ದಿನಕ್ಕೊಂದು ಕಥೆ 962

*🌻ದಿನಕ್ಕೊಂದು ಕಥೆ🌻*
*ಇಲ್ಲ’ಗಳ ನಡುವೆಯೇ ‘ಎಲ್ಲ’ವನ್ನೂ ಸಾಧಿಸಿದ.*

‘ನಾನು ರಾಜಸ್ಥಾನದವನು. ಎಂಟು ವರ್ಷದ ಹುಡುಗನಾಗಿದ್ದಾಗ, ಮರ ಹತ್ತುವಾಗ ವಿದ್ಯುತ್ ಆಕಸ್ಮಿಕವೊಂದಕ್ಕೆ ಸಿಲುಕಿದೆ. ಆಸ್ಪತ್ರೆಯಲ್ಲಿ ಕಣ್ಣು ತೆರೆದಾಗ ನನ್ನ ಎಡಗೈ ಕತ್ತರಿಸಲ್ಪಟ್ಟಿತ್ತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಈತ ಗಟ್ಟಿಯಾಗಲಾರ ಎಂದಿದ್ದರು ವೈದ್ಯರು. ಓಡಾಡಿಕೊಂಡಿರಬೇಕಾದ ಬಾಲಕನೊಬ್ಬನ ಕೈ ಹೋದರೆ ಆತನಿಗೆ, ಆತನ ಕುಟುಂಬಕ್ಕೆ ಆಗುವ ಆಘಾತದ ಪ್ರಮಾಣವನ್ನು ನೀವು ಊಹಿಸಬಹುದು. ಅಂತಹುದೇ ಆಘಾತ, ಸಂಕಟ ನಮಗೂ ಆಯಿತು. ಹಳ್ಳಿಗೆ ವಾಪಸಾಗುವಾಗ, ‘ಓರಗೆಯ ಮಕ್ಕಳು ನನ್ನನ್ನು ಆಟಕ್ಕೆ ಸೇರಿಸಿಕೊಳ್ಳುತ್ತಾರೋ ಇಲ್ಲವೋ? ಕೈ ಇಲ್ಲದವನು, ದುರ್ಬಲ ಎಂದು ಹಾಸ್ಯ ಮಾಡಿದರೆ ಏನು ಮಾಡುವುದು?’ ಎಂಬ ಯೋಚನೆಗಳೇ ನನ್ನ ತಲೆಯಲ್ಲಿ ಓಡುತ್ತಿದ್ದವು. ಮಕ್ಕಳ ತಲೆಯಲ್ಲಿ ಹಲವಾರು ವಿಚಾರಗಳು ಓಡುತ್ತಿರುತ್ತವೆ ನೋಡಿ. ಹಾಗೇ ಯೋಚಿಸುತ್ತ ಒಂದು ಸಂಜೆ ಮನೆಯೊಳಗೆ ಕುಳಿತಿದ್ದೆ. ಆಗ ಅಮ್ಮ ನನ್ನನ್ನು ಬಲವಂತವಾಗಿ ಹೊರಗಡೆ ಎಳೆದುಕೊಂಡು ಹೋದಳು. ಮಕ್ಕಳೆಲ್ಲ ಆಡುತ್ತಿರುವಲ್ಲಿ ಬಿಟ್ಟು, ‘ಹೋಗಿ ಅವರೊಂದಿಗೆ ಆಡಿಕೊಂಡು ಬಾ’ ಎಂದು ಹೇಳಿ ತನ್ನ ಕೆಲಸಕ್ಕೆ ಮರಳಿದಳು. ಬಹುಶಃ ಅದು ನನ್ನ ಜೀವನದ ಮಹತ್ವದ ತಿರುವಾಗಿತ್ತು.

ಆಡುತ್ತ ಆಡುತ್ತ ನನಗೆ ಆಟದಲ್ಲಿ ಆಸಕ್ತಿ ಇರುವುದು ಗೊತ್ತಾಯಿತು. ಬೇರೆ ಬೇರೆ ಆಟಗಳನ್ನಾಡುತ್ತ ಹತ್ತನೇ ತರಗತಿಗೆ ಬರುವ ವೇಳೆಗೆ ಜಾವಲಿನ್ ಎಸೆತದಲ್ಲಿ ಆಸಕ್ತಿ ಮೂಡಿತು. ಯಾರೋ ಹುಡುಗ ಎಸೆಯುತ್ತಿದ್ದುದನ್ನು ನೋಡಿ ನಾನೂ ಎಸೆದೆ. ಅದು ಅವನು ಎಸೆದುದಕ್ಕಿಂತ ದೂರಹೋಯಿತು. ನಾನು ಜಾವಲಿನ್ ಎಸೆತ ಶುರುಮಾಡಿದಾಗ ನನ್ನ ಹತ್ತಿರ ಭರ್ಜಿ ಇರಲಿಲ್ಲ; ಬಿದಿರಿನ ಜಾವಲಿನ್ ಮಾಡಿಕೊಂಡು, ಅದಕ್ಕೆ ಹಳೆಯ ಸ್ಪಿಯರ್ ಹೆಡ್ ಸಿಕ್ಕಿಸಿಕೊಂಡು ಅಭ್ಯಾಸ ಶುರುಮಾಡಿದ್ದೆ.

ಬೇರೆ ಯಾವುದೇ ತರಬೇತಿ ಇಲ್ಲದೆ, ನಾನೇ ಸ್ಪರ್ಧೆಗಳಲ್ಲಿ ಇತರ ಸಶಕ್ತ ಹುಡುಗರೊಂದಿಗೆ ಭಾಗವಹಿಸಿ ಗೆಲ್ಲತೊಡಗಿದೆ. ಮೊದಲ ಬಾರಿ ಜಿಲ್ಲಾ ಚಾಂಪಿಯನ್ ಆದೆ. ಆಗ ನಾನು ಒಲಿಂಪಿಕ್ಸ್ ಪದಕ ಗೆದ್ದಿರುವೆನೆಂದು ನನಗನಿಸಿತ್ತು! ಏಕೆಂದರೆ ನಾನು ದುರ್ಬಲನಲ್ಲ ಎಂಬುದು ಸಾಬೀತಾಗಿತ್ತು ಮತ್ತು ನನ್ನ ಮಟ್ಟಿಗೆ ಅದು ಬಹಳ ಪ್ರಮುಖವಾದುದಾಗಿತ್ತು.

ನಂತರ 2002ರ ವರ್ಷದಲ್ಲಿ, ಏಷ್ಯನ್ ಕ್ರೀಡೆಗಳ ಸಂದರ್ಭದಲ್ಲಿ ಭಾರತೀಯ ತಂಡದಲ್ಲಿ ನನಗೆ ಅವಕಾಶ ಸಿಕ್ಕಿತು. ಅಲ್ಲಿ ಚಿನ್ನದ ಪದಕ ಪಡೆದೆ. ಆಗ ಅಂದಿನ ಪ್ರಧಾನಿ ವಾಜಪೇಯಿ ‘ಈ ಹುಡುಗ ಇಷ್ಟು ಚಿಕ್ಕ ವಯಸ್ಸಿನಲ್ಲಿ ಏಷ್ಯನ್ ಗೇಮ್್ಸ ನಲ್ಲಿ ಪದಕ ಪಡೆದಿದ್ದಾನೆ. ಮುಂದೊಂದು ದಿನ ಒಲಿಂಪಿಕ್ಸ್ ಪದಕ ಗೆಲ್ಲುತ್ತಾನೆ’ ಎಂದಿದ್ದರು. ನಾನು 2004ರ ಅಥೆನ್ಸ್ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾದೆ. ತಂಡದ ಧ್ವಜ ಹಿಡಿಯುವ ಅವಕಾಶವೂ ನನಗೇ ಸಿಕ್ಕಿತು. ಅಲ್ಲಿ ನಾನು ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದೆ.

2008ರ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಎಸೆತವನ್ನೇ ಕೈಬಿಟ್ಟಿದ್ದರು! ನನ್ನ ದುರದೃಷ್ಟ! 2012ರಲ್ಲೂ ಹಾಗೇ ಆಯಿತು. ಆಗ ನನಗೆ ಬಹಳಷ್ಟು ಮಂದಿ ಹೇಳಿದರು, ‘ದೇವೇಂದ್ರ, ಈಗ ನೀನು ಆಟವನ್ನು ಬಿಟ್ಟುಬಿಡಬೇಕು, ಬಹಳ ಸಮಯವಾಯಿತು ನೀನು ಪ್ರಯತ್ನಪಡುತ್ತ; ಇನ್ನು ಆಡಲಾಗುತ್ತದೆಯೇ?’. ನಾನು ಸುಮ್ಮನಿದ್ದೆ, ತರಬೇತಿ ಮುಂದುವರಿಸುತ್ತ. ಅದೃಷ್ಟವಶಾತ್ 2016ರಲ್ಲಿ ರಿಯೋ ಡಿ ಜನೈರೋದಲ್ಲಿ ಜಾವಲಿನ್ ಎಸೆತ ಸೇರ್ಪಡೆಯಾಗಿತ್ತು! ಆಗ ನಾನೆಂದೆ, ‘ನಾನು ರಿಯೋದಲ್ಲಿ ಏನು ಮಾಡುತ್ತೇನೆಂದು ನೋಡುತ್ತಿರಿ!’. ದೇವರ ದಯೆಯಿಂದ ಅಂದು ನಾನು ಆಡಿದ ಆಟ ಅಪೂರ್ವವಾಗಿತ್ತು! 63.97 ಮೀಟರ್ ದೂರ ಎಸೆದು ಹೊಸ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದೆ. 12 ವರ್ಷಗಳ ನಂತರ ನನ್ನದೇ ವಿಶ್ವದಾಖಲೆಯನ್ನು ನಾನೇ ಮುರಿದಿದ್ದೆ! 2004ರಲ್ಲಿ ನನಗೆ 23 ವರ್ಷವಾಗಿತ್ತು. ರಿಯೋದಲ್ಲಿ ಪದಕ ಗೆಲ್ಲುವಾಗ 35 ವರ್ಷ. ಆಗ ನಾನೆಂದೆ ‘ಇವತ್ತು 35 ವರ್ಷದ ದೇವೇಂದ್ರ ಝಾಝುರಿಯಾ 23 ವರ್ಷದ ದೇವೇಂದ್ರ ಝಾಝುರಿಯಾನನ್ನು ಸೋಲಿಸಿಬಿಟ್ಟ!! ರಿಯೋದಿಂದ ಮರಳಿದಾಗ ಅಮ್ಮ ಹೇಳಿದಳು, ‘ನೀನು ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲಲಿ ಎಂದು ನಾನು ನಿನ್ನನ್ನು ಆಟಕ್ಕೆ ಕಳಿಸಿರಲಿಲ್ಲ, ಇತರರಿಗಿಂತ ನೀನು ಯಾವುದರಲ್ಲೂ ಕಡಿಮೆಯಿಲ್ಲ ಎಂಬ ಆತ್ಮವಿಶ್ವಾಸ ಮೂಡಿಸಲೆಂದು ಕಳಿಸಿದ್ದು!!’.

ಬದುಕಿನಲ್ಲಿ ಯಾವುದೂ ಅಸಾಧ್ಯವಲ್ಲ. ಯಾವುದೇ ಕೆಲಸ ಅಥವಾ ನಿಯೋಜಿತ ಹೊಣೆಗಾರಿಕೆಯಿರಲಿ, ಅದರ ಹಿಂದೆ ನಿಮ್ಮ ಶ್ರಮ, ಇಚ್ಛಾಶಕ್ತಿ ಎಷ್ಟಿವೆ ಎಂಬುದು ಮುಖ್ಯ. ನಾನು ಜೀವನದಲ್ಲಿ ಬಹಳಷ್ಟನ್ನು ಕಲಿಯಲಿಲ್ಲ. ಜಾವಲಿನ್ ಎಸೆಯುವುದನ್ನು ಕಲಿತೆ ಮತ್ತು ಜಾವಲಿನ್ ಎಸೆಯಬೇಕು ಎಂದೇ ತೀರ್ವನಿಸಿದೆ. ಕ್ಯಾಂಪ್​ನಲ್ಲಿ ಎಲ್ಲರೂ ತಮ್ಮ ತಮ್ಮ ಆಟದ ಸಾಮಗ್ರಿಗಳನ್ನು ಸ್ಟೋರ್ ರೂಮಿನಲ್ಲಿಟ್ಟು ಬಂದರೆ ನಾನು ಮಾತ್ರ ಜಾವಲಿನ್ ಅನ್ನು ಕೋಣೆಗೆ ತರುತ್ತಿದ್ದೆ. ಯಾಕೆ ಎಂದು ಕೆಲವರು ಕೇಳುತ್ತಿದ್ದರು. ಆಗ, ‘ನನಗೆ ನನ್ನ ಗುರಿ 24 ಗಂಟೆಯೂ ಕಾಣುತ್ತಿರಬೇಕು’ ಎಂದು ಉತ್ತರಿಸುತ್ತಿದ್ದೆ!!

ಮತ್ತೊಮ್ಮೆ ಹೇಳುತ್ತಿದ್ದೇನೆ, ಯಾವುದೂ ಕಷ್ಟವಲ್ಲ. ನಿಮ್ಮಲ್ಲಿ ಬಹಳಷ್ಟನ್ನು ಸಾಧಿಸುವ ಸಾಮರ್ಥ್ಯವಿದೆ. ಆದರೆ ಜನರು ಆ ಕಡೆಗೂ ಗಮನ ಕೊಡುತ್ತಾರೆ, ಈ ಕಡೆಯೂ ಗಮನ ಹರಿಸುತ್ತಾರೆ, ಆದರೆ ವಾಸ್ತವವಾಗಿ ಗುರಿ ಅವರ ಎದುರಿಗೇ ಇರುತ್ತದೆ! ನಮ್ಮ ಸಮಸ್ಯೆ ಇದೇ- ನಮ್ಮ ಗುರಿ ಏನು, ಯಾವುದು ಎಂದು ನಿರ್ಧರಿಸಿಕೊಳ್ಳದೇ ಇರುವುದು! ಜೀವನದ ಅತ್ಯಂತ ದೊಡ್ಡ ಖುಷಿ ಏನು ಎಂದು ನನ್ನನ್ನು ಬಹಳ ಬಾರಿ ಪ್ರಶ್ನಿಸಿದ್ದಾರೆ. ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಪಡೆಯುವಾಗ ನಮ್ಮ ದೇಶದ ರಾಷ್ಟ್ರಗೀತೆ ಮೊಳಗುತ್ತಲಿರುವಾಗ ನಿಧಾನವಾಗಿ ನಮ್ಮ ರಾಷ್ಟ್ರಧ್ವಜ ಮೇಲೇರುತ್ತದಲ್ಲ ಅದು ನನ್ನ ಪಾಲಿಗೆ ಅತ್ಯಂತ ಸಂತಸದ ಕ್ಷಣ.

ಹಾಂ, ನಮ್ಮ ದೇಶದಲ್ಲಿ ಒಲಿಂಪಿಕ್ಸ್​ಗಿಂತ ಎರಡು ತಿಂಗಳ ಮೊದಲು ನಾವು ಅದರಲ್ಲಿ ಗೆಲ್ಲಬಹುದಾದ ಪದಕಗಳ ಬಗ್ಗೆ ಚರ್ಚೆ ಪ್ರಾರಂಭವಾಗುತ್ತದೆ ಮತ್ತು ಕ್ರೀಡಾಕೂಟ ಮುಗಿದ ಎರಡು ತಿಂಗಳಿಗೆ ಫಲಿತಾಂಶಗಳ ಬಗ್ಗೆ ಚರ್ಚೆ ಮುಗಿಯುತ್ತದೆ. ಹಾಗಾಗಿಯೇ ನಾವು ಅಲ್ಲಿ ಹಿಂದುಳಿದಿದ್ದೇವೆ. ಈ ರೀತಿಯ ಚರ್ಚೆ ಸತತವಾಗಿ ನಾಲ್ಕು ವರ್ಷವೂ ಜಾರಿಯಲ್ಲಿರಬೇಕು.

ಬದುಕು ಹೋರಾಟ ನಿಜ, ಆದರೆ ಹೋರಾಟವಿಲ್ಲದೇ ಜೀವನವಿಲ್ಲ. ಹಣ ಮತ್ತು ಸೌಲಭ್ಯಗಳ ಮಾತು ಆಮೇಲೆ. ಮೊದಲು ನಮ್ಮಲ್ಲಿ ಸಾಧಿಸುವ ಛಲ ಇರಬೇಕು. ಕಲಿಯುವುದನ್ನು ನಿಲ್ಲಿಸಿದ ಕ್ಷಣವೇ ಗೆಲ್ಲುವುದೂ ನಿಂತುಹೋಗುತ್ತದೆ! ಧನ್ಯವಾದಗಳು’.

2012ರ ‘ಪದ್ಮಶ್ರೀ’, 2014ರ ‘ಅರ್ಜುನ’ ಹಾಗೂ 2017ರ ‘ರಾಜೀವ್ ಗಾಂಧಿ ಖೇಲ್​ರತ್ನ’ ಪ್ರಶಸ್ತಿಗೆ ಭಾಜನರಾದ ಭಾರತದ ಹೆಮ್ಮೆಯ ಕ್ರೀಡಾಪಟು ದೇವೇಂದ್ರ ಝುಝಾರಿಯಾ. ಸಂಕಷ್ಟಗಳ ಸರಮಾಲೆ ಎದುರಿಸಿಯೂ ಸಾಧನೆಗೈದ ಅಪ್ಪಟ ಛಲಗಾರ. 2004ರ ಒಲಿಂಪಿಕ್ಸ್​ಗೆ ಹೋಗಲು ಆತನ ಹತ್ತಿರ ಹಣವೇ ಇರಲಿಲ್ಲ! ಆದರೂ ಸಾಲಸೋಲ ಮಾಡಿ 32 ವರ್ಷಗಳ ನಂತರ ಒಲಿಂಪಿಕ್ಸ್ ಒಂದರಲ್ಲಿ ಭಾರತೀಯನೊಬ್ಬ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದ ಸಾಧನೆ ಮಾಡಿದ! ಮೂರು ದಶಕಗಳ ಚಿನ್ನದ ಬರಕ್ಕೆ ಕೊನೆ ಹಾಡಿದರೂ, ಯಾವ ಮಾಧ್ಯಮಗಳೂ ಅದರ ಬಗ್ಗೆ ಸುದ್ದಿ ಮಾಡಲಿಲ್ಲ! ಕಾರಣ ಪ್ಯಾರಾಲಿಂಪಿಕ್ಸ್ ಎಂಬ ಅಸಡ್ಡೆ! 2008ರಲ್ಲಿ ಜಾವಲಿನ್ ಎಸೆತ ಒಲಿಂಪಿಕ್ಸ್​ನಿಂದ ತೆಗೆಯಲ್ಪಟ್ಟಾಗಲೂ ಆತ ಪ್ರಾಕ್ಟೀಸ್ ಮಾಡುತ್ತಲೇ ಇದ್ದ. ಒಂದಲ್ಲ ಒಂದು ದಿನ ಅತ್ಯುತ್ತಮ ಸಾಧನೆ ಮಾಡುವ ಹಂಬಲದೊಂದಿಗೆ. ಅದೇವೇಳೆಗೆ ಮೊಣಕಾಲಿನ ಗಾಯದಿಂದಾಗಿ ಆತನ ವೃತ್ತಿಜೀವನ ಮುಗಿಯಿತೆಂದೇ ಎಲ್ಲರೂ ಭಾವಿಸಿದ್ದರು. ಅದಕ್ಕೆ ತಲೆಕೆಡಿಸಿಕೊಳ್ಳದೇ 2013ರ ವಿಶ್ವ ಚಾಂಪಿಯನ್​ಷಿಪ್​ನಲ್ಲಿ ಚಿನ್ನ ಗೆದ್ದ. ‘35ರ ಹರೆಯದಲ್ಲಿ ಒಲಿಂಪಿಕ್ಸಾ….?’ ಎಂದು ಹೀಗಳೆದರು. ಆತ ಮತ್ತೆ ವಿಶ್ವದಾಖಲೆ ಬರೆದ.

ಅಂಗವೈಕಲ್ಯ, ಬಡತನ, ನೇತ್ಯಾತ್ಮಕತೆ, ವಯಸ್ಸು ಎಲ್ಲವನ್ನೂ ಮೀರಿ ಸಾಧಿಸಿದ ದೇವೇಂದ್ರ ಅವರ ಎದುರು, ಚಿಕ್ಕ ಪುಟ್ಟ ಸಮಸ್ಯೆಗಳಿಗೇ ಕಂಗಾಲಾಗಿ ಹೋಗುವ ನಾವು ಮತ್ತು ನೀವು ಕಲಿಯುವುದು ಬೆಟ್ಟದಷ್ಟಿದೆ ಅಲ್ಲವೇ? ಯಾವುದೇ ಉದ್ಯೋಗಕ್ಕಾದರೂ ಕನಿಷ್ಠ ಮೂರು ವರ್ಷವಾದರೂ ತಪಸ್ಸಿನಂತೆ ಓದಬೇಕು ಎಂಬುದು ಗೊತ್ತಿದ್ದರೂ ಓದದೇ, ಪದವಿ ಮುಗಿದ ತಕ್ಷಣ ಕೆಲಸ ಸಿಕ್ಕಿಬಿಡಬೇಕು ಎಂದು ನಿರೀಕ್ಷಿಸಿ ನಿರಾಶರಾಗುವ ನಮ್ಮ ಹುಡುಗ ಹುಡುಗಿಯರಿಗೆ, ಐಎಎಸ್ ಪರೀಕ್ಷೆಗೆ ತಡವಾಗಿ ಹೋಗಿ ಬರೆಯಲು ಅವಕಾಶ ಸಿಗದಿದ್ದುದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಯುವಕರಿಗೆ ದೇವೇಂದ್ರ ಝುಝಾರಿಯಾರಂತಹ ಛಲದಂಕಮಲ್ಲರ ಬಗ್ಗೆ ಪಠ್ಯ ಇಡಬೇಕು. ಇಲ್ಲವೇ ಮಾಹಿತಿಯನ್ನಾದರೂ ನೀಡಬೇಕು. ಯೂಟ್ಯೂಬ್ ಚಾನಲ್​ಗಳಲ್ಲಿದ್ದ ಝುಝಾರಿಯಾರ ಭಾಷಣಗಳನ್ನು ಅನುವಾದಿಸಿ ನಾನು ಈ ಲೇಖನವಾಗಿಸಿದ್ದರ ಉದ್ದೇಶವೂ ಅದೇ. ಇದೀಗ 2020ರ ಟೋಕಿಯೋ ಒಲಿಂಪಿಕ್ಸ್​ಗೆ ತಯಾರಿ ನಡೆಸುತ್ತಿರುವ ದೇವೇಂದ್ರ ಝುಝಾರಿಯಾರ ಮನೋಬಲಕ್ಕೊಂದು ಹ್ಯಾಟ್ಸಾಫ್!!

ಕೃಪೆ :ದೀಪ ಹಿರೇಗುತ್ತಿ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097