ದಿನಕ್ಕೊಂದು ಕಥೆ 969

*🌻ದಿನಕ್ಕೊಂದು ಕಥೆ🌻*
*ಸೋಲು ಬದುಕಿನ ಕೊನೆಯಲ್ಲ, ಅದು ಗೆಲುವಿನ ಮುನ್ನುಡಿ*


ನಮ್ಮೆಲ್ಲರಿಗೂ ಇಂದು ಬೇಕಾಗಿರುವುದು ಸಮಸ್ಯೆಗಳಿಲ್ಲದ ಜೀವನ. ಅದು ಅಸಾಧ್ಯ ಎಂದು ಗೊತ್ತಿದ್ದರೂ ನಾವು ಸಮಸ್ಯೆಗಳನ್ನು ಇಷ್ಟಪಡುವುದಿಲ್ಲ. ಆದರೆ ಸಮಸ್ಯೆಗಳು ಮಾರುವೇಷದಲ್ಲಿ ಬರುವ ಅವಕಾಶಗಳು. ಕಡಿದು ಕೆತ್ತಲ್ಪಟ್ಟ ಕಲ್ಲೇ ವಿಗ್ರಹವಾಗುವುದೆಂಬ ಅರಿವಿದ್ದರೂ ನೋವೇ ಆಗದೇ ಮೂರ್ತಿಯಾಗಬೇಕೆಂದು ಬಯಸುವವರೇ ಜಾಸ್ತಿ. ಏಕೆಂದರೆ ಈ ಜಗತ್ತಿನಲ್ಲಿ ಸಮಸ್ಯೆಗಳೇ ಸಾಧನೆಗೆ ಮೂಲವೆಂಬುದರ ಅರಿವಿದ್ದರೂ ಹಳಹಳಿಸುವವರೇ ಹೆಚ್ಚು. ಸಮಸ್ಯೆ ದೊಡ್ಡದಾದಷ್ಟೂ ಪರಿಹಾರ ದೊಡ್ಡದಿರುತ್ತದೆ. ಪರಿಹಾರ ದೊಡ್ಡದಾದಷ್ಟೂ ನಾವು ಹರಿಸುವ ಬೆವರು, ಪಡುವ ಕಷ್ಟ ಹೆಚ್ಚಾಗಿರುತ್ತದೆ. ಹಿರಿದನ್ನು ಸಾಧಿಸುವ ಬಯಕೆಯಿದ್ದವರು ಏರಿಳಿತಗಳ ದುರ್ಗಮ ಹಾದಿಯಲ್ಲಿ ಸಾಗಲೇಬೇಕು. ಅಂದಾಗ ಮಾತ್ರ ಯಶಸ್ಸು ಕೂಡ ದೊಡ್ಡ ಪ್ರಮಾಣದಲ್ಲಿ ಸಿಗುತ್ತದೆ. ಆದರೆ ನಾವಿದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ.

ಆದರೆ ನೆನಪಿರಲಿ, ತೊಂದರೆಗಳನ್ನು, ಕಷ್ಟಗಳನ್ನು ಅವಕಾಶ ಎಂದು ನೋಡಿದವರೇ ಇಂದು ಜಗತ್ತಿನಲ್ಲಿ ಯಶಸ್ವಿಯಾಗಿದ್ದಾರೆ. ಬಿಸಿಲಿನ ಧಗೆಗೆ ‘ಅಬ್ಬಾ ದರಿದ್ರ ಬಿಸಿಲು’ ಎನ್ನದವರುಂಟೇ? ಆದರೆ ಕೂಲರ್, ಎಸಿ ಸಂಶೋಧಿಸಿ ಆ ಸಮಸ್ಯೆಗೆ ಯಾರೋ ಪರಿಹಾರ ಕಂಡುಹಿಡಿದರು. ಚಳಿಗಾಲವನ್ನು ಶಪಿಸುವವರು ಶಪಿಸುತ್ತಲೇ ಇದ್ದರು. ಆದರೆ ಯಾರೋ ಒಬ್ಬ ಹೀಟರ್ ಕಂಡುಹಿಡಿದ. ಸೊಳ್ಳೆಗಳು ಯಾರಿಗೆ ಸಮಸ್ಯೆಯಲ್ಲ? ಎಲ್ಲರೂ ಗೊಣಗುತ್ತಲೇ ಇದ್ದರು. ಆದರೆ ಒಬ್ಬನಿಗೆ ಸೊಳ್ಳೆಬತ್ತಿಗಳನ್ನು ಮಾಡುವ ಐಡಿಯಾ ಹೊಳೆಯಿತು. ಈಗ ಆ ಎಲ್ಲ ಕಂಪನಿಗಳು ಅಪಾರ ಹಣ ಸಂಪಾದಿಸುತ್ತಿವೆ. ಹಾಗಾಗಿ ಯಾವುದಾದರೂ ಸಮಸ್ಯೆ, ನೋವು, ದುಃಖ ನಮ್ಮನ್ನು ಕಾಡುತ್ತಿದ್ದರೆ ಆಕಾಶ ಕಳಚಿ ತಲೆಯ ಮೇಲೆ ಬಿದ್ದವರಂತೆ ಮಾಡುವ ಅಗತ್ಯವಿಲ್ಲ. ಕಾರಣ ಅದೊಂದು ವೇಷ ಮರೆಸಿಕೊಂಡು ಬಂದ ಸುವರ್ಣಾವಕಾಶ. ಅದು ಸಮಸ್ಯೆ ಎಂದು ನಮಗೆ ಆರಂಭದಲ್ಲಿ ಅನ್ನಿಸುತ್ತದೆ ಅಷ್ಟೇ. ಇದೊಂದು ಸ್ಥಿತಿ. ಅನಿವಾರ್ಯ ಸ್ಥಿತಿ. ಬದುಕಿನಲ್ಲಿ ಸಮಸ್ಯೆಗಳೇ ಇಲ್ಲ ಎಂದಾದರೆ ಅದು ಬದುಕೇ ಅಲ್ಲ. ಜಗತ್ತಿನ ಎಲ್ಲ ಸಂಶೋಧನೆಗಳೂ ಆಗಿದ್ದರ ಹಿಂದೆ ಒಂದಲ್ಲ ಒಂದು ಸಮಸ್ಯೆಗೆ ಪರಿಹಾರ ಹುಡುಕುವ ಉದ್ದೇಶವೇ ಇತ್ತು. ಏಕೆಂದರೆ ಸಮಸ್ಯೆಯಿಲ್ಲದೆ ಯಾರೂ ಪರಿಹಾರ ಹುಡುಕುವ ಗೋಜಿಗೆ ಹೋಗುವುದಿಲ್ಲ. ‘ಅವಶ್ಯಕತೆಯೇ ಆವಿಷ್ಕಾರದ ತಾಯಿ’ ಎಂಬುದನ್ನು ನಾವೆಲ್ಲ ಒಪ್ಪುತ್ತೇವೆ. ಆದರೆ ಹೊಸ ಸಾಧ್ಯತೆಗಳಿಗೆ ನಮ್ಮನ್ನು ನಾವು ತೆರೆದುಕೊಳ್ಳಲು ಅಳುಕುತ್ತೇವೆ. ಕಾರಣ ಆತ್ಮವಿಶ್ವಾಸದ ಕೊರತೆ.

ನಮ್ಮೆಲ್ಲರಲ್ಲೂ ಅಪಾರ ಸಾಮರ್ಥ್ಯ ಅಡಗಿದೆ ಎಂಬ ಮಾತನ್ನು ಬಹಳ ಹಿಂದಿನಿಂದಲೂ ಕೇಳುತ್ತ ಬಂದಿದ್ದೇವೆ. ಈ ಸಾಮರ್ಥ್ಯದ ಬಲದಿಂದ ನಮಗೇನು ಬೇಕೋ ಅದನ್ನು ಪಡೆದುಕೊಳ್ಳುವುದು ಸಾಧ್ಯ. ಆದರೆ ಬಹಳ ಜನರಿಗೆ ತಮ್ಮೊಳಗಿನ ಶಕ್ತಿಯ ಅರಿವೇ ಇರುವುದಿಲ್ಲ. ಅಲಿಬಾಬಾನಿಗೆ ಸಿಕ್ಕ ಸಂಪದ್ಭರಿತ ಗುಹೆ ಅದು. ಆದರೆ ಅದಕ್ಕೊಂದು ಮಂತ್ರವಿದೆ. ಮಂತ್ರವಿಲ್ಲದೆ ಹೋದರೆ ಗುಹೆಯ ಬಾಯಿ ತೆರೆಯದು. ನಮ್ಮ ಮನಸ್ಸಿನ ಅಪಾರ ಶಕ್ತಿಯ ಕೀಲಿ ಯಾವುದೆಂದರೆ ವಿಲ್​ಪವರ್ ಅಥವಾ ನಂಬಿಕೆ. ತಮ್ಮ ‘ಪವರ್ ಆಫ್ ಸಬ್​ಕಾನ್ಷಿಯಸ್ ಮೈಂಡ್’ ಎಂಬ ಪ್ರಸಿದ್ಧ ಪುಸ್ತಕದಲ್ಲಿ ಲೇಖಕ ಜೋಸೆಫ್ ಮರ್ಫಿ ಹೇಳುತ್ತಾರೆ, ‘ಒಂದು ಉಕ್ಕಿನ ತುಂಡನ್ನು ಆಯಸ್ಕಾಂತವಾಗಿ ಮಾರ್ಪಡಿಸಿದರೆ ಅದು ತನ್ನ ಭಾರಕ್ಕಿಂತ ಹನ್ನೆರಡು ಪಟ್ಟು ಹೆಚ್ಚು ಭಾರವನ್ನು ಎತ್ತಬಲ್ಲುದು. ಆದರೆ ಅದೇ ಉಕ್ಕಿನಲ್ಲಿರುವ ಆಯಸ್ಕಾಂತೀಯ ಶಕ್ತಿ ಹೋದರೆ ಒಂದು ಪುಟ್ಟ ಹಕ್ಕಿಗರಿಯಷ್ಟು ಭಾರವನ್ನೂ ಅದು ಎತ್ತಲಾರದು. ಅದೇ ರೀತಿ ಸಮಾಜದಲ್ಲೂ ಎರಡು ರೀತಿಯ ಜನರಿರುತ್ತಾರೆ. ಆಯಸ್ಕಾಂತದಂಥವರು ಮತ್ತು ಉಕ್ಕಿನ ತುಂಡಿನಂಥವರು. ತುಂಬು ವಿಶ್ವಾಸ ಮತ್ತು ನಂಬಿಕೆ ಇರುವ ಜನರು ಆಯಸ್ಕಾಂತದಂತೆ. ಇವರು ಎಂಥ ಪರಿಸ್ಥಿತಿಯಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ರಾತ್ರಿಯಾಗುವುದೇ ಬೆಳಗಾಗಲು ಎಂಬುದು ಇವರ ನಂಬಿಕೆ. ಮತ್ತದು ವಾಸ್ತವ ಕೂಡ. ಇನ್ನು ಯಾವಾಗಲೂ ಭಯ ಮತ್ತು ಸಂದೇಹಗಳಿರುವ ಮನುಷ್ಯರು ಮಾಮೂಲಿ ಉಕ್ಕಿನ ತುಂಡಿನಂತೆ. ಅವಕಾಶಗಳು ಬಂದಾಗ ನಾನು ವಿಫಲನಾಗುತ್ತೇನೆ, ಹಣ ಕಳೆದುಕೊಳ್ಳುತ್ತೇನೆ, ಜನರು ನನ್ನನ್ನು ನೋಡಿ ನಗುತ್ತಾರೆ ಎಂದೆಲ್ಲ ಯೋಚಿಸಿ ಅವರು ಸುಮ್ಮನಾಗಿಬಿಡುತ್ತಾರೆ. ಇಂತಹ ವ್ಯಕ್ತಿಗಳು ಬದುಕಿನಲ್ಲಿ ಬಹಳ ಮುಂದೆ ಹೋಗಲಾರರು, ಅವರು ಎಲ್ಲಿರುತ್ತಾರೋ ಅಲ್ಲಿಯೇ ಇರುತ್ತಾರೆ’.

ದೃಢನಿರ್ಧಾರ ಕೈಗೊಳ್ಳಲು ಮನಸ್ಸಿಗೆ ನಂಬಿಕೆ ಬೇಕು. ನಾವು ಯಾವಾಗಲೂ ಅವರಿವರು ಹೇಳಿದ ಮಾತುಗಳು, ಅಭಿಪ್ರಾಯಗಳು, ಸಂಪ್ರದಾಯಗಳು ಮತ್ತು ಸುತ್ತಲಿನ ವಾತಾವರಣದಿಂದ ರೂಪಿತಗೊಂಡ ನಮ್ಮದೇ ಯೋಚನೆಗಳಿಂದ ನಮ್ಮ ಸಾಮರ್ಥ್ಯವನ್ನು ಅಂದಾಜು ಮಾಡುತ್ತಿರುತ್ತೇವೆ. ಹಾಗಾಗಿ ನಮ್ಮನ್ನು ನಾವೇ ನಂಬಲು ಎಷ್ಟೋ ಸಂದರ್ಭದಲ್ಲಿ ಸಾಧ್ಯವಾಗುವುದಿಲ್ಲ. ಇಂತಹ ನೆಗೆಟಿವ್ ಯೋಚನೆಗಳನ್ನು ಬದಿಗಿಡುವುದು ಬಹಳ ಮುಖ್ಯ. ಎಡಿಸನ್, ಐನ್​ಸ್ಟೀನ್​ರಂತಹ ಮೇಧಾವಿಗಳು ಬೇರೆಯವರ ಅಭಿಪ್ರಾಯದ ಪ್ರಕಾರ ದಡ್ಡರೇ ಆಗಿದ್ದರು. ಆದರೆ ಅವರಿಗಿದ್ದ ಆತ್ಮವಿಶ್ವಾಸ, ತಮ್ಮ ಮೇಲೆ ತಮಗಿದ್ದ ನಂಬಿಕೆ ಅವರನ್ನು ವಿಶ್ವಮಾನ್ಯರನ್ನಾಗಿ ಮಾಡಿತು. ‘ನಿನ್ನನ್ನು ನೀನು ನಂಬದೇ ಹೋದರೆ ಮುಕ್ಕೋಟಿ ದೇವತೆಗಳನ್ನು ನಂಬಿದರೂ ಪ್ರಯೋಜನವಿಲ್ಲ’ ಎನ್ನುತ್ತಿದ್ದರು ಸ್ವಾಮಿ ವಿವೇಕಾನಂದರು.

ನಮ್ಮ ಮೇಲೆ ನಮಗೆ ನಂಬಿಕೆ ಇಲ್ಲದಿರುವುದರಿಂದಲೇ ನಾವು ಕನಸು ಕಾಣಲೂ ಹೆದರುತ್ತೇವೆ. ಆದರೆ ಸ್ವನಂಬಿಕೆ ಮತ್ತು ಕಠಿಣ ಪರಿಶ್ರಮ ಒಂದು ಅತ್ಯುತ್ತಮ ಕಾಂಬಿನೇಶನ್. ಇವೆರಡರಲ್ಲಿ ಯಾವುದು ಇಲ್ಲದಿದ್ದರೂ ಸಾಧನೆ ಸಾಧ್ಯವಿಲ್ಲ. ‘ಸಂಗೀತದ ರಾಜ’ ಎಂದು ಕರೆಯಿಸಿಕೊಂಡಿದ್ದ ಹಾಡುಗಾರ ಎಲ್ವಿಸ್ ಪ್ರಿಸ್ಲೆ ಅವರ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಆತ ಶಾಲೆಯಲ್ಲಿ ಸಾಧಾರಣ ವಿದ್ಯಾರ್ಥಿ ಎನಿಸಿಕೊಂಡವನು. ಜನರೆದುರು ಹಾಡಲು ಮುಜುಗರ ಪಡುತ್ತಿದ್ದವನು. ಅವನ ಶಾಲೆಯ ಸಂಗೀತ ಶಿಕ್ಷಕರೇ ಅವನಿಗೆ ಸಂಗೀತದ ಗಂಧಗಾಳಿಯಿಲ್ಲ ಎಂದು ಹೇಳಿದ್ದರು. ಆದರೆ ಎಲ್ವಿಸ್ ತನ್ನ ಸ್ವಪ್ರಯತ್ನದಿಂದ, ತನ್ನ ಮೇಲಿನ ನಂಬಿಕೆಯಿಂದ ಸಂಗೀತಲೋಕದ ರಾಜನೆನಿಸಿಕೊಂಡಿದ್ದು ಈಗ ಇತಿಹಾಸ. ‘ನಿನ್ನ ಕಂಠ ಚೆನ್ನಾಗಿಲ್ಲ’ ಎಂದು ಆಕಾಶವಾಣಿಯಿಂದ ತಿರಸ್ಕರಿಸಲ್ಪಟ್ಟ ಅಮಿತಾಭ್ ಬಚ್ಚನ್ ಎಂಬ ಉದ್ದನೆಯ ಬಿದಿರುಗಳದಂತಹ ತರುಣ ತನ್ನ ಆತ್ಮವಿಶ್ವಾಸ ಮತ್ತು ಸತತ ಪ್ರಯತ್ನದಿಂದ ರಾಜೇಶ್ ಖನ್ನಾ ಎಂಬ ಚಾಕಲೇಟ್ ಹೀರೋನನ್ನೂ ಹಿಂದಿಕ್ಕಿ ಬಾಲಿವುಡ್ ಸೂಪರ್​ಸ್ಟಾರ್ ಆಗಿಬಿಟ್ಟ! ರೇಡಿಯೋದವರು ತಿರಸ್ಕರಿಸಿದ ಅದೇ ದನಿ ಇಂದು ಕೇಳುಗರನ್ನು ಮೋಡಿ ಮಾಡುತ್ತಿದೆ! ಆ ಅಪರೂಪದ ದನಿಗೆ ಇಂದು ಕೋಟಿಕೋಟಿ ಕಿಮ್ಮತ್ತು. ಸಯಿಚಿರೋ ಹೊಂಡಾ ಎಂಬ ಯುವಕ ಟೊಯೊಟಾ ಕಂಪನಿಯಲ್ಲಿ ಇಂಜಿನಿಯರ್ ಹುದ್ದೆಯ ಸಂದರ್ಶನಕ್ಕೆ ಹೋದಾಗ ತಿರಸ್ಕರಿಸಲ್ಪಟ್ಟ. ಕೆಲಕಾಲ ನಿರುದ್ಯೋಗಿಯಾಗಿದ್ದ ಆತ ಬೇರೆ ಬೇರೆ ವ್ಯವಹಾರಗಳಿಗೆ ಕೈಹಾಕಿ ಕೊನೆಗೆ ತನ್ನದೇ ಆದ ಕಾರು ಕಂಪನಿಯೊಂದನ್ನು ಸ್ಥಾಪಿಸಿದ. ವಿಶ್ವ ಪ್ರಸಿದ್ಧ ಹೊಂಡಾ ಕಂಪನಿಯ ಮಾಲಿಕನ ಕಥೆ ಇದು. ಎರಡು ಬಾರಿ ಇಂಗ್ಲೆಂಡಿನ ಪ್ರಧಾನಿಯಾಗಿದ್ದ ವಿನ್​ಸ್ಟನ್ ರ್ಚಚಿಲ್ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದವರೂ ಹೌದು. ರ್ಚಚಿಲ್ ಶಾಲೆಯಲ್ಲಿದ್ದಾಗ ಅತೀ ಸಾಧಾರಣ ವಿದ್ಯಾರ್ಥಿ. ಆರನೇ ಗ್ರೇಡ್​ನಲ್ಲಿ ಅನುತ್ತೀರ್ಣರಾಗಿದ್ದರು. ಅವರ ರಾಜಕೀಯ ಜೀವನವೂ ಹತ್ತು ಹಲವು ಏಳುಬೀಳುಗಳಿಂದ ಕೂಡಿತ್ತು. ಆದರೆ ಅರವತ್ತು ದಾಟಿದ ನಂತರ ಅವರು ತಮ್ಮೆಲ್ಲ ಪ್ರಮುಖ ಸಾಧನೆಗಳನ್ನು ಮಾಡಿದರು. ನಿಜ ಅರ್ಥದಲ್ಲಿ ರ್ಚಚಿಲ್​ಗೆ ಅರವತ್ತು ಮರಳಿ ಅರಳುವ ವಯಸ್ಸು!!

ಆರಂಭದ ಹಿಂಜರಿಕೆ, ಅವಮಾನ, ತಿರಸ್ಕಾರಗಳನ್ನು ಮೀರಿ ಯಶಸ್ಸಿನ ತುತ್ತ ತುದಿಗೆ ಏರಿದ ಇಂತಹ ಸಾಧಕರ ಪಟ್ಟಿ ಮುಂದುವರಿಯುತ್ತಲೇ ಹೋಗುತ್ತದೆ. ಸೊನ್ನೆಯಿಂದ ಪ್ರಾರಂಭಿಸಿ ಜಗತ್ಪ್ರಸಿದ್ಧರಾದ ಅಪರೂಪದ ಈ ವ್ಯಕ್ತಿಗಳಿಂದ ನಾವು ಕಲಿಯಬೇಕಾದ ಪಾಠ ಇಷ್ಟೇ. ಯಾವ ಸೋಲೂ ಬದುಕಿನ ಕೊನೆಯಲ್ಲ, ಅದು ಹೊಸ ಗೆಲುವಿನ, ಹೊಸ ಬದುಕಿನ ಆರಂಭವಾಗಿರಬಹುದು. ತನ್ನನ್ನು ತಾನು ಒಪ್ಪಿಕೊಂಡವರಿಗೆ ಜಗತ್ತಿನ ಒಪ್ಪಿಗೆ, ತಿರಸ್ಕಾರ ಮುಖ್ಯವಾಗುವುದಿಲ್ಲ. ಅವರು ಜಗತ್ತನ್ನು ಒಪ್ಪಿಸುವ ಗೋಜಿಗೂ ಹೋಗುವುದಿಲ್ಲ. ನಿಧಾನವಾಗಿಯಾದರೂ ಸಮಾಜ ತಾನೇ ಅವರನ್ನು ಒಪ್ಪಿಕೊಳ್ಳುತ್ತದೆ. ಮತ್ತು ನಾವು ಎದುರಿಸಬೇಕಿರುವುದು ನಮ್ಮ ಭಯವನ್ನು, ನಮ್ಮ ಹಿಂಜರಿಕೆಯನ್ನು. ಅದಕ್ಕೆ ಬೇಕಿರುವ ಆಯುಧವೇ ನಂಬಿಕೆ. ಆರ್ಥರ್ ಆಶ್ಲೇ ಹೇಳುವಂತೆ ಯಶಸ್ಸಿನ ಕೀಲಿಕೈ ಸ್ವ ನಂಬಿಕೆ ಮತ್ತು ಆ ಆತ್ಮವಿಶ್ವಾಸ ಬರುವುದು ಸರಿಯಾದ ತಯಾರಿಯಿಂದ. ಆತ್ಮವಿಶ್ವಾಸದಿಂದ ನಮ್ಮಷ್ಟಕ್ಕೆ ನಾವು ಪ್ರಯತ್ನಪಡುತ್ತ ಸಾಗಿದರೆ ಗುರಿ ತಲುಪುತ್ತೇವೆ. ಆ ಗುರಿ ಸಣ್ಣ ಸರ್ಕಾರಿ ನೌಕರಿ ಹಿಡಿಯುವುದಾಗಿರಬಹುದು, ಐಎಎಸ್ ಅಧಿಕಾರಿಯಾಗುವುದಿರಬಹುದು, ಪುಟ್ಟ ಅಂಗಡಿ ಇಡುವುದು, ಹೊಸ ವ್ಯವಹಾರ ಮಾಡುವುದು, ಇಲ್ಲವೇ ಇದ್ದುದರಲ್ಲಿಯೇ ತೃಪ್ತಿಯಿಂದ ಬದುಕುವುದು, ನಾಲ್ಕು ಮಂದಿಗೆ ಉಪಕಾರಿಯಾಗುವುದು, ಸಾಹಿತ್ಯವೇ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧಿಸುವುದು ಏನಾದರೂ ಆಗಿರಬಹುದು. ಪ್ರತಿಯೊಂದು ಗುರಿಯೂ ಮುಖ್ಯವೇ. ಅದನ್ನು ಬೇರೆಯವರೊಂದಿಗೆ ಹೋಲಿಸಿ ನಿರಾಶರಾಗುವ ಅಗತ್ಯವಿಲ್ಲ. ಏಕೆಂದರೆ ನಮ್ಮ ಬದುಕಿನ ಪ್ರಧಾನ ಪಾತ್ರ ನಾವೇ. ಬನ್ನಿ, ಆತ್ಮವಿಶ್ವಾಸದಿಂದ ಮುನ್ನಡೆಯುವಾ.

ಕೃಪೆ: ದೀಪ ಹಿರೇಗುತ್ತಿ.ಲೇಖಕರು ಉಪನ್ಯಾಸಕರು, ಕವಯಿತ್ರಿ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059