ದಿನಕ್ಕೊಂದು ಕಥೆ 973
*🌻ದಿನಕ್ಕೊಂದು ಕಥೆ🌻*
*ಎಂಥವನ ದಾಸ್ಯತ್ವವಿರಬೇಕು?*
ನೂರಾರು ಎಕರೆ ಕೃಷಿ ಭೂಮಿ ಇರುವ ಜಮೀನ್ದಾರನೊಬ್ಬನ ಹೊಲದಲ್ಲಿ ಆ ಊರಿನ ಏಳೆಂಟು ಜನ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಅವರೆಲ್ಲ ಬೆಳಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗುತ್ತಿದ್ದುದರಿಂದ ಅವರವರ ಮನೆಗಳಿಂದ ಊಟ ತೆಗೆದುಕೊಂಡು ಹೋಗಿ ಮಧ್ಯಾಹ್ನ ಅವರಿಗೆ ತಲುಪಿಸುವುದಕ್ಕಾಗಿ ಒಬ್ಬ ನೌಕರನನ್ನು ನೇಮಿಸಿದ್ದ. ಒಂದು ದಿನ ಜಮೀನ್ದಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವಾಡೆಯಲ್ಲಿ ಕಾಲಿಡುತ್ತಲೇ ಅವನ ಹೆಂಡತಿ ಹೇಳಿದಳು, ‘ಈ ದಿನ ನಮ್ಮ ನೌಕರನು ಕೆಲಸಕ್ಕೆ ಬಂದಿಲ್ಲ. ಮೈಯಲ್ಲಿ ಹುಷಾರಿಲ್ಲವೆಂದು ಹೇಳಿ ಕಳುಹಿಸಿದ್ದಾನೆ’. ‘ಹೌದಾ! ಹಾಗಾದರೆ ನಮ್ಮ ಕಾರ್ವಿುಕರ ಮನೆಗಳಲ್ಲಿ ಹೆಣ್ಣುಮಕ್ಕಳು ಅಡುಗೆ ತಯಾರಿಸಿ ಬುತ್ತಿ ಕಟ್ಟಿ ನೌಕರನ ದಾರಿ ಕಾಯುತ್ತಿರಬಹುದು. ನಾನೇ ಅವರೆಲ್ಲರ ಮನೆಗಳಿಗೆ ಹೋಗಿ ಬುತ್ತಿಯನ್ನು ತೆಗೆದುಕೊಂಡು ಹೊಲಕ್ಕೆ ಹೋಗುತ್ತೇನೆ’. ‘ಇನ್ನೂ ನಿಮ್ಮ ಊಟವೂ ಆಗಿಲ್ಲ. ತಿರುಗಿ ಬರುವಷ್ಟರಲ್ಲಿ ವೇಳೆ ಆಗುತ್ತದೆ. ಈ ವಯಸ್ಸಿನಲ್ಲಿ ಆಯಾಸವಾಗುವದಿಲ್ಲವೇ?’ ‘ನನ್ನ ಊಟವನ್ನೂ ಕಟ್ಟಿಕೊಡು. ಜೊತೆಗೇ ಕೊಂಡೊಯ್ಯುತ್ತೇನೆ’ ಎಂದು ಪೇಟ ಸುತ್ತಿಕೊಂಡು ತಯಾರಾಗಿಯೇ ಬಿಟ್ಟ. ಸ್ವತಃ ಜಮೀನ್ದಾರನೇ ಬುತ್ತಿ ಕೊಂಡೊಯ್ಯಲು ಬಂದದ್ದು ನೋಡಿ ಅವರಿಗೆಲ್ಲ ಆಶ್ಚರ್ಯ.
ಒಬ್ಬರು ಬಟ್ಟೆಯಲ್ಲಿ ಸುತ್ತಿದ ರೊಟ್ಟಿ- ಪಲ್ಯ, ಇನ್ನೊಬ್ಬರು ಮಡಿಕೆಯಲ್ಲಿ ಮಜ್ಜಿಗೆ, ಮತ್ತೊಬ್ಬರು ಕಾಗದದಲ್ಲಿ ಚಟ್ನಿಪುಡಿ ಹೀಗೆ ಕಟ್ಟಿ ಕೊಟ್ಟರು. ಅದೆಲ್ಲ ಕೆಳಗೆ ಬೀಳಬಾರದೆಂದು ಕಾಳಜಿಪೂರ್ವಕ ಒಂದು ಬುಟ್ಟಿಯಲ್ಲಿ ಹಾಕಿಕೊಂಡು ನಡೆದು ಒಂದು ತಾಸಿನ ನಂತರ ಹೊಲಕ್ಕೆ ತಲುಪಿದ. ಹಸಿವಿನಿಂದ ದಾರಿ ಕಾಯುತ್ತಿರುವ ಅವರಿಗೆ ದೂರದಿಂದ ಜಮೀನ್ದಾರನು ಬುಟ್ಟಿ ಹೊತ್ತುಕೊಂಡು ಬದುವಿನ ಮೇಲೆ ಬರುತ್ತಿರುವುದು ಕಾಣಿಸಿತು. ಕೂಡಲೇ ಧಾವಿಸಿ ಅವನ ಕೈಯಲ್ಲಿಯ ಒಂದೊಂದೇ ವಸ್ತುವನ್ನು ಇಳಿಸಿಕೊಂಡರು. ‘ಬನ್ನಿ ಎಲ್ಲರೂ ಸೇರಿ ಮರದ ಕೆಳಗೆ ಕುಳಿತು ಹಂಚಿಕೊಂಡು ಊಟ ಮಾಡೋಣ’ ಎಂದ ಜಮೀನ್ದಾರ.
ಅವರಿಗೆಲ್ಲ ತಮ್ಮ ಊಟದ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪ ಅವನು ತಟ್ಟೆಯಲ್ಲಿಡಬೇಕಾದರೆ ದೇವರಿಗೆ ನೈವೇದ್ಯ ತೋರಿಸಿದ ಅನುಭವ. ಒಬ್ಬ ವೃದ್ಧನ ಕಣ್ಣಿಂದ ನೀರು ಬಂತು. ‘ನಲವತ್ತು ವರ್ಷದಿಂದ ಈ ಹೊಲದಲ್ಲಿ ದುಡಿಯುತ್ತಿದ್ದೇನೆ. ನಮ್ಮ ಜಮೀನ್ದಾರರು ಮನೆಯಲ್ಲಿ ತಾಜಾ ಹಾಗೂ ಬಿಸಿ ಊಟವನ್ನಷ್ಟೇ ಮಾಡುತ್ತಾರೆಂದು ಬರೀ ಕೇಳಿದ್ದೆ. ಊಟ ಮಾಡುವುದನ್ನು ನೋಡಿಲ್ಲ. ಆದರೆ ಅವರು ಇಂದು ನಮ್ಮ ಜೊತೆ ಬೆಳಗ್ಗೆ ಮಾಡಿದ ಅಡುಗೆಯನ್ನು ಪ್ರೇಮದಿಂದ ಹಂಚಿಕೊಂಡು ಉಂಡಿದ್ದನ್ನು ಪ್ರತ್ಯಕ್ಷ ಕಂಡೆ. ನಮ್ಮ ಸಂಪೂರ್ಣ ಕಾಳಜಿ ವಹಿಸುವ ಇವರನ್ನು ಬಿಟ್ಟು ನಾವು ಬೇರೆಲ್ಲಿಯೂ ಹೋಗತಕ್ಕದ್ದಲ್ಲ’ ಎಂದ.
ತಾಯಿಯ ಗರ್ಭದಲ್ಲಿರುವಾಗಿನಿಂದ ಹಿಡಿದು ಶಿಶುವಾಗಿ, ಯುವಕನಾಗಿ ಬೆಳೆಯುತ್ತ ಮುಂದೆ ಜೀವನದ ಕೊನೆಯವರೆಗೂ ಆಯಾ ಸ್ಥಿತಿಯ ಅವಶ್ಯಕತೆಗಳನ್ನರಿತು ಅದಕ್ಕನುಗುಣವಾದ ಅನ್ನಾದಿಗಳನ್ನಿತ್ತು ಸಲುಹುತ್ತಿರುವ ಭಗವಂತನ ಕರುಣೆಯನ್ನು ಕಂಡೇ ದಾಸರು, ‘ಅವರಿವರ ದಾಸ್ಯ ಬೇಡ ಜನ್ಮ ಜನ್ಮಾಂತರದಲ್ಲಿಯೂ ನಿನ್ನ ದಾಸ್ಯತ್ವವನ್ನೇ ಕೊಡು’ ಎಂದಿದ್ದಾರೆ. ‘ದಯಮಾಡೋ ರಂಗಾ ನಾ ನಿನ್ನ ದಾಸನೆಂದೆನುತ’ ಅಂದದ್ದು, ಕೇವಲ ಸಂಸಾರ ನಡೆಸುವುದಕ್ಕೆ, ಪರಮಾರ್ಥಕ್ಕೆ ಅಥವಾ ವೇದಾಂತ ಶಾಸ್ತ್ರ ತಿಳಿಯುವುದಕ್ಕೆ ಅಲ್ಲ. ಸಂಪೂರ್ಣ ಯೋಗಕ್ಷೇಮ ಹೊತ್ತ ಅವನ ಅಖಂಡ ಪ್ರೇಮಕ್ಕೆ. ಅಂಥವನ ದಾಸ್ಯತ್ವದಲ್ಲಿ ವಿಹರಿಸುವುದೇ ಒಂದು ಮಹದಾನಂದ ಅಲ್ಲವೇ?
ಕೃಪೆ:ಚಿದಂಬರ ಮುನವಳ್ಳಿ.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment