ದಿನಕ್ಕೊಂದು ಕಥೆ 1044

*🌻ದಿನಕ್ಕೊಂದು ಕಥೆ🌻*
*ಜಿಮ್ ಕಾರ್ಬೆಟ್*

ಜಿಮ್ ಕಾರ್ಬೆಟ್  ಬೇಟೆಗಾರನಾಗಿದ್ದವರು  ಪರಿಸರ ಪ್ರೇಮಿಯಾಗಿ ರೂಪುಗೊಂಡ ಒಂದು  ರೋಚಕ ವ್ಯಕ್ತಿತ್ವ.   ಇಂದು ಅವರ ಸಂಸ್ಮರಣೆ ದಿನ.

ಎಡ್ವರ್ಡ್ ಜೇಮ್ಸ್ ಜಿಮ್  ಕಾರ್ಬೆಟ್ 1875ರ ಜುಲೈ 25ರಂದು ಭಾರತದ ನೈನಿತಾಲ್‍ನಲ್ಲಿ ಜನಿಸಿದರು.   ಐರಿಶ್ ಮನೆತನಕ್ಕೆ ಸೇರಿದ ಕಾರ್ಬೆಟ್ 13 ಮಕ್ಕಳ ಕುಟುಂಬದಲ್ಲಿ 8ನೇ ಮಗುವಾಗಿ ಜನಿಸಿದರು.  ತಂದೆ ವಿಲಿಯಮ್ ಕ್ರಿಸ್ಟಾಫರ್ ಕಾರ್ಬೆಟ್. ತಾಯಿ ಮೇರಿ ಜೇನ್ ಕಾರ್ಬೆಟ್.  1862ರಲ್ಲಿ ಕ್ರಿಸ್ಟಾಫರ್ ಕಾರ್ಬೆಟ್ ಈ ನಗರದ ಪೋಸ್ಟ್ ಮಾಸ್ಟರ್ ಆಗಿ ಇಲ್ಲಿಗೆ ವರ್ಗಾವಣೆಗೊಂಡರು. ತಂದೆ ಕ್ರಿಸ್ಟಾಫರ್ ಕಾರ್ಬೆಟ್ ನಿಧನರಾದಾಗ ಜಿಮ್ ಕಾರ್ಬೆಟ್ ಇನ್ನೂ ನಾಲ್ಕು ವರ್ಷದ ಬಾಲಕ.  ತಂದೆಯ ಪೋಸ್ಟ್ ಮಾಸ್ಟರ್ ಕೆಲಸ ಅವರ ಹಿರಿಯಣ್ಣ ಟಾಮ್ ಕಾರ್ಬೆಟ್ ಅವರಿಗೆ ದೊರಕಿತು.  

ಕಾರ್ಬೆಟ್ ಅವರ ಕುಟುಂಬ ಚಳಿಗಾಲದ ಸಮಯದಲ್ಲಿ ನೈನಿತಾಲ್ ಬೆಟ್ಟ ಪ್ರದೇಶದ ಕೆಳಗಣ ಪ್ರದೇಶವಾದ ಕಾಲಾಧುಂಗಿ ಎಂಬಲ್ಲಿ ನೆಲೆಗೊಳ್ಳುತ್ತಿತ್ತು.  ಎಳೆವಯಸ್ಸಿನಲ್ಲೇ ಜಿಮ್ ತನ್ನ ಕಾಲಾಧುಂಗಿಯ ಸುತ್ತಮುತ್ತಲಿನ ಪರಿಸರದಿಂದಾಗಿ ವನ್ಯಜೀವಿ ಮತ್ತು ಅರಣ್ಯಗಳ ಕುರಿತಾದ ಆಕರ್ಷಣೆಗೊಳಗಾದರು. ಚಿಕ್ಕ ವಯಸ್ಸಿನಲ್ಲಿಯೇ ಯಾವ ಪ್ರಾಣಿ, ಯಾವ ಪಕ್ಷಿ ಎಂಬುದನ್ನು ಅವುಗಳ ಧ್ವನಿ ಸಪ್ಪಳಗಳ ಮೂಲಕವೇ ಪತ್ತೆಹಚ್ಚವುದನ್ನು ರೂಢಿಸಿಕೊಂಡಿದ್ದರು.  ನಿರಂತರ ಅಲೆಮಾರಿಯಾಗಿದ್ದ ಅವರಲ್ಲಿ ಕ್ರಮೇಣವಾಗಿ  ಅನ್ವೇಷಕ ಪ್ರವೃತ್ತಿಯ ಬೇಟೆಗಾರನೊಬ್ಬ ರೂಪುಗೊಂಡಿದ್ದ. 

ನೈನಿತಾಲಿನ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದ ಜಿಮ್ 19ನೆಯ ವಯಸ್ಸಿಗೆ ಕಾಲಿಡುವ ದಿನಗಳಲ್ಲಿ ಶಾಲಾಭ್ಯಾಸ ಬಿಟ್ಟು ಬೆಂಗಾಲ್ ಅಂಡ್ ನಾರ್ತ್ ವೆಸ್ಟರ್ನ್ ರೈಲ್ವೆಯಲ್ಲಿ ಕೆಲಸ ಪಡೆದರು.  ಆರಂಭದಲ್ಲಿ ಪಂಜಾಬಿನ ಮಾನಕಪುರದಲ್ಲಿ ಇಂಧನ ಪರೀಕ್ಷಕನೆಂದು ಕೆಲಸ ನಿರ್ವಹಿಸಿದ ಅವರು ನಂತರದ ದಿನಗಳಲ್ಲಿ ಬಿಹಾರದಲ್ಲಿ ಗಂಗಾ ನದಿಯ ಮೊಕ್ಮೆಹ್ ಘಾಟ್ ಎಂಬಲ್ಲಿನ ಟ್ರಾನ್ಸ್-ಶಿಪ್ಮೆಂಟ್ ಶಾಖೆಯಲ್ಲಿ  ಸರಕು ಸಾಗಣೆಯ ಗುತ್ತಿಗೆದಾರನಾಗಿ ಕೆಲಸ ಮಾಡಿದರು.

ಮುಂದೆ ಬ್ರಿಟಿಷ್  ಸೇನೆಯಲ್ಲಿ  ಕರ್ನಲ್ಲರಾಗಿದ್ದ ಜಿಮ್  ಕಾರ್ಬೆಟ್ ತಮ್ಮ ಬೇಟೆಗಾರಿಕೆಯ ಪ್ರಸಿದ್ಧಿಗಳಿಂದಾಗಿ,  ಅಂದಿನ ಉತ್ತರ ಪ್ರದೇಶ ಮತ್ತು ಉತ್ತರಾಖಾಂಡ್ ಪ್ರದೇಶಗಳಲ್ಲಿ ಮನುಷ್ಯರ ಪ್ರಾಣಕ್ಕೆ ಎರವಾದ ನರಭಕ್ಷಕ ಹುಲಿಗಳು ಮತ್ತು ಚಿರತೆಗಳ ಬೇಟೆಗಾಗಿ  ಆಹ್ವಾನ ಪಡೆಯುತ್ತಿದ್ದರು. ಈ ರಾಜ್ಯಗಳ ಘರವಾಲ್ ಮತ್ತು ಕುಮಾನ್ ಪ್ರದೇಶಗಳ ಗ್ರಾಮಗಳಲ್ಲಿ ಅಂದಿನ ದಿನಗಳಲ್ಲಿ ಹುಲಿ ಚಿರತೆಗಳು ಅಪಾರವಾಗಿದ್ದವು.   ಬೇಟೆಯಲ್ಲಿ ನಿಪುಣರಾದ ಕಾರ್ಬೆಟ್ ಅಂದಿನ ಜನರ ಕಣ್ಣಲ್ಲಿ ಒಬ್ಬ ಹೀರೋ ಎನಿಸಿದ್ದರು.  ಅಂದಿನ  ಕ್ರೂರ ಪ್ರಾಣಿಗಳಿಗೆ ಕಾರ್ಬೆಟ್ ಅವರ ಕೈಚಳಕ ಮೃತ್ಯುಸದೃಶವಾಗಿತ್ತಾದರೂ ತಮ್ಮ ಸಜ್ಜನಿಕೆಯಿಂದ ಜನರ ಕಣ್ಣಲ್ಲಿ ಅವರು  ಪ್ರೀತಿ ವಿಶ್ವಾಸಗಳು ತುಂಬಿದ್ದ ಸಾಧು ಸಂತನೆಂದು ಗೌರವ ಪಡೆದಿದ್ದರು.

1907ರಿಂದ 1938ರ ಅವಧಿಯಲ್ಲಿ ಕಾರ್ಬೆಟ್ ಒಟ್ಟು 19 ಹುಲಿಗಳು ಮತ್ತು  14 ಚಿರತೆಗಳನ್ನು ಬೇಟೆಯಾಡಿದ ದಾಖಲೆ ಇದೆ.   ಒಂದು ಅಂದಾಜಿನ ಪ್ರಕಾರ ಈ ಬೃಹತ್ ಗಾತ್ರದ ಪ್ರಾಣಿಗಳಿಂದ ಸುಮಾರು  1200ಕ್ಕೂ ಹೆಚ್ಚು  ಜನ ಜೀವಕಳೆದುಕೊಂಡಿದ್ದರು.  ಅಪಾಯಕಾರಿಯಾದ ಇಂತಹ ಬೇಟೆಯ ಕ್ರೀಡೆಯನ್ನು ಕಾರ್ಬೆಟ್ ಒಬ್ಬಂಟಿಯಾಗಿ ಮತ್ತು ಕಾಲ್ನಡಿಗೆಯಲ್ಲಿಯೇ ಹೋಗಿ ನಡೆಸುತ್ತಿದ್ದು, ಅದು  ಅವರ ಅಚ್ಚು ಮೆಚ್ಚಿನ ಹವ್ಯಾಸವಾಗಿತ್ತು. ಬೇಟೆಗೆ ಹೋಗುವಾಗ ಅವರು ಹೆಚ್ಚಾಗಿ ತಮ್ಮೊಂದಿಗೆ ರಾಬಿನ್ ಎಂಬ ಹೆಸರಿನ ಪುಟ್ಟ ನಾಯಿಯೊಂದನ್ನು ಜೊತೆಗೆ ಕರೆದೊಯ್ಯುತ್ತಿದ್ದರಂತೆ. ಬೇರೆಯವರ ಜೀವಗಳನ್ನು ಉಳಿಸಲು ಹೋಗಿ  ಕಾರ್ಬೆಟ್, ಆಗಾಗ ದೊಡ್ಡ ಪ್ರಮಾಣದ ವೈಯಕ್ತಿಕ ಗಂಡಾಂತರಗಳಿಗೆ ತುತ್ತಾಗಿದ್ದೂ ಇದೆ.  

ಆದರೆ ಅಂದಿನ ದಿನಗಳಲ್ಲಿ ಶೋಕಿಗಾಗಿ ಬೇಟೆಯಾಡುತ್ತಿದ್ದವರಿಗೂ ಜಿಮ್ ಕಾರ್ಬೆಟ್ ಅವರಿಗೂ ಅಜಗಜಾಂತರ ವೆತ್ಯಾಸವಿದೆ.  ಕಾರ್ಬೆಟ್  1920ರ ಅವಧಿಯಲ್ಲಿ ತಮ್ಮ ಮಿತ್ರ ಎಫ್. ಡಬ್ಲ್ಯೂ ಚಾಂಪಿಯನ್ ಅವರ ಸ್ಪೂರ್ತಿಯಿಂದ  ಕ್ಯಾಮರಾವೊಂದನ್ನು ಖರೀದಿಸಿದರು.   ಈ ಕ್ಯಾಮರಾದ ಮೂಲಕ ಅವರು ಹುಲಿಗಳ ಬಗೆಗಿನ ವಿಷಯಗಳನ್ನು ಸೆರೆ ಹಿಡಿದು ದಾಖಲಿಸಲು ಆರಂಭಿಸಿದರು.  ಕಾಡು  ಪ್ರದೇಶಗಳ  ಬಗ್ಗೆ  ಅವರಿಗೆ ನಿಕಟವಾದ ತಿಳುವಳಿಕೆ ಇತ್ತಾದರೂ ವನ್ಯಮೃಗಗಳ  ಚಿತ್ರಗಳನ್ನು ಸೆರೆಹಿಡಿಯುವುದು ತುಂಬಾ ಸವಾಲಿನ ಕೆಲಸ ಎಂಬ ಅರಿವು ಅವರಲ್ಲಿತ್ತು.  ಪ್ರಾಣಿಗಳು  ಸ್ವಾಭಾವಿಕವಾಗಿ ಸಂಕೋಚ ಪ್ರವೃತ್ತಿ ಹೊಂದಿರುತ್ತವೆ. ಇದನ್ನು ಪರಿಗಣಿಸಿ ಕ್ಯಾಮರಾ ಬಳಸಬೇಕಾಗುತ್ತದೆ.  ದಿನೇ ದಿನೇ ಅವರ ಒಲವು, ಹುಲಿಗಳು ಮತ್ತು ಚಿರತೆಗಳೆಡೆಗೆ ವಾಲತೊಡಗಿದಾಗ ಅವರು ಅವುಗಳನ್ನು  ಬೇಟೆಯಾಡುವ ವಿಚಾರದಲ್ಲಿ ವಿವೇಚನಾಯುಕ್ತವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.  ಅವರ ಬರಹಗಳಲ್ಲಿ ಅವರು  ಬೇಟೆಯಾಡಿ ಕೊಂದ ಪ್ರಾಣಿಗಳಲ್ಲಿ ಹಲವಾರು ಹುಲಿ ಚಿರತೆಗಳು ಹೇಗೆ ನರಭಕ್ಷಕ ಪ್ರಾಣಿಗಳಾದವು ಎಂಬ ವಿವರಗಳಿವೆ.   ಪ್ರಾಣಿಗಳು ತಮ್ಮ ಬೇಟೆಗಳನ್ನು ಅರಸುವಾಗ ಗಾಯಗೊಂಡ ಪಕ್ಷದಲ್ಲಿ, ಅವುಗಳ ವಸಡು ದಂತಪಂಕ್ತಿಗಳ ವಿನ್ಯಾಸದಲ್ಲಿ ಬದಲಾವಣೆಯಾಗಿ, ಇತರ ಪ್ರಾಣಿಗಳನ್ನು ಬೇಟೆಯಾಡಿ ಆಹಾರವಾಗಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಅವು ನರಭಕ್ಷಕವಾಗುತ್ತಿದ್ದುವಂತೆ.  ಹೀಗೆ ಜಿಮ್ ಕಾರ್ಬೆಟ್ ತಮ್ಮ ಅಧ್ಯಯನ ವಿಶ್ಲೇಷಣೆಗಳ ಮೂಲಕ ಯಾವುದಾದರೂ ಪ್ರಾಣಿ  ನರಭಕ್ಷಕವಾಗಿದ್ದರೆ  ಅಥವಾ ತಮ್ಮ ಸ್ವಾಭಾವಿಕ ಆಹಾರವಲ್ಲದ ಪ್ರಾಣಿ, ಪಶು ಪಕ್ಷಿಗಳಿಗೆ ಅಪಾಯಕಾರಿ ಎನಿಸಿದ್ದರೆ  ಮಾತ್ರ ಅವುಗಳನ್ನು ಕೊಲ್ಲಲು ಮುಂದಾಗುತ್ತಿದ್ದರು.  ತಮ್ಮ ಒಂದು ತಪ್ಪು ನಿರ್ಣಯದ ಬೇಟೆಯಲ್ಲಿ ಅವರು ‘ಬ್ಯಾಚಲರ್ ಆಫ್ ಪೌಲಗಢ್’ ಎಂಬ ಹುಲಿಯನ್ನು  ಕೊಂದಿದ್ದರ ಬಗ್ಗೆ  ವಿಷಾದ ವ್ಯಕ್ತಪಡಿಸಿದ್ದರು.

ಜಿಮ್ ಕಾರ್ಬೆಟ್ ಇಂದಿಗೂ ಭಾರತದಲ್ಲಿ ಮಹಾನ್ ಸಂರಕ್ಷಣಾವಾದಿಯಾಗಿ ಸ್ಮರಿಸಲ್ಪಡುತ್ತಿದ್ದಾರೆ.  ಅವರು ಕಾರ್ಯನಿರ್ವಹಿಸಿದ ಎಲ್ಲಾ ರಂಗಗಳಲ್ಲಿಯೂ ಮೆಚ್ಚುಗೆ ಮತ್ತು ಗೌರವ ಗಳಿಸಿದ್ದನ್ನು ಈಗಲೂ ಕಾಣಬಹುದಾಗಿದೆ. ತಮ್ಮ ನಿವೃತ್ತಿಯ  ನಂತರದಲ್ಲಿ ಅವರು  ಮ್ಯಾನ್-ಈಟರ್ಸ್ ಆಫ್ ಕುಮಾನ್, ಜಂಗಲ್ ಲೊರೆ  ಮುಂತಾದ ಹಲವಾರು ಪ್ರಸಿದ್ಧ  ಕೃತಿಗಳನ್ನು ರಚಿಸಿದರು.  ಈ ಕೃತಿಗಳಲ್ಲಿ  ಕುತೂಹಲ ತುಂಬುವ ಬೇಟೆಯ ವಿವರಗಳು, ಅಲ್ಲಿನ ರೋಚಕ  ಅನುಭವಗಳು ಹಾಗೂ  ಅದರ ಫಲವಾಗಿ ಮೂಡಿಬಂದ  ಟೀಕೆ, ಸಂತಸೋತ್ಸಾಹಗಳು ಮತ್ತು ವಾಣಿಜ್ಯಿಕ  ಯಶಸ್ಸುಗಳನ್ನು ವರ್ಣಿಸಿದ್ದಾರೆ.   

ಭಾರತದಲ್ಲಿ ವನ್ಯಜೀವಿ ಸಂಕುಲವು ನಿರ್ನಾಮವಾಗುವುದನ್ನು ರಕ್ಷಿಸಬೇಕಾದುದರ  ಅತ್ಯಗತ್ಯತೆಯನ್ನು ಕಾರ್ಬೆಟ್ ಪದೇ ಪದೇ ನೇರ ಮಾತುಗಳಲ್ಲಿ ಮನದಟ್ಟು ಮಾಡಿಕೊಟ್ಟಿದ್ದಾರೆ.  ಕಾರ್ಬೆಟ್ ಅವರು, ಹುಲಿಗಳ ಸಾವಿನ ಬಗ್ಗೆ ಮತ್ತು ಅವುಗಳ ವಾಸಸ್ಥಾನಗಳ ವಿನಾಶದಿಂದ ಉಂಟಾದ ಅಸ್ಥಿರತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.   ಅವರು ಶಾಲಾಮಕ್ಕಳ ಗುಂಪುಗಳಿಗೆ ನೈಸರ್ಗಿಕ ಪರಂಪರೆ ಮತ್ತು ಅರಣ್ಯಗಳ ರಕ್ಷಣೆ ಹಾಗು ವನ್ಯ ಜೀವಿಗಳ ಸಂರಕ್ಷಣೆ ಬಗ್ಗೆ ಉಪನ್ಯಾಸ ಮಾಲಿಕೆಗಳನ್ನು ಏರ್ಪಡಿಸುತ್ತಿದ್ದರು. ಈ ಉದ್ದೇಶಕ್ಕಾಗಿ ಯುನೈಟೆಡ್ ಪ್ರಾವಿನ್ಸಸ್ನಲ್ಲಿ ‘ಅಸೊಶಿಯೇಶನ್ ಫಾರ್ ದಿ ಪ್ರಿಸರ್ವೇಶನ್ ಆಫ್ ಗೇಮ್’  ಎಂಬ ಪ್ರತಿಷ್ಟಾನವನ್ನು ಉತ್ತೇಜಿಸಿದರಲ್ಲದೆ,  ‘ಆಲ್-ಇಂಡಿಯಾ ಕಾನ್ಫರೆನ್ಸ್ ಫಾರ್ ದಿ ಪ್ರಿಸರ್ವೇಶನ್ ಆಫ್ ವೈಲ್ಡ್ ಲೈಫ್’  ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು. ಅವರು ತಮ್ಮ ಗೆಳೆಯ  ಎಫ್.ಡಬ್ಲ್ಯು ಚ್ಯಾಂಪಿಯನ್ ಅವರ ಜೊತೆ ಸೇರಿ ಭಾರತದಲ್ಲೇ ಪ್ರಥಮ ಬಾರಿಗೆ ಕುಮಾನ್ ಹಿಲ್ಸ್ ನಲ್ಲಿ ರಾಷ್ಟ್ರೀಯ ಉದ್ಯಾನ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1957ರ ವರ್ಷದಲ್ಲಿ ಕುಮಾನ್ ಪ್ರದೇಶದಲ್ಲಿರುವ ಈ ಅರಣ್ಯ ಪ್ರದೇಶಕ್ಕೆ ಕಾರ್ಬೆಟ್ ಅವರ ಹೆಸರಿನ ಮೂಲಕ   ‘ದಿ ಜಿಮ್ ಕಾರ್ಬೆಟ್ ನ್ಯಾಶನಲ್ ಪಾರ್ಕ್’ ಎಂಬ  ಹೆಸರನ್ನಿರಿಸಿ ಗೌರವಿಸಲಾಗಿದೆ.

1947ರ ವರ್ಷದಲ್ಲಿ ಜಿಮ್ ಕಾರ್ಬೆಟ್  ಅವರು ತಮ್ಮ ಅವರ ಸಹೋದರಿ ಮ್ಯಾಗೀ  ಅವರೊಂದಿಗೆ ಕೀನ್ಯಾ ದೇಶದ  ನೆಯರಿ ಎಂಬ ಪ್ರದೇಶಕ್ಕೆ  ತೆರಳಿದರು.  ಅಲ್ಲಿ ಕೂಡ ಅವರು ತಮ್ಮ ಬರಹದ ಕಾಯಕವನ್ನು ಮುಂದುವರೆಸಿದರು.  ಹುಲಿ, ಚಿರತೆಗಳು ಮತ್ತು ಇನ್ನಿತರ ವನ್ಯಜೀವಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದರ ಬಗ್ಗೆ ಅವರು ನಿರಂತರ ಎಚ್ಚರಿಕೆ ನೀಡುತ್ತಿದ್ದರು.   ಬೇಟೆಗಾರಿಕೆ ಸಮಯದಲ್ಲಿ ಜಿಮ್ ಕಾರ್ಬೆಟ್ ಟ್ರೀ ಟಾಪ್ಸ್ ಹೊಟೆಲ್ ಜಾಗೆಯಲ್ಲಿ ತಂಗುತ್ತಿದ್ದರು. ಅಲ್ಲಿನ ದೊಡ್ಡ ಮರವೊಂದು ಅವರ ವಾಸಸ್ಥಾನವಾಗಿತ್ತು.  

ಜಿಮ್ ಕಾರ್ಬೆಟ್ ಅವರ ಮ್ಯಾನ್-ಈಟರ್ಸ್ ಆಫ್ ಕುಮಾನ್  ಕೃತಿಯು ಭಾರತ, ಯುನೈಟೆಡ್ ಕಿಂಗ್ಡಮ್ ಮತ್ತು ಅಮೆರಿಕದಲ್ಲಿ ಅತ್ಯಂತ ಯಶಸ್ವಿಯಾಗಿ ಮಾರಾಟಗೊಂಡಿತು.  ಮುಂದೆ ಇದು ವಿಶ್ವದ  27 ಭಾಷೆಗಳಲ್ಲಿ ಅನುವಾದಗೊಂಡಿತು. ಅವರ ನಾಲ್ಕನೆಯ ಪುಸ್ತಕ ‘ಜಂಗಲ್ ಲೊರೆ’ ಯನ್ನು ಅವರ ಆತ್ಮಚರಿತ್ರೆ ಎಂದು ಭಾವಿಸಲಾಗಿದೆ.

ಜಿಮ್ ಕಾರ್ಬೆಟ್ ತಮ್ಮ ಆರನೆಯ ಪುಸ್ತಕ, ‘ಟ್ರೀ ಟಾಪ್ಸ್’ ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ  1955ರ ಎಪ್ರಿಲ್ 19ರಂದು  ಹೃದಯಾಘಾತದಿಂದ ನಿಧನರಾದರು.

ಕೃಪೆ:ಕನ್ನಡ  ಸಂಪದ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059