ದಿನಕ್ಕೊಂದು ಕಥೆ 1037
ಒಬ್ಬ ಹುಡುಗನಿದ್ದ. ಶಾಲೆಗೆ ಹೋಗುವ ವಿಷಯದಲ್ಲಿ ತುಂಬಾ ಸೋಮಾರಿ. ಶಾಲೆಯ ಶಿಕ್ಷಕರ ಪ್ರಕಾರ useless fellow. ಮನೆಯಲ್ಲಿ ಮಲಗುವುದು, ಊಟ ಮಾಡುವುದು, ಊರು ಸುತ್ತುವುದು ಇದೇ ಅವನ ಕೆಲಸ. ಊರು ಸುತ್ತಲು ಹೋದಾಗ ಜೀರುಂಡೆಗಳನ್ನು ಹಿಡಿಯುವುದು, ವಿವಿಧ ರೀತಿಯ ಕಲ್ಲುಗಳು, ಮೂಳೆಗಳನ್ನು ಸಂಗ್ರಹಿಸುವುದು ಅವುಗಳನ್ನು ವರ್ಗೀಕರಿಸುವುದು ಇವನ ಹವ್ಯಾಸ. ಹಾಳು ಹುಡುಗನಿಂದಾಗಿ ಮನೆಯೊಂದು ಮ್ಯೂಸಿಯಂ ಆಗಿ ಬಿಟ್ಟಿತ್ತು. ಅಮ್ಮನಿಗೆ ಎತ್ತಿ ಹೊರಗೆಸೆದು ಮನೆಯನ್ನು ಸ್ವಚ್ಛಗೊಳಿಸುವುದೇ ಒಂದು ಕೆಲಸ. ಅಪ್ಪನಿಗೆ ಮಗನನ್ನು ವೈದ್ಯನಾಗಿಸಬೇಕೆಂಬ ಬಯಕೆ. ಅಂತೂ ಇಂತೂ ಮಗನಿಗೊಂದು ವೈದ್ಯಕೀಯ ಸೀಟು ಗಿಟ್ಟಿಸಿಕೊಂಡೇ ಬಿಟ್ಟ. ಮಗನಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಬೇಕೆಂದಾಗ ಕಾಲೇಜಿಗೆ ಹೋಗುವುದು ಬೇಜಾರಾದಾಗ ಅದೇ ಕಲ್ಲು, ಮೂಳೆ, ಜೀರುಂಡೆಗಳು. ಹಾಗೂ ಹೀಗೂ ಒಂದೂವರೆ ವರ್ಷ ಮಣ್ಣು ಹೊತ್ತು ಕಾಲೇಜು ಬಿಟ್ಟ. ಅಮ್ಮ ಅಪ್ಪ ಇಬ್ಬರೂ ನಿರಾಶರಾದರು. ಅದೇ ಸಮಯದಲ್ಲಿ ಲಂಡನ್ ನ ಸೌತ್ಹಾಂಪ್ಟನ್ ನಿಂದ ಎಚ್ ಎಂ ಎಸ್ ಬೀಗಲ್ ಎಂಬ ಹಡಗೊಂದು ಪ್ರಪಂಚ ಪರ್ಯಟನೆಗೆ ಹೊರಡಲಿದೆ ಎಂಬ ಪ್ರಕಟಣೆ ಹೊರಬಿತ್ತು. ಈತ ಹೆಸರು ನೋಂದಾಯಿಸಿದ. ಆ ಹಡಗಿನಲ್ಲಿ ಪ್ರಕೃತಿ ತಜ್ಞನಾಗಿ ಆಯ್ಕೆಯಾದ ಅಪ್ಪ ಅಮ್ಮನಿಗೂ ಅದೇ ಬೇಕಿತ್ತು ಹೋಯಿತು ಮಾರಿ ಎಂದು ನಿಟ್ಟುಸಿರು ಬಿಟ್ಟರು.
ಹಡಗು ದಶಂಬರ 27 1831 ರಂದು ಬಂದರನ್ನು ಬಿಟ್ಟಿತು. ಅದರೊಂದಿಗೆ 22 ರ ಯುವಕ ಕೂಡಾ. ಸುತ್ತಲೂ ಘೋರ ಕಡಲು. ತಲೆ ಸುತ್ತು, ವಾಂತಿ ಮುಂತಾಗಿ ಕಡಲು ಕಾಯಿಲೆ(sea sickness) ಕಾಡಿತು. ಹುಡುಗನಿಗೆ ಮೊದಲ ಬಾರಿಗೆ ತನ್ನ ತಪ್ಪಿನ ಅರಿವಾಯಿತು. ಹಿಂದಿರುಗುವಂತಿಲ್ಲ. ಡೆಕ್ಕಿನ ಮೇಲೆ ಬಿದ್ದುಕೊಂಡ. ಆಗಸ ದಿಟ್ಟಿಸಿದ. ನಾಲ್ಕೈದು ದಿನಗಳಲ್ಲಿ ಎಲ್ಲವೂ ಸರಿಯಾಯಿತು. ಹುಡುಗ ಕಡಲ ಬದುಕಿಗೆ ಹೊಂದಿಕೊಂಡ. ಹಡಗು ಪೂರ್ವದತ್ತ ಹೊರಟಿತ್ತು. ಸುತ್ತಲೂ ನೀಲಿ ಕಡಲು ಬೋರಲು ಹಾಕಿದಂತೆ ನೀಲಿ ಬಾನು. ಪೂರ್ವದಿಂದ ಹಡಗು ದಕ್ಷಿಣಕ್ಕೆ ತಿರುಗಿ ಬ್ರೆಜಿಲ್ ಕರಾವಳಿಗೆ ಬಂತು. ತನ್ನ ಪ್ರಯಾಣದ ಹೆಚ್ಚು ಅವಧಿಯನ್ನು ದಕ್ಷಿಣ ಅಮೆರಿಕಾ ಕರಾವಳಿಯಲ್ಲಿ ಕಳೆಯಿತು. ಹುಡುಗ ತೀರದ ಬಹು ದೂರದ ವರೆಗೂ ಹೋಗಿ ಸಸ್ಯ, ಪ್ರಾಣಿ, ಕೀಟ, ಪಕ್ಷಿ ಪ್ರಬೇಧಗಳು, ಕಲ್ಲು ಮೂಳೆಗಳನ್ನು ಸಂಗ್ರಹಿಸಿ ಟಿಪ್ಪಣಿಗಳನ್ನು ಮಾಡಿಕೊಳ್ಳುತ್ತಿದ್ದ. ಇವನ ಕೊಠಡಿ ಅವನು ಮಾಡಿದ ಟಿಪ್ಪಣಿ ಪುಸ್ತಕಗಳಿಂದ ತುಂಬಿ ಹೋಗಿತ್ತು. ಪ್ರತಿಯೊಂದನ್ನು ಇನ್ನೊಂದರೊಂದಿಗೆ ಹೋಲಿಸುವುದು, ವ್ಯತ್ಯಾಸವನ್ನು ಪಟ್ಟಿ ಮಾಡುವುದು ಹೀಗೆ. ಅಮೇರಿಕಾದ ಪಶ್ಚಿಮ ಕರಾವಳಿಯ ಗೆಲಾಪೊಗೋಸ್ ದ್ವೀಪದಲ್ಲಿ ಹಡಗು ಒಂದಷ್ಟು ಕಾಲ ತಂಗಿತು. ಅಲ್ಲಿನ ಗೀಜಗಗಳು (finches) ಆತನ ಗಮನ ಸೆಳೆದವು. ಅವು ಭೂಖಂಡದ ಗೀಜಗಗಳಂತಿದ್ದರೂ ಭಿನ್ನವಾಗಿದ್ದವು. ಅವುಗಳಲ್ಲಿ 17 ತರದ ಭಿನ್ನತೆಗಳನ್ನು ಗುರುತಿಸಿದ. ಹಣ್ಣು ತಿನ್ನುವ ಗೀಜಗಗಳಿಗೆ ಗಿಳಿಯಂತಹ ಕೊಕ್ಕುಗಳಿದ್ದರೆ ಕೀಟಾಹಾರಿಗಳ ಕೊಕ್ಕು ಚೂಪಾಗಿತ್ತು. ಹೀಗೆ ಒಂದೇ ಮೂಲದಿಂದ ಬಂದಿದ್ದು ಪರಿಸರದ ಪ್ರಭಾವದಿಂದ ಭಿನ್ನತೆ ಉಂಟಾಗುತ್ತದೆ. ಈ ಭಿನ್ನತೆ ಪೀಳಿಗೆಯಿಂದ ಪೀಳಿಗೆಗೆ ಸಾಗಿಸಲ್ಪಡುತ್ತದೆ ಎಂಬ ತೀರ್ಮಾನಕ್ಕೆ ಬಂದ. ಅಲ್ಲಿಂದ ಮುಂದೆ ಆಸ್ಟ್ರೇಲಿಯಾ ಕಂಡ ತಲುಪಿದ. ಅಲ್ಲಿ ಮೊಟ್ಟೆ ಇಡುವ ಪ್ಲಾಟಿಪಸ್ ನೋಡಿದ. ಮೊಟ್ಟೆಯೊಡೆದು ಹೊರಬಂದ ಮರಿಗಳು ತಾಯಿಯ ಎದೆಹಾಲು ಕುಡಿಯುತ್ತಿದ್ದವು. ಇವು ಸಸ್ತನಿಗಳ ಮೂಲವಿರಬಹುದು ಎಂದು ತರ್ಕಿಸಿದ. ಹಾರಲಾಗದ ಪಕ್ಷಿಗಳೂ ಅವನ ಯೊಚನೆಗೆ ಆಹಾರವಾದವು. ಅಲ್ಲಿಂದ ಆಫ್ರಿಕಾದ ತೀರಗಳ ಅಧ್ಯಯನವೂ ನಡೆಯಿತು. ಹೀಗೆ ಪ್ರಪಂಚ ಸುತ್ತಿ 1836 ರ ಅಕ್ಟೋಬರ್ 2 ರಂದು ತಾಯ್ನಾಡಿಗೆ ಮರಳಿದ. ತಾನು ಸಂಗ್ರಹಿಸಿದ ಎಲ್ಲಾ ದಾಖಲೆಗಳನ್ನು, ಪುರಾವೆಗಳನ್ನು ಅಭ್ಯಸಿಸಿ ನೈಸರ್ಗಿಕ ಆಯ್ಕೆಯಿಂದ ಜೀವ ವಿಕಾಸ ಎಂಬ ಪ್ರಬಂಧವನ್ನು 1837 - 39 ರಲ್ಲಿ ಬರೆದ. ಇದನ್ನು ಪ್ರಕಟಿಸಲು ನಾಚಿದ. ತನ್ನ ಓರಗೆಯವರು ತಮಾಷೆ ಮಾಡುತ್ತಾರೆಂದು ಹೆದರಿದ. ಆದ್ದರಿಂದ ತನ್ನ ಪ್ರಬಂಧವನ್ನು ಮುಚ್ಚಿಟ್ಟ 20 ವರ್ಷಗಳ ನಂತರ ಅಂದರೆ 1859 ರಲ್ಲಿ ತನ್ನ ಪ್ರಬಂಧವನ್ನು ಮಂಡಿಸಿದ. ಅದು ಎಷ್ಟು ಜನಪ್ರಿಯವಾಯಿತೆಂದರೆ ಮಂಗನಿಂದ ಮಾನವ ಎಂಬುದು ಶಾಲೆಯ ಮುಖ ಕಾಣದ ನಿರಕ್ಷರ ಕುಕ್ಷಿಗೆ ಅರ್ಥವಾಗುವಷ್ಟು.
ಈ ಹುಡುಗ ಮತ್ಯಾರೂ ಅಲ್ಲ. ಜೀವ ವಿಕಾಸ ವಾದವನ್ನು ಮಂಡಿಸಿದ 1809 ರ ಫೆಬ್ರವರಿ 12 ರಂದು ಜನಿಸಿದ ಚಾರ್ಲ್ಸ್ ಡಾರ್ವಿನ್. ಫೆಬ್ರವರಿ 12 ಅನ್ನು ವೈಜ್ಞಾನಿಕ ಜಗತ್ತಿನಲ್ಲಿ ಡಾರ್ವಿನ್ ಡೇ ಎಂದು ಆಚರಿಸುತ್ತೇವೆ. ಡಾರ್ವಿನ್ ತೆಗೆದುಕೊಂಡ 20 ವರ್ಷಗಳ ದೀರ್ಘ ಅಂತರವನ್ನು Darwin's delay ಅಥವಾ the long wait ಎಂದೇ ಕರೆಯುವುದು.
ಡಾರ್ವಿನ್ ಹೇಳುವ ಬಲಿಷ್ಠರ ಉಳಿವು (Survival of the fittest) ಒಂದು ವೇದೋಕ್ತ ಶ್ಲೋಕವಾದ
ಅಶ್ವಂ ನೈವ ಗಜಂ ನೈವ ವ್ಯಾಘ್ರ ನೈವನೈವಚ|
ಅಜಂ ಪುತ್ರ ಬಲಿಂದದ್ಯ ದೈವೋ ದುರ್ಬಲ ಘಾತಕ||
ದ ವಿಸ್ತರಣೆಯಾಗಿಯೇ ನನಗೆ ಕೇಳಿಸುತ್ತದೆ.
ಒಬ್ಬ ವೈದ್ಯನಾಗಿ ಒಂದಷ್ಟು ಹಣ ಮಾಡಿ ಇತಿಹಾಸದಲ್ಲಿ ಕಳೆದುಹೋಗಬಹುದಾಗಿದ್ದ ಚಾರ್ಲ್ಸ್ ಡಾರ್ವಿನ್ ವಿಜ್ಞಾನದ ಯುಗ ಪ್ರವರ್ತಕನಾದುದು ಇತಿಹಾಸ ಮಾತ್ರವಲ್ಲ ವಾಸ್ತವವೂ ಹೌದು. ಮಕ್ಕಳನ್ನು ಸುರಕ್ಷತಾ ವಲಯದೊಳಗಿಟ್ಟು ಸಾಕುತ್ತೇನೆ ಎಂಬ ಪೋಷಕರಿಗೆ ಇದೊಂದು ಕಣ್ತೆರೆಸುವ ಪಾಠವಾದರೆ ಮಾತ್ರ ನಾವು ನಿಜವಾದ ಡಾರ್ವಿನ್ಸ್ ಡೇ ಅಚರಿಸಿದಂತೆ
ಕೃಪೆ:ದಿವಾಕರ್ ಶೆಟ್ಟಿ
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment