ದಿನಕ್ಕೊಂದು ಕಥೆ 1075

*🌻ದಿನಕ್ಕೊಂದು ಕಥೆ*🌻
*ರಹಸ್ಯ ಬಯಲಾದಾಗ*

"ರೀ, ನನ್ನ ಮಾತನ್ನು ನಿಧಾನವಾಗಿ ಕೇಳಿ. ಆಗಲೂ ನಿಮಗೆ ಮನವರಿಕೆಯಾಗದಿದ್ದರೆ ನಿಮಗೆ ಹೇಗೆ ಬೇಕೋ ಹಾಗಿರಿ. ನಾವು ಸಾಕಷ್ಟು ಸಿರಿವಂತರು. ನಿಮಗೆ ನಮ್ಮ ಮಗ ಆಕಾಶ್ ಏನು ಕೇಳಿದರೂ ಕೊಡಿಸುವ ತಾಕತ್ತು ಇದೆ ಎಂದು ನನಗೆ ಗೊತ್ತು ! ಆದರೆ ಕೆಲವೊಂದು ವಿಷಯದಲ್ಲಿ ನೀವು ತಪ್ಪು ಮಾಡುತ್ತಾ ಇದ್ದೀರಾ ಎಂದು ನನಗನಿಸುತ್ತದೆ. ನಮ್ಮ ಮಗ ಇನ್ನೂ ಮೂರನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಇನ್ನೂ ಬೇಕಾದಷ್ಟು ಸಮಯವಿದೆ. ನಾನು ಹೇಳುತ್ತಿರುವುದನ್ನು ಕೇಳಿ. ಈಗಲಾದರೂ ನಿಮ್ಮ ಮನಸ್ಸನ್ನು ಬದಲಿಸಿ."

"ಏನೇ ಗೋಳು ನಿನ್ನದು??ನನಗೆ ನಿನ್ನ ಪುರಾಣ ಕೇಳಲು ಸಮಯವಿಲ್ಲ. ನೀನು ಏನು ಹೇಳಬೇಕೆಂದಿರುವೆಯೋ ಅದನ್ನು ನೇರವಾಗಿ ಹೇಳು."

"ಹೇಳುತ್ತೇನೆ ಕೇಳಿ. ನಾನು ನೀಡುವ ಸಲಹೆಯನ್ನು ಕೇಳುವುದು ಬಿಡುವುದು ನಿಮಗೆ ಬಿಟ್ಟಿದ್ದು. ಆಕಾಶ್ ಗೆ ಅಮ್ಮನಾಗಿ ಈ ಮಾತು ಹೇಳುತ್ತಿದ್ದೇನೆ. ನಿಮ್ಮ ಶ್ರೀಮಂತಿಕೆಯ ಮದ ಆತನ ಜೀವನವನ್ನು ಹಾಳು ಮಾಡುವುದು ಬೇಡ. ಆತನು ಸ್ಕೂಲಿಗೆ ಹೋಗಲು ಒಂದು ಬೇರೆಯದೇ ಕಾರು, ಅದಕ್ಕೊಂದು ಡ್ರೈವರ್.. ಬೇಕಾ ಇವೆಲ್ಲಾ?? ಎಲ್ಲ ಮಕ್ಕಳಂತೆ ಆತನೂ ಸ್ಕೂಲ್ ಬಸ್ಸಿನಲ್ಲಿ ಶಾಲೆಗೆ ಹೋಗಲಿ. ಎಲ್ಲರ ಜೊತೆಗೆ ಬೆರೆಯಲಿ. ಶಾಲೆಯ ಪಾಠದ ಜೊತೆಗೆ ಆತ ಜೀವನದ ಪಾಠವನ್ನೂ ಕಲಿಯಲಿ. ಬದುಕಿನ ಕಷ್ಟ ಸುಖದ ಅರಿವು ಅವನಿಗಾಗಲಿ."

"ಆಯ್ತಾ ನಿನ್ನ ಪುಕ್ಕಟೆ ಸಲಹೆ ??"

"ನನಗೆ ಗೊತ್ತಿತ್ತು ನಿಮ್ಮ ಮನಸ್ಥಿತಿ. ನನ್ನ ಮಾತಿನ್ನೂ ಮುಗಿದಿಲ್ಲ. ಇನ್ನೂ ಒಂದು ವಿಷಯವಿದೆ. ನಮ್ಮ ಮನೆಯ ಬೀದಿಯಲ್ಲಿ ಎಷ್ಟೊಂದು ಮಕ್ಕಳು ಆಟವಾಡುತ್ತಿರುತ್ತಾರೆ. ನಮ್ಮ ಆಕಾಶ್ ನನ್ನು ಆ ಮಕ್ಕಳ ಜೊತೆಗೆ ಆಟವಾಡಲು ನೀವು ಬಿಡುತ್ತಿಲ್ಲ. ಆತ ಇಡೀ ದಿನ ಟಿ. ವಿ. ಯ ಮುಂದೆ ಇಲ್ಲವೇ ಕಂಪ್ಯೂಟರ್ ಮುಂದೆ ಕುಳಿತು ಒಬ್ಬನೇ ಆಟವಾಡುತ್ತಿರುತ್ತಾನೆ. ನಮ್ಮ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಆತ ಬಯಲಿನಲ್ಲಿ ಆಟವಾಡಬೇಕು; ಸಂತೋಷ ಪಡಬೇಕು; ಬೆವರು ಹರಿಸಬೇಕು. ಆ ಪುಟ್ಟ ಮಗುವಿನ ತಲೆಯಲ್ಲಿ ಏನೇನೋ ಬೇಧ ಭಾವ ತುಂಬಿದ್ದೀರಿ. ಏನೂ ತಿಳಿಯದ ವಯಸ್ಸು ಆತನದು."

" ನಿಮ್ಮಲ್ಲಿರುವ ಬಡವರು, ಬಲ್ಲಿದರು ಎನ್ನುವ ತಾರತಮ್ಯವನ್ನು ಆತನಲ್ಲಿಯೂ ಬೆಳೆಸಿದ್ದೀರಿ. ಬಡವರು ನಿಕೃಷ್ಟರು, ಅಸಹ್ಯ ಎನ್ನುವ ಮಾತು ಆ ಪುಟ್ಟ ಬಾಯಲ್ಲಿ ಬರುತ್ತಿರುತ್ತದೆ! ಇದೇ ಮೊದಲು, ಇದೇ ಕೊನೆ !!ಇನ್ನುಮುಂದೆ ಈ ವಿಷಯದ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ನೀವಿದ್ದೀರಿ, ನಿಮ್ಮ ಮಗನಿದ್ದಾನೆ."
ಕೋಪಿಸಿಕೊಂಡು ಒಳಗಡೆ ಹೋದಳು ಶಾರದಾ!

ಪ್ರಸಾದ್ ಶ್ರೀಮಂತ ಬಿಸಿನೆಸ್ ಮ್ಯಾನ್. ಸಿರಿವಂತಿಕೆಯ ಮದ ಆತನ ಮೈ ಮನದಲ್ಲಿ ತುಂಬಿ ತುಳುಕುತ್ತಿತ್ತು. ತನ್ನ ಮಗ ಆಕಾಶ್ ನಲ್ಲೂ ಅದೇ ತರಹದ ಭಾವನೆ ಬೆಳೆಸಿದ್ದ. ಬದುಕಿನ ಒಳಿತು ಕೆಡುಕುಗಳ ಬಗ್ಗೆ ಚೆನ್ನಾಗಿ ಅರಿವಿದ್ದ ಶಾರದಾಗೆ ಇದು ಇಷ್ಟವಾಗುತ್ತಿರಲಿಲ್ಲ. ಹೇಗಾದರೂ ಮಗನನ್ನು ಸರಿ ದಾರಿಗೆ ತರಬೇಕೆಂಬ ಅವಳ ಪ್ರಯತ್ನ ವಿಫಲವಾಗಿತ್ತು. ಕೊನೆಯ ಪ್ರಯತ್ನವೆನ್ನುವಂತೆ ಪತಿಯೊಡನೆ ತನ್ನ ಮನಸ್ಸಿನಲ್ಲಿರುವುದನ್ನು ಅರುಹಿದ್ದಳು.

ಅದೊಂದು ದಿನ ಪ್ರಸಾದ್ ತನ್ನ ಮಗನೊಡನೆ ಶಾಪಿಂಗ್ ಹೋಗಿದ್ದ. ಮನೆಯಲ್ಲಿ ದೇವರ ಪೂಜೆ ಮಾಡಬೇಕು ಎನ್ನುವ ಕಾರಣ ನೀಡಿ ಶಾರದಾ ಮನೆಯಲ್ಲೇ ಉಳಿದಿದ್ದಳು. ಅಪ್ಪ ಮಗ ಹೊರಗಡೆ ಹೊರಟು ಅರ್ಧ ಗಂಟೆಯಾಗಿರಬಹುದು. ಮನೆಯ ಲ್ಯಾಂಡ್ ಲೈನ್ ಗೆ ಕರೆಯೊಂದು ಬಂತು. ಕರೆ ಸ್ವೀಕರಿಸಿದ ಶಾರದಾ ನಿಂತಲ್ಲೇ ಕುಸಿದು ಬಿದ್ದಳು. ಮನೆಯ ಆಳು ಓಡಿ ಬಂದು ಶಾರದಾಳ ಮುಖದ ಮೇಲೆ ನೀರು ಸಿಂಪಡಿಸಿದ. ನಿಧಾನವಾಗಿ ಎಚ್ಚರಗೊಂಡಳು ಶಾರದಾ.

"ಸೋಮು !! ಯಜಮಾನರು ಹಾಗೂ ಆಕಾಶ್ ಹೋಗುತ್ತಿರುವ ಕಾರು ಅಫಘಾತಕ್ಕೀಡಾಗಿದೆಯಂತೆ. ಆಸ್ಪತ್ರೆಯಿಂದ ಫೋನ್ ಬಂದಿತ್ತು. ನಾನು ಆಸ್ಪತ್ರೆಗೆ ಹೋಗುತ್ತೇನೆ. ಮನೆ ಕಡೆ ಜೋಪಾನ."

ಅವಸರದಲ್ಲಿ ಆಸ್ಪತ್ರೆಗೆ ನಡೆದಳು ಶಾರದಾ.

ಅಫಘಾತದಲ್ಲಿ ಅಪ್ಪ ಮಗ ಇಬ್ಬರಿಗೂ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವದಿಂದ ಆಕಾಶ್ ಗೆ ರಕ್ತ ನೀಡಬೇಕಾದ ಪ್ರಮೇಯ ಬಂದಿತ್ತು. ಶಾರದಾ ಎಲ್ಲ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಮಾಡಿದಳು.

ಎರಡು ವಾರದಲ್ಲಿ ಪ್ರಸಾದ್ ಸುಧಾರಿಸಿಕೊಂಡ. ಆಕಾಶ್ ಸರಿಹೋಗಲು ಒಂದು ತಿಂಗಳ ಸಮಯ ಬೇಕಾಯಿತು.
ಪ್ರಸಾದ್ ತನ್ನ ಕೆಲಸಕ್ಕೆ ಹೋಗಲು ಆರಂಭಿಸಿದ. ಆಕಾಶ್ ಸ್ಕೂಲಿಗೆ ಹೋಗಲು ಶುರು ಮಾಡಿದ್ದ. ಆ ದಿನ ಆಕಾಶ್ ನ ಸ್ಕೂಲು ಬಿಟ್ಟ ಮೇಲೆ ಪ್ರಸಾದ್ ನೇ ತನ್ನ ಮಗನನ್ನು ತನ್ನ ಕಾರಿನಲ್ಲಿ ಮನೆಗೆ ಕರೆದುಕೊಂಡು ಬಂದನು.

ಮನೆಯ ಒಂದು ರೂಮಿನಲ್ಲಿ ಶಾರದಾ ಯಾರದೋ ಜೊತೆಗೆ ಮಾತನಾಡುತ್ತಿದ್ದಳು. ಪುಟ್ಟ ಮಗುವಿನ ಮಾತೂ ಸಹ ಅಲ್ಲಿ ಕೇಳಿ ಬರುತ್ತಿತ್ತು. ಪ್ರಸಾದ್ ಕಾತುರದಿಂದ ರೂಮಿನ ಬಳಿಗೆ ಹೋದನು. ಆಕಾಶ್ ನೂ ತನ್ನ ಅಪ್ಪನನ್ನು ಹಿಂಬಾಲಿಸಿದ.

"ಶಾರದಾ !! ಯಾರೀತ?? ಏನ್ ಅಸಹ್ಯ ನಡೀತಾ ಇದೆ ಇಲ್ಲಿ??ಈ ಹುಡುಗ ನಮ್ಮ ಮನೆಯ ಬೀದಿಯ ಕೊನೆಯಲ್ಲಿರುವ ಸ್ಲಂ ನಲ್ಲಿ ವಾಸಿಸುವ ಗಲೀಜು ಹುಡುಗ ಅಲ್ಲವಾ? ಆತನ ಜೊತೆಗೆ ನೀನು ಮಾತನಾಡುತ್ತಿರುವುದು ಅಲ್ಲದೇ ನಮ್ಮ ಮನೆಯ ಒಳಗಡೆ ಕರೆದುಕೊಂಡು ಬಂದಿದ್ದೀಯಾ?"

"ಏ ಹುಡುಗಾ! ಹೊರಟು ಹೋಗು ಇಲ್ಲಿಂದ. ಮತ್ತೆಂದೂ ಈ ಕಡೆಗೆ ಬರಬೇಡ. ಹುಷಾರ್.' ಗುಡುಗಿದ ಪ್ರಸಾದ್.

ಶಾರದಾಳಿಗೆ ಅದೆಲ್ಲಿತ್ತೋ ಕೋಪ. ಆವೇಶದಿಂದ ಕೂಗಿದಳು.

"ಶಂಕರ್! ನೀನು ಎಲ್ಲಿಗೂ ಹೋಗಬೇಡ. ನಿನ್ನನ್ನು ಕರೆತಂದಿದ್ದು ನಾನು. ಇಲ್ಲೇ ಇರು. ಇದನ್ನು ಬರೆಯುತ್ತಾ ಇರು ಬಂದೆ"

"ನಿಮ್ಮ ಹತ್ತಿರ ಈ ವಿಷಯವನ್ನು ಹೇಳಬಾರದೆಂದುಕೊಂಡಿದ್ದೆ. ಕೇಳಲು ಸಮಯವಿದ್ದರೆ ನಾನು ಹೇಳುವುದನ್ನು ಸಾವಧಾನವಾಗಿ ಕೇಳಿ."

"ಕೆಲವು ದಿವಸಗಳ ಹಿಂದೆ ನಿಮಗಿಬ್ಬರಿಗೆ ಅಫಘಾತ ಆಗಿತ್ತಲ್ಲವಾ? ಆಗ ನಮ್ಮ ಆಕಾಶ್ ಗೆ ರಕ್ತ ನೀಡಿದ್ದರಲ್ಲವಾ? ರಕ್ತ ದಾನ ಮಾಡಿದವರು ಯಾರೆಂದು ಗೊತ್ತಾ ನಿಮಗೆ??"

"ಗೊತ್ತಿಲ್ಲ. ಆ ದಿನ ಆಸ್ಪತ್ರೆಯಲ್ಲಿ ಆಕಾಶ್ ಗೆ ರಕ್ತ ನೀಡಿದ್ದು ಗೊತ್ತು. ಅಲ್ಲಿದ್ದ ನರ್ಸ್ ಹತ್ತಿರ ರಕ್ತ ಹೇಗೆ ವ್ಯವಸ್ಥೆ ಮಾಡಿದ್ದೀರಿ ಎಂದು ಕೇಳಿದೆ. ಅದಕ್ಕವರು ಏನೂ ಉತ್ತರಿಸದೆ ನಕ್ಕು ಬಿಟ್ಟರು. "

"ರಕ್ತ ನೀಡಿದ್ದು ಯಾರು ಎಂದು ಹೇಳಲಾ??"

"ಕೇಳಿದ್ದನ್ನೇ ಎಷ್ಟು ಸಲ ಕೇಳ್ತೀಯಾ?? ಯಾರು ಎಂದು ಹೇಳು."

"ಆಕಾಶ್ ಗೆ ರಕ್ತ ನೀಡಿದ್ದು ನೀವು ದ್ವೇಷಿಸುವ ಸ್ಲಮ್ ನಲ್ಲಿ ವಾಸಿಸುವ ಒಬ್ಬ ಮನುಷ್ಯ ! ನಿಮ್ಮ ಕಾರು ಅಫಘಾತಕ್ಕೀಡಾದಾಗ ಯಾರೊಬ್ಬರೂ ಮುಂದೆ ಬರಲಿಲ್ಲವಂತೆ. ಆ ಸಮಯದಲ್ಲಿ ನಿಮ್ಮಿಬ್ಬರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದವನು ಆ ಬಡವನೇ ! ನಾನು ಆಸ್ಪತ್ರೆ ತಲುಪುವವರೆಗೂ ಆತ ಅಲ್ಲೇ ಇದ್ದ"

"ಅರ್ಜ್oಟಾಗಿ ಆಕಾಶ್ ಗೆ ರಕ್ತ ಕೊಡಬೇಕು ಎಂದಾಗ ನಾನು ಕಂಗಾಲಾದೆ. ಆ ಸಮಯದಲ್ಲಿ ನೀವೂ ಪೆಟ್ಟಾಗಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡಿದ್ರಿ. ಆಸ್ಪತ್ರೆಯವರು ಅವರಿಗೆ ಗೊತ್ತಿರುವ ಎಲ್ಲ ಬ್ಲಡ್ ಬ್ಯಾಂಕಿಗೆ ಸಂಪರ್ಕಿಸಿ ರಕ್ತಕ್ಕಾಗಿ ಪ್ರಯತ್ನಿಸಿದರೂ ರಕ್ತದ ವ್ಯವಸ್ಥೆಯಾಗಲಿಲ್ಲ. ನಿಮ್ಮದು ಹಾಗೂ ಆತನ ರಕ್ತದ ಗುಂಪು ಒಂದೇ. ಆದರೆ ನೀವು ರಕ್ತ ನೀಡುವ ಪರಿಸ್ಥಿತಿಯಲ್ಲಿರಲಿಲ್ಲ. ನನ್ನದೂ ಆತನದೂ ರಕ್ತದ ಗುಂಪು ಬೇರೆ ಬೇರೆ."

"ಆಗ ಆ ಮನುಷ್ಯ ವೈದ್ಯರ ಹತ್ತಿರ ನಾನು ರಕ್ತ ನೀಡುತ್ತೇನೆ. ನನ್ನ ರಕ್ತ ಟೆಸ್ಟ್ ಮಾಡಿ ಎಂದು ಕೇಳಿಕೊಂಡ. ನಮ್ಮ ಅದೃಷ್ಟ !! ಆತನ ರಕ್ತ ನಮ್ಮ ಆಕಾಶ್ ರಕ್ತಕ್ಕೆ ಹೊಂದಿಕೆಯಾಯಿತು. ಗೊತ್ತಾ ನಿಮಗೆ ?? ನಮ್ಮ ಆಕಾಶ್ ದೇಹದಲ್ಲಿ ಆ ಸ್ಲಮ್ ನಲ್ಲಿರುವ ಬಡವನ ರಕ್ತ ಹರಿಯುತ್ತಿದೆ."

"ಈ ವಿಷಯವನ್ನು ನನಗೆ ನೀನು ಹೇಳಲೇ ಇಲ್ಲ" ಸ್ವಲ್ಪ ಮೆತ್ತಗಾದ ಪ್ರಸಾದ್.

"ಎಷ್ಟೋ ಸಲ ಈ ವಿಷಯವನ್ನು ನಿಮ್ಮ ಹತ್ತಿರ ಹೇಳಬೇಕೆಂದುಕೊಂಡಿದ್ದೆ. ಆದರೆ ಈ ವಿಷಯ ನಿಮಗೆ ಗೊತ್ತಾದರೆ ಹೇಗೆ ಪ್ರತಿಕ್ರಿಯಿಸಬಹುದು ಎಂದು ನೆನೆದು ಭಯವಾಯಿತು. ಮೊದಲೇ ನಿಮಗೆ ಬಡವರು ಎಂದರೆ ಕನಿಷ್ಠ. ಹಾಗಿರುವಾಗ ಅಂತವರ ರಕ್ತ ನಿಮ್ಮ ಮಗನ ಶರೀರದಲ್ಲಿ ಹರಿಯುತ್ತಿದೆ ಎಂದರೆ !??ನೀವು ಈ ವಿಷಯವನ್ನು ಹೇಗೆ ಹೇಗೆ ಸ್ವೀಕರಿಸುತ್ತೀರಿ ಎನ್ನುವುದನ್ನು ನನಗೆ ಅರಿಯಲಾಗಲಿಲ್ಲ."

"ಆತನಿಗೆ ಒಂದಿಷ್ಟು ಹಣವನ್ನು ಕೊಡಲು ಹೋದೆ. ಆದರೆ ಆತ ಆ ಹಣವನ್ನು ಕಣ್ಣೆತ್ತಿಯೂ ನೋಡಲಿಲ್ಲ."

"ನನಗೆ ಹಣ ಬೇಡ ಮೇಡಂ. ನಿಮ್ಮ ಮಗು ಸುರಕ್ಷಿತವಾಗಿ ಆರೋಗ್ಯವಾಗಿ ಇದ್ದರೆ ನನಗದೇ ನೆಮ್ಮದಿ. " ಎಂದು ಬಿಟ್ಟ.

"ನೀವು ಒಪ್ಪಿದರೂ ಸರಿ ! ಬಿಟ್ಟರೂ ಅಷ್ಟೇ !! ನಾನೊಂದು ನಿರ್ಧಾರಕ್ಕೆ ಬಂದಿದ್ದೇನೆ. ಈ ಹುಡುಗನ ಹೆಸರು ಶಂಕರ್. ನಿಮ್ಮಿಬ್ಬರನ್ನು ಆಸ್ಪತ್ರೆಗೆ ಸೇರಿಸಿರುವುದೂ ಅಲ್ಲದೇ ಆಕಾಶ್ ಗೆ ರಕ್ತ ನೀಡಿ ಕಾಪಾಡಿದವನು ಇವನ ತಂದೆ. ಶಂಕರ್ ಗೆ ಕಲಿಯಬೇಕೆಂದು ತುಂಬಾ ಆಸೆ. ನಾನು ಅವನಿಗೆ ಅಕ್ಷರಾಭ್ಯಾಸ ಮಾಡಿಸಬೇಕೆಂದಿದ್ದೇನೆ. ಆತನಿಗೆ ದಿನಾಲು ನಮ್ಮ ಮನೆಗೆ ಬರಲು ಹೇಳಿದ್ದೇನೆ. ಸ್ವಲ್ಪ ಹೊತ್ತು ನಾನು ಅವನಿಗೆ ಅಕ್ಷರ ಹೇಳಿಕೊಡಬೇಕೆಂದಿದ್ದೇನೆ. "ನಯವಾಗಿ ಹೇಳಿದಳು ಶಾರದಾ.

"ನನ್ನದೂ ಒಂದು ತೀರ್ಮಾನ ಕೇಳು."

ಪ್ರಸಾದ್ ನುಡಿದಾಗ ಆತಂಕವಾಯಿತು ಶಾರದಾಳಿಗೆ. ನನ್ನ ಈ ಪ್ರಯತ್ನಕ್ಕೆ ತಡೆ ಒಡ್ಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಣುತ್ತದೆ. ಈಗೇನು ಮಾಡುವುದು??

ಶಾರದಾ ಎಂದು ಮತ್ತೆ ಪ್ರಸಾದ್ ಕರೆದಾಗ ಏನು ಎನ್ನುವಂತೆ ಆತನ ಮುಖ ನೋಡಿದಳು ಶಾರದಾ.

"ನಾನೂ ಸಹ ಒಂದು ತೀರ್ಮಾನಕ್ಕೆ ಬಂದಿದ್ದೇನೆ. ಈ ಮಗುವಿನ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ಧಾರಿ ನನ್ನದು. ಆತನಿಗೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆತನನ್ನು ಸ್ಕೂಲಿಗೆ ಸೇರಿಸುತ್ತೇನೆ. ಮುಂದಿನ ವರ್ಷದಿಂದ ಆಕಾಶ್ ಹಾಗೂ ಶಂಕರ್ ಜೊತೆಯಾಗಿ ಸ್ಕೂಲಿಗೆ ಹೋಗಲಿ."

ಗಂಡನ ಮಾತು ಕೇಳಿ ಶಾರದಾಳ ಸಂಭ್ರಮ ಎಲ್ಲೆ ಮೀರಿತು. ಎಷ್ಟೊಂದು ಬದಲಾವಣೆ ತನ್ನ ಗಂಡನಲ್ಲಿ !! ಸಂತಸದಿಂದ ಬೀಗಿದಳು ಶಾರದಾ.

"ಅಮ್ಮಾ ನನ್ನದೂ ಒಂದು ಆಸೆಯಿದೆ."

ಆಕಾಶ್ ನುಡಿದಾಗ ಶಾರದಾ ಹಾಗೂ ಪ್ರಸಾದ್ ರ ದೃಷ್ಟಿ ಆತನ ಕಡೆಗೆ ಹೋಯಿತು.

"ಅಮ್ಮ ! ನಾನೂ ನಿನ್ನ ಜೊತೆಗೆ ಆತನಿಗೆ ಓದು ಬರಹ ಕಲಿಸುತ್ತೇನೆ. ನನ್ನ ಹತ್ತಿರ ನನ್ನ ಹಿಂದಿನ ತರಗತಿಯ ಎಲ್ಲ ಪುಸ್ತಕಗಳು ಇವೆ. ನಾವಿಬ್ಬರೂ ಸೇರಿ ಶಂಕರ್ ಗೆ ಕಲಿಸೋಣ. ನನ್ನ ಹತ್ತಿರ ಒಂದಿಷ್ಟು ಒಳ್ಳೆಯ ಬಟ್ಟೆಗಳಿವೆ. ಅವೆಲ್ಲವನ್ನು ನಾನು ಶಂಕರ್ ಗೆ ನೀಡುತ್ತೇನೆ. ನಾಳೆಯಿಂದ ನಾನು ಆತನ ಜೊತೆ ಮೈದಾನದಲ್ಲಿ ಆಟ ಆಡುತ್ತೇನೆ. ಇನ್ನು ಮೇಲೆ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್."

"ಶಾರದಾ ನೀನೆಷ್ಟೇ ಹೇಳಿದರೂ ನನ್ನಲ್ಲಿ ಶ್ರೀಮಂತಿಕೆಯ ಹಮ್ಮು ಬೆಳೆದು ಬಿಟ್ಟಿತ್ತು. ಬಡವರಿಗೆ ಬದುಕೇ ಇಲ್ಲ. ಅವರು ಬದುಕಿ ಬಾಳಲು ಯೋಗ್ಯರಲ್ಲ ಎನ್ನುವುದು ನನ್ನ ಮನಸ್ಸಿನಲ್ಲಿ ಅಚ್ಚಾಗಿ ಬಿಟ್ಟಿತ್ತು. ನಾನು ಬೆಳೆದು ಬಂದ ವಾತಾವರಣ ಹಾಗೆ ಇತ್ತು. ನೀನು ಸರಿಯಾದ ಸಮಯಕ್ಕೆ ನನ್ನ ಕಣ್ಣು ತೆರೆಸಿದೆ. ಇನ್ನುಮೇಲೆ ನನ್ನ ಮಗ ಎಲ್ಲರೊಳಗೊಂದಾಗಿ ಬಾಳುತ್ತ ಜೀವನದ ಸವಿ ಅನುಭವಿಸಲಿ.'
'ಅಷ್ಟೇ ಅಲ್ಲ. ನನ್ನ ದುಡಿಮೆಯ ಒಂದು ಭಾಗವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೀಸಲಿಡುತ್ತೇನೆ. "

ಗಂಡ ಹಾಗೂ ಮಗನ ಈ ಬದಲಾವಣೆ ಶಾರದಾಗೆ ಸಂತಸ, ಸಂಭ್ರಮ ತಂದಿತು.

 ಲೇಖಕರು:ಗೀತಾ ಹೆಬ್ಬಾರ್
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059