ದಿನಕ್ಕೊಂದು ಕಥೆ 960

*🌻ದಿನಕ್ಕೊಂದು ಕಥೆ🌻*
*ನೀರು ಮಜ್ಜಿಗೆಯ ಸೇವೆ…! ಚೋಳರ ಕಾಲದ ಒಂದು ಕತೆ…*

 ತಂಜಾವೂರಿನಲ್ಲಿ ಚೋಳರ ಅಳ್ವಿಕೆಯ ಕಾಲ. ರಾಜರಾಜಚೋಳನು ಮಹಾದೇವನಿಗೆ ಬೃಹತ್ತಾದ ದೇವಾಲಯವೊಂದನ್ನು ಕಟ್ಟಿಸುತ್ತಿದ್ದ. ಬೃಹದೀಶ್ವರನ ಸೇವೆಗೆ ನಾಮುಂದು-ತಾಮುಂದು ಎಂದು ರಾಜಪುರುಷರು, ಧನಿಕರು, ಸಾಮಾನ್ಯ ಜನರು ಮೊದಲುಗೊಂಡು ಕಾಣಿಕೆಯನ್ನು ಸಲ್ಲಿಸುತ್ತಿದ್ದರು. ದೂರದೂರದಿಂದ ಕಲ್ಲುಗಳನ್ನು ಸಾಗಿಸಿ, ಬೆಟ್ಟದೆತ್ತರಕ್ಕೆ ಏರಿಸಿ ಗೋಪುರಗಳು ಕಟ್ಟಲ್ಪಡುತ್ತಿದ್ದವು. ಸಾವಿರಾರು ಕುಶಲಕಾರ್ವಿುಕರು-ಶಿಲ್ಪಿಗಳು ಕೆಲಸದಲ್ಲಿ ನಿರತರಾಗಿದ್ದರು. ದೇವಾಲಯದ ಪಕ್ಕದಲ್ಲೇ ಅಳಗಿ ಎಂಬ ಬಡಸ್ತ್ರೀ ವಾಸವಾಗಿದ್ದಳು. ಬೃಹದೀಶ್ವರನ ಸೇವೆಗೆ ಸಲ್ಲಿಸಲೊಂದು ಕವಡೆಕಾಸೂ ಇಲ್ಲವಾಗಿ ಬಲು ನೊಂದಿದ್ದಳು. ಒಂದು ಮಧ್ಯಾಹ್ನ ಉರಿಬಿಸಿಲಲ್ಲಿ ಬಳಲಿದ ಶಿಲ್ಪಿಯೊಬ್ಬ ಅಳಗಿಯ ಗುಡಿಸಲಿಗೆ ಬಂದು ಬೊಗಸೆನೀರನ್ನು ಯಾಚಿಸಿದ. ಆಕೆ ಸಂತೋಷದಿಂದ ನೀರು-ಮಜ್ಜಿಗೆಯನ್ನೇ ಮಾಡಿಕೊಟ್ಟಳು. ಆಗ ಅವಳಿಗನ್ನಿಸಿತು. ಎಲ್ಲ ಕೆಲಸಗಾರರಿಗೂ ಪಾಪ ಇದೇ ಸ್ಥಿತಿ ಆಗಿರಬಹುದಲ್ಲವೇ! ಆದಷ್ಟು ಕೆಲಸಗಾರರಿಗೆ ನೀರುಮಜ್ಜಿಗೆಯ ಸೇವೆ ನೀಡಿದರೆ ಪರೋಕ್ಷವಾಗಿಯಾದರೂ ಬೃಹದೀಶ್ವರನ ಸೇವೆ ಆದೀತೆಂದು ಭಾವಿಸಿದಳು! ದಿನೇ-ದಿನೇ ಹೆಚ್ಚು-ಹೆಚ್ಚು ಮಂದಿಗೆ ನೀರುಮಜ್ಜಿಗೆ ವಿತರಿಸಲು ಆರಂಭಿಸಿದಳು. ಇದು ಒಂದು ದಿನಚರಿಯಾಗಿ ಹಲವಾರು ವರ್ಷಗಳು ಮುಂದುವರಿಯಿತು.

ದೇವಾಲಯದ ಕಾರ್ಯ ಹತ್ತಿರದಲ್ಲಿ ಮುಗಿಯಲಿತ್ತು. ನೇರವಾಗಿ ತಾನೀ ಮಹತ್ಕಾರ್ಯಕ್ಕೆ ಯಾವ ದ್ರವ್ಯವೂ ನೀಡಲಿಲ್ಲವೆಂದು ಕೊರಗುತ್ತ ಹಿತ್ತಲಲ್ಲಿ ಕುಳಿತಿದ್ದಾಗ ಅಲ್ಲಿ ಒಂದು ದೊಡ್ಡ ಕಲ್ಲು ಕಣ್ಣಿಗೆ ಬಿತ್ತು. ಇದನ್ನೇ ಕಾಣಿಕೆಯಾಗಿ ಸಲ್ಲಿಸೋಣವೆಂದು ಮುಖ್ಯಸ್ಥರನ್ನು ಸಂರ್ಪಸಿದಳು. ನೀರು-ಮಜ್ಜಿಗೆ ಸೇವೆಯಿಂದಾಗಿ ಅವರೆಲ್ಲರಿಗೂ ಅವಳು ಚಿರಪರಿಚಿತಳಾಗಿದ್ದಳು. ದೇವಾಲಯ ಮುಖ್ಯ ಶಿಲ್ಪಿ ಅವಳ ಮೇಲಿನ ಕರುಣೆಯಿಂದಾಗಿ ಒಪ್ಪಿಕೊಂಡು ‘ಯಾವುದಾದರೂ ಒಂದು ಮೂಲೆಯಲ್ಲಿ ಈ ಕಗ್ಗಲ್ಲನು ಬಳಸುತ್ತೇನೆ’ ಎಂದೊಪ್ಪಿದರು. ಅಳಗಿಗೆ ಪರಮಾನಂದ! ಅಂದು ರಾತ್ರಿ ರಾಜನ ಕನಸಿನಲ್ಲಿ ಈಶ್ವರನು ಪ್ರತ್ಯಕ್ಷವಾಗಿ, ‘ಛಾವಣಿಯ ರೂಪದಲ್ಲಿ ಅಳಗಿಯ ಆಗಲ್ಲನ್ನೇ ಬಳಸಬೇಕು’ ಎಂದು ಸೂಚಿಸಿದ. ಎಚ್ಚರಗೊಂಡ ರಾಜನು ಯಾರು ಆಕೆಯೆಂದು ಹುಡುಕುತ್ತ ಬಂದ. ಆನಂದಾಶ್ರುಗಳಿಂದ ತುಂಬಿದ ಅಳಗಿಯ ಕಂಗಳಿಗೆ ಎದುರಿಗೆ ನಿಂತ ರಾಜರಾಜ ಕಂಡೂ ಕಾಣದಂತಾಯಿತು. ಸಾಕ್ಷಾತ್ ಬೃಹದೀಶ್ವರನೇ ಬಂದಂತಿತ್ತು. ವಿಜೃಂಭಣೆಯಿಂದ ಆಕೆಯ ಕಗ್ಗಲ್ಲನು ಬೃಹದೀಶ್ವರನ ಛತ್ರಸೇವೆಗಾಗಿ ಸ್ವೀಕರಿಸಲಾಯಿತು.

ಭಕ್ತಿ-ಕರ್ಮಯೋಗಗಳಿಗೆ ಇದು ಉತ್ತಮ ನಿದರ್ಶನ. ಮಾಡುವ ಕೆಲಸವನ್ನು ಸಮರ್ಪಣಾಭಾವದಿಂದ ಮಾಡುವುದೇ ಕರ್ಮಯೋಗ. ‘ನಾನು ಮಾಡಿದೆ’ ಎಂಬ ಭಾವ ಬಿಟ್ಟು ಇದು ‘ಅವನ’ ಸೇವೆ ಎಂದುಕೊಂಡರೆ ಅಲ್ಲಿ ‘ನಾನು’ ಮರೆಯಾಗಿ ‘ಅವನು’ ಬೆಳಕಿಗೆ ಬರುತ್ತಾನೆ. ಅಂತಹ ಕರ್ಮವು ಭಗವಂತನೊಡನೆ ಸೇರುವಿಕೆ ಅಥವಾ ಯೋಗದಲ್ಲಿ ನಿಲ್ಲುತ್ತೆ. ಭಕ್ತಿ ಎಂದರೆ ವಿಭಕ್ತಿಯ ವಿರುದ್ಧ ಪದ ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ದೇವನಿಂದ ಬೇರೆಯಾದ ನಾವು ಪ್ರೀತಿ, ಅನುರಾಗದಿಂದ ಅವನೊಡನೆ ಒಂದಾಗಬೇಕು ಎಂಬುದೇ ಭಕ್ತಿಯ ಸಾರ. ತನ್ನ ಇಷ್ಟದೈವಕ್ಕೆ ಏನಾದರೂ ಕೊಡಲೇ ಬೇಕೆಂಬ ಉತ್ಕಟ ಇಚ್ಛೆ ಅಳಗಿಯದು! ತಾನು ಸಮರ್ಪಿಸುವ ಕಾಣಿಕೆ ಕಗ್ಗಲ್ಲಾದರೂ ತನ್ಮೂಲಕ ತನ್ನ ಸರ್ವಸ್ವವೂ ಅವನಿಗೆ ಅರ್ಪಿಸಿದ್ದಳು. ಅಳಗಿಯ ಆಳವಾದ ಭಕ್ತಿಯೂ ನಿಷ್ಕಾಮ ಕರ್ಮವೂ ಭಗವದ್ಗೀತೆಯ ಸಾರವನ್ನೇ ಸಾರುತ್ತಿದೆ.

ಕೃಪೆ:ಡಾ.ಆರ್.ಮೋಹನ್
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059