ದಿನಕ್ಕೊಂದು ಕಥೆ 1051

*🌞ದಿನಕ್ಕೊಂದು ಕಥೆ🌞*

*ಅವಕಾಶ ಸಿಕ್ಕಾಗ ಸಹಾಯ ಮಾಡಬೇಕು.*

ಇದೊಂದು ನೈಜ ಘಟನೆ

ಉತ್ತರ  ಭಾರತದ ಒಂದು ಗ್ರಾಮದಲ್ಲಿ ಒಬ್ಬ ವೈದ್ಯರಿದ್ದರು. ಅವರು ಬಡತನದಲ್ಲಿ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ವೈದ್ಯರಾದ ಮೇಲೆ ಬಡಬಗ್ಗರಿಗೆ  ತುಂಬಾ ಸಹಾಯ ಮಾಡುತ್ತಿದ್ದರು.  ಬಡಜನರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಸುತ್ತಮುತ್ತ ಊರಿನಲ್ಲೆಲ್ಲಾ ಅವರಿಗೆ ಒಳ್ಳೆಯ ಹೆಸರಿತ್ತು. ಅವರ  ಹತ್ತಿರ ಒಂದು ಮೊಬೈಲ್ ಇತ್ತು. ಆ ಮೊಬೈಲ್ನಲ್ಲಿ ಇದ್ದ  ನಂಬರನ್ನು  ಒಂದು ಪೇಪರ್ ನಲ್ಲಿ ಬರೆದು ಮರದ ಮೇಲೆ, ಹಳೆಯ ಕಾಂಪೌಂಡುಗಳ ಮೇಲೆ, ಕಟ್ಟಡಗಳಲ್ಲಿ , ಬಸ್ಟಾಂಡ್ ಗಳಲ್ಲಿ ಹೀಗೆ  ಎಲ್ಲಾ ಕಡೆಗಳಲ್ಲಿ  ಅಂಟಿಸಿದ್ದರು. ಯಾಕೆಂದರೆ  ಯಾರಿಗಾದರೂ ಹುಷಾರಿಲ್ಲದಿದ್ದರೆ ಅಂದರೆ ಸಣ್ಣಪುಟ್ಟ ಜ್ವರ ಕೆಮ್ಮು ನೆಗಡಿಗಲ್ಲ, ತುರ್ತುಚಿಕಿತ್ಸೆಯ ಅಗತ್ಯವಿದ್ದ ಯಾರಾದರೂ ಸರಿಯೇ ಇಲ್ಲಿ ಬರೆದಿರುವ ನಂಬರಿಗೆ ಫೋನ್  ಮಾಡಿದರೆ ಸ್ವಲ್ಪವೂ ತಡಮಾಡದೆ ಬಿಟ್ಟ ಕೆಲಸ ಬಿಟ್ಟು, ಅದು ಎಷ್ಟೇ ದೂರ ಇರಲಿ, ಯಾವ ಮೂಲೆಯಲ್ಲೇ ಇರಲಿ, ಅಲ್ಲಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡುವುದು ಅವರ  ಕಾರ್ಯವಾಗಿತ್ತು. ಸಾಧಾರಣವಾಗಿ ಇದರ ಅವಶ್ಯಕತೆ ಬಡಬಗ್ಗರಿಗೆ ಮಾತ್ರ ಇರುತ್ತದೆ. ಇವರಾದರೋ, ಅವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳುತ್ತಿರಲಿಲ್ಲ ಅವರ ಯೋಗ್ಯತಾನುಸಾರ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು.  ಇಲ್ಲದಿದ್ದರೆ  ಇಲ್ಲ  ಬಡವರಿಗೆ ಕೈಯಿಂದ ಹಣವನ್ನು ಇವರೇ  ಕೊಟ್ಟು ಬರುತ್ತಿದ್ದರು. ಈ ಎಲ್ಲಾ ಗುಣಗಳಿಂದ ಈ ವೈದ್ಯರು ಎಲ್ಲರ ಪಾಲಿಗೂ ದೇವರಾಗಿದ್ದರು. 

ಒಂದು ದಿನ ಒಂದು ಹಳ್ಳಿಗೆ ಒಬ್ಬ ರೋಗಿಗೆ ಚಿಕಿತ್ಸೆ ಕೊಡಲು  ಹೋಗಿದ್ದರು. ತುರ್ತು ಮೊಬೈಲಿಗೆ ಒಂದು ಕರೆ ಬಂದಿತು. ಆ ಕಡೆಯಿಂದ ಒಬ್ಬ ತಾಯಿ ಬಿಕ್ಕಳಿಸಿ ಅಳುತ್ತಿರುವ ಧ್ವನಿ ಕೇಳಿತು. ಡಾಕ್ಟ್ರೆ ಬೇಗ ಬನ್ನಿ  ನನ್ನ ಒಂದು ವರ್ಷದ  ಮಗು  ಉಸಿರಾಡುತ್ತಿಲ್ಲ  ಎಂದು ಅಳುತ್ತಿದ್ದುದು  ಕೇಳಿತು. ಆಕೆಯ ಹತ್ತಿರ ವಿಳಾಸವನ್ನು ಕೇಳಿ ಒಂದು ಚೀಟಿಯಲ್ಲಿ ಬರೆದುಕೊಂಡರು.  ಈಗ ಬರುತ್ತೇನೆ ಎಂದು ಫೋನಿಟ್ಟು,  ನಂತರ ಅಲ್ಲೇ ಹತ್ತಿರದಲ್ಲಿದ್ದ  ದೊಡ್ಡವರ ಹತ್ತಿರ ಈ ವಿಳಾಸ ಎಲ್ಲಿ ಬರುತ್ತದೆ ಎಂದು ಕೇಳಿದಾಗ, ಅಲ್ಲಿದ್ದವರು ಸ್ವಾಮಿ ಇಲ್ಲಿಂದ ಮುಖ್ಯರಸ್ತೆಗೆ ಹೋದರೆ ಅಲ್ಲಿ ಸ್ವಲ್ಪ ಇಳಿದು ಮುಂದೆ ಹೋದರೆ  ಈ ಜಾಗ ಸಿಗುತ್ತೆ ಆದರೆ ತುಂಬಾ ದೂರ. ಇನ್ನೊಂದು ಕಚ್ಚಾ ರಸ್ತೆ ಇದೆ ಅಷ್ಟು ಚೆನ್ನಾಗಿಲ್ಲ ಅಲ್ಲಿಂದ ಹೋದರೆ  ಸಣ್ಣ ಗುಡ್ಡ  ಇಳಿಯುತ್ತಿದ್ದಂತೆ ಮನೆ ಕಾಣುತ್ತದೆ ಎಂದರು. 

 ವೈದ್ಯರು  ತಡಮಾಡದೆ ರಸ್ತೆ ಚೆನ್ನಾಗಿಲ್ಲದಿದ್ದರೆ ಇಲ್ಲ ಬೇಗ ಹೋಗುವುದು ಮುಖ್ಯ ಎಂದುಕೊಂಡು  ಕಾರನ್ನು ಕಚ್ಚಾ ರಸ್ತೆ ಮೇಲೆ ಹತ್ತಿಸಿದರು. ಇನ್ನೇನು ಮುಖ್ಯರಸ್ತೆಗೆ ಎಡ ತಾಕಬೇಕು ಅನ್ನುವಾಗ ನೋಡಿದರೆ  ಕಚ್ಚಾ ರಸ್ತೆಗೂ ಮುಖ್ಯರಸ್ತೆಗೂ  ನಡುವೆ ಉದ್ದಕ್ಕೂ ಒಂದು ಆಳೆತ್ತರದ ಗುಂಡಿ ತೋಡಿದ್ದಾರೆ. ಏನು ಮಾಡಲು ತೋಚದೆ ಸುತ್ತಲೂ ನೋಡಿದರೆ ಯಾರೂ ಕಾಣಲಿಲ್ಲ. ಹೊತ್ತು ಬೇರೆ ಆಗಿದೆ. ಹೇಗೆ ಹೋಗುವುದು ಎಂದು ಯೋಚಿಸುತ್ತಿದ್ದಾಗ ದೂರದ ಹೊಲದಲ್ಲಿ ಜೆಸಿಬಿ ಯಂತ್ರವನ್ನು ಓಡಿಸುತ್ತಿದ್ದ ಯುವಕನೊಬ್ಬ ಕಂಡನು.  ತಕ್ಷಣ ಸರಸರ ನಡೆದು ಅಲ್ಲಿಗೆ ಹೋಗಿ ಜೆಸಿಬಿ ಚಾಲಕನ ಹತ್ತಿರ ಏ ಹುಡುಗ ಸ್ವಲ್ಪ ಬಾರಪ್ಪ ಅಲ್ಲಿ  ರಸ್ತೆಗೂ ಕಚ್ಚಾರಸ್ತೆ  ನಡುವೆ  ಮಣ್ಣು ತೋಡಿದ್ದಾರೆ. ಕಾರು ಹೋಗುವಷ್ಟು ಜಾಗವನ್ನು ಮುಚ್ಚಿ ಕೊಡು ಎಂದರು. ಆದರೆ ಆತ ಇಲ್ಲ ಸಾರ್ ನನಗೆ ಬೇಕಾದಷ್ಟು ಕೆಲಸವಿದೆ ಅಲ್ಲಿಗೆ ಬಂದು ಅಷ್ಟೊಂದು ಮಣ್ಣು ಮುಚ್ಚಲು ನನ್ನಿಂದ ಆಗಲ್ಲ ಎಂದ. ದಾರಿ ಕಾಣದೆ ಮತ್ತೆ  ಚಾಲಕನ  ಹತ್ತಿರ ನೋಡಪ್ಪ ಒಂದು ಮಗುವಿನ ಜೀವ ಏನಾದರೂ ಮಾಡಿ ಸಹಾಯ ಮಾಡಪ್ಪ  ಎಂದು ಕೋರಿದರು. ಆಮೇಲೆ ಆ ಹುಡುಗ  ಏನೋ ಸಾರ್ ನಿಮ್ಮದೊಂದು ರಗಳೆ ಎಂದುಕೊಂಡು ಅವರ ಜೊತೆಗೆ ಬಂದು ಆ ಕಂದಕಕ್ಕೆ ಜೆಸಿಪಿ ಯಿಂದ ಮಣ್ಣು ತುಂಬಿ ಕಾರು ಹೋಗುವಷ್ಟು ಜಾಗ ಗಟ್ಟಿ ಮಾಡಿಕೊಟ್ಟ. 

ತರಾತುರಿಯಲ್ಲಿ  ಆ ಹುಡುಗನಿಗೆ ಏನೂ  ಹೇಳದೆ ಕಾರು ಹತ್ತಿ ಅಂತೂ ಆ ಮನೆಗೆ ಬಂದರು. ಮನೆಯೊಳಗೆ ನಾಲ್ಕಾರು ಜನ ಹೆಂಗಸರು ಮಕ್ಕಳು ಸೇರಿ ಅಳುತ್ತಿದ್ದಾರೆ. ತಾಯಿಯ ರೋದನವಂತೂ  ನೋಡಲಾಗುತ್ತಿಲ್ಲ . ಮಗು ಒಂದು ಕಡೆ ಮಲಗಿದೆ ಮೈಯೆಲ್ಲಾ ನೀಲಿಗಟ್ಟಿದೆ. ತಕ್ಷಣ  ವೈದ್ಯರು ಮಗುವಿನ ಹತ್ತಿರ ಹೋಗಿ ಪರೀಕ್ಷಿಸಿ ಮಗುವನ್ನು  ತಲೆಕೆಳಕಾಗಿ ಎತ್ತಿ  ಅಲ್ಲಾಡಿಸಿದರು ಮಗುವಿನ ಬಾಯಿಂದ ಒಂದು ಅಂಗಿಯ ಗುಂಡಿ ಹೊರಗೆ ಬಿದ್ದಿತು ಮಗುವಿಗೆ ಪ್ರಥಮ ಚಿಕಿತ್ಸೆ ಮಾಡಿದರು ಮಗು ಉಸಿರಾಡಿತು. ಅಲ್ಲಿದ್ದವರ ಮುಖದಲ್ಲಿ ನಗು ಅರಳಿತು. ಮಗುವಿನ ತಾಯಿ ವೈದ್ಯರ ಕಾಲನ್ನು ಕಣ್ಣೀರಿನಿಂದಲೇ ತೊಳೆದಳು. ಅಂತೂ ಸಮಾಧಾನವಾಯಿತು. ಒಂದಷ್ಟು ಔಷಧಿ ಮಾತ್ರೆಗಳನ್ನು ಕೊಟ್ಟು ಮಗುವನ್ನು ನೋಡಿಕೊಳ್ಳುವಂತೆ ಹೇಳಿ ಬಂದರು. 

ತುಂಬಾ ಸಮಯವಾಗಿತ್ತು ಸೀದಾ ಮನೆಗೆ ಹೋದರು. ಒಂದೆರಡು ದಿನಗಳ ನಂತರ ವೈದ್ಯರು  ಆ ಮಾರ್ಗದಲ್ಲೇ ಒಂದು ಹಳ್ಳಿಗೆ ಹೋಗಬೇಕಾಗಿತ್ತು. ಹಾಗೆ ಬರುತ್ತಿದ್ದಾಗ ಜೇಸಿಬಿ ಚಾಲಕ ಕಣ್ಣಿಗೆ ಬಿದ್ದ. ಪಾಪ ಆವತ್ತು ನಾನು ಧನ್ಯವಾದವನ್ನು ಹೇಳದೆ ಹೊರಟೆ ಈ ದಿನ ಹೇಳಬೇಕು ಎಂದು ಕಾರಿನಿಂದ ಇಳಿದು, ಆತ ಇದ್ದಲ್ಲಿಗೆ ನಡೆದು ಹೊರಟರು. ಇವರು ಬರುತ್ತಿರುವುದನ್ನು ದೂರದಿಂದಲೇ ನೋಡಿದ ಹುಡುಗ ಓಡೋಡಿ ಬಂದ,  ಡಾಕ್ಟರು ಮನಸ್ಸಿನಲ್ಲಿ
" ಏ ಹುಡುಗ ನಿನ್ನಿಂದ ಆ ದಿನ ತುಂಬಾ ಉಪಕಾರವಾಯಿತು ನಿನ್ನಿಂದಾಗಿ ಒಂದು ಮಗುವಿನ ಜೀವ ಉಳಿಯಿತು ಎಂದು ಹೇಳಿ ಸ್ವಲ್ಪ ಹಣ ಕೊಡಬೇಕೆಂದು ಅಂದುಕೊಂಡರು" ಅಷ್ಟರೊಳಗೆ ಆ ಹುಡುಗ ಬಂದು ವೈದ್ಯರ
ಕಾಲು ಹಿಡಿದು ಸಾರ್ ನೀವು ದೇವರ ಹಾಗೆ ಬಂದು ನನ್ನ ಮಗುವಿನ ಪ್ರಾಣ ಉಳಿಸಿದ್ದೀರಿ ಎಂದನು. ಅದನ್ನು ಕೇಳಿ  ವೈದ್ಯರು ಇಲ್ಲಪ್ಪ ನಾನು ಬೇರೆ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದು ಎಂದರು. ಅದಕ್ಕಾತ  ಇಲ್ಲ  ಸಾರ್ ನಿಮಗೆ  ಆ ದಿನ ಫೋನ್ ಮಾಡಿದ್ದು ನನ್ನ ಹೆಂಡತಿ.  ಗುಂಡಿ ನುಂಗಿದ್ದು ನನ್ನ ಮಗು ನೀವು ಬರದಿದ್ದರೆ ಆ ದಿನ ನನ್ನ ವಂಶದ ಕುಡಿ ಹೋಗಿ ಬಿಡುತ್ತಿತ್ತು. ದೇವರ ಹಾಗೆ ಬಂದು ಪ್ರಾಣ ಉಳಿಸಿದಿರಿ ನಿಮ್ಮ ಉಪಕಾರ ಈ ಜನ್ಮದಲ್ಲಿ ಮರೆಯುವುದಿಲ್ಲ ಎಂದನು. 

ಯಾರಿಗೋ  ಸಹಾಯ ಮಾಡುವುದರಿಂದ ಪ್ರಯೋಜನವೇನು ಎನ್ನುವುದಕ್ಕಿಂತ ಇನ್ನಾರಿಗೋ  ಸಹಾಯ ಮಾಡುವುದರಿಂದ ನಮಗೆ ನಾವು ಸಹಾಯ ಮಾಡಿಕೊಂಡಂತಾಗುತ್ತದೆ. 

 ವೈದ್ಯೋ ನಾರಾಯಣೋ  ಹರಿ. 

ಈ ಕಥೆಯನ್ನು "ಕರುಣಾಳು ಬಾ ಬೆಳಕೆ" ಆಕಾಶವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಕೇಳಿದ್ದು. (ಕೃಪೆ:- ಡಾ. ಗುರುರಾಜ ಕರ್ಜಗಿ). 

ಕೃಪೆ,ಬರಹ: ಆಶಾ ನಾಗಭೂಷಣ.
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097