ದಿನಕ್ಕೊಂದು ಕಥೆ 1092

*🌻ದಿನಕ್ಕೊಂದು ಕಥೆ🌻*
*ಇರುವೆ ಕಲಿಸಿದ ಪಾಠ*

ಅವರು ಹೆಸರಾಂತ ಕಾಲೇಜಿನ ಬುದ್ಧಿವಂತ ಪ್ರೊಫೆಸರ್, ಅವರಿಗೆ ಬಿಡಿಸಲಾಗದ ಒಂದು ಸಮಸ್ಯೆ ಎದುರಾಯಿತು. ಚೆನ್ನಾಗಿ ಓದುತ್ತಿದ್ದ ಅವರ ಮಗ, ವಿದ್ಯಾಭ್ಯಾಸ ದ ಮುಖ್ಯ ಹಂತಕ್ಕೆ ಬಂದಾಗ, ದಾಟದೆ ಅಲ್ಲಿ ಫೇಲ್ ಆಗಿಬಿಟ್ಟ. ಇದರಿಂದ ಆ ಹುಡುಗ ಬೇಸರಗೊಂಡು ಓದುವುದನ್ನು ನಿಲ್ಲಿಸುತ್ತಾನೆ. ತಂದೆ ಎಷ್ಟೇ ಬುದ್ಧಿವಾದ ಹೇಳಿದರೂ ಆತ ಏನನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಉತ್ಸಾಹ, ಧೈರ್ಯ ಕಳೆದುಕೊಂಡು, ಓದನ್ನು ನಿಲ್ಲಿಸಿ ಏನು ಮಾಡದೆ ಕೂತುಬಿಟ್ಟ. ಬೆಳೆಯುವ ವಯಸ್ಸು ಬೆಳೆದು ಯುವಕನಾಗುತ್ತಿದ್ದಾನೆ. ಎಲ್ಲಿ ಭವಿಷ್ಯವನ್ನೇ ಹಾಳು ಮಾಡಿ ಕೊಳ್ಳುವನೋ ಎಂದು ತಂದೆಗೆ ಭಯವಾಗಿ, ಕೊನೆಗೆ ಒಬ್ಬ ಗುರುಗಳ ಬಳಿ ಮಗನನ್ನು ಕರೆದುಕೊಂಡು ಬಂದು ತಮ್ಮ ಸಮಸ್ಯೆಯನ್ನು ಹೇಳಿ ಕೊಂಡರು.

ಗುರುಗಳು ಆ ಬಾಲಕನನ್ನು ಏಳು ದಿನ ತಮ್ಮ ಬಳಿಗೆ ಕಳಿಸುವಂತೆ  ಹೇಳಿದರು.
ಅದೇ ರೀತಿ ಮರುದಿನ ಹುಡುಗ ಗುರುಗಳ ಬಳಿ ಬಂದನು. ಗುರುಗಳು ಆತನಿಗೆ ದೂರದ ಬೆಟ್ಟದ ಮೇಲಿರುವ ಒಂದು ದೇವಸ್ಥಾನವನ್ನು ತೋರಿಸಿ, ನೋಡು ಮಗು ಈ ದೇವಸ್ಥಾನದ ಸುತ್ತಮುತ್ತ  ಒಂದು ಗಿಡ ಮರ ಹೂ ಬಳ್ಳಿಗಳು ಚಿಗುರುವುದಿಲ್ಲ. ಏಕೆಂದರೆ ಅಲ್ಲಿ ಲೆಕ್ಕವಿಲ್ಲದಷ್ಟು ಇರುವೆ ಗೂಡುಗಳಿವೆ. ಇದರಿಂದ ಗಿಡ ಮರಗಳು ಬೆಳೆಯುವುದಿಲ್ಲ.  ನೀನು ಅಲ್ಲಿರುವ ಇರುವೆ ಗೂಡುಗಳನ್ನು ನಾಶ ಮಾಡಬೇಕು. ಆದರೆ, ಒಂದೇ ಒಂದು ಇರುವೆಯ ಜೀವಕ್ಕೆ ಹಾನಿಯಾಗಬಾರದು ಎಂದರು.

ಗುರುಗಳು ಹೇಳಿದಂತೆ ಆತ ಗುಡ್ಡದ ಮೇಲೆ ಹೋದ. ಒಂದು ಕೋಲನ್ನು ತೆಗೆದು ಕೊಂಡು ಇರುವೆಗಳಿಗೆ ಹಾನಿಯಾಗದಂತೆ ಗೂಡನ್ನು ಕುಟ್ಟಿ ನಾಶ ಮಾಡಿದ. ನಾಳೆ ಮತ್ತಷ್ಟು ಗೂಡು ನಾಶ ಮಾಡಬಹುದು ಹೀಗಂದು ಕೊಂಡು ಗುರುಗಳಿಗೆ ಹೇಳಿ ಮನೆಗೆ ಹೋದನು. ಆ ರಾತ್ರಿ ಯೋಚಿಸಿದ. ಪಾಪ ಯಾರಿಗೂ ಹಾನಿ ಮಾಡಿದ ಇರುವೆ ಗೂಡನ್ನು ನಾಶ ಮಾಡುವುದು ಎಂದರೇನು? ಗುರುಗಳು ಯಾಕೆ ಹೀಗೆ ಹೇಳಿದರು? ಆ ಸಣ್ಣ ಜೀವಿಗಳ ಮನೆಯನ್ನು ನಾಶ ಮಾಡುವುದು ಪಾಪವಲ್ಲವೇ?
ಗುರುಗಳು ಇದೆಂಥ ಕೆಲಸ ಕೊಟ್ಟಿದ್ದಾರೆ. ಇವರಿಗೆ  ಬುದ್ಧಿ ಇಲ್ಲವೇ? ಇದ್ದಿದ್ದರೆ ಗೂಡನ್ನು ನಾಶ ಮಾಡುವಂಥ ಕೆಲಸ ಏಕೆ ಕೊಡುತ್ತಿದ್ದರು ನಾನು ಒಪ್ಪಬಾರದಿತ್ತು. 
ಹೀಗೆ ಯೋಚಿಸಿದರೂ, ಗುರುಗಳ ಮಾತಿನಂತೆ ಮರುದಿನ ಮತ್ತೆ  ದೇವಾಲಯ ದ ಹತ್ತಿರ ಹೋದಾಗ, ಅವನು ಕೆಡವಿದ್ದ ಇರುವೆ ಗೂಡಿನ ಪಕ್ಕದಲ್ಲೇ ಇರುವೆಗಳು ಹೊಸದಾದ ಗೂಡನ್ನು ಕಟ್ಟಿ ಮೊದಲಿನಂತೆ ಓಡಾಡುತ್ತಿದ್ದವು. 

ಆ ಹುಡುಗನಿಗೆ ಸಿಟ್ಟು ಬಂತು, ಹೊಸದಾಗಿ ಕಟ್ಟಿದ ಇರುವೆ ಗೂಡಿನ ಮೇಲೆ ಒಂದಷ್ಟು ನೀರು ತಂದು ಸುರಿದು ಗೂಡನ್ನು ಚೆಲ್ಲಾಪಿಲ್ಲಿ ಮಾಡಿದನು. ಮತ್ತೆ ಮರುದಿನ ಬಂದಾಗ ಪಕ್ಕದಲ್ಲಿ  ಮತ್ತೊಂದು ಗೂಡು ಕಟ್ಟಿದ್ದವು. ಮೂರ್ನಾಲ್ಕು ದಿನ  ಹೀಗೆ ಮಾಡಿದರೂ ಅವು ಮತ್ತೆ ಮತ್ತೆ ದೊಡ್ಡದಾದ ಗೂಡನ್ನು ಕಟ್ಟಿಕೊಂಡು  ಎಂದಿನಂತೆಯೇ ಓಡಾಡಿಕೊಂಡಿದ್ದವು.  ಸಿಟ್ಟಿನಿಂದ ಇರವೆಯ ಗೂಡನ್ನು ಕಾಲಿ ನಿಂದ ಪಚ ಪಚ ತುಳಿದು  ಹಾಕಿದ. ಅವನ ಕಾಲ ಕೆಳಗೆ  ಒಂದಷ್ಟು ಇರುವೆಗಳು
ಸಿಕ್ಕಿ ಸತ್ತುಹೋದವು. ಅವನು ಎಷ್ಟೇ ಪ್ರಯತ್ನ ಮಾಡಿದ್ರು, ಇರುವೆಗಳು, ಧೈರ್ಯ ಗೆಡದೆ ಸೋಲನ್ನೇ ತಿರಸ್ಕರಿಸಿ ಮುಂದೆ ಸಾಗಿದ್ದವು. ಎಂದೆಂದಿಗೂ ಅವುಗಳ ಗೂಡನ್ನು ನಾಶ ಮಾಡಲು ಸಾಧ್ಯವಿಲ್ಲ ಎಂಬುದು ಅವನಿಗೆ ತಿಳಿಯಿತು. 

ಆರನೇ ದಿನ ಗುರುಗಳ ಬಳಿ ಬಂದು ನಡೆದದ್ದನ್ನು ಹೇಳಿದ. ಆಗ ಗುರುಗಳು,
ನೋಡಿದೆಯಾ ಮಗು, ಇರುವೆಗಳ ಮನೆಯನ್ನು ಎಷ್ಟೇ ಕೆಡವಿದರೂ, ಅವು ಸೋಲಿಗೆ ಹೆದರಲಿಲ್ಲ, ಧೈರ್ಯ ಬಿಡದೆ, ತಮ್ಮ ಸಾಮರ್ಥ್ಯ, ಉತ್ಸಾಹವನ್ನು ಕಡಿಮೆ
ಮಾಡಿಕೊಳ್ಳದೆ ಮತ್ತೆ ಮತ್ತೆ ಮನೆ ಕಟ್ಟಿಕೊಂಡು ಅವು ಜೀವನವನ್ನು ಮುಂದು ವರೆಸಿವು. ನಾನು ನಿನಗೆ ಇದನ್ನೇ ಅರ್ಥ ಮಾಡಿಸಲು ಹೀಗೆ ಮಾಡಿದೆ. ಅಷ್ಟು ಚಿಕ್ಕ ಇರುವೆಗೆ ಅಂತ ಶಕ್ತಿ ಇದೆ ಅಂದರೆ, ನೀನು ಅವುಗಳಿಗಿಂತ ದೊಡ್ಡವನು ನಿನ್ನಲ್ಲಿ ಸಾಮರ್ಥ್ಯವಿದೆ, ದೇಹದಲ್ಲಿ ಶಕ್ತಿ ಇದೆ, ನಮ್ಮಿಂದ ಇದು ಆಗುವುದಿಲ್ಲ ಎಂದು ಕೊಂಡಿದ್ದನ್ನು ಧೈರ್ಯ ಗೆಡದೆ  ಛಲದಿಂದ ಮಾಡಬೇಕು.  ಯಾವತ್ತೂ ಸೋಲನ್ನು ಒಪ್ಪಿಕೊಳ್ಳದೆ ಇರುವೆಗಳಂತೆ ಇರಬೇಕು. ಎಡವಿದ ಬೆರಳು ಮತ್ತೆ ಎಡವುದು ಸಹಜ. ಹಾಗಂತ ಸೋತು ಅಲ್ಲಿಯೇ ನಿಲ್ಲದೆ ಮುಂದೆ ಸಾಗುತ್ತಾ ಇರಬೇಕು. ಗುರುಗಳ ಮೂಲಕ ಚಿಕ್ಕ ಇರುವೆಗಳಿಂದ ಪಾಠ ಕಲಿತ ಆ ಹುಡುಗ ಗುರುಗಳ ಆಶೀರ್ವಾದ ಪಡೆದು, ಮುಂದೆ ಧೈರ್ಯದಿಂದ ಮುನ್ನಡೆದು ಗೆಲುವನ್ನು ಪಡೆದನು. 

ಆಗದು ಎಂದು ಕೈಲಾಗದು ಎಂದು ಕೈಕಟ್ಟಿ ಕುಳಿತರೆ
ಸಾಗದು ಕೆಲಸವು ಮುಂದೆ
ಮನಸೊಂದಿದ್ದರೆ ಮಾತು ಉಂಟು ಕೆಚ್ಚೆದೆ ಇರಬೇಕೆಂದು
ಕೆಚ್ಚೆದೆ ಇರಬೇಕೆಂದೆಂದು!

ಕೆತ್ತಲಾಗದು ಕಗ್ಗಲ್ಲೆಂದು ಎದೆಗೊಂದಿದ್ದರೆ ಶಿಲ್ಪಿ
ಆಗುತ್ತಿತ್ತೇ ಕಲೆಗಳ ಬೇಡು
ಗೊಮ್ಮಟೇಶನ ನೆಲೆ ನಾಡು
ಬೇಲೂರು ಹಳೇಬೀಡು.

ಬರಹ:- ಆಶಾ ನಾಗಭೂಷಣ.
ಕೃಪೆ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1097