ದಿನಕ್ಕೊಂದು ಕಥೆ 1030

*🌻ದಿನಕ್ಕೊಂದು ಕಥೆ🌻*           *ಕಾಮನೆಗಳು*

ಬಹಳ ಹಿಂದೆ ಪರ್ವತ ಪ್ರದೇಶದಲ್ಲಿ ಒಬ್ಬ ವೃದ್ಧನು  ವಾಸಿಸುತ್ತಿದ್ದನು. ಅವನ ಹೆಸರು 'ವಿಕ್ರಾಂತ ಯಾವಗಲ್'. ಕಡು ಬಡವ. ಈತನಿಗೆ ಒಂದು ಜೋಪಡಿ ತರಹದ ಗುಡಿಸಲು ಇತ್ತು. ಇವನು ತುಂಬಾ ಸೋಮಾರಿ ; ಹಾಗಾಗಿ ಜೀವನ ಮಾಡಲು  ಕಷ್ಟ ಪಡುತ್ತಿದ್ದನು. ವಿಕ್ರಾಂತ ಯಾವಗಲ್ಗೆ ಒಂದು ವಿಷಯ ತಿಳಿದಿತ್ತು. ಸಾಧು ಸನ್ಯಾಸಿಗಳು ತಮ್ಮ ಯೋಗಶಕ್ತಿಯಿಂದ ಸಿದ್ಧಿಗಳನ್ನು, ಮಾಡಬಲ್ಲರು, ಹಾಗೂ ಬೇಕಾದ ವಸ್ತುಗಳನ್ನು ಪಡೆಯಬಲ್ಲರು ಎಂದು ಕೇಳಿ ತಿಳಿದಿದ್ದನು. ಈಗ ಅವನ ತಲೆಯಲ್ಲಿ  ಯೋಚನೆಯೊಂದು  ಬಂದಿತು. ನಾನು ಯಾವ ಕೆಲಸವನ್ನೂ ಮಾಡದೆ ಸುಖವಾದ ಜೀವನ ನಡೆಸಬೇಕೆಂಬ ಆಸೆಯೊಂದು  ಮೊಳಕೆಯೊಡೆಯಿತು. ಇದನ್ನು ಪಡೆಯಬೇಕೆಂಬ ಆಕಾಂಕ್ಷೆಯಿಂದ, ಅವನು ಪರ್ವತದ ಮೇಲೆ ಹತ್ತಿ ಅಲ್ಲಿನ ಗವಿಗಳಲ್ಲಿ ವಾಸಮಾಡುವ ಯಾರಾದರೂ ಸಿದ್ಧಪುರುಷರನ್ನು ಭೇಟಿ ಮಾಡಿ ಮನದಿಚ್ಚೆಯನ್ನು  ಪೂರೈಸಿಕೊಳ್ಳಬೇಕೆಂದು ಹವಣಿಸಿದನು. ಇದಕ್ಕಾಗಿ ಸಾಧುಗಳನ್ನು ಹುಡುಕಲು  ಗವಿಗಳನ್ನು  ಹುಡುಕಿಕೊಂಡು ಹೊರಟನು.

ಪರ್ವತದ ಮೇಲೆ ನಡೆಯುತ್ತಾ ಒಂದು ಕಡೆ ಹೋದಾಗ ಗವಿ ಕಂಡಿತು. ಅಲ್ಲೇ ತಪಸ್ಸು ಮಾಡುತ್ತಿದ್ದ ಸಾಧುವನ್ನು ಕಂಡನು. ಮತ್ತು ಅವರಿಗೆ ಭಕ್ತಿಯಿಂದ ಪ್ರಣಾಮ ಮಾಡಿದನು. ಸಾಧುಗಳು ಅವನನ್ನು ಸ್ವಾಗತಿಸಿ ಮಾತನಾಡಿಸಿ, ನೀನು ನಮ್ಮಲ್ಲಿಗೆ ಬಂದ ಉದ್ದೇಶ ಏನು ಎಂದು ಕೇಳಿದರು.
ವಿಕ್ರಾಂತ್ ಯಾವಗಲ್ ನು, "ಪೂಜ್ಯ ಸಾಧು ಮಹಾರಾಜರೇ ! ನಾನೊಬ್ಬ ಕಡುಬಡವ. ಒಂದು ಜೋಪಡಿ ಬಿಟ್ಟರೆ ನನಗೆ ನನ್ನದು ಎನ್ನುವುದು ಯಾವುದೂ ಇಲ್ಲ.ಆದರೆ ಈಗ ನನ್ನ ವೃದ್ಧಾಪ್ಯದಲ್ಲಿ ನಾನು ಏನು ಕೆಲಸ ಮಾಡಲಾಗುವುದಿಲ್ಲ.ಇದರಿಂದ ಜೀವನ ಸಾಗಿಸುವುದು ಕಷ್ಟವಾಗಿದೆ. ದಯಮಾಡಿ ನನಗೆ ಏನಾದರೂ ಆದೃಷ್ಟವನ್ನು ದಯಪಾಲಿಸಿ. ನನಗೆ ತಿಳಿದಂತೆ ನೀವು ನಿಮ್ಮ ಯೋಗಶಕ್ತಿಯಿಂದ ಹಣ, ಬಂಗಾರ ಹಾಗೂ ಬೆಲೆಬಾಳುವ ಅಗತ್ಯವಿರುವ ಎಲ್ಲವನ್ನೂ  ಬೇಕಾದರೆ ಸೃಷ್ಟಿ ಮಾಡಬಲ್ಲಿರಿ" ಎಂದು ವಿನಮ್ರನಾಗಿ ಪ್ರಾರ್ಥಿಸಿದನು. 

ಯೋಗಿಗಳು ಇವನ ಮಾತನ್ನು ಕೇಳಿ ಸುಮ್ಮನಿದ್ದರು. ಮತ್ತೆ ಮತ್ತೆ ಆ ಯೋಗಿಗಳನ್ನು ಅದೃಷ್ಟ ಕೊಡುವಂತೆ ವೃದ್ಧನು  ಬೇಡಿಕೊಂಡನು.
ಆಗ ತಪಸ್ವಿಗಳು ಆತನಿಗೆ ಒಂದು 'ಕೃಷ್ಣಾಜಿನ'ವನ್ನು ಕೊಟ್ಟು, ಕೈಕಾಲು ಮುಖ ತೊಳೆದು ಶುದ್ಧಮಾಡಿಕೊಂಡು ಬಂದ  ನಂತರ ಆ ಆಸನದ  ಮೇಲೆ ಕುಳಿತುಕೊಂಡು ಭಕ್ತಿಯಿಂದ ಪ್ರಾರ್ಥಿಸಿ, ನಿನಗೇನು ಬೇಕೋ ಅದನ್ನು 
ಕೇಳಬಹುದೆಂದು, ಕೇಳಿದ ವಸ್ತುಗಳು ತಕ್ಷಣವೇ ಸಿಗುವುದೆಂದು, ಇದನ್ನು ಉಪಯೋಗಿಸಿಕೊಂಡು ಕಿಂಚಿತ್ತು  ಕಷ್ಟಪಡದೆ  ಸುಖ, ಸಂತೋಷ, ನೆಮ್ಮದಿಯಿಂದ  ಬದುಕಬಹುದೆಂದು ಸಾಧು ಹೇಳಿದನು. 

ಇದರಿಂದ ವೃದ್ಧನಿಗೆ ಅಪರಿಮಿತವಾದ ಸಂತೋಷವಾಯಿತು. ಸಾಧುಗಳಿಗೆ ಭಕ್ತಿಯಿಂದ ನಮಸ್ಕರಿಸಿ ಅವರು ಕೊಟ್ಟ ಮಂತ್ರಶಕ್ತಿಯ 'ಕೃಷ್ಣಾಜಿನ'ವನ್ನು 
ತೆಗೆದುಕೊಂಡು ಬೇಗನೆ ತನ್ನ ಮನೆಗೆ ಬಂದನು. ಸ್ವಲ್ಪವೂ ಸಮಯವನ್ನು ಹಾಳುಮಾಡದೆ, ಶುದ್ಧವಾಗಿ ಕೈಕಾಲು ಮುಖ ತೊಳೆದು ಬಂದು, ಸಾಧುಗಳು ಕೊಟ್ಟ ಆಸನದ ಮೇಲೆ  ಕುಳಿತುಕೊಂಡನು. ಆಗಲೇ ಅವನಿಗೆ ಬಹಳ ಹಸಿವಾಗಿತ್ತು. ಹೀಗಾಗಿ ಅವನಿಗೆ ಈಗ ಬೇಕಾಗಿದ್ದುದು  ತಿನ್ನುವ ರುಚಿರುಚಿಯಾದ ಆಹಾರ ಪದಾರ್ಥಗಳು. ಅವನ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಂತೆ, ಬಗೆಬಗೆಯ ಭಕ್ಷ, ಭೋಜ್ಯಗಳು ತುಂಬಿದ ಸುಗ್ರಾಸಭೋಜನದ ದೊಡ್ಡ ತಟ್ಟೆ ಅವನ ಮುಂದೆ ಬಂದು ಕುಳಿತಿತು. ಬಹಳ ಸಂತೋಷದಿಂದ ಕಣ್ತುಂಬ ನೋಡಿ, ನಿಧಾನವಾಗಿ ಸವಿ ಸವಿದು ಊಟ  ಮಾಡುತ್ತಾ, ಮನದಣಿಯುವಂತೆ ಹೊಟ್ಟೆ ಬಿರಿಯುವಷ್ಟು ತಿಂದು  ತೇಗಿದನು.
ಮತ್ತೊಂದು  ಮುಂದಿನ ಯೋಜನೆ, ಅಲುಗಾಡಲು  ಆಗಲಾರದಷ್ಟು, ಹೊಟ್ಟೆ ಭಾರವಾಗಿದೆ. ನಿದ್ರೆ ಬಂದು  ಕಣ್ಣುಗಳು  ಎಳೆಯುತ್ತಿದ್ದವು. ಆಹಾ ಮಲಗಲು
ಸುಪ್ಪತ್ತಿಗೆಯಂಥ  ಹಾಸಿಗೆ  ಇದ್ದರೆ, ಎಂದು  ತೂಕಡಿಸುತ್ತಾ ಮನದಲ್ಲಿ ಅಂದು ಕೊಂಡನು ಅಷ್ಟೇ, ಸುಪ್ಪತ್ತಿಗೆಯ ಮಂಚ, ರೇಷ್ಮೆಯಂಥ  ಮೆತ್ತನೆಯ ದಿಂಬು, ಮಕ್ಮಲ್ನ ನಂಥ  ಹೊದಿಕೆಯನ್ನೋಳಗೊಂಡ ಮಂಚ ಸಿದ್ಧವಾಯಿತು. ಆರಾಮವಾಗಿ ಮಲಗಿ ನಿದ್ರೆ ಮಾಡಲು ಹೊರಟರೆ,ಅವನ  ಕೋತಿಯಂತಹ ಮನಸ್ಸಿನಲ್ಲಿ ಆಸೆಗಳು ಗರಿಗೆದರಿ ನಿದ್ರೆ ಸುಳಿಯಲೆ ಇಲ್ಲ. ದಿಗ್ಗನೆದ್ದು ಮಾಯಾ ಆಸನದ ಮೇಲೆ ಕುಳಿತನು. ಅವನ  ಮುಂದಿನ  ಇಚ್ಚೆ , ತನ್ನ ಮುರುಕಲು ಜೋಪಡಿ ಇರುವಲ್ಲಿ, ಬೃಹದಾಕಾರದ ಅರಮನೆಯಾಗಲಿ, ಎಂದು ಮನಸ್ಸಿನಲ್ಲಿ ಬರುತ್ತಿದ್ದಂತೆ, ಗುಡಿಸಲು ಮಾಯವಾಗಿ, ಭವ್ಯ, ದಿವ್ಯವಾದ ಅರಮನೆ ಸಿದ್ಧವಾಯಿತು.ಅರಮನೆಯನ್ನು ನೋಡುತ್ತಿದ್ದಂತೆ ಅವನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಆಹಾ ಎಂಥ ಅರಮನೆ, ಹೌದು ಆರಮನೆ ಇದೆ. ಇದಕ್ಕೆ ತಕ್ಕ ಐಶ್ವರ್ಯಗಳಿಲ್ಲದೆ  ಏನು ಪ್ರಯೋಜನ, ಹೀಗೆ  ಮನಸ್ಸಿಗೆ ಬರುತ್ತಿದ್ದಂತೆ ಅರಮನೆ ತುಂಬಾ ಬಂಗಾರ, ಬೆಳ್ಳಿ, ಮತ್ತು ವಜ್ರಗಳ ರಾಶಿ ರಾಶಿಯೇ ಅವನ ಮುಂದೆ ಬಂದು ಇಳಿಯಿತು.  ಅವನ ಕಣ್ಣುಗಳನ್ನು ಅವನೇ ನಂಬಲಿಲ್ಲ. ಈಗ ಮತ್ತೊಂದು ಆಸೆ, ವೃದ್ಧಾಪ್ಯದಿಂದ  ಬಳಲುತ್ತಿರುವ ತನ್ನ ಶರೀರವನ್ನು ಸುಸ್ಥಿತಿಯಲ್ಲಿಡಲು ಸೇವಕರು ಇದ್ದಿದ್ದರೆ ಮನಸ್ಸು ಬಯಸಿತು  ಅಷ್ಟೇ, ಅವನ ಮುಂದೆ ಸೇವಕರ ದಂಡೇ ಬಂದು, ಅವನ ಆಜ್ಞೆ ಪಾಲಿಸಲು ಕೈಮುಗಿದು ನಿಂತರು. ಮುದಕನ  ಆನಂದ ಹೇಳತೀರದು. 

ಅವನು ಅಂದುಕೊಂಡದ್ದೆಲ್ಲ ಆಯಿತು. ಈಗ ಹೆದರಿಕೆ ಶುರುವಾಯಿತು.
ಎಂದಾದರೂ ಭೂಕಂಪವೇನಾದರೂ ಆದರೆ, ಬಂದಿರುವ ಇಷ್ಟೊಂದು ಸಂಪತ್ತಿನ ಗತಿಯೇನು? ಹೀಗೆ ಮನಸ್ಸಿನಲ್ಲಿ ಅನ್ನಿಸುತ್ತಿದ್ದಂತೆ ಕೂಡಲೇ ಭೂಕಂಪವಾಯಿತು. ಅರಮನೆ, ಐಶ್ವರ್ಯ, ಇದರೊಳಗೆ ಕುಳಿತಿದ್ದ  ವೃದ್ಧ,
ಹಾಗೂ ಅವನ ಸೇವಕರ ಸಮೇತ ಭೂಮಿ ಒಳಗೆ ಸೇರಿ ಮಣ್ಣಾದರು. 

ಕೋತಿಯಂತಹ ಮನಸ್ಸು ಯಾವಾಗಲೂ ಬಿಡುವಿಲ್ಲದೆ, ಒಂದು ವಿಷಯಕ್ಕೆ ಅಂಟಿಕೊಂಡಿರದೆ  ಹಾರುತತ್ತಿರಲು  ಬಯಸುತ್ತದೆ. ಹಾಗೆಯೇ ಈ ಮನವೂ ಕೂಡ ಶಾಂತಿಯಿಲ್ಲದೆ ದುಷ್ಟ ಚಿಂತನೆಗಳತ್ತ ಅಲೆದಾಡುತ್ತಿರುತ್ತದೆ. ಈ ಕಾಮನೆಗಳನ್ನು ನಿರ್ದಯೆಯಿಂದ ಮಟ್ಟಹಾಕಿ ಮನವನ್ನು ನಿಯಂತ್ರಿಸಿ ಯಾವ ಆಸೆಗಳು ಬರದಂತೆ ತಡೆಯಬೇಕು.

ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು,
ನಿಶಿಹಗಲು ಶ್ರೀಹರಿಯ ನೆನೆಯಬೇಕು,
ವಸುಧೀಶ ಪುರಂದರ ವಿಠಲ ರಾಯನ,
ಹಾಸನದ ದಾಸರ ಸೇವಿಸಲು ಬೇಕು. 

ಕೃಪೆ,ಬರಹ:-ಆಶಾ ನಾಗಭೂಷಣ.                                         ಸಂಗ್ರಹ:ವೀರೇಶ್ ಅರಸಿಕೆರೆ ವಿಜಯನಗರ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059