ದಿನಕ್ಕೊಂದು ಕಥೆ 995







ದಿನಕ್ಕೊಂದು ಕಥೆ
ಆಧುನಿಕ ಪಕ್ಷಿ ಪ್ರೇಮಿ.

ಬದುಕು ಯಾವಾಗ ಬೇಕಾದರೂ ಬದಲಾಗಬಹದು. ಕೆಲವೊಮ್ಮೆ ಸಣ್ಣ ಘಟನೆಗಳು ಕೂಡ ಬದುಕುವ ರೀತಿಯನ್ನ ಬದಲಾಯಿಸಿ ಬಿಡುತ್ತವೆ. ಜೋಸೆಫ್ ಶೇಖರ್ ವಿಷಯದಲ್ಲೂ ಇಂತಹ ಒಂದು ಘಟನೆ ನಡೆಯುತ್ತದೆ. ೨೭ ಡಿಸೆಂಬರ್ ೨೦೦೪ ರ ಬೆಳಿಗ್ಗೆ ಶೇಖರ್ ಮನೆಯ ಮಹಡಿಯ ಮೇಲೆ ನಾಲ್ಕು ಗಿಣಿಗಳು ನೆಲದಲ್ಲಿ ಬಿದ್ದಿದ್ದ ಅಕ್ಕಿ ಯನ್ನ ಹೆಕ್ಕಿ ತಿನ್ನಲು ಪ್ರಯತ್ನಿಸುತ್ತಿರುತ್ತವೆ. ಈ ವೇಳೆಗಾಗಲೇ ಸುನಾಮಿ ಹೊಡೆತಕ್ಕೆ ಚೆನ್ನೈ ಸಿಕ್ಕಿರುತ್ತದೆ. ಲಕ್ಷಾಂತರ ಜನರ ಬದುಕು ಮೂರಾಬಟ್ಟೆ ಆಗಿರುತ್ತದೆ. ಇಂತಹ ಸಮಯದಲ್ಲಿ ಹಕ್ಕಿ -ಪಕ್ಷಿಗಳ ಕೇಳುವರಾರು? 

ಶೇಖರ್ ಮನೆಯ ತಾರಸಿಯ ಮೇಲೆ ಒಂದಷ್ಟು ಕಾಳು ಮತ್ತು ನೀರು ಇಡುವುದನ್ನ ಮೊದಲಿನಿಂದಲೂ ಪಾಲಿಸಿಕೊಂಡು ಬಂದಿರುತ್ತಾರೆ. ಸುನಾಮಿ ನಂತರ ಅಯ್ಯೋ ಈ ಪಕ್ಷಿಗಳ ಕಥೆಯೇನು? ಎನ್ನುವ ಪ್ರಶ್ನೆ ಅವರಲ್ಲಿ ಮೂಡುತ್ತದೆ. ನಿತ್ಯವೂ ನೆನೆಸಿದ ಅಕ್ಕಿಯನ್ನ ತಂದು ಮಹಡಿಯ ಮೇಲೆ ಹರಡಲು ಶುರು ಮಾಡುತ್ತಾರೆ. ಅದು ನಿತ್ಯ ಕಾಯಕವಾಗುತ್ತದೆ. ಕಳೆದ ೧೬ ವರ್ಷದಿಂದ ಇದನ್ನ ಮಾಡುತ್ತಾ ಬಂದಿದ್ದಾರೆ. ಅವರ ಬದುಕಿನಲ್ಲಿ ಇಷ್ಟು ಸಮಯದಲ್ಲಿ ಹಲವಾರು ಏಳು ಬೀಳುಗಳನ್ನ ಕಂಡಿದ್ದಾರೆ. ಬದಲಾಗದೆ ಅಚಲವಾಗಿ ಉಳಿದಿರುವುದು ಅವರ ಮನೆಗೆ ಬರುವ ಗಿಣಿಗಳಿಗೆ ಆಹಾರ ನೀಡುವ ಕಾರ್ಯ. 

ಪ್ರಾರಂಭದಲ್ಲಿ ಹತ್ತಿಪ್ಪತ್ತು ಬರುತ್ತಿದ್ದ ಗಿಣಿಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗಿ ಯಾವಾಗ  ಸಾವಿರಾರು ಸಂಖ್ಯೆಗೆ ಏರಿತು ಎನ್ನುವುದು ತಿಳಿಯಲೇ ಇಲ್ಲ ಎನ್ನುತ್ತಾರೆ ಶೇಖರ್. ಇಂದಿಗೆ ಬರೋಬ್ಬರಿ ನಿತ್ಯವೂ ಎಂಟು ಸಾವಿರ ಗಿಳಿಗಳು ಇವರ ತಾರಸಿಗೆ ಅಕ್ಕಿ ತಿನ್ನಲು ಬರುತ್ತವೆ ಎಂದರೆ ಅಚ್ಚರಿಯಾಗುತ್ತದೆ. 

ನಿತ್ಯ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮಹಡಿಯನ್ನ ಸ್ವಚ್ಛಗೊಳಿಸಿ , ಅಕ್ಕಿಯನ್ನ ನೆನೆಸುವ ಕಾರ್ಯದಲ್ಲಿ ಇವರು ತೊಡಗುತ್ತಾರೆ. ಬೆಳಿಗ್ಗೆ ಮತ್ತು ಸಾಯಂಕಾಲ ಎರಡು ವೇಳೆ ಆಹಾರವನ್ನ ನೀಡುತ್ತಾರೆ. ಇದಕ್ಕಾಗಿ ನಿತ್ಯವೂ ಐವತ್ತು ಕೇಜಿ ಅಕ್ಕಿ ಬೇಕಾಗುತ್ತದೆ. ಹತ್ತಿರತ್ತಿರ ಎರಡೂವರೆ ಸಾವಿರ ರೂಪಾಯಿ ನಿತ್ಯ ಖರ್ಚು. ಜೊತೆಗೆ ಬೆಳಿಗ್ಗೆ ನಾಲ್ಕರಿಂದ ಏಳುವ ದೈಹಿಕ ಶ್ರಮವನ್ನ ಕೂಡ ಬೇಡುತ್ತದೆ. 

ಈ ಗಿಣಿಗಳು ನನ್ನ ಮಕ್ಕಳು ಅವಕ್ಕೆ ಊಟ ಹಾಕಲು ನಾನು ಬೇರೆಯವರಿಂದ ಹಣ ಸಹಾಯ ಪಡೆಯಲು ಹೇಗೆ ಸಾಧ್ಯ ? ಎನ್ನುತ್ತಾರೆ ಶೇಖರ್. ಚೆನ್ನೈ ಗೆ ಬರುವ ವಿದೇಶಿ ಪ್ರವಾಸಿಗರು ಇವರ ಮನೆಯನ್ನ , ಇವರನ್ನ ಭೇಟಿ ಮಾಡದೆ ಹೋಗುವುದಿಲ್ಲ. ಹೀಗೆ ಬಂದವರು ಹಣ ಸಹಾಯ ಮಾಡಲು ಬಂದಾಗ ಶೇಖರ್ ಅದನ್ನ ನಿರಾಕರಿಸುತ್ತಾರೆ. ಇಲ್ಲಿಯವರೆಗೆ ಯಾರಿಂದಲೂ ಪೈಸೆ ಸಹಾಯ ಪಡೆಯದೇ ತಮ್ಮ ಗಳಿಕೆಯಲ್ಲಿ ಈ ಕಾರ್ಯವನ್ನ ಮಾಡುತ್ತಿದ್ದಾರೆ. ಹೀಗಾಗಿ ಇವರಿಗೆ ಬರ್ಡ್ ಮ್ಯಾನ್ ಆಫ್ ಚೆನ್ನೈ ಎನ್ನುವ ಹೆಸರು ಬಂದಿದೆ . 

ನಾವಿರುವ ಭೂಮಿಯಲ್ಲಿ ಅದೇ ಆಕಾಶದಡಿಯಲ್ಲಿ ಅಚ್ಚರಿ ಹುಟ್ಟಿಸುವ ಜನರಿದ್ದಾರೆ. ಯಾರೂ ಯಾರಂತೆಯೂ ಆಗಲು ಸಾಧ್ಯವಿಲ್ಲ. ಆದರೆ ಅವರ ಬದುಕು ಒಂದಷ್ಟು ಪ್ರೇರಣೆ , ಒಂದಷ್ಟು ಭೂತದಯೆ ನಮ್ಮಲ್ಲಿ ಸೃಷ್ಟಿಸಿದರೆ ಅಲ್ಲಿಗೆ ಈ ಬರಹದ ಉದ್ದೇಶ ಸಾರ್ಥಕ. 

ಕೃಪೆ:ರಂಗನಾಥ ಮೂಕನಹಳ್ಳಿ.ಲೇಖಕರು.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059