ದಿನಕ್ಕೊಂದು ಕಥೆ 1085
*🌻ದಿನಕ್ಕೊಂದು ಕಥೆ🌻*
ಇವತ್ತು ಎಲ್ಲರ ಬಾಯಲ್ಲಿ ಬರ್ತಾ ಇರೋದು ಅದೊಂದೇ ಹೆಸರು... ಅರುಣ್ ಯೋಗಿರಾಜ್. ಎಲ್ಲೋ ಎಂಬಿಎ ಮಾಡ್ತಾ ಇದ್ದ ಹುಡುಗನಿಗೆ ಅನ್ನಿಸಿರಬೇಕು... ಅನ್ನಿಸೋದು ಚಿಕ್ಕ ಪದ, ಪ್ರೇರಣೆ ಆಗಿರಬೇಕು. ಅಷ್ಟು ದುಡ್ಡು ಕೊಟ್ಟು ಓದಿ, ಕೆಲಸಕ್ಕೂ ಹೋಗ್ತಾ, ಕೀಬೋರ್ಡ್ ಕುಟ್ಟುತ್ತಾ ಇರೋ ವ್ಯಕ್ತಿಯೊಬ್ಬ, ಇಲ್ಲಪಾ ನಾನು ಅದ್ಯಾವುದೋ ಕಲ್ಲು ಕುಟ್ಟೋ ಕೆಲಸಕ್ಕೆ ಹೋಗ್ತೀನಿ ಅಂದಾಗ ಅರುಣನ ಅಪ್ಪನೇ ಮೊದಲು ಒಪ್ಪಿರಲಿಲ್ಲ ಅನ್ನೋದನ್ನ ತಿಳಿದುಕೊಂಡೆ. ನಾನು ಈ ಕ್ಷೇತ್ರಕ್ಕೆ ತಡವಾಗಿ ಬಂದೆ ಅಂತ ಅರುಣ್ ಖುದ್ದು ಮಾಧ್ಯಮಗಳ ಮುಂದೆ ಹೇಳ್ತಾನೇ ಇರ್ತಾರೆ... ಯಾವ್ ಯಾವುದೋ ಅಡಕೆ ಕುಟ್ಟೋ ಕುಟ್ಟಾಣಿಗಳನ್ನೆಲ್ಲ ಮಾಡ್ತಾ ಮಾಡ್ತಾ ಇವತ್ತು ರಾಮನ ವಿಗ್ರಹ ಮಾಡಿ ಆತ ತನ್ನ ಜನ್ಮವನ್ನೇ ಪಾವನ ಮಾಡ್ಕೊಂಡಿದಾನೆ. ಯಾವುದು ಸಿಕ್ಕಾಗ ಇನ್ನೇನು ಬೇಡ ಅನ್ಸುತ್ತೋ ಅದಕ್ಕೆ ಶ್ರಮಿಸಬೇಕು ಅಂತ ಅಧ್ಯಾತ್ಮ ಹೇಳುತ್ತೆ. ತಡವಾಗಿ ಬಂದೆ ಈ ಕ್ಷೇತ್ರಕ್ಕೆ ಅನ್ನುವ ಅರುಣ್ ಯೋಗಿರಾಜ್ಗೆ ದೇವರು ಆ ಆನಂದವನ್ನ ಇಷ್ಟು ಬೇಗ ದಯಪಾಲಿಸಿದ್ದಾನೆ ಅಂದ್ರೆ, ಅವತ್ತು ಕಂಪನಿಗೆ ರಾಜೀನಾಮೆ ಹಾಕೋ ಆತನ ನಿರ್ಧಾರ ಪ್ರೇರಣೆಯೇ ಆಗಿತ್ತು ಅನ್ನೋದಕ್ಕೆ ಇದಕ್ಕಿಂತ ಇನ್ನೇನ್ ಸಾಕ್ಷಿ ಬೇಕು ಹೇಳಿ?
ನಿಮ್ಮ ಮನಸ್ಸು ಹೇಳುವ ಯಾವ ಕೆಲಸ ಮಾಡೋದಕ್ಕೂ ಯಾವತ್ತಿಗೂ ತಡ (ಲೇಟ್) ಅಂತ ಇಲ್ಲವೇ ಇಲ್ಲ ಅನ್ನೋದನ್ನ ವಿಶ್ವದ ಸಾಧಕರು ಸಾರಿ ಸಾರಿ ಹೇಳಿದ್ದಾರೆ. ಇದೊಂದು ಪ್ರಕರಣದಿಂದ ನಾವು ಕಲಿಯಬಹುದಾದ, ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬಹುದಾದ ಎಷ್ಟೋ ಸಂಗತಿಗಳಿದೆ.
ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅವರ ಪತ್ನಿ... ಅಮೆರಿಕ ಗುರುತಿಸೋವಂತೆ ಫಸ್ಟ್ ಲೇಡಿ ಎಲೀನರ್ ರೂಸ್ವೆಲ್ಟ್ರ ಒಂದು ಕೋಟ್ ಇತ್ತೀಚೆಗೆ ಓದೋ ಥರ ಆಯ್ತು.. "ಭವಿಷ್ಯ ಅನ್ನೋದು ಕನಸುಗಳಲ್ಲಿರೋ ಸೌಂದರ್ಯವನ್ನ ನಂಬುವವರಿಗೆ ಸೇರಿದೆ." ಅಂತ.
ನಮ್ಮ ಕನಸುಗಳು ದೊಡ್ಡದೇ ಇರಬಹುದು... ಆದರೆ ಅವುಗಳನ್ನು ವಸೀ ತುಂಡಾಕು, ಅದ್ರಾಗ್ ವಸಿ ತುಂಡಾಕು ಅಂತ ಕವಿರತ್ನ ಕಾಳಿದಾಸದಲ್ಲಿ ಹೇಳೋ ಥರನೇ ನಾವೂ ಇಲ್ಲಿ ಸಣ್ಣ ಸಣ್ಣದಾಗಿ ನಮ್ಮ ಗುರಿಯನ್ನ ಬ್ರೇಕ್ ಮಾಡ್ಕೊಂಡು ಪ್ರತಿ ದಿನವೂ, ಒಂದೊಂದೇ ಹೆಜ್ಜೆ ಇಡ್ತಾ ಒಂದು ಹಂತದಲ್ಲಿ ಮಾತ್ರ ನಮ್ಮ ಗಮನವನ್ನು ಕೇಂದ್ರೀಕರಿಸುವುದು ಮುಖ್ಯ ಅನ್ನೋದನ್ನ ಅರುಣ್ ನೋಡಿ ಕಲಿಯಬಹುದು.
ಅರುಣ್ ಒಬ್ಬರೇ ಲೇಟಾಗಿ Chase your dreams ಅಂತ ಹೋಗಿಲ್ಲ. ಇನ್ನೂ ಹತ್ತು ಹಲವು ಸಾಧಕರದ್ದು ಇದೇ ಹಣೆಬರಹ. ನೀವೆಲ್ಲರೂ ಮನೋಜ್ ಭಾರ್ಗವ ಅನ್ನೋ ಹೆಸರನ್ನ ಕೇಳಿರ್ತೀರೇನೋ.. ಅಮೆರಿಕದಲ್ಲಿರೋರಿಗೆ 5 Hour Energy ಅನ್ನೋ ಎನರ್ಜಿ ಡ್ರಿಂಕ್ ಗೊತ್ತಿರುತ್ತೆ. 30 ವರ್ಷದವರೆಗೆ ತನ್ನ ಯೌವನವನ್ನೆಲ್ಲ ಟ್ಯಾಕ್ಸಿ ಓಡಿಸ್ತಾ ಕಳೆದ ವ್ಯಕ್ತಿ ಅದೇನೋ ಮಾಡಿ 5 Hour Energy Drinkನ ಹುಟ್ಟುಹಾಕಿದ. ಮನುಷ್ಯನಿಗೆ ಈಗ 71 ಆಗಿದೆ. ಆದ್ರೆ ಈತ ಲೇಟ್ ಅಂತ ಸುಮ್ನೆ ಇದ್ದಿದ್ದರೆ ಸಾಧನೆ ಮಾಡಕ್ ಆಗ್ತಾ ಇತ್ತಾ? ಇಲ್ಲ..
ಅಷ್ಟೇ ಅಲ್ಲ... ನಂಗ್ ಯಾವಾಗ್ಲೂ ಇಷ್ಟ ಆಗೋ ಇನ್ನೊಂದು ಉದಾಹರಣೆ ರೇ ಕ್ರಾಕ್ ಅಲಿಯಾಸ್ ರೇಮಂಡ್ ಆ್ಯಲ್ಬರ್ಟ್ ಕ್ರಾಕ್ ಅವರದ್ದು. ಈ ಮನುಷ್ಯ ಅಂತೂ ಯೌವನ ಎಲ್ಲ ಮುಗಿಸಿ, 52 ವರ್ಷ ದಾಟಿಯಾಗಿತ್ತು. ಅಲ್ಲಿಯವರೆಗೂ ಅಮೆರಿಕದ ಬೀದಿ ಬೀದಿಗಳಲ್ಲಿ ಪೇಪರ್ ಕಪ್ಗಳು ಹಾಗೂ ಮಿಲ್ಕ್ಶೇಕ್ ಮಿಕ್ಸರ್ಗಳನ್ನ ಮಾರಾಟ ಮಾಡ್ತಾ ಅದರಿಂದ ಬರೋ ಬಿಡಿಗಾಸಲ್ಲಿ ಜೀವನ ಮಾಡ್ತಾ ಇದ್ದರು. ಆದ್ರೆ ಇವತ್ತು ಈತ ಹುಟ್ಟುಹಾಕಿರೋ ಮೆಕ್ಡೊನಾಲ್ಡ್ಸ್ ದೇಶ ವಿದೇಶದಲ್ಲಿ ಫೇಮಸ್ಸು...ಕೋಟಿಗಟ್ಟಲೆ ವ್ಯವಹಾರ ಮಾಡೋ ಸಂಸ್ಥೆಯನ್ನ ಜಗತ್ತಿಗೆ ಕೊಟ್ಟು ತಣ್ಣಗೆ ಹೋದ ಈ ಮನುಷ್ಯ.
ಆಯ್ತಪ್ಪಾ ಇನ್ನೂ ಲೇಟಾಗಿ ಕನಸನ್ನ ಬೆನ್ನೇರಿ ಹೊರ್ಟೋರ ಸಂಖ್ಯೆ ಸಿಕ್ಕಾಪಟ್ಟೆ ಇದೆ. ಇನ್ನೇನು ಸಾಯುವ ಹಂತದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂದಾಗ ಒಂದು ಕ್ಷಣವೂ ಅಯ್ಯೋ ವಯಸ್ಸಾಯ್ತಲ್ಲಾ ಸಾರ್ ಎನ್ನಲಿಲ್ಲ... 78 ವರ್ಷದ ತನಕ ಪಾಪ ಆ್ಯನಾ ಮೇರಿ ರಾಬರ್ಟ್ಸನ್ ಮೋಸಸ್ ಚಿಕ್ಕಂದಿನಿಂದಲೂ ಮನೆ ಚಾಕರಿ ಮಾಡ್ತಾ ಇದ್ಳು. ಗಿಡಕ್ಕೆ ನೀರ್ ಹಾಕಿ ಹೂದೋಟ ನೋಡ್ತಾ ಇದ್ದ ಹೆಂಗಸಿಗೆ ತನ್ನ ಕಲೆಗೆ ನೀರೆರೆಯಬೇಕು ಅಂತ ಅನ್ನಿಸಿದ್ದು 78 ವರ್ಷ ಪ್ರಾಯದಲ್ಲಿ... ಈಕೆ ಬಿಡಿಸಿದ ಪೇಂಟಿಂಗ್ ಅದೆಷ್ಟ್ ಫೇಮಸ್ ಆಯ್ತು ಅಂದ್ರೆ, 2006ರಲ್ಲಿ ಈಕೆಯ ಪೇಂಟಿಂಗ್ 1.2 ಮಿಲಿಯನ್ ಡಾಲರ್ ಅಂದ್ರೆ, ಹೆಚ್ಚೂಕಡಿಮೆ 10 ಕೋಟಿ ರುಪಾಯಿಗೆ ಮಾರಾಟ ಆಗಿದೆ. ಆ ಕಲೆಯೇ ಆಕೆಯನ್ನ ಅಷ್ಟು ವರ್ಷ ಬದುಕಿಸಿತ್ತೋ ಏನೋ... ಬರೋಬ್ಬರಿ 101 ವರ್ಷ ಬದುಕಿಬಿಟ್ಟಿತ್ತು ಆ ಅಜ್ಜಿ.
ಉದಾಹರಣೆಗಳು ಸಾಕಷ್ಟಿದೆ.. ಆದ್ರೆ ಅರುಣ್ ಯೋಗಿರಾಜ್ ಥರ ಮನಸ್ಸು ಮಾಡಬೇಕು ಅಷ್ಟೇ. ನಾನು ಓದಿರೋದೇ ಒಂದು, ಕೆಲಸ ಮಾಡ್ತಾ ಇರೋದೇ ಒಂದು ಅಂತ ಎಷ್ಟೋ ಜನರಿಗೆ ಅನ್ನಿಸಬಹುದು. ಒಂದು ಓದ್ಕೊಂಡು ಇನ್ನೊಂದ್ ಏನೋ ಕೆಲಸ ಮಾಡೋಷ್ಟು ಮನಸ್ಸು ಮಾಡಿದೀವಿ ಅಂದ್ರೆ, ಇನ್ನೊಂಚೂರು ಮರ್ಯಾದೆ ಬಿಟ್ಟು ಯಾಕೆ ನಾವೇ ಕಂಡ ಕನಸ್ಸನ್ನ ಚೇಸ್ ಮಾಡೋದಕ್ಕೆ ಪ್ರಯತ್ನಿಸಬಾರದು?
ಅರುಣ್ರನ್ನ ನೋಡಿದಾಗ ಇಷ್ಟೆಲ್ಲ ಅನ್ನಿಸಿದ್ದಂತೂ ಸುಳ್ಳಲ್ಲ.
ಕೃಪೆ: ಚಿರು ಭಟ್
ಸಂಗ್ರಹ:ವೀರೇಶ್ ಅರಸೀಕೆರೆ.
********************************************
*ಯು ಆರ್ ಗ್ರೇಟ್ ಅತ್ತೆ.*
ಸಂಜೆ ಕಚೇರಿಯಿಂದ ಬಂದು, ಮನೆಯೊಳಗೆ ಕಾಲಿಡುತ್ತಿದ್ದಂತೆ ಸರಳಾ ಳ ಮೂಗಿಗೆ"ಘಂ"ಎನ್ನುವ ಉಪ್ಪಿಟ್ಟಿನ ಪರಿಮಳ ತಾಕಿದಾಗ "ಆಹ್ಹಾ...! ಇದೇನತ್ತೇ.?."ಎಂದು ಹುಬ್ಬೇರಿಸುತ್ತ ಅಲ್ಲೇ ವರಾಂಡದ ಕುರ್ಚಿ ಮೇಲೆ ಕುಳಿತ ಅತ್ತೆಗೆ ಪ್ರಶ್ನಿಸಿದಳು.ಅದಕ್ಕವರು, "ಹೂಂ.. ತರಕಾರಿ ಹಾಕಿ ಉಪ್ಪಿಟ್ಟು ಮಾಡಿದ್ದೇನೆ"ಎಂದರು."ಹೌದಾ..ನನ್ನ ಫೇವರಿಟ್ ತಿಂಡಿ"ಎನ್ನುತ್ತ ಬೇಗ ಫ್ರೆಶಪ್ಪಾಗಿ ಅಡುಗೆ ಮನೆಗೆ ಬಂದಳು.ಅಷ್ಟರಲ್ಲಿ ಅವಳ ಅತ್ತೆ ಕೂಡ ಅಲ್ಲಿಗೆ ಬಂದಿದ್ದರು.ಅಡುಗೆ ಕಟ್ಟೆ ಮೇಲೆ ದೊಡ್ಡ ಪಾತ್ರೆ ಭರ್ತಿ ಘಮ ಘಮಿಸುವ ಉಪ್ಪಿಟ್ಟು ಕಂಡು,"ಇದೇನತ್ತೇ ಮನೆಲಿ ನೋಡಿದ್ರೆ ಇರೊವ್ರು ಮೂರು ಮತ್ತೊಂದು ಜನ.ಇದನ್ನ ನೋಡಿದ್ರೆ ಏನಿಲ್ಲಾ ಅಂದ್ರೂ ಹದಿನೈದು ಇಪ್ಪತ್ತು ಜನ ತಿನ್ನ ಬಹುದು,ಅಲ್ಲಾ..."ಎಂದು ಮತ್ತಿನ್ನೇನೋ ಹೇಳ ಹೊರಟವಳನ್ನು ಅರ್ಧಕ್ಕೆ ತಡೆದ ಸರಳಾ ಳ ಅತ್ತೆ"ಗೊತ್ತು ಕಣಮ್ಮಾ... ಇಂದು ಏಕಾದಶಿ ನೋಡು, ದೇವಸ್ಥಾನದಲ್ಲಿ ನೇವೇದ್ಯ ಇರಲ್ಲ,ಪಾಪ ಅಲ್ಲಿರೊ ಆಸುಪಾಸಿನ ಬಡವರು ನಿತ್ಯ, ದೇವಸ್ಥಾನದ ಪ್ರಸಾದ ಬಾಯಿ ಚಪ್ಪರಿಸಿಕೊಂಡು ತಿಂತಿದ್ರು,ಈ ದಿನ ಅವ್ರೂ ಯಾಕೆ ಉಪವಾಸ ಇರ್ಬೇಕು ಅಂತ ಅನಿಸ್ತು,ಮನೇಲಿ ಹೇಗೂ ಸಾಕಷ್ಟು ತರಕಾರಿ ಇತ್ತಲ್ಲ,ಅದನ್ನೇ ಹಾಕಿ ಮಾಡಿದೆ.ನೋಡು ಟೇಸ್ಟ ಹೇಗಿದೆ ಅಂತ" ಎನ್ನುತ್ತ ಪ್ಲೆಟಿಗೆ ಹಾಕಿ ಕೊಟ್ಟರು.ಬಿಸಿಯಾದ,ರುಚಿಯಾದ ಉಪ್ಪಿಟ್ಟನ್ನು ತೃಪ್ತಿಯಾಗುವಷ್ಟು ತಿಂದ ಸರಳ" ವೇರಿ ಫೈನ್ ಅತ್ತೆ"ಎಂದು ಹೇಳಿ ಎರಡು ಕ್ಯಾರಿಯರ್ ತುಂಬ ಅದನ್ನು ತುಂಬಿಕೊಂಡು ,ಅತ್ತೆಯ ಜೊತೆಗೆ ಹತ್ತಿರದ ದೇವಸ್ಥಾನದ ಆಸುಪಾಸಿನಲ್ಲಿ ವಾಸವಾಗಿದ್ದ ಬಡಬಗ್ಗರಿಗೆ ತಾನೇ ಖುದ್ದಾಗಿ ಕೊಡುತ್ತ ಬಂದಳು.ಹಸಿದ ಹೊಟ್ಟೆಗಳು ಅದನ್ನು ಸ್ವೀಕರಿಸಿ,ಮೊಗದ ತುಂಬ ನಗೆ ಸೂಸಿದಾಗ,ಸರಳ ಳ ಒಳ ಮನಸ್ಸು"ಅತ್ತೇ..ಯು ಆರ್ ರಿಯಲೀ ಗ್ರೇಟ್.."ಎಂದು ಎನ್ನದೇ ಇರಲಿಲ್ಲ.
ಲೇಖಕರು:ಅರವಿಂದ.ಜಿ.ಜೋಷಿ.
ಮೈಸೂರು
Comments
Post a Comment