ದಿನಕ್ಕೊಂದು ಕಥೆ 1005
*🌻ದಿನಕ್ಕೊಂದು ಕಥೆ🌻*
*ಬೆರಗಿನ ಬೆಳಕು*
ಹಿಂದೆ ವಿದೇಹ ರಾಜ್ಯವನ್ನು ಅಂಗರಾಜ ಆಳುತ್ತಿದ್ದಾಗ ಬೋಧಿಸತ್ವ ನಾರದನೆಂಬ ಮಹಾಬ್ರಹ್ಮನಾಗಿದ್ದ. ಆತ ಕರುಣೆಯಿಂದ ಭೂಲೋಕದ ಕಡೆಗೆ ದೃಷ್ಟಿಯನ್ನು ಹರಿಸಿ, ಯಾವ ಯಾವ ಜೀವಗಳು ಧರ್ಮದಲ್ಲಿ ಬದುಕುತ್ತಿವೆ, ಯಾವ ಜೀವಗಳು ಅಧರ್ಮದ ಕಡೆಗೆ ಮುಖ ಮಾಡಿವೆ ಎಂದು ನೋಡುತ್ತಿದ್ದ. ಆಗ ಅವನ ದೃಷ್ಟಿ ಅಂಗರಾಜನ ಅರಮನೆಯ ಮೇಲೆ ಬಿತ್ತು. ಅವನು ನೋಡಿದ್ದು ಅವನಿಗೆ ಆಶ್ಚರ್ಯವನ್ನು ತಂದಿತು. ರಾಜ ತನ್ನ ಅಮಾತ್ಯರಲ್ಲಿ ನೀಚಬುದ್ಧಿ ಇರುವವರನ್ನೇ ಆದರಿಸುತ್ತ, ಅವರ ಮಾತುಗಳನ್ನು ಕೇಳುತ್ತಿದ್ದ. ಸಜ್ಜನರಾದ ಅಮಾತ್ಯರು ಅಸಹಾಯಕರಾಗಿದ್ದರು. ಅವನಿಗೆ ಅಲ್ಲೊಂದು ಆಶಾಕಿರಣ ಕಂಡಿತು. ಅಂಗರಾಜನ ಮಗಳು ರುಜಾ ತಂದೆಗೆ ಧರ್ಮದ ದಾರಿಯನ್ನು ಹೇಳುತ್ತಿದ್ದಳು. ಆದರೆ ತಂದೆ ಮಾತ್ರ ಕುತ್ಸಿತ ಬುದ್ಧಿಯ ಕಾಶ್ಯಪನ ಮಾತುಗಳನ್ನು ಕೇಳಿ ಮಗಳಿಗೆ ಹೇಳಿದ, “ಮಗಳೇ, ನೀನು ಬಹಳಷ್ಟು ಹಣವನ್ನು ವ್ಯರ್ಥ ಮಾಡುತ್ತಿದ್ದೀಯಾ. ಯಾವುಯಾವುದೋ ವೃತಗಳನ್ನು ಮಾಡಿ ಪ್ರಯೋಜನವಿಲ್ಲದವರಿಗೆ ಹಂಚುತ್ತೀಯಾ, ಸುಮ್ಮನೆ ಉಪವಾಸ, ವ್ರತಗಳನ್ನು ಮಾಡುತ್ತ ದೇಹವನ್ನು ದಂಡಿಸುತ್ತೀ. ಅದರಿಂದ ಯಾವ ಪುಣ್ಯವೂ ಬರುವುದಿಲ್ಲ. ಬದುಕಿರುವ ತನಕ ತಿಂದು ಸಂತೋಷಪಡುವುದನ್ನು ಬಿಡಬಾರದು. ಪರಲೋಕವೆಂಬುವುದು ಇಲ್ಲವೇ ಇಲ್ಲ”.
ಆ ಮಾತುಗಳನ್ನು ಕೇಳಿ ಮಗಳಿಗೆ ಬಹಳ ದು:ಖವಾಯಿತು. ಸ್ವಭಾವತ: ಒಳ್ಳೆಯವನಾಗಿದ್ದ ತಂದೆ, ನೀಚ ಮಂತ್ರಿಯ ಮಾತಿನಿಂದ ಅಧರ್ಮದ ಹಾದಿಗೆ ಹೋಗುತ್ತಿದ್ದನಲ್ಲ ಎಂದು ದು:ಖವಾಯಿತು. ಆಕೆ ಧರ್ಮದ ಕೆಲವು ಮಾತುಗಳನ್ನು ಹೇಳಿ, “ಅಪ್ಪಾ, ನನಗೆ ಹಿಂದಿನ ಜನ್ಮಗಳ ಸ್ಮರಣೆ ಇದೆ. ನಾನು ಮೊದಲು ಮಗಧ ದೇಶದಲ್ಲಿ ಅಕ್ಕಸಾಲಿಗನಾಗಿ ಹುಟ್ಟಿದ್ದೆ. ಆಗ ನಾನು ಕೆಟ್ಟ ಜನರ ಸಹವಾಸದಿಂದಾಗಿ ಪರಸ್ತಿçà ಗಮನ ಮಾಡಿದೆ. ಆ ಪಾಪ ನನ್ನನ್ನು ಬೆಂಬಿಡದೆ ಕಾಡಿತು. ಮುಂದೆ ಹಂಸೆಯಾಗಿ, ನಂತರ ಶ್ರೇಷ್ಠಿಯ ಮಗನಾಗಿ ಹುಟ್ಟಿದೆ. ಆಗ ಸಜ್ಜನರ ಸಹವಾಸ ಮಾಡಿದೆ, ಉಪೋಸಥ ವೃತಗಳನ್ನು ಮಾಡಿದೆ. ಆದರೂ ನಾನು ಹಿಂದೆ ಮಾಡಿದ ಪಾಪದಿಂದಾಗಿ ರೌರವ ನರಕದಲ್ಲಿ ಶತಮಾನಗಳ ಕಾಲ ಇದ್ದು ಪಾಪ ಕಡಿಮೆಯಾದ ಮೇಲೆ ಮೇಕೆಯಾಗಿ, ಕಪಿಯಾಗಿ, ನಪುಂಸಕನಾಗಿ ಹುಟ್ಟಿ ಬೆಂಡಾಗಿ ಬಂದಿದ್ದೇನೆ. ಅದ್ದರಿಂದ ತಂದೆಯೇ, ದಯವಿಟ್ಟು ಧರ್ಮದ ಮಾರ್ಗವನ್ನು ಬಿಡಬೇಡ” ಎಂದು ಬೇಡಿಕೊಂಡಳು. ಆದರೆ ರಾಜನ ಮನಸ್ಸು ಬದಲಾದಂತೆ ತೋರಲಿಲ್ಲ.
ಆಗ ಬೋಧಿಸತ್ವ ಧರೆಗಿಳಿದು ಬಂದ. ಒಬ್ಬ ಸುಂದರನಾದ ಆದರೆ ಅತ್ಯಂತ ಪ್ರಭಾವಶಾಲಿಯಾದ ಸನ್ಯಾಸಿಯಂತೆ ವೇಷವನ್ನು ತೊಟ್ಟು ಅರಮನೆಯ ಅಂಗಳದಲ್ಲಿ ಇಳಿದ. ಅವನ ಠೀವಿ, ಮುಖದ ಮೇಲಿನ ತೇಜವನ್ನು ಕಂಡು ರಾಜ ಭಯಭೀತನಾದ. ನಮಸ್ಕಾರ ಮಾಡಿ, ತಾವು ಯಾರು ಎಂದು ಕೇಳಿದ. “ತಾವು ಈ ಜಗತ್ತಿನವರಂತೆ ಕಾಣುವುದಿಲ್ಲ. ತಾವು ಎಲ್ಲಿಂದ ಬಂದಿರಿ?” ಎಂದು ಹೆದರುತ್ತ ಕೇಳಿದ. ಅದಕ್ಕೆ ಬೋಧಿಸತ್ವ, “ನಾನು ದೇವಮುನಿ, ನಾರದ. ನೀನು ಧರ್ಮದ ಪಥದಿಂದ ಜಾರುತ್ತಿದ್ದೀಯಾ. ನಿನಗೆ ಪರಲೋಕದಲ್ಲಿ ನಂಬಿಕೆ ಇಲ್ಲ. ನಾನು ಅಲ್ಲಿಂದಲೇ ಬಂದವನು. ನಿನ್ನಂಥವನಿಗೆ ಕೋಕಾಳ ನರಕ, ಲೋಕಾಂತರ ನರಕ ಮುಂತಾದ ಇಪ್ಪತ್ತೊಂದು ನರಕಗಳಿವೆ” ಎಂದು ಹೇಳಿ ಅವುಗಳನ್ನು ಘೋರವಾಗಿ ವರ್ಣಿಸಿದ. ರಾಜ ಹೆದರಿಕೆಯಿಂದ ನಡುಗತೊಡಗಿದ. ಬೋಧಿಸತ್ವನ ಕಾಲಿಗೆ ಬಿದ್ದು ಕ್ಷಮೆ ಕೇಳಿದ. ಮುಂದೆ ಸನ್ಮಾರ್ಗದಲ್ಲೇ ನಡೆಯುವುದಾಗಿ ಮಾತುಕೊಟ್ಟ. ಬೋಧಿಸತ್ವ ರಾಜಕುಮಾರಿಯನ್ನು ಕರೆದು ಹೇಳಿದ, “ಮಗಳೇ ಚಿಂತೆಬೇಡ. ನಿನ್ನ ತಂದೆ ಸರಿಯಾಗುತ್ತಾನೆ. ಒಳ್ಳೆಯ ಮಾತಿಗೆ ಬಗ್ಗದ ವ್ಯಕ್ತಿಗೆ, ಬಗ್ಗುವ ಹಾಗೆ ಮಾಡಲು ಭಯದ ಕೋಲೇ ಬೇಕು”.
ಇದು ಇಂದಿಗೂ ಸತ್ಯ.
ಕೃಪೆ : ಪ್ರಜಾವಾಣಿ.ಗುರು ರಾಜ್ ಕರ್ಜಗಿ.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment