ದಿನಕ್ಕೊಂದು ಕಥೆ 1020

*🌻 ದಿನಕ್ಕೊಂದು ಕಥೆ🌻*
*ಬಿದಿರಿನ ಬೊಂಬು*

ಬಲಿಷ್ಠ ಸಾಮ್ರಾಜ್ಯಕ್ಕೆ  ಒಬ್ಬ ರಾಜನಿದ್ದನು. ವಸಂತಋತು ಬರುತ್ತಿದ್ದಂತೆ  ನಿಗದಿ  ಪಡಿಸಿದ ದಿನಗಳಲ್ಲಿ, ನೆರೆ ಹೊರೆ  ರಾಜ್ಯದವರು,  ಸಣ್ಣಪುಟ್ಟ ಸಂಸ್ಥಾನದ ಸಾಮಂತರಾಜರು, ದೂರದೂರದ ಕಾಡಿನ ರಾಜರುಗಳು, ಕೋಟೆಕೊತ್ತಲಗಳ ಪಾಳೇಗಾರರು,ಇವರುಗಳೆಲ್ಲಾ ಪ್ರತಿವರ್ಷವೂ ಬಲಿಷ್ಠ ಸಾಮ್ರಾಜ್ಯದ ರಾಜನಿಗೆ ಕಪ್ಪ ಕಾಣಿಕೆಗಳನ್ನು ತಂದು ಕೊಡುತ್ತಿದ್ದರು. ಅದರಲ್ಲಿ ಬೆಲೆಬಾಳುವ ಮುತ್ತು ರತ್ನಗಳು, ವಿಶೇಷವಾಗಿ ಬೆಳೆದ ದವಸಧಾನ್ಯಗಳು, ಹಣ್ಣು ಹಂಪಲು,  ಕುಶಲ ಕಲೆಗಾರಿಕೆಯಿಂದ ಮಾಡಿದ  ಅತ್ಯಾಕರ್ಷಕ ವಸ್ತುಗಳು, ಇಂಥ ತರಹೆವಾರಿ ಕೊಡುಗೆಗಳನ್ನು ಪ್ರೀತಿಯಿಂದ ಕೊಡುತ್ತಿದ್ದರು. ರಾಜನು ಸಹ ಬಂದಿರುವ ಅತಿಥಿಗಳಿಗೆ, ಕುಂದು ಕೊರತೆ ಆಗದಂತೆ ಮಾಡಿ, ದೊಡ್ಡ ಸತ್ಕಾರದ ಜೊತೆಗೆ ಮನೋರಂಜನೆ, ಪ್ರತಿಭಾ ಪ್ರದರ್ಶನ ನಡೆಸಿ ಎಲ್ಲರಿಗೂ ನೆನಪಿನ ಕಾಣಿಕೆಗಳನ್ನು ಕೊಟ್ಟು, ಗೌರವದಿಂದ ಕಳಿಸಿ ಕೊಡುತ್ತಿದ್ದನು.ಇದು ಅನೇಕ ವರ್ಷಗಳಿಂದ ನಡೆದು ಬಂದಿದ್ದು, ಯಾವುದೇ ರಾಜ್ಯದಲ್ಲಿ  ವೈಮನಸ್ಸಾಗಲಿ ,ಯುದ್ಧಗಳಾಗಲಿ, ನಡೆಯುತ್ತಿರಲಿಲ್ಲ. ಶ್ರೀಸಾಮಾನ್ಯ ರಿಂದ ಹಿಡಿದು ಶ್ರೀಮಂತರವರೆಗೂ ನೆಮ್ಮದಿಯಾಗಿ ಬದುಕುತ್ತಿದ್ದರು. 

ಈ ವರ್ಷವೂ ವಸಂತಋತುವಿನ ಸಂಭ್ರಮಾಚರಣೆ  ಬಂದಿತು. ಮನೋರಂಜನೆಯ ದಿನ ನಿಗದಿಪಡಿಸಿ, ದೂತವಾಹಕರ ಮೂಲಕ ಎಲ್ಲ ಕಡೆಗೂ ತಿಳಿಸಲಾಯಿತು. ರಾಜಧಾನಿ ಸಿಂಗಾರಗೊಂಡಿತು. ಅಂದು ಅತಿಥಿಗಳೆಲ್ಲ ಬಂದು ಸೇರಿದರು. ಸಂಭ್ರಮಾಚರಣೆ ಆರಂಭಗೊಂಡಿತು.
ಅಂದುಕೊಂಡಂತೆ  ಎಲ್ಲವೂ ಸಾಂಗವಾಗಿ  ನಡೆಯಿತು. ಬಂದ ಅತಿಥಿಗಳೆಲ್ಲ ರಾಜನಿಗೆ ಕಪ್ಪಕಾಣಿಕೆಗಳನ್ನು ಕೊಟ್ಟರು. ಎಲ್ಲಾ ಕಾಣಿಕೆಗಳು ರಾಜನಿಗೆ ತುಂಬಾ ಪ್ರಿಯವಾದವು. ಆದರೆ ಕಾಡಿನ ರಾಜನೊಬ್ಬ ಬಿದಿರು ಬೊಂಬಿನಿಂದ ಕಲಾತ್ಮಕವಾಗಿ ಮಾಡಿದ್ದ ನೀರಿನ ಹೂಜಿಯಂಥ ಕಾಣಿಕೆಯನ್ನು ಕೊಟ್ಟನು.  ರಾಜನಿಗೆ  ಇದನ್ನು ನೋಡಿ  ಸಭಿಕರೆದರು ಇರುಸುಮುರುಸಾಯಿತು. ಅದೇ ಒಂದು ಗಂಧದ ಕೆತ್ತನೆಯ ಚಿತ್ತಾರವೋ, ಅಥವಾ ದಂತದ ಬೊಂಬೆಯೋ ಆಗಿದ್ದರೆ, ಹೆಮ್ಮೆಪಡುತ್ತಿದ್ದ. ಆದರೆ ಬಿದಿರು ಬೊಂಬಿಗೆ ಅಲಂಕಾರ ಮಾಡಿ ತಂದುಕೊಟ್ಟ ಕಾಣಿಕೆ ನೋಡಿ ಸಿಟ್ಟು ಬಂದಿತು. ಕೂಡಲೇ ಅಸಡ್ಡೆಯಿಂದ ಇದೆಂಥ ಕಾಣಿಕೆ ಇದು ರಾಜಮರ್ಯಾದೆಗೆ ಯೋಗ್ಯವಲ್ಲ. ಎಷ್ಟಾದರೂ ನೀವು ಕಾಡು ಮನುಷ್ಯರು. ನಾಗರೀಕತೆ ಎಂದರೆ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ನುಡಿದನು. 

ಸಭಿಕರೆದುರಿಗೆ ಮಾಡಿದ ಅವಮರ್ಯಾದೆಯಿಂದ, ಕಾಡಿನ ರಾಜನು ಕುಗ್ಗಿಹೋದನು. ಆದರೂ ಸಮಾಧಾನದಿಂದ, ಮಹಾಪ್ರಭು ಈ ಕೊಡುಗೆ ಸಾಧಾರಣವಾದದಲ್ಲ ಜೀವರಕ್ಷಕವಾಗಿರುವುದು ಎಂದನು. ಆದರೆ ರಾಜನು ಇದನ್ನೆಲ್ಲ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಇದನ್ನು ನೀನೇ ತೆಗೆದುಕೊಂಡು ಹೋಗು ನಿನಗೆ ಉಪಯೋಗಕ್ಕೆ ಬಂದೀತು ಎಂದು ತಿರಸ್ಕಾರದಿಂದ ನುಡಿದನು. ತಲೆತಗ್ಗಿಸಿ ಬಂದು  ಅಂದಿನ ಕಾರ್ಯಕ್ರಮ ಮುಗಿಸಿ, ಕಾಡಿನ ಜೊತೆಗಾರರೊಂದಿಗೆ ಹೊರಟನು.ಇದು ಇಡೀ ಕಾಡಿನ ಜನರಿಗೆ ಅವಮರ್ಯಾದೆ ಪ್ರಸಂಗವಾಯಿತು. ಕಾಡಿನ ಜನರೆಲ್ಲ ಸೇರಿ ರಾಜನಿಗೆ ಬುದ್ಧಿ ಕಲಿಸಬೇಕೆಂದು ತೀರ್ಮಾನ ಮಾಡಿದರು. 

ಇದೇ ತರ ವಸಂತಋತು ಮತ್ತೆ  ಬಂದಿತು. ಕಾಡಿನ ರಾಜನಿಗೂ ಕರೆ ಬಂದಿತು.   ಈ ಸಲ ಕಾಡಿನ ರಾಜನು ಸಮುದ್ರದ ಆಳದಿಂದ ತಂದ ಸಂಪತ್ತಿನಿಂದ, ಮುತ್ತು ,ಹವಳ, ಶಂಖಗಳನ್ನು ಬಳಸಿ ಕಲಾತ್ಮಕವಾದ, ಅಪರೂಪವಾದ, ತುಂಬಾ ಆಕರ್ಷಕವಾಗಿ ಕಣ್ಣುಕೋರೈಸುವಂತ  ದಂತದ  ಕೆತ್ತನೆಯ ಆನೆ ಅಂಬಾರಿ, ಅದರ ಮೇಲೆ ರಾಜಗಾಂಭೀರ್ಯದಿಂದ ಸೊಂಟದ ಮೇಲೆ ಕೈಯಿಟ್ಟು,  ಸುಂದರ ಕೆತ್ತನೆಯ ಕಿರೀಟ, ಆಭರಣಗಳು,ಮುತ್ತು ಹವಳ ಗಳಿಂದ ಹೊಳೆಯುವ  ಪೋಷಾಕುಗಳನ್ನು ಧರಿಸಿ ನೆಟ್ಟಗೆ  ಕುಳಿತ , ಈಗಿರುವ ರಾಜನಂತೆ ಕಾಣುವ, ಕೆತ್ತನೆ ಮಾಡಿದ ಕೊಡುಗೆಯನ್ನು ಕೊಟ್ಟನು. ಈ ಕೊಡುಗೆಯ ಮುಂದೆ ರಾಜನಿಗೆ ಉಳಿದೆಲ್ಲವೂ ಗೌಣ ಎನಿಸಿತು. ಕಾಡಿನರಾಜನನ್ನು ಎಲ್ಲರೆದುರು ಸನ್ಮಾನಿಸಿದನು. 

ಕಾಡಿನ ರಾಜನು, ಮಹಾಪ್ರಭು ಈ ವಸಂತಋತು ಕಳೆದು ಬರುವ ಬೇಸಿಗೆಯಲ್ಲಿ, ನೀವು ನಿಮ್ಮ ಪರಿವಾರದವರು ನಮ್ಮ ಕಾಡಿಗೆ ಔತಣ ಕೂಟಕ್ಕೆ ಬರಬೇಕು ಎಂದು ಆಹ್ವಾನಿಸಿದನು. ರಾಜನು ಸಂತೋಷದಿಂದ ಒಪ್ಪಿದ.
ಮಾರ್ಚ್ ಏಪ್ರಿಲ್ ನ ಮಧ್ಯದ ದಿನಗಳು, ಬಿಸಿಲ ಧಗೆ ಕಾಡಿನ ಬಳಗವೇ ಬಂದು, ರಾಜನನ್ನು ಪರಿವಾರದವರನ್ನು ಕರೆದೊಯ್ದರು. ಕಾಡಿನ ಹಾದಿ ಕಾಣುತ್ತಿದ್ದಂತೆ, ರಾಜನ ಸ್ವಾಗತಕ್ಕೆ  ಸುಂದರ  ಕಮಾನು ಉದ್ದಕ್ಕೂ ತಂಪಾದ ಗಿಡಮರಗಳು, ತಂಗಾಳಿ, ಶುಕಪಿಕ ಗಳ ಮಧುರ ಧ್ವನಿ, ಉದ್ದಕ್ಕೂ  ಹೂವಿನ ಹಾಸಿನಂತೆ ಮೆತ್ತನೆ ಹಾಸು. ಸ್ವರ್ಗಲೋಕ ಕಣ್ಣೆದುರು ಬಂದಂತಹ  ಅನುಭವ.
ಬೇಕಾದಷ್ಟು ಅತಿಥಿಸತ್ಕಾರಕ್ಕೆ   ಕುಡಿಯಲು ಮಧುರ ಪಾನೀಯಗಳು, ಭೋಜನ ವ್ಯವಸ್ಥೆಯಲ್ಲಿ, ಲೆಕ್ಕವಿಲ್ಲದಷ್ಟು ಸಿಹಿ ತಿಂಡಿಗಳು, ಕಾಡಿನ ಜೇನು, ಹಲಸು,-ಮಾವು, ಕಾಡಿನ ಮರದಲ್ಲಿ ಸಿಗುವ ಖಂಡ ಸಕ್ಕರೆಯಂಥ  ಸಿಹಿ, ಭೋಜನದಲ್ಲಿ  ಮತ್ತೇರಿಸುವ ಮದಿರೆ, ಸಿಕ್ಕಾಪಟ್ಟೆ  ಉಪಚಾರ ಮಾಡಿ  ಬಡಿಸಿದರು. 

ಮಧ್ಯಾಹ್ನ ಎಲ್ಲರೂ ಬೇಟೆಗೆ ಹೋಗುವುದೆಂದು ಯೋಜನೆ ಮಾಡಿದರು.
ಬಹಳ ದೊಡ್ಡ ಕಾಡು. ರಾಜನ ಜೊತೆ ಕಾಡಿನ ನಾಯಕನು ಹೊರಟ.
ಬೇಟೆಯಾಡುತ್ತಾ ಹೋದಂತೆ ಇದ್ದ ದೊಡ್ಡ ಗುಂಪು ಅಲ್ಲಲ್ಲಿ ಚದುರಿ ರಾಜ ಮತ್ತು  ಕಾಡಿನ ನಾಯಕ ಇಬ್ಬರೇ ಒಂದು ಕಡೆ ಆದರು. 

ರಾಜನಿಗೆ ಬಾಯಾರಿಕೆ ಶುರುವಾಯಿತು, ಸ್ವಲ್ಪ ಹೊತ್ತಾದ ಮೇಲೆ ತಡೆಯಲಾರದಷ್ಟು ಬಾಯಾರಿಕೆ, ಕಾಡಿನ ನಾಯಕನು  ಯೋಚನೆ ಮಾಡಿದ,ಹತ್ತಿರದಲ್ಲೆಲ್ಲೂ ನೀರಿಲ್ಲ. ಬೇಸಿಗೆಯ ಧಗೆ, ಭೋಜನದಲ್ಲಿ ಸಾಕಷ್ಟು ಸಿಹಿಯನ್ನೇ ತಿಂದಿದ್ದು, ಆಯಾಸ, ಎಲ್ಲಾ ಸೇರಿ ರಾಜನಿಗೆ ವಿಪರೀತ ಬಾಯಾರಿಕೆ. ರಾಜನು  ಮುಂದೆ ಸಾಗುವುದು ಸಾಧ್ಯವಿಲ್ಲವೆಂದು ಮರದ ಕೆಳಗೆ ಕುಳಿತು ಬಿಟ್ಟನು. ಕಾಡಿನ ರಾಜ ನೀರಿಗಾಗಿ ತುಂಬಾ ಪ್ರಯತ್ನ ಪಡುತ್ತಿದ್ದನು. ಕೊನೆಗೆ ಹಣ್ಣುಗಳಾದರು  ಸಿಕ್ಕರೆ ಎಂದು ಹುಡುಕಿದರೆ  ಅದು ಸಿಗಲಿಲ್ಲ. ಕಾಡಿನ ನಾಯಕನು ಹುಡುಕುತ್ತಾ ಹುಡುಕುತ್ತಾ ಬಹುದೂರ ಹೋದನು. ರಾಜನೊಬ್ಬನೇ ಉಳಿದನು ಗಂಟಲೊಣಗಿ, ಏನೂ ಬೇಡ ಒಂದು ಗುಟುಕು ನೀರು ಸಿಕ್ಕರೆ ಸಾಕು ಎಂದುಕೊಳ್ಳುವ  ಸಮಯಕ್ಕೆ ಇಬ್ಬರು ಆಗಂತಕರು ನಡೆದುಹೋಗುತ್ತಿದ್ದರು. 

ರಾಜನು ಅವರನ್ನು ಪ್ರಯಾಸದಿಂದ ಕರೆದು, ಸ್ವಲ್ಪ ನೀರಿದ್ದರೆ ಕೊಡಿ, ಅವರು ನೀರು ಇದೆ. ಆದರೆ ಅದು ಯಾವುದೇ ಪಾತ್ರೆಯಲ್ಲಿ ಇಲ್ಲ ಎಂದರು. ಅದಕ್ಕೆ ರಾಜನು ಎಲ್ಲಾದರೂ ಇರಲಿ ಒಂದು ಗುಟುಕು ಕೊಡಿ, ನಿಮಗೆ ಏನು ಬೇಕಾದರೂ ಕೊಡುತ್ತೇನೆ ಎಂದು ಅಂಗಲಾಚಿದನು. ಆಗ ಅವರು ನಾವು ಇನ್ನು ಬಹಳ ದೂರ ಕ್ರಮಿಸಬೇಕು. ನಮಗೆ ಅಲ್ಲಿ ಎಲ್ಲೂ ನೀರು ಸಿಗುವುದಿಲ್ಲ.
ಇದು ಜೀವಜಲ, ಅಮೃತಕ್ಕೆ ಸಮಾನ ಎಂದರು.  ರಾಜನು  ತಾಳ್ಮೆಯಿಂದ,  ಅದರ ಬೆಲೆ ಏನು ಕೇಳಿದರೂ ಕೊಡುತ್ತೇನೆ ಕೊಡಿ, ಓಹೋಹೋ ನೀನೇನು ದೊಡ್ಡ ರಾಜನಾ? ನಮಗೇನು ರಾಜ್ಯ ಕೊಡುತ್ತೀಯಾ? ಎಂದು ನಕ್ಕರು. ಹೌದು ಮಹಾಶಯರೇ, ನಾನು ಒಬ್ಬ ರಾಜ ನಿಮಗೆ ಅಮೂಲ್ಯವಾದ ಕೊಡುಗೆಗಳ ಜೊತೆ ನನ್ನ ರಾಜ್ಯದ ಅರ್ಧ ಭಾಗವನ್ನು ಕೊಡುತ್ತೇನೆ ಎಂದನು. ಅದು ಹೇಗೆ ಆಗುತ್ತೆ. ನಾವಿನ್ನೂ ಮರುಭೂಮಿ ತನಕ ನಡೆಯಬೇಕು. ಇರುವುದೇ ಇದರಲ್ಲಿ ಸ್ವಲ್ಪ ನೀರು. ನೀರಿಲ್ಲದಿದ್ದರೆ ನಾವು ಬದುಕುವುದು ಕಷ್ಟ. ನಾವು ಸತ್ತರೆ ನಿನ್ನ ರಾಜ್ಯ ತೆಗೆದುಕೊಂಡು ನಾವೇನು ಮಾಡೋಣ? ಎಂದು ಕೇಳಿದರು.
ರಾಜನು ಕಂಗಾಲಾಗಿ ಹೋದನು. ಆ ವೇಳೆಗೆ ಕಾಡಿನ ರಾಜನು ಒಂದು ಬಿದಿರಿನ ವಾಟೆಯೊಳಗೆ ನೀರು ತುಂಬಿಸಿಕೊಂಡು ಕುದುರೆ ಮೇಲೆ ಬಂದನು.
ಪ್ರಭು ನೀರು ತೆಗೆದುಕೊಳ್ಳಿ, ನಾನು ಕಾಡಿನಿಂದ ಅದೆಷ್ಟೋ ದೂರ ಹೋಗಿದ್ದೆ
ಅಲ್ಲಿ ಸರೋವರವಿತ್ತು, ಆದರೆ ನೀರು ತರುವ ಸಾಧನಗಳು ಇರಲಿಲ್ಲ. ನನಗೆ ಗೊತ್ತಿರುವಂತೆ, ಸರೋವರದ ಸಮೀಪ ಬಿದಿರು ಮೆಳೆಗಳಲ್ಲಿದ್ದ ಬೊಂಬನ್ನು ಕಡಿದು ವಾಟೇಯೋಳಗೆ ನೀರು ತಂದಿರುವೇ, ನಾವು ಕಾಡು ಮನುಷ್ಯರು,
ನಮಗೆ ಕಾಡೇ ಜೀವ, ಬದುಕು ಎಂದಾಗ ರಾಜನಿಗೆ ಎಲ್ಲವೂ ಅರ್ಥವಾಯಿತು. 

ಕಾಡಿನ ರಾಜನು, ವಾಟೆಯ ಬಿದಿರಿನ ಮುಚ್ಚಳವನ್ನು ತೆಗೆದು ನೀರು ಕುಡಿಯಲು ಕೊಟ್ಟನು. ಮಹಾರಾಜ ಕುಡಿದನು. ಅಮೃತಕ್ಕಿಂತಲೂ ಸ್ವಾದಿಷ್ಟ
ತಿಳಿಯಾದ, ಶುದ್ಧವಾದ, ಜೀವರಕ್ಷಕ ಜಲವನ್ನು ಭಕ್ತಿಯಿಂದ ಕುಡಿದನು. ಹೋಗುತ್ತಿದ್ದ ಜೀವ ಬಂದಂತಾಯ್ತು. ಸುಧಾರಿಸಿಕೊಂಡ ರಾಜನು ಕಾಡಿನನಾಯಕನನ್ನು ಆಲಂಗಿಸಿಕೊಂಡು, ನನಗೆ ಎಲ್ಲ ತಿಳಿಯುತು. ನಮ್ಮ ಬದುಕು ಇರುವುದು, ಅರಣ್ಯ, ನದಿ, ಸಾಗರ, ಬೆಟ್ಟಗುಡ್ಡಗಳು ಇವೆ ನಮಗೆ ದೈವದತ್ತವಾಗಿ ಬಂದ ನೈಸರ್ಗಿಕ ಸಂಪತ್ತು. ಭಗವಂತ ಕರುಣಿಸಿದ ಸಂಪತ್ತಿನಿಂದಲೆ ನಾವು ಇಂದು ಬದುಕಿರುವುದು. ಜೀವ ಉಳಿಸುವ ನಿನ್ನ ಬಿದಿರಿನ ಬೊಂಬಿಗೆ ಸಮಾನವಾದುದು ಯಾವುದೂ ಇಲ್ಲ, ಉಳಿದುದೆಲ್ಲ ಆಕರ್ಷಣೆ, ಕ್ಷಣಿಕ. ಕಳೆದ ಸಾರಿ ನೀನು ಉಡುಗೊರೆಯಾಗಿ ಕೊಟ್ಟಾಗ ನನಗೆ ಇದರ ಬೆಲೆ ತಿಳಿದಿರಲಿಲ್ಲ. ಈಗ ಎಲ್ಲಾ ನಿಚ್ಚಳವಾಯಿತು. ಎಂದು ಕಾಡಿನ ನಾಯಕನನ್ನು ಕೊಂಡಾಡಿದನು. 

ಅರಣ್ಯ ಸಂಪತ್ತಿನಿಂದ ಮಾಡಿದ ಪೀಠೋಪಕರಣಗಳು, ಗೃಹೋಪಯೋಗಿ ವಸ್ತುಗಳು ಎಲ್ಲವನ್ನು ನಾನು ಕಾಡಿನ ಜನರಿಂದಲೇ ತೆಗೆದುಕೊಳ್ಳುವೆ.ಎಂದು ಕಾಡಿನ ನಾಯಕನಿಗೆ  ರಾಜನು ಪ್ರೋತ್ಸಾಹಕೊಟ್ಟು ,ಹುರಿದುಂಬಿಸಿದನು.
ಕಾಡಿನ ನಾಯಕನು, ರಾಜನ ಮನಪರಿವರ್ತನೆ ಮಾಡಬೇಕೆಂದು ಸಮಯ ಕಾದು ಎಲ್ಲಾ ಮೊದಲೇ ಯೋಜನೆ ಮಾಡಿದಂತೆ ವ್ಯವಸ್ಥಿತವಾಗಿ ಮಾಡಿ ರಾಜನ ಮನಸ್ಸನ್ನು ಗೆದ್ದನು. 

ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಭಿಮ್ಮನೆ ಬಂದಳೋ?
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ?
ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ?
ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ?
ಅಲ್ಲೇ ಆಕಡೆ ನೋಡಲಾ ಅಲ್ಲೆ ಕೊಡಗರ ನಾಡಲಾ ಅಲ್ಲಿ ಕೊಡವರ ಬೀಡಲಾ! 

ಬರಹ:- ಆಶಾ ನಾಗಭೂಷಣ.
ಕೃಪೆ:ನಿತ್ಯ ಸತ್ಯ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059