ದಿನಕ್ಕೊಂದು ಕಥೆ 966

*🌻ದಿನಕ್ಕೊಂದು ಕಥೆ🌻*
*ಕಾರ್ಗಿಲ್ ಹೀರೋ, ಕೃತಕ ಕಾಲು ಮತ್ತು ಸಾಲು ಸಾಲು ದಾಖಲೆಗಳು!*

*ಸತ್ ಶ್ರೀ ಅಕಾಲ್!*

ಬದುಕಿನಲ್ಲಿ ಚಾಲೆಂಜ್ ಅಂತ ತೆಗೆದುಕೊಂಡರೆ ಹೇಗಿರಬೇಕು? ಮೇಜರ್ ದೇವೇಂದ್ರ ಪಾಲ್ ಸಿಂಗ್ ಬದುಕಿನಂತಿರಬೇಕು! ಸೇನೆ ಸೇರಬೇಕೆಂಬ ಕನಸಿಗೆ ನೂರೆಂಟು ಅಡ್ಡಿಗಳು ಬಂದರೂ, ಜತೆಯಲ್ಲಿರುವವರು ‘ಸಾಕಪ್ಪ ಬಿಡು ಎಷ್ಟು ಅಂತ ಪ್ರಯತ್ನ ಪಡ್ತೀಯ’ ಅಂತ ಹೇಳಿದ ಮೇಲೂ ಆ ಎಲ್ಲ ಸವಾಲುಗಳನ್ನು ಗೆದ್ದು ಸೇನೆ ಸೇರಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡುವಾಗ ಈ ತರುಣ ಸಿಂಹಕ್ಕೆ ಬರೀ 25 ವರ್ಷ. ಪಾಕಿಸ್ತಾನದ ಕಡೆಯಿಂದ ನಡೆದ ಶೆಲ್ ದಾಳಿಯಲ್ಲಿ ಕಾಲು ಕಳೆದುಕೊಂಡ ಬಳಿಕ

ಜೀವನ ಒಮ್ಮೆ ನಿಂತ ನೀರಿನಂತಾದಾಗ ಸಿಂಗ್ ಮಾಡಿದ್ದೇನು ಗೊತ್ತೆ? ‘ಕಮಾನ್, ಕಷ್ಟಗಳೇ ಬನ್ನಿ, ಸವಾಲುಗಳೇ ಬನ್ನಿ, ನಾನು ಕಾಲು ಕಳೆದುಕೊಂಡಿದ್ದು ಒಳ್ಳೆಯದೇ ಆಯಿತು, ಯಾವ ಕಷ್ಟ ಬಂದರೂ ಹೀಗೆ ನಗುತ್ತಿರುತ್ತೇನೆ, ಇದು ನನ್ನ ಚಾಲೆಂಜ್…’ ಅಂತ ಹೇಳಿ ‘ಅಭಾವ್ ಕೀ ಜಿಂದಗಿ ಮೇ ಭೀ ಜೋ ರಹೆಂಗೇ ಪ್ರಸನ್ನ, ಸಚ್ಚೆ ಮಾಯ್ನೆ ಮೇ ವೋಹಿ ಸರ್ವಗುಣ ಸಂಪನ್ನ…’ (ಕೊರತೆಗಳ ಬದುಕಿನಲ್ಲಿ ಯಾರು ಪ್ರಸನ್ನ-ಸಂತೋಷವಾಗಿ ಇರುತ್ತಾರೋ ಅವರೇ ನಿಜಾರ್ಥದಲ್ಲಿ ಸರ್ವಗುಣ ಸಂಪನ್ನರು) ಅಂತ ಕರೆ ನೀಡಿದರು. ಮುಂದೇನಾಯಿತು ಗೊತ್ತೆ? ಭಾರತದ ಮೊದಲ ಬ್ಲೇಡ್ ರನ್ನರ್, ‘ಭಾರತದ ಮೊದಲ ಸೋಲೋ ಸ್ಕೈಡ್ರೖೆವರ್’ (ಅಂಗವೈಕಲ್ಯ ಹೊಂದಿದ), ಹಾಫ್ ಮ್ಯಾರಥಾನ್​ನಲ್ಲಿ ನಾಲ್ಕು ಲಿಮ್ಕಾ ದಾಖಲೆಗಳು, ರಾಷ್ಟ್ರೀಯ ಪ್ರಶಸ್ತಿಗಳು…! ನಿಂತೇ ಹೋಗಿದ್ದ ಜೀವನಕ್ಕೆ ಹೊಸ ಅರ್ಥ ನೀಡಿ, ಸಾಧನೆಯೆಡೆಗೆ ಸಾಗುವುದೆಂದರೆ ಇದು!

Smiley face
ಸ್ನೇಹಿತರೆಲ್ಲ ‘ಡಿಪಿ’ ಎಂದೇ ಕರೆಯುವ ದೇವೇಂದ್ರ ಪಾಲ್ ಸಿಂಗ್ ಹುಟ್ಟಿದ್ದು ಹರಿಯಾಣದ ಜಗ್​ಧಾರಿ ಗ್ರಾಮದಲ್ಲಿ (1973 ಸೆಪ್ಟೆಂಬರ್ 13). ಆದರೆ, 7ನೇ ವಯಸ್ಸಿಗೆ ಉತ್ತರಾಖಂಡದ ರುಡಕಿಯ ಅಜ್ಜ-ಅಜ್ಜಿ ಮನೆಗೆ ತಂದೆ-ತಾಯಿ ತಂದುಬಿಟ್ಟರು. ಅದೇ ಊರಲ್ಲಿ ಶಿಕ್ಷಣ. ರುಡಕಿಯಲ್ಲಿ ಸೇನಾಕ್ಯಾಂಪ್​ವೊಂದು ಇದ್ದಿದ್ದರಿಂದ ಶಾಲೆಗೆ ಹೋಗುವಾಗ, ಬರುವಾಗ ಸೈನಿಕರನ್ನು ನೋಡುತ್ತಿದ್ದ ಡಿಪಿ ಮುಂದೆ ತಾನೂ ಈ ದೇಶ ಕಾಯುವ ಯೋಧನಾಗಬೇಕು, ಸಮರಾಂಗಣದಲ್ಲಿ ಕಾದಾಡಬೇಕು ಎಂದು ಕನಸು ಕಾಣತೊಡಗಿದ. ಕೆಲವೊಮ್ಮೆ ನಾವು ಏನಾದರೂ ಅಹಿತ ಸಂಭವಿಸಿದಾಗ ವಿಧಿಯನ್ನೋ, ದೇವರನ್ನೋ ಶಪಿಸುತ್ತೇವೆ. ಆದರೆ, ‘ಆಗುವುದೆಲ್ಲ ಒಳ್ಳೆಯದಕ್ಕೇ’ ಎಂಬ ಗಟ್ಟಿ ನಂಬಿಕೆ ಡಿಪಿಯದ್ದು.

11ನೇ ತರಗತಿಯಲ್ಲಿ ಅನುತೀರ್ಣನಾದ ಡಿಪಿ ‘ಒಂದು ವರ್ಷ ವ್ಯರ್ಥವಾಯಿತಲ್ಲ’ ಎಂದು ಖಿನ್ನತೆಗೆ ಜಾರಿದ್ದ. ಜತೆಗೆ, ಖಡಕ್ ಸ್ವಭಾವದ ಅಜ್ಜ-ಅಜ್ಜಿಯ ತೆಗಳುವಿಕೆ. ತನ್ನ ಗೆಳೆಯರು 12ನೇ ತರಗತಿಯ ಪರೀಕ್ಷೆಗೆ ಮನೆಯಲ್ಲಿ ಕುಳಿತು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ ಈತ ಕಾಲೇಜಿನ ಆಟದ ಮೈದಾನದಲ್ಲಿ ಅತ್ತಲಿಂದಿತ್ತ ಓಡಾಡುತ್ತಿದ್ದ. ಜೇನುಹುಳಗಳ ದಾಳಿಗೆ ಒಳಗಾದ 2ನೇ ತರಗತಿಯ ಪುಟ್ಟ ಹುಡುಗಿ ನೋವು ತಾಳದೆ ಓಡಿ ಬರುತ್ತಿದ್ದದ್ದನ್ನು ಕಂಡ ಡಿಪಿ ತಕ್ಷಣವೇ ತನ್ನ ಸ್ವೇಟರ್ ಕಳಚಿ, ಬಾಲಕಿಯನ್ನು ಎತ್ತುಕೊಂಡು ಆಸ್ಪತ್ರೆಗೆ ಓಡಿದ. ‘ಆಸ್ಪತ್ರೆಗೆ ಬರಲು ಇನ್ನೈದೇ ನಿಮಿಷ ತಡವಾಗಿದ್ದರೂ ಹುಡುಗಿ ಪ್ರಾಣ ಉಳಿಯುತ್ತಿರಲಿಲ್ಲ’ ಎಂದರಂತೆ ವೈದ್ಯರು! ಆಗ ಆಸ್ಪತ್ರೆಯಿಂದ ಹೊರಬಂದು ಖುಷಿಯಿಂದ ಕಣ್ಣೀರು ಹಾಕಿದ ಡಿಪಿ ‘ನಾನು ಫೇಲಾಗಿದ್ದು ಒಳ್ಳೆಯದೇ ಆಯಿತು! ಇಲ್ಲದಿದ್ದರೆ ನಾನೂ ಗೆಳೆಯರಂತೆ ಪರೀಕ್ಷೆ ತಯಾರಿಯಲ್ಲಿ ಮುಳುಗಿರುತ್ತಿದೆ. ಒಂದು ಜೀವವನ್ನು ಕಾಪಾಡುವ ಅವಕಾಶ ದೊರೆಯಿತಲ್ಲ…’ ಎಂದು ತನಗೇ ಹೇಳಿಕೊಂಡನಂತೆ. ಮುಂದೆ 11, 12ನೇ ತರಗತಿ ಪಾಸ್ ಮಾಡಿ, ಮೀರತ್​ನಲ್ಲಿ ಕಲಾ ಪದವಿ ಪೂರ್ಣಗೊಳಿಸಿದ. ಹಾಂ, ಈ ಅವಧಿಯಲ್ಲಿ ಯೋಧನಾಗುವ ಕನಸೇನೂ ಮರೆತಿರಲಿಲ್ಲ. ಎನ್​ಡಿಎ ಪರೀಕ್ಷೆಗೆ ತಯಾರಿ ನಡೆಸಿ ಬರೆದರೂ ಯಶಸ್ಸು ಕೈ ಸಿಗಲಿಲ್ಲ. ಮನೆ ಪರಿಸ್ಥಿತಿ ಬೇರೆ ಚಿಂತಾಜನಕವಾಗಿತ್ತು. ಅಪ್ಪನ ಆರೋಗ್ಯ ಹದಗೆಟ್ಟಿತ್ತು. ಬ್ಯಾಂಕಿಂಗ್ ಪರೀಕ್ಷೆ ಬರೆದು ಬ್ಯಾಂಕ್ ಒಂದರಲ್ಲಿ ಕೆಲಸ ಗಿಟ್ಟಿಸಲು ಯಶಸ್ವಿಯಾದ ಸಿಂಗ್ ‘ಈ ಕೆಲಸ ನನಗಲ್ಲ’ ಎಂದೇ ಹೇಳಿಕೊಳ್ಳುತ್ತಿದ್ದರು. ಎರಡನೇ ಬಾರಿಯೂ ಎನ್​ಡಿಎ ಪರೀಕ್ಷೆಯಲ್ಲಿ ಯಶ ಕಾಣದಿದ್ದಾಗ ತುಂಬ ಜನರು ‘ಬ್ಯಾಂಕ್ ಉದ್ಯೋಗ ಚೆನ್ನಾಗಿದೆ, ಇದೇ ಮಾಡಿಕೊಂಡು ಹೋಗು’ ಎಂದು ಸಲಹೆ ನೀಡಿದರು. ಏನೂ ಮಾತನಾಡದೆ ಸುಮ್ಮನಿದ್ದ ಸಿಂಗ್ ಮೂರನೇ ಪ್ರಯತ್ನದಲ್ಲಿ ಗೆಲುವಿನ ಜೋಶ್ ತೋರಿಸಿಯೇಬಿಟ್ಟರು. ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಅಗತ್ಯ ತರಬೇತಿಗಳೆಲ್ಲ ಪೂರ್ಣಗೊಂಡವು. 1997 ಡಿಸೆಂಬರ್ 6ರಂದು ಡೋಗ್ರಾ ರೇಜಿಮೆಂಟ್​ನ 7ನೇ ಬಟಾಲಿಯನ್​ಗೆ ನೇಮಕವಾಯಿತು. 1999ರಲ್ಲಿ ಕಾರ್ಗಿಲ್ ಸಮರ ಆರಂಭವಾದಾಗ ಇವರ ಬಟಾಲಿಯನ್ ಅನ್ನು ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾಯಿತು. ಅಂದು 1999ರ ಜುಲೈ 15. ಅಖ್ನುರ್ ಸೆಕ್ಟೇರ್​ನಲ್ಲಿ ದಾಳಿ-ಪ್ರತಿದಾಳಿ ಮುಂದುವರಿದಿತ್ತು. ಪಾಕ್ ಕಡೆಯಿಂದ ಶೆಲ್ ದಾಳಿ ನಿರಂತರವಾಗಿ ಸಾಗಿತ್ತು. ಹಾಗೇ ನಡೆಸಿದ ಶೆಲ್ ದಾಳಿಯಿಂದ ಬಾಂಬೊಂದು ಸಿಂಗ್ ಇರುವ ಸ್ಥಳದಿಂದ ಕೇವಲ 80 ಮೀಟರ್ ಅಂತರದಲ್ಲಿ ಸ್ಪೋಟಗೊಂಡಿತು! ರಕ್ತದ ಮಡುವಿನಲ್ಲಿ ಬಿದ್ದಿದ್ದ ಇವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕೆಂದರೂ ಪಾಕ್ ಕಡೆಯಿಂದ ದಾಳಿ ಮುಂದುವರಿದಿತ್ತು. ಸೈನಿಕರು ಬೆಂಕಿ ಹೊತ್ತಿಸಿ, ವ್ಯಾಪಕ ಹೊಗೆ ಎಳುವಂತೆ ಮಾಡಿ, ಆ ಗ್ಯಾಪಿನಲ್ಲಿ ಸಿಂಗ್​ರನ್ನು ಆಸ್ಪತ್ರೆಗೆ ದಾಖಲಿಸುವಾಗ ಎರಡೂವರೆ ಗಂಟೆ ಕಳೆದಿತ್ತು. ದೇಹದಿಂದ ರಕ್ತ ತುಂಬ ಹರಿದಿತ್ತು, ರಕ್ತದೊತ್ತಡ ಸೊನ್ನೆಯಾಗಿತ್ತು. ವೈದ್ಯರು ಪರಿಶೀಲಿಸಿ, ‘ಕ್ಷಮಿಸಿ, ಇವರು ಮೃತರಾಗಿದ್ದಾರೆ. ದೇಹ ಅವರ ಊರಿಗೆ ಸಾಗಿಸಲು ಏರ್ಪಾಡು ಮಾಡಿ’ ಎಂದುಬಿಟ್ಟರು! ದೇಹ ಶವಾಗಾರಕ್ಕೆ ಸಾಗಿಸಿದಾಗ ಸಿಂಗ್ ನಿಧಾನವಾಗಿ ಉಸಿರಾಡುತ್ತಿರುವುದನ್ನು ಗಮನಿಸಿದ ನರ್ಸ್ ವೈದ್ಯರನ್ನು ಕರೆದರು. ಮತ್ತೆ ಐಸಿಯುಗೆ ಶಿಫ್ಟ್ ಮಾಡಿ, ಚಿಕಿತ್ಸೆ ಶುರುವಾಯಿತು. ಬಾಂಬ್​ನ ತುಣುಕುಗಳೆಲ್ಲ ದೇಹವನ್ನು ಹೊಕ್ಕಿದ್ದವು. (ಈಗಲೂ ಅವರ ಹೊಟ್ಟೆಯಲ್ಲಿ 20ಕ್ಕಿಂತ ಹೆಚ್ಚು ಸಣ್ಣ ತುಣುಕುಗಳು ಹಾಗೇ ಇವೆಯಂತೆ) ಪರಿಣಾಮ, ಬಹುತೇಕ ಅಂಗಾಂಗಗಳು ಕೆಲಸ ನಿಲ್ಲಿಸಿಬಿಟ್ಟಿದ್ದವು. ವೈದ್ಯರು ‘48 ಗಂಟೆ ಏನೂ ಹೇಳಲಾಗುವುದಿಲ್ಲ’ ಎಂದರು. ಹಲವು ದಿನಗಳಾದರೂ ಪರಿಸ್ಥಿತಿ ಸುಧಾರಿಸಲಿಲ್ಲ, ಕ್ರಮೇಣ ಕಾಲಿಗೆ ಗ್ಯಾಂಗ್ರಿನ್ ಆವರಿಸಿಕೊಂಡಿತು. ‘ಡಿಪಿ ನಿಮ್ಮ ಪ್ರಾಣ ಉಳಿಯಬೇಕಾದರೆ ಕಾಲು ಕತ್ತರಿಸಲೇಬೇಕು’ ಎಂದರು ವೈದ್ಯರು. ‘ಹಾಗೇ ಆಗಲಿ’ ಎಂದಾಗ ಶಸ್ತ್ರಚಿಕಿತ್ಸೆ ನಡೆದು ಒಂದು ಕಾಲು ಕತ್ತರಿಸಬೇಕಾಯಿತು. ಆ ಬಳಿಕವೂ 48 ದಿನಗಳ ಆಸ್ಪತ್ರೆ ವಾಸ. ಆಗ 25 ವರ್ಷದ ಸಿಂಗ್ ‘ಅಯ್ಯೋ, ಇನ್ಮುಂದೆ ನನಗೆ ಸೇನೆಯಲ್ಲಿ ಸೇವೆ ಸಲ್ಲಿಸಲು, ಯುದ್ಧದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲವಲ್ಲ’ ಎಂದು ವ್ಯಥೆಪಟ್ಟರು. ಕ್ರಚೇಸ್ ಸಹಾಯದಿಂದ ನಡೆಯಲು ಪ್ರಯತ್ನಪಟ್ಟರು. ಪ್ರಾಣ ಹೋಗುವಂಥ ನೋವು. ಕೆಲವು ತಿಂಗಳ ಬಳಿಕ ಪುಣೆಯಿಂದ ಕೃತಕ ಕಾಲು ತರಿಸಿಕೊಂಡು ಹಾಕಿಕೊಂಡರು. ತುಂಬ ಭಾರ, ಒಂದೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಇಡಬೇಕಾಗುತ್ತಿತ್ತು. ಆದರೂ, ಪ್ರಯತ್ನ ಬಿಡದೆ ನಡೆಯಲು ಕಲಿತರು. ಮುಂದೆ ಓಡಬೇಕೆಂಬ ಆಸೆ ಚಿಗುರೊಡೆಯಿತು. ವೈದ್ಯರು ಅಂಥ ಅಪಾಯ ಆಹ್ವಾನಿಸಿಕೊಳ್ಳದಂತೆ ಹೇಳಿದರೂ, ತಲೆ ಕೆಡಿಸಿಕೊಳ್ಳದೆ ಜೀವನದ ಇನ್ನೊಂದು ಇನ್ನಿಂಗ್ಸ್ ಆರಂಭಿಸಲೇಬೇಕೆಂದು ಸಂಕಲ್ಪಿಸಿದರು. ಈ ನಡುವೆ ಅವರ ತೂಕ 28 ಕೆಜಿಗೆ ಇಳಿಯಿತು. ಆಹಾರಸೇವನೆ ಪ್ರಮಾಣ ಕ್ರಮೇಣ ಹೆಚ್ಚಿಸಿ, ಈಜು ಆರಂಭಿಸಿದರು. ದೈಹಿಕ ದೃಢತೆ ಪಡೆದುಕೊಂಡರು. ನೆನಪಿರಲಿ, ಇದು ಸಾಧ್ಯವಾಗಬೇಕಾದರೆ 10 ವರ್ಷಗಳ (1999- 2009) ಕ್ಷಣ-ಕ್ಷಣವನ್ನೂ ಸಂಕಷ್ಟ, ನೋವಿನಲ್ಲಿ ಕಳೆದಿದ್ದರು. ಮದುವೆ ಆಗಿ, ಮಗು ಆಯಿತಾದರೂ ಕಾರಣಾಂತರದಿಂದ ವಿವಾಹ

ವಿಚ್ಛೇದನವಾಯಿತು. ಖಿನ್ನತೆಗೆ ಜಾರಿದ್ದ ಡಿಪಿ ಮಗುವನ್ನು ನೋಡಿ ಮತ್ತೆ ಜೀವನ್ಮುಖಿಯಾದರು. ಆ ಮಗುವಿಗೆ ಡಿಸ್​ಲೇಕ್ಸಿಯಾ ಕಾಯಿಲೆ ಎಂದು ಗೊತ್ತಾದ ತಕ್ಷಣ ಅದರ ಜತೆ ಹೆಚ್ಚು ಸಮಯ ಕಳೆಯಲಾರಂಭಿಸಿದರು.

2009ರಲ್ಲಿ ದೆಹಲಿಯ ಹಾಫ್ ಮ್ಯಾರಥಾನ್​ನಲ್ಲಿ ಪಾಲ್ಗೊಂಡರು. ಇವರಿಗೆ ಆಳವಡಿಸಿದ್ದ ಕೃತಕ ಕಾಲು ನಡೆದಾಡಲಷ್ಟೇ ಸಾಮರ್ಥ್ಯ ಹೊಂದಿತ್ತು. ಅದನ್ನೇ ಓಡಲು ಬಳಸಿದರು. 21 ಕಿಲೋಮೀಟರ್​ಗಳ ಮ್ಯಾರಥಾನ್ ಅನ್ನು 3 ಗಂಟೆ 19 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಇವರ ಸ್ಥೈರ್ಯ ಕಂಡು ಸೇನೆ ಫೈಬರ್ ಬ್ಲೇಡ್​ನಿಂದ ತಯಾರಿಸಿದ ಕೃತಕ ಕಾಲು ತರಿಸಿ ಕೊಟ್ಟಿತು. ಬ್ಲೇಡ್ ರನ್ನರ್ ಆಗಲು ಆಗಿನಿಂದಲೇ ಪ್ರಯತ್ನ ಆರಂಭಿಸಿದರು. 2011ರ ಹಾಫ್ ಮ್ಯಾರಥಾನ್​ನಲ್ಲಿ 2ನೇ ಲಿಮ್ಕಾ ದಾಖಲೆ ಸೃಷ್ಟಿಸಿದರು. ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ‘ಜೋ ಡರ್​ಗಯಾ ಸಮಝೋ ವೋ ಮರ್​ಗಯಾ’ ಎಂಬ ಶೋಲೆ ಸಿನಿಮಾದ ಡೈಲಾಗ್ ಅನ್ನು ಆಗಾಗ ಹೇಳುವ ಡಿಪಿ ಅದರಂತೆ ಭಯವನ್ನು, ದುಃಖವನ್ನು ಆಚೆ ನೂಕಿಬಿಟ್ಟರು. 26 ಹಾಫ್ ಮ್ಯಾರಥಾನ್​ಗಳಲ್ಲಿ ಪಾಲ್ಗೊಂಡು, ನಾಲ್ಕು ಲಿಮ್ಕಾ ದಾಖಲೆಗಳನ್ನು ಸೃಷ್ಟಿಸಿದರು. ನೆಲದ ಮೇಲೆ ಓಡಲು ಶಕ್ಯವಿದೆ ಎಂದಾದರೆ ಆಕಾಶದಲ್ಲೂ ಹಾರಾಡಬಹುದು ಅಂತ ಸ್ಕೈಡ್ರೖೆವಿಂಗ್ ಕಲಿತು, ಅಲ್ಲೂ ಮೋಡಿ ಮಾಡಿದರು. ಮುಂಬೈನ ಮ್ಯಾರಥಾನ್​ನಲ್ಲಿ 21 ಕಿ.ಮೀ. ಅಂತರವನ್ನು ಕೇವಲ 2 ಗಂಟೆ 26 ನಿಮಿಷಗಳಲ್ಲಿ ಕ್ರಮಿಸಿದರು. ‘ಇದು ನನ್ನಿಂದ ಸಾಧ್ಯವಿದೆ ಎಂದಾದರೆ ಇತರ ಅಂಗವಿಕಲರಿಗೂ ಸಾಧ್ಯವಿದೆ’ ಅಂತ ಸಂಕಲ್ಪಿಸಿ, ಇತರರನ್ನು ಹುರಿದುಂಬಿಸಲು The Challenging Ones(TCO) ಎಂಬ ಸ್ವಯಂಸೇವಾ ಸಂಸ್ಥೆ ಆರಂಭಿಸಿ ದರು. ಕಾಲು ಕಳೆದುಕೊಂಡವರಿಗೆ ಮ್ಯಾರಥಾನ್​ನಲ್ಲಿ ಓಡಲು ಪ್ರೇರಣೆ, ಮಾರ್ಗದರ್ಶನ ನೀಡುತ್ತಿದ್ದು, ಈವರೆಗೆ 18 ದಿವ್ಯಾಂಗರು ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದಾರೆ. ಅಂಗವಿಕಲರ ಕ್ಷೇತ್ರದಲ್ಲಿ ಸಾಧನೆಗಾಗಿ 2018ರಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ರಾಷ್ಟ್ರೀಯ ಪ್ರಶಸ್ತಿ, 2019ರಲ್ಲಿ ಕೆವಿನ್​ಕೇರ್ ಅಬೆಲಿಟಿ ಅವಾರ್ಡ್ ಅರಸಿಕೊಂಡು ಬಂದಿವೆ.

‘ನಿಮ್ಮದು ಜೀವನವಾ? ಪವಾಡವಾ?’ ಅಂತ ಫೋನ್ ಸಂದರ್ಶನದಲ್ಲಿ ಕೇಳಿದರೆ ನಗುತ್ತಲೇ ಉತ್ತರಿಸಿದ ಸಿಂಗ್ (www.majordpsingh.com, majordpsingh@gmail.com) ‘ಜೀವನದಲ್ಲಿ ಕೈಚೆಲ್ಲುವುದು, ನನ್ನಿಂದ ಸಾಧ್ಯವಿಲ್ಲ ಎಂದು ಬಿಟ್ಟುಬಿಡುವುದು ತುಂಬ ಸುಲಭ. ಮತ್ತು ಬಹಳಷ್ಟು ಜನರು ಹಾಗೇ ಮಾಡುತ್ತಾರೆ. ಅದಕ್ಕಾಗಿಯೇ, ಕನಸುಗಳು ಅಂತಿಮ ನಿಲ್ದಾಣ ತಲುಪುವುದಿಲ್ಲ. ನನ್ನ ಕೊನೆ ಉಸಿರನವರೆಗೂ ಪ್ರಯತ್ನ ಮುಂದುವರಿಸುತ್ತಲೇ ಇರಬೇಕು ಎಂದು ನಿಶ್ಚಯಿಸಿದೆ. ಇದೆಲ್ಲ ಅದರ ಫಲ’ ಎಂದವರೇ ‘ಕ್ಯಾ ಮೈ ಮರಾ ಹುವಾ ಲಗ್ತಾ ಹೂಂ’ (ವೈದ್ಯರು ಹಿಂದೆ ಘೋಷಿಸದಂತೆ ನಾನು ಸತ್ತವನಂತೆ ಕಾಣುತ್ತೆನೆಯೇ?) ಅಂತ ಪ್ರಶ್ನಿಸಿ ಮತ್ತೆ ಜೋರಾಗಿ ನಕ್ಕರು.

ಇಂಥ ನಗುವಿಗೆ, ಸಂಕಲ್ಪಕ್ಕೆ ಮಾತ್ರವೇ ಆ ವಿಧಿಯೂ ಸೋತು ಶರಣಾಗುತ್ತದೆ, ಬನ್ನಿ ಸವಾಲುಗಳನ್ನು ಅಪ್ಪಿಕೊಳ್ಳೋಣ!

ಕೃಪೆ :ರವೀಂದ್ರ ದೇಶ್ ಮುಖ್
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059