ದಿನಕ್ಕೊಂದು ಕಥೆ 1066

*🌻ದಿನಕ್ಕೊಂದು ಕಥೆ🌻*                                          *"ಪಾದಚಾರಿ ಮಾರ್ಗದಿಂದ ರಾಷ್ಟ್ರಪತಿಗಳ ಅಂಗಳದವರೆಗೆ"*

ಹುಟ್ಟಿದ್ದು ಮಂಜುನಾಥ ಆಗಿ, ಬೆಳೆದಿದ್ದು ಮಂಜಮ್ಮನಾಗಿ. ಆಮೇಲೆ ಹೊಟ್ಟೆಪಾಡಿಗಾಗಿ ಕೈಗೊಂಡ ಕಲಾ ವೃತ್ತಿಯೇ ಇವರನ್ನು ಮಂಜಮ್ಮ ಜೋಗತಿಯನ್ನಾಗಿ ರೂಪಿಸಿತು. ಅವರು ಈಗ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಹೌದು. ಉತ್ತರ ಕರ್ನಾಟಕದ ಭಾಗದಲ್ಲಿ ಈಗಲೂ ಉಳಿದುಕೊಂಡು ಬಂದಿರುವ . ಜೋಗತಿ’ ಕಲಾ ಪ್ರಕಾರದ ಪ್ರಮುಖ ರಾಯಭಾರಿಯೂ ಹೌದು.

*ಉರುಳಾದ ಕರಳು ಸಂಬಂಧ :*

ಮಂಜುನಾಥ ನಾಗಿದ್ದ ಮಂಜಮ್ಮನ ಜನ್ಮಭೂಮಿ ಬಳ್ಳಾರಿ ಜಿಲ್ಲೆ ಕಲ್ಲುಕಂಬ. ಈಗ ಕರ್ಮಭೂಮಿ ಮರಿಯಮ್ಮನ ಹಳ್ಳಿ. ತಂದೆ ಹನುಮಂತಪ್ಪ ಶೆಟ್ಟಿ, ತಾಯಿ ಜಯಲಕ್ಷ್ಮೀ. ತಂದೆ ಕಂಪ್ಲಿ ಶುಗರ್‌ಫ್ಯಾಕ್ಟರಿಯಲ್ಲಿ ಉದ್ಯೋಗಿ. ಆರು ಎಕರೆ ಜಮೀನು ಅಥವಾ ವ್ಯಾಪಾರ -ಈ ಎರಡರಲ್ಲಿ ಯಾವುದನ್ನುಆಯ್ಕೆ ಮಾಡಿಕೊಂಡರೂ ತಂದೆ-ತಾಯಿಗೆ ಒಪ್ಪಿಗೆ ಇತ್ತು. ಆದರೆ, ತಾನು ಹುಡುಗನಾಗಿ ದುಡಿಯಲಾರೆ, ಹುಡುಗಿಯಂತೆ ನೃತ್ಯ ಮಾಡುವೆ ಎಂದಾಗ ಯಾರೂ ಒಪ್ಪಲಿಲ್ಲ. ಎಸ್‌ಎಸ್‌ಎಲ್‌ಸಿ ಮುಗಿದ ಮೇಲೆ ದೇಹದ ಚಿತ್ರ ಬದಲಾದಂತೆ ಮನೆಯ ಚಿತ್ರವೂ ಬದಲಾಯಿತು. ಹೆಣ್ಣಂತೆ ಇರುವುದನ್ನು ಸಹಿಸದ ಸಮಾಜ ಗೇಲಿ ಮಾಡಿತು. ಕುಟುಂಬದವರು ಕಂಬಕ್ಕೆ ಕಟ್ಟಿ ಹೊಡೆದರು. ಸಂಬಂಧಕ್ಕೆ ಬೇಲಿ ಹಾಕಿದರು. ದುಡಿಯಲೆಂದು ಹಚ್ಚಿದರು. ಅಣ್ಣನೊಂದಿಗೆ ಕಿರಾಣಿ ಅಂಗಡಿ ಕೆಲಸಕ್ಕೆ ಕೂಡಿಸಿದರು. ಸ್ವತಃ ಜೋಗಪ್ಪನಾಗಿದ್ದ ಸೋದರ ಮಾವ ಬುದ್ದಿ ಕಲಿಸಲು ಮನಬಂದಂತೆ ಒದ್ದರೂ ಹೆಣ್ಣಿನ ನಡೆ ನುಡಿ ನಿಲ್ಲಲಿಲ್ಲ. ಕೊನೆಗೆ ಹುಲಿಗೆಮ್ಮ ದೇವಸ್ಥಾನದಲ್ಲಿ ಪೂಜಾರಿಯಿಂದ ಸೀರೆ, ಬಳೆ ತೊಡಿಸಿ, ಮುತ್ತು ಕಟ್ಟಿಸಿದರೂ ಮನೆಯಲ್ಲಿ ಮಾತ್ರ ಪರಕೀಯಭಾವ ಕೊಲ್ಲತೊಡಗಿತು.

ನೆರೆಹೊರೆಯಲ್ಲಿ ಉರಿಗಣ್ಣಿಗೆ ತುತ್ತಾಗಿ ಬದುಕುವುದು ಕಷ್ಟ. ಆದರೆ ಮಂಗಳಮುಖೀ ವೇಷ ಕಳಚಿದರೆ ಹೋಗುವಂಥದ್ದಲ್ಲ ಎಂಬುದು ಮನವರಿಕೆಯಾಯಿತು. ಮನೆ – ಮನ ಎರಡನ್ನೂಎದುರಿಸಲಾಗದೇ ಸಾಯಲು ನಿರ್ಧರಿಸಿ ವಿಷ ಕುಡಿದರೆ ಇನ್ನಷ್ಟು ಸಂಕಟ ತಂದಿತು. ದಾವಣಗೆರೆ ಆಸ್ಪತ್ರೆಯಲ್ಲಿ ಸಾಯದೇ ಬದುಕಿದ್ದೂ ಪವಾಡ. 45 ದಿನಗಳಾದರೂ ತಂದೆ, ಅಮ್ಮ, ತಮ್ಮ, ತಂಗಿ ಯಾರೂನೋಡಲು ಬರಲಿಲ್ಲ. ಆಗ ಇವರೇನು ಮಾಡಿದರು ಗೊತ್ತೇ? ತುಂಬಿದ ತಂಬಿಗೆ ಹೊತ್ತು ಕುಣಿತ ಶುರು
ಮಾಡಿದರು. ಆಸ್ಪತ್ರೆಯ ವಾರ್ಡನ್, ರೋಗಿಗಳು ಖುಷಿಯಾಗಿ ಹತ್ತಿಪ್ಪತ್ತು ಪೈಸೆ ಭಿಕ್ಷೆ ಹಾಕಿದರು. ತಪ್ಪೋ ಒಪ್ಪೋ ಕುಣಿದರೆ ಹೊಟ್ಟೆ ತುಂಬುತ್ತದೆ ಎಂಬ ಭಾವ ಬಲಿತು ಬಂತು, ಕಾಲಿಗೆ ಗೆಜ್ಜೆ ಕಟ್ಟಿದರು.

*ಗುರುವಾಗಿ ಉಡಿತುಂಬಿದ ಕಾಳವ್ವ :*

ಕೊಡ ಹೊತ್ತು ಕುಣಿದರೆ ಹೊಟ್ಟೆ ತುಂಬುವುದಿಲ್ಲ ಅನ್ನಿಸಿದಾಗ ಇಡ್ಲಿ ಮಾರಿಯಾಯಿತು. ಟ್ಯೂಶನ್‌ಹೇಳಿಯಾಯಿತು. ದೇವರ ಗುಡಿ ಸಾರಿಸಿ, ದೀಪ ಹಚ್ಚಿ ನೈವೇದ್ಯ ಸಿಗುವುದೆಂದು ಕಾದಿದ್ದೂ ಆಯಿತು. ಒಂದು ದಿನದ ಊಟಕ್ಕೂ ಗತಿ ಇಲ್ಲವಾದಾಗ ಆಸರೆಗೆ ಸಿಕ್ಕಿದ್ದು, ಮರಿಯಮ್ಮನ ಹಳ್ಳಿಯ ಕಾಳವ್ವ ಜೋಗತಿ,

ಆಕೆ ಜಾನಪದ ಜೋಗತಿ ನೃತ್ಯದ ರೇಣುಕಾ ಯಲ್ಲಮ್ಮ ಕಥನ ಗೀತದ ಪ್ರಸಿದ್ಧ ಕಲಾವಿದೆ. ತನ್ನ ನಂತರ ಈ ಕಲೆಯನ್ನು ಉಳಿಸಿ ಬೆಳೆಸುವಉತ್ತರಾಧಿಕಾರಿಗೆ ಹುಡುಕುತ್ತಿರುವಾಗಲೇ ಮಂಜಮ್ಮಜೋಗತಿ ನೃತ್ಯ ಕಂಡು ಮನೆಗೆ ಕರೆದುಕೊಂಡು ಹೋದಳು.

*ಕಲಿಯುವ, ಸಾಧಿಸುವ ಹಂಬಲ:*

ಜಾತ್ರೆ ಉತ್ಸವ, ಹಬ್ಬ, ಸಮ್ಮೇಳನ, ಸಮಾವೇಶ.. ಎಲ್ಲೇ ಇದ್ದರೂ ಎಲ್ಲಮ್ಮನ ಕೊಡ ಹೊತ್ತು ಕೈ ಬಿಟ್ಟು ಕುಣಿದು ಜಾನಪದ ಜೋಗತಿಯ ಕಲೆ ಕರಗತಮಾಡಿಕೊಂಡರು. ಸುಮಧುರವಾಗಿ ಹಾಡುವಜಾನಪದ ಚೌಡಕಿ ಪದಗಳು ಜನಮನಸೂರೆಗೊಂಡವು. ಎಲ್ಲಮ್ಮನ ಚರಿತೆಗೆ ಜಾನಪದನಾಟಕ ರೂಪ ಕೊಟ್ಟು ನಿರ್ದೇಶಿಸಿದ್ದು, ಮಂಜಮ್ಮ ಜೋಗತಿಯೇ. ರೇಣುಕಾ ಪಾತ್ರ, ಗೌಡಶಾನಿ, ಕಾಮಧೇನು, ಪರಶುರಾಮ ಪಾತ್ರ ನಿರ್ವಹಣೆಹೆಸರು ತಂದಿವೆ. ಈಚೆಗಷ್ಟೇ ಮಂಜಮ್ಮಜೋಗತಿಯವರ ಆತ್ಮಕಥೆ ಕುರಿತು ಎರ ಡು ಪುಸ್ತಕಗಳು ಪ್ರಕಟವಾಗಿವೆ. ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸೇರಿದಂತೆ ರಾಜ್ಯದ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳು ಮಂಜಮ್ಮ ಅವರಿಗೆ ಒಲಿದುಬಂದಿವೆ.

*ರಂಗಭೂಮಿ ಕಲಾವಿದೆ …*

ಮಂಗಳಮುಖಿ, ದೇವಿಯ ಪಾತ್ರ ನಿರ್ವಹಿಸಬಾರದೆಂದು ಗೌಡರಹಳ್ಳಿಯಲ್ಲಿ ಅಪಮಾನ ಮಾಡುತ್ತಾರೆ. ಆಗ ಮರಿಯಮ್ಮನಳ್ಳಿ ರಂಗ ಕಲಾವಿದೆ ಡಾ. ನಾಗರತ್ನಮ್ಮ, ಮೋಹಿನಿ ಭಸ್ಮಾಸುರದಲ್ಲಿಮಂಜ ಮ್ಮ ನಿಂದ, ಭಸ್ಮಾಸುರನ ಪಾತ್ರ ಮಾಡಿಸಿದರು. ಅದೇ ಮಂಗಳಮುಖೀಯರ ರಂಗ ಪ್ರವೇಶಕ್ಕೆ ಮುನ್ನುಡಿ. ಪೌರಾಣಿಕ ಪಾತ್ರಗಳಾದ ಕೀಚಕ, ಭಸ್ಮಾಸುರ,ತಾರಾಸುರ, ಬಯಲಾಟದ ಪಾತ್ರಗಳಲ್ಲಿ ಮಂಜಮ್ಮ ವೇಷ ತೊಟ್ಟರೆ ಇಡೀರಂಗಸ್ಥಳವೇ ನಡುಗುತ್ತದೆ. ಭಿಕ್ಷೆ, ಲೈಂಗಿಕ ವೃತ್ತಿಯನ್ನು ತೊರೆದು ಸಾಂಸ್ಕೃತಿಕ ಹಾದಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಿದ್ಧವಿದ್ಧ 15-20 ಮಂಗಳಮುಖಿಯರೊಳಗೊಂಡ ರಂಗ ತಂಡ ಕಟ್ಟಿದ್ದಾರೆ ಮಂಜಮ್ಮ.

ಕೃಪೆ:ವಿದ್ಯಾಶ್ರೀ ಗಾಣಿಗೇರ, ವಿಜಯಪುರ.                                                   ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059