ದಿನಕ್ಕೊಂದು ಕಥೆ 984
ದಿನಕ್ಕೊಂದು ಕಥೆ
🙏ಇಂದಿನ ಐಕಾನ್ - ಆಧುನಿಕ ಸಾವಿತ್ರಿ ಲತಾ ಭಗವಾನ್ ಖರೆ.
ನನ್ನ ತರಬೇತಿಗಳಲ್ಲಿ ಅತೀ ಹೆಚ್ಚು ಸಲ ಬಳಸಿಕೊಂಡ ರಿಯಲ್ ಲೈಫ್ ಕಥೆಗಳಲ್ಲಿ ಇದು ಕೂಡ ಒಂದು. ಆಕೆ ಸಿನೆಮಾ ತಾರೆ ಅಥವಾ ಮಾಡೆಲ್ ಅಲ್ಲ. ಆದರೆ ಆಕೆಯ ಬದುಕಿನ ಹೋರಾಟ ಸಾವಿರಾರು ಮಂದಿಗೆ ಸ್ಫೂರ್ತಿ ತುಂಬಬಲ್ಲದು.
ಆಕೆ ಲತಾ ಭಗವಾನ್ ಖರೆ. ಆಕೆಯ ಗಂಡ ಭಗವಾನ್ ಖರೆ. ಮಹಾರಾಷ್ಟ್ರದ ಬುಲ್ದಾನ ಜೆಲ್ಲೆಯ ಒಂದು ಗ್ರಾಮದವರು. ಗಂಡನಿಗೆ 68 ವರ್ಷ ಮತ್ತು ಹೆಂಡತಿಗೆ 67 ವರ್ಷ. ಗಂಡ ಸುದೀರ್ಘ ವರ್ಷ ಸೆಕ್ಯುರಿಟಿ ಗಾರ್ಡ್ ಆಗಿದ್ದು ನಿವೃತ್ತಿ ಆಗಿದ್ದವರು. ಈಗ ಅವರಿಬ್ಬರೂ ಕೃಷಿಯ ದಿನಗೂಲಿ ನೌಕರರು. ಅವರಿಗೆ ಮೂರು ಜನ ಹೆಣ್ಣು ಮಕ್ಕಳು. ಮಕ್ಕಳಿಗೆ ಮದುವೆ ಮಾಡಿದ ಈ ದಂಪತಿ ತುಂಬಾ ಸಾಲ ಮಾಡಿದರು. ಮನೆಯನ್ನು ಮಾರಿ ಗುಡಿಸಲಲ್ಲಿ ಇರಬೇಕಾಯಿತು. ದುಡಿದರೆ ಮಾತ್ರ ಅವರ ಹಸಿವು ನೀಗುತ್ತಿತ್ತು..ಬಹಳ ಕಷ್ಟದ ಸಮಯ ಅವರದ್ದು.
ಒಂದು ದಿನ ಗದ್ದೆಯಲ್ಲಿ ಕೃಷಿಯ ಕೆಲಸ ಮಾಡುವಾಗ ಗಂಡ ತಲೆ ತಿರುಗಿ ಬಿದ್ದು ಬಿಟ್ಟರು. ಹೆಂಡತಿಗೆ ತಕ್ಷಣ ಏನು ಮಾಡುವುದು ಎಂದು ತೋಚಲಿಲ್ಲ. ಒಂದು ರಿಕ್ಷಾದಲ್ಲಿ ಗಂಡನನ್ನು ಹಾಕಿಕೊಂಡು ಪಕ್ಕದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿನ ವೈದ್ಯರು ಪರೀಕ್ಷೆ ಮಾಡಿ ಏನೋ ಸೋಂಕು ಉಂಟಾಗಿದೆ. ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ದೊಡ್ಡ ಆಸ್ಪತ್ರೆಗೆ ಹೋಗಿ ಎಂದರು.
ಗಂಡನನ್ನು ಮನೆಗೆ ಕರೆದು ತಂದ ಹೆಂಡತಿ ಕೆಲವು ನೆರೆಹೊರೆ ಮತ್ತು ಸಂಬಂಧಿಕರನ್ನು ಕಾಡಿ ಬೇಡಿ ಒಂದಿಷ್ಟು ಹಣವನ್ನು ಒಟ್ಟು ಮಾಡಿದರು. ಮರುದಿನ ಗಂಡನನ್ನು ಬಾರಾಮತಿ ನಗರದ ಒಂದು ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಿದರು. 'ಹೇಗಾದರೂ ಮಾಡಿ ನನ್ನ ಗಂಡನ ಪ್ರಾಣವನ್ನು ಉಳಿಸಿಕೊಡಿ' ಎಂದು ಅಲ್ಲಿನ ವೈದ್ಯರನ್ನು ಪರಿಪರಿಯಾಗಿ ಪ್ರಾರ್ಥಿಸಿದರು. ಕಣ್ಣೀರು ಹಾಕಿದರು.
ಆ ಪರೀಕ್ಷೆ, ಈ ಪರೀಕ್ಷೆ ಎಂದು ವೈದ್ಯರು ಅವರ ಪರ್ಸ್ ಖಾಲಿ ಮಾಡಿದರು. ಪರೀಕ್ಷೆ ಮಾಡಿ ಮುಗಿಸಿದ ವೈದ್ಯರು "ನೋಡಜ್ಜಿ, ನಿನ್ನ ಗಂಡನಿಗೆ ಒಂದು ಸೋಂಕು ತಗುಲಿದೆ. ಚಿಕಿತ್ಸೆ ಆರಂಭ ಮಾಡಬೇಕು. ತುಂಬಾ ಖರ್ಚು ಆಗಬಹುದು. ದುಡ್ಡಿಗೆ ವ್ಯವಸ್ಥೆ ಮಾಡಿ. ನಾವು ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತೇವೆ" ಅಂದರು.
ಆಕೆಗೆ ಪ್ರಪಂಚವೇ ತಲೆಯ ಮೇಲೆ ಬಿದ್ದ ಅನುಭವ! ಯಾರನ್ನು ಕೇಳುವುದು? ಎಲ್ಲಿ ಭಿಕ್ಷೆ ಬೇಡುವುದು? ಮಕ್ಕಳಲ್ಲಿ ಹಣ ಕೇಳಲು ಅವರ ಆತ್ಮಸಾಕ್ಷಿ ಒಪ್ಪಲಿಲ್ಲ. ಪರ್ಸ್ ತೆರೆದು ನೋಡಿದಾಗ ಹತ್ತು ರೂಪಾಯಿಯ ಒಂದು ನೋಟು ಅಣಕಿಸಿದ ಹಾಗೆ ಅನ್ನಿಸಿತು! ಅವರ ಬಳಿ ಬೇರೆ ಯಾವ ಹಣ, ಆಸ್ತಿ, ಬಂಗಾರ ಇರಲಿಲ್ಲ. ಅಸಹಾಯಕ ಸ್ಥಿತಿಯಿಂದ ಲತಾ ಖರೆ ಆಸ್ಪತ್ರೆಯ ಮೆಟ್ಟಿಲ ಮೇಲೆ ಕೂತು ಗೊಳೋ ಎಂದು ಅಳುತ್ತಾರೆ. ಗಂಡ ಒಳಗೆ ಆಸ್ಪತ್ರೆಯಲ್ಲಿ ಹಾಸಿಗೆಗೆ ಒರಗಿ ಮಲಗಿದ್ದಾರೆ.
ಮಧ್ಯಾಹ್ನ ದಾಟಿದಾಗ ಹೊಟ್ಟೆಯ ಹಸಿವು ಅಜ್ಜಿಗೆ ಗೊತ್ತಾಯಿತು. ಆಸ್ಪತ್ರೆಯ ಹೊರಗೆ ಒಂದು ಅಂಗಡಿಗೆ ಹೋಗಿ " ಏಕ್ ಸಮೋಸ ದೋ ಬೇಟಾ" ಅಂದರು. ಅಲ್ಲಿದ್ದ ಚುರುಕಾದ ಹುಡುಗ ಒಂದು ಪೇಪರ್ ತುಂಡಿನ ಮೇಲೆ ಒಂದು ಸಮೋಸ ಇಟ್ಟು ಅಜ್ಜಿಗೆ ತಿನ್ನಲು ಕೊಟ್ಟ. ಅಜ್ಜಿ ಅದನ್ನು ಒಂದೇ ತುತ್ತಿನಲ್ಲಿ ತಿಂದು ಮುಗಿಸಿ ಪೇಪರ್ ತುಂಡನ್ನು ಬಿಸಾಡಲು ಹೋದರು. ಆಗ ಅದರಲ್ಲಿ ಯಾವುದೋ ಒಂದು ಚಂದದ ಜಾಹೀರಾತು ಇರುವುದನ್ನು ಗಮನಿಸಿದರು. ಅವರಿಗೆ ಓದಲು ಬರುತ್ತಿರಲಿಲ್ಲ. ಅದನ್ನು ಅದೇ ಹುಡುಗನಿಗೆ ಕೊಟ್ಟು ಓದಲು ಹೇಳಿದರು. ಹುಡುಗ ತುಂಬಾ ಉತ್ಸಾಹದಿಂದ ಓದುತ್ತಾ ಹೋದ.
"ನಾಳೆ ಬಾರಾಮತಿಯಲ್ಲಿ ಪ್ರತೀ ವರ್ಷದ ಹಾಗೆ ಮ್ಯಾರಥಾನ್ ಓಟ ಇದೆ. ಗೆದ್ದವರಿಗೆ ನಗದು ಬಹುಮಾನ ಇದೆ" ಅಂದ. ಎಷ್ಟು ದೂರ ಓಡಬೇಕು? ಎಷ್ಟು ನಗದು ಬಹುಮಾನ? ಅಜ್ಜಿ ಯಾವುದನ್ನೂ ಕೇಳುವ ಗೋಜಿಗೆ ಹೋಗಲಿಲ್ಲ. ತನ್ನ ಮನೆಗೆ ಬಂದು ದೇವರಿಗೆ ದೀಪ ಹಚ್ಚಿ ಪ್ರಾರ್ಥನೆ ಮಾಡಿದರು.
ಮರುದಿನ ಮ್ಯಾರಥಾನ್ ಓಟ ಶುರು ಆಗುವ ಹೊತ್ತಿಗೆ ಮೈದಾನದ ಬಳಿ ಅಜ್ಜಿ ಬಂದಿದ್ದರು! ಅವರ ಹತ್ತಿರ ಸ್ಪೋರ್ಟ್ಸ್ ಶೂ ಅಥವಾ ಚಪ್ಪಲಿ ಯಾವುದೂ ಇರಲಿಲ್ಲ. ಚೆಕ್ಸ್ ಇರುವ ಒಂದು ಮಗ್ಗದ ಸೀರೆ ಉಟ್ಟುಕೊಂಡು ಅವರು ರೇಸಿಗೆ ಬಂದಿದ್ದರು. ಟಿಪಿಕಲ್ ಮರಾಠಿ ಹೆಂಗಸು! ಆಕೆ ಜೀವನದಲ್ಲಿ ಯಾವತ್ತೂ ಓಟದಲ್ಲಿ ಭಾಗವಹಿಸಿದವರು ಅಲ್ಲವೇ ಅಲ್ಲ! ಅಲ್ಲಿದ್ದ ಸಂಘಟಕರು ವಯಸ್ಸಿನ ಕಾರಣಕ್ಕೆ ಅವರನ್ನು ಸೇರಿಸಿಕೊಳ್ಳಲು ಒಪ್ಪಲಿಲ್ಲ. ಆದರೆ ಅಜ್ಜಿ ದುಂಬಾಲು ಬಿದ್ದು, ಕಣ್ಣೀರು ಹಾಕಿ, ಅವರ ಕಾಲಿಗೆ ಬಿದ್ದು ತಮ್ಮ ಹೆಸರು ಬರೆಸಿ ರೇಸಿಗೆ ನಿಂತರು.
ಮ್ಯಾರಥಾನ್ ಓಟ ಶುರು ಆಯಿತು. ಅಜ್ಜಿ ಮೂರು ಕಿಲೋ ಮೀಟರ್ ಒಡಬೇಕಾಗಿತ್ತು! ನೂರಾರು ಜನ ಆ ಮ್ಯಾರಥಾನ್ ರೇಸಿನಲ್ಲಿ ಭಾಗವಹಿಸಿದ್ದರು. ಅಜ್ಜಿ ಮೈ ಮರೆತು ಸುಡುವ ಟಾರ್ ರೋಡಲ್ಲಿ, ಬರಿ ಕಾಲಲ್ಲಿ ಓಡತೊಡಗಿದರು. ಸೀರೆಯ ನೆರಿಗೆಯನ್ನು ಸೊಂಟಕ್ಕೆ ಸಿಕ್ಕಿಸಿ ಕಚ್ಚೆ ಹಾಕಿಕೊಂಡರು. ಸೆರಗನ್ನು ತಲೆಗೆ ಸುತ್ತಿಕೊಂಡು ಓಡಲು ಶುರು ಮಾಡಿದರು. ಆಕೆ ಓಡುವ ವಿಡಿಯೋ ಯು ಟ್ಯೂಬಲ್ಲಿ ಲಭ್ಯವಿದೆ. ಒಮ್ಮೆ ಖಂಡಿತವಾಗಿ ನೋಡಿ. ಸುತ್ತ ನಿಂತ ಸಾವಿರಾರು ಜನ ಅಜ್ಜಿಗೆ ಜೈಕಾರ ಹಾಕಿದ್ದೇ ಹಾಕಿದ್ದು! ಅಜ್ಜಿ ಆ ಮ್ಯಾರಥಾನ್ ಗೆದ್ದಿದ್ದರು! ಅವರಿಗೆ ಟ್ರೋಫಿ ಮತ್ತು 5,000 ರೂಪಾಯಿ ನಗದು ಬಹುಮಾನ ಸಿಕ್ಕಿತ್ತು!
ಬಹುಮಾನ ಗೆದ್ದಾಗ ಪತ್ರಕರ್ತರು ಟಿವಿ ಕ್ಯಾಮೆರಾ ಹಿಡಿದು" ಅಜ್ಜಿ, ಯಾಕೆ ಮ್ಯಾರಥಾನ್ ಓಡಿದಿರಿ?" ಎಂದು ಪ್ರಶ್ನೆ ಮಾಡಿದಾಗ ಅಜ್ಜಿ ಮುಗ್ಧವಾಗಿ ನಗುತ್ತ " ನಾನು ಟ್ರೋಫಿಗಾಗಿ ಓಡಿದ್ದಲ್ಲ ಮಗಾ. ಓಡುವಾಗ ನನಗೆ ನನ್ನ ಗಂಡನ ಸೋತು ಹೋಗಿದ್ದ ಮುಖ ಮಾತ್ರ ಕಣ್ಣಮುಂದೆ ಬರುತ್ತಿತ್ತು"ಎಂದಿದ್ದರು. ಆ ಘಟನೆಯು ದೇಶದಾದ್ಯಂತ ಬಹಳ ದೊಡ್ಡ ಸುದ್ದಿ ಮಾಡಿತ್ತು. ಬಿಬಿಸಿ ಆಕೆಯ ಮೇಲೆ ಒಂದು ಚೆಂದವಾದ ಎಪಿಸೋಡ್ ಪ್ರಸಾರ ಮಾಡಿತು. ಬಹಳ ಜನ ಪ್ರಾಯೋಜಕರು ಆಕೆಯ ನೆರವಿಗೆ ಬಂದರು. ಲತಾ ಭಗವಾನ್ ಖರೆ ತಮ್ಮ ಗಂಡನ ಪ್ರಾಣ ಉಳಿಸಿ ಮನೆಗೆ ಕರೆದುಕೊಂಡು ಬಂದರು. ಅದು 2013ರ ಘಟನೆ.
ಮುಂದಿನ ಮೂರು ವರ್ಷಗಳ ಕಾಲ ಕೂಡ ಅವರು ಅದೇ ಮ್ಯಾರಥಾನ್ ಓಟದಲ್ಲಿ ಓಡಿ ಬಹುಮಾನ ಗೆದ್ದಿದ್ದಾರೆ! ಬಂದ ದುಡ್ಡಿನಿಂದ ಸ್ವಂತ ಮನೆ ಕಟ್ಟಿದ್ದಾರೆ. ಗಂಡನಿಗೆ ಒಳ್ಳೆಯ ಟ್ರೀಟ್ಮೆಂಟ್ ಕೊಡಿಸಿದ್ದಾರೆ. ಬಾರಾಮತಿ ನಗರದಲ್ಲಂತೂ ಅವರು ಈಗ ಸೆಲೆಬ್ರಿಟಿ ಆಗಿ ಹೋಗಿದ್ದಾರೆ. ಅವರ ಬದುಕಿನ ಹೋರಾಟದ ಆಧಾರಿತ ಮರಾಠಿ ಸಿನಿಮಾ ಈ ವರ್ಷ ಬಿಡುಗಡೆ ಆಗಿ ಜನಪ್ರಿಯ ಆಗಿದೆ.
🙏 ತನ್ನ ಗಂಡನ ಪ್ರಾಣವನ್ನು ಉಳಿಸಲು ಮ್ಯಾರಥಾನ್ ಓಡಿದ 67 ವರ್ಷದ ಅಜ್ಜಿ ಲತಾ ಭಗವಾನ್ ಖರೆ ಕಥೆ ತುಂಬಾ ಪ್ರೆರಣಾದಾಯಕ ಆಗಿದೆ.
☑ ರಾಜೇಂದ್ರ ಭಟ್ ಕೆ.
Comments
Post a Comment