ದಿನಕ್ಕೊಂದು ಕಥೆ 1022

*🌻ದಿನಕ್ಕೊಂದು ಕಥೆ🌻*

ನದಿ ದಂಡೆಯಲ್ಲಿ ಕೆಲವರು ಹಾಯಾಗಿ ವಿಹರಿಸುತ್ತಿದ್ದರು. ಕೆಲವರು ಕೆಮೆರಾ ಕಣ್ಣಿಗೆ ಭಂಗಿಗಳಾಗಿದ್ದರು. ಕೆಲವರು ಬುತ್ತಿ ಬಿಚ್ಚಿ ಕುಳಿತಿದ್ದರು. ಕೆಲವರು ಕಾಲುಗಳನ್ನು  ನೀರಿನಲ್ಲಿ ಇಳಿಬಿಟ್ಟು  ಹರಟುತ್ತಿದ್ದರು.

ಆಗ ನದಿಯ ನಡುಮಧ್ಯದಲ್ಲಿ ಇದ್ದಕ್ಕಿದ್ದಂತೆ ದೋಣಿಯೊಂದು ಮಗುಚಿ ಬೀಳುತ್ತದೆ.   ಮುಳುಗುತ್ತಿರುವವರ ಆಕ್ರಂದನ ಹಕ್ಕಿಗಳ ಚಿಲಿಪಿಲಿಯನ್ನು ಹಿನ್ನೆಲೆಗೆ ದೂಕುತ್ತದೆ.  ದಂಡೆಯಲ್ಲಿರುವವರು ಭಯಭೀತರಾಗಿ ಆ ದೃಶ್ಯವನ್ನು ನೋಡತೊಡಗುತ್ತಾರೆ.

"ಮಾರಣಾಂತಿಕ ಸುಳಿಗಳಿವೆ ಎಚ್ಚರ"  ಎಂದು ಅಲ್ಲಿ ಬೋರ್ಡು ಹಾಕಲಾಗಿದೆ.  ಅಲ್ಲೀವರೆಗೂ ಸುಳಿಗೆ ಬಲಿಯಾದವರ ಅಂಕಿ ಅಂಶಗಳನ್ನೂ ಹಾಕಲಾಗಿದೆ .ಯಾರೂ ನೀರಿಗೆ ಇಳಿಯಲೊಲ್ಲರು.

ಗುಂಪನ್ನು ಸೀಳಿಕೊಂಡು ಒಬ್ಬ ಬಂದೇಬಿಟ್ಟನಲ್ಲ! ಆತ ಭರ್ಜಿಯಂತೆ ನೀರಿಗೆ ಜಿಗಿದಿದ್ದನ್ನು ನೋಡಿ  ಎಲ್ಲರೂ  ಬೆರಗಾದರು. ಆತಂಕ ತಿಳಿಯಾಯಿತು.‌ ತಮ್ಮ ಜವಾಬ್ದಾರಿಯನ್ನು ಅವನ ಹೆಗಲಿಗೆ ಹೊರಿಸಿ ನಿರಾಳದ ನಿಟ್ಟುಸಿರು ಬಿಟ್ಟರು.

ಆತ ಒಬ್ಬೊಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸುತ್ತಿದ್ದರೆ, ಹುರಿದುಂಬಿಸುವ ಶಿಳ್ಳೆಗಳ ಮೊರೆತ ನಾಲ್ಕೂ ದಿಕ್ಕುಗಳಲ್ಲಿ ಮಾರ್ದನಿಸತೊಡಗಿತು.‌.. ಆತ ಕಟ್ಟಕಡೆಯ ವ್ಯಕ್ತಿಯನ್ನು ದಂಡೆಗೆ ತಲುಪಿಸಿ ಕುಸಿದು ಕುಳಿತಾಗ ಜೈಕಾರದ ಸದ್ದು ಮುಗಿಲನ್ನು ಕೊರೆದು  ನಭೋಮಂಡಲವನ್ನು ವ್ಯಾಪಿಸಿತು. 

ದುರದೃಷ್ಟವಶಾತ್,  ಆ  ರಕ್ಷಕ ಅತೀವವಾಗಿ ದಣಿದು ವೀರ ಮರಣವನ್ನು ಅಪ್ಪಿದ.   

ಅಲ್ಲಿವರೆಗೂ ಹರ್ಷೋದ್ಘಾರದಿಂದ ಕೂಡಿದ್ದ ನದಿಯ ದಂಡೆ ಕ್ಷಣಮಾತ್ರದಲ್ಲಿ ಶೋಕದ ಮಡುವಾಯಿತು.ಎಲ್ಲರೂ ಅವನ ಶೌರ್ಯವನ್ನು,ತ್ಯಾಗವನ್ನು  ಕೊಂಡಾಡುತ್ತಾ ಕಣ್ಣೀರು ಹಾಕಿದರು.. ಆ ಸುದ್ದಿ ಮಿಂಚಿನ ವೇಗದಲ್ಲಿ, ಕಾಳ್ಗಿಚ್ಚಿನಂತೆ ಹರಡಿತು..ಕುಟುಂಬದವರಿಗೆ ಲಕ್ಷ ಲಕ್ಷ ಪರಿಹಾರ ಜೊತೆಗೆ ಮಡಿದವನಿಗೆ ಶೌರ್ಯ ಪ್ರಶಸ್ತಿಯೂ ಘೋಷಣೆಯಾಯಿತು.‌ ಶ್ರದ್ಧಾಂಜಲಿಯ ಮಹಾಪೂರವೇ ಹರಿದು ಬಂತು. 

ಅವನ ಅಂತಿಮ ಯಾತ್ರೆಯಲ್ಲಿ ಬಾರೀ ಜನಸ್ತೋಮವೇ ನೆರೆದು ಬೀಳ್ಕೊಟ್ಟಿತು.

ಇದೆಲ್ಲವನ್ನು ಗಮನಿಸುತ್ತಿದ್ದ ಅವನ ಆತ್ಮ ತನಗೆ ತಾನೇ ಹೇಳಿಕೊಂಡಿತು - "ನನ್ನ ಶೌರ್ಯ, ತ್ಯಾಗಗಳನ್ನು ತೇರಿನ ಮೇಲೆ ಕೂರಿಸಿ ಮೆರವಣಿಗೆ ಮಾಡುತ್ತಿರುವ ನಿಮ್ಮಲ್ಲಿ ಒಬ್ಬರಾದರೂ ನನ್ನ ಆಶಯವನ್ನರಿತು ನೀರಿಗೆ ಧುಮುಕುವ ಕೆಚ್ಚೆದೆಯನ್ನು ತೋರಿದ್ದರೆ ನಿಮ್ಮ ಚಪ್ಪಾಳೆ, ಕಣ್ಣೀರು, ಪದಕಕ್ಕಿಂತ ಹೆಚ್ಚಿನ ಆನಂದ ನನಗೆ ಸಿಗುತ್ತಿತ್ತು"

ಕೃಪೆ: ಡಾಕ್ಟರ್ ಗವಿಸ್ವಾಮಿ.ಚಾಮರಾಜ ನಗರ.
ಸಂಗ್ರಹ:ವೀರೇಶ್ ಅರಸಿಕೆರೆ.
**************************** 
*🌻ದಿನಕ್ಕೊಂದು ಕಥೆ*🌻
ಒಂದು ಪುಟ್ಟಕತೆ #ಹಾರೈಕೆ

"ಈ ಸಲ ನೀವು ಅಧಿಕಾರ ಹಿಡೀಬೇಕು ಸಾರ್.. ನೀವ್ ಗೆದ್ರೆ ನಮಗೆ ನೂರಾನೆ ಬಲ ಸಾರ್.. ನಿಮಗೋಸ್ಕರ ದೇವರಿಗೆ ಹರಕೆ ಹೊತ್ತಿದೀನಿ ಸಾರ್"

ಚುನಾವಣೆಯ ವೇಳೆ ಮರಿಪುಢಾರಿಯೊಬ್ಬ ಹಿರಿಪುಢಾರಿಗೆ ಹೇಳಿದ ಮಾತುಗಳಿವು.

ಅವನ ಮಾತುಗಳಲ್ಲಿ ಹಾರೈಕೆಗಿಂತ ಅವಲಂಬನೆಯೇ ಢಾಳಾಗಿ ಕಾಣುತ್ತಿತ್ತು..  ಅಭಿಮಾನಕ್ಕಿಂತ ಸ್ವಾರ್ಥವೇ ಒಂದು ಕೈ ಮೇಲಿತ್ತು.. 

ಪರಾವಲಂಬಿ  ಪ್ರಜ್ಞೆ ಅಂತರಾತ್ಮಕ್ಕೆ ತಿವಿಯುತ್ತಿದ್ದರೂ, ಒಂದಿನಿತೂ ಸಂಕೋಚವಿಲ್ಲದೇ, ಒಂಚೂರೂ ನೊಂದುಕೊಳ್ಳದೇ ಭಂಡ ಸೋಗಿನಲ್ಲಿ ಹೇಳಿ ಮುಗಿಸಿದ್ದ. 

ಮರಿ ಪುಢಾರಿ ಆಗ ತಾನೇ ಕೆರೆಯಲ್ಲಿ ಈಜು ಕಲಿಯತ್ತಿದ್ದ. ಹಿರಿಪುಢಾರಿ  ಹೊಳೆ ಈಜಿಗೆ ಬಡ್ತಿ ಪಡೆದು  ವರುಷಗಳೇ ಆಗಿದ್ದವು. ಅಂತಹ  ಸಾವಿರಾರು ಮರಿ ಮೀನುಗಳನ್ನು ಕಂಡಿದ್ದ, ಪಳಗಿಸಿಕೊಂಡಿದ್ದ.   ಕಂತೆಗೆ ತಕ್ಕ ಬೊಂತೆ ಎಂಬಂತೆ ಮರಿ ಪುಢಾರಿಯ ಹಾರೈಕೆಗೆ ತಕ್ಕಷ್ಟು 'ಮಾಣಿಕ್ಯ' ಕೊಟ್ಟು ಖುಷಿಪಡಿಸಿದ.

ಇನ್ನೊಂದು ಕಡೆ ...

ಗುಡಿಸಲಿನಂತಹ ಮನೆಯ ಎದುರು ಮಾದೇಶ್ವನ ಗುಡ್ಡಪ್ಪನೊಬ್ಬ ಭಿಕ್ಷೆಗೆ ನಿಂತಿದ್ದ..

ಮನೆಯೊಳಗಿದ್ದ ಹೆಂಗಸು ಎಷ್ಟು ಹುಡುಕಿದರೂ ಧವಸ ಧಾನ್ಯ ಯಾವುದೂ ಸಿಗದಿದ್ದಾಗ ಕೂಲಿ ಮಾಡಿ ತಂದಿದ್ದ ಒಂದು ಬೊಗಸೆಯಷ್ಟು ಕಡಲೆಕಾಯಿಯನ್ನು ಅವನ ಜೋಳಿಗೆಗೆ ಹಾಕಿದಳು..

ಆತ ಹೇಳಿದ್ದು ಒಂದೇ ಮಾತು.
"ಮಾದೇಸ್ವರಾ, ಈ ನಮ್ಮವ್ವಳ ಆಯುಷ್ಯ ಘನವಾಗಿ ಇರಲಪ್ಪ ; ಇದು ನನ್ನಂಥ ಗುಡ್ಡಪ್ಪಗಳ್ಗ ತವರ್ಮನೆಯಾಗಿ ಇರಲಪ್ಪ"

ಅವನ ದನಿಯಲ್ಲಿ ಲವಲೇಷ ಸ್ವಾರ್ಥ ಇರಲಿಲ್ಲ.. ಕಪಟತೆ ಇರಲಿಲ್ಲ..  ಕಲ್ಲುಬಂಡೆಗಳನ್ನೂ ಕರಗಿಸಬಲ್ಲ ದೈನ್ಯತೆ ಇತ್ತು.. ಪ್ರಾಮಾಣಿಕತೆ ಇತ್ತು.. ಆಕೆ ಹಾರೈಕೆಯ ಮಾತುಗಳನ್ನು ಕೇಳಿ ಯುಗಗಳೇ ಕಳೆದಿದ್ದವೇನೋ;  ತನ್ನ ಬಂಧುವೊಬ್ಬ ಹರಸಿದಂತೆ ಭಾಸವಾಯಿತು ಆಕೆಗೆ.

ಕೃಪೆ ಡಾಕ್ಟರ್ ಗವಿಸ್ವಾಮಿ.ಚಾಮರಾಜನಗರ.
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059