ದಿನಕ್ಕೊಂದು ಕಥೆ 975

*🌻ದಿನಕ್ಕೊಂದು ಕಥೆ🌻*
*ಈ ಕಂಪನಿಯ ಯಶಸ್ಸಿನಿಂದ ಕಲಿಯುವುದು ಬೇಕಾದಷ್ಟಿದೆ!*
 

‘ದ ಸ್ಪೋರ್ಟಿಂಗ್ ನ್ಯೂಸ್’ ಪತ್ರಿಕೆ 1993ರಲ್ಲಿ ವರ್ಷದ ವ್ಯಕ್ತಿ ಎಂದು ಘೊಷಿಸಿದ ವ್ಯಕ್ತಿ ಆಟಗಾರನೂ ಆಗಿರಲಿಲ್ಲ, ಕೋಚ್ ಕೂಡ ಆಗಿರಲಿಲ್ಲ. ಆದರೆ ದಶಕಗಳಿಂದ ಅತ್ಯುನ್ನತ ಕ್ರೀಡಾಪಟುಗಳು ಧರಿಸುತ್ತ ಬಂದಿರುವ ಜಗತ್ತಿನ ಅತಿದೊಡ್ಡ ಶೂ ಕಂಪನಿಯ ಸ್ಥಾಪಕ ಫಿಲ್ ನೈಟ್ ಆ ಗೌರವಕ್ಕೆ ಪಾತ್ರನಾದ!

ಇಂತಹ ದೊಡ್ಡ ದೊಡ್ಡ ಕಂಪನಿಗಳ ಯಶಸ್ಸಿನ ಹಿಂದೆ ಸಾಮಾನ್ಯ ಜನರಿಗೆ ಹುಚ್ಚುತನ, ಮೂರ್ಖತನ ಎಂದು ಅನಿಸುವ ಐಡಿಯಾಗಳಿರುತ್ತವೆ! ಇವರೇನು ಮಾಡುತ್ತಿದ್ದಾರೆಂಬುದು ಜನರಿಗೆ ಗೊತ್ತೇ ಆಗುವುದಿಲ್ಲ. ಅಂತಹುದೇ ಒಂದು ಕಂಪನಿ ನೈಕಿ. ಈಗ ನೈಕಿ ಕಂಪನಿಯ ಹೆಸರನ್ನು ಕೇಳದವರು ಇರಲಿಕ್ಕಿಲ್ಲ. ಇದೊಂದು ಬಿಲಿಯನ್ ಡಾಲರ್ ಕಂಪನಿ. ಫಿಲ್ ನೈಟ್ ಇದರ ಸಂಸ್ಥಾಪಕ. ಇದು ನೈಕಿ ಕಂಪನಿ ಶುರುವಾದ ಕಥೆ.

ಫಿಲ್ ಅತ್ಯಂತ ಬುದ್ಧಿವಂತ ಹುಡುಗನೇನಲ್ಲ. ಕಾಲೇಜಿನಲ್ಲಿ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದನಾದರೂ ಮೊದಲ ಸ್ಥಾನ ಪಡೆಯುವಂತಹ ಓಟಗಾರನಾಗಿರಲಿಲ್ಲ. ಆದರೆ ಓರ್ವ ಉದ್ಯಮಶೀಲ ವ್ಯಕ್ತಿಯಾಗುವ ಲಕ್ಷಣಗಳು ಅವನಲ್ಲಿದ್ದವು. ಓದುವಾಗಲೇ ಫಿಲ್ ತನ್ನ ತಂದೆಯ ಪತ್ರಿಕೆಯಲ್ಲಿ ಕೆಲಸ ಮಾಡಲು ಬಯಸಿದ. ಆದರೆ ಫಿಲ್​ನ ಸಾಮರ್ಥ್ಯದ ಅರಿವಿದ್ದ ತಂದೆ ಕೆಲಸ ಕೊಡಲು ನಿರಾಕರಿಸಿದರು. ಫಿಲ್ ಅಪ್ಪನ ಪ್ರತಿಸ್ಪರ್ಧಿ ಪತ್ರಿಕೆಯಾದ ‘ಒರೆಗಾನಿಯನ್’ನಲ್ಲಿ ಕ್ರೀಡಾ ವಿಭಾಗದಲ್ಲಿ ರಾತ್ರಿಪಾಳಿಯ ಕೆಲಸಕ್ಕೆ ಸೇರಿಕೊಂಡ. ರಾತ್ರಿ ಪಾಳಿಯ ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಏಳು ಕಿಲೋಮೀಟರ್ ಓಡಿಕೊಂಡೇ ಬರುತ್ತಿದ್ದ. ಓರೆಗಾನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ನಂತರ ಏಳು ವರ್ಷ ಅಮೆರಿಕದ ಸೇನೆಯಲ್ಲಿ ಸೇವೆ ಸಲ್ಲಿಸಿದ. ನಂತರ ಸ್ಟಾನ್​ಫೋರ್ಡ್ ಬಿಸಿನೆಸ್ ಸ್ಕೂಲ್ ಸೇರಿಕೊಂಡ. ಅಲ್ಲಿಂದ 1962ರಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದ.

Smiley face
ಆದರೆ ಫಿಲ್​ಗೆ ಏನಾದರೂ ಹೊಸದನ್ನು ಮಾಡುವ ಬಯಕೆ. ಬಿಸಿನೆಸ್ ಸ್ಕೂಲ್​ನಲ್ಲಿ ಓದುವಾಗಲೇ ಆತ ಒಂದು ಪ್ರಬಂಧ ಬರೆದ. ಅಮೆರಿಕದ ಮಾರುಕಟ್ಟೆಯಲ್ಲಿ ಜಪಾನೀ ಕ್ಯಾಮರಾಗಳು ಜರ್ಮನಿಯ ಕ್ಯಾಮರಾಗಳನ್ನು ಮೂಲೆಗುಂಪು ಮಾಡಿದ್ದವು. ಇದರ ಆಧಾರದ ಮೇಲೆ ಫಿಲ್, ‘ಜಪಾನಿನ ಕ್ಯಾಮರಾಗಳು ಜರ್ಮನಿಯ ಕ್ಯಾಮರಾಗಳಿಗೆ ಮಾಡಿದ್ದನ್ನು ಜಪಾನಿನ ಸ್ಪೋರ್ಟ್ ಶೂಗಳು ಜರ್ಮನಿಯ ಶೂಗಳಿಗೆ ಮಾಡಬಹುದೇ?’ ಎಂದು ಪ್ರಬಂಧ ಬರೆದ. ಆಗ ಅಮೆರಿಕದಲ್ಲಿ ಜರ್ಮನಿಯ ಅಡಿಡಾಸ್ ಮತ್ತು ಪ್ಯೂಮಾ ಬಹಳ ಪ್ರಸಿದ್ಧ ಬ್ರಾಂಡ್​ಗಳಾಗಿದ್ದವು. ಸ್ಪೋರ್ಟ್ ಶೂಗಳತ್ತ ಫಿಲ್ ನೈಟ್ ಗಮನ ಹರಿಯಲು ಕಾರಣ ಆತ ಒಬ್ಬ ಓಟಗಾರನೂ ಆಗಿದ್ದ ಎಂಬುದು! ಆತನಲ್ಲಿ ಒಬ್ಬ ಉದ್ಯಮಶೀಲ ಅಡಗಿದ್ದ ಎಂಬುದಕ್ಕೆ ಈ ಪ್ರಬಂಧವೇ ಸಾಕ್ಷಿ. ಉದ್ಯಮಶೀಲತೆಯ ಮೂಲ ಬಂಡವಾಳವೇ ಹೊಸ ಹೊಸ ಐಡಿಯಾಗಳು ತಾನೇ? ನಂತರ ಜಪಾನಿಗೆ ಪ್ರವಾಸಿಗನಂತೆ ಭೇಟಿ ಇತ್ತ. ಕೋಬೆ ಎಂಬಲ್ಲಿ ಒನಿಟ್ಸುಕಾ ಟೈಗರ್ ಬ್ರಾಂಡಿನ ಶೂಗಳನ್ನು ನೋಡಿ ‘ಅರೇ ಎಷ್ಟು ಒಳ್ಳೆಯ ಕ್ವಾಲಿಟಿ ಬೆಲೆಯೂ ಕಡಿಮೆ ಇದೆಯಲ್ಲ’ ಎಂದುಕೊಂಡು ಜಪಾನ್​ನಿಂದ ಶೂಗಳನ್ನು ಆಮದು ಮಾಡಿಕೊಂಡು ಅಮೆರಿಕದಲ್ಲಿ ಬೇರೊಂದು ಬ್ರಾಂಡ್ ಹೆಸರಿನೊಂದಿಗೆ ಮಾರಾಟ ಮಾಡುವ ವಿಚಾರ ಮಾಡಿದ. ಫಿಲ್ ತಾನೊಬ್ಬ ಶೂ ವಿತರಕ ಎಂದು ಪರಿಚಯಿಸಿಕೊಂಡು ಟೈಗರ್ ಕಂಪನಿಯೊಂದಿಗೆ ಮಾತಾಡಿ ಅಮೆರಿಕದಲ್ಲಿ ಶೂಗಳ ಮಾರಾಟದ ಹಕ್ಕುಗಳನ್ನು ಪಡೆದುಕೊಂಡ.

1963ರಲ್ಲಿ ಟೈಗರ್ ಕಂಪನಿ ಹನ್ನೆರಡು ಜತೆ ಶೂಗಳನ್ನು ಫಿಲ್​ಗೆ ಕಳುಹಿಸಿತು. ಆತ ಬೇರೆ ಬೇರೆ ಅಥ್ಲೆಟಿಕ್ ಕೂಟಗಳಿಗೆ ಹೋಗಿ ಶೂಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ. ಆದರೆ ಅಲ್ಲಿ ಫಿಲ್ ಯಶಸ್ವಿಯಾಗಲಿಲ್ಲ. ಆದರೂ ಆತ ತಲೆಕೆಡಿಸಿಕೊಳ್ಳಲಿಲ್ಲ. ಸ್ಪೋರ್ಟ್ ಶೂಗಳ ವ್ಯವಹಾರದಲ್ಲಿಯೇ ತನ್ನ ಭವಿಷ್ಯ ಎಂದು ಆತ ನಿರ್ಧರಿಸಿಬಿಟ್ಟಿದ್ದ. ಎದೆಗುಂದದೆೆ ತನಗಿಂತ ಸ್ಪೋರ್ಟ್ ಶೂಗಳ ಬಗ್ಗೆ ಹೆಚ್ಚು ಗೊತ್ತಿರುವ ಒರೆಗಾನ್ ವಿಶ್ವವಿದ್ಯಾಲಯದಲ್ಲಿ ತನ್ನ ಕೋಚ್ ಆಗಿದ್ದ ಬಿಲ್ ಬೋವರ್ಮನ್​ರನ್ನು ಭೇಟಿಯಾದ. ಬಿಲ್ ಆಗ ಅಮೆರಿಕದ ಪ್ರಸಿದ್ಧ ಕೋಚ್​ಗಳಲ್ಲಿ ಒಬ್ಬರಾಗಿದ್ದರು. ಬೋವರ್ಮನ್ ಶೂಗಳನ್ನು ಆರ್ಡರ್ ಮಾಡಿದ್ದೂ ಅಲ್ಲದೆ ಫಿಲ್​ನ ವ್ಯವಹಾರದಲ್ಲಿ ಪಾರ್ಟನರ್ ಕೂಡ ಆದರು.

ಇಬ್ಬರೂ ಸೇರಿ ತಲಾ ಐನೂರು ಡಾಲರ್ ಹಣ ಹೂಡಿ 1964ರಲ್ಲಿ ‘ಬ್ಲು ರಿಬ್ಬನ್ ಸ್ಪೋರ್ಟ್ಸ್’ ಎಂಬ ಕಂಪನಿ ಪ್ರಾರಂಭಿಸಿದರು. ಇಬ್ಬರೂ ಸೇರಿ ಬೇರೆ ಬೇರೆ ಅಥ್ಲೆಟಿಕ್ ಕೂಟಗಳಿಗೆ, ಕಾಲೇಜುಗಳಿಗೆ ಶೂ ಸರಬರಾಜು ಮಾಡಲಾರಂಭಿಸಿದರು. ಒಂದೇ ಸಲ ಬಹಳ ಲಾಭವೇನೂ ಆಗುವುದಿಲ್ಲ. ಆದರೆ ಫಿಲ್ ಮತ್ತು ಬೋವರ್ಮನ್ ಮುಂದುವರಿದರು. ಹಂತಹಂತವಾಗಿ ಯಶಸ್ಸು ಗಳಿಸುತ್ತ ಹೋದರು. ಇದೇ ಸಾಮಾನ್ಯರಿಗೂ ಸಾಧಕರಿಗೂ ಇರುವ ವ್ಯತ್ಯಾಸ. ಸಾಮಾನ್ಯರು ತಕ್ಷಣದ ಫಲಿತಾಂಶ ಬಯಸುತ್ತಾರೆ. ಅದು ಸಾಧ್ಯವಾಗದಿದ್ದಾಗ ಪ್ರಯತ್ನವನ್ನೇ ಕೈಬಿಡುತ್ತಾರೆ. ಇದು ಕೇವಲ ವ್ಯವಹಾರದಲ್ಲಿ ಮಾತ್ರವಲ್ಲ, ಓದು, ಉದ್ಯೋಗ, ಕಲೆ ಎಲ್ಲದರಲ್ಲೂ ನಿಜ. ಆರಂಭಿಕ ಸಮಸ್ಯೆಗಳಿಗೆ ಹೆದರಿ ಹಿಮ್ಮೆಟ್ಟುವವರು ಎಲ್ಲೂ ಯಶಸ್ಸು ಸಾಧಿಸಲಾರರು. ಏಕೆಂದರೆ ಯಾವುದನ್ನು ಮಾಡಲು ಹೋದರೂ ಸಮಸ್ಯೆಗಳಿವೆ. ಹಾಗಂತ ಆತ ಎಲ್ಲವನ್ನು ಬಿಟ್ಟು ವ್ಯವಹಾರಕ್ಕೆ ಧುಮುಕಲೂ ಇಲ್ಲ. ಅಕೌಂಟಂಟ್ ಕೆಲಸವನ್ನು ಮಾಡುತ್ತಲೇ ಫಿಲ್ ವ್ಯವಹಾರವನ್ನೂ ಮಾಡುತ್ತಿದ್ದ. 1969ರಲ್ಲಿ ಕಂಪನಿ ಪೂರ್ತಿಯಾಗಿ ನೆಲೆನಿಂತ ಮೇಲೆ ಆತ ತನ್ನ ಅಕೌಂಟಂಟ್ ಕೆಲಸ ಬಿಟ್ಟ!

ಎಲ್ಲ ಹಾದಿಯಲ್ಲೂ ಸವಾಲುಗಳಿವೆ. ಫಿಲ್ ಮತ್ತು ಬಿಲ್​ಗೂ ಸವಾಲುಗಳಿದ್ದವು. ಆದರೆ ಹೊಸ ಯೋಚನೆಗಳು ವ್ಯವಹಾರವನ್ನು ಕೈಹಿಡಿಯುತ್ತವೆ. 1966ರಲ್ಲಿ ಬಿಲ್ ಜಾಗಿಂಗ್ ಬಗ್ಗೆ ಒಂದು ಪುಸ್ತಕ ಬರೆದ. ಅದು ಮಿಲಿಯಗಟ್ಟಲೆ ಮಾರಾಟವಾಯಿತು! ಮತ್ತು ಇವರ ಕಂಪನಿ ಜಾಗಿಂಗ್ ಶೂಗಳನ್ನು ಮಾರುವ ಮೊದಲ ಕಂಪನಿಯಾಯಿತು! ಐಡಿಯಾಗಳು ಹೇಗೆ ಕೆಲಸ ಮಾಡುತ್ತವೆ ನೋಡಿ! ಬಿಲ್ ಬೋವರ್ಮನ್ ಶೂಗಳ ಗುಣಮಟ್ಟವನ್ನು ಹೆಚ್ಚಿಸುವ ಸಲಹೆಗಳೊಂದಿಗೆ ಜಪಾನಿನ ಕಂಪನಿಗೆ ನಿರಂತರವಾಗಿ ಪತ್ರ ಬರೆಯುತ್ತಿದ್ದ. ಆತ ಅತ್ಯುತ್ತಮ ಡಿಸೈನರ್ ಕೂಡ ಆಗಿದ್ದ! ಆತ ರೂಪಿಸಿದ ಕೊರ್ಟೆಝ್​ 1968ರಲ್ಲಿ ಬೆಸ್ಟ್ ಸೆಲ್ಲರ್ ಆಯಿತು. ಅದೇ ವರ್ಷ ಮೆಕ್ಸಿಕೋ ಒಲಂಪಿಕ್ಸ್ ಕೂಡ ಇದ್ದುದರಿಂದ 1969ರಲ್ಲಿ ಕಂಪನಿ ಮೂರು ಲಕ್ಷ ಡಾಲರ್ ಮೌಲ್ಯದ ಶೂ ಮಾರಾಟ ಮಾಡಿತು! ಈ ಕೊರ್ಟೆಝ್ ಶೂಗಳ ಬೇಡಿಕೆ ಎಷ್ಟರಮಟ್ಟಿಗೆ ಹೆಚ್ಚಾಯಿತು ಎಂದರೆ ಜಪಾನಿನ ಕಂಪನಿಗೆ ಅದನ್ನು ಸರಬರಾಜು ಮಾಡುವುದು ಕಷ್ಟವಾಯಿತು! ಏಕೆಂದರೆ ಜಪಾನಿನ ಟೈಗರ್ ಕಂಪನಿ ಮೊದಲು ತನ್ನ ದೇಶದ ಗ್ರಾಹಕರಿಗೆ ಪೂರೈಸಿ ಉಳಿದಿದ್ದನ್ನು ನಂತರ ಇವರಿಗೆ ಕಳುಹಿಸುತ್ತಿತ್ತು!

ಬರೀ ವಿತರಕರಾಗಿ ಉಳಿದರೆ ಕಷ್ಟ ಎಂದು ಫಿಲ್ ಮತ್ತು ಬಿಲ್ ಇಬ್ಬರೂ ಟೈಗರ್ ಕಂಪನಿಯೊಡನೆ ಕಾಂಟ್ರಾಕ್ಟ್ ಮುಗಿದ ತಕ್ಷಣ ತಾವೇ ಉತ್ಪಾದನೆ ಪ್ರಾರಂಭಿಸಿದರು. 1971ರಲ್ಲಿ ಗ್ರೀಕರ ವಿಜಯದೇವತೆಯ ನೆನಪಿಗೆ ಕಂಪನಿಗೆ ‘ನೈಕಿ’ ಎಂಬ ಹೆಸರಿಟ್ಟರು. ಆಮೇಲಿನ ಹತ್ತು ವರ್ಷಗಳ ಕಾಲ ಕಂಪನಿ ಆರಕ್ಕೇರದೇ ಮೂರಕ್ಕಿಳಿಯದೇ ನಡೆಯುತ್ತಿತ್ತು. 1983ರಲ್ಲಿ ನೈಕಿ ನಷ್ಟ ಅನುಭವಿಸತೊಡಗಿತು. ಕಾರಣ ಅಡಿಡಾಸ್​ಗೆ ಸವಾಲೊಡ್ಡುವವರೇ ಇರಲಿಲ್ಲ. ದೊಡ್ಡ ಆಟಗಾರರೆಲ್ಲ ಅಡಿಡಾಸ್ ಪ್ರಚಾರಕರು.1984ರಲ್ಲಿ ಅಡಿಡಾಸ್ ಮಾಡಿದ ಒಂದು ತಪ್ಪನ್ನು ಗುರ್ತಿಸಿದ ಫಿಲ್ ಅದನ್ನು ಬಳಸಿಕೊಂಡ. ಇಂದಿಗೂ ಜಾಸ್ತಿ ಎನ್ನಿಸುವ ಅಪಾರ ಮೊತ್ತವನ್ನು ಆಗಿನ ಕಾಲಕ್ಕೇ ಬಾಸ್ಕೆಟ್​ಬಾಲ್ ಆಟಗಾರ ಮೈಕೆಲ್ ಜೋರ್ಡಾನ್​ಗೆ ಕೊಟ್ಟು ಒಪ್ಪಂದ ಮಾಡಿಕೊಂಡ ಸಂಗತಿಯೇ ಒಂದು ರೋಚಕ ಕಥೆ!  ಇದೊಂದು ಘಟನೆ ನೈಕಿಯ ಭವಿಷ್ಯವನ್ನೇ ಬದಲಾಯಿಸಿಬಿಟ್ಟಿತು! ನೈಕಿ 1989ರಲ್ಲಿ ಅಮೆರಿಕದ ಅತಿದೊಡ್ಡ ಶೂ ಕಂಪನಿಯಾಯಿತು.

‘ಜಸ್ಟ್ ಡು ಇಟ್’ ಟ್ಯಾಗ್​ಲೈನ್​ನೊಂದಿಗೆ ಮೈಕೆಲ್ ಜೋರ್ಡಾನ್ ಜತೆಗೆ ಟೈಗರ್ ವುಡ್ಸ್ ಮುಂತಾದ ಪ್ರಚಂಡರನ್ನು ಸಹಿ ಮಾಡುವುದರೊಂದಿಗೆ ನೈಕಿ ಮಾರಾಟ ದಂತಕಥೆಯಾಯಿತು. 2016ರಲ್ಲಿ ಫಿಲ್ ನೈಟ್​ನ ಆತ್ಮಕಥೆ ‘ಶೂ ಡಾಗ್’ ಬಿಡುಗಡೆಯಾಯಿತು. ಈಗ ಜಗತ್ತಿನ ನಂಬರ್ ಒನ್ ಶೂ ಬ್ರಾಂಡ್ ಆಗಿರುವ ನೈಕಿಯ ಹುಟ್ಟು ಬೆಳವಣಿಗೆಯ ಪ್ರತೀ ಹೆಜ್ಜೆಯೂ ದಾಖಲಾಗಿರುವ ಈ ಪುಸ್ತಕವನ್ನು ಹೆಚ್ಚಿನ ಮಾಹಿತಿಗೆ ಓದಬಹುದು.

ಈಗ ಕಂಪನಿ ತಲುಪಿದ ಎತ್ತರ ಹಿಂದಿನೆಲ್ಲ ವರ್ಷಗಳ ಪರಿಶ್ರಮದ ಫಲ. ದೊಡ್ಡದೊಡ್ಡ ಕಂಪನಿಗಳ ಎದುರು ನಿಧಾನವಾಗಿ ಆದರೆ ದೃಢವಾಗಿ ಮೇಲೇರಿದ ಕಂಪನಿ ನೈಕಿ. ವ್ಯವಹಾರ ಶುರು ಮಾಡಿದ ವರ್ಷದಲ್ಲೇ ಅದನ್ನು ಬಿಟ್ಟು ಮತ್ತೊಂದು ವ್ಯವಹಾರ ಶುರು ಮಾಡುವವರು, ಓದಲು ಆರಂಭಿಸಿದ ಹತ್ತು ನಿಮಿಷದಲ್ಲೇ ಅರ್ಥವಾಗದೇ, ಅರ್ಥ ಮಾಡಿಕೊಳ್ಳಲು ಪ್ರಯತ್ನವನ್ನೇ ಪಡದೇ ಪುಸ್ತಕ ಮುಚ್ಚಿಡುವವರು, ಹಾಡಲು ನರ್ತಿಸಲು ಕಲಿಯಲು ಶುರುಮಾಡಿದ ಆರುತಿಂಗಳಲ್ಲೇ ರಿಯಾಲಿಟಿ ಶೋಗಳಿಗೆ ಆಯ್ಕೆಯಾಗದಿದ್ದರೆ ತಲೆಯ ಮೇಲೆ ಕೈ ಹೊತ್ತು ಕೂರುವವರೆಲ್ಲ ನೈಕಿಯ ಯಶಸ್ಸಿನಿಂದ ಕಲಿಯುವುದು ಬೇಕಾದಷ್ಟಿದೆ. ನಿಜ ತಾನೇ?

ಕೃಪೆ ದೀಪ ಹಿರೇಗುತ್ತಿ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059