ದಿನಕ್ಕೊಂದು ಕಥೆ 1045

*🌻ದಿನಕ್ಕೊಂದು ಕಥೆ🌻*

*ತಪಸ್ಸಿಗಿಂತ 'ವಿಶ್ವಾಸ ಮತ್ತು ನಂಬಿಕೆ' ಬೇಕು.*

ಪ್ರಾಚೀನ ಕಾಲದಲ್ಲಿ ನಡೆದ ಕಥೆ ,  ಒಂದು  ಮರದಲ್ಲಿ  ಪುಟ್ಟ ಪಕ್ಷಿ  ಗೂಡಿನಲ್ಲಿ ತನ್ನ ಎರಡು  ಮರಿಗಳೊಂದಿಗೆ ವಾಸವಾಗಿತ್ತು. ಪುಟ್ಟ ಪಕ್ಷಿ ದಿನವೂ  ಹೊರಗೆ ಹೋಗಿ ತನಗೂ ಹಾಗೂ ಮರಿಗಳಿಗೆ  ಆಹಾರ ತಂದು  ಕೊಕ್ಕಿನಿಂದ ಮರಿಗಳಿಗೆ  ತಿನ್ನಿಸಿ,  ಆಟವಾಡಿ  ದಿನ ಕಳೆಯುತ್ತಾ  ಸಂತೋಷವಾಗಿದ್ದವು.  ಹೀಗೆ ಒಂದು ದಿನ ತಾಯಿ ಪಕ್ಷಿಯು ಆಹಾರ ತರುವಾಗ  ಆಕಾಶವೆಲ್ಲಾ ಮೋಡ  ಕವಿತಿರುವುದನ್ನು  ನೋಡಿ  ಲಘು ಬಗೆ ಯಿಂದ ಗೂಡಿಗೆ ಬಂದು ಸೇರಿತು. ಅದು ಅಂದು ಕೊಂಡಂತೆ ಮಳೆ ಬಂದಿತು. ಎರಡು  ದಿನಗಳಾದರೂ ಮಳೆ ಕಡಿಮೆಯಾಗಲಿಲ್ಲ. ಜೋರಾಗಿಯೇ  ಸುರಿಯುತ್ತಿತ್ತು. ಹೀಗಾಗಿ ತಾಯಿ ಪಕ್ಷಿ ಹೊರಗೆ ಹೋಗಿ  ತನ್ನ  ಮರಿಗಳಿಗೆ ಆಹಾರ ತರಲು ಸಾಧ್ಯವಾಗಲಿಲ್ಲ. ಮರಿಗಳು ತಾಯಿ ಮುಂದೆ ತಮ್ಮ ಕೊಕ್ಕನ್ನು  ಕಳೆದು ಆಹಾರ ಕೇಳುತ್ತಿದ್ದವು. ಮರಿಗಳು ಹಸಿವಿಗಾಗಿ   ಒದ್ದಾಡುವುದನ್ನು ತಾಯಿ ಪಕ್ಷಿಗೆ ನೋಡಲಾಗಲಿಲ್ಲ. ಮಳೆ ಕಡಿಮೆಯಾದ ಹೊರತು ಆಹಾರ ತರಲು ಅದರ ಕೈಯಲ್ಲಿ ಸಾಧ್ಯವಿರಲಿಲ್ಲ. 

ಆಗ ಅದು ಕೃಷ್ಣನನ್ನು ಪ್ರಾರ್ಥಿಸುತ್ತಾ,  ಹೀಗೆ ಹೇಳಿತು. ಹೇ ಪ್ರಭು ನೀನು ಗೋಕುಲ ಪರ್ವತವನ್ನೆ  ಎತ್ತಿ  ಗೋಪಾಲಕರ  ಜೀವವನ್ನು ರಕ್ಷಣೆ  ಮಾಡಿದ್ದಿ,ಅದೇ ತರಹ ನನ್ನ ಮಕ್ಕಳ ಜೀವವನ್ನು ರಕ್ಷಣೆ ಮಾಡು ಎಂದು ಕೇಳುತ್ತಿತ್ತು.
ಆ ಸಮಯಕ್ಕೆ  ದ್ವಾರಕಾನಗರದಲ್ಲಿ ಕೃಷ್ಣನು ತನ್ನ ಅಂತಃಪುರದಲ್ಲಿ ರುಕ್ಮಿಣಿ ಜೊತೆ ಮಾತನಾಡುತ್ತಿದ್ದನು. ಪಕ್ಷಿಯ ಪ್ರಾರ್ಥನೆ ಅವನಿಗೆ ಕೇಳಿದ್ದು ,ರುಕ್ಮಿಣಿ ಜೊತೆ ಮಾತನಾಡುವುದನ್ನು ನಿಲ್ಲಿಸಿದನು. ಆಗ ರುಕ್ಮಿಣಿ ಕೇಳಿದಳು. ಕೃಷ್ಣಾ ಇದ್ದಕ್ಕಿದ್ದಂತೆ ಏಕೆ ಮಾತು ನಿಲ್ಲಿಸಿದೆ?  ಈಗ ಯಾವುದೋ ಪುಟ್ಟ ಪಕ್ಷಿ ನಾನು ಗೋವರ್ಧನ ಪರ್ವತ ಮೇಲೆತ್ತಿ  ಗೋಪಾಲಕರನ್ನು  ರಕ್ಷಣೆ ಮಾಡಿದ ಘಟನೆ  ನೆನಪಿಸುತ್ತಾ, ಅದೇ ರೀತಿ ತನ್ನ  ಮರಿಗಳಿಗೆ ಆಹಾರ ಕೊಟ್ಟು  ರಕ್ಷಿಸುವಂತೆ  ಕೇಳುತ್ತಿದೆ. ಇದನ್ನು ಕೇಳಿದ ರುಕ್ಮಿಣಿ, ಪ್ರಭು ಎಲ್ಲೋ ಇರುವ ಪಕ್ಷಿಗೆ ನೀವು ಆಹಾರವನ್ನು ಹೇಗೆ  ಒದಕಗಿಸುತ್ತೀರಿ ಎಂದು ಕೇಳಿದಳು. ಕೃಷ್ಣನು ಏನಾದರೂ ಉಪಾಯ ಮಾಡಿ ಆಹಾರ ಕೊಟ್ಟು ಅವುಗಳ ಜೀವವನ್ನು ರಕ್ಷಿಸುತ್ತೇನೆ. 

ಕೃಷ್ಣನ ಉಪಾಯದಂತೆ  ಆಹಾರದ ಚೀಲವನ್ನು ತೆಗೆದುಕೊಂಡು ಬರುತ್ತಿದ್ದ ಸನ್ಯಾಸಿ ಅದೇ ಮರದ ಕೆಳಗೆ ಕುಳಿತು ಆಹಾರದ ಚೀಲವನ್ನು ಇಟ್ಟು  ಸ್ವಲ್ಪ ಹೊತ್ತು ಧ್ಯಾನ ಮಾಡಿ,  ತಣ್ಣಗಿರುವ  ಆಹಾರ ಬಿಸಿಮಾಡಿಕೊಳ್ಳಲು, ಕಟ್ಟಿಗೆ 
ತರಲು ಹೊರಡುವ ಮುನ್ನ,   ಆಹಾರದ ಚೀಲವನ್ನು ಮರದ ಕೊಂಬೆಗೆ  ಸಿಗಿಸಿ ಹೋದನು. ಇದಾವುದೂ ತಿಳಿಯದ ಪಕ್ಷಿ,   ತಾನಿರುವ  ಮರದ ಕೆಳಗೆ ಸಿಗಿಸಿದ್ದ ಆಹಾರದ ಚೀಲವನ್ನು ನೋಡಿ ಕೆಳಗೆ ಬಂದು ತನ್ನ ಕೊಕ್ಕಿನಿಂದ  ಕಚ್ಚಿತು. ಹರಿದ ಭಾಗದಿಂದ ಆಹಾರವನ್ನು ತೆಗೆದುಕೊಂಡು ಹೋಗಿ ತನ್ನ ಮರಿಗಳಿಗೆ  ತಿನ್ನಿಸಿತು. ಇದೇ ತರಹ  ತನ್ನ ಕೊಕ್ಕಿನಿಂದ ಪದೇಪದೇ ಆಹಾರ  ತೆಗೆದು  ತನ್ನ ಮರಿಗಳಿಗೆ   ತಿನ್ನಿಸುತಿತ್ತು.  ಇದರಿಂದ ಚೀಲವು ಹರಿದು  ಉಳಿದ  ಆಹಾರವೆಲ್ಲ ಕೆಳಗೆ ಬಿದ್ದಿತು. 

ಸನ್ಯಾಸಿ ಬಂದು  ನೋಡಿದನು. ಅನ್ನದ  ಚೀಲ ಹರಿದು  ಅನ್ನವೆಲ್ಲ ಭೂಮಿಯ ಮೇಲೆ ಬಿದ್ದಿತ್ತು. ಅವನು ತಲೆ ಎತ್ತಿ ಪಕ್ಷಿಯನ್ನು ನೋಡಿ ಆ ಪಕ್ಷಿಯೇ  ಇದನ್ನೆಲ್ಲಾ ಮಾಡಿದ್ದು ಎಂದು ಗೊತ್ತಾಯಿತು. ಸಿಟ್ಟು ಬಂದಿತು.  ಏ ಪಕ್ಷಿ ನಿನ್ನ ಕಾರಣದಿಂದ  ನನಗೆ  ಆಹಾರ ಇಲ್ಲವಾಯಿತು. ಇದಕ್ಕಾಗಿ  ನಿನಗೆ  ತಕ್ಕ ದಂಡನೆ  ಕೊಡುತ್ತೇನೆ  ಎಂದನು. ಆಗ ಪಕ್ಷಿಯು  ಸಾಧು ಮಹಾರಾಜ, ನಾನು ಅನ್ನಕ್ಕಾಗಿ ಭಗವಾನ್ ಶ್ರೀ ಕೃಷ್ಣನನ್ನು  ಕೇಳಿದ್ದೆ, ಅದಕ್ಕಾಗಿ ಕೃಷ್ಣನು ನನಗೆ ಆಹಾರವನ್ನು ಕಳಿಸಿದ್ದಾನೆ ಎಂದುಕೊಂಡೆ, ನೀನು ಆಹಾರದ ಚೀಲವನ್ನು ಮರಕ್ಕೆ  ಸಿಗಿಸಿದ್ದಿ ಎಂದು ನನಗೆ ಗೊತ್ತಿರಲಿಲ್ಲ.  ಕೃಷ್ಣನೇ ಆಹಾರ ಕಳಿಸಿದ್ದಾನೆ ಎಂದು ನನ್ನ ಮಕ್ಕಳಿಗೆ ಆಹಾರ ಕೊಟ್ಟು ನಾನು ತಿಂದೆ  ಎಂದಿತು. 

ಆಗ ಸಾಧು, ನಿನ್ನ ಕಾರಣದಿಂದಾಗಿ ನನಗೆ ಆಹಾರವಿಲ್ಲ ವಾಯಿತು.ನನಗೆ ಹಸಿವಾಗುತ್ತಿದೆ ಏನು ಮಾಡಲಿ ಎಂದನು. ಅದಕ್ಕೆ ಪಕ್ಷಿಯು, ಹೇ ಸಾಧು ಬಾಬಾ, ನಾನು  ಪುಟ್ಟ ಪಕ್ಷಿ,  ನೀನು ಮಹಾ ಜ್ಞಾನಿ. ಅಜ್ಞಾನಿಯಾದ  ನನ್ನಂತ ಪುಟ್ಟ ಪಕ್ಷಿ  ಆಹಾರ  ಕೇಳಿದ್ದಕ್ಕೆ , ಕಾಡಿನಲ್ಲಿ ಬೇಕಾದಷ್ಟು ಮರಗಳಿದ್ದರೂ,  ಭಗವಾನ್ ಕೃಷ್ಣನು  ನಾನು ಇರುವ ಮರದ  ಕೆಳಗೆ ಅನ್ನ ನನಗೆ ಸಿಗುವಂತೆ  ಕಳಿಸಿದ್ದಾನೆ.  ಹೀಗಿರುವಾಗ ನಿನ್ನಂತಹ ಜ್ಞಾನಿ ಭಗವಂತನನ್ನು ಕೇಳಿದರೆ ಅನ್ನ ಕೊಡದೇ ಇರುತ್ತಾನೆಯೇ?  ಭಗವಂತನ ಮೇಲೆ  ನಿನಗೆ ಇರುವ  ಭಕ್ತಿಯ ಜೊತೆ ವಿಶ್ವಾಸ ಮತ್ತು ನಂಬಿಕೆಯನ್ನು  ಇಡಬೇಕು. ಆಗ ಭಗವಂತನು  ಯಾರನ್ನು ಉಪವಾಸ ಇರಲು ಬಿಡುವುದಿಲ್ಲ ಎಂದಿತು. 

ಪಕ್ಷಿಯ ಮಾತುಗಳನ್ನು ಕೇಳಿದ  ಸನ್ಯಾಸಿಗೆ ಬಂದ ಸಿಟ್ಟು ಬಂದಹಾಗೆ  ಕರಗಿಹೋಗಿ ಶಾಂತನಾದನು. ಸಮಾಧಾನದಿಂದ  ಹೇ  ಪುಟ್ಟ ಪಕ್ಷೀಯೇ, ನಾನು ಇಷ್ಟು ವರ್ಷಗಳ ಕಾಲ ಮಾಡಿದ ತಪಸ್ಸಿನಿಂದ ಸಿಗದ ಜ್ಞಾನ, ನಿನ್ನ ಮಾತಿನಿಂದ ಕ್ಷಣದಲ್ಲಿ ನನಗೆ ಜ್ಞಾನ  ಸಿಕ್ಕಿತು.  ಸ್ವಲ್ಪ  ಆಹಾರಕ್ಕಾಗಿ  ನನ್ನ ಮನಸ್ಸು  ವಿಚಲಿತ ಗೊಂಡಿತು.  ನಿನಗಿರುವ ವಿಶ್ವಾಸದ  ಮುಂದೆ ನನ್ನ  ಜ್ಞಾನ ಸೋತಿತು ಎಂದು  ಪುಟ್ಟ  ಪಕ್ಷಿಯ ಮುಂದೆ ತಲೆಬಾಗಿದನು. ಸ್ವಲ್ಪ ಹೊತ್ತಿಗೆ ಮಳೆ ನಿಂತಿತು. ಸನ್ಯಾಸಿಯು ಪಕ್ಷಿಗೆ ಕೃತಜ್ಞತೆ ಹೇಳಿ ಮುಂದೆ ಹೊರಟನು. ಸ್ವಲ್ಪ ದೂರ  ಹೋಗುತ್ತಿದ್ದಂತೆ  ಹಣ್ಣುಗಳಿಂದ ತುಂಬಿದ ಮರ ಕಂಡಿತು. ಹೇ ಕೃಷ್ಣ ನಿನ್ನ ಲೀಲೆ ಬಲ್ಲವರಾರು?  ಎಂದುಕೊಂಡು ಮರದಲ್ಲಿದ್ದ ಹಣ್ಣನ್ನು ಕಿತ್ತು  ತಿಂದನು ಅಲ್ಲೇ  ಹರಿಯುವ ನದಿಯಲ್ಲಿ ನೀರು ಕುಡಿದು, ಪ್ರಭು ಭಗವಂತ,ಶ್ರೀಕೃಷ್ಣ, ನಿನ್ನ ಲೀಲೆಗಳೇ  ಅರ್ಥವಾಗುವುದಿಲ್ಲ. ಎಷ್ಟೋ  ವರ್ಷಗಳ ಕಾಲ ತಪಸ್ಸು ಮಾಡಿದರೂ ಸಿಗದ  ಜ್ಞಾನವನ್ನು ಪುಟ್ಟ ಪಕ್ಷಿಯ ಕೈಯಲ್ಲಿ ತಿಳಿಸಿದೆ.ಎಲ್ಲೋ ಕಾಡಿನಲ್ಲಿರುವ  ಪಕ್ಷಿ  ಆಹಾರ ಕೊಡಲು ನಿನ್ನ ಕೇಳಿದರೆ  ನನ್ನ ಮೂಲಕ  ಅದಿರುವ  ಸ್ಥಳಕ್ಕೆ ಕಳಿಸಿಕೊಟ್ಟೆ. ನಿನ್ನ ನಂಬಿದವರನ್ನು ಎಂದಿಗೂ ಕೈ ಬಿಡುವುದಿಲ್ಲ . ಹೇ ಕೃಷ್ಣ ,ವಾಸುದೇವ, ಈ ಪ್ರಪಂಚದಲ್ಲಿ  ಇದೇ ತರಹ  ಎಲ್ಲಾ ಜೀವಿಗಳಿಗೂ ಆಹಾರ ಒದಗಿಸಿ ರಕ್ಷಣೆ ಮಾಡುತ್ತಿರುವ ನಿನಗೆ  ಕೋಟಿ ಕೋಟಿ ನಮಸ್ಕಾರಗಳು ಎಂದು ಪ್ರಾರ್ಥಿಸಿ  ತಪಸ್ಸಿಗೆ ಕುಳಿತನು. 

ಎನ್ನ ರಕ್ಷಿಸೋ ನೀನು   ದೇವರ ದೇವ !!
ಎನ್ನ  ರಕ್ಷಿಸೋ ನೀನು , ಯಾದವ ಕುಲ ಮಣಿ
ಮುನ್ನ ದ್ರೌಪದಿಯ, ಅಭಿಮಾನ ಕಾಯ್ದ  ಕೃಷ್ಣ! 

ಬಾಲನ  ಮೊರೆಯನ್ನು  ಕೇಳಿ  ಕೃಪೆ ಯಿಂದ
ಪಾಲಿಸಿದೆಯೋ   ನರಸಿಂಹ  ರೂಪ  ದಿಂದ ! 

ಇನ  ಕುಲಾಂಬುದಿಚಂದ್ರ   ಘನಶುಭ ಗುಣಸಾಂದ್ರ
ಸನಕಾದಿ  ಮುನಿವಂದ್ಯ   ಪುರಂದರ  ವಿಠಲ! 

ಎನ್ನ ರಕ್ಷಿಸೋ ನೀನು ದೇವರ ದೇವ!

*ಕೃಪೆ,ಬರಹ:- ಆಶಾ ನಾಗಭೂಷಣ.*
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059