ದಿನಕ್ಕೊಂದು ಕಥೆ 970
*🌻ದಿನಕ್ಕೊಂದು ಕಥೆ🌻*
*ಕೆಲಸದಲ್ಲಿ ಶ್ರದ್ಧೆ ಇರಲಿ.*
ಅದೊಂದು ದಿನ ಯೋಗಸಂಸ್ಥೆಯ ಕಾರ್ಯಕ್ರಮಕ್ಕೆ ನಾನು ಮತ್ತು ಮೈಸೂರಿನ ಪ್ರಸಿದ್ಧ ಯೋಗ ಗುರುಗಳು ಹೋಗಬೇಕಿತ್ತು. ಯೋಗಗುರುಗಳನ್ನು ಮೆಜೆಸ್ಟಿಕ್ನ ರೈಲು ನಿಲ್ದಾಣದಲ್ಲಿ ಬರ ಮಾಡಿಕೊಂಡು ಇನ್ನೇನು ಟ್ಯಾಕ್ಸಿ ಅಥವಾ ಆಟೋದಲ್ಲಿ ಹೋಗಬೇಕೆಂದುಕೊಂಡಾಗ ಟ್ಯಾಕ್ಸಿಯವರು ಬರೋಲ್ಲ ಅಂದ್ರು. ಮತ್ತು ಆಟೋದವರ ಹತ್ತಿರ ಕೇಳಿದಾಗ ಮೂರರಿಂದ ನಾಲ್ಕು ಪಟ್ಟು ಜಾಸ್ತಿ ಹಣ ಕೇಳಿದರು. ನಾವು ಇನ್ನೇನು ಅಲ್ಲೇ ಬಸ್ ನಿಲ್ದಾಣದಿಂದ, ಬಸ್ ಮೂಲಕ ಪ್ರಯಾಣ ಮಾಡಬೇಕು ಅನ್ನುವಷ್ಟರಲ್ಲಿ ಮತ್ತೊಬ್ಬ ಆಟೋದವರು ಬಂದು ‘ನೀವು ಎಲ್ಲಿಗೆ ಹೋಗಬೇಕು’ ಎಂದು ವಿಚಾರಿಸಿದರು. ನಮ್ಮ ಸ್ಥಳ ತಿಳಿಸಿದಾಗ ಆ ಆಟೋದವ ‘ಬನ್ನಿ ಸ್ವಾಮಿ ನಾನು ಕರೆದುಕೊಂಡು ಹೋಗುವೆ’ ಅಂದರು. ಹಣದ ಬಗ್ಗೆ ವಿಚಾರಿಸಿದಾಗ, ‘ಸ್ವಾಮಿ ನನಗೆ ಒಂದು ರೂಪಾಯಿಯೂ ಜಾಸ್ತಿ ಬೇಡ. ಮೀಟರ್ ಪ್ರಕಾರ ಎಷ್ಟು ಆಗುತ್ತೋ ಅಷ್ಟೇ ಕೊಡಿ’ ಅಂದ್ರು. ಆಟೋ ಏರಿ ಹೊರಟೆವು.
ಹಾಗೇ ಮಾತಾಡ್ತಾ ಅವರಿಗೆ ಕೇಳಿದೆವು-‘ಎಷ್ಟು ವರ್ಷಗಳಿಂದ ಆಟೋ ಓಡಿಸುತ್ತಿದ್ದಿರಿ’ ಅಂತ. ‘ಸ್ವಾಮಿ ನಾನು 30 ವರ್ಷದಿಂದ ಆಟೋ ಓಡಿಸಿಕೊಂಡೇ ಜೀವನ ಸಾಗಿಸುತ್ತಿರುವೆ. ಈಗ ನನಗೆ 65 ವರ್ಷ. ನಾನು ಇಲ್ಲಿಯವರೆಗೂ ಪ್ರಯಾಣಿಕರಿಂದ ಅನ್ಯಾಯವಾಗಿ ಜಾಸ್ತಿ ಹಣ ತೊಗೊಂಡಿಲ್ಲ. ಮೀಟರ್ ಪ್ರಕಾರ ಎಷ್ಟಾಗುತ್ತೋ ಅಷ್ಟು ಮಾತ್ರ ಪಡೆಯುತ್ತೇನೆ. ನನಗೆ ಮೂರು ಜನ ಮಕ್ಕಳು. ಒಬ್ಬ ಸಿವಿಲ್ ಇಂಜಿನಿಯರ್, ಇನ್ನೊಬ್ಬ ಸಣ್ಣ ಟ್ರಾವೆಲ್ಸ್ನ ಮಾಲೀಕ, ಮೂರನೆಯವ ಕಾಂಟ್ರಾ್ಯಕ್ಟರ್. ನಾನು ಯಾವ ಮಕ್ಕಳ ಮೇಲೂ ಅವಲಂಬಿಸಿಲ್ಲ. ನನ್ನ ದುಡಿಮೆಯಲ್ಲೇ ನಾನು ಬದುಕುತ್ತಿದ್ದೇನೆ. ಆಟೋ ಓಡಿಸಿಯೇ ಮನೆ ಕಟ್ಟಿಸಿದ್ದು, ಒಂದಿಷ್ಟು ಜಮೀನು ಖರೀದಿಸಿದ್ದೇನೆ. ಆಟೋ ಓಡಿಸುವುದು ನನಗೆ ಅನಿವಾರ್ಯವಾಗಿತ್ತು. ಅದು ಹೊಟ್ಟೆ ತುಂಬ ಅನ್ನ ನೀಡತೊಡಗಿತು. ಹಾಗಾಗಿ, ದಿನದಿಂದ ದಿನಕ್ಕೆ ಈ ಕೆಲಸವನ್ನು ಪ್ರೀತಿಸುತ್ತ ಹೋದೆ. ಹೆಚ್ಚು ಹಣ ಮಾಡಬೇಕೆಂಬ ಧಾವಂತಕ್ಕೆ ಬೀಳಲಿಲ್ಲ. ಆದರೆ, ಶ್ರದ್ಧೆಯ ದುಡಿಮೆಯೇ ಎಲ್ಲವನ್ನೂ ಒದಗಿಸಿತು. ಅದಕ್ಕೆಂದೆ, ಈ ವಯಸ್ಸಲ್ಲೂ ಆಟೋ ಓಡಿಸ್ತೇನೆ. ಯಾವ ಕೆಲಸ ಆದರೇನು ಸ್ವಾಮಿ, ಶ್ರದ್ಧೆಯಿಂದ ದುಡಿದರೆ ಆ ಭಗವಂತ ಫಲ ಕೊಟ್ಟೇ ಕೊಡ್ತಾನೆ, ದುಡಿತ ತಪ್ಪಿಸಿಕೊಂಡು ಮೈಗಳ್ಳರಾದರೆ ಜೀವನದಲ್ಲಿ ಮೇಲೆ ಬರಲು ಹೇಗೆ ಸಾಧ್ಯ?’ ಎಂದು ಥೇಟ್ ವೇದಾಂತಿಯಂತೆ ಪಟಪಟನೆ ಮಾತನಾಡಿದರು.
ಅಷ್ಟರಲ್ಲೇ ನಾವು ತಲುಪಬೇಕಾದ ಸ್ಥಳ ಬಂದು ಇಳಿದುಕೊಂಡೆವು. ಆತ ಮೊದಲೇ ಹೇಳಿದಂತೆ ನಮ್ಮಿಂದ ಒಂದು ರೂಪಾಯಿ ಕೂಡ ಹೆಚ್ಚು ಪಡೆಯಲಿಲ್ಲ. ಆ ಬಳಿಕವೂ ಆತನ ಮಾತುಗಳು ಅನುರಣಿಸುತ್ತಿದ್ದವು. ಯಾವ ಕೆಲಸವೂ ಮೇಲಲ್ಲ-ಕೀಳಲ್ಲ. ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಎಲ್ಲವೂ ದೊಡ್ಡ ಕೆಲಸವೇ. ನಾವು ಮೊದಲು ಕೀಳರಿಮೆ ತೊರೆಯಬೇಕು, ಮಾಡುವ ಕೆಲಸವನ್ನು ಪ್ರೀತಿಸಬೇಕು. ಆಗ ಬಾಳಿನಲ್ಲಿ ಪ್ರಗತಿಯ ದಾರಿ ತಾನಾಗಿ ತೆರೆದುಕೊಳ್ಳುತ್ತದೆ. ನೌಕರಿಗಾಗಿ ಹಲವು ವರ್ಷ ಅಲೆದಾಡುತ್ತ ಸಮಯ ವ್ಯರ್ಥ ಮಾಡುವ ಯುವಕರು ಕೀಳರಿಮೆ ತೊರೆದು ಯಾವುದೋ ಒಳ್ಳೆಯ, ಸಣ್ಣ ಕೆಲಸದಲ್ಲಿ ತೊಡಗಿಕೊಂಡು ಪ್ರಗತಿ ಸಾಧಿಸಬಹುದಲ್ವೆ? ಹೆಚ್ಚು ಓದದ ಆಟೋ ಚಾಲಕ ಜೀವನವನ್ನು ಯಶಸ್ವಿಯಾಗಿ ಸಾಗಿಸಿ ಅಚ್ಚರಿ ಮೂಡಿಸಬಹುದಾದರೆ, ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಶಿಕ್ಷಿತರಿಗೆ ಏಕೆ ಸಾಧ್ಯವಿಲ್ಲ?
ಕೃಪೆ:ನಿತಿನ್ ಕೊರಳ್ಳಿ .
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment