ದಿನಕ್ಕೊಂದು ಕಥೆ 1095

*🌻ದಿನಕ್ಕೊಂದು ಕಥೆ🌻*
   *ಕೈ ತುತ್ತು*

ಹಿಂದಿನ ವರ್ಷ ಗಂಡನು ತೀರಿಹೋದಾಗ, ನೆರೆಯವರು, ನೆಂಟರಿಷ್ಟರು ಯಾರೂ ಅಷ್ಟಾಗಿ ಸಹಾಯ ಮಾಡದೆ, ವಯಸ್ಸಾದ ತಾವೊಬ್ಬರೇ ಒದ್ದಾಡಿದ್ದು, ಮನದಲ್ಲಿ ಇನ್ನೂ ಅಚ್ಚಳಿಯದೆ ಹಾಗೇ ಉಳಿದಿತ್ತು. ಬೇರೆ ದೇಶದಲ್ಲಿದ್ದ ಸ್ವಂತ ಮಕ್ಕಳು ಕೂಡ, ಅಂತ್ಯಕ್ರಿಯೆಗೆ ಅಂತ ಅಲ್ಲಿಂದಲೇ ದುಡ್ಡು ಕಳಿಸಿ ಕೈತೊಳೆದುಕೊಂಡಿದ್ದರು. ಅದರಿಂದಲೇ ನಾಳೆ ಮಾಡಬೇಕಾದ ವರ್ಷದ ತಿಥಿಗೆ, ಅವರ್ಯಾರನ್ನು ಕರೆಯದೆ, ಶಾಲೆಯ ಒಂದಷ್ಟು ಮಕ್ಕಳಿಗೆ ಸರಳವಾಗಿ ಊಟ ಹಾಕುವುದಂತ ನಿರ್ಧರಿಸಿ, ಒಂದೈದು ಬುದ್ದಿವಂತ ಮಕ್ಕಳನ್ನು ಕಳಿಸಿಕೊಡಲು ಮೇಷ್ಟ್ರಿಗೆ ಹೇಳಿದ್ದರು. ಅವರ ಆರ್ಥಿಕ ಪರಿಸ್ಥಿತಿಯೂ ಈ ನಿರ್ಧಾರಕ್ಕೆ ಕಾರಣವಾಗಿತ್ತು. 

ಬೆಳಗ್ಗೆಯೇ ಎದ್ದು ಯಜಮಾನರ ಫೋಟೋಗೆ ಪೂಜೆ ಮಾಡಿ, ಏಳೆಂಟು ಜನರಿಗೆ ಆಗುವಷ್ಟು ಅಡಿಗೆ ಮಾಡಿಟ್ಟು, ಮಕ್ಕಳಿಗಾಗಿ ಕಾಯುತ್ತಿದ್ದರು. ಮಧ್ಯಾಹ್ನ ಒಂದರ ಹೊತ್ತಿಗೆ, ".......ಊಟದ ಆಟ ಮುಗಿದಿತ್ತು" ಅಂತ ಹಾಡು ಹೇಳುತ್ತಾ, ಸಾಲಾಗಿ ಹದಿನೈದು-ಇಪ್ಪತ್ತು ಮಕ್ಕಳ ಗುಂಪೇ ಮನೆಗೆ ಬಂದಿದ್ದು ಕಂಡು ಅವರು ದಂಗಾಗಿ ಹೋದರು. 
"ಹೇಗಪ್ಪಾ!! ಇಷ್ಟು ಮಕ್ಕಳಿಗೆ ಊಟ ಹಾಕೋದು, ಮೇಷ್ಟ್ರಿಗೆ ನಾನು ಹೇಳಿದ್ದು ಐದು ಜನ ಮಾತ್ರ, ಅವರೇನಾದರೋ ತಪ್ಪು ತಿಳಿದರೇ!!" ಅಂತ ಪೇಚಾಡುತ್ತಿರುವಾಗಲೇ ಮೇಷ್ಟು ಬಂದಿದ್ದು ಕಂಡಿತು. ಆಕೆಯ ಮುಖದ ಮೇಲೆ ಎದ್ದು ಕಾಣುತ್ತಿದ್ದ ಅವರ ಗೊಂದಲ ಅರ್ಥೈಸಿಕೊಂಡ ಮೇಷ್ಟ್ರು "ಅಮ್ಮಾ! ನೀವು ಬುದ್ದಿವಂತ ಹುಡುಗರನ್ನ ಊಟಕ್ಕೆ ಕಳಿಸಿ ಅಂದ್ರಿ, ಆದ್ರೆ ನಮ್ಮಲ್ಲಿ ಇರೋ ಮಕ್ಕಳೆಲ್ಲ ಬುದ್ದಿವಂತ ಮಕ್ಕಳೇ, ಅದಕ್ಕೆ ಎಲ್ಲರನ್ನೂ ಕರೆ ತಂದೆ" ಅಂತ ನಕ್ಕರು.

"ಆದ್ರೆ....." ಅಂತ ಅವರೇನೋ ಹೇಳಲು ಹೊರಟ ಮಾತನ್ನು ಪರಿಗಣಿಸದೆ ಮೇಷ್ಟ್ರು ಮುಂದುವರೆದರು 

"ನೋಡಿ ಅವನು ಇದ್ದಾನಲ್ಲ! ಕೊನೆಯಲ್ಲಿ ನಿಂತವನು, ಅವನು ಎಲ್ಲಾ ಆಟಗಳಲ್ಲೂ ಮುಂದು, ಇವಳು, ಯಾವ ಲೆಕ್ಕ ಕೊಟ್ರೂ ಪಟ್ ಅಂತ ಮಾಡ್ತಾಳೆ, ಇವನು, ಚಿತ್ರ ಎಷ್ಟು ಚಂದ ಬಿಡಿಸ್ತಾನೆ ಗೊತ್ತಾ, ಅವಳು ಚೋಟು ಹುಡುಗಿ ಇದಾಳಲ್ಲ ಅವಳು, ಒಂದಕ್ಷರವೂ ತಪ್ಪಿಲ್ಲದ ಹಾಗೆ, ಮುತ್ತು ಪೋಣಿಸಿದ ಹಾಗೆ ಬರೆಯುತ್ತಾಳೆ,  ಇವಳು ಎರಡು ಜಡೆ ಹಾಕಿದ್ದಾಳಲ್ಲ ಅವಳು ಹಾಡೋದು ಕೇಳ್ಬೇಕು ನೀವು......." ಅಂತ ಮೇಷ್ಟ್ರು ಎಲ್ಲರ ಬಗ್ಗೆ ಹೇಳುತ್ತಿರುವಾಗಲೇ ಅವರು ಮಧ್ಯ ಮಾತಾಡಿದರು.

"ಆ.....ಆ.... ಗೊತ್ತಾಯ್ತು ಮೇಷ್ಟ್ರೇ! ನನ್ನದೇ ತಪ್ಪಾಯ್ತು! ಎಲ್ಲರನ್ನೂ ಕರೆಯಬೇಕಾಗಿತ್ತು, ಹೇಗಿದ್ರೂ ಶಾಲೆಯಲ್ಲಿ ಇದ್ದಿದ್ದೇ ಇಪ್ಪತ್ತು ಮಕ್ಕಳು, ಆದ್ರೆ ಹೀಗೇನ್ಮಾಡೋದು, ಆಗ್ಲೇ ಹೊತ್ತಾಗಿದೆ, ನಾನು ಮಾಡಿಟ್ಟಿರೋದು, ಏಳೆಂಟು ಜನರಿಗೆ ಮಾತ್ರ ಸಾಕಾಗಬಹುದು, ಈಗ ಮತ್ತೆ ಮಾಡಲು ಹೊತ್ತಾಗುತ್ತೆ..." ಅಂತ ಅವರು ಪೇಚಾಡಿದರು. 

"ಅಮ್ಮ, ಮತ್ತೇನೂ ಮಾಡಬೇಡಿ! ಈಗ ಇರೋದನ್ನೇ ಎಲ್ಲರಿಗೂ ಕೈ ತುತ್ತು ಹಾಕಿಬಿಡಿ... ನೀವು ಮಮತೆಯಿಂದ ಬಡಿಸಿದರೆ, ಇರುವುದೇ ಸಾಕಾಗುತ್ತೆ" ಎಂದಾಗ ಅನುಮಾನಿಸುತ್ತಲೇ ಅವರು ಒಳಗಡೆ ಹೋಗಿ ಇರುವುದೆಲ್ಲವನ್ನೂ ಅಂಗಳಕ್ಕೆ ತರುವಷ್ಟರಲ್ಲಿ ಮಕ್ಕಳೆಲ್ಲ ಕೈ ತೊಳೆದು ವೃತ್ತಾಕಾರದಲ್ಲಿ ಕೂತಿದ್ದರು. ಮೊದಲಿಗೆ ಕೋಸಂಬರಿಯನ್ನು ಎಲ್ಲರಿಗೂ ಪುಟ್ಟ ಪುಟ್ಟ ಕೈ ತುತ್ತು ನೀಡಿದರು. ಮಕ್ಕಳೆಲ್ಲ ಖುಷಿಯಾಗಿ ತಿಂದರು. ಕೋಸಂಬರಿ ಪಾತ್ರೆ ಕೆಳಗಿಟ್ಟು ಪಲ್ಯವನ್ನು ಕೈತುತ್ತು ನೀಡಲು ಆ ಪಾತ್ರೆ ತೆಗೆದುಕೊಂಡರು. ಅವರು ಹೆಜ್ಜೆಯಿಡುವ ಮೊದಲೇ, ಪುