ದಿನಕ್ಕೊಂದು ಕಥೆ 967
*🌻ದಿನಕ್ಕೊಂದು ಕಥೆ🌻*
*ಬೆನ್ನು ಮೂಳೆ ಮುರಿದರೂ ಸಮಾಜಕ್ಕೆ ಬೆನ್ನೆಲುಬಾದರು!*
ಇಂಥ ಬದುಕಿಗೆ, ಆ ಸ್ಥೈರ್ಯದ ಪರಿಗೆ ನಮೋನಮಃ!
ಕನ್ಯಾಡಿ ಅಂದಾಕ್ಷಣ ನಮಗೆಲ್ಲ ಥಟ್ಟನೇ ನೆನಪಾಗೋದು ಶ್ರೀರಾಮನ ಕ್ಷೇತ್ರ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಟ್ಟಗ್ರಾಮ ಕನ್ಯಾಡಿ ಶ್ರೀರಾಮನ ಸುಂದರ ದೇಗುಲದಿಂದ ಪ್ರಸಿದ್ಧ. ಅದೇ ಊರಲ್ಲಿ ಶ್ರೀರಾಮನ ಮೌಲ್ಯಗಳು ಸಾಕ್ಷಾತ್ಕಾರಗೊಂಡು, ಸೇವೆಯ ಪುಟ್ಟ ಸಾಮ್ರಾಜ್ಯವೊಂದು ಸ್ಥಾಪಿತವಾಗಿದೆ. ಅದು ಸ್ಥಾಪಿಸಿರುವ ವಿಕಾಸ ಮಾದರಿ ಮತ್ತು ಆದರ್ಶಗಳು ಅನುಕರಣೀಯ. ಗಾಲಿಕುರ್ಚಿಯಲ್ಲೇ ಕೂತು, ಪಾದರಸದಂತೆ ಕಾರ್ಯನಿರ್ವಹಿಸುವ ವಿನಾಯಕ್ ರಾವ್ (ಕರಾವಳಿ ಜನರ ಪಾಲಿಗೆ ಅವರು ವಿನಾಯಕಣ್ಣ ಎಂದೇ ಖ್ಯಾತರು) ಇದರ ಹಿಂದಿನ ಶಕ್ತಿ. ಆರೋಗ್ಯ, ಶಿಕ್ಷಣ, ಸ್ವಾವಲಂಬನೆ, ಮಹಿಳಾ ಸಬಲೀಕರಣ, ಸುಸ್ಥಿರ ಅಭಿವೃದ್ಧಿ, ನವೀನ ಕೃಷಿ ಪ್ರಯೋಗ, ಸಂಸ್ಕೃತಿಯ ವೈಶಿಷ್ಟ್ಯ… ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಕನ್ಯಾಡಿ ಸೇರಿ ಬೆಳ್ತಂಗಡಿ ತಾಲೂಕು ಸಾಧಿಸಿರುವ ಅಭಿವೃದ್ಧಿ ರಾಜ್ಯಕ್ಕೇ ದಿಕ್ಸೂಚಿ. ಎರಡು ದಶಕಗಳ ಈ ಬದಲಾವಣೆಯ ಪಯಣ ರೋಚಕವಾದದ್ದು. ಬದುಕೇ ಸಾಕು ಅಂದುಕೊಂಡಿದ್ದ ವ್ಯಕ್ತಿ ತನ್ನ ನೋವು, ಕಷ್ಟವನ್ನು ಮೀರಿ ನಿಲ್ಲಲು ಸಮಾಜಮುಖಿಯಾದಾಗ ಬದಲಾದದ್ದು ಬರೀ ಅವರ ಬದುಕಲ್ಲ, ಸಾವಿರಾರು ಜನರ ಜೀವನ.
ಕನ್ಯಾಡಿಯ ಕೃಷಿ ಪರಿವಾರದಲ್ಲಿ ಜನಿಸಿದ ವಿನಾಯಕ್ ರಾವ್ರದ್ದು ದೊಡ್ಡ ಕುಟುಂಬ. ಎಂಟುಜನ ಮಕ್ಕಳಲ್ಲಿ (ಮೂರು ಜನ ಅಣ್ಣಂದಿರು, ನಾಲ್ಕು ಜನ ಅಕ್ಕಂದಿರು) ಇವರೇ ಕೊನೆಯವರು. ಉಜಿರೆಯ ಎಸ್ಡಿಎಂನಲ್ಲಿ ಪ್ರೌಢ ಶಿಕ್ಷಣ, ಮೂಡುಬಿದಿರೆಯಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಡಿಪ್ಲೋಮಾ ಪೂರ್ಣಗೊಳಿಸಿದ ಬಳಿಕ ಕೆಲಕಾಲ ಸಣ್ಣ ನೌಕರಿ ಮಾಡಿ, 1993ರಲ್ಲಿ ಇಲೆಕ್ಟ್ರಿಕಲ್ ಸರ್ವಿಸಸ್ನ ಅಂಗಡಿಯನ್ನು ತಾವೇ ಶುರು ಮಾಡಿದರು. ಬದುಕು ಹಳಿಗೆ ಬರತೊಡಗಿತ್ತು. ಈ ಮುಂಚೆ ತಂದೆಯನ್ನು (1991) ಕಳೆದುಕೊಂಡಿದ್ದರಿಂದ ಮುಂದಿನ ದಾರಿಯಲ್ಲಿ ಇವರೇ ದೃಢವಾಗಿ ಸಾಗಬೇಕಿತ್ತು. ಅಣ್ಣ-ಅಕ್ಕಂದಿರೆಲ್ಲ ಮದುವೆಯಾಗಿ, ಜೀವನೋಪಾಯಕ್ಕಾಗಿ ಬೇರೆ-ಬೇರೆ ಊರುಗಳಲ್ಲಿ ನೆಲೆಸಿದರು. ಕನ್ಯಾಡಿಯಲ್ಲಿ ಅಮ್ಮನ ಜತೆ ಇದ್ದದ್ದು ವಿನಾಯಕರೇ.
Smiley face
ಅದು 1996ನೇ ಇಸ್ವಿ. ವಿನಾಯಕರಿಗೆ 26 ವರ್ಷ. ಶಿಕ್ಷಣ ಮುಗಿದು, ಗಳಿಕೆ ಆರಂಭವಾಗಿತ್ತು. ಮನೆಯಲ್ಲಿ ಮದುವೆಯ ಚರ್ಚೆ ನಡೆದು, ಹೆಣ್ಣು ನೋಡುವ ಪ್ರಕ್ರಿಯೆಯೂ ಶುರುವಾಗಿತ್ತು. ಅದಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸಕ್ರಿಯವಾಗಿದ್ದ ಇವರು ಒಂದು ನಿಮಿಷವೂ ವ್ಯರ್ಥ ಮಾಡದೆ ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು. ಪುಟ್ಟ ಗ್ರಾಮವಾದ್ದರಿಂದ ಲೋ ವೋಲ್ಟೇಜಿನ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತಿತ್ತು. ಅದೊಂದು ಮಧ್ಯಾಹ್ನ, ವೋಲ್ಟೇಜ್ ಸಮಸ್ಯೆ ಸರಿಮಾಡಲು ಟ್ರಾನ್ಸ್ ಫಾರ್ಮರ್ ಕಂಬ ಹತ್ತಿದಾಗ ಇವರು 250ವೋಲ್ಟ್ನ
ಔಟ್ಪುಟ್ ಮುಟ್ಟುವ ಬದಲು 11 ಸಾವಿರ ವೋಲ್ಟ್ನ ಇನ್ಪುಟ್ನ್ನು ರ್ಸ³ಸಿದ್ದರು! ಕ್ಷಣಾರ್ಧದಲ್ಲೇ ನೆಲಕ್ಕೆ ಬಿದ್ದಾಗ ಜೋರು ಪೆಟ್ಟಾಗಿದ್ದು ಬೆನ್ನಿಗೆ. ಅಲ್ಲಿಂದ ಅವರನ್ನು ವಾಹನದಲ್ಲಿ ಹಾಕಿಕೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಹೇಳಿದ್ದುspinal cord injury! ಅದೂ t12 ಸ್ವರೂಪದ್ದು (ಹೊಕ್ಕಳದಿಂದ ದೇಹದ ಕೆಳಭಾಗದ ಸ್ಪರ್ಶಜ್ಞಾನ ಮತ್ತು ನಿಯಂತ್ರಣವೇ ಇರುವುದಿಲ್ಲ. ಕಾಲಿಗೆ ಆಕಸ್ಮಾತ್ ಪೆಟ್ಟಾದರೆ, ಗಾಯವಾಗಿ ರಕ್ತಸ್ರಾವವಾದರೂ ಅರಿವಿಗೆ ಬರುವುದಿಲ್ಲ. ಇನ್ನೂ ದೊಡ್ಡ ಸಮಸ್ಯೆ ಎಂದರೆ ಮೂತ್ರ ಮತ್ತು ಮಲ ವಿಸರ್ಜನೆಯದ್ದು. ಎರಡು ಗಂಟೆಗಿಂತ ಹೆಚ್ಚು ಅವಧಿ ಒಂದೇ ಕಡೆ ಮಲಗಿದರೆ ಚರ್ಮ ಕೊಳೆಯಲಾರಂಭಿಸಿ, ರಂಧ್ರ ಉಂಟು ಮಾಡುತ್ತದೆ. ಹೆಚ್ಚು ಹೊತ್ತು ಕುಳಿತುಕೊಳ್ಳುವುದು ಕಷ್ಟಕರ. ಆಗಾಗ ಆವರಿಸಿಕೊಳ್ಳುವ ಚಳಿಜ್ವರ ಪ್ರಾಣ ಹಿಂಡುತ್ತದೆ). ಆಸ್ಪತ್ರೆಗೆ ದಾಖಲಿಸಿದಾಗ ರಕ್ತವಾಂತಿಯೂ ಆರಂಭವಾಗಿತ್ತು. ವೈದ್ಯರು ಕೂಡಲೇ t12 ಬೋನ್ ರಿಲೋಕೇಟ್ ಮಾಡಲು ಶಸ್ತ್ರಚಿಕಿತ್ಸೆ ನಡೆಸಿದರು. ಎತ್ತರದಿಂದ ಬಿದ್ದಿರುವುದರಿಂದ ಜೋರಾದ ಪೆಟ್ಟು ಆಗಿರಬಹುದು. ನಾಲ್ಕಾರು ದಿನಗಳಲ್ಲಿ ಸರಿ ಹೋಗಬಹುದು ಎಂದೇ ನಂಬಿದ್ದ ವಿನಾಯಕರಿಗೆ ವೈದ್ಯರು ‘ಇನ್ನು ನೀವು ನಡೆದಾಡಲು ಸಾಧ್ಯವೇ ಇಲ್ಲ’ ಎಂದು ಹೇಳಿದಾಗ ಸಿಡಿಲು ತಾಗಿದಂತಾಯಿತು. ಇಡೀ ದಿನ ಬಿಕ್ಕಿ ಬಿಕ್ಕಿ ಅತ್ತರು. ಗೆಳೆಯರು ಸಮಾಧಾನ ಹೇಳಿದರೂ ಮನಸ್ಸು ಅದ್ಯಾವುದನ್ನು ಕೇಳದಂಥ ಸ್ಥಿತಿಗೆ ತಲುಪಿಬಿಟ್ಟಿತ್ತು.
‘ಹಾಸಿಗೆಯಿಂದ ಎದ್ದು ಗಾಲಿಕುರ್ಚಿಯಲ್ಲಿ ಕುಳಿತುಕೊಳ್ಳಲು ಆಗುವರೆಗಾದರೂ ಆಸ್ಪತ್ರೆಯಲ್ಲೇ ಇರಬೇಕು’ ಎಂದು ವೈದ್ಯರು ಹೇಳಿದಾಗ ಬೇರೆ ಆಯ್ಕೆಯೇ ಇರಲಿಲ್ಲ. ಈ ಘಟನೆ ನಡೆಯುವ ಒಂಬತ್ತು ತಿಂಗಳ ಹಿಂದಷ್ಟೇ ತಾಯಿಯನ್ನೂ ಕಳೆದುಕೊಂಡಿದ್ದರು. ಹಾಗಾಗಿ, ಮುಂಬೈನಿಂದ ಬಂದ ಅಣ್ಣಂದಿರು, ಅಕ್ಕಂದಿರು ಇವರ ಆರೈಕೆಯಲ್ಲಿ ತೊಡಗಿದರು. ಮೂರು ತಿಂಗಳ ಆಸ್ಪತ್ರೆ ವಾಸ, ಹಲವು ವಿಧವಾದ ಚಿಕಿತ್ಸೆಗಳು. ಪರಿಣಾಮ, ಹಾಸಿಗೆಯಿಂದ ಎದ್ದು ಕುಳಿತುಕೊಳ್ಳಲು ಸಾಧ್ಯವಾಯಿತು. ಬದುಕಿನ ಈ ಸ್ಥಿತ್ಯಂತರಕ್ಕೆ ಒಗ್ಗಿಕೊಳ್ಳುವುದು ತುಂಬ ಕಷ್ಟವಾಗಿತ್ತು. ಮನೆಯವರು ಈ ಕಹಿವಾಸ್ತವವನ್ನು ಹೇಗೋ ಒಪ್ಪಿಕೊಂಡರು. ಬಳಿಕ ನೆಲಮಂಗಲ ಸೇರಿ ಹಲವೆಡೆ ಚಿಕಿತ್ಸೆ ಪಡೆದರು. ನಾಲ್ಕು ವರ್ಷಗಳ ಕಾಲ ಹೀಗೇ ಕಳೆಯಿತು. ಮುಂಬೈಯ ಅಣ್ಣನ ಮನೆಗೆ ವಿಶ್ರಾಂತಿಗೆ ಹೋದರು. ಆದರೆ, ಸದಾಕಾಲ ಚಟುವಟಿಕೆಯಲ್ಲಿ ಇರುತ್ತಿದ್ದ ಇವರಿಗೆ ಒಂದೇ ಕಡೆ ಕೂಡುವುದು ಹಿಂಸೆಯಾಗಿ ಪರಿಣಮಿಸಿತು. ಜೀವನವೇ ಬೇಡವೆನಿಸತೊಡಗಿತು. ಆಗ ಆತ್ಮೀಯರಾದ ಕೃಷ್ಣಭಟ್ಟರಿಗೆ ಪತ್ರಬರೆದು ‘ನಾನು ನನ್ನನ್ನೇ ಕಳೆದುಕೊಂಡಿದ್ದೇನೆ, ಜೀವನ ಭಾರವೆನಿಸುತ್ತಿದೆ’ ಎಂದು ಮನದ ವ್ಯಥೆ ತೋಡಿಕೊಂಡರು. ಅದಕ್ಕೆ ಉತ್ತರ ಬರೆದ ಕೃಷ್ಣಭಟ್ಟರು, ‘ನೀನು ನಿನ್ನ ಬಗ್ಗೆಯೇ ಯೋಚಿಸುವುದನ್ನು ಬಿಡು. ನಿನಗಿಂತ ಕಷ್ಟದಲ್ಲಿ ಇರುವವರನ್ನು ನೋಡು’ ಎಂದು ಹುರಿದುಂಬಿಸಿದರು. ಆ ಮಾತು ಇವರಲ್ಲಿ ಹೊಸ ಸ್ಥೈರ್ಯ ತುಂಬಿ, ಸಮಾಜದ ಕಡೆಗೆ ನೋಡುವಂತೆ ಮಾಡಿತು.
ಮೂರು ತಿಂಗಳ ಮುಂಬೈವಾಸದ ಬಳಿಕ ಕನ್ಯಾಡಿಗೆ ಮರಳಿದವರೇ ಸಮಾನಮನಸ್ಕರು ಒಂದೆಡೆ ಸೇರಲು ‘ಸಂಘಮಂಡಳಿ’ಯನ್ನು ಆರಂಭಿಸಿದರು. ಊರಿನ ದೊಂಪದ ಬಲಿ (ಗ್ರಾಮ ದೈವಗಳಿಗೆ ನಡೆಸುವ ಭೂತಕೋಲ) ವ್ಯವಸ್ಥಿತವಾಗಿ ನಡೆಯುತ್ತಿರಲಿಲ್ಲ. ಅದಕ್ಕೊಂದು ತಂಡ ಸ್ಥಾಪಿಸಿ, ಕೊರತೆಗಳನ್ನು ನೀಗಿಸಿದರು. ಗ್ರಾಮ ಮತ್ತು ಸುತ್ತಮುತ್ತಲಿನವರು ರಕ್ತದ ಅವಶ್ಯಕತೆಗಾಗಿ ಪ್ರತಿ ಬಾರಿ ಮಂಗಳೂರಿಗೆ ಧಾವಿಸುವಂತಾಗಬಾರದು ಎಂದು ‘ರಕ್ತನಿಧಿ’ ಸ್ಥಾಪಿಸಿದರು. ಪರಿಣಾಮ, ರಕ್ತದಾನ ಮಾಡುವ ದೊಡ್ಡ ತಂಡವೇ ಹುಟ್ಟಿಕೊಂಡಿದ್ದು, ಅವಶ್ಯಕತೆ ಬಿದ್ದಾಗ ರೋಗಿಗಳ ನೆರವಿಗೆ ಧಾವಿಸಿ ಬರುತ್ತದೆ. 2001ರಲ್ಲಿ ಶಾರದೋತ್ಸವ ನಡೆಯಿತು. ಅದೇ ವರ್ಷ ಪೂರ್ತಿಯಾಗಿ ಸಾಮಾಜಿಕ ಜೀವನಕ್ಕೆ ಹೊರಳಿದ ವಿನಾಯಕರು 2004ರಲ್ಲಿ ಸೇವಾ ಭಾರತಿ ಆರಂಭಿಸಿದರು. ಅಖಿಲ ಭಾರತ ಮಟ್ಟದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಸೇವಾ ಭಾರತಿಯನ್ನು ನೆಲ್ಯಾಡಿಯಂಥ ಪುಟ್ಟಗ್ರಾಮಕ್ಕೂ ತಂದು, ಕಳೆದ ಹದಿನೈದು ವರ್ಷಗಳಲ್ಲಿ ಆರೋಗ್ಯ ಮತ್ತು ರಕ್ತದಾನ ಶಿಬಿರ, ಬಡ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ನೆರವು ನೀಡುತ್ತ ನೊಂದವರ ಮೊಗದಲ್ಲಿ ನಗು ಅರಳಿಸುತ್ತ ತಾವು ಅಂತರಂಗದ ಖುಷಿಯನ್ನು ಅನುಭವಿಸ ತೊಡಗಿದರು. 2014ರಲ್ಲಿ ಗ್ರಾಮವಿಕಾಸದ ಪರಿಕಲ್ಪನೆಯೂ ಅನುಷ್ಠಾನಗೊಂಡಿತು.
ಚಟುವಟಿಕೆಗಳು ಹೆಚ್ಚಿದಂತೆಲ್ಲ ಅದಕ್ಕೆ ಮತ್ತಷ್ಟು ರಚನಾತ್ಮಕ ರೂಪ ನೀಡಿ, ವಿವಿಧ ಘಟಕಗಳನ್ನು ಸ್ಥಾಪಿಸಿದರು. ಪರಿಣಾಮ, 55 ಗ್ರಾಮಗಳಲ್ಲಿ ಜನಸೇವೆಯ ಕಾರ್ಯಗಳು ವಿಸ್ತಾರಗೊಂಡಿವೆ. ಅನಾರೋಗ್ಯದಿಂದ ಬಳಲುತ್ತಿರುವ ಬಡರೋಗಿಗಳಿಗೆ ನೆರವಾಗಲು ತನ್ಮೂಲಕ ಆರೋಗ್ಯಪೂರ್ಣ ದೇಹ, ಮನಸ್ಸನ್ನು ನಿರ್ವಿುಸಲು ಆರೋಗ್ಯ ಭಾರತಿ, ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಶಿಕ್ಷಣ ಒದಗಿಸಲು ಬಾಲಭಾರತಿ, ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸಲು ಯಕ್ಷ ಭಾರತಿ, ಸಾವಯವ ಕೃಷಿಯನ್ನು ಪ್ರೋತ್ಸಾಹಿಸಲು ಧರಿತ್ರಿ ಕೃಷಿಕರ ಸಂಘ, ತೆಂಗು ಬೆಳೆಗಾರರ ಸ್ವಾವಲಂಬಿ ಜೀವನಕ್ಕಾಗಿ ಧಾರಿಣಿ ತೆಂಗು ಬೆಳೆಗಾರರ ಒಕ್ಕೂಟ, ಮಹಿಳಾ ಸಬಲೀಕರಣಕ್ಕಾಗಿ ದುರ್ಗಾ ಮಾತೃ ಮಂಡಳಿ, ವಿವಿಧ ಅಂಗವೈಕಲ್ಯಕ್ಕೆ ಒಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ‘ಸಕ್ಷಮ’, ಸ್ವಸಹಾಯ ಗುಂಪುಗಳ ಸಂಘಟನೆಗಾಗಿ ‘ಅಭ್ಯುದಯ’ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಹೀಗೆ ಸಮಾಜದ ಎಲ್ಲ ರಂಗಗಳನ್ನು ಸಶಕ್ತಗೊಳಿಸುವ ಪ್ರಯೋಗ ಅತ್ಯಂತ ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು, ಗ್ರಾಮಗಳು ತಮ್ಮ ಅಂತಃಸತ್ವವನ್ನು ಕಂಡುಕೊಳ್ಳುತ್ತಿವೆ ಎಂಬುದು ತುಂಬ ಖುಷಿ ನೀಡುವ ಸಂಗತಿ.
ಇಷ್ಟೆಲ್ಲ ಚಟುವಟಿಕೆಗಳ ನಡುವೆ ದಣಿವರಿಯದಂತೆ ಕಾರ್ಯನಿರ್ವಹಿಸುತ್ತ ಸಾಗಿದ ವಿನಾಯಕರು 2017ರಲ್ಲಿ ತಮಿಳುನಾಡಿನ ವೆಲ್ಲೂರಿಗೆ ಹೋಗಿ ಬೆನ್ನುಮೂಳೆ ಮೂರಿತಕ್ಕೊಳಗಾದವರಿಗೆ ನೀಡುವ ಪುನಶ್ಚೇತನ ಕೋರ್ಸ್ ನಲ್ಲಿ ಪಾಲ್ಗೊಂಡರು. ಇಪ್ಪತ್ತು ದಿನಗಳ ಅಲ್ಲಿನ ಚಿಕಿತ್ಸೆ ಬಹು ಪರಿಣಾಮಕಾರಿ ಎನಿಸಿತು. ದಕ್ಷಿಣ ಕನ್ನಡದಲ್ಲೂ ಇಂಥ ಪುನಶ್ಚೇತನ ಕೇಂದ್ರ ಆರಂಭಿಸಿ, ಆ ಮೂಲಕ ಬೆನ್ನುಮೂಳೆ ಮುರಿತಕ್ಕೊಳಗಾದವರನ್ನು ಮುಖ್ಯವಾಹಿನಿಗೆ ಕರೆತರಬೇಕು ಎಂದು ಸಂಕಲ್ಪಿಸಿದರು. ಇವರು ಕಂಡ ಕನಸು ದೊಡ್ಡದಾಗಿತ್ತು. ಅದಕ್ಕೆ ಬೇಕಾಗುವ ಹಣಕಾಸು ಸಂಪನ್ಮೂಲ, ಸಿಬ್ಬಂದಿ ಹೊಂದಿಸುವುದು ಸುಲಭದ ಮಾತಾಗಿರಲಿಲ್ಲ. ಆಗ ಇವರ ನೆರವಿಗೆ ಬಂದಿದ್ದು ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಎಪಿಡಿ (The Association of People with Disability, India) ಸಂಸ್ಥೆ. ಜಾಗದ ಹುಡುಕಾಟ ನಡೆಸಿದಾಗ ಆ ವಿಘ್ನ ನಿವಾರಕನಾದ ಗಣೇಶನೇ ಆಶೀರ್ವದಿಸಿದ. ಕೊಕ್ಕಡ ಗ್ರಾಮದ ಸುಪ್ರಸಿದ್ಧ ಸೌತಡ್ಕ ಶ್ರೀಮಹಾಗಣಪತಿ ದೇವಸ್ಥಾನದ ಎದುರಿನಲ್ಲಿರುವ ದೇವಸ್ಥಾನ ಟ್ರಸ್ಟ್ನ ಕಟ್ಟಡದಲ್ಲಿ 2018ರ ಸೆಪ್ಟೆಂಬರ್ನಲ್ಲಿ ‘ಸೇವಾಧಾಮ’ ಉದ್ಘಾಟನೆಗೊಂಡಿತು. ಬೆನ್ನು ಮೂಳೆ ಮುರಿತಕ್ಕೊಳಗಾದವರ ಸಾಮಾಜಿಕ ಪುನಶ್ಚೇತನಕ್ಕೆ ಶ್ರಮಿಸುತ್ತಿರುವ ಸೇವಾಧಾಮ ಇಂಥವರನ್ನು ಗುರುತಿಸಿ ದ್ವಿತೀಯ ಹಂತದ ತೊಡಕುಗಳನ್ನು ತಡೆಗಟ್ಟಿ, ಅಗತ್ಯ ವೈದ್ಯಕೀಯ ನೆರವು ನೀಡುತ್ತಿದೆ. ಇದಕ್ಕಾಗಿ ನುರಿತ ಸಿಬ್ಬಂದಿ ಇದ್ದಾರೆ. ಸ್ವಾವಲಂಬಿ ಬದುಕು ಕಲ್ಪಿಸಲು ವೃತ್ತಿ ಕೌಶಲ ತರಬೇತಿ, ಚಲನಶೀಲತೆ ಹೆಚ್ಚಿಸಲು ಅಗತ್ಯ ವೈದ್ಯಕೀಯ ನೆರವು ಕಲ್ಪಿಸಲಾಗುತ್ತಿದೆ. 123 ಜನರು ಈವರೆಗೆ ಚೇತರಿಸಿಕೊಂಡು ತೆರಳಿದ್ದು, ಆತ್ಮವಿಶ್ವಾಸದಿಂದ ಬದುಕು ಸಾಗಿಸುತ್ತಿದ್ದಾರೆ. ಹಾಸಿಗೆಯಲ್ಲೇ ಮಲಗಿರುವವರನ್ನು ಗಾಲಿಕುರ್ಚಿಯಲ್ಲಿ ಕೂಡುವಂತೆ, ವ್ಹೀಲ್ಚೇರ್ನಲ್ಲಿ ಇರುವವರನ್ನು ಇನ್ನು ಹೆಚ್ಚು ಸ್ವಾವಲಂಬಿಯಾಗುವಂತೆ ಮಾಡಲಾಗಿದೆ. ಇದಕ್ಕೆಲ್ಲ ಅಗತ್ಯ ನೆರವು, ಸಹಯೋಗವನ್ನು ಎಪಿಡಿ ನೀಡುತ್ತಿದ್ದು, ವಿನಾಯಕರು ರೋಗಿಗಳ ಯೋಗಕ್ಷೇಮ, ಪುನಶ್ಚೇತನದ ನಿಗಾ ವಹಿಸುತ್ತಾರೆ. ಹಣಕಾಸಿನ ಕೊರತೆ ಉಂಟಾದಾಗ ಸಹೃದಯ ದಾನಿಗಳ ಮೂಲಕ ದೇಣಿಗೆ ಸಂಗ್ರಹಿಸಿ, ಕೆಲಸ ನಿಲ್ಲದಂತೆ ಮುಂದುವರಿಸುತ್ತಾರೆ. ಇದಕ್ಕಾಗಿ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಸವನ್ನೂ ಮಾಡುತ್ತಾರೆ (ಸೇವಾಭಾರತಿ ಮತ್ತು ಅದರ ಅಂಗಸಂಸ್ಥೆಯಾದ ಸೇವಾಧಾಮ ನಡೆಸುವ ಚಟುವಟಿಕೆಗಳಿಗೆ ನೆರವಾಗುವ ದಾನಿಗಳಿಗೆ 80ಜಿ ಸೌಲಭ್ಯವಿದೆ).
‘ನಮ್ಮ ಸೌತಡ್ಕ ಗಣೇಶೆ ಪೂರ ಸಂಕಟೊಲೆನ್ ಕಳೇಂಡ, ಈ ವಿನಾಯಕೆ ಬದ್ಕ್ಗ್ ಪೊಸ ಭರವಸೆನ್ ದಿಂಜಾವೇರ್’ (ಸೌತಡ್ಕ ಗಣೇಶ ನಮ್ಮ ಸಂಕಟಗಳನ್ನು ಕಳೆದರೆ ಈ ವಿನಾಯಕರು ಜೀವನಕ್ಕೆ ಹೊಸ ಭರವಸೆ ತುಂಬುತ್ತಾರೆ) ಎನ್ನುವ ಸ್ಥಳೀಯರು ಇವರ ಓಡಾಟ, ಕಾರ್ಯಚಟುವಟಿಕೆ, ಶಕ್ತಿ, ಉತ್ಸಾಹ ಕಂಡು ಬೆರಗಾಗಿದ್ದಾರೆ. ಮೊನ್ನೆ (ಜುಲೈ 29)ಯಷ್ಟೇ 49ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ವಿನಾಯಕರು ದಿವ್ಯಾಂಗರ ಬಾಳಲ್ಲಿ ಮತ್ತಷ್ಟು ಸಕಾರಾತ್ಮಕ ಬದಲಾವಣೆ ತರಲು ಉತ್ಸುಕರಾಗಿದ್ದು, ನಿಜಾರ್ಥದಲ್ಲಿ ಸಮಾಜಕ್ಕೆ ಬೆನ್ನೆಲುಬು ಆಗಿದ್ದಾರೆ. ಇಂಥವರ ಬದುಕು ಸಮಾಜದ ಸ್ವಾರ್ಥವನ್ನು ಕಳೆಯಲಿ, ದಿವ್ಯಾಂಗರಿಗೂ ಶುದ್ಧ ಅಂತಃಕರಣದ, ಭರವಸೆಯ ಬಾಳು ಸಿಗುವಂತಾಗಲಿ. ಆಗಲೇ ಆ ಗಣೇಶನೂ ಸಂತೃಪ್ತಿ ಹೊಂದಿ, ಈ ವಿನಾಯಕರ (98440-92350) ಹೋರಾಟಕ್ಕೆ ಸಾರ್ಥಕತೆ ಸಿಗಲು ಸಾಧ್ಯ. ಏನಂತೀರಿ?
ಕೃಪೆ :ರವೀಂದ್ರ ದೇಶ್ ಮುಖ್
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment