ದಿನಕ್ಕೊಂದು ಕಥೆ 1072
*🌻ದಿನಕ್ಕೊಂದು ಕಥೆ🌻*
*"ಗೆಲುವು"*
ಹತ್ತು ವರ್ಷಗಳ ಹಿಂದೆ ಖರೀದಿಸಿದ್ದ ಕನ್ನಡಕವನ್ನು ತುಂಬಾ ಜತನದಿಂದ ನೋಡಿಕೊಳ್ಳುತ್ತಿದ್ದ ಪಾತಜ್ಜಿ, ಅಂದು ಬೆಳಗಿನ ಉಪಹಾರ ಸೇವಿಸಿ ಪೇಪರ್ ಓದಲು ಅದನ್ನು ಟೇಬಲ್ ಮೇಲಿಂದ ಎತ್ತಿಕೊಳ್ಳುವಾಗ, ಪಕ್ಕದಲ್ಲಿ ರಭಸವಾಗಿ ಬಂದ ಮೊಮ್ಮೊಗಳ ಮೊಣ ಕೈ ಗೆ ತಗುಲಿ ಅದು ನೆಲಕ್ಕೆ ಬಿದ್ದಿತ್ತು.ಸಧ್ಯ ಫ್ರೇಮಿನೊಳಗೆ ಬಿಗಿಯಾಗಿ ಬಂಧಿಯಾಗಿದ್ದ ಗಾಜುಗಳಿಗೆ ಒಂದಿನಿತೂ ಏಟಾಗಿರಲಿಲ್ಲ.ಬದಲಿಗೆ ಕನ್ನಡಕ ಬಲಗಡೆ ಕಿವಿಗೆ ಹಾಕಿಕೊಳ್ಳುವ ಹಿಡಿಕೆಯ ಸ್ಕ್ರೂ ಬಿಚ್ಚಿ ಅದೆಲ್ಲೋ ಉರುಳಿಹೋಗಿತ್ತು.ಕೆಳಗೆ ಬಿದ್ದ ಒಂಟಿ ಹಿಡಿಕೆಯ ಕನ್ನಡಕ ಎತ್ತಿಕೊಂಡ ಪಾತಜ್ಜಿ, ಕೆಲಸಕ್ಕೆ ಹೊರಟು ನಿಂತ ಮಗನಿಗೆ "ಯಶೂ..ಇದನ್ನ ಸ್ವಲ್ಪ ರಿಪೇರಿ ಮಾಡ್ಸಕೊಂಡು ಬರ್ತೀಯಾ...?"ಎಂದು ಕೇಳಿದಾಗ ಆತ "ಅಮ್ಮಾ.. ನಿನಗೆ
ಗೊತ್ತಿಲ್ವಾ, ನಾನು ಹೊರಡುವ ಟೈಂ ನಲ್ಲಿ ಅಂಗಡಿ ಬಾಗಿಲು ತೆರೆದಿರಲ್ಲ, ಇನ್ನು ರಾತ್ರಿ ವಾಪಸ್ ಬರುವಾಗ ಎಲ್ಲಾ ಅಂಗಡಿಗಳೂ ಮುಚ್ಚಿರುತ್ತಾರೆ,ಇದನ್ನ ಪದ್ಮಳ
ಕೈ ಲಿ ಕೊಡು ಅವ್ಳು ರಿಪೇರಿ ಮಾಡ್ಸಕೊಂಡು ಬರ್ತಾಳೆ"ಎಂದು ನಯವಾಗಿ ಜವಾಬ್ದಾರಿಯನ್ನು ಹೆಂಡತಿಯ ಮೇಲೆ ಹಾಕಿ ಕಚೇರಿಗೆ ಹೊರಟು ಹೋದ.
