ದಿನಕ್ಕೊಂದು ಕಥೆ 1056

*🌻ದಿನಕ್ಕೊಂದು ಕಥೆ🌻*                                                                     *ದೇವರಾದ ಡಾಕ್ಟರ್* 
                   
     ಅರ್ಧರಾತ್ರಿಯ ಸಮಯ. ಆ ಡಾಕ್ಟರ್ ತಮ್ಮ ಕೆಲಸವೆಲ್ಲಾ ಮುಗಿಸಿ ಮಲಗಿ ಹತ್ತು ನಿಮಿಷವಾಗಿಲ್ಲ, ಯಾರೋ ಬಾಗಿಲು ತಟ್ಟಿದರು.
    ‌ಡಾಕ್ಟರು ಬಹಳ ನಿಯತ್ತಿನ ಮನುಷ್ಯ. ಬೇಸರ ಪಟ್ಟುಕೊಳ್ಳದೆ ಹೋಗಿ ತೆಗೆದರು. ಬಂದ ಮನುಷ್ಯ ಇವರ ಕಾಲು ಹಿಡಿದುಕೊಂಡು "ಸಾರ್, ಒಬ್ಬ ಗರ್ಭಿಣಿ ಹೆಂಗಸು ಬಹಳ ಪ್ರಸವವೇದನೆ ಅನುಭವಿಸುತ್ತಿದ್ದಾಳೆ ಸಾರ್. ಆಕೆಯನ್ನು ನೀವೇ ಕಾಪಾಡಬೇಕು ಸಾರ್. ದಯಮಾಡಿ ನೀವೇ ಬಂದು ಅವಳನ್ನು ಉಳಿಸಬೇಕು, ಆಗಲ್ಲ ಅನ್ನಬೇಡಿ ಸಾರ್" ಎಂದು ಅಲವತ್ತುಕೊಂಡ.
 ಸುಮಾರು ೭೦ ವರ್ಷಗಳ ಕೆಳಗೆ ಮಹಾರಾಷ್ಟ್ರದ ಮೂಲೆಯಲ್ಲೊಂದು ಗ್ರಾಮದಲ್ಲಿನ ಡಾಕ್ಟರ್ ಅವರು. ತಕ್ಷಣ ಅವನೊಂದಿಗೆ ಹೊರಟರು.
    ಆ ಹೆಂಗಸು ೧೯-೨೦ರ ವಯಸ್ಸಿನವಳಿದ್ದಿರಬೇಕು ಎಂದು ತಿಳಿಯಿತು. ಪ್ರಸವ ನಿಜಕ್ಕೂ ಕಷ್ಟದಾಯಕ ವಾಗಿತ್ತು ಆಕೆಗೆ. ಬೆಳಗಿನ ಜಾವವಾಗಿತ್ತು ಆಗ. ಆ ಹೆಂಗಸು ಡಾಕ್ಟರ ಕೈಹಿಡಿದುಕೊಂಡು "ಡಾಕ್ಟರ್ ಸಾಹೇಬರೇ, ನನ್ನ ಗಂಡ ನನ್ನ ಬಿಟ್ಟು ಹೋದ. ನಾನು ದಟ್ಟ ದಾರಿದ್ರ್ಯದಲ್ಲಿದ್ದೇನೆ. ನಾನು ಹುಟ್ಟುವ ಮಗುವನ್ನು ಸಾಕುವ ಸ್ಥಿತಿಯಲ್ಲಿ ಇಲ್ಲ. ನನ್ನನ್ನು ಉಳಿಸಬೇಡಿ. ಬೇಡಿಕೊಳ್ಳುತ್ತೇನೆ ನನ್ನನ್ನು ಸಾಯಿಸಿಬಿಡಿ. ಬದುಕಿ ಏನೂ ಉಪಯೋಗವಿಲ್ಲ".
    ಡಾಕ್ಟರ್ ಗೇ ಮನಸ್ಸಿನಲ್ಲಿ ಕಸಿವಿಸಿಯಾಯಿತು. ಎಲ್ಲಾ ಪೇಷಂಟ್ ಗಳೂ 'ಹೇಗಾದರೂ ಮಾಡಿ ನನ್ನನ್ನು ಉಳಿಸಿ' ಎಂದು ಬೇಡಿಕೊಂಡರೆ ಈ ಅಸಹಾಯಕ ಹೆಂಗಸು ನನ್ನನ್ನು ಉಳಿಸಬೇಡಿ ಎಂದು ಬೇಡಿಕೊಳ್ಳುತ್ತಿದ್ದಾಳೆ. ಅಂದಮೇಲೆ ಅವಳಿಗೆ ಬದುಕು ಎಷ್ಟು ದುರ್ಭರವೆನಿಸಿರಬೇಡ, ಎನಿಸಿ ಹೇಳಿದರು "ನಾನು ಡಾಕ್ಟರ್ ಆಗಿ ನನಗೆ ಪೇಷಂಟ್ ಗಳನ್ನು ಉಳಿಸುವುದು ಮಾತ್ರ ಗೊತ್ತು ಹೊರತು ಸಾಯಿಸುವುದು ಗೊತ್ತಿಲ್ಲವಮ್ಮಾ. ನೀನು ಯೋಚನೆ ಮಾಡಬೇಡ. ಅದರ ವಿಚಾರ ಹೆರಿಗೆಯ ನಂತರ ನೋಡಿಕೊಳ್ಳೋಣ" ಎಂದು‌ ಹೇಳಿ ಸಮಾಧಾನ ಪಡಿಸಿ ಪ್ರಸವದ ಕಾರ್ಯವನ್ನು ಮುಂದುವರೆಸಿದರು.
ಕೆಲವು ಗಂಟೆಗಳ ಕಾಲ ಪ್ರಯಾಸ ಪಟ್ಟಮೇಲೆ ಕೊನೆಗೆ ಹೆರಿಗೆಯಾಗಿ ಹೆಣ್ಣು ಮಗುವನ್ನು ಹೆತ್ತಳು. ಸಂತೋಷ ಪಡಬೇಕೋ ದುಃಖ ಪಡಬೇಕೋ‌ ತಿಳಿಯದ ಸ್ಥಿತಿಯಲ್ಲಿದ್ದಳು ಆಕೆ.
     ಡಾಕ್ಟರ್ ಹೊರಡಲು ಸಿದ್ಧರಾಗುತ್ತಾ ಆಕೆಗೆ ಆಶ್ವಾಸನೆ ಕೊಟ್ಟರು " ನೀನು ಚಿಂತೆ ಮಾಡಬೇಡ ತಾಯಿ. ನಾನೇನು ಫೀಸ್  ತಗೋಳ್ತಾ ಇಲ್ಲ. ಬದಲು ನಾನೇ ನಿನಗೆ ಈ ನೂರು ರೂಪಾಯಿ ಕೊಡ್ತಿದ್ದೀನಿ ಇಟ್ಟುಕೋ.
ನಿನಗೆ ಯಾರೂ ಇಲ್ಲ ಅಂದುಕೋಬೇಡ. ನಾನಿದ್ದೀನಿ. ನೀನು ಸುಧಾರಿಸಿಕೊಂಡಮೇಲೆ ಹತ್ತಿರದ ಪುಣೆಗೆ ಹೋಗಿ ಅಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ಇಂಥ ಹೆಸರಿನ ಗುಮಾಸ್ತ ಒಬ್ಬರಿದ್ದಾರೆ, ಅವರಿಗೆ ಈ ಪತ್ರ ಕೊಡು. ನಿನಗೆ ಸಹಾಯ ಮಾಡುತ್ತಾರೆ."  
ಡಾಕ್ಟರು ಏನೋ ಒಂದು ಸಂತೃಪ್ತಿಯಿಂದ ವಾಪಸ್ ಹೊರಟರು.
     ಅವರು ಹೇಳಿದಂತೆ ಆಕೆ ಪುಣೆಗೆ ಹೋಗಿ ಆ ಗುಮಾಸ್ತೆಯನ್ನು ಭೇಟಿಯಾಗಿ ಡಾಕ್ಟರ್ ಕೊಟ್ಟ ಪತ್ರವನ್ನು ಕೊಟ್ಟಳು. ಆ ಪತ್ರ ಓದಿದ ಕೂಡಲೇ ಆತ ಆಕೆಯನ್ನು ನರ್ಸಿಂಗ್ ಟ್ರೈನಿಂಗ್ ಗೆ ಸೇರಿಸಿಕೊಂಡು ಹಾಸ್ಟೆಲ್ನಲ್ಲಿ ವಾಸಕ್ಕೂ ಅನುವುಮಾಡಿಕೊಡುತ್ತಾರೆ. 
೮ ತಿಂಗಳ ಟ್ರೈನಿಂಗ್ ಮುಗಿದ ನಂತರ ಉದ್ಯೋಗವನ್ನೂ ಕೊಡಿಸುತ್ತಾರೆ.
     ಇಪ್ಪತ್ತೈದು ವರ್ಷಗಳು ಕಳೆದಿವೆ. ಆ ಡಾಕ್ಟರ್ ಈಗ ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಯೂನಿವರ್ಸಿಟಿಯವರು
ತಮ್ಮ ಮೇಧಾವಿ ವಿದ್ಯಾರ್ಥಿಗಳಿಗೆ ಬಂಗಾರದ ಮೆಡಲ್ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಇವರನ್ನು ಆಹ್ವಾನಿಸಿದ್ದಾರೆ. ಆ ಕಾರ್ಯಕ್ರಮ ಮುಗಿದ‌ನಂತರ 'ಚಂದ್ರಾ' ಹೆಸರಿನ ಒಬ್ಬ ಯುವತಿ ಬಂದು ಈ ಡಾಕ್ಟರ್ ರನ್ನು ಭೇಟಿಯಾಗಿ 'ಸರ್, ತಾವು ದಯವಿಟ್ಟು ನಮ್ಮ ಮನೆಗೆ ಬರಬೇಕು' ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಾಳೆ. ಇನ್ಯಾವುದೇ ಡಾಕ್ಟರ್ ಆಗಿದ್ದರೆ ಸಾಧ್ಯವಿಲ್ಲ ಎಂದು ಹೊರಟುಬಿಡುತ್ತಿದ್ದರೇನೋ. ಆದರೆ ಈತ ಸ್ವಲ್ಪ ಮೃದುಮನಸ್ಸಿನವರು. ವಾಪಸ್ ಮನೆಗೆ‌ಹೋಗುವಾಗ ಹಾಗೇ ಈ ಹುಡುಗಿಯ ಮನೆಗೆ ಹೊಕ್ಕು ಹೋದರೇನಾಯ್ತು, ಎಂದುಕೊಂಡು ಆಗಲಿ ಎಂದೊಪ್ಪಿ ಅವಳ ಜೊತೆ ಹೊರಡುತ್ತಾರೆ.
      ಅಲ್ಲಿ ಆ ಹುಡುಗಿಯ ತಾಯಿ ಟೀ ತಂದು ಕೊಡುತ್ತಾ ತನ್ನ ಪರಿಚಯ, ಊರು ಇತ್ಯಾದಿ ಹೇಳುವಾಗ ಡಾಕ್ಟರರ ಮನಸ್ಸು ತಾವು ಅದೇ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳನ್ನು ನೆನೆಯುತ್ತದೆ. ಅಷ್ಟರಲ್ಲಿ ಆ ಯುವತಿ ಡಾಕ್ಟರ್ ರ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಾಳೆ. ಡಾಕ್ಟರಿಗೆ ಬಹಳ ಸಂಕೋಚವೆನಿಸಿ ', ಯಾಕಮ್ಮ ನನಗೆ ನಮಸ್ಕಾರ ಮಾಡುತ್ತಿದ್ದೀಯ' ಎಂದು ಕೇಳಿದಾಗ ಅವಳ ತಾಯಿ ಹೇಳುತ್ತಾಳೆ ' ಡಾಕ್ಟರ್ ಸಾಹೇಬರೇ, ಅವತ್ತು ರಾತ್ರಿ ನನ್ನ ಗುಡಿಸಿಲಿಗೆ ಬಂದು ನನಗೆ ಹೆರಿಗೆ ಮಾಡಿಸಿದಿರಲ್ಲ, ನೆನಪಿದೆಯೇ. ಆಗ ಹುಟ್ಟಿದ ಹೆಣ್ಣು ಮಗುವೇ ಈ ಹುಡುಗಿ.  ಅಂದು ನೀವು ನನಗೆ ತೋರಿಸಿದ ದಯೆಯಿಂದಾಗಿ ನಾನು ಆ ಮಗುವನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿ ಹೆಚ್ಚಿನ ವಿದ್ಯಾಭ್ಯಾಸ ಕೂಡಾ ಕೊಡಿಸಲಿಕ್ಕಾಯಿತು. ನೀವು ನನ್ನ ಪಾಲಿನ ದೇವರಾಗಿ ಬಂದು ನನ್ನನ್ನು ಕಾಪಾಡಿದಿರಿ. ನನ್ನ ಬದುಕಿಗೊಂದು ದಾರಿಮಾಡಿಕೊಟ್ಟಿರಿ. ಅದಕ್ಕೇ ಅವಳಿಗೆ ನಿಮ್ಮ ಹೆಸರನ್ನೇ ಇಟ್ಟಿದ್ದೇನೆ, 'ಚಂದ್ರಾ' ಎಂದು"
ಎಂದು ಕಣ್ಣೊರೆಸಿಕೊಂಡಳು.  
ಚಂದ್ರಾ ಹೇಳಿದಳು "ಇಷ್ಟರಲ್ಲೇ ನಾವು ಬಡವರಿಗಾಗಿ ಉಚಿತ ಆಸ್ಪತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ. ಅದಕ್ಕೂನಿಮ್ಮ ಹೆಸರೇ ಇಡುತ್ತೇವೆ. ದಯಮಾಡಿ ಅದರ ಉದ್ಘಾಟನೆಗೆ ನೀವೇ ಬರಬೇಕು ಸರ್". ಅವಳ ಮಾತು ಡಾಕ್ಟರ ಕಣ್ಣಲ್ಲೂ ನೀರು ತರಿಸಿತು. ಆಗಲಿ ಎಂದು ತಲೆಯಾಡಿಸಿದರು.
      ಆ ಡಾಕ್ಟರ್ ಯಾರಿರಬಹುದು ಗೊತ್ತೇ?
ಇನ್ಯಾರೂ ಅಲ್ಲ; ಡಾಕ್ಟರ್ ರಾಮಚಂದ್ರ ಕುಲಕರ್ಣಿ ಯವರು.
ಇನ್ಫೋಸಿಸ್ ಖ್ಯಾತಿಯ ಶ್ರೀಮತಿ ಸುಧಾ ಮೂರ್ತಿ ಯವರ ತಂದೆ. ಆಕೆಯೂ ತಂದೆಯ ಹೆಜ್ಜೆಗಳಲ್ಲೇ ಮುಂದುವರೆದು ಕರುಣಾಮಯಿ ಸಮಾಜಸೇವಕಿಯಾಗಿ ಸೇವೆ ಸಲ್ಲಿಸುತ್ತಿರುವ ವಿಷಯ ನೀವೆಲ್ಲಾ ಬಲ್ಲಿರಷ್ಟೇ. ಇಲ್ಲಿ 'ತಂದೆಯಂತೆ ಮಗಳು'.
              
ಸಂಗ್ರಹಾನುವಾದ:ಜೆ.ಬಿ.ಪ್ರಸಾದ್.                             ಕೃಪೆ ಸುವರ್ಣ ಮೂರ್ತಿ.                                                ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097