ದಿನಕ್ಕೊಂದು ಕಥೆ 1027
*🌻ದಿನಕ್ಕೊಂದು ಕಥೆ🌻* *ಕರ್ಮ ಮತ್ತು ಕರ್ಮ ಯೋಗದ ಕುರಿತು ಉದಾಹರಣೆಯ ಒಂದು ಕಥೆ.*
ರಮಣ ಮಹರ್ಷಿಗಳು ಒಮ್ಮೆ ಬೆಟ್ಟ ಹತ್ತಿ ಹೊರಟಿರುವಾಗ, ವಿದೇಶಿ ಯಾತ್ರಿಕರೂಬ್ಬರು ಬಂದು ಅವರಿಗೆ ನಮಸ್ಕರಿಸಿದರು. ಹಾಗೆ, ಸ್ವಾಮಿ ನೆನ್ನೆ ನೀವು ಉಪನ್ಯಾಸದಲ್ಲಿ ಕರ್ಮ ಮತ್ತು ಕರ್ಮಯೋಗದ ಕುರಿತಾಗಿ ಹೇಳಿದಿರಿ. ಇದರ ಅರ್ಥ ಏನು ಎಂದು ಕೇಳಿದರು. ಆಗ ಮಹರ್ಷಿಗಳು ನನ್ನ ಜೊತೆ ಬೆಟ್ಟಹತ್ತಿ ಬನ್ನಿ ನಿಮಗೆ ಗೊತ್ತಾಗುತ್ತದೆ ಎಂದರು. ಸರಿ ಯಾತ್ರಿಕರು ಅವರೊಟ್ಟಿಗೆ ಬೆಟ್ಟ ಹತ್ತುತ್ತಿದ್ದರು. ಸುಮಾರು ಅರ್ಧ-ಮುಕ್ಕಾಲು ದಾರಿ ಹೋಗಿದ್ದರು. ಆಗ ಅಲ್ಲೊಬ್ಬಳು ಅಜ್ಜಿ ಕಟ್ಟಿಗೆ ಆರಿಸಲು ಕಾಡಿಗೆ ಬಂದಿದ್ದಳು. ಅಜ್ಜಿಗೆ ವಯಸ್ಸಾಗಿದೆ, ಮೈಯಲ್ಲಿ ಶಕ್ತಿ ಇಲ್ಲ. ಹಾಗಾಗಿ ಕಟ್ಟಿಗೆಗಳನ್ನು ಕಡಿಯುವುದಾಗಲಿ, ಮುರಿಯುವುದಾಗಲಿ ಮಾಡದೆ ಒಣಗಿ ಬಿದ್ದಿರುವ ಸಣ್ಣ ಪುರಲೆಯಂಥ ಕಟ್ಟಿಗೆಗಳ ತುಂಡುಗಳನ್ನೆ ಆರಿಸಿಕೊಂಡು ಎಲ್ಲವನ್ನು ಒಟ್ಟಿಗೆ ಮಾಡಿ, ಬರುವಾಗಲೇ ತಂದಿದ್ದ ಸಣ್ಣ ಸಣ್ಣ ತುಂಡಾದ ಹಗ್ಗಗಳನ್ನು ಸೇರಿಸಿ ಗಂಟುಕಟ್ಟಿ ಕಟ್ಟಿಗೆಯ ಹೊರೆ ಮಾಡಿದಳು.
ಆ ಕಟ್ಟಿಗೆ ಹೊರೆಯನ್ನು ತಲೆಯ ಮೇಲೆ ಇಟ್ಟುಕೊಳ್ಳಲು ತುಂಬಾ ಪ್ರಯತ್ನ ಪಡುತ್ತಿದ್ದಳು. ಅರ್ಧ ಎತ್ತುತ್ತಿದ್ದಂತೆ ತಲೆ ಮೇಲೆ ಇಟ್ಟು ಕೊಳ್ಳಲಾಗಿದೆ, ಮತ್ತೆ ಕೆಳಗಿಡುತ್ತಿದ್ದಳು. ದೂರದಲ್ಲಿ ನಿಂತ ರಮಣ ಮಹರ್ಷಿಗಳು, ಯಾತ್ರಿಕರು ನೋಡುತ್ತಲೇ ಇದ್ದರು. ಇದೇ ರೀತಿ ಹರಸಾಹಸ ಮಾಡಿ ಅಂತೂ ತಲೆಯಮೇಲೆ ಇಟ್ಟುಕೊಂಡಳು. ಮೇಲೆ ಹೋಗಬೇಕು ಅಜ್ಜಿಗೆ ಒಬ್ಬಳೇ ಹತ್ತುವುದೇ ಕಷ್ಟವಾಗಿತ್ತು, ಹೀಗಿರುವಾಗ ಕಟ್ಟಿಗೆ ಹೊರೆಯನ್ನು ತಲೆಯಮೇಲೆ ಇಟ್ಟುಕೊಂಡು ಬೆಟ್ಟ ಹತ್ತುವುದು ಎಂದರೆ ತುಂಬಾ ಕಷ್ಟದ ಕೆಲಸ, ಆದರೂ ಅಜ್ಜಿಯು ಕಷ್ಟಪಟ್ಟು ಹೆಜ್ಜೆ ಇಡುತ್ತಾ ಬೆಟ್ಟ ಹತ್ತುವುದನ್ನು ನೋಡುತ್ತಿದ್ದ ಮಹರ್ಷಿಗಳು, ಅಜ್ಜಿಯನ್ನು ಕೂಗಿ ಒಂದು ನಿಮಿಷ ನಿಂತ್ಕೋ ತಾಯಿ ಎಂದು ನಿಲ್ಲಿಸಿದರು. ಹತ್ತಿರ ಹೋಗಿ ಅವಳು ಹೊತ್ತಿದ್ದ ಕಟ್ಟಿಗೆ ಹೊರೆಯೊಳಗಿಂದ ಒಂದು ಉದ್ದನೆಯ ಕಟ್ಟಿಗೆಯನ್ನು ತೆಗೆದು ಅಜ್ಜಿಯ ಕೈಗೆ ಕೊಟ್ಟು ," ನೋಡು ತಾಯಿ ಈ ಕಟ್ಟಿಗೆಯನ್ನು ಊರುಗೋಲು ಮಾಡಿಕೊಂಡು ಬೆಟ್ಟ ಹತ್ತು ಸ್ವಲ್ಪ ಹಗುರ ಆಗುತ್ತೆ ಎಂದರು. ಅಜ್ಜಿ ಅವರು ಹೇಳಿದಂತೆ ಕಟ್ಟಿಗೆಯನ್ನು ನೆಲದ ಮೇಲೆ ಊರಿ ನೋಡಿದಳು, ಆಗ ಅವಳಿಗೆ ಹಗುರ ಎನಿಸಿತು. ಆಕೆ ಮಹರ್ಷಿಗಳಿಗೆ "ಹೌದು ಕಣಪ್ಪ ಬೆಟ್ಟ ಹತ್ತಲು ಹಗುರವಾಗುತ್ತದೆ" ಎಂದು ಸಂತೋಷದಿಂದ ನಕ್ಕು ಮುಂದೆ ಸಾಗಿದಳು.
ಮಹರ್ಷಿಗಳು ಯಾತ್ರಿಕರಿಗೆ, ಈಗ ನಿಮಗೆ ಕರ್ಮ, ಕರ್ಮಯೋಗದ ಅರ್ಥವಾಯಿತಾ ಎಂದರು. ಆದರೆ ಆತ ನನಗೆ ಅರ್ಥ ಆಗಿಲ್ಲ ಎಂದರು. ಮಹರ್ಷಿಗಳು ಅವರಿಗೆ ಹೇಳಿದರು, ಅಜ್ಜಿ ಬದುಕಿಗಾಗಿ ಕಟ್ಟಿಗೆಯನ್ನು ಹೊರಲೇಬೇಕು ಅದು ಕರ್ಮ ಹಾಗೂ ಅನಿವಾರ್ಯ. ಆದರೆ ನಾನು ಆ ಕರ್ಮದ ಕಟ್ಟಿಗೆ ಹೊರೆಯಿಂದ, ಒಂದು ಕಟ್ಟಿಗೆ ತೆಗೆದು ಅವಳಿಗೆ ಊರುಗೋಲು ಮಾಡಿಕೊಟ್ಟೆ. ಹೀಗಾಗಿ ಕಷ್ಟಪಡದೆ ಕರ್ಮ ಮಾಡಿದಳು. ಕಟ್ಟಿಗೆ ಹೊರುವುದು ಕರ್ಮ, ಆದರೆ ಆ ಕಟ್ಟಿಗೆ ಹೊರೆಯೊಳಗಿಂದ ಒಂದು ಕಟ್ಟಿಗೆ ತೆಗೆದು ಊರುಗೋಲು ಮಾಡಿಕೊಂಡು ಸಂತೋಷದಿಂದ ಕರ್ಮ ಮಾಡುವುದು ಕರ್ಮಯೋಗ ಎಂದರು. ಕರ್ಮ ತಪ್ಪಿಸಲು ಸಾಧ್ಯವಿಲ್ಲ. ಕಷ್ಟ, ಅಯ್ಯೋ ಕಷ್ಟ, ಎಂದು ಹಲುಬುವುದಕ್ಕಿಂತ ಅದನ್ನೇ ಊರುಗೋಲಿನಂತೆ ಮಾಡಿಕೊಂಡು ಕರ್ಮ ಮಾಡಿದರೆ ಅದೇ ಕರ್ಮಯೋಗ ಎಂದರು.
ಯಾರು ತಮ್ಮ ಕರ್ಮಗಳನ್ನು ಉಪಾಸನೆಗಳನ್ನು ಸರಿಯಾಗಿ ಮಾಡುತ್ತಾ ಇರುತ್ತಾರೋ, ಅವರಲ್ಲಿ ಆತ್ಮ ಹೆಚ್ಚು ಸ್ಥಿರವಾಗಿರುತ್ತದೆ.
"ಯೋಗಸ್ಥಹ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ!
ಸಿದ್ಧ್ಯಸಿದ್ಧ್ಯೋಹ ಸಮೋ ಭೂತ್ವಾ ಸಮತ್ವಂ ಯೋಗ ಉಚ್ಯತೇ!"
ಕೃಪೆ,ಬರಹ:- ಆಶಾ ನಾಗಭೂಷಣ. ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment