ದಿನಕ್ಕೊಂದು ಕಥೆ 1021
*🌻ದಿನಕ್ಕೊಂದು ಕಥೆ*🌻
*ಬುದ್ಧಿವಂತಿಕೆಗೆ ಬಡತನ ಸಿರಿತನ ಮುಖ್ಯವಲ್ಲ*
ಒಂದೂರಿನಲ್ಲಿ ಒಬ್ಬ ರಾಜನಿದ್ದ. ರಾಜನಿಗೆ ಇಬ್ಬರು ಗಂಡು ಮಕ್ಕಳು. ಚಿಕ್ಕ ರಾಜ್ಯವಾಗಿದ್ದು ಪ್ರಜೆಗಳು ನೆಮ್ಮದಿಯಿಂದ ಬದುಕುತ್ತಿದ್ದರು.ರಾಜನ ಆಸ್ಥಾನದಲ್ಲಿ ಅವನ ತಂದೆಯ ಕಾಲದಿಂದ ಬಂದ ವಿದ್ವಾಂಸರು, ಪಂಡಿತರು, ಗಾಯಕರು, ವಾಕ್ಚಾತುರ್ಯರು, ಕವಿಗಳು, ಹೀಗೆ ಎಲ್ಲಾ ತರಹದ ಕಲಾವಿದರಿಂದ ರಾಜನ ಸಭೆ ಮೇಳೈಸಿತ್ತು. ಆದರೆ ಸಭಾಭವನದಲ್ಲಿ,ಹಳೆಯ ಕಾಲದ, ಜಿಗಟು ಹಿಡಿದಂತೆ, ಜಿಡ್ಡುಗಟ್ಟಿದ, ಹಾಡಿದ್ದೇ ಹಾಡೋ ಕಿಸುಬಾಯಿ ದಾಸಾ ಎನ್ನುವಂತಹ ಒಬ್ಬ ವಿದ್ವಾಂಸನು ಪ್ರತಿಬಾರಿಯೂ ಸಭೆ ಶುರುವಾಗುತ್ತಿದ್ದಂತೆ, ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸಿ, ಅದೇ ವಿಷಯದಲ್ಲೇ, ಇಡೀ ದಿನದ ಸಭೆಯನ್ನು ವ್ಯರ್ಥ ಮಾಡುತ್ತಿದ್ದನು. ರಾಜನಿಗೆ ಆಡುವಂತಿಲ್ಲ, ಅನುಭವಿಸುವಂತಿಲ್ಲ ಎನ್ನುವಂತಾಗಿತ್ತು, ಆದರೆ ಗತ್ಯಂತರವಿಲ್ಲ. ಹಿರಿಯ ತಲೆಮಾರಿನವರು, ಪಂಡಿತನಾದುದರಿಂದ ವಿರೋಧವಾಗಿ ಮಾತನಾಡಲು ಸಾಧ್ಯವಿಲ್ಲ. ಸೂಕ್ಷ್ಮವಾಗಿ ಬೇಕಾದಷ್ಟು ಸಲ ಹೇಳಿ, ಹೇಳಿಸಿ, ಆಗಿದೆ ಆದರೆ ಅದು ಯಾವುದು ಪ್ರಯೋಜನವಾಗದೆ, ರಾಜನೇ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಈ ಮಧ್ಯೆ ರಾಜನ ಎರಡು ಗಂಡು ಮಕ್ಕಳು, ರಾಜ್ಯದ ಗಡಿಭಾಗದಲ್ಲಿ ಮನರಂಜನೆಗೆಂದು ಹೋಗಿ, ಪಕ್ಕದ ರಾಜ್ಯದ ಮಕ್ಕಳ ಜೊತೆಗೆ ಜಗಳವಾಡಿಕೊಂಡು ಮನೆಗೆ ಬಂದರು. ಈ ಕಾರಣದಿಂದ ಪಕ್ಕದ ರಾಜನು ಈ ರಾಜ್ಯದ ಮೇಲೆ ಯುದ್ಧ ಘೋಷಣೆ ಮಾಡಿದ್ದಾನೆ. ರಾಜನು ರಾಜ್ಯವನ್ನು ತನ್ನ ಕಣ್ಣಳತೆಯಲ್ಲಿಯೇ ಅಳೆದು, ವ್ಯವಸ್ಥಿತವಾಗಿರಿಸಿ ನೆಮ್ಮದಿಯಾಗಿದ್ದನು. ಪಕ್ಕದ ರಾಜ್ಯ ಬಲಿಷ್ಠ ವಾದದು. ಯುದ್ಧವಾದರೆ ರಾಜ್ಯ ಏನಾಗುತ್ತದೋ ಊಹಿಸಲು ಸಾಧ್ಯವಿಲ್ಲ. ರಾಜನು, ಚಿಂತಿಸಿ, ಆಪ್ತ ಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ, ತೀರ್ಮಾನ ತೆಗೆದುಕೊಂಡ.
ರಾಜನ ತೀರ್ಮಾನದಂತೆ, ರಾಜ್ಯದ ಪ್ರಜೆಗಳಿಗೆ, "ಈಗ ನಮ್ಮ ರಾಜ್ಯ ಯುದ್ಧವನ್ನು ಎದುರಿಸಬೇಕಾಗಿದೆ. ಪಕ್ಕದ ಬಲಿಷ್ಠ ರಾಜ್ಯದೊಂದಿಗೆ ಹೋರಾಡುವುದು ವ್ಯರ್ಥ ಪ್ರಯತ್ನ. ಅನಿವಾರ್ಯವಾದರೆ ಎಲ್ಲರೂ ಸಹಕರಿಸಬೇಕು. ಆದರೆ ಅದಕ್ಕೂ ಮೊದಲು ಯಾರಿಗಾದರೂ, ಯುದ್ಧವನ್ನು ತಡೆಗಟ್ಟುವ ಉಪಾಯ ಗೊತ್ತಿದ್ದರೆ ಅರಮನೆಗೆ ಬಂದು ಸೂಚಿಸಿದರೆ, ಸೂಕ್ತ ಬಹುಮಾನ ಕೊಡಲಾಗುವುದು" ಎಂದು ಡಂಗುರ ಸಾರಿಸಿದನು. ಎರಡು ಮೂರು ದಿನಗಳು ಕಳೆದರೂ ಯಾರೂ ಬರಲಿಲ್ಲ. ಕೆಲವರಿಗೆ ಗೊತ್ತಿದ್ದರೂ, ಅಕಸ್ಮಾತ್ ಸರಿ ಇಲ್ಲದಿದ್ದರೆ ಸಭೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗೆ ಯೋಚಿಸಿ ಕೈಬಿಟ್ಟವರು ಇದ್ದರು. ಒಂದು ಸಂಜೆ ಒಬ್ಬ ಬ್ರಾಹ್ಮಣನು ಅರಮನೆ ದ್ವಾರಕ್ಕೆ ಬಂದು, ಮಹಾರಾಜರಿಗೆ ಯುದ್ಧ ನಿಲ್ಲಿಸುವ ಒಂದು ಸಲಹೆ ಕೊಡುತ್ತೇನೆ. ಎಂದು ಕಾವಲುಗಾರರನ್ನು ಕೇಳಿದ.ಅದಕ್ಕೆ ಕಾವಲುಗಾರ ನೋಡು ನೀನು ಕೊಡುವ ಸಲಹೆ ಸರಿಯಾದರೆ ಸಂತೋಷ, ಇಲ್ಲದಿದ್ದರೆ ಆಗುವ ಪರಿಣಾಮ ನಿಮಗೆ ಗೊತ್ತಿರಬೇಕು ಅಲ್ಲವೇ ಎಂದನು. ಆಗ ಬ್ರಾಹ್ಮಣ, ನಾನು ಎಲ್ಲಾ ಯೋಚಿಸಿಯೇ ಬಂದಿದ್ದೇನೆ ಎಂದು ದೃಢವಾಗಿ ಹೇಳಿದ. ಕಾವಲುಗಾರನ ಅನುಮತಿ ಪಡೆದು ಸಭೆಗೆ ಬಂದ.
ರಾಜನಿಗೆ ಕೈಮುಗಿದು, ಮಹಾಪ್ರಭು ನನ್ನದೊಂದು ಸಲಹೆ ಇದೆ. ನಿಮಗಿರುವ ನಿಜವಾದ ಸಮಸ್ಯೆ ಏನು ಎಂದು ಕೇಳಿದ. ರಾಜನು ತನ್ನ ಮಕ್ಕಳು, ಪಕ್ಕದ ರಾಜ್ಯದ ರಾಜನ ಮಕ್ಕಳು ಜಗಳ ಮಾಡಿಕೊಂಡ ಕಾರಣ ಯುದ್ಧ ಎದುರಿಸ ಬೇಕಾಗಿದೆ. ಇದನ್ನು ಕೇಳಿ ಬ್ರಾಹ್ಮಣನು, ಪಕ, ಪಕ, ಪಕ ಜೋರಾಗಿ ನಕ್ಕನು. ರಾಜಾ ಇದೊಂದು ಸಮಸ್ಯೇನಾ? ಇದು ನಿಮಗೆ ಸಮಸ್ಯೆ. ಇಂಥ ವಿಷಯಗಳು ನನಗೆ ಸಮಸ್ಯೆಯೇ ಅಲ್ಲ ಎಂದನು. ರಾಜನು ಕಣ್ಣರಳಿಸಿ ಏನು ಹೇಳುವಿರಿ? ಯುದ್ಧ ವಾಗುವುದು ಸಮಸ್ಯೆಯಲ್ಲವೇ? ಪಕ್ಕದ ರಾಜ್ಯದ ವಿಷಯ ನಿಮಗೂ ಗೊತ್ತಿದೆ ತಾನೆ? ಎಂದನು. ಬ್ರಾಹ್ಮಣನು, ಎಲ್ಲವನ್ನೂ ತಿಳಿದು ನಿಮಗೆ ಒಳ್ಳೆಯ ಸಲಹೆ ತಂದಿದ್ದೇನೆ. ಯುದ್ದವಾದರೆ ಸಮಸ್ಯೆ , ಯುದ್ಧವೇ ಆಗದಿದ್ದರೆ? ರಾಜನಿಗೆ ಸಿಟ್ಟು ಬಂದು, ನೀವು ಹೇಳುವುದೇನು ನಾವು ಸೋಲೊಪ್ಪಿಕೊಳ್ಳಬೇಕೇ? ಶರಣಾಗತರಾಗಬೇಕೇ? ಎಂದನು.
ಬ್ರಾಹ್ಮಣನು, ಇದಕ್ಕೊಂದು ಉಪಾಯವಿದೆ. ನೀವು ಸೋಲೋಪ್ಪುವುದು, ಯುದ್ಧ ಮಾಡುವುದು ಎರಡೂ ಬೇಡ. ಪಕ್ಕದ ರಾಜ್ಯದೊಂದಿಗೆ ಸ್ನೇಹ ಬೆಳೆಸಿ. ಪಕ್ಕದ ರಾಜನಿಗೆ, ಒಕ್ಕಣೆ ಬರೆದು ಕಳುಹಿಸಿ," ನೋಡಿ ನಮ್ಮ ಮಕ್ಕಳು ಅರಿಯದೆ ತಪ್ಪು ಮಾಡಿದ್ದಾರೆ. ಮಕ್ಕಳು ಮಕ್ಕಳ ವಿಷಯದಲ್ಲಿ, ರಾಜ್ಯವನ್ನು ನಡೆಸುವ ನಾವು ತಲೆ ಹಾಕುವುದಿಲ್ಲ , ಅವರಿಗೆ ಬುದ್ಧಿ ಹೇಳುವೆ. ನಮ್ಮ ಮಕ್ಕಳಿಂದ ಮುಂದೆ ಆ ತರಹ ಆಗದಂತೆ ನೋಡಿಕೊಳ್ಳುವೆ. ನೀವು ಮಕ್ಕಳಿಗೆ ಅರಿವು ಮೂಡಿಸಿ. ನಮ್ಮ ನಿಮ್ಮ ಸ್ನೇಹ ಇಂದು ನೆನ್ನೆಯದಲ್ಲ. ಹಿರಿಯ ತಲೆಮಾರಿನಿಂದಲೂ ಮುಂದುವರಿದು ಬಂದಿದೆ. ನಮ್ಮ ಕಾಲದಲ್ಲೂ ಹೀಗೆ ಇರಲಿ ಎಂದು ಹಾರೈಸುವೆ." ಈ ರೀತಿ ಲಕೋಟೆ ಬರೆದು ಸಾಕಷ್ಟು ಕೊಡುಗೆಗಳನ್ನು ಕೊಟ್ಟು ಪಕ್ಕದ ರಾಜ್ಯಕ್ಕೆ ಕಳುಹಿಸಿ ಎಂದನು. ರಾಜನಿಗೆ ಬ್ರಾಹ್ಮಣನ ಒಂದೊಂದು ಮಾತುಗಳು ಅಮೃತದಷ್ಟು ಸವಿಯಾಯಿತು. ಒಂದು ಕ್ಷಣವೂ ತಡಮಾಡದೆ ಮರುದಿನವೇ ಎಲ್ಲವನ್ನು ಬ್ರಾಹ್ಮಣ ಹೇಳಿದಂತೆ ಮಾಡಿ ಪಕ್ಕದ ರಾಜ್ಯಕ್ಕೆ ರಾಯಭಾರಿಗಳೊಂದಿಗೆ ಕಳುಹಿಸಿಕೊಟ್ಟನು.
ರಾಜನ ನಿರೀಕ್ಷೆಯಂತೆ, ಪಕ್ಕದ ರಾಜನು ಎಲ್ಲವನ್ನು ತಿಳಿದುಕೊಂಡು ಸಂತೋಷದಿಂದ ಈ ರಾಜ್ಯದ ರಾಜನಿಗೆ ಔತಣಕೂಟಕ್ಕೆ ಕರೆದನು. ಯುದ್ಧ ನಿಂತ ಸಂತೋಷಕ್ಕೆ ಬ್ರಾಹ್ಮಣನನ್ನು ಕರೆಸಿ ರಾಜನು ಸತ್ಕಾರ ಮಾಡಿ
ಗೌರವಿಸಿ "ವಿಪ್ರೋತ್ತಮರೇ, ನಿಮಗೆ ಇಂತಹ ಒಳ್ಳೆಯ ಯೋಚನೆ ಹೇಗೆ ಬಂದಿತು" ಎಂದನು. ಬ್ರಾಹ್ಮಣನು, ಇದರಲ್ಲಿ ಯೋಚಿಸುವಂತಹದ್ದು ಏನೂ ಇಲ್ಲ. ನನಗೋ ಮನೆ ತುಂಬಾ ಮಕ್ಕಳು, ಮೇಲಾಗಿ ಬಡತನ, ದಿನಬೆಳಗಾದರೆ ನಮ್ಮ ಮಕ್ಕಳು ಅಕ್ಕಪಕ್ಕದ ಮನೆ ಮಕ್ಕಳೂಂದಿಗೆ ಆಟ ಆಡುವಾಗ ಜಗಳ, ಹೊಡೆದಾಟ, ನಡೆಯುತ್ತಲೇ ಇರುತ್ತದೆ. ಹಾಗಂತ ಮಕ್ಕಳಿಗೆ ಆಡುವುದು ಬೇಡ ಎಂದಾಗಲಿ, ದೊಡ್ಡವರು ದೊಡ್ಡವರು ಜಗಳವಾಡುವುದಾಗಲೀ, ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆಯೇ? ಯಾರಾದರೂ ಒಬ್ಬರು ಒಪ್ಪಿಕೊಳ್ಳಲೇಬೇಕು ಅಲ್ಲವೇ ಅದನ್ನು ನಾನು ಮಾಡುವೆ. ಎಲ್ಲವನ್ನೂ ಕೇಳಿ ರಾಜನು ಸಂತೋಷದಿಂದ ಮತ್ತೆ ಬೇಕಾದರೆ ಹೇಳಿ ಕಳಿಸುವೆ ಎಂದು ಬ್ರಾಹ್ಮಣನನ್ನು ಬೀಳ್ಕೊಟ್ಟನು.
ಒಂದೆರಡು ವರ್ಷಗಳಲ್ಲೇ ರಾಜನಿಗೆ ಇನ್ನೊಂದು ಸಮಸ್ಯೆ ಎದುರಾಯಿತು. ಆಪ್ತ ಮಂತ್ರಿಗಳೊಡನೆ ರಾಜನು ಸಮಾಲೋಚಿಸಿ, ಬ್ರಾಹ್ಮಣನಿಗೆ ಹೇಳಿ ಕಳುಹಿಸಿದ. ಅರಮನೆಗೆ ಬಂದ ಬ್ರಾಹ್ಮಣನನ್ನು ಸತ್ಕರಿಸಿ, "ವಿಪ್ರೋತ್ತಮರೇ, ಈ ಸಲ ರಾಜ್ಯದ ಸಮಸ್ಯೆಯಲ್ಲ, ಅರಮನೆಯ ಆಂತರಿಕ ಸಮಸ್ಯೆ.
ನಿಮಗೆ ತಿಳಿದಿರುವಂತೆ ನನಗೆ ಇಬ್ಬರು ಗಂಡು ಮಕ್ಕಳು. ಅವರು ಈಗ ದೊಡ್ಡವರಾಗಿದ್ದಾರೆ. ಆಡಳಿತದ ಜವಾಬ್ದಾರಿಯನ್ನು ಅವರಿಗೆ ವಹಿಸಬೇಕು.ಇಬ್ಬರಲ್ಲಿ ಯಾರೇ ಒಬ್ಬರಿಗೆ ರಾಜ್ಯವನ್ನು ಕೊಟ್ಟರೂ, ಮತ್ತೊಬ್ಬನಿಗೆ ಬೇಜಾರು ಸಹಜವಾಗಿ ಆಗುತ್ತದೆ. ನನಗೆ ಇಬ್ಬರು ಎರಡು ಕಣ್ಣುಗಳಿದ್ದಂತೆ, ಇಂಥ ಸೂಕ್ಷ್ಮವಾದ ಸಮಸ್ಯೆಗೆ ನಿಮ್ಮಲ್ಲಿ ಪರಿಹಾರವಿದೆಯೇ? ಎರಡು ದಿನ ಬಿಟ್ಟು ತಿಳಿಸಿರಿ" ಎಂದನು. ಪ್ರಭು, ಎರಡು ದಿನ ಬೇಡ ಈಗಲೇ ಹೇಳುತ್ತೇನೆ. ಇದು ಸಮಸ್ಯೆಯೇ ಅಲ್ಲ, ಎಲ್ಲರ ಮನೆಯಲ್ಲೂ ಇದು ನಡೆಯುವಂತಹದು. ಇಷ್ಟು ಸಣ್ಣ ವಿಷಯಕ್ಕೆ ಕಿಂಚಿತ್ತೂ ಯೋಚಿಸಬೇಕಾಗಿಲ್ಲ. ನೋಡಿ ಪ್ರಭು ನಮ್ಮ ಮನೆಯಲ್ಲಿ ನನಗೆ ಆರು ಮಕ್ಕಳು. ಎಂದಾದರೂ ಒಂದು ದಿನ ಒಂದೋ, ಎರಡೋ, ಮಿಠಾಯಿ ತರುತ್ತೇನೆ. ತಂದ ಕೂಡಲೇ ಆರು ಕಾಗದದ ತುಂಡುಗಳನ್ನು ಮಾಡಿ, ತಂದ ಮಿಠಾಯಿ ಚೂರುಚೂರು ಮಾಡಿ ಪಟ್ಟಣ ಕಟ್ಟಿ ಎಲ್ಲಾ ಮಕ್ಕಳಿಗೆ ಒಂದೊಂದು ಕೊಡುತ್ತೇನೆ. ಮಕ್ಕಳಿಗೆ, ಅನುಮಾನ, ಜಗಳ ಬರುವುದಿಲ್ಲ ಎಲ್ಲರೂ ಖುಷಿಯಾಗಿ ಹೋಗುತ್ತಾರೆ.
ರಾಜನಿಗೆ ಸೂಕ್ಷ್ಮ ಅರ್ಥವಾಯಿತು. ರಾಜ್ಯವನ್ನು ಇಬ್ಬರು ಮಕ್ಕಳಿಗೂ ಸಮನಾಗಿ ಹಂಚುವುದು. ರಾಜನಿಗೆ ತೃಪ್ತಿಯಾಯಿತು. ವಿಪ್ರೋತ್ತಮರೇ, ನನ್ನಿಂದ ನಿಮಗೆ ಏನು ಬೇಕು ಕೇಳಿ ಕೊಡುತ್ತೇನೆ ಎಂದನು. ಆಗ ಬ್ರಾಹ್ಮಣನು, ಪ್ರಭು ಈಗಾಗಲೇ ನನಗೆ ಬೇಕಾದಷ್ಟು ಕೊಟ್ಟಿದ್ದೀರಿ. ಮನೆಯಲ್ಲಿ ನಿಮ್ಮ ದಯದಿಂದ ನೆಮ್ಮದಿ ಸಿಕ್ಕಿದೆ. ಆದರೆ ನನ್ನದೊಂದು ಸಮಸ್ಯೆ ಇದೆ ಅದನ್ನು ನೀವು ಪರಿಹರಿಸಬೇಕೆಂದು ಕೇಳಿದನು. ಸಂಕೋಚವಿಲ್ಲದೆ ಹೇಳಿ ನಾನು ಪರಿಹರಿಸುತ್ತೇನೆ ಎಂದು ಮಾತು ಕೊಟ್ಟನು. ರಾಜ ನನಗಿರುವ ಮಕ್ಕಳಲ್ಲಿ ಕೊನೆಯ ಮಗ ಚಿಕ್ಕವನು. ಅವನಿಗೆ ನಾಲ್ಕು ವರ್ಷ. ಅವನು ಹುಟ್ಟಿದಾಗಿನಿಂದಲೂ, ಇವತ್ತಿನ ತನಕವೂ ವಂಯ್ಯೂ, ವಂಯ್ಯೂ, ಎಂದು ಅಳುತ್ತಲೇ ಇರುತ್ತಾನೆ. ಒಂದು ನಿಮಿಷವೂ ಬಾಯಿ ಮುಚ್ಚುವುದಿಲ್ಲ. ತಿನ್ನುವಾಗ ಕುಡಿಯುವಾಗ ಮಾತ್ರ ಬಾಯಿ ಮುಚ್ಚುತ್ತಾನೆ. ಅದಾದ ಕೂಡಲೇ ಮತ್ತೆ ಅಳು. ಏನೇನು ಮಾಡಬಹುದು ನನ್ನ ಕೈಯಲ್ಲಾದ್ದು ಎಲ್ಲ ಮಾಡಿದ್ದೇನೆ. ಅವರಿವರು ಹೇಳಿದ ಸಲಹೆಗಳನ್ನು ಪಾಲಿಸಿದ್ದೇನೆ. ಇದುವರೆಗೂ ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಇದು ದೊಡ್ಡ ಚಿಂತೆಯಾಗಿದೆ . ಈ ಸಮಸ್ಯೆಯನ್ನು ಪರಿಹರಿಸಿದರೆ ಇದಕ್ಕಿಂತ ದೊಡ್ಡ ಉಡುಗೂರೆ ನನಗೆ ಇನ್ನೇನು ಇಲ್ಲ ಎಂದನು.
ಒಂದು ಕ್ಷಣ ಯೋಚಿಸಿದ ರಾಜನ ಮುಖದಲ್ಲಿ ಮಂದಹಾಸ ಮೂಡಿತು. ಅದೆಂಥ ಮಂದಹಾಸ ಎಂದರೆ, ಅವನ ಜೀವಮಾನದಲ್ಲಿ ಇಂತಹ ನಿಶ್ಚಿಂತೆ ಯಾದ ನಗುವನ್ನು ಯಾರೂ ನೋಡಿರಲಿಲ್ಲ . ತಕ್ಷಣ "ವಿಪ್ರೋತ್ತಮರೇ, ನೀವು ಚಿಂತಿಸಬೇಕಾಗಿಲ್ಲ ನಿಮ್ಮ ಮಗನನ್ನು ಅರಮನೆಗೆ ಕಳುಹಿಸಿ. ಸಂಪೂರ್ಣ ಜವಾಬ್ದಾರಿ ನಮ್ಮದು" ಎಂದನು. ರಾಜನಿಗೆ ಬ್ರಾಹ್ಮಣನ ಹೇಳುವ ಮಾತುಗಳು ವೇದ ವಾಕ್ಯದಂತೆ ಆಗಿತ್ತು . ಹುಡುಗನನ್ನು ಪರೀಕ್ಷಿಸಲೂ ಇಲ್ಲ. ಬ್ರಾಹ್ಮಣನಿಗೆ ತಲೆಯ ಮೇಲಿನಿಂದ ದೊಡ್ಡ ಹೊರೆ ಇಳಿಸಿದಷ್ಟು ಸಂತೋಷವಾಯಿತು. ರಾಜನೇ ಆಶ್ವಾಸನೆ ಕೊಟ್ಟಾಗ ಆಗದೆ ಇರಲು ಸಾಧ್ಯವೇ? ಮನೆಗೆ ಬಂದ ರಾಜಧೂತರೊಡನೆ ಮಗನನ್ನು ಕಳುಹಿಸಿಕೊಟ್ಟನು. ರಾಜ್ಯಸಭೆಯ ಕಾರ್ಯಕಲಾಪಗಳ ಸಮಯವನ್ನು ಹಾಳು ಮಾಡುತ್ತಿದ್ದ ವಿದ್ವಾಂಸನನ್ನು ರಾಜನು ಕರೆಸಿದನು. ಬಹಳ ಖುಷಿಯಿಂದ ಪಂಡಿತನು ಬಂದನು. ರಾಜನು ಗೌರವದಿಂದ ಕೂರಿಸಿ, ಪಂಡಿತರೇ ನಿಮ್ಮಿಂದ ಒಂದು ಕೆಲಸ ಆಗಬೇಕು ಎಂದನು. ಎದ್ದುನಿಂತ ಪಂಡಿತನು, ಪ್ರಭು ಯಾವ ಕೆಲಸ ಕೊಟ್ಟರು ನಾನು ಮಾಡುತ್ತೇನೆ. ಇಂತಹ ಕೆಲಸ ಆಗಬೇಕು ಎನ್ನಿ ,ಕಳ ಕಳಿಯ ವಿನಂತಿ ಬೇಡ ಎಂದನು. ಕೂಡಲೇ ರಾಜನು ಬ್ರಾಹ್ಮಣನ ಮಗನನ್ನು ಕರೆಸಿದನು. "ಪಂಡಿತರೆ, ಈ ಹುಡುಗನ ಯಾವಾಗಲೂ ಅಳುತ್ತಾನೆ. ಹಠವನ್ನು ನಿಲ್ಲಿಸಿ ಎಲ್ಲ ಮಕ್ಕಳೊಡನೆ ಆಟವಾಡಿಕೊಂಡಿರಬೇಕು. ಆದರೆ ಮಗುವಿಗೆ ಹೆದರಿಸುವುದು, ಹೊಡೆಯುವುದು, ಅಪ್ಪಿತಪ್ಪಿಯೂ ಮಾಡಬಾರದು ಇದು ಸಾಧ್ಯವೇ?" ಎಂದು ಕೇಳಿದನು.
ಏನು ಹೇಳುತ್ತೀರಿ ಪ್ರಭು? ಇಷ್ಟು ಸಣ್ಣ ಮಗುವನ್ನು ಸುಧಾರಿಸಲು ಸಾಧ್ಯವಿಲ್ಲವೇ? ನಾನು ಅದನ್ನು ಮಾಡುತ್ತೇನೆ. ಇಲ್ಲದಿದ್ದರೆ ರಾಜ್ಯವನ್ನು ಬಿಟ್ಟು ಹೋಗುತ್ತೇನೆ ಎಂದು ಹುಮ್ಮಸ್ಸಿನಿಂದ ಹೇಳಿದನು. ರಾಜನಿಗೂ ಅದೇ ಬೇಕಾಗಿತ್ತು. ಆಗಲಿ ಪಂಡಿತರೆ ಮೂರು ದಿನದೊಳಗೆ ನೀವು ಈ ಹುಡುಗನನ್ನು ಸರಿ ಮಾಡಬೇಕು. ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಅರಮನೆಯಿಂದ ಮಾಡಿಸುತ್ತೇನೆ. ನೀವು ಚಿಂತಿಸಬೇಕಾಗಿಲ್ಲ. ಮೂರು ದಿನಗಳಿಗೆ ಆ ಹುಡುಗ ಸರಿಹೋದರೆ ನೀವು ಕೇಳಿದಷ್ಟು ಬಹುಮಾನವನ್ನು ಕೊಡುತ್ತೇನೆ ಎಂದನು.
ಪಂಡಿತನ ಸಂತೋಷಕ್ಕೆ ಮೇರೆ ಇರಲಿಲ್ಲ. ಹುಡುಗನನ್ನು ಮನೆಗೆ ಕರೆದುಕೊಂಡು ಹೊರಟನು. ಹೊಸ ವಾತಾವರಣದಲ್ಲಿ ಹುಡುಗನು ಹೊಂದಿಕೊಳ್ಳುವುದರಲ್ಲಿ ಅಳುವನ್ನು ಮರೆತಿದ್ದನು. ಊಟ ತಿಂಡಿ ಮಾಡಿಸಿ ಹುಡುಗನಿಗೆ ಕಥೆ ಹೇಳಿ ಮಲಗಿಸಿದನು. ಪಂಡಿತನು ಯಾವುದೋ ಯೋಚನೆಯಲ್ಲಿ ಮುಳುಗಿ ಮನಸ್ಸಿನಲ್ಲೇ ನಗುತ್ತಿದ್ದನು. ಒಂದು ಹೊತ್ತಿನಲ್ಲಿ,
ವಂಯ್,ವಂಯ್, ಎಂಬ ಶಬ್ದ ಅಲೆಅಲೆಯಾಗಿ ಬಂದು ತಾರಕಕ್ಕೆ ಏರಿತು.
ಪಂಡಿತನು ಎದ್ದು, ಹುಡುಗನನ್ನು ಎಷ್ಟೇ ಸಮಾಧಾನಿಸಿದರು ಹಠ ನಿಲ್ಲಿಸಲಿಲ್ಲ. ಆಟದ ಸಾಮಾನು ಆಯಿತು, ತಿನ್ನಲು ಕೊಟ್ಟಾಯಿತು, ಕಥೆಯಾಯ್ತು, ಸ್ವಲ್ಪ ಹೆದರಿಸಿ ಆಯ್ತು, ಊಹುಂ, ಪಂಡಿತನ ಎಲ್ಲಾ ಪ್ರಯತ್ನವೂ ನೀರಿನಲ್ಲಿ ಹೋಮ ಮಾಡಿದಂತೆ ಆಯಿತು. ದಿನವಿಡಿ ಅಳು ಕೇಳಿ ಪಂಡಿತನ ತಲೆಚಿಟ್ಟು ಹಿಡಿಯಿತು. ಹುಡುಗನ ರಗಳೆ ನಿಲ್ಲಿಸುವುದು ಪಂಡಿತ ತಿಳಿದಷ್ಟಾಗಲಿ, ವಿಶೇಷ ಪಾಂಡಿತ್ಯಕ್ಕಾಗಲಿ, ಸಾಧ್ಯವಿಲ್ಲವೆಂದು ಅನುಭವದಿಂದಲೇ ಅರ್ಥವಾಯಿತು.
ಮೂರು ದಿನಗಳು ಹೀಗೆ ಕಳೆಯಿತು. ಪಂಡಿತನು ಸೋತು ಹೈರಾಣಾದನು.
ರಾಜನಿಗೆ ಮುಖ ತೋರಿಸುವುದು ಸಾಧ್ಯವಿಲ್ಲವೆಂದು ಕೊಂಡು ಒಂದು ಬೆಳಗಿನ ಜಾವವೇ ಎದ್ದು, ಯಾರಿಗೂ ಕಾಣದಂತೆ ಸಂಸಾರ ಸಮೇತ ತಲೆಮರೆಸಿಕೊಂಡು ರಾಜ್ಯವನ್ನೇ ಬಿಟ್ಟು ಹೊರಟುಹೋದನು.
ದೂತರಿಂದ ವಿಚಾರವನ್ನು ತಿಳಿದ ರಾಜನು, ನೆಮ್ಮದಿಯಿಂದ ಉಸಿರಾಡಿದನು. ಇತ್ತ ಬ್ರಾಹ್ಮಣನು ಚಿಂತೆಯಿಲ್ಲದೆ ಕಣ್ತುಂಬ ನಿದ್ರೆ ಮಾಡಿದನು. ಹುಡುಗನು ಅರಮನೆಯ ವೈಭವೋಪೇತ ಜೀವನ ನೋಡಿ ಹಟವನ್ನೆ ಮರೆತು ಆಟ-ಪಾಠಗಳ ಕಡೆ ಗಮನಕೊಟ್ಟನು. ಒಂದೇ ಕಲ್ಲಿಗೆ ನಾಲ್ಕಾರು ಹಣ್ಣುಗಳು ಉದುರಿದವು ಎಂಬಂತೆ, ಸಿಕ್ಕುಸಿಕ್ಕಾಗಿದ್ದ ರಾಜ್ಯದ ಸಮಸ್ಯೆಗಳೆಲ್ಲಾ ಸರಿಹೋಯಿತು. ರಾಜನ ಮುಖದಲ್ಲಿ ಸಂತಸ ಮೂಡಿತು. ಬ್ರಾಹ್ಮಣನನ್ನು ಅರಮನೆಯ ಸಲಹೆಗಾರರನ್ನಾಗಿ ನೇಮಿಸಿಕೊಂಡನು.
" ಬಂಧುರಾತ್ಮಾತ್ಮನಸ್ತಸ್ಯ ಯೇನಾತ್ಮೈ ವಾತ್ಮನಾ ಜಿತ,
ಅನಾತ್ಮ ನಸ್ತು ಶತ್ರುತ್ವೇ ವರ್ತೇ ತಾತ್ಮೈವ ಶತ್ರುವತ್!
ಬರಹ :- ಆಶಾ ನಾಗಭೂಷಣ.
ಕೃಪೆ:ನಿತ್ಯ ಸತ್ಯ
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment