ದಿನಕ್ಕೊಂದು ಕಥೆ 1001
ದಿನಕ್ಕೊಂದು ಕಥೆ
ರಾಜನ ದಯೆ – ದೇವರ ದಯೆ........
ಒಂದಾನೊಂದು ಕಾಲದಲ್ಲಿ ಕನಕಪುರಿ ಎಂಬ ರಾಜ್ಯವನ್ನು ಆಳುತ್ತಿದ್ದ ರಾಜನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಇದೊಂದರ ಹೊರತಾಗಿ ಅವನಲ್ಲಿ ಬೇರಾವ ದೋಷವೂ ಇರಲಿಲ್ಲ.
ಒಂದು ದಿನ ಅವನು ಮಾರುವೇಷದಿಂದ ಮಂತ್ರಿಯೊಡಗೂಡಿ ತನ್ನ ರಾಜಧಾನಿಯಲ್ಲಿ ತಿರುಗಾಡುತ್ತಿದ್ದಾಗ, ಇಬ್ಬರು ಭಿಕ್ಷುಕರು ಭಿಕ್ಷೆ ಬೇಡುತ್ತಿದ್ದುದನ್ನು ಕಂಡನು. ಅವರಲ್ಲಿ ಒಬ್ಬನು ‘ರಾಮನ ದಯೆ’ ಎಂದೂ, ಮತ್ತೊಬ್ಬನು ‘ರಾಜನ ದಯೆ’ ಎಂದೂ ಕೂಗಿ ಭಿಕ್ಷೆ ಬೇಡುತ್ತಿದ್ದರು.
ಮರುದಿನ ರಾಜನು ಅವರಿಬ್ಬರನ್ನು ಪರೀಕ್ಷಿಸಲು ಆಸ್ಥಾನಕ್ಕೆ ಕರೆಸಿದನು. ಅವನ ಮಂತ್ರಿಯು ಅವರಿಬ್ಬರನ್ನು ಪ್ರಶ್ನಿಸಿದ, “ನಿನ್ನೆ ನೀವಿಬ್ಬರೂ ಭಿಕ್ಷೆಯನ್ನು ಬೇಡುವಾಗ ಒಬ್ಬ ರಾಮನ ದಯೆ ಎಂದು, ಮತ್ತು ರಾಜನ ದಯೆ ಎಂದೂ ಹೇಳುತ್ತಿದ್ದಿರಿ. ಅದರ ಅರ್ಥವೇನು?”
ರಾಮನ ದಯೆ ಎನ್ನುವವನು ಹೇಳಿದನು, “ಸ್ವಾಮಿ, ಈ ಇಡೀ ಪ್ರಪಂಚ ಶ್ರೀರಾಮನಿಂದ ರಕ್ಷಿಸಲ್ಪಟ್ಟಿದೆ. ಅವನೇ ಸಂಪತ್ತನ್ನೂ, ಶ್ರೀಮಂತಿಕೆಯನ್ನೂ ನೀಡುವನು. ಅದಕ್ಕಾಗಿ ರಾಮನ ದಯೆ ಎಂದು ನಾನು ಭಿಕ್ಷೆಯನ್ನು ಬೇಡುತ್ತಿದ್ದೆ”.
ಮಂತ್ರಿಯ ಪ್ರಶ್ನೆಗೆ ಇನ್ನೊಬ್ಬನು, “ಸ್ವಾಮಿ, ದೇವರು ಕಣ್ಣಿಗೆ ಕಾಣಲಾರ. ರಾಜನು ಕಣ್ಣಿಗೆ ಕಾಣುವ ದೇವರು. ಅವನೇನಾದರೂ ಬಯಸಿದರೆ ಯಾರನ್ನು ಬೇಕಾದರೂ ಶ್ರೀಮಂತನನ್ನಾಗಿ ಮಾಡಬಹುದು. ಅದಕ್ಕಾಗಿ ರಾಜನ ದಯೆ ಎಂದು ನಾನು ಭಿಕ್ಷೆಯನ್ನು ಬೇಡುತ್ತಿದ್ದೆ” ಎಂದನು.
ರಾಜನು ‘ರಾಜನ ದಯೆ’ ಎಂಬುವವನೇ ನಿಜವಾದ ಬುದ್ಧಿವಂತ ಎಂಬುದಾಗಿ ತರ್ಕ ಮಾಡಿದ. ಮಂತ್ರಿಯು ಅದನ್ನು ಒಪ್ಪಲಿಲ್ಲ. ಅವನು ಹೇಳಿದ, “ಒಬ್ಬ ಮನುಷ್ಯ ಎಷ್ಟೇ ಸಹಾಯ ಮಾಡಿದರೂ ದೇವರ ದಯೆ ಇಲ್ಲದಿದ್ದಲ್ಲಿ ಅದನ್ನು ಪಡೆಯುವವನು ಶ್ರೀಮಂತನಾಗಲಾರ”. ಇದನ್ನು ಪರೀಕ್ಷಿಸಲು ತೀರ್ಮಾನಿಸಿದ ರಾಜನು, ಮರುದಿನ ಒಂದು “ರಾಮನವಮಿಯ ದಿನ ರಾಜನು ಉಡುಗೊರೆಗಳನ್ನು ಹಂಚುತ್ತಾನೆ. ಯಾರು ಬೇಕಾದರೂ ಬಂದು ಅದನ್ನು ಪಡೆಯಬಹುದು” ಎಂದು ಅಪ್ಪಣೆಯನ್ನು ಹೊರಡಿಸಿದ.
ಅದರಂತೆ ರಾಮನವಮಿಯ ದಿನ ಜನಗಳು ಕಲೆತರು. ಆ ಇಬ್ಬರು ಭಿಕ್ಷುಕರೂ ಸಹ ಬಂದರು. ರಾಜನು ಪ್ರತಿಯೊಬ್ಬರಿಗೂ ಒಂದೊಂದು ಕುಂಬಳಕಾಯಿ ಮತ್ತು ಹೊಸ ಬಟ್ಟೆಯನ್ನು ನೀಡಿದನು. ‘ರಾಜನ ದಯೆ’ ಎಂದು ಕೂಗುವ ಭಿಕ್ಷುಕ ಬಂದಾಗ, ಅವನನ್ನು ಗುರುತಿಸಿದ ರಾಜನು ಮಂತ್ರಿಯ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದನು. ಮಂತ್ರಿಯು ಒಳಗೆ ಹೋಗಿ ಒಂದು ಕುಂಬಳಕಾಯಿಯನ್ನು ತಂದನು. ಆ ಕುಂಬಳಕಾಯಿ ಮತ್ತು ಒಂದು ಬಟ್ಟೆಯನ್ನು ಅವನಿಗೆ ನೀಡಲಾಯಿತು.
ಕೆಲವು ಸಮಯದ ನಂತರ ರಾಜ ಮತ್ತು ಮಂತ್ರಿ ಇಬ್ಬರೂ ಮಾರುವೇಷದಿಂದ ಪಟ್ಟಣವನ್ನು ನೋಡಲು ಹೋದರು. ರಾಜನ ದಯೆ ಎಂದು ಕೂಗುವ ಭಿಕ್ಷುಕ ಇನ್ನೂ ಭಿಕ್ಷೆ ಬೇಡುತ್ತಿರುವುದನ್ನು ಗಮನಿಸಿದರು.
ಮಾರನೆಯ ದಿನ ರಾಜನು ಅವನನ್ನು ಆಸ್ಥಾನಕ್ಕೆ ಕರೆಸಿ ಕೇಳಿದನು. “ನನ್ನ ಉಡುಗೊರೆಯನ್ನು ಪಡೆದೂ ನೀನು ಭಿಕ್ಷೆ ಬೇಡುತ್ತಿದ್ದೀಯಾ?” ಆ ಭಿಕ್ಷುಕ ಉತ್ತರಿಸಿದ. “ರಾಜ! ನಾನು ಆ ಕುಂಬಳಕಾಯಿಯನ್ನು ಎರಡು ಬೆಳ್ಳಿ ನಾಣ್ಯಗಳಿಗೆ ಮಾರಿದೆ. ಅದರಿಂದ ನಾನು ಹೇಗೆ ಶ್ರೀಮಂತನಾಗಬಲ್ಲೆ?”
ಅದಕ್ಕೆ ರಾಜ “ನೀನೊಬ್ಬ ಮೂರ್ಖ! ಆ ಕುಂಬಳಕಾಯಿಯಲ್ಲಿ ಬೆಲೆ ಬಾಳುವ ಆಭರಣಗಳು ಮತ್ತು ಮುತ್ತುಗಳಿದ್ದವು. ನೀನೇನಾದರೂ ಅದನ್ನು ಕತ್ತರಿಸಿದ್ದಲ್ಲಿ ನೀನು ಶ್ರೀಮಂತನಾಗಿರುತ್ತಿದ್ದೆ” ಎಂದು ಹೇಳಿದನು.
ಮತ್ತೆ ಕೆಲವು ಕಾಲದ ನಂತರ ರಾಜನು ಪಟ್ಟಣ ನೋಡಲು ಹೋದಾಗ ಒಬ್ಬ ಶ್ರೀಮಂತನು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದುದನ್ನು ಕಂಡನು. ಮಂತ್ರಿಯು ಅವನನ್ನು ‘ರಾಮನ ದಯೆ’ ಎಂದ ಭಿಕ್ಷುಕ ಎಂದು ಗುರುತಿಸಿದನು.
ಅವನನ್ನು ಆಸ್ಥಾನಕ್ಕೆ ಕರೆಸಲಾಯಿತು. ರಾಜನು ಕೇಳಿದ, “ನೀನು ಬೀದಿಯಲ್ಲಿ ಬೇಡುತ್ತಿದ್ದ ಭಿಕ್ಷುಕನಲ್ಲವೇ? ನೀನು ಹೇಗೆ ಶ್ರೀಮಂತನಾದೆ?”
ಆ ವ್ಯಕ್ತಿಯು ಹೇಳಿದನು, “ಪ್ರಭು! ರಾಮನ ದಯೆಯಿಂದಲೇ ನಾನು ಶ್ರೀಮಂತನಾದೆ. ನನ್ನ ತಂದೆಯ ಆತ್ಮಶಾಂತಿಗಾಗಿ ನಾನು ಬ್ರಾಹ್ಮಣರಿಗೆ ಔತಣವನ್ನು ನೀಡಬೇಕಾಗಿತ್ತು. ಆದರೆ ನಾನು ಕುಂಬಳಕಾಯಿಯನ್ನು ಮಾತ್ರ ಕೊಂಡುಕೊಳ್ಳುವುದರಲ್ಲಿ ಸಮರ್ಥನಾದೆ. ಆದರೆ ಆಶ್ಚರ್ಯವೆಂದರೆ ನಾನು ಅದನ್ನು ಕತ್ತರಿಸಿದಾಗ ಅದರಲ್ಲಿ ಆಭರಣಗಳಿದ್ದವು. ಹೀಗೆ ಶ್ರೀರಾಮನ ಕೃಪೆಯಿಂದ ನಾನು ಶ್ರೀಮಂತನಾದೆ”
ಆಗ ರಾಜನಿಗೆ ಅರಿವಾಯಿತು, ಭಗವಂತನ ದಯೆಯಿದ್ದರೆ ಮಾತ್ರವೇ ಪಡೆಯುವುದನ್ನು ಅನುಭವಿಸಲು ಸಾಧ್ಯ ಎಂದು. ನಮ್ಮ ನಮ್ಮ ನಂಬಿಕೆಯೇ ನಮ್ಮನ್ನು ಕಾಪಾಡುವ ಶಕ್ತಿಯಾಗುವುದು.
ಕೃಪೆ ಕರುನಾಡ ಬಳಗ ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ ವೀರೇಶ್ ಅರಸಿಕೆರೆ.
ವೀರೇಶ್ ಸರ್ ಅವರೇ, ಕಥೆ ತುಂಬಾ ಅರ್ಥಗರ್ಭಿ೬ತವಾಗಿದೆ ತುಂಬಾ ಧನ್ಯವಾದಗಳು. ತಮಗೆ
ReplyDelete