ದಿನಕ್ಕೊಂದು ಕಥೆ 1086
*🌻ದಿನಕ್ಕೊಂದು ಕಥೆ🌻*
*ಬದಲಾವಣೆಯತ್ತ ಒಂದೊಂದೇ ಹೆಜ್ಜೆ.*
ಡಾಕ್ಟರ್ ಶಿಗಾಕಿ ಹಿನೋಹರಾ ಜಪಾನಿನ ಅತ್ಯಂತ ಪ್ರಸಿದ್ಧ ವೈದ್ಯರು. ನೂರಾಐದು ವರ್ಷ ಬದುಕಿ ಬಾಳಿದ್ದ ಅವರು ಕೊನೆಯವರೆಗೂ ನಿವೃತ್ತರಾಗದೇ, ಚಟುವಟಿಕೆಯಿಂದಿದ್ದರು .
ಅವರಲ್ಲಿಗೆ ಒಬ್ಬ ಮಹಿಳೆ ಸಲಹೆಗಾಗಿ ಬಂದಳು. ಆಕೆಗೆ ಹೆಚ್ಚುತ್ತಿರುವ ತೂಕದಿಂದ ಹಲವಾರು ಖಾಯಿಲೆಗಳೂ ಕಾಣಿಸಿಕೊಂಡಿದ್ದವು. ಬಹಳ ಒತ್ತಡದ ಜೀವನಶೈಲಿಯ ಆಕೆಗೆ, ವ್ಯಾಯಾಮ ಮಾಡಲಾಗಲೀ,ನಡೆಯಲಾಗಲಿ, ಸಮಯವಿರಲಿಲ್ಲ. ಡಾಕ್ಟರ್ ಶಿಗಾಕಿಯವರಿಗೆ , ಇದು ತಕ್ಷಣಕ್ಕೆ ಪರಿಹಾರವಾಗುವಂತಹ ಸಮಸ್ಯೆಯಲ್ಲಾ ಎಂದು ಗೊತ್ತಾಯಿತು. ಆಗ ಅವರು, ನಿಮಗೆ ದಿನಾ ಹಾಡು ಕೇಳುವ ಅಭ್ಯಾಸ ವಿದೆಯಾ ? ಎಂದು ಮಹಿಳೆಯನ್ನು ಕೇಳಿದರು.ಆಕೆ ಹೌದೆಂದು ತಲೆ ಅಲ್ಲಾಡಿಸಿದಳು. ಹಾಗಾದರೆ, ಒಂದು ವಾರ ಯಾವುದಾದರೂ ಹಾಡಿಗೆ ದಿನಕ್ಕೊಂದು ನಿಮಿಷದಂತೆ ನೃತ್ಯ ಮಾಡಲಾಗುವುದೇ? ಎಂದು ಕೇಳಿದರು ವೈದ್ಯರು.
ಆಗ ಆ ಮಹಿಳೆ, ಮುಗುಳ್ನಗುತ್ತಾ, ಓಹ್, ಒಂದು ನಿಮಿಷ ತಾನೇ, ಅಷ್ಟು ಸಮಯವಿಲ್ಲದೆ ಏನು? ಎಂದು ನೃತ್ಯ ಮಾಡಲು ಒಪ್ಪಿಕೊಂಡಳು.
ಒಂದು ವಾರ ಬಿಟ್ಟು ಮತ್ತೆ ಆಕೆ ವೈದ್ಯರ ಬಳಿಗೆ ಬಂದಾಗ, ಶಿಗಾಕಿ ಯವರು, ಇಡೀ ಹಾಡಿಗೆ ದಿನವೂ ನೃತ್ಯಮಾಡಲು ಸಮಯವಿದೆಯೇ? ಎಂದು ಕೇಳಿದರು. ಅದಕ್ಕೂ ಆ ಮಹಿಳೆ ಸಂತೋಷದಿಂದ ಒಪ್ಪಿಕೊಂಡಳು. ಹಾಗೆ ಮುಂದಿನ ವಾರ ಬಂದಾಗ, ಎರಡು ಹಾಡುಗಳ ನೃತ್ಯ ಮಾಡಲು ಹೇಳಿದರು, ಅದಾದ ಮೇಲೆ ನೃತ್ಯದ ಜೊತೆಗೆ ಕೆಲವು ಸುಲಭ ವ್ಯಾಯಾಮಗಳನ್ನು ಸೇರಿಸಿಕೊಳ್ಳಲು ಹೇಳಿಕೊಟ್ಟರು
ಹೀಗೆಯೇ ನಿಧಾನವಾಗಿ ವ್ಯಾಯಾಮದ ಅವಧಿಯನ್ನು ಹೆಚ್ಚಿಸುತ್ತಾ ಒಂದು ವರ್ಷ ಕಳೆಯುವಷ್ಟರಲ್ಲಿ , ದಿನವೂ ಒಂದರಿಂದ ಒಂದೂವರೆ ಗಂಟೆಯಷ್ಟು ದೈಹಿಕ ವ್ಯಾಯಾಮಕ್ಕೆ ಸಮಯವನ್ನು ಮೀಸಲಿಟ್ಟಳು ಆ ಮಹಿಳೆ. ಆಕೆ ಒಂದು ವರ್ಷದಲ್ಲಿ ಇಪ್ಪತ್ತು ಕೆಜಿ ಅಷ್ಟು ತೂಕವನ್ನು ಇಳಿಸಿಕೊಂಡಳು. ಆರೋಗ್ಯವೂ ಬಹಳಷ್ಟು ಸುಧಾರಿಸಿತು. ಅವಳ ಮುಖಚರ್ಯೆ ಗೆಲುವಿನಿಂದ ಬದಲಾಯಿತು.
ಮನುಷ್ಯನ ಮಿದುಳು ಎಷ್ಟು ಅದ್ಭುತವಾದದ್ದೊ ಅಷ್ಟೇ, ಹಠಮಾರಿಯೂ ಕೂಡ ಹೌದು. ತಕ್ಷಣದ ಬದಲಾವಣೆಗಳನ್ನು ಅದು ಒಪ್ಪಿಕೊಳ್ಳುವುದಿಲ್ಲ. ಒಂದು ವೇಳೆ ವೈದ್ಯರು ಆ ಮಹಿಳೆಗೆ ತಕ್ಷಣವೇ ನೀನು ನಾಳೆಯಿಂದ ಪ್ರತಿದಿನ ಒಂದು ಗಂಟೆ ವ್ಯಾಯಾಮ ಮಾಡಬೇಕು ಎಂದಿದ್ದರೆ ಆಕೆ ಯಾವ ಕಾರಣಕ್ಕೂ ಅದನ್ನು ಮಾಡಲು ಒಪ್ಪುತ್ತಿರಲಿಲ್ಲ. ತಕ್ಷಣಕ್ಕೆ ಅದು ಸಾಧ್ಯವೂ ಆಗುತ್ತಿರಲಿಲ್ಲ.
ನಾವು ನಮ್ಮ ಜೀವನದಲ್ಲಿ ಬದಲಾವಣೆಗಳನ್ನು ನಿಧಾನವಾಗಿ ಅಳವಡಿಸಿಕೊಳ್ಳಬೇಕು. ಏನೂ ಓದದ ಮಕ್ಕಳಿಗೆ ದಿನವೂ ನೀನು ನಾಲ್ಕಾರು ಗಂಟೆ ಗಳ ಕಾಲ ಓದಬೇಕು ಎಂದರೆ ಅದು ಸಾಧ್ಯವೇ? ಒಂದೊಂದು ವಿಷಯವನ್ನು ಹದಿನೈದು ನಿಮಿಷಗಳ ಕಾಲ ಓದು ಎನ್ನಬೇಕು. ಹಾಗೆಯೇ ಶಾಲೆಯಲ್ಲಿ ಮಕ್ಕಳಿಗೆ ಕೊಡುವ ಮನೆಕೆಲಸವನ್ನೂ(ಹೊಮ್ ವರ್ಕ್)ಕೂಡಾ ಸ್ವಲ್ಪ ಸ್ವಲ್ಪವೇ ಕೊಡುತ್ತಾ ಹೋದರೆ ಮಕ್ಕಳು ಖುಷಿಯಿಂದ ತಪ್ಪದೇ ಮಾಡುತ್ತವೆ. ಕ್ರಮೇಣವಾಗಿ ಅದನ್ನು ಸ್ವಲ್ಪ ಸ್ವಲ್ಪವಾಗಿ, ಹೆಚ್ಚಿಸುತ್ತಾ ಹೋದರೆ ಅವುಗಳಿಗೆ ಅದು ಹೊರೆ ಎನಿಸುವುದಿಲ್ಲ. ಐದು ಚಪಾತಿ ತಿನ್ನುವವರಿಗೆ ನೀನು ಒಂದೇ ಚಪಾತಿ ತಿನ್ನಬೇಕು ಎಂದರೆ, ಅದು ಖಂಡಿತ ಸಾಧ್ಯವಿಲ್ಲ. ಅಂತಹವರಿಗೆ ಕೇವಲ ಒಂದು ಚಪಾತಿ ಕಡಿಮೆ ಮಾಡು ಎಂದು ಹೇಳಬೇಕು. ಹಾಗೆಯೇ ದಿನಕ್ಕೆ ಒಂದು ಪ್ಯಾಕ್ ಸಿಗರೇಟ್ ಸೇದುವವರು ಮೊದಲು ಒಂದು ಸಿಗರೇಟನಿಂದ ಕಡಿಮೆಮಾಡಿಕೊಳ್ಳಬೇಕು.
ಸಣ್ಣ ಸಣ್ಣದಾಗಿ ಪ್ರಾರಂಭಿಸಿದ ಕೆಲಸಗಳೂ
ನಮ್ಮ ಅರಿವಿಗೇ ಬಾರದಂತೆ ದೊಡ್ಡ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದು ಬಹಳ ಅಚ್ಚರಿಯ ವಿಚಾರ.
ಸಾವಿರ ಮೈಲಿಗಳ ಪಯಣವು ಕೂಡಾ ಶುರುವಾಗುವುದು ಕೇವಲ ಮೊದಲ ಹೆಜ್ಜೆಯಿಂದಲೇ, ಈ ರೀತಿಯ ಯಾವುದೇ ಬದಲಾವಣೆಯಡೆಗೆ ನಾವು ಸಾಗುವಾಗ ಹಂತ ಹಂತವಾಗಿ ಮುನ್ನೆಡವ ತೀರ್ಮಾನ ಕೈಗೊಳ್ಳಬೇಕು. ಆಗ ಅದು ನಮಗೆ ಸುಲಭವೆನಿಸಿ, ಅದರಲ್ಲಿ ಆಸಕ್ತಿ ಉಂಟಾಗಿ, ಇನ್ನೂ ಮುಂದುವರಿಯಲು ಪ್ರೇರೇಪಿಸುವುದು. ಆಗ ಯಶಸ್ಸು ಖಂಡಿತವಾಗಿ ನಮ್ಮದಾಗುತ್ತದೆ.
ಕೃಪೆ :ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment