ದಿನಕ್ಕೊಂದು ಕಥೆ 1028

*🌻ದಿನಕ್ಕೊಂದು ಕಥೆ🌻*                                        *ಬುದ್ಧನ ಕಥೆ*

'ಗೌತಮ ಬುದ್ಧ' ವೈಶಾಲಿಯಲ್ಲಿದ್ದಾಗ, 'ಮೌಲಿಂದಪುತ್ತ' ಅಂತ ಒಬ್ಬ  ಬುದ್ದನನ್ನು ನೋಡೋಕೆ ಬಂದ. ಅವನು ಬಹಳ  ಓದಿ ಎಲ್ಲವನ್ನು ತಿಳಿದುಕೊಂಡಿದ್ದ. ವೇದ, ಪುರಾಣ, ಉಪನಿಷತ್ತು, ಇವುಗಳನ್ನೆಲ್ಲಾ ಕರತಲಾಮಲಕ ಎನ್ನುವಂತೆ ಅರೆದು ಕುಡಿದಿದ್ದ. ಯಾವ ರೀತಿ ಸುತ್ತಿಬಳಸಿ ಕೇಳಿದರೂ ಅವನು ಎಲ್ಲವನ್ನೂ ಹೇಳುವಷ್ಟು  ಜ್ಞಾನವಂತನಾಗಿದ್ದ. ಅಂದಿನ ದಿನಗಳಲ್ಲಿ ಹೀಗೆ ವಿಪರೀತ ತಿಳಿದುಕೊಂಡವರು ತಮ್ಮ ಬುದ್ಧಿಮತ್ತೆಯನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು , ಸೋತವರಿಂದ ಜಯ ಪತ್ರವನ್ನು ಪಡೆದುಕೊಳ್ಳಬೇಕೆಂಬ ಆಕಾಂಕ್ಷೆ ಇಟ್ಟುಕೊಂಡಿರುತ್ತಾರೆ. ಈ ಮೌಲಿಂಗ ಪುತ್ತ ಸಹ ಇದಕ್ಕೆ ಹೊರತಾಗಿ ರದೆ ಈಗಾಗಲೇ ಅನೇಕ ಕಡೆ ತನ್ನ ಪಾಂಡಿತ್ಯವನ್ನು ಬೇರೆ ಪಂಡಿತರೊಂದಿಗೆ ವಾದ ಮಾಡಿ ಗೆದ್ದು ಜಯ ಪತ್ರವನ್ನು ಸಾಕಷ್ಟು ಪಡೆದಿದ್ದನು. 

ಇನ್ನೂ ಒಂದಷ್ಟು ಕಡೆ ಹೊರಡುವ  ಯೋಚನೆಯಲ್ಲಿದ್ದಾಗ, ಕೆಲವರು ಹೇಳಿದರು. ನೀನು ಅಲ್ಲಿ ಇಲ್ಲಿ ಹಲವು ಕಡೆ ಹೋಗುವುದಕ್ಕಿಂತ ನೇರವಾಗಿ ಬುದ್ಧನ ಬಳಿ ಹೋಗಿ ವಾದಮಾಡಿ ನೀನು ಜಯ ಪತ್ರವನ್ನು ಪಡೆಯಬಹುದು.
ಅದಕ್ಕಿಂತ ದೊಡ್ಡ ಜಯಪತ್ರ ಬೇರೆ ಯಾವುದೂ ಇರುವುದಿಲ್ಲ ಎಂದರು.
ಇದನ್ನು ತಿಳಿದುಕೊಂಡ 'ಮೌಲಿಂದಪುತ್ತ'  ವಾದ ಮಾಡಬೇಕೆಂದು  ಬುದ್ಧನ ಬಳಿ  ಬಂದಿದ್ದನು. 'ಗೌತಮಬುದ್ಧ' ವೃಕ್ಷದ ಕೆಳಗೆ ಕುಳಿತಿದ್ದನು. ಮೌಲಿಂದಪುತ್ತ ಅವನೆದುರಿಗೆ  ಧೀಮಾಕಿನಿಂದಲೇ ನಿಂತಿದ್ದನು. ತಾನು ಬಹಳ ತಿಳಿದಿದ್ದೇನೆ ಎಂಬ ಅಹಂಕಾರ ಅವನೊಳಗೆ ಇತ್ತು. ಬುದ್ಧ ಅವನನ್ನು ನೋಡಿ, ಏನಪ್ಪ ಬಂದಿದ್ದು, ಎಂದು ಕೇಳಿದಾಗ, ನನ್ನ ಹೆಸರು 'ಮೌಲಿಂದಪುತ್ತ' ನೀವು ನನ್ನ ಹೆಸರು ಕೇಳಿರಬೇಕು ಅಲ್ಲವೇ ?ಎಂದ. ಹೌದೌದು  ನಿಮ್ಮ ಹೆಸರು ಕೇಳಿದ್ದೇನೆ. ಯಾರಿಗೆ ನನ್ನ ಹೆಸರುಗೊತ್ತಿಲ್ಲ ಬಿಡಿ, ಈಗ ನಾನು ಬಂದಿರುವುದು ನಿಮ್ಮೊಂದಿಗೆ ಚರ್ಚೆ ಮಾಡಲು, ಅಂದರೆ 'ವಾದ' ಈಗಲೇ ಮಾಡೋಣವೋ ಅಥವಾ ಇನ್ನೆರಡು ದಿನ ಬಿಟ್ಟು ಅಥವಾ  ಯಾವತ್ತು  ಮಾಡಬೇಕೆಂದು ತಿಳಿಸುವಿರೊ? ಹೇಗೆ? ಎಂದು ಕೇಳಿದ. ಬುದ್ಧನು ಇವತ್ತೇ  ಬೇಡ  ಎರಡು ದಿನ ಹೋಗಲಿ ನಾನೇ ತಿಳಿಸುತ್ತೇನೆ ಎಂದು ಅವನ ಮುಖ ನೋಡಿ ಸ್ವಲ್ಪ ನಕ್ಕನು. 

ಇದನ್ನು ನೋಡಿದ 'ಮೌಲಿಂದ ಪುತ್ತ' ಯಾಕೆ ನನ್ನ ನೋಡಿ ಯಾಕೆ ನಗುತ್ತೀ ಎಂದ. ನಗುವಂಥದ್ದು ಏನಾಗಿದೆ ಹೇಳಿ? ಅದಕ್ಕೆ ಬುದ್ಧ ಏನು ಇಲ್ಲಪ್ಪ ಹಾಗೆ ಏನೊ ನೆನಪಾಯಿತು ಅದಕ್ಕೆ ನಕ್ಕೆ ಅಷ್ಟೇ ಅಂದ. ಇಲ್ಲ ನಾನು ನಂಬುವುದಿಲ್ಲ ಅದು ಸುಮ್ಮನೆ ನಕ್ಕ ನಗು ಅಲ್ಲ ಏನು ಅಂತ ಹೇಳಲೇ ಬೇಕು ಎಂದು ಮಂಡು ಬಿದ್ದ. ಹೋಗ್ಲಿ ಬಿಡು ಮತ್ತೆ ಯಾಕೆ ಸಮಯ ಹಾಳು ಎಂದ. ಅದು ಸಾಧ್ಯವಿಲ್ಲ ನನ್ನ ನೋಡಿ ಯಾಕೆ ನಕ್ಕಿದ್ದು ಹೇಳು ಅಂದ. 

ಆಗ ಬುದ್ಧ ಹೇಳತೊಡಗಿದ. ನಾನು ಒಂದೆರಡು ವರ್ಷಗಳ ಹಿಂದೆ ಚಾತುರ್ಮಾಸಕ್ಕಾಗಿ  ಬೇರೆ ಪ್ರಾಂತ್ಯಕ್ಕೆ ಹೋಗಿದ್ದೆ. ಅಗ ನಾಲ್ಕು ತಿಂಗಳು ಅಲ್ಲಿ ಇರಲೇಬೇಕು. ಅದೊಂದು ಹಳ್ಳಿ. ಊರ ತುದಿ ಮೇಲ್ಗಡೆಗೆ ಒಂದು ಮನೆ ಇತ್ತು. ಮನೆಯ ಮುಂದಿನ ಜಗಲಿ ಮೇಲೆ ಒಬ್ಬ ಮನುಷ್ಯ ಕುಳಿತುಕೊಳ್ಳುತ್ತಿದ್ದ. ಪ್ರತಿನಿತ್ಯವೂ ಅದೇ ಮನುಷ್ಯ ಅದೇ ಜಾಗದಲ್ಲಿ ಕುಳಿತು ಕೊಂಡಿರುತ್ತಿದ್ದ. ಇದನ್ನು ನಾನು ಪ್ರತಿದಿನ ನೋಡುತ್ತಿದ್ದೆ. ಬೆಳಕು ಹರಿಯುತ್ತಿದ್ದಂತೆ ಊರಿನ ಸುತ್ತಮುತ್ತ ಇರುವ ಹಳ್ಳಿಗಳ ಎತ್ತು, ಎಮ್ಮೆ, ಕುದುರೆ, ಆಡು ,ಮೇಕೆ ,ಹೀಗೆ ಎಲ್ಲಾ ಪ್ರಾಣಿಗಳು ಇವನ ಮನೆ ಮುಂದೆ  ಹಾದು ಮೇಯಲು ಕಾಡಿಗೆ ಹೋಗುತ್ತಿದ್ದವು. ಈ ಮನುಷ್ಯ ಅಲ್ಲಿಂದ ಹೋಗುವ ಪ್ರತಿಯೊಂದು ಎಮ್ಮೆ, ಎತ್ತು ,ಆಡು, ಕುದುರೆ , ಹಸು-ಕರು ಪ್ರತಿಯೊಂದನ್ನು ಎಣಿಕೆ ಮಾಡುತ್ತಿದ್ದ. ಯಾವುದು ಎಷ್ಟು ಇದೆ ಎಂದು ಲೆಕ್ಕ ಇಟ್ಟುಕೊಳ್ಳುತ್ತಿದ್ದ. ಅವು ಮೇವು ಮೇಯಲು ಹೋಗಿದ್ದು, ಸಂಜೆ ವಾಪಸ್ಸು ಬರುತ್ತಿದ್ದ ಹಾಗೆ ಮತ್ತೆ ಇವನು ಅವುಗಳನ್ನೆಲ್ಲ ಲೆಕ್ಕ ಮಾಡುತ್ತಿದ್ದನು. ಎಷ್ಟು ಪ್ರಾಣಿಗಳು ಹೋಗಿದ್ದವು, ಎಷ್ಟು ಪ್ರಾಣಿಗಳು ಬಂದವು, ಎಂಬುದು ಅವನಿಗೆ ಗೊತ್ತಿರುತ್ತಿತ್ತು. 

ಒಂದು ದಿನ ನಾನು ಅವನಲ್ಲಿಗೆ ಹೋಗಿ, ಏನಪ್ಪಾ ನಿತ್ಯವೂ ಹೀಗೆ ಹಸು, ಕುರಿ, ಕುದುರೆ ,ಎತ್ತು ,ಇವು ಹೋಗುವಾಗಲೂ ಎಲ್ಲವನ್ನೂ ಲೆಕ್ಕ ಮಾಡುತ್ತಿ, ಅವು ಬಂದ ಮೇಲೂ ಲೆಕ್ಕ ಮಾಡುತ್ತಿ, ಇವುಗಳೆಲ್ಲಾ ನಿನ್ನವೇ? ಎಂದು ಕೇಳಿದ.
ಅದಕ್ಕೆ ಆ ಮನುಷ್ಯ ಛೇ ಛೇ  ಎಲ್ಲಾದರೂ ಉಂಟೇ?  ನಾನು ಬಡವ ನನ್ನ ಹತ್ತಿರ ಅಷ್ಟು ಎಲ್ಲಿ ಬರಬೇಕು ಎಂದ. ಅದಕ್ಕೆ ಬುದ್ಧ ಅದರಲ್ಲಿ ಒಂದು ಹಸುವಾದರೂ ನಿಂದಾಗಿದೆಯೇ? ಎಂದು ಕೇಳಿದ. ಇಲ್ಲ ಸ್ವಾಮಿ  ಒಂದು ಹಸುವು ನಂದಲ್ಲ ಎಂದ. ಹಾಗಾದರೆ ಮತ್ಯಾಕೆ ಲೆಕ್ಕ ಮಾಡುತ್ತಿ? ಎಂದು ಕೇಳಿದ. ಅದಕ್ಕೆ ಆ ಮನುಷ್ಯ ಹೀಗೆ ಸುಮ್ನೆ ನನಗೆ ಅದೊಂದು ಗೀಳು ಎಂದ. 

ನಿನ್ನನ್ನು ನೋಡಿದಾಗ ನನಗೆ ಅವನ ನೆನಪಾಯಿತು ಅದಕ್ಕೆ ನಕ್ಕೆ ಎಂದು ಮೌಲಿಂಗಪುತ್ತನಿಗೆ ಹೇಳಿದ. ಯಾಕೆಂದರೆ ನೀನು ಸಹ ಸಿಕ್ಕಾಪಟ್ಟೆ ಓದಿಕೊಂಡಿದ್ದಿ ,ಆದರೆ ಒಂದಾದರೂ ನೀನು ಬರೆದಿದ್ದಾ? ಇಲ್ಲ ಅಲ್ಲವೇ? ವೇದ, ಪುರಾಣ ,ಉಪನಿಷತ್ತು ,ಎಲ್ಲವನ್ನೂ ಬೇರೆ ಬೇರೆಯವರೇ ಬರೆದಿದ್ದು. ಅದರಲ್ಲಿ ನಿನ್ನದೇ ಆದದ್ದು ಏನಾದರೂ ಇದೆಯಾ? ನಿನ್ನ ಸ್ವಂತ ಅನುಭವಕ್ಕೆ ಬಂದಿದ್ದು ಏನಾದರೂ ಇದೆಯಾ? ಅಥವಾ ನೀನು ಓದಿ ನಿನ್ನ ಅನುಭವಕ್ಕೆ ಬಂದಿದ್ದು ಇದೆಯಾ? ಎಂದೆಲ್ಲಾ ಪ್ರಶ್ನೆಗಳ ಸುರಿಮಳೆಯನ್ನೇ ಬುದ್ಧ ಹರಿಸಿದ. 'ಮೌಲಿಂಗಪುತ್ತ'ನಿಗೆ ಏನು ಹೇಳಲು ಉತ್ತರವಿರಲಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಬುದ್ಧನು  ನೀನು ಇಲ್ಲೇ ಸ್ವಲ್ಪಕಾಲ ಇಲ್ಲೇ ಇರು. ಮುಂದಿನ ಹುಣ್ಣಿಮೆ ಹೊತ್ತಿಗೆ ನಾವು ಚರ್ಚೆ ಮಾಡೋಣ ಎಂದನು. 

ಈಗ ಕುಳಿತು ಯೋಚಿಸಿದ ಮೌಲಿಂಗಪುತ್ತನಿಗೆ , ಹೀಗಾಯಿತಲ್ಲ ಎಂದು ಚಿಂತೆ ಶುರುವಾಯಿತು. ಸರಿ ಬುದ್ಧ ಹೇಳಿದಂತೆ ಅವನು ಅಲ್ಲೇ ಇರ ತೊಡಗಿದ ಪ್ರತಿದಿನ  ಮರದ ಕೆಳಗೆ ಕುಳಿತ ಬುದ್ಧನ ಹತ್ತಿರ ಬರುವ ಸಾವಿರಾರು ಜನರನ್ನು ಗಮನಿಸುತ್ತಿದ್ದ.  ದಿನವೂ  ಸಾವಿರಾರು ಜನ ಬುದ್ಧನ ಹತ್ತಿರ ಬರುವರು. ಅಲ್ಲೇ ಕೆಲ ಸಮಯ  ಕುಳಿತು ಹೊರಡುವ ಮುನ್ನ  ಬುದ್ಧನಿಗೆ ನಮಸ್ಕರಿಸಿ ಹೋಗುವರು. ಇನ್ನೂ ಕೆಲವರು ತಮ್ಮ ಸಮಸ್ಯೆಗಳನ್ನು ಕೇಳುವರು. ಬುದ್ಧ ಅದಕ್ಕೆ ಏನಾದರೂ ಪರಿಹಾರ  ಕೊಟ್ಟ ನಂತರ ನೆಮ್ಮದಿಯಿಂದ  ಹೊರಡುವರು. ಹೀಗೆ ದಿನಂಪ್ರತಿ  ಸಾವಿರಾರು ಜನಗಳು ಬರುತ್ತಿದ್ದರು. ಬುದ್ಧ ಜನರನ್ನು ಪರಿವರ್ತನೆ ಮಾಡುತ್ತಿದ್ದ. 

ಅಷ್ಟೊತ್ತಿಗೆ ಹುಣ್ಣಿಮೆ ಬಂದಿತು. ಮೌಲಿಂಗಪುತ್ತನನ್ನು ಚರ್ಚೆಮಾಡಲು ಬುದ್ಧ ಕರೆದ. ಬುದ್ಧನ ಹತ್ತಿರ ಬಂದ ಮೌಲಿಂದಪುತ್ತ ತಾನು ತಂದಿದ್ದ ನ್ನೆಲ್ಲ ಬುದ್ಧನ ಪಾದದ ಹತ್ತಿರ ಇಟ್ಟು ದೀರ್ಘದಂಡ ನಮಸ್ಕಾರ ಮಾಡಿದ. ನನ್ನನ್ನು ಕ್ಷಮಿಸಿ, ಮತ್ತು ಹೇಳಿದ ನನಗೆ ಯಾವ ಚರ್ಚೆಯೂ ಬೇಡ. ದಯವಿಟ್ಟು ನಿಮ್ಮ ಶಿಷ್ಯನನ್ನಾಗಿ ನನ್ನನ್ನು ಸ್ವೀಕರಿಸಿ ಅಷ್ಟು ಸಾಕು. ಏಕೆಂದರೆ ನಾನು ಬೇಕಾದಷ್ಟು ಓದಿಕೊಂಡಿದ್ದೆ ಆದರೆ ಮನಸ್ಸನ್ನು ಪರಿವರ್ತನೆ ಮಾಡುವುದು ನನಗೆ ಗೊತ್ತಿರಲಿಲ್ಲ ನಿಮ್ಮನ್ನು ನೋಡಿ ನಾನು ಕಲಿತುಕೊಂಡೆ ಎಂದನು. 

ಕಲಿತ ವಿದ್ಯೆಯನ್ನು ಕಾರ್ಯರೂಪಕ್ಕೆ ತಂದಾಗ ಮಾತ್ರ ಅದರ ಸಾರ್ಥಕತೆ ಸಿಗುತ್ತದೆ. 

"ಬುದ್ಧಂ ಶರಣಂ ಗಚ್ಛಾಮಿ!
ಸಂಘಂ ಶರಣಂ ಗಚ್ಚಾಮಿ!
ದಮ್ಮಂ ಶರಣಂ ಗಚ್ಛಾಮಿ!


ಕೃಪೆ,ಬರಹ:- ಆಶಾ ನಾಗಭೂಷಣ.                                      ಸಂಗ್ರಹ :ವೀರೇಶ್ ಅರಸಿಕೆರೆ ವಿಜಯನಗರ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097