ದಿನಕ್ಕೊಂದು ಕಥೆ 1053
*🌻ದಿನಕ್ಕೊಂದು ಕಥೆ🌻 ಪ್ರಜೆಯೊಬ್ಬಳಿಗೆ ದೇಶದ ಪ್ರಧಾನಿಯ ಪ್ರಾಮಿಸ್ !*
ದೇಶದ ಪ್ರಧಾನಿಯೊಬ್ಬರು ಸಾಮಾನ್ಯ ಪ್ರಜೆಯೊಬ್ಬಳಿಗೆ ಮಾಡಿದ ಪ್ರಾಮಿಸ್ ಒಂದರ ಬಗೆಗಿನ ಕುತೂಹಲಕಾರಿಯಾದ ಪ್ರಸಂಗವೊಂದು ಇಲ್ಲಿದೆ.
ಬ್ರಿಟನ್ನಿನಲ್ಲಿ ವಿಕ್ಟೋರಿಯಾ ರಾಣಿಯ ಆಳ್ವಿಕೆಯಿದ್ದಾಗ, 1855ರಿಂದ 1865ರವರೆಗೆ ಲಾರ್ಡ್ ವಿಸ್ಕೌಂಟ್ ಪಾಮರ್ಸ್ಟನ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು. ರಾಣಿಯವರ ಮತ್ತು ಪ್ರಧಾನಿಗಳ ನಡುವೆ ಮನಸ್ತಾಪಗಳ ಶೀತಲ ಸಮರ ನಡೆಯುತ್ತಿತ್ತು. ಆದರೆ ಪ್ರಜಾಪ್ರಭುತ್ವದ ಮೂಲಕ ಪ್ರಧಾನಿಯಾಗಿದ್ದವರನ್ನು ಪದಚ್ಯುತಗೊಳಿಸಲು ರಾಣಿಯವರಿಗೆ ಸಾಧ್ಯವಿರಲಿಲ್ಲ. ಹಾಗಾಗಿ ಸಹಿಸಿಕೊಳ್ಳಬೇಕಿತ್ತು!
ಒಮ್ಮೆ ಸಚಿವ ಸಂಪುಟದ ನಡೆಯುತ್ತಿತ್ತು. ಗಹನ ಚರ್ಚೆಯಾಗುತ್ತಿತ್ತು. ಇದ್ದಕ್ಕಿದ್ದಂತೆ ಪ್ರಧಾನಿಯವರು ಈಗಲೇ ಬರುತ್ತೇನೆನ್ನುತ್ತ ಹೊರಕ್ಕೆ ಹೋದರು. ಅರ್ಧ ಗಂಟೆಯ ನಂತರ ಹಿಂತಿರುಗಿ ಸಭೆಯನ್ನು ಮುಂದುವರೆಸಿದರು. ಎಲ್ಲರಿಗೂ ಸಂಪುಟದ ಸಭೆಯನ್ನು ಮಧ್ಯದಲ್ಲೇ ಬಿಟ್ಟು ಪ್ರಧಾನಿಯವರು ಹೋಗಿ ಬರುವಂತಹ ಘನಕಾರ್ಯ ಏನಿರಬಹುದೆನ್ನುವ ಕುತೂಹಲ! ಹಿರಿಯ ಮಂತ್ರಿಗಳೊಬ್ಬರು ಧೈರ್ಯದಿಂದ ಪ್ರಶ್ನೆಯನ್ನು ಕೇಳಿಬಿಟ್ಟರು! ಪ್ರಧಾನಿಯವರು ತಕ್ಷಣ ಹೇಳಲು ಪ್ರಾರಂಭಿಸಿದರು.
ನಾನಿಂದು ಮುಂಜಾನೆ ಕಚೇರಿಗೆ ಬರುವಾಗ ರಸ್ತೆಯಲ್ಲಿ ಹತ್ತು ವರ್ಷದ ಬಾಲಕಿಯೊಬ್ಬಳು ನಡೆದು ಹೋಗುತ್ತಿದ್ದಳು. ಆಕೆಯ ಕೈಯಲ್ಲೊಂದು ಗಾಜಿನ ಜಾಡಿಯಿತ್ತು. ನೆಲ ಜಾರುತ್ತಿತ್ತು. ಆಕೆ ಜಾರಿಬಿದ್ದಳು. ಗಾಜಿನ ಜಾಡಿಯೂ ನೆಲಕ್ಕೆ ಬಿದ್ದು ಒಡೆದುಹೋಯಿತು. ಅದರಲ್ಲಿದ್ದ ಹಾಲೆಲ್ಲ ಚೆಲ್ಲಿಹೋಯಿತು. ಆಕೆ ಜೋರಾಗಿ ಅಳಲಾರಂಭಿಸಿದಳು. ನಾನು ಆಕೆಯ ಬಳಿ ಹೋಗಿ ಸಮಾಧಾನ ಮಾಡಿದೆ. ಆದರೆ ಆಕೆ ನಮ್ಮ ಮನೆಯಲ್ಲಿದ್ದ ಒಂದೇ ಗಾಜಿನ ಜಾಡಿ ಒಡೆದು ಹೋಯಿತು. ಹಾಲೆಲ್ಲ ಚೆಲ್ಲಿಹೋಯಿತು. ಮನೆಯಲ್ಲಿ ನಾನೇನು ಹೇಳಲಿ? ಎಂದು ಅಳುತ್ತಳುತ್ತಲೇ ಹೇಳಿದಳು.
ನಾನು ಬಹುಶಃ ಜಾಡಿ ಮತ್ತು ಹಾಲಿನ ಬೆಲೆಯಾದ ಅರ್ಧ ಪೌಂಡ್ ಹಣ ಕೊಟ್ಟರೆ ಆಕೆಗೆ ಯೋಚಿಸಿ ನನ್ನ ಕೋಟಿನ ಜೇಬಿಗೆ ಕೈಹಾಕಿದೆ. ಆದರೆ ನಾನು ಪರ್ಸ್ ತರಲು ಮರೆತಿದ್ದೆ. ಜೇಬಿನಲ್ಲಿ ಹಣವೇ ಇರಲಿಲ್ಲ! ನಾನು ಆಕೆಗೆ ‘ನಾನು ಪರ್ಸ್ ತಂದಿಲ್ಲ. ನೀನಿಲ್ಲೇ ನಿಂತಿರು ಮಗೂ! ನಾನು ಒಂದು ಗಂಟೆಯೊಳಗೆ ಬಂದು ನಿನಗೆ ಅರ್ಧ ಪೌಂಡ್ ಹಣ ಕೊಡುತ್ತೇನೆ’ ಎಂದು ಹೇಳಿ ಕಚೇರಿಗೆ ಬಂದೆ.
ಸಚಿವ ಸಂಪುಟದ ಸಭೆಯ ಅವಸರದಲ್ಲಿ ಆಕೆಯ ವಿಷಯ ಮರೆತುಬಿಟ್ಟೆ. ಸಭೆಯ ಮಧ್ಯೆ ನೆನಪಾಯಿತು. ದಡಬಡಿಸಿ ಎದ್ದು ಅಲ್ಲಿಗೆ ಧಾವಿಸಿ ಹೋದೆ. ಅಮಾಯಕ ಬಾಲಕಿ ಅಲ್ಲೇ ಅಳುತ್ತಾ ಕಾಯುತ್ತಿದ್ದಳು. ನಾನು ಹಣ ಕೊಟ್ಟು ಸಮಾಧಾನ ಮಾಡಿ ಬಂದೆ ಎಂದರು.
ಸಂಪುಟದ ಸಭೆಯಲ್ಲಿ ಕೊಂಚ ಹೊತ್ತು ಮೌನ ಆವರಿಸಿತ್ತು. ಆಗ ಹಿರಿಯ ಸಚಿವರೊಬ್ಬರು ಎದ್ದು ನಿಂತು ಕಿರಿಯ ಬಾಲಕಿಗೆ ಕೊಟ್ಟ ಮಾತನ್ನು ನೆರವೇರಿಸಲು ಬ್ರಿಟನ್ನಿನ ಹಿರಿಯ ಸಚಿವರಾದ ನಾವೆಲ್ಲ ಕಾಯುತ್ತ ಕೂರುವಂತೆ ಮಾಡಿದ್ದು ಸರಿಯೇ? ಎಂದು ಆಕ್ಷೇಪಿಸಿದಾಗ ಪ್ರಧಾನಿಯವರು ನೀಡಿದ ಉತ್ತರ ಚರಿತ್ರಾರ್ಹ! ಅವರು ಆಕೆ ಹಿರಿಯಳೊ, ಕಿರಿಯಳೋ ಅದು ಮುಖ್ಯವಲ್ಲ! ಆಕೆ ದೇಶದ ಪ್ರಜೆ. ಒಬ್ಬ ಪ್ರಜೆಗೆ ಕೊಟ್ಟ ಮಾತನ್ನು ಪ್ರಧಾನಿ ಉಳಿಸಿಕೊಳ್ಳದಿದ್ದರೆ, ಪ್ರಧಾನಿಯ ಪದವಿಗೆ ಅವಮಾನ. ಅದೂ ಅಲ್ಲದೆ, ಜಾರಿ ಬೀಳುವಂತಹ ಸ್ಥಿತಿಯಲ್ಲಿರುವ ರಸ್ತೆಯಲ್ಲಿ ಆಕೆ ಜಾರಿ ಬಿದ್ದರೆ ಅದರ ಜವಾಬ್ದಾರಿ ಸರಕಾರದ್ದು! ನಾನು ಹೋಗಲೇಬೇಕಿತ್ತು. ದಯವಿಟ್ಟು ನೀವೆಲ್ಲ ಕ್ಷಮಿಸಬೇಕು ಎಂದಾಗ, ಯಾವ ಮಂತ್ರಿವರ್ಯರೂ ಮಾತನಾಡಲಿಲ್ಲವಂತೆ. ಅಹುದಹುದು ಎನ್ನುವಂತೆ ಎಲ್ಲರೂ ತಲೆ ಆಡಿಸಿದರಂತೆ!
ಜಗತ್ತಿನ ಯಾವುದೇ ದೇಶವಿರಲಿ, ಅಲ್ಲಿನ ಸರಕಾರದಿಂದ ವಾಗ್ದಾನಗಳನ್ನು ಪ್ರಜೆಗಳು ಪಡೆಯುತ್ತಲೇ ಬರುವುದು ಸಾಮಾನ್ಯ ಸಂಗತಿ. ಆದರೆ ವಾಗ್ದಾನಗಳನ್ನು, ಅವು ಸಣ್ಣದಿರಲಿ, ದೊಡ್ಡದಿರಲಿ, ಅವುಗಳನ್ನು ಮರೆಯದೆ ಈಡೇರಿಸುವ ಪ್ರಧಾನಿಗಳು ಅಸಾಮಾನ್ಯರಲ್ಲವೇ? ಅಂತಹ ಪ್ರಧಾನಿಗಳಿಗೆ ಪ್ರಣಾಮಗಳನ್ನು ನಾವು ಸಲ್ಲಿಸಬಹುದಲ್ಲವೇ?
ಕೃಪೆ :ಷಡಕ್ಷರಿ (ವಿಶ್ವ ವಾಣಿ). ಸಂಗ್ರಹ :ವೀರೇಶ್ ಅರಸಿಕೆರೆ.
*************************************
*🌻ದಿನಕ್ಕೊಂದು ಕಥೆ🌻*
ಶತಪದಿ ಹುಳವೊಂದು,(ಇದಕ್ಕೆ ನಾವು ಒನಕೆ ಹುಳ ಎನ್ನುತ್ತೇವೆ) ತನ್ನ ಪಾಡಿಗೆ ತಾನು ನೆಡೆದು ಹೋಗುತ್ತಿತ್ತು. ಒಂದು ಮೊಲ ಅದನ್ನು ನೋಡಿತು, ಅದಕ್ಕೆ ಆಶ್ಚರ್ಯ ವಾಯಿತು . ಅಬ್ಬಾ ಇದಕ್ಕೆ ನೂರು ಕಾಲು,ನೆಡೆಯುವಾಗ , ಯಾವ ಕಾಲನ್ನು ಮೊದಲಿಡುವುದು,ನಂತರ ಯಾವುದನ್ನು ಇಡುವುದು, ಹೀಗೆ ನೂರು ಕಾಲನ್ನು ಹೇಗೆ ಸಂಭಾಳಿಸುವುದು ಎಂದು.
ಏ ಒನಕೆ ಹುಳವೇ ಸ್ವಲ್ಪ ನಿಲ್ಲು ,ನಿನಗೆ ನೂರು ಕಾಲು ಇದೆಯಲ್ಲಾ ,ಇದನ್ನು ನೀನು ಹೇಗೆ ಸಂಭಾಳಿಸಿಕೊಂಡು ನೆಡೆಯುತ್ತಿರುವೆ? ಮೊದಲು ಯಾವ ಕಾಲನ್ನು ಇಡುವೆ,ಆಮೇಲೆ ಯಾವ ಕಾಲು ಇಡುವೆ, ನನಗಂತೂ ಇದನ್ನು ಯೋಚನೆ ಮಾಡಿದರೇ ತಲೆ ಕೆಡುತ್ತಿದೆ ಎಂದು ಮೊಲ ಹೇಳಿತು.
ಪಾಪ ಒನಕೆ ಹುಳಕ್ಕೆ ಇದುವರೆಗೂ ಈ ಯೋಚನೆಯೇ ಬಂದಿರಲಿಲ್ಲ. ತನ್ನ ಪಾಡಿಗೆ ತಾನು ಓಡಾಡುತ್ತಿತ್ತು,ಒಮ್ಮೆ ಬಾಗಿ ತನ್ನನ್ನೇ ತಾನು ನೋಡಿಕೊಂಡು ಅದಕ್ಕೂ ಗಾಬರಿಯಾಯಿತು.ನೂರು ಕಾಲೇ ನನಗಂತೂ ಅದನ್ನು ಎಣಿಸಲಿಕ್ಕೂ ಬರುವುದಿಲ್ಲ, ಇದು ನನಗೆ ಗೊತ್ತೇ ಇರಲಿಲ್ಲ ,ಈಗ ನೀನು ಹೇಳಿದ್ದಕ್ಕೇ ನನಗೆ ಗೊತ್ತಾಗಿದ್ದು, ಇದನ್ನೆಲ್ಲಾ ,ಚೆನ್ನಾಗಿ ಯೋಚಿಸಿ ನಿನಗೆ ಆಮೇಲೆ ತಿಳಿಸುತ್ತೇನೆ ಎಂದು ಹೇಳಿತು.
ಮೊಲ ಹೇಳಿದ ವಿಷಯವನ್ನೇ ಚಿಂತಿಸುತ್ತಾ ಶತಪದಿ ನೆಡೆಯಲು ಹೋಯಿತು, ಕಸಿವಿಸಿ ಯಾಗಿ ಮುಗ್ಗರಿಸಿ ಬಿದ್ದು ಬಿಟ್ಟಿತು. ನೂರು ಕಾಲನ್ನು ಸಂಬಾಳಿಸಿಕೊಂಡು ನೆಡೆಯುವುದು ಸುಲಭವೇ
ಹೆಜ್ಜೆ ಹೆಜ್ಜೆ ಗೂ ಬೀಳುತ್ತಿದೆ. ಕಡೆಗೆ ಬಳಲಿ ಬೆಂಡಾಗಿ ಹೇಳಿತು, ಅಯ್ಯೋ ದುಷ್ಟ ಮೊಲವೇ ನನಗೆ ನೀನು ಎಂಥಹ ಕಷ್ಟ ತಂದು ಬಿಟ್ಟೆ, ನನಗಿನ್ನು ನೆಡೆಯಲು ಆಗದು, ನೂರು ಕಾಲುಗಳ ಪ್ರಶ್ನೆ ಭೂತದಂತೆ ಕಾಡುತ್ತಿದೆ ಎಂದು ಒಂದೆಡೆ ಸುರುಳಿ ಸುತ್ತಿಕೊಂಡು ಕೂತಿತು, ನಂತರ ಹೊಟ್ಟೆ ಹಸಿಯಲು ಸುರುಳಿ ಬಿಚ್ಚಿ ಸೆಟೆದು ಮೊಲ ಹೇಳಿದ ನೂರು ಕಾಲುಗಳ ವಿಷಯವನ್ನು ಮರೆತು ,ಹಿಂದಿನಂತೆ ನೆಡೆಯತೊಡಗಿತು.
ಇದು ಪ್ರಾಣಿ, ಪಕ್ಷಿ ಅಥವಾ ಕೀಟಗಳ ವಿಷಯವಲ್ಲ, ಅವುಗಳು ಈ ರೀತಿ ಯೋಚಿಸುವುದೂ ಇಲ್ಲ. ಅಸ್ತಿತ್ವ ಹೇಗಿದೆಯೋ ಹಾಗೇ ಇರುತ್ತವೆ. ಇದು ಮನುಷ್ಯನ ಬುದ್ಧಿ ಗೆ ಸಂಬಂಧ ಪಟ್ಟ ವಿಚಾರ, ಅವರಪಾಡಿಗೆ ಅವರು ಹೇಗೋ ಇದ್ದ ಮನುಷ್ಯರಿಗೆ, ಮೊಲ ಮಾಡಿದ ಹಾಗೆ ಇಲ್ಲ ಸಲ್ಲದ ವಿಚಾರಗಳನ್ನು ಅವರ ತಲೆಯಲ್ಲಿ ತುರುಕಿ, ಅವರು ಚಿಂತೆಯಿಂದ ಒದ್ದಾಡುವ ಹಾಗೆ ಮಾಡುವುದು ಮನುಷ್ಯನ ಗುಣ.ಯಾವ ವಿಚಾರವಾಗಿ ಯಾದರೂ ಚಿಂತೆ ಶುರುವಾಯಿತೆಂದರೆ,ಭೂತದ ರೀತಿಯಲ್ಲಿ ನಮ್ಮನ್ನು ಕಾಡುವುದು. ಒನಕೆ ಹುಳವೇನೊ ಅದರಿಂದ ಬಿಡಿಸಿಕೊಂಡಿತು,ಆದರೆ ಮನುಷ್ಯ ಚಿಂತೆಯಿಂದ ಹೊರಬರುವುದು ಬಹಳ ಕಷ್ಟ.
ಮನುಷ್ಯ ಯಾರಿಗೂ ಸಹಾಯ ಮಾಡದಿದ್ದರೂ ಪರವಾಗಿಲ್ಲ, ಆದರೆ ಮೊಲ ಮಾಡಿದ ಕೆಲಸವನ್ನಂತೂ ಮಾಡಬಾರದು, ಚಿಂತೆಯ ಬೀಜ ಬಿತ್ತುವುದು ಬಲು ಸುಲಭ,ಅದರಿಂದ ಹೊರಬರುವುದು ತುಂಬಾ ಕಷ್ಟದ ಕೆಲಸ.
ಕೃಪೆ: ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment