ದಿನಕ್ಕೊಂದು ಕಥೆ 1042

*🌻 ದಿನಕ್ಕೊಂದು ಕಥೆ*🌻                                               
*ಬದುಕಿನ ರೀತಿ*

 ಒಂದು ಹೆಮ್ಮರ ಇತ್ತು.  ಒಂದು ಸಸಿ, ಗಾಳಿ ಹೊಡೆತಕ್ಕೆ ಏಳುತ್ತ ಬೀಳುತ್ತ ,ಬೆಳೆಯುತ್ತಿತ್ತು. ಒಬ್ಬ ಸಂತನು ಅಲ್ಲಿಗೆ ಬಂದ. ಎಳೆಯ ಸಸಿಯ ಕಷ್ಟವನ್ನು ಕಂಡು ಮನ ಕರಗಿತು. ಅದಕ್ಕೊಂದು ಕೋಲಿನ ಆಶ್ರಯ ಕೊಡಲು ಹೋದ. ಸಸಿ ಹೇಳಿತು “ಸಂತನೇ”, ಈ ಕೋಲಿನ ಆಶ್ರಯ ನನಗೆ ದಯವಿಟ್ಟು ಕೊಡಬೇಡಿ !”
ಸಂತ ಕೇಳಿದ – “ಅದೇಕೆ ಬೇಡ ? ಈ ಕೋಲು ಮಳೆ-ಗಾಳಿಯಿಂದ ನಿನ್ನನ್ನು ರಕ್ಷಿಸುತ್ತದೆ.”  
ಸಸಿ ಹೇಳಿತು – “ಎಲ್ಲದಕ್ಕೂ ಆಶ್ರಯವನ್ನು ಬಯಸುವವರು ಮನುಷ್ಯರೇ ವಿನಾ ನಾವಲ್ಲ. ಎಲೆ ಉದುರಬೇಕು. ಅವೆಲ್ಲವನ್ನೂ ಎದುರಿಸಿ ನಾವು ಗಟ್ಟಿಗೊಳ್ಳಬೇಕು. ಭವಿಷ್ಯತ್ತಿನಲ್ಲಿ ಹೆಮ್ಮರವಾಗಿ ಬೆಳೆಯಬೇಕು. ಅದು ನಮ್ಮ ಬದುಕಿನ ರೀತಿ!!” ಸಸಿಯ ಮಾತನ್ನು ಕೇಳಿ ಸಂತರಿಗೆ ಸಾನಂದಾಶ್ಚರ್ಯವಾಯಿತು. 

ಸಂಗ್ರಹ: ವೀರೇಶ್ ಅರಸಿಕೆರೆ.
*************************************
*🌻 ದಿನಕ್ಕೊಂದು ಕಥೆ 🌻*

*ಸಾಮಾನ್ಯನೊಬ್ಬ ಅಸಾಮಾನ್ಯನಾಗಿದ್ದು !*

ಕೃಪೆ: ವಿಶ್ವೇಶ್ವರ ಭಟ್ I ಸಂಪಾದಕರು  ವಿಶ್ವವಾಣಿ .

ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ, ತೀರಾ ಸಾಮಾನ್ಯವೆನಿಸುವ ಕೆಲಸಗಳಿಂದಲೂ ಹೇಗೆ ಜಗತ್ತಿನ ಗಮನವನ್ನು ಸೆಳೆಯಬಹುದು ಎಂಬುದಕ್ಕೆ ಆತನೊಬ್ಬ ನಿದರ್ಶನವಾಗಿ ನನಗೆ ಕಾಣುತ್ತಾನೆ. ಮೂಲತಃ ಅಮೆರಿಕದ ಅಟ್ಲಾಂಟಾದವನಾದ ಸ್ಟಾಂಟನ್, ಹೆಚ್ಚು ಓದಿದವನಲ್ಲ. ಇತಿಹಾಸ ವಿಷಯದಲ್ಲಿ ಸಾಮಾನ್ಯ ಅಂಕ ಗಳಿಸಿ ಪದವೀಧರನಾದವ. ಕಮಿಷನ್ ಏಜೆಂಟ್ ಆಗಿ ಕೆಲಸ ಮಾಡುವಾಗ, ತಂದೆಗೆ ಕಾಡಿ ಬೇಡಿ ಒಂದು ಸಾಮಾನ್ಯ ಕೆಮರಾ ಖರೀದಿಸಿದ. ಎಲ್ಲೆಂದರಲ್ಲಿ ಕಂಡಕಂಡವರ ಫೋಟೋ ತೆಗೆಯುವುದು ಅವನ ಹವ್ಯಾಸ. 

ಒಮ್ಮೆ ತಡವಾಗಿ ಬಂದುದಕೆ ಕೋಪಗೊಂಡ ಆತನ ಬಾಸ್, ಸ್ಟಾಂಟನ್ ನನ್ನು ತರಾಟೆಗೆ ತೆಗೆದುಕೊಂಡ. ಅದಕ್ಕೆ ಕಾರಣ ಕೇಳಿದ್ದಕ್ಕೆ, 'ಆಫೀಸಿನಿಂದ ಬರುವಾಗ ಕೆಲವು ವ್ಯಕ್ತಿಗಳ ಫೋಟೋ ತೆಗೆಯುತ್ತಿದ್ದೆ. ಅದಕ್ಕೆ ತಡವಾಯಿತು' ಎಂದು ಹೇಳಿದ. ಅಷ್ಟಕ್ಕೇ ವ್ಯಗ್ರನಾದ ಆತನ ಬಾಸ್, 'ಒಂದೋ ಕೆಲಸ ಮಾಡು, ಇಲ್ಲವೇ ಈ ಕೆಲಸ ಬಿಟ್ಟು ಫೋಟೋ ತೆಗೆ, ಹೋಗು' ಎಂದು ಬಿಟ್ಟ. 

ಸ್ಟಾಂಟನ್ ಎರಡನೇಯದನ್ನೇ ಆಯ್ಕೆ ಮಾಡಿಕೊಂಡ. ಪೂರ್ಣಾವಧಿ ಫೋಟೋಗ್ರಾಫರ್ ಆದ. ಇನ್ನು ಮುಂದೆ ಫೋಟೋ ತೆಗೆಯುವುದನ್ನೇ ಕಾಯಕ ಮಾಡಿಕೊಳ್ಳುತ್ತೇನೆ ಎಂದು ನಿರ್ಧರಿಸಿದ. ನ್ಯೂಯಾರ್ಕ್ ನಗರದ ಹಾದಿಬೀದಿಯಲ್ಲಿ ಹೋಗುವವರ, ಬರುವವರ, ಕುಂತವರ, ಮಲಗಿದವರ.. ಹೀಗೆ ಎಲ್ಲರ  ಫೋಟೋಗಳನ್ನು ತೆಗೆದು, ಅವರ ಕಿರು ಸಂದರ್ಶನವನ್ನು ಸಂಗ್ರಹಿಸುತ್ತಾ ಹೋದ. ಈ ರೀತಿ ಸುಮಾರು ಹತ್ತು ಸಾವಿರ ಜನರ ಭಾವಚಿತ್ರ ಫೋಟೋ ತೆಗೆದ, ಸಂದರ್ಶನ ಮಾಡಿದ. 

ಅನಂತರ ಸ್ನೇಹಿತರ ಸಹಾಯದಿಂದ ಒಂದು ಫೋಟೋ ಪ್ರದರ್ಶನ ಏರ್ಪಡಿಸಿದ. ಅಲ್ಲಿ ತಾನು ತೆಗೆದ ಹತ್ತು ಸಾವಿರ ಜನರ ಫೋಟೋಗಳನ್ನು ಪ್ರದರ್ಶಿಸಿದ. ಆತನ ಕೃತಿ ಅಪಾರ ಜನಮನ್ನಣೆಗೆ ಪಾತ್ರವಾಯಿತು. ಇದಕ್ಕಾಗಿ  Humans of New York ಎಂಬ ಫೇಸ್ ಬುಕ್ ಪೇಜ್ ನ್ನು ತೆರೆದ. ಅದರಿಂದ ಆತನಿಗೆ ಜಾಗತಿಕ ಪ್ರಚಾರ ಲಭಿಸಿತು. ನಂತರ ಅದೇ ಹೆಸರಿನಲ್ಲಿ (Humans of New York) ಪುಸ್ತಕವನ್ನೂ ಪ್ರಕಟಿಸಿದ. ಈ ಪುಸ್ತಕ ಮಾರುಕಟ್ಟೆಗೆ ಬರುವುದಕ್ಕಿಂತ ಮುನ್ನವೇ ಮೂವತ್ತು ಸಾವಿರ ಪ್ರತಿಗಳಿಗೆ ಬೇಡಿಕೆ ಬಂದಿತು. 2013 ರಲ್ಲಿ 'ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ಸ್' ಪುಸ್ತಕಗಳ ಪಟ್ಟಿಯಲ್ಲಿ ಈ ಕೃತಿ ಸತತ ಇಪ್ಪತ್ತಾರು ವಾರಗಳ ಕಾಲ ಮೊದಲ ಸ್ಥಾನದಲ್ಲಿತ್ತು. 

ಅದೇ ವರ್ಷ ಪ್ರತಿಷ್ಠಿತ 'ಟೈಮ್ಸ್' ಮ್ಯಾಗಜಿನ್, "30 Under 30 People Changing The World" ಸರಣಿಯಲ್ಲಿ ಸ್ಟಾಂಟನ್ ನನ್ನೂ ಸೇರಿಸಿತು. ಇದರಿಂದ ಆತನಿಗೆ ಮತ್ತು ಅವನ ಕೃತಿಗೆ ಮತ್ತಷ್ಟು ಮಾನ್ಯತೆ ಸಿಕ್ಕಿತು. ಅದೇ ವರ್ಷ ವಿಶ್ವಸಂಸ್ಥೆ ಸ್ಟಾಂಟನ್ ನನ್ನು ಐವತ್ತು ದಿನಗಳ ಮಟ್ಟಿಗೆ ಮಧ್ಯ ಪ್ರಾಚ್ಯದ ಹತ್ತು ದೇಶಗಳಿಗೆ ಫೋಟೋ ತೆಗೆಯಲೆಂದೇ ಕಳುಹಿಸಿಕೊಟ್ಟಿತು. ಈ ಪ್ರವಾಸದಲ್ಲಿ ಕೊನೆಯಲ್ಲಿ, ತಾನು ಸಂಗ್ರಹಿಸಿದ 23 ಲಕ್ಷ ಡಾಲರ್ ಗಳನ್ನು ಆತ ಪಾಕಿಸ್ತಾನದ ಜೀತದಾಳುಗಳ ಕ್ಷೇಮಾಭಿವೃದ್ಧಿಗೆ ದಾನವಾಗಿ ನೀಡಿದ. 

2015 ರಲ್ಲಿ ಸ್ಟಾಂಟನ್ ಗೆ ಒಂದು ಅಚ್ಚರಿ ಕಾದಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ, ತಮ್ಮನ್ನು ಸಂದರ್ಶಿಸಿ, ಫೋಟೋ ತೆಗೆಯುವಂತೆ ಓವಲ್ ಆಫೀಸಿಗೆ ಸ್ಟಾಂಟನ್ ನನ್ನು ಆಮಂತ್ರಿಸಿದ್ದರು. ಇಂದು ಸ್ಟಾಂಟನ್ ಕೆಮರಾ ಹಿಡಿದರೆ ಯಾರಾದರೂ ಪೋಸು ಕೊಡುತ್ತಾರೆ, ಜೋಳಿಗೆ ಹಿಡಿದರೆ ಕೈ ತುಂಬಾ ಹಣ ಕೊಡುತ್ತಾರೆ. ಆತ ಅದನ್ನು ಒಳ್ಳೆಯ ಉದ್ದೇಶಗಳಿಗೆ ದಾನ ಮಾಡುತ್ತಾನೆ. ಒಬ್ಬ ಸಾಮಾನ್ಯ ಬೀದಿ ಫೋಟೋಗ್ರಾಫರ್ ಇಂದು 'ಏಕ ವ್ಯಕ್ತಿ ಪರೋಪಕಾರಿ'ಯಾಗಿದ್ದಾನೆ. ಈತನನ್ನು Emperor Of Empathy (ಪರಾನುಭೂತಿಯ ಚಕ್ರವರ್ತಿ) ಎಂದು ಮಾಧ್ಯಮಗಳು ಸಂಬೋಧಿಸುತ್ತವೆ. 

ಅಗಾಧ ಸಾಧನೆ ಮಾಡಲು ಅಸಾಮಾನ್ಯ ಕೆಲಸಗಳನ್ನೇ ಮಾಡಬೇಕಿಲ್ಲ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059