ದಿನಕ್ಕೊಂದು ಕಥೆ 953

ದಿನಕ್ಕೊಂದು ಕಥೆ.
‘ಚಪ್ಪಲಿ ಹಾಕಿ ಭಾರತದ ನೆಲ ಮೆಟ್ಟಲ್ಲ’ ಎಂದು ಬಂದ ಇಸ್ರೇಲಿ ಪ್ರಜೆಗೆ ‘ಏಂಜಲ್’ ಆದ ಬೆಂಗ್ಳೂರು ಕಾಪ್ ಅಹ್ಮದ್.

ಬೆಂಗಳೂರು: ತನ್ನಿಚ್ಛೆಗೆ ತಕ್ಕಂತೆ ಬೆಳೆದ ಗಡ್ಡ, ಮೀಸೆ, ದಟ್ಟ ತಲೆಯ ಕೂದಲು, ಕೈ ಕಾಲುಗಳಲ್ಲಿ ಚಿತ್ರ ವಿಚಿತ್ರ ದಾರಗಳು, ಕೇವಲ ಬರ್ಮುಡಾ ಚಡ್ಡಿ ಹಾಕಿ ಮೇಲೆ ಯಾವ ಶರ್ಟನ್ನೂ ಹಾಕದೆ ಬರಿ ಮೈಯಲ್ಲಿ, ಬರಿಗಾಲಲ್ಲಿ ಚಿಂತಾಕ್ರಾಂತನಾಗಿ ಒಂದೆರಡು ಬ್ಯಾಗ್​ಗಳು ಹಾಗೂ ಆಫ್ರಿಕಾ ದೇಶದ ವಾದ್ಯ ಜಂಬೆಯನ್ನು ತನ್ನ ಪಕ್ಕದಲ್ಲಿಟ್ಟುಕೊಂಡು, ತಿಳಿಯದ ಭಾಷೆಯಲ್ಲಿ ವಟಗುಡುತ್ತ, ಸುಮಾರು 25 ವಯಸ್ಸಿನ ಯುವಕ ನಿಮ್ಮ ಮುಂದೆ ಬಂದು ಕುಳಿತರೆ ನೀವೇನು ಮಾಡುತ್ತೀರಿ? ಒಂದೋ ಅರೆ ಹುಚ್ಚ ಎಂದುಕೊಂಡು ಉದಾಸೀನ ಮಾಡ್ತೀರಿ.. ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಿ ಸುಮ್ಮನಾಗ್ತೀರಿ. ಆದ್ರೆ, ಅದೇ ಪೊಲೀಸ್​ ಸ್ಟೇಷನ್​ಗೆ ಇಂಥ ವ್ಯಕ್ತಿ ಬಂದರೆ..? ಹೌದು. ಇಂಥ ಸನ್ನಿವೇಶವೊಂದು ನಗರದ ಕಬ್ಬನ್ ಪಾರ್ಕ್​ ಪೊಲೀಸರಿಗೆ ಎದುರಾಗಿತ್ತು. ಆದ್ರೆ, ಆ ವ್ಯಕ್ತಿ ಬಗ್ಗೆ ಉದಾಸೀನ ಮಾಡದೇ ಇಲ್ಲಿನ ಸಿಬ್ಬಂದಿ ಸ್ಪಂದಿಸಿದ ರೀತಿಗೆ ಇಡೀ ಇಸ್ರೇಲ್​ ಭೇಷ್ ಅಂತಿದ್ದರೆ, ಭಾರತದ ಗರಿಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಮೆರೆಯಲು ಕಾರಣವಾಗಿದೆ.

ಅಷ್ಟಕ್ಕೂ ಆಗಿದ್ದು ಏನಂದ್ರೆ, ಕಳೆದ ನವೆಂಬರ್​ 24ರ ಭಾನುವಾರ ಭಾರತದ ಬಗ್ಗೆ ಅತೀವ ಅಭಿಮಾನ ಹೊಂದಿರೋ ‘ಯೀಡೋ’ ಅನ್ನೋ ಹೆಸರಿನ ಇಸ್ರೇಲ್​ ದೇಶದ ಪ್ರಗತಿ ಪರ ರೈತ ಬೆಂಗಳೂರಿಗೆ ಬಂದಿದ್ದರು. ನಮ್ಮ ದೇಶದ ಹಲವಾರು ಪ್ರವಾಸಿಧಾಮಗಳು, ಸಣ್ಣಪುಟ್ಟ ಹಳ್ಳಿಗಳು, ಪಟ್ಟಣಗಳು ಹೀಗೆ ಉದ್ದಗಲಕ್ಕೂ ಪಾದರಕ್ಷೆ ಧರಿಸದೇ ಸಂಚರಿಸುತ್ತಾ ನಮ್ಮ ದೇಶದ ಗುಣವನ್ನು ಕಣ್ತುಂಬಿಕೊಂಡಿದ್ದ ಯೀಡೋಗೆ, ಬೆಂಗಳೂರು ನೋಡೋ ಆಸೆಯಾಗಿತ್ತು. ಹೀಗಾಗಿ, ಇಲ್ಲಿಗೆ ಬಂದ ಅವರು, ಕಬ್ಬನ್ ಪಾರ್ಕ್ ನೋಡಲು ತೆರಳಿದ್ದರು. ಈ ವೇಳೆ ಕಬ್ಬನ್​ ಪಾರ್ಕ್​ನಲ್ಲಿ ನಿದ್ದೆಗೆ ಜಾರಿದ್ದ ಅವರಿಗೆ ಎದ್ದಾಗ ಆಘಾತ ಕಾದಿತ್ತು. ಏಕೆಂದರೆ ಸುಮಾರು 20 ಸಾವಿರ ರೂಪಾಯಿ ಹಣ, ಐಫೋನ್-XS Max, ಶ್ರೀಲಂಕಾ ಏರ್​ ಇ- ಟಿಕೆಟ್, ಬಟ್ಟೆಗಳಿದ್ದ ಬ್ಯಾಗ್ ಕಳ್ಳತನವಾಗಿತ್ತು. ಆದ್ರೆ ಅದೃಷ್ಟವಶಾತ್ ಬರ್ಮುಡಾ​ ಜೇಬಿನಲ್ಲಿದ್ದ ಪಾಸ್​ಪೋರ್ಟ್​​ ಸೇಫ್ ಆಗಿತ್ತು. ತಕ್ಕಮಟ್ಟಿಗೆ ಸ್ಥಿತಿವಂತನಾಗಿಯೇ ಇದ್ದ ಇಸ್ರೇಲ್​ನ ಈ ಅನ್ನದಾತನಿಗೆ ಅಂದು ತುತ್ತು ಅನ್ನಕ್ಕೂ ಪರದಾಡುವಂಥ ಸ್ಥಿತಿ ಬಂದೊದಗಿತ್ತು. ಅಂಥಾ ಹಸಿದ ಹೊಟ್ಟೆಯಲ್ಲೇ ಕಬ್ಬನ್ ಪಾರ್ಕ್ ಪೊಲೀಸ್​ ಸ್ಟೇಷನ್​ಗೆ ಬಂದಿದ್ದ ‘ಯೀಡೋ’ ಸಪ್ಪೆ ಮೋರೆ ಹಾಕಿಕೊಂಡು ಕುಳಿತಿದ್ದರು.

ಬ್ಯಾಗ್​ ಕಳೆದುಕೊಂಡು ಕಬ್ಬನ್ ಪಾರ್ಕ್ ಪೊಲೀಸ್​ ಸ್ಟೇಷನ್​ಗೆ ಬಂದ ಯೀಡೋ (Ido Keidar) ತನ್ನ ವಸ್ತುಗಳು ಕಳ್ಳತನವಾಗಿದ್ದರ ಬಗ್ಗೆ ದೂರು ನೀಡಿದ್ದರು. ಆದ್ರೆ, ಉದ್ವೇಗದಲ್ಲಿ ಮತ್ತು ಇಸ್ರೇಲಿ ಭಾಷೆಯ ಆ್ಯಕ್ಸೆಂಟ್​ನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಅವರು ನೀಡುತ್ತಿದ್ದ ವಿವರಗಳು ಹೆಲ್ಪ್​ ಡೆಸ್ಕ್​ನಲ್ಲಿದ್ದ ಸಿಬ್ಬಂದಿಗೆ ಅಷ್ಟಾಗಿ ಅರ್ಥವಾಗುತ್ತಿರಲಿಲ್ಲ್ಲ.

ಆಗ ಅಲ್ಲಿಗ ಬಂದಿದ್ದೇ ಹೆಡ್​ ಕಾನ್​​​ಸ್ಟೇಬಲ್ ಅತೀಕ್ ಅಹ್ಮದ್.. ಇವರು ಬರ್ತಿದ್ದಂತೆ ಇವನ ಐಫೋನ್ ಹಾಗೂ ಏರ್ ಟಿಕೆಟ್ಸ್ ಇರುವ ಬ್ಯಾಗನ್ನು ಯಾರೋ ಕದ್ದಿದ್ದಾರಂತೆ, ಸ್ವಲ್ಪ ಅದೇನಂತ ವಿಚಾರಿಸು ಅಂತಾ ಸಹೋದ್ಯೋಗಿಗಳು ತಿಳಿಸಿದ್ದರು. ಆಗ ಅತೀಕ್ ಯೀಡೋ ಜೊತೆ ಮಾತನಾಡಲು ಆರಂಭಿಸುತ್ತಾರೆ. ಮಾತುಗಳು ಆರಂಭವಾಗುತ್ತಿದ್ದಂತೆ ಅತೀಕ್ ಹೇಳುವಂತೆ ಅವರಿಬ್ಬರ ನಡುವೆ ಒಂದು ರೀತಿಯ ಬಾಂಧವ್ಯ ಬೆಳೆಯುತ್ತದೆ. ಹಣಕ್ಕಿಂತ ಭಾರತದಲ್ಲಿ ತಾನು ಕಂಡ, ಅನುಭವಿಸಿದ ಕ್ಷಣಗಳನ್ನು ಸೆರೆಹಿಡಿದಿದ್ದ ಮೊಬೈಲ್ ಕಳೆದುಕೊಂಡ ನೋವೇ ಆತನ ಮಾತುಗಳಲ್ಲಿ ಹೆಚ್ಚಾಗಿ ಇರೋದನ್ನು ಅತೀಕ್ ಗಮನಿಸುತ್ತಾರೆ. ನಂತರದಲ್ಲಿ ಯೀಡೋಗೆ ಎರಡು ಬರ್ಗರ್ ತಂದು ಕೊಡ್ತಾರೆ. ಬರ್ಗರ್ ತಿಂದ ಯೀಡೋ ಧನ್ಯವಾದ ತಿಳಿಸುತ್ತಾರೆ. ಜೊತೆಗೆ ಅತೀಕ್ ಅವರ ಮೊಬೈಲ್ ಪಡೆದು ತನ್ನ ತಾಯಿ ಮತ್ತು ಗರ್ಲ್​ಫ್ರೆಂಡ್​​ ಜೊತೆ ಮಾತನಾಡಿ ನಡೆದ ವಿಷಯ ತಿಳಿಸುತ್ತಾರೆ.

ಯೀಡೋ ಸ್ವಲ್ಪ ಸುಧಾರಿಸಿ ಕೊಂಡ ನಂತರ, ಅವರನ್ನು ಕರೆದುಕೊಂಡು MG ರಸ್ತೆ ಹಾದು ಬ್ರಿಗೇಡ್ ರಸ್ತೆಯ ಕೊನೆಯಲ್ಲಿದ್ದ 5th ಅವೆನ್ಯೂ ವಾಣಿಜ್ಯ ಸಂಕೀರ್ಣದ ಒಳಗಿರುವ ಪ್ರವಾಸೋದ್ಯಮ ಏಜೆಂಟ್ ಬಳಿ ಕರೆದುಕೊಂಡು ಹೋಗ್ತಾರೆ ಅತೀಕ್. ಆದ್ರೆ ಯೀಡೋ ಬಳಿ ಪಿಎನ್​ಆರ್ ನಂಬರ್ ಇಲ್ಲದ ಕಾರಣ, ಶ್ರೀಲಂಕಾಕ್ಕೆ ತೆರಳಲು ಬೇಕಿದ್ದ ಟಿಕೇಟ್​ ನಕಲು ಪ್ರತಿ ಪಡೆಯಲು ಸಾಧ್ಯವಾಗಲ್ಲ. ನಂತರ ಶ್ರೀಲಂಕಾ ಏರ್​ಲೈನ್​​ ಬಳಿ ಹೋದರೆ ಭಾನುವಾರ ಆದ ಕಾರಣ, ಕಚೇರಿ ಬಂದ್ ಆಗಿರುತ್ತೆ. ನಂತರ ಅಲ್ಲಿಂದ ಜ್ಯೂಸ್ ಕುಡಿಯಲು ಯೀಡೋನನ್ನು ಕರೆದುಕೊಂಡು ಹೋಗ್ತಾರೆ ಅತೀಕ್. ಅಲ್ಲಿ ಸಿಗುವ ಆಲ್ಕೋಹಾಲ್ ರಹಿತ ನೀರಾವನ್ನು ಕುಡಿಯುತ್ತಾ ಯೀಡೋ ಮತ್ತಷ್ಟು ಮಾಹಿತಿ ನೀಡುತ್ತಾರೆ.

ಈ ಬಗ್ಗೆ ನ್ಯೂಸ್​ ಫಸ್ಟ್​ ಜೊತೆ ಮಾತನಾಡಿದ ಅತೀಕ್ ಅಹ್ಮದ್, “ಯೀಡೋ ಪ್ಲಾಸ್ಟಿಕ್ ಬಳಸುವುದಿಲ್ಲ, ಮಾಂಸಾಹಾರ ತಿನ್ನುವುದಿಲ್ಲ, ಪೆಪ್ಸಿ-ಕೋಕ್ ಕುಡಿಯಲ್ಲ, ವಿದೇಶಿ ಬಟ್ಟೆಯ ವ್ಯಾಮೋಹವಿಲ್ಲ.. ಅಷ್ಟೇ ಅಲ್ಲ ಪುಣ್ಯಭೂಮಿ ಭಾರತದ ನೆಲವನ್ನು ಕಾಲಿಗೆ ಚಪ್ಪಲಿ ಹಾಕಿ ನಾನು ಮೆಟ್ಟಲ್ಲ, ಹೀಗಾಗಿಯೇ ಬರಿಗಾಲಲ್ಲೇ ನಡೆಯುತ್ತೇನೆ ಅಂತ ಹೇಳ್ತಾರೆ. ‘ಆ ವೇಳೆ  ನನಗೆ, ರಾಬಿನ್ ಶರ್ಮ ಬರೆದ THE MONK WHO SOLD HIS FERRARI ಕಥೆಯ ಕಥಾನಾಯಕ ಜೂಲಿಯನ್ ನೆನಪಾಯಿತು. ಭಾರತದ ಬಗ್ಗೆ ಅವನಿಗಿದ್ದ ಗೌರವ ಯಾವುದೇ ಕೆಲ ಕಿಡಿಗೇಡಿಗಳ ಕಳ್ಳತನದಿಂದ ಕಡಿಮೆಯಾಗಬಾರದು. ಅವರ ಮನದಲ್ಲಿ ಭಾರತದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬಾರದು ಅನ್ನೋ ಭಾವನೆ ಬಂತು. ಹೀಗಾಗಿ ಯೀಡೋ ಸಹಾಯಕ್ಕೆ ನಿಲ್ಲಲು ಪ್ರೇರಣೆಯಾಯ್ತು” ಅಂತಾರೆ.

ಇನ್ನು ಯೀಡೋ ಕಳೆದುಕೊಂಡಿದ್ದ  ಶ್ರೀಲಂಕಾ ಟಿಕೆಟ್​ ದೊರಕದ ಹಿನ್ನೆಲೆಯಲ್ಲಿ ಠಾಣೆಯ ಇನ್​ಸ್ಪೆಕ್ಟರ್ ಭರತ್, ತಮ್ಮ ಪರಿಚಯದ ಅಧಿಕಾರಿಯೊಬ್ಬರ ಮೂಲಕ ನಕಲು ಟಿಕೆಟ್​ ಕೊಡಿಸೋ ಭರವಸೆ ನೀಡ್ತಾರೆ. ಇದಾದ ಬಳಿಕ ಅತೀಕ್ ತಮ್ಮ ಜೇಬಿನಿಂದ 1500 ರೂಪಾಯಿಗಳನ್ನು ತೆಗೆದು ಯೀಡೋಗೆ ಕೊಡ್ತಾರೆ. ಆದ್ರೆ, ಸಂಕೋಚದಿಂದಲೇ ಹಣವನ್ನು ಪಡೆದುಕೊಂಡ ಯೀಡೋ ಪ್ರತಿಯಾಗಿ ತಮ್ಮ ಬಳಿ ಇದ್ದ ಜಂಬೆ ವಾದ್ಯವನ್ನು ಕೊಡಲು ಮುಂದಾಗುತ್ತಾರೆ. ಆದ್ರೆ ಅದನ್ನು ತಿರಸ್ಕರಿಸುವ ಅತೀಕ್ ಅಹ್ಮದ್, ಬೆಂಗಳೂರು ಏರ್​ಪೋರ್ಟ್​ಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಜೊತೆಗೆ, ಪಾಸ್​ಪೋರ್ಟ್​ ಬಳಸಿ ಅದೇ ನಂಬರ್​ನ ಮತ್ತೊಂದು ಸಿಮ್​ ಕೂಡ ಒದಗಿಸಿಕೊಡುತ್ತಾರೆ. ಅಷ್ಟೇ ಅಲ್ಲ, ಯೀಡೋ ತಾಯಿಗೆ ಮೆಸೇಜ್ ಮಾಡುವ ಅತೀಕ್, ನಿಮ್ಮ ಮಗನ ಬಗ್ಗೆ ಚಿಂತಿಸಬೇಡಿ. ಅವನು ಸುರಕ್ಷಿತವಾಗಿದ್ದಾನೆ. ಆತನ ಊಟಕ್ಕಾಗಿ ಸ್ವಲ್ಪ ಹಣ ನಾವು ನೀಡಿದ್ದೇವೆ. ಯೀಡೋ ಈಗ ಶ್ರೀಲಂಕಾಕ್ಕೆ ತೆರಳುತ್ತಿದ್ದಾರೆ. ಅವರಿಗೆ ಸ್ವಲ್ಪ ಹಣ ಕಳಿಸಿ ಅಂತಾ ಮೆಸೇಜ್ ಮಾಡುತ್ತಾರೆ. ಇದಕ್ಕೆ ಅವರ ತಾಯಿ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸುತ್ತಾರೆ.

ನಂತರ ಒಂದೆರಡು ವಾರಗಳ ಬಳಿಕ ಮರಳಿ ಅದೇ ಠಾಣೆಗೆ ಶ್ರೀಲಂಕಾ ಪ್ರವಾಸ ಮುಗಿಸಿ ಬಂದ ಯೀಡೋ ಹಾಜರಾಗ್ತಾರೆ. ಹಾಜರಾಗಿದ್ದಷ್ಟೇ ಅಲ್ಲ ಈ ಬಾರಿ ಖುಷಿಯಿಂದಲೇ ಎಲ್ಲರಿಗೂ ಧನ್ಯವಾದ ತಿಳಿಸುತ್ತಾರೆ. ಅಷ್ಟೇ ಅಲ್ಲ, ಅತೀಕ್​ ಅಹ್ಮದ್ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತಾರೆ. ಜೊತೆಗೆ ಅವರಿಂದ ಪಡೆದ ಹಣವನ್ನೂ ಮರಳಿಸಿ ನಂತರ ಅಲ್ಲಿಂದ ತೆರಳುತ್ತಾರೆ.

ಬೆಂಗಳೂರಿನಿಂದ ತೆರಳಿದ ಬಳಿಕ ಯೀಡೋ ಅತೀಕ್ ಅಹ್ಮದ್ ಅವರಿಗೆ, “ಅತೀಕ್​ ನೀವು ನಿಜಕ್ಕೂ ಒಬ್ಬ ಏಂಜಲ್.. ನೀವು ನನಗಾಗಿ ಮಾಡಿದ ಪ್ರತಿಯೊಂದು ಸಹಾಯಕ್ಕೂ ನಾನು ಧನ್ಯವಾದ ತಿಳಿಸುತ್ತೇನೆ. ನೀವು ಇಲ್ಲದೇ ಇದನ್ನೆಲ್ಲ ನಾನು ಮಾಡುವ ಕಲ್ಪನೆಯನ್ನು ಕೂಡ ಮಾಡಲಾರೆ.. ಜೀವನ ಪರ್ಯಂತ ನೀವು ನನ್ನ ಹೃದಯದಲ್ಲಿ ಇರುತ್ತೀರಿ. ನೀವು ಎಂದಾದರೂ ಇಸ್ರೇಲ್​ಗೆ ಬಂದರೆ ನನಗೆ ತಿಳಿಸಿ, ನಾನು ಕಾಯುತ್ತಿರುತ್ತೇನೆ ” ಅಂತ ಮೆಸೇಜ್​ ಮಾಡ್ತಾರೆ. ಈ ಮೇಸೇ​ಜ್ ಅನ್ನು ನಾನು ಎಂದಿಗೂ ಡಿಲೀಟ್​ ಮಾಡಲ್ಲ ಅಂತಾರೆ ಅತೀಕ್.

ಶ್ರೀಲಂಕಾದಿಂದ ಮರಳಿದ ಯೀಡೋ ನನ್ನನ್ನು ತಬ್ಬಿಕೊಂಡಾಗ ಜಗತ್ತಲ್ಲಿ ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಮತ್ತೊಂದಿಲ್ಲ ಅನ್ನಿಸಿ ರಾಷ್ಟ್ರಕವಿ ಕುವೆಂಪು ಅವರ ಏನಾದರೂ ಸರಿಯೇ ಮೊದಲು ಮಾನವನಾಗು ಅನ್ನೋ ವಿಶ್ವ ಮಾನವತೆಯ ಸಂದೇಶದ ಮಹತ್ವದ ಅರಿವಾಯಿತು. ಆ ಇಸ್ರೇಲಿ ಹೊಸ ಚೈತನ್ಯದಿಂದ ತನ್ನ ಸಮಸ್ಯೆಗಳೆಲ್ಲ ಬಗೆಹರಿದು ಯಾವ ಸಮಸ್ಯೆಯೂ ಇಲ್ಲವೆಂದಾಗ ನನ್ನೊಳಗಿನ ಸಂತೋಷಕ್ಕೆ ಪಾರವಿರಲಿಲ್ಲ. ಅವನು ನನಗೆ ವಾಪಾಸ್ ಹಣಕೊಟ್ಟು ನನ್ನನ್ನು ಮಾತನಾಡಿಸಲೆಂದೇ ಬಂದಿದ್ದಾಗಿ ತಿಳಿಸಿದಾಗ ಮನುಷ್ಯನ ಎದೆಯ ದನಿ ಹಾಗೂ ಹೃದಯ ವೈಶಾಲ್ಯತೆ ಮುಂದೆ ಜಗತ್ತು ತುಂಬಾ ಚಿಕ್ಕದು ಅಂತಾ ಭಾಸವಾಯಿತು. ಅವನ ಸುರಕ್ಷತೆಯ ಹಿಂದೆ ನನ್ನೊಂದಿಗೆ ಸಹಕರಿಸಿ, ಮಾರ್ಗದರ್ಶನ ಮಾಡಿದ PI ಭರತ್ ಸರ್, PSI ಮಹದೇವ್ ಸರ್, ASI ಗಳಾದ ಶಿವಕುಮಾರ್, ಹನುಮಂತರಾಜು, ಗೋವಿಂದ ರಾವ್ ಸರ್, Hc ಶ್ರೀನಿವಾಸಮೂರ್ತಿ ಸರ್ ಮುರುಳಿ ಸರ್, ಸೋಮಶೇಖರ್ ಸರ್, ನಾಗರಾಜಯ್ಯ ಸರ್ ರವರ ನೆರವನ್ನು ಸ್ಮರಿಸಲು ಬಯಸುತ್ತೇನೆ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059