ದಿನಕ್ಕೊಂದು ಕಥೆ 1019
*🌻ದಿನಕ್ಕೊಂದು ಕಥೆ🌻*
*ಅಹಲ್ಯೆಬಾಯಿ ಹೋಳ್ಕರ್ ಎಂಬ ಅಚ್ಚಳಿಯದ ನಕ್ಷತ್ರ ಇಂದು 226ನೇ ಪುಣ್ಯಸ್ಮರಣೆ*
12ನೇ ವಯಸ್ಸಿನಲ್ಲಿ ವಿವಾಹ, 29ನೇ ವಯಸ್ಸಿನಲ್ಲಿ ವೈಧವ್ಯ, 42ನೇ ವಯಸ್ಸಿನಲ್ಲಿ ರಾಣಿಯಾಗಿ ರಾಜ್ಯಾಧಿಕಾರ ಸ್ವೀಕಾರ , 28 ವರ್ಷಗಳ ಸುದೀರ್ಘ, ಯಶಸ್ವಿ ಆಳ್ವಿಕೆ ಬಳಿಕ 70ನೇ ವಯಸ್ಸಿನಲ್ಲಿ ದೇಹತ್ಯಾಗ.. ದೇಶದ ಮೂಲೆಮೂಲೆಗಳಲ್ಲಿ ಖಿಲ್ಜಿ, ತುಘಲಕ್, ಮೊಘಲರು, ನಿಜಾಮರು ಮತ್ತಿತರ ಆಕ್ರಮಣಕಾರರಿಂದ ನಾಶವಾಗಿದ್ದ ಹಿಂದೂ ದೇವಾಲಯಗಳನ್ನು, ಪುಣ್ಯಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ ಮಹಾಸಾಧ್ವಿ. ಒಂದೂ ಯುದ್ದವನ್ನು ಸೋಲದೇ, ರಾಜ್ಯದ ಭೂಭಾಗದಲ್ಲಿ ಒಂದಿಂಚೂ ವಿರೋಧಿಗಳಿಗೆ ಬಿಟ್ಟುಕೊಡದೆ ಮಾಳವ ಸಾಮ್ರಾಜ್ಯ ಕಾಪಾಡಿದ ವೀರನಾರಿ , ವಿಸ್ತರಣೆಯ ಮಹಾತ್ವಾಕಾಂಕ್ಷೆಯಿಂದ ಪರರ ಮೇಲೆ ಆಕ್ರಮಣ ನಡೆಸದ ಸಂಯಮಿ. ಯುದ್ದದಲ್ಲಿ ಸೆರೆಸಿಕ್ಕ ಶತ್ರುಸೈನಿಕರ ಮಡದಿ, ಮಕ್ಕಳಿಗೆ ಪತ್ರಬರೆದು ಯೋಗಕ್ಷೇಮ ವಿಚಾರಿಸುತ್ತಿದ್ದ ಕರುಣಾಳು, ಎಂಥ ಘೋರ ಅಪರಾಧಕ್ಕೂ ಮರಣದಂಡನೆ ಪರಿಹಾರವಲ್ಲ ಎಂದು ಕ್ಷಮಿಸಿಬಿಡುತ್ತಿದ್ದ ದಯಾಳು, ಭಾರತದ ಇತಿಹಾಸದಲ್ಲಿ ಆಗಿಹೋದ ಹತ್ತುಹಲವು ವೀರರಮಣಿಯರ ತಾರಾಕಾಶದಲ್ಲಿ ಅಹಲ್ಯಾಬಾಯಿ ಹೋಳ್ಕರ್ ಅಚ್ಚಳಿಯದೇ ಹೊಳೆಯುವ ಅರುಂಧತಿ ನಕ್ಷತ್ರ.
ಭಾರತ ದೇಶದ ಮಣ್ಣಿನ ಗುಣವೇ ಅಂಥದ್ದು ಈ ಧರ್ಮಭೂಮಿಯನ್ನು ಆಳಿದ ಸಹಸ್ರಾರು ರಾಜವಂಶಗಳ ಅಸಂಖ್ಯಾತ ರಾಜಮಹಾರಾಜರಂತೆ, ಅಪಾರ ಸಂಖ್ಯೆಯ ವೀರನಾರಿಯರೂ ಇತಿಹಾಸವನ್ನು ಶ್ರೀಮಂತಗೊಳಿಸಿದ್ದಾರೆ. ಮಧ್ಯಪ್ರದೇಶದ ಇಂದೋರ್ ಹಾಗೂ ಸಮೀಪದ ಮಾಹೇಶ್ವರ ನಗರವನ್ನು ಕೇಂದ್ರಸ್ಥಾನವಾಗಿಸಿಕೊಂಡು ಮಾಳವ ಸಂಸ್ಥಾನವನ್ನು 28 ವರ್ಷಗಳ ಕಾಲ ಆಳಿದ ಅಂಥ ಓರ್ವ ಸಿಂಹಿಣಿ ಅಹಲ್ಯಾಬಾಯಿ ಹೋಳ್ಕರ್, ಕಳೆದ ಮೇ 31ಕ್ಕೆ ಅಹಲ್ಯಾಬಾಯಿಯ 296ನೇ ಜಯಂತಿ ಆಚರಿಸಲಾಯಿತು, ಶುಕ್ರವಾರ (ಆಗಸ್ಟ್ 13) 226ನೇ ಪುಣ್ಯಸ್ಮರಣೆ, 18ನೇ ಶತಮಾನದಲ್ಲಿ ಪುರುಷ ಪ್ರಧಾನ ಸಾಮ್ರಾಜ್ಯಶಾಹಿಗಳ ನಡುವೆ ಅತ್ಯಾದ್ಭುತ ಆಡಳಿತಗಾರ್ತಿಯಾಗಿ, ಜನಾನುರಾಗಿಯಾಗಿ, ಸನಾತನ ಧರ್ಮದ ಪುನರೋದ್ಧಾರಕಿಯಾಗಿ, ಕೈಗಾರಿಕೀಕರಣದ ಪ್ರವರ್ತಕಿಯಾಗಿ ಪ್ರಜ್ವಲಿಸಿದ ಪ್ರಾತಃ ಸ್ಮರಣೀಯ ಹೆಸರು ಅಹಲ್ಯಾಬಾಯಿ. ಅಹಲ್ಯಾ ಜನಿಸಿದ್ದು 1725 ಮೇ 31ರ ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಚೊಂಡಿ ಎಂಬ ಹಳ್ಳಿಯಲ್ಲಿ, ಮೂಲತಃ ಕುರಿಗಾಹಿ ಸಮುದಾಯದವಾದರೂ ಕಾಲಾಂತರದಲ್ಲಿ ಮರಾಠರ ಸಾಮ್ರಾಜ್ಯದಲ್ಲಿ ಶಸ್ತ್ರಾಸ್ತ್ರ ಹಿಡಿದು ಸೈನ್ಯ ಹಾಗೂ ಆಡಳಿತ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಧನಗಾರ್ ವಂಶದ ಪಾಟೀಲ್ ಮಂಕೋಜಿ ಶಿಂಧೆ(ಅಹಲ್ಯಾ ತಂದೆ). ಅಪ್ಪನ ಒತ್ತಾಸೆಯಂತೆ ಓದು, ಬರಹ ಕಲಿತಿದ್ದ ಅಹಲ್ಯಾ ಬಾಲ್ಯದಿಂದಲೇ ಬುದ್ಧಿಮತ್ತೆ ಹಾಗೂ ಸೇವಾಭಾವದಿಂದ ಸುತ್ತಮುತ್ತಲ ಪ್ರದೇಶದಲ್ಲಿ ಹೆಸರುವಾಸಿ, 1737ರಲ್ಲಿ 12ನೇ ವಯಸ್ಸಿನಲ್ಲಿ ಅಹಲ್ಯಯ ವಿವಾಹ ಸುಬೇದಾರ ಮಲ್ಹಾರರಾವ್ ಹೋಳ್ಕರ್ ಪುತ್ರ ಖಂಡೇರಾವ್ ಜೊತೆ ನಡೆಯಿತು. ಮರಾಠಾ ಪೇಶ್ವೆಗಳ ಸಾಮಂತನಾಗಿದ್ದ ಮಲ್ಹಾರರಾವ್ 30 ಪರಗಣ ವ್ಯಾಪ್ತಿಯ ಪ್ರಾಂತ್ಯದ ಸುಬೇದಾರನಾಗಿ ಅಂದಾಜು 7ಲಕ್ಷ ರೂ ಆದಾಯ ಹೊಂದಿದ್ದರು
1741ರಲ್ಲಿ ಮಲ್ಹಾರ ರಾವ್ ಇಂದೋರ್ ನಲ್ಲಿ ಅರಮನೆ ಕಟ್ಟಿಸಿ, ವ್ಯಾಪಾರ ವಹಿವಾಟು ಕೇಂದ್ರವಾಗಿ ಬೆಳೆಸಿದರು ಇಂದ್ರಪುರಿ ಎಂಬ ಸಣ್ಣ ಪಟ್ಟಣ, ಇವತ್ತಿನ ಸಂಪದ್ಭರಿತ ಇಂದೋರ್ ನಗರವಾಗಿ ಬೆಳೆಯಲು ಬೀಜಾಂಕುರವಾಗಿದ್ದು ಹೀಗೆ. ಮರಾಠಾ ಸಾಮ್ರಾಜ್ಯದ ಪರವಾಗಿ ಪತಿ ಹಾಗೂ ಮಾವ ನಿರಂತರ ಯುದ್ದಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ ಇಂದೋರ್ ನ ಆಡಳಿತ ನೋಡಿಕೊಳ್ಳುವ ಹೊಣೆ ಅಹಲ್ಯಾಬಾಯಿ ಹೆಗಲಿಗೇರುತ್ತಿತ್ತು.
1754ರಲ್ಲಿ ಭರತಪುರ ಜಾಟ ರಾಜ್ಯದ ಕುಂಭರ್ ಕೋಟೆಗೆ ಮುತ್ತಿಗೆ ಹಾಕಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಬಡಿದು ಖಂಡೇರಾವ್ ಕೊನೆಯುಸಿರೆಳೆದಾಗ ಅಹಲ್ಯಾ ಪಾಲಿನ ಸುಂದರ ಜಗತ್ತು ಕುಸಿದುಬಿದ್ದತ್ತು. ಪತಿಯ ಅಕಾಲಮರಣದಿಂದ ಬದುಕುವ ಆಸೆಯನ್ನೇ ಕಳೆದುಕೊಂಡ ಅಹಲ್ಯಾ ಸಹಗಮನಗೈಯಲು ನಿರ್ಧರಿಸಿಬಿಟ್ಟಿದ್ದರು, ಸತಿ ಹೋಗುವುದು ಬೇಡವೆಂದು ಜನ ಗೋಗರೆದರೂ, ಅಹಲ್ಯಾ ಕೇಳಲಿಲ್ಲ ಈ ಸಂದರ್ಭದಲ್ಲಿ ಮಾವ ಮಲ್ಹಾರ ರಾವ್ ಅಹಲ್ಯಾಬಾಯಿಯ ಕಾಲಿಗೆ ಬಿದ್ದು ಕಣ್ಣೀರುಗರೆದರು. 'ಒಬ್ಬನೇ ಮಗ ಕಾಲವಾಗಿದ್ದಾನೆ, ಮೊಮ್ಮಗ ಮಂದಬುದ್ದಿ, ನೀನೂ ಸತ್ತು ಹೋದರೆ ಸಾಮ್ರಾಜ್ಯ ಅನಾಥವಾಗುತ್ತದೆ' ಎಂದು ಬೇಡಿಕೊಂಡ ಬಳಿಕ ಅಹಲ್ಯಾ ನಿರ್ಧಾರ ಬದಲಿಸಿ ಬೇಕಾಯಿತು
ಮಾವ ಮಲ್ಹಾರ ರಾವ್ ಮಾರ್ಗದರ್ಶನದಲ್ಲಿ ಆಡಳಿತ, ಯುದ್ದ ಮತ್ತು ರಾಜತಾಂತ್ರಿಕ ವ್ಯವಹಾರಗಳಲ್ಲಿ ಪಳಗಿದ ಅಹಲ್ಯಾ, 1765ರಲ್ಲಿ ಮಾವ ದೆಹಲಿಯಲ್ಲಿ ಆಕ್ರಮಣಕಾರ ಅಹಮ್ಮದ್ ಶಾಹ ಅಬ್ದಾಲಿ ಸೈನ್ಯದ ವಿರುದ್ಧ ಹೋರಾಡುತ್ತಿದ್ದಾಗ, ಗ್ವಾಲಿಯರ್ ಸಮೀಪದ ಗೋಹಡ್ ಕೋಟೆಯನ್ನು ವಶಪಡಿಸಿಕೊಂಡರು, ಗ್ವಾಲಿಯರ್ ವಶವಾಗಿದ್ದರಿಂದಾಗಿ ಮಧ್ಯಪ್ರದೇಶ ಭಾಗಪೂರ್ಣ ಹೋಳ್ಕರ್ ಆಡಳಿತಕ್ಕೊಳಪಟ್ಟಿತು. 1766ರಲ್ಲಿ ಮಲ್ಹಾರ್ ರಾವ್ ವಿಧಿವಶರಾದರು, ಅದಾದ ಎಂಟೇ ತಿಂಗಳಲ್ಲಿ ಮಗ ಮಾಲೋಜಿ ಸಹ ಸಾವಿಗೀಡಾದಾಗ ರಾಜ್ಯವಾಳುವುದಕ್ಕೆ ದತ್ತು ಸ್ವೀಕಾರದ ಬದಲು ಪೇಶ್ವೆಗಳ ಅನುಮತಿ ಪಡೆದು ಹೋಳ್ಕರ್ ಪ್ರಾಂತ್ಯದ ಆಡಳಿತ ಚುಕ್ಕಾಣಿ ಕೈಗೆತ್ತಿಕೊಂಡರು.
ಅಹಲ್ಯಾ ರಾಣಿಯಾದಾಗ ಚಂದ್ರಾವತದ ಮುಖ್ಯರು ಬಂಡೆದ್ದರು, ಅವರೆಲ್ಲರನ್ನೂ ಕ್ಷಮಿಸಿದ ಅಹಲ್ಯಾ 31 ಗ್ರಾಮಗಳನ್ನು ಬಿಟ್ಟುಕೊಟ್ಟರು ಆದರೆ ಮತ್ತೊಮ್ಮೆ ಬಂಡೆದ್ದಾಗ ಸೈನ್ಯವನ್ನು ಕಳಿಸಿ ಸದ್ದಡಗಿಸಿದರು ಬಂಡಾಯದ ನೇತೃತ್ವ ವಹಿಸಿದ್ದವರ ತಲೆದಂಡ ಪಡೆಯುವ ಎಲ್ಲಾ ಅವಕಾಶ ಇದ್ದರೂ, ಅಹಲ್ಯಾ ಹಾಗೆ ಮಾಡದೇ ಬಂಡುಕೋರರನ್ನು ಕ್ಷಮಿಸಿ ರಾಜಮರ್ಯಾದೆಯೊಂದಿಗೆ ಕಳಿಸಿಕೊಟ್ಟರು.
ಅಹಲ್ಯಾಬಾಯಿ ತಮ್ಮ ಪ್ರಜೆಗಳ ಬಗ್ಗೆ ಮಾತ್ರವಲ್ಲ, ಎದುರಾಳಿಗಳ ಬಗ್ಗೆಯೂ ನ್ಯಾಯಪರತೆ ಹೊಂದಿದ್ದರು, ಸೈನಿಕ ಕಾರ್ಯಾಚರಣೆಗಳಲ್ಲಿ ಸೆರೆಸಿಕ್ಕದ ಎದುರಾಳಿ ರಾಜ್ಯಗಳ ಪ್ರಮುಖರು, ಸೈನಿಕರ ಕುಟುಂಬಸ್ಥರಿಗೆ ಆಗಾಗ ಪತ್ರಬರೆದು, ಪತ್ನಿ ಮಕ್ಕಳ ಯೋಗಕ್ಷೇಮ ವಿಚಾರಿಸುತ್ತಿದ್ದರು. ಜೈಲಿನಲ್ಲಿ ಕೈದಿಗಳಿಗೆ ಹೊಟ್ಟೆತುಂಬಾ ಊಟ ಸಿಗುವಂತೆ ಕಟ್ಟಪ್ಪಣೆ ಮಾಡಿದ್ದರು, 28 ವರ್ಷಗಳ ಸುದೀರ್ಘ ಆಡಳಿತ ಅವಧಿಯಲ್ಲಿ ಆಕೆ ಒಮ್ಮೆಯೂ ಯಾರಿಗೂ ಮರಣದಂಡನೆ ವಿಧಿಸಲಿಲ್ಲ, ಬದಲಿಗೆ ಕೈದಿಗಳಿಂದ ಸನ್ನಡತೆಯ ಪ್ರಮಾಣ ಮಾಡಿಸಿ ಬಿಡುಗಡೆ ಮಾಡುವ ಆಕೆಯ ಔದಾರ್ಯ ಅಪರಾಧಿಗಳು, ಹಾಗೂ ದರೋಡೆಕೋರರ ಮನಪರಿವರ್ತನೆಗೆ ಕಾರಣವಾಗಿತ್ತು. ಅತಿವೃಷ್ಟಿ, ಅನಾವೃಷ್ಟಿ ಕಾಲದಲ್ಲಿ ಆಕೆ ರೈತರಿಂದ ತೆರಿಗೆ ಸಂಗ್ರಹಿಸುತ್ತಿರಲಿಲ್ಲ ಬದಲಿಗೆ ಆಕೆ ತಂದಿದ್ದ ಸಾತ್ ಬಾರಾ (7/12) ಕಂದಾಯ ಪದ್ದತಿ ಜನಾನುರಾಗಿಯಾಗಿತ್ತು, ಮಾಹೇಶ್ವರದಲ್ಲಿ ಸಣ್ಣ ಅರಮನೆಯಲ್ಲಿ ವಾಸಿಸುತ್ತಿದ್ದ ಅಹಲ್ಯಾಬಾಯಿ, ಸಿಂಹಾಸನದ ಬದಲು ಸಾಮಾನ್ಯ ಕುರ್ಚಿಯಲ್ಲಿ ಕುಳಿತೇ ಸಾಮ್ರಾಜ್ಯ ನಡೆಸುತ್ತಿದ್ದರು ಯಾವತ್ತೂ ಆಭರಣಗಳನ್ನು ಧರಿಸುತ್ತಿರಲಿಲ್ಲ ನೆಲದ ಮೇಲೆ ಮಲಗುವುದು ರೂಢಿಯಾಗಿತ್ತು, ಪ್ರಾತಃಕಾಲದಲ್ಲಿ ಎದ್ದು ದೇವರ ಪೂಜೆ, ಪುರಾಣ ಶ್ರವಣವಿಲ್ಲದೇ ಆಹಾರ ಸೇವಿಸುತ್ತಿರಲಿಲ್ಲ, ಮಾಂಸಾಹಾರ ವರ್ಜ್ಯವಾಗಿತ್ತು, ಸಾದಾ ಬಿಳಿ ವಸ್ತ್ರವೇ ಪೋಫಾಕಾಗಿತ್ತು.
ಅಹಲ್ಯಾಬಾಯಿ ಅಧಿಕಾರಿಕ್ಕೆ ಬಂದ ಆರಂಭದಲ್ಲಿ ಇಂದೋರಿನ ಪಶ್ಚಿಮ ಭಾಗದಿಂದ ಬುಡಕಟ್ಟು ನಾಯಕರ ಲೂಟಿಯನ್ನು ತಡೆಯುವುದು ಅನಿವಾರ್ಯವಾಗಿತ್ತು ಇಂಥ ಅತಿಕ್ರಮಣಕಾರರ ವಿರುದ್ಧ ಸ್ವತಃ ಹೋಳ್ಕರ್ ಸೇನೆ ಮುನ್ನಡೆಸಿದ ಅಹಲ್ಯಾ, ನಾಲ್ಕೂ ದಿಕ್ಕಿನಿಂದ ಸಾಮ್ರಾಜ್ಯದ ಗಡಿ ಭದ್ರಪಡಿಸಿದರು. ಹೋಳ್ಕರ್ ರಾಜವಂಶ ಇಂದೋರ್ ನಲ್ಲಿ ನೆಲೆಸಿದ್ದರೂ, ನರ್ಮದಾ ದಂಡೆಯಲ್ಲಿರುವ ಪುರಾತನ ಕಟ್ಟಡ ಮಾಹೇಶ್ವರದಲ್ಲಿ ಸುಭದ್ರ ಕೋಟೆ ಕಟ್ಟಿಸಿದ ಅಹಲ್ಯಾಬಾಯಿ, ಮಾಹೇಶ್ವರ ಪುರವನ್ನು ರಾಜಧಾನಿಯನ್ನಾಗಿ, ಇಂದೋರ್ ನಗರವನ್ನು ಆರ್ಥಿಕ ಚಟುವಟಿಕೆಯ ಕೇಂದ್ರವಾಗಿ ಬೆಳೆಸಿದರು.
ಮಲ್ಹಾಜಿ ರಾವ್ ದತ್ತು ಪುತ್ರ, ನಿಷ್ಠಾವಂತ ತುಕೋಜಿ ಹೋಳ್ಕರ್ ನೇತೃತ್ವದಲ್ಲಿ ಬಲಾಢ್ಯ ಸೇನೆಯನ್ನು ಕಟ್ಟಿದ ಅಹಲ್ಯಾ, ಆಡಳಿತಾತ್ಮಕ ಸಂಗತಿಗಳಿಗೆ ಅನ್ಯರನ್ನು ಅವಲಂಬಿಸದೆ ಸ್ವತಃ ನಿರ್ಧಾರಗಳನ್ನು ತೆಗೆದುಕೊಂಡರು. ಸಾಮ್ರಾಜ್ಯದ ರಾಜ್ಯಾದಾಯ ಮತ್ತು ಕುಟುಂಬದ ಆದಾಯ-ವೆಚ್ಚವನ್ನು ಪ್ರತ್ಯೇಕವಾಗಿಸಿದ್ದು ಪ್ರಮುಖವಾಗಿತ್ತು.
ಬೊಕ್ಕಸವನ್ನು ವ್ಯಕ್ತಿಗತ ವೆಚ್ಚಕ್ಕೆ ಬಳಸುತ್ತಿರಲಿಲ್ಲ ಬದಲಿಗೆ ಕುಟುಂಬಕ್ಕೆ ಪಿತ್ರಾರ್ಜಿತವಾಗಿ ಬಂದಿದ್ದ ಸಂಪತ್ತು ಮತ್ತು ಜಮೀನಿನಲ್ಲಿ ಉಳುಮೆ ಮಾಡಿ ಆಕೆ ಜೀವನ ನಿರ್ವಹಿಸುತ್ತಿದ್ದರು. ರಾಜಕೀಯವಾಗಿಯೂ ಅಹಲ್ಯಾ ಮುತ್ಸದ್ದಿತನಕ್ಕೆ ಹೆಸರುವಾಸಿಯಾಗಿದ್ದರು. ಬ್ರಿಟಿಷರೊಂದಿಗೆ ಸ್ನೇಹ-ಸಂಬಂಧ ಬೆಳೆಸದಂತೆ ಪೇಶ್ವೆಗಳಿಗೆ ಎಚ್ಚರಿಕೆ ನೀಡಿದ್ದರು, ಹೆಚ್ಚಿನ ರಾಜವಂಶಗಳು ಕೃಷಿ ಮತ್ತು ವ್ಯಾಪಾರ ವಹಿವಾಟನ್ನು ಅವಲಂಬಿಸಿದ್ದ ಆ ಕಾಲಘಟ್ಟದಲ್ಲಿ ಅಹಲ್ಯಾ ಮಾಹೇಶ್ವರದಲ್ಲಿ ನೇಕಾರಿಕೆ ಮತ್ತು ಜವಳಿ ಉದ್ಯಮ ಪ್ರೋತ್ಸಾಹಿಸಿದರು. ಮೊಘಲರ ಕಾಲದಲ್ಲಿ ಕೈಮಗ್ಗ ಉದ್ಯಮದ ಕೇಂದ್ರವಾಗಿದ್ದ ಬುರ್ಹಾನ್ ಪುರ ಕಾಲಾನಂತರದಲ್ಲಿ ಪ್ರಾಮುಖ್ಯತೆ ಕಳೆದುಕೊಂಡು ನೇಪಥ್ಯಕ್ಕೆ ಜಾರುತ್ತಿತ್ತು. ಅಲ್ಲಿನ ಕುಶಲ ನೇಕಾರರಿಗೆ ಅಹಲ್ಯಾ ಮಾಹೇಶ್ವರದಲ್ಲಿ ಆಶ್ರಯ ನೀಡಿದರು, ಇಂಥ ದೂರದೃಷ್ಟಿಯ ಫಲವಾಗಿಯೇ ಈ ನಗರ ಜವಳಿ ಕೇಂದ್ರವಾಗಿ ಬೆಳೆದು, ಮಾಹೇಶ್ವರಿ ಸೀರೆಗಳು ಇಂದಿಗೂ ಜನಪ್ರಿಯವಾಗಿವೆ.
ಅಹಲ್ಯಾಬಾಯಿಯ ಆಡಳಿತ ಕಾಲ ಹಿಂದೂ ಧಾರ್ಮಿಕ ಕೇಂದ್ರಗಳ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ಪುನರುತ್ಥಾನದ ಸುವರ್ಣಯುಗವಾಗಿತ್ತು ಗಂಗೋತ್ರಿಯಿಂದ ರಾಮೇಶ್ವರದವರೆಗೆ, ದ್ವಾರಕಾದಿಂದ ಗಯಾವರೆಗೆ ನೂರಾರು ದೇವಾಲಯಗಳು, ಪುಣ್ಯಕ್ಷೇತ್ರಗಳು ಅಹಲ್ಯಾಬಾಯಿ ಆಸ್ಥೆ ಯಿಂದ ಮರುಜನ್ಮ ಪಡೆದವು.
ಮೊಘಲರ ಔರಂಗಜೇಬನ ಕಾಲದಲ್ಲಿ ನಾಶವಾಗಿದ್ದ ಕಾಶಿ ವಿಶ್ವನಾಥ ಮಂದಿರವನ್ನು ಈಗಿರುವಂತೆ 1780ರಲ್ಲಿ ಕಟ್ಟಿಸಿದ್ದು ಅಹಲ್ಯಾಬಾಯಿ, ಕ್ರೂರ ಮತಾಂಧ ಔರಂಗಜೇಬ ಕಾಶಿ ಮೇಲೆ ದುರಾಕ್ರಮಣ ಮಾಡಿ ವಿಶ್ವನಾಥನ ದೇಗುಲವಿದ್ದ ಜಾಗದಲ್ಲಿ ಗ್ಯಾನವಾಪಿ ಮಸೀದಿ ನಿರ್ಮಿಸಿದ 111 ವರ್ಷಗಳ ಬಳಿಕ ಅಹಲ್ಯಾಬಾಯಿ ಕಾಶಿ ಮತ್ತೆ ಹಿಂದೂಗಳ ಪುಣ್ಯಭೂಮಿಯಾಗಿ ಪುನರುಜ್ಜೀವಿಸುವಂತೆ ಮಾಡಿದರು. ಗಂಗಾರತಿಗೆ ಪ್ರಸಿದ್ಧವಾದ ದಶಾಶ್ವಮೇಧ ಘಾಟ್ ಮತ್ತು ಅಂತ್ಯಸಂಸ್ಕಾರಕ್ಕೆ ಮೀಸಲಾದ ಮಣಿಕರ್ಣಿಕಾ ಘಾಟಿಯನ್ನು ಪುನರುತ್ಥಾನಗೊಳಿಸಿದರು, ಶತಮಾನಗಳಿಂದ ದುರಾಕ್ರಮಣಕ್ಕೆ ತುತ್ತಾಗುತ್ತ ಬಂದಿದ್ದ ಸೋಮನಾಥ ದೇವಾಲಯ ಮರಾಠಾ ಸಂಸ್ಥಾನಿಕರ ಆಸ್ಥೆಯಿಂದ 1783ರಲ್ಲಿ ಪುನರ್ ನಿರ್ಮಾಣಗೊಂಡಿತು.
ಇದರಲ್ಲೂ ಅಹಲ್ಯಾ ಕೊಡುಗೆ ದೊಡ್ಡಮಟ್ಟದಿತ್ತು , ದ್ವಾರಕಾ, ಭೀಮಾಶಂಕರ, ತ್ರ್ಯಂಬಕೇಶ್ವರ, ಕೇದಾರನಾಥ, ಶ್ರೀಶೈಲ, ಓಂಕಾರೇಶ್ವರ, ಉಜ್ಜಯಿನಿ ಸಹಿತ ಹಲವು ಜ್ಯೋತಿರ್ಲಿಂಗ ಕ್ಷೇತ್ರಗಳ ಅಭಿವೃದ್ಧಿಗೆ ಅಹಲ್ಯಾ ಕೊಡುಗೆ ದೊಡ್ಡದು. 1787ರಲ್ಲಿ ಗಯಾದಲ್ಲಿ ಅಹಲ್ಯಾ ಕಟ್ಟಿಸಿದ ವಿಷ್ಣುಪಾದ ದೇಗುಲ ಇಂದಿಗೂ ಯಥಾಸ್ಥಿತಿಯಲ್ಲಿದ್ದರೆ, ಪುರಿಯ ರಾಮಚಂದ್ರ ದೇಗುಲ, ರಾಮೇಶ್ವರ ಹನುಮಾನ್ ಮಂದಿರ, ಪಾರ್ಲಿ ವೈಜನಾಥದಲ್ಲಿ ವೈದ್ಯನಾಥ ಮಂದಿರ, ಅಯೋಧ್ಯೆಯಲ್ಲಿ ಸರಯೂ ಘಾಟ್ ನಿರ್ಮಾಣ ಮಾಡಲಾಯಿತು. ಕರ್ನಾಟಕ ರಾಜ್ಯದಲ್ಲೂ ಉಡುಪಿ, ಬೇಲೂರಿನಲ್ಲಿ ಅಹಲ್ಯಾಬಾಯಿ ಧಾರ್ಮಿಕ ಕಾರ್ಯದ ಬಗ್ಗೆ ಉಲ್ಲೇಖವಿದೆ ದೇಶದ ಮೂಲೆ ಮೂಲೆಯ ಪುಣ್ಯ ನದಿಗಳಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಸ್ನಾನಘಟ್ಟ ನಿರ್ಮಾಣಕ್ಕೆ ಹಾಗೂ ಕ್ಷೇತ್ರಗಳಲ್ಲಿ ಧರ್ಮಶಾಲೆಗಳ ನಿರ್ಮಾಣಕ್ಕೆ ಅಹಲ್ಯಾಬಾಯಿ ಆದ್ಯತೆ ನೀಡಿದ್ದರು.
ಹೀಗೆ ಭಾರತದಾದ್ಯಂತ ಧಾರ್ಮಿಕ ಕೇಂದ್ರಗಳು, ದೇಗುಲಗಳ ಪುನರ್ ನಿರ್ಮಾಣಕ್ಕೆ ಅಹಲ್ಯಾಬಾಯಿ ನೀಡಿದಷ್ಟು ಕೊಡುಗೆಯನ್ನು ಬೇರಾವುದೇ ರಾಜವಂಶಗಳು ನೀಡಿದ ಉದಾಹರಣೆ ಸಿಗುವುದಿಲ್ಲ, ಹಾಗಿದ್ದರೂ ಈ ಧಾರ್ಮಿಕ ಸ್ಥಳಗಳಲ್ಲಿ ಅಹಲ್ಯಾಬಾಯಿ ಹೆಸರಿನ ಒಂದು ಶಾಸನವೂ ಕಾಣಲು ಸಿಗುವುದಿಲ್ಲ. ಆಕೆ ದೇವಾಲಯಗಳ ಜೀರ್ಣೋದ್ಧಾರವನ್ನು ಭಕ್ತಿಯಿಂದ, ಧಾರ್ಮಿಕ ಶ್ರದ್ಧೆಯಿಂದ ಮಾಡಿದ್ದೇ ವಿನಾ, ರಾಜಕೀಯ ಅಥವಾ ಸಂಪತ್ತಿನ ಪ್ರದರ್ಶನಕ್ಕಾಗಿ ಮಾಡಿರಲಿಲ್ಲ,
ಅಹಲ್ಯಾಬಾಯಿ 1795ರಲ್ಲಿ ತನ್ನ 70ನೇ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು.
ದುರಂತವೆಂದರೆ ಅಹಲ್ಯಾಬಾಯಿಯವರ ಜೀವನ, ಸಾಧನೆ, ಕೊಡುಗೆಗಳು ಯಾವುದೇ ದಾಖಲೆಗಳಲ್ಲಿ, ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯುವುದಿಲ್ಲ ಇತಿಹಾಸವನ್ನು ಅರಿಯದವರು ಭವಿಷ್ಯ ನಿರ್ಮಿಸುವುದು ಸಾಧ್ಯವೇ? ಸಕಲ ಹಿಂದೂಗಳ ಆರಾಧ್ಯ ದೇವತೆ ಅಹಲ್ಯಾ ಬಾಯಿಯಿಂಥ ಶ್ರೇಷ್ಠನಾರಿಯ ಜೀವನಗಾಥೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.
#ಜೈಹಿಂದ್ #ಜೈಭಾರತಮಾತೆ
ಕೃಪೆ ನಿತ್ಯ ಸತ್ಯ ಪೇಸ್ ಬುಕ್ ಪೇಜ್.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment