ.

ನೆನಪಾಗುತಿಲ್ಲ. ಏನು ಹೆಸರು?

ಮನೋಜ್. ಮನೋಜ್ ಕುಮಾರ್.

ಓಹ್... ಏನು ಕೆಲಸ

ನಾನು ಅಧ್ಯಾಪಕ.

ಒಳ್ಳೆದು. ಯಾಕೆ ಈ ಕೆಲಸವನ್ನೇ ಆಯ್ಕೆ ಮಾಡಿದ್ದು?

ಟೀಚರ್ ನಂತೆಯೇ ಆಗಬೇಕೆಂಬ ಆಸೆ.

ಟೀಚರ್ ನಕ್ಕು

ಅದೇನು ನಂಗೆ ಅಷ್ಟೊಂದು ವಿಶೇಷತೆ.?

ಟೀಚರ್, ಒಮ್ಮೆ ತರಗತಿಯಲ್ಲಿ ಒಬ್ಬ ಉದಯ ಶಂಕರ್ ಎಂಬವನ ವಾಚು ಕಳ್ಳತನವಾದ ಘಟನೆ ನಿಮಗೆ ನೆನಪಿದೆಯೇ?

ಒಂದು ನಿಮಿಷ ಆಲೋಚಿಸಿದ ಟೀಚರ್....

ಹಾಮ್... ಸ್ವಲ್ಪಮಟ್ಟಿಗೆ ನೆನಪಿದೆ. ಅದೂ... ಕುಂಬಳೆ ಶಾಲೆಯ ಟೀಚರ ಮಗನಲ್ವಾ?

ಹಾಮ್... ಹೌದು ಟೀಚರ್...

ಉದಯಶಂಕರ್ ನ ತಂದೆ ದುಬಾಯಿಯಿಂದ ತಂದು ಕೊಟ್ಟ ವಾಚು ಅವನು ಮೊದಲ ಬಾರಿಗೆ ಶಾಲೆಗೆ, ಕಟ್ಟಿಕೊಂಡು ಬಂದಿದ್ದ. ಅವನನ್ನು ಕಂಡಾಗ ಎಲ್ಲಾರಿಗೂ ಅಸೂಯೆ ಯಾಗಿತ್ತು. ಮಧ್ಯಾಹ್ನದ ಊಟದ ಸಮಯದಲ್ಲಿ ಅವನು ಕೈ ತೊಳೆಯಲು ಹೊರಗೆ ಹೋಗುವಾಗ ವಾಚನ್ನು ಬಿಚ್ಚಿ ಅವನ ಒಂದು ಸ್ಟೀಲ್ ಪೆಟ್ಟಿಗೆಯಲ್ಲಿ ಇಡುವುದು ನನ್ನ ಕಣ್ಣಿಗೆ ಬಿತ್ತು. ತರಗತಿಯಲ್ಲಿ ಅವನಿಗೆ ಮಾತ್ರವೇ ಅಂತಹ ಪೆಟ್ಟಿಗೆ ಇದ್ದಿದ್ದು.

ಉಳಿದವರೆಲ್ಲ ಊಟ ಮಾಡುವ ಗಡಿಬಿಡಿಯಲ್ಲಿದ್ದರು.
ನನ್ನ ತಂದೆ ಇಂತಹ ವಾಚನ್ನು ಈ ಜನ್ಮದಲ್ಲಿ ನಂಗೆ ತೆಗೆದು ಕೊಡಲು ಸಾಧ್ಯವಿಲ್ಲ. ಇಷ್ಟೊಂದು ಹಣ ತಂದೆಗೆ ಒಂದು ವರ್ಷ ಕೂಲಿ ಕೆಲಸ ಮಾಡಿದರೂ ಸಿಕ್ಕಲು ಹೋಗುವುದಿಲ್ಲ.

ಎಲ್ಲಾ ನಿಮಿಷಗಳೊಳಗೆ ನಡೆದಿತ್ತು. ವಾಚು ನನ್ನ ಕೈಗೆ.!

ಒಳ ಉಡುಪಿನೊಳಗೆ ಅಡಗಿಸಿಟ್ಟೆ. ಹೃದಯ ಬಡಿತವು ತಾಳ ತಪ್ಪಿತ್ತು. ಮೈ ಎಲ್ಲಾ ಬೆವರಿ ಒದ್ದೆಯಾಗಿತ್ತು. ಬೇಡವಾಗಿತ್ತು. ಈ ಟೆನ್ಷನ್ ಮರಣ ತನಕ ಕಾಣಬಹುದೇ...?
ಹಾಗೆಲ್ಲ ಆಲೋಚಿಸಿದರೆ ನಮ್ಮ ಆಸೆಗಳು ನೆರವೇರಬೇಡವೇ...?

ಉದಯಶಂಕರ್ ಬಂದವನೆ ಮೊದಲು ತನ್ನ ಪೆಟ್ಟಿಗೆ ಯನ್ನು ತೆರೆದು ನೋಡಿದ. ವಾಚಿಲ್ಲ!

ಅವನ ಕಣ್ಣು ಒದ್ದೆಯಾಯಿತು. ಮಾತನಾಡದೆ ಹಾಗೆಯೇ ಕುಳಿತ.. !

ಪಾಪ.

ಪರವಾಗಿಲ್ಲ. ಅವನ ತಂದೆ ಈಗಲೂ ದುಬಾಯಿಯಲ್ಲೇ ಅಲ್ಲವೇ.. ಅಮ್ಮ ಟೀಚರ್! ಮುಂದಿನ ಬಾರಿ ಬರುವಾಗ ಹೊಸತೊಂದು ತರಬಹುದು.

ನನ್ನ ತಂದೆಗೆ ಕೂಲಿ ಕೆಲಸ. ತಾಯಿ ವಕೀಲರ ಮನೆಯ ಕೆಲಸದಾಳು. ಶಾಲೆಯ ಫೀಸ್ ಕೊಡುವುದೇ ಕೊನೇಯ ದಿನಗಳಲ್ಲಿ.. ಅಥವಾ ಮುಂದಿನ ತಿಂಗಳು.!

ಮಧ್ಯಾಹ್ನ ಸುಶೀಲಾ ಟೀಚರ್ ಹಾಜರಿ ತೆಗೆಯಲು ಬಂದಾಗ ಉದಯಶಂಕರ್ ಅಳುತ್ತಾ ವಿಷಯ ತಿಳಿಸಿದ.

ಟೀಚರ್ ಕೋಪಗೊಳ್ಳಲಿಲ್ಲ. ಬೊಬ್ಬೆ ಹಾಕಲಿಲ್ಲ. ಅವನ ಕೈ ಹಿಡಿದು ಸಮಾಧಾನ ಮಾಡಿದರು.

ಎದ್ದು ನಿಂತು ಎಲ್ಲಾರೆಡೆಗೊಮ್ಮೆ ನೋಡಿ ಹೇಳಿದರು

ಮಕ್ಕಳೇ.... ಇವನ ವಾಚನ್ನು ಯಾರೋ ತೆಗೆದಿದ್ದಾರೆ. ಅದು ಯಾರೇ ಆದರು ಅದನ್ನು ಅವನಿಗೆ ಮರಳಿಸಬೇಕು. ಇಂತಹ ಸ್ವಭಾವ ಒಳ್ಳೆಯದಲ್ಲ.

ತರಗತಿಯಲ್ಲಿ ಮೌನ ಆವರಿಸಿತು.

ಮಧ್ಯಾಹ್ನ ನಂತರ ದ ಮೊದಲ ಪೀರಿಯಡ್. ಟೀಚರ್ ಮಾತು ಕೇಳಿ ವಾಚು ಮರಳಿಸಬೇಕೆಂದು ತೋರುತಿತ್ತು. ಆದರೆ ಹೇಗೆ...? ಎಲ್ಲಾರು ನನ್ನನ್ನು ಜೀವನ ಪೂರ್ತಿ ವಾಚು ಕಳ್ಳನೆಂದು ಕರೆಯುವುದಿಲ್ಲವೇ...?

ಟೀಚರ್ ಎಲ್ಲರಲ್ಲೂ ಎದ್ದು ನಿಂತುಕೊಳ್ಳಲು ಆಜ್ಞಾಪಿಸಿದರು.
ಎಲ್ಲರಿಗೂ ಕಣ್ಣು ಮುಚ್ಚಿ ನಿಲ್ಲಲು ಹೇಳಿದರು. ಯಾರು ಕೂಡ ಅರ್ಧದಲ್ಲಿ ಕಣ್ಣು ತೆರೆದು ನೋಡಬಾರದು ಎಂದು ಎಚ್ಚರಿಸಿದರು.

ಆ ವಾಚು ತೆಗೆದವರು ಅದನ್ನು ಅಂಗಿಯ ಜೇಬ್ ನಲ್ಲಿ ಇಡಬೇಕು. ನಾನು ಒಬ್ಬೊಬ್ಬರಾಗಿ ಜೇಬು ಪರಿಶೋಧಿಸಿಕೊಂಡು‌ ಬರುತ್ತೇನೆ. ಯಾರ ಜೇಬಿನಿಂದ ಅದು ಸಿಕ್ಕಿದ್ದೆಂದು ಯಾರಿಗೂ ಗೊತ್ತಾಗದು, ಅಂತೆಯೇ ನಾನು ಅದನ್ನು ಯಾರಲ್ಲೂ ಹೇಳುವುದೂ ಇಲ್ಲ.

ಹಾವ್....

ಹೃದಯದ ಭಾರ ಕಡಿಮೆಯಾದಂತ ಅನುಭವ!
ಬಿಕ್ಕಿ ಅಳಬೇಕೆಂದು ತೋರಿತು. ಟೀಚರ ಕಾಲು ಹಿಡಿದು ಕ್ಷಮಾಪಣೆ ಕೇಳಬೇಕೆಂದು ಮನಸ್ಸು ಎಚ್ಚರಿಸುತ್ತಿತ್ತು. ಏನೇ ಆದರೂ ಉದಯಶಂಕರ್ ಗೆ ಗೊತ್ತಾಗ ಬಾರದು.!

ಎಲ್ಲಾ ಟೀಚರ್ ಹೇಳಿದ ಹಾಗೆಯೆ ನಡೆಯಿತು.
ಎಲ್ಲಾರು ಕಣ್ಣು ಮುಚ್ಚಿದ್ದಾರೆ ಎಂಬುದನ್ನು ನಾನು ಅರ್ಧ ಕಣ್ಣು ತೆರೆದು ನೋಡಿ ಖಾತರಿ ಪಡಿಸಿಕೊಂಡೆ. ಪಕ್ಕನೆ ವಾಚು ತೆಗೆದು ಜೇಬಿಗಿಳಿಸಿದೆ.

ಟೀಚರ್ ನನ್ನ ಜೇಬಿಗೆ ಕೈ ಹಾಕುವಾಗ ತಲೆ ತಿರುಗಿದಂತಾಯಿತು. ಡೆಸ್ಕಿನಲ್ಲಿ ಬಿಗಿಯಾಗಿ ಹಿಡಿದು ಕೊಂಡ ಕಾರಣ ಕೆಳಗೆ ಬೀಳಲಿಲ್ಲ. ಗೊತ್ತಾದದ್ದು ಟೀಚರಿಗೆ ಮಾತ್ರ ಅಲ್ವೇ... ಅಷ್ಟೇ. ಸಮಾಧಾನ ತಂದುಕೊಂಡೆ. 100 ಗ್ರಾಮ್ ತೂಕದ ವಾಚು ಪಾಕೆಟ್ ನಿಂದ ಹೋದಾಗ 100 ಕಿಲೊ ಭಾರ ಕಡಿಮೆಯಾದಂತ ಅನುಭವ!
ಇನ್ನು ನನ್ನ ಜೀವನದಲ್ಲಿ ಒಮ್ಮೆಯೂ ಇಂತಹ ಕೆಲಸಕ್ಕೆ ಇಳಿಯಲಾರೆ. ಸುಶೀಲಾ ಟೀಚರ ಮೇಲಾಣೆ ಸತ್ಯ.!!

ಎಲ್ಲರಲ್ಲಿಯೂ ಕಣ್ನು ಮುಚ್ಚಿಯೇ ನಿಲ್ಲಲು ಟೀಚರ್ ಆಗಾಗ ಸೂಚಿಸುತ್ತಿದ್ದರು. ನನ್ನ ನಂತರವೂ ಹನ್ನೊಂದು ಮಕ್ಕಳಿದ್ದರು. ವಾಚು ನನ್ನ ಜೇಬಿನಿಂದ ಸಿಕ್ಕಿದಾಗ ಟೀಚರ್ ಕಣ್ಣು ತೆರೆಯಲು ಹೇಳಿದರೆ ಮುಗೀಯಿತು..
ಎಲ್ಲರಿಗೂ ಗೊತ್ತಾಗಬಹುದು....

ಭಾಗ್ಯ!

ಟೀಚರ್ ಕೊನೆಯ ವಿದ್ಯಾರ್ಥಿಯ ಜೇಬು ಪರಿಶೀಲಿಸಿದ ನಂತರವೇ ತಿರುಗಿ ಬಂದದ್ದು.

ವಾಚು ಸಿಕ್ಕಿದ ಸಂತೋಷ ವಾರ್ತೆ ಟೀಚರ್ ಹೇಳಿದರು. ಎಲ್ಲರಿಗೂ ಕಣ್ಣು ತೆರೆಯಲು ಹೇಳಿದರು. ಅವರೇ ಆ ವಾಚನ್ನು ಉದಯಶಂಕರ್ ನ ಕೈಗೆ ಕಟ್ಟಿದರು.

ಜತೆಗೆ ಎಲ್ಲರಿಗಾಗಿ ಒಂದು ಉಪದೇಶವೂ... ಮತ್ತೊಬ್ಬರನ್ನು ದಾರಿ ತಪ್ಪಿಸುವಂತ ಯಾವುದೇ ವಸ್ತು ಶಾಲೆಗೆ ತರಬಾರದು.‌ !

ಮರುದಿನ ಉದಯಶಂಕರ್ ನ ಕೈಯಲ್ಲಿ ಆ ವಾಚು ಇರಲಿಲ್ಲ.... ಜತೆಗೆ ಅವನಲ್ಲಿ ಮಾತ್ರವಿದ್ದ ಆ ಸ್ಟೀಲ್ ಪೆಟ್ಟಿಗೆಯೂ..!!

ಅದರ ನಂತರ ಸುಶೀಲಾ ಟೀಚರನ್ನು ಕಾಣುವಾಗ ಏನೋ ಒಂತರ ಆಗುತಿತ್ತು.

ಇಂದು ಕೂಡ. ಈಗಲೂ ಈ ಬಟ್ಟೆಯ ಅಂಗಡಿಯಲ್ಲಿ ಅವರ ಮುಂದೆ ನಿಲ್ಲುವಾಗಲೂ ಅದೇ ಇರಿಸುಮುರಿಸು. ಆದುದರಿಂದಲೇ ಮೊದಲು ಅವರ ಮುಂದೆ ಹೋಗಲು ಹಿಂಜರಿದದ್ದು.

ಟೀಚರ ನೆನಪಿನ ಶಕ್ತಿಯನ್ನು ಇನ್ನೊಮ್ಮೆ ಪರೀಕ್ಷಿಸಿ ನೋಡಬೇಕೆಂದೆನಿಸಿತು.

ಟೀಚರೆ, ಅವತ್ತು ವಾಚು ಕದ್ದ ವಿದ್ಯಾರ್ಥಿಯನ್ನು ನೆನಪಿದೆಯೇ?

ಅದೇಗೆ ನಾನು ನೆನಪಿಸಿಕೊಳ್ಳೋದು.....
ಪಾಕೆಟ್‌ ಪರಿಶೀಲಿಸುವ ಸಮಯದಲ್ಲಿ ನಾನು ಕೂಡ ಕಣ್ಣು ಮುಚ್ಚಿದ್ದೆ!!

ನಾನು ನಿಂತ ಭೂಮಿಯೇ ಕುಸಿದಂತೆ ಭಾಸವಾಯಿತು. ಇಹ ಪ್ರಜ್ಞೆ ತಪ್ಪಿದವನಂತೆ ಟೀಚರನ್ನು ಬಿಗಿಯಾಗಿ ಅಪ್ಪಿಕೊಂಡೆ.

ಕಣ್ಣೀರು ಎಷ್ಟು ನಿಯಂತ್ರಿಸಿದರೂ ಕಣ್ಣಿನಿಂದ ಹೊರ ಜಾರುತಿತ್ತು.

ಹೀಗೆಯೂ ಕೆಲವರು!

ದೇವರೇ ಕಣ್ಣ ಮುಂದೆ ಬಂದು ನಿಂತಂತ ಅನುಭೂತಿ!!

ಟೀಚರೇ... ಒಂದು ದೊಡ್ಡ ತಪ್ಪು ಮಾಡಿದರೂ ತಪ್ಪು ಮಾಡಿದವನ ಘನತೆಗೆ ಒಂದಿಷ್ಟು ಕಳಂಕ ಬಾರದಂತೆ ಪ್ರಶ್ನೆ ಯನ್ನು ಪರಿಹರಿಸಿಕೊಟ್ಟಿರಲ್ಲ? ಅಷ್ಟೇ ಅಲ್ಲ ಉದಯಶಂಕರನಿಗೂ ಒಂದು ಒಳ್ಳೆಯ ಪಾಠವನ್ನು ನೀಡಿದಿರಿ.
ಅಂದಿನಿಂದ ವಾಚು ಮಾತ್ರವಲ್ಲ ಪೆಟ್ಟಿಗೆಯನ್ನು ಕೂಡ ಭಹಿಸ್ಕರಿಸಿದನಲ್ಲ.?

ಟೀಚರೇ , ನೀವೇ ನನ್ನ ಜೀವನದ ಮಾದರಿ ವ್ಯಕ್ತಿ!

ಇಂದಿನಿಂದ ಅದು ದುಪ್ಪಟ್ಟು ಆಯಿತು.. ನೀವೇ ಉತ್ತಮ... ಅತ್ಯುತ್ತಮ...  ಮಾದರಿ ವ್ಯಕ್ತಿ....

ಕಾಲು ಮುಟ್ಟಿ ನಮಸ್ಕರಿಸಿದಾಗ ತಲೆಗೆ ಕೈ ಇಟ್ಟು ಅನುಗ್ರಹಿಸಿದರು.

ಹೋಗುವ ಸಮಯದಲ್ಲಿ ಟೀಚರಲ್ಲಿ ಹೇಳಬೇಕೆನಿಸಿತು.. ಆ ವಾಚು ಕಳ್ಳ ನಾನೇ ಟೀಚರ್  ಎಂದು. ಆದರೆ ಹೇಳಲಿಲ್ಲ. ಟೀಚರ ಮನಸ್ಸಿಗೆ ನೋವಾದರೆ...?
ಇಲ್ಲ !

ನನ್ನಿಂದಾಗಿ ಅವರಿಗೆ ನೋವಾಗಬಾರದು!

ಇಂದು ವಿದ್ಯಾಭ್ಯಾಸವೂ, ಸೌಕರ್ಯಗಳೂ, ಅವಕಾಶಗಳೂ, ಉಪದೇಶಗಳೂ, ಉಪದೇಶಿಗಳು ಅಗತ್ಯಕ್ಕಿಂತಲೂ ಹೆಚ್ಚು ಇರುವ ಈ ಲೋಕದಲ್ಲಿ ಸುಶೀಲಾ ಟೀಚರ್ ನಂತಹ ಮಾದರಿ ವ್ಯಕ್ತಿಗಳು ಸಿಗುವುದು ವಿರಳ.

ಶಿಕ್ಷೆಯು ಒಂದು ಅಪರಾಧಕ್ಕೆ ಶಾಶ್ವತ ಪರಿಹಾರವಲ್ಲ. ಹಾಗೆ ಆಗಿರುತ್ತಿದ್ದರೆ ಲೋಕ ಎಂದೋ ಬದಲಾಗುತ್ತಿತ್ತು.!

ಬಾಯಲ್ಲಿ ಹೇಳುವ ಉಪದೇಶಗಳು ಕಿವಿಗೆ ಅಪ್ಪಳಿಸಿ ಹೊರಗೆ ಹೋಗುವುದಷ್ಟೆ ನಾವು ಕಾಣುತ್ತಿರುವುದು. ಅದು ಹೃದಯದೊಳಗೆ ಅಚ್ಚಳಿಯದೆ ಉಳಿಯುವುದಿಲ್ಲ..!

ಆದರೇ ಸುಶೀಲಾ ಟೀಚರ್....?
ಈ ಒಂದು ಘಟನೆಯ ಮೂಲಕ ಒಂದು ತಲೆಮಾರನ್ನು  ಸನ್ಮಾರ್ಗದಲ್ಲಿ ನಡೆಸಿದವರು. ಅದ್ಭುತ ಮಾದರಿ ವ್ಯಕ್ತಿ!!

ನಮಗೂ ಒಮ್ಮೆ ಪ್ರಯತ್ನಿಸಿದರೆ ಹೇಗೆ.....?
😌😌😌🙏🏻😌😌😌
▪▪▪▪▪▪▪
(ಕೃಪೆ....  ಮಲಯಾಳದಿಂದ)▪
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059