ಬೆಳಿಗ್ಗೆಯಿಂದ ರಾತ್ರಿಯ ತನಕ ಮನೆಕೆಲಸ, ಆಫೀಸ್ ಕೆಲಸದಿಂದಾಗಿ ತಲೆ ಕೆರೆದುಕೊಳ್ಳುವುದಕ್ಕೂ ಪುರುಸೊತ್ತಿಲ್ಲದ ಪದ್ಮ, ತನ್ನ ಲಂಚ್ ಬಾಕ್ಸ್ ಗೆ ತಿಂಡಿ ಹಾಕಿಕೊಳ್ಳುತ್ತಾ"ಅತ್ತೇ.... ನಾನು ಅದನ್ನ ತಗೊಂಡು ಹೋಗೋದು ಕೆಲಸದ
ಗಡಿಬಿಡಿಯಲ್ಲಿ ಮರ್ತು ಬಿಡೋದು, ನೀವು ಬೇಜಾರು ಮಾಡ್ಕೊಳ್ಳೋದು ಬೇಡಾ,
ಹ್ಯಾಗೂ ಪಾವನಿ ಕಾಲೇಜ್ ಗೆ ಹೋಗಲ್ಲ ಮನೇಲಿ ಇರ್ತಾಳೆ ಅವ್ಳಿಗೆ ಕೊಡಿ, ಮಾಡ್ಸಕೊಂಡು ಬರ್ತಾಳೆ"ಎನ್ನುತ್ತ ನಿಂತಲ್ಲಿಂದಲೇ" ಪಾವನೀ..ಅಜ್ಜೀ ಕನ್ನಡಕ
ಸ್ವಲ್ಪ ರಿಪೇರಿ ಯಂತೆ ಮಾಡ್ಸಿ ತಂದುಕೊಡು"ಎಂದು ಕೂಗಿದಳು.ಹಜಾರದ ಸೋಫಾ ಮೇಲೆ ಚಕ್ಕಂಬಕ್ಕಳ ಹಾಕಿಕೊಂಡು ಲ್ಯಾಪ್ ಟಾಪ್ ನಲ್ಲಿ ಮುಳುಗಿದ್ದ ಪಾವನಿಗೆ ಅಮ್ಮ ಕೂಗಿದ್ದು ಕೇಳಿತ್ತೋ ಇಲ್ಲವೋ ಏನೆಂಬುದನ್ನು ನಿರೀಕ್ಷಿಸದ ಪದ್ಮ,
ರೆಡಿಯಾಗಿ ಒಮ್ಮೆ ಗೋಡೆ ಗಡಿಯಾರ ದತ್ತ ನೋಡಿದವಳು"ಓವ್ ಮೈ ಗಾಡ್..
ಹತ್ತು ಇಪ್ಪತ್ತೈದು.....ಛೇ"ಎಂದು ಉದ್ಘಾರ ತೆಗೆಯುತ್ತ ತನ್ನ ಸ್ಕೂಟಿ ಕೀ ಎತ್ತಿಕೊಂಡು"ಬರ್ತೀನ ಅತ್ತೇ"ಎಂದು ಹೇಳಿ ಕಚೇರಿಗೆ ಹೊರಟು ಹೋದಳು.
ಮೌನದಿಂದ ಎಲ್ಲವನ್ನೂ ಗಮನಿಸುತ್ತಿದ್ದ ಪಾತಜ್ಜಿ"ಹೂಂ..."ಎಂದು ದೀರ್ಘ ಉಸಿರು ಬಿಟ್ಟು,ಅಲ್ಲಿಂದ ಎದ್ದು ಒಂದು ಕೈಯಲ್ಲಿ ಒಂಟಿ ಹಿಡಿಕೆಯ ಕನ್ನಡಕ
ಮತ್ತೊಂದು ಕೈ ಯಿಂದ ಊರುಗೋಲು ಊರುತ್ತಾ ಹಜಾರದೊಳಗೆ ಕುಳಿತ ಮೊಮ್ಮೊಗಳ ಬಳಿ ಬಂದು ಅವಳ ಭುಜ ತಟ್ಟಿದರು.ಬೆಚ್ಚಿ ಬಿದ್ದವರಂತೆ ಪಾವನಿ
ತನ್ನ ಕಿವಿಗೆ ಸಿಕ್ಕಿಸಿಕೊಂಡಿದ್ದ ವೈರ್ ತೆಗೆಯುತ್ತ"ಏನಜ್ಜೀ....?"ಎಂದಳು.ಪಾತಜ್ಜಿ
ತಮ್ಮ ಕೈಯಲ್ಲಿನ ಒಂಟಿ ಹಿಡಿಕೆಯ ಕನ್ನಡಕ ತೋರಿಸುತ್ತ"ಇದನ್ನ ಸ್ವಲ್ಪ ರಿಪೇರಿ ಮಾಡ್ಸಕೊಂಡು ಬಾ ಪುಟ್ಟೀ....."ಎಂದರು.ಅದಕ್ಕವಳು ಸ್ವಲ್ಪ ಏರು ಸ್ವರದಲ್ಲಿ ಅಜ್ಜೀ
... ನಾಳೆ ನನ್ನ ಫೈನಲ್ ಸೆಮಿಸ್ಟರ್ ಇದೆ ಅದಕ್ಕೆ ರೆಡಿ ಆಗ್ಬೇಕು ಗೊತ್ತಾ..? ..ಅದಾದ್ಮೇಲೆ....." ಎಂದು ಅವಳಿಂದ ಉತ್ತರ ಬರುವ ಮಧ್ಯದಲ್ಲೇ ಪಾತಜ್ಜಿ ಅಲ್ಲಿಂದ ನಿರ್ಗಮಿಸಿ ವರಾಂಡದ ಕುರ್ಚಿ ಮೇಲೆ ಬಂದು ಕುಳಿತರು.ಆಗ ಅವರ ಮನದಲ್ಲಿ"ಅವ್ರೇನಾದ್ರೂ ಇದ್ದಿದ್ದರೆ.. ಇಷ್ಟು ಆಗೋವರ್ಗೂ ಬಿಡ್ತಾನೇ ಇರ್ಲಿಲ್ಲ..."ಎಂದು ಶಾಂತಜ್ಜನನ್ನು ನೆನೆಯುತ್ತ ಕಣ್ಣು ತೇವು ಮಾಡಕೊಳ್ಳತೊಡಗಿದರು.ಅಷ್ಟರಲ್ಲಿ ಅವರ ಮೊಮ್ಮೊಗಳ ಕ್ಲಾಸ್ ಮೇಟ್ ನಿಶಾಳ ಆಗಮನವಾಯ್ತು.ಒಳಕ್ಕೆ ಬಂದವಳು"ಹಾಯ್ ಅಜ್ಜೀ......."
ಎನ್ನುತ್ತ ಕೈ ವೇವ್ ಮಾಡಿ, ಹಜಾರದಲ್ಲಿ ಕುಳಿತ ತನ್ನ ಗೆಳತಿ ಪಾವನಿ ಜೊತೆ ಸೇರಿ
ರೂಂ ಸೇರಿ ಬಿಟ್ಟಳು.ಪೆಚ್ಚಾಗಿ ಕುಳಿತ ಪಾತಜ್ಜಿ ಒಂದು ಹಿಡಿಕೆ ಇರುವ ಕನ್ನಡಕವನ್ನು ತಮ್ಮ ಬಲ ಕೈ ಯಿಂದ ಕಣ್ಮುಂದೆ ಹಿಡಿದು ಪೇಪರ್ ಓದಲು ಪ್ರಯತ್ನಿಸಿದರಾದರೂ
ನಡುಗುವ ಅವರು ಕೈ ಗಳು ಅದಕ್ಕೆ ಸಹಕಾರ ನೀಡಲಿಲ್ಲ."ಆಗಲ್ಲಪ್ಪಾ.."ಎಂದು ತಮ್ಮಷ್ಟಕ್ಕೆ ತಾವು ಹೇಳಿಕೊಳ್ಳುತ್ತಾ ಅದನ್ನು ಪಕ್ಕದ ಟೀ ಪಾಯ್ ಮೇಲಿರಿಸಿ
ಕಿಟಕಿಯಿದಾಚೆ ದೂರದಲ್ಲಿರುವ ಮರ ನೋಡುತ್ತ ಕುಳಿತರು.ಅದೇ ವೇಳೆ ಮನೆ ಕೆಲಸದ ನಿಂಗಿ "ಬರ್ತೀನ್ ಅಜ್ಜೀ..."ಎಂದು ಹೇಳಿ ಹೊರಟವಳು ಒಮ್ಮೆ ಬಾಗಿಲಲ್ಲಿ
ಇಣುಕಿ" ಯಾಕಜ್ಜೀ..ಶಾನೇ ಬೇಜಾರಲ್ಲಿ ಇದ್ದಂಗ್ ಕಾಣ್ತೀರಿ........" ಎಂದಳು. .ಕಿಟಕಿಯಿಂದಾಚೆ ನೋಡುತ್ತಿದ್ದ ಪಾತಜ್ಜಿ,ನಿಂಗಿಯತ್ತ ದೃಷ್ಟಿ ಹಾಯಿಸಿ
""ಏನಿಲ್ಲ"ಎಂದು ಉತ್ತರ ನೀಡಿದರಾದರೂ ಅವರ ಒಳ ಮನಸ್ಸು-ನಿಂಗಿಗೆ ಯಾಕೆ ಒಂದು ಮಾತು ಕೇಳಬಾರದು ಎಂದು ಕೇಳಿದಾಗ,ಗೇಟು ದಾಟಿ ಹೋಗುತ್ತಿದ್ದವಳನ್ನು ಜೋರಾಗಿ"ನಿಂಗೀ...ಬಾ ಇಲ್ಲಿ.."ಎಂದು ಕೂಗಿ ಕರೆದು,ಒಂಟಿ ಹಿಡಿಕೆಯ ಕನ್ನಡಕ ತೋರಿಸುತ್ತ"ಇಲ್ಲೇ ಶಾರದಾ ದೇವಿ ನಗರದ ಮೇನ್ ರೋಡ್ ನಲ್ಲಿರುವ ಕನ್ನಡಕದ ಅಂಗ್ಡಿ ಹೋಗಿ ಇದನ್ನು ಸ್ವಲ್ಪ ರಿಪೇರಿ ಮಾಡ್ಕೊಂಡು ಬರ್ತೀಯಾ..?"ಎಂದಾಗ ನಿಂಗಿ ಮೊದಮೊದಲು "ಅಜ್ಜೀ..ನಂಗೇ ಇನ್ನಾ ಎಲ್ಡ ಮೂರ ಮನೆ ಕೆಲ್ಸಾ ಬಾಕಿ ಐತೆ"ಎಂದು ರಾಗ ಎತ್ತಿದವಳು ಅದೇಕೋ ಅಜ್ಜಿಯ ಸ್ಥಿತಿ, ಮಾತು ಅಲ್ಲಗಳೆಯುವ ಮನಸ್ಸಾಗದೇ"ಆಯ್ತು ಕೊಡೀ.."ಎಂದಳು.
"ಇರು"ಎನ್ನುತ್ತ ಪಾತಜ್ಜಿ ಒಳಗೆ ಹೋಗಿ ತಮ್ಮ ಪರ್ಸನಿಂದ ಇನ್ನೂರು ರೂಪಾಯಿ ನೋಟು ತೆಗೆದು ಕೊಡುತ್ತ"ನೋಡು ನಿಂಗೀ ತುಂಬಾ ಬಿಸಿಲಿದೆ,ಅದೂ ಅಲ್ದೇ ನೀ ಇನ್ನಾ ಎರಡು ಮೂರು ಮನೆ ಕೆಲ್ಸಕ್ಕೆ ಹೋಗ್ಬೇಕು ಅಂತಿದಿಯಾ, ಇದನ್ನು ತಗೊಂಡು ಆಟೋದಲ್ಲೇ ಹೋಗಿ ರಿಪೇರಿ ಮಾಡ್ಸಕೊಂಡು ಬಾ..."ಎಂದಾಗ ಆಕೆ
"ಅಜ್ಜೀ..ಆಟೋಗೀಟೋ ಏನೂ ಬ್ಯಾಡಾ ನಾ ಬಿರ್ ನೇ ಹೋಗಿ ಬರ್ತೇನೆ"ಎಂದು
ಕೈಯಲ್ಲಿ ನ ಕೊಡೆ ಬಿಡಿಸಿಕೊಂಡು ಹೋದಳು.
ಮುಂದೆ ಅರ್ಧ ಘಂಟೆಯೊಳಗೆಲ್ಲ ಅಜ್ಜಿಯ ಕೈಗೆ ರಿಪೇರಿ ಮಾಡಿಸಿದ ಕನ್ನಡಕವನ್ನು
ಕವರ್ ನೊಂದಿಗೆ ಕೊಡುತ್ತ"ಅಜ್ಜೀ..ಆ ಅಂಗ್ಡಿಯಾತ ನಮ್ಮ ಯಜಮಾನ್ರ ಫ್ರೇಂಡೇಯಾ, ಎಲ್ಲಾ ಒಟ್ಟು ಮೂವತ್ತೈದು ರೂಪಾಯಿ ಆತು, ಉಳಿಕೆ ಚಿಲ್ಲರೆ ತಕೊಳಿ "ಎಂದು ನೂರು ಅರವತ್ತೈದು ವಾಪಸ್ ಮಾಡಿ ಹೊರಟು ನಿಂತಾಗ,ಪಾತಜ್ಜಿ ಅವಳ ಕೈಗೆ ಆ ಉಳಿಕೆ ನೂರರವತ್ತೈದು ಕೊಡುತ್ತ"ಇದನ್ನ ತಕೊ ಮಕ್ಕಳಿಗೆ ಹಣ್ಣೊ ಹಂಪ್ಲೊ ತಗೊಂಡು ಹೋಗು"ಎಂದು ಉಪಚರಿಸಿದರು. ಆ ಒಂದು ಘಳಿಗೆಯಲ್ಲಿ ರಿಪೇರಿ ಯಾಗಿ ಬಂದ ಕನ್ನಡಕ ಧರಿಸಿದ
ಪಾತಜ್ಜಿ ಮುಖದಲ್ಲೂ ಹಾಗೂ ಅವರಿಂದ ಅಲ್ಪ ಪ್ರಮಾಣದ ಕಾಣಿಕೆ ಪಡೆದ ನಿಂಗಿಯ ಮುಖದಲ್ಲೂ ಅವ್ಯಕ್ತ ಗೆಲುವು ಮೂಡಿ ಬಂದಿದ್ದು ಸಹಜವಾಗಿತ್ತು.
ಲೇಖಕರು:ಅರವಿಂದ.ಜಿ.ಜೋಷಿ.
ಮೈಸೂರು
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment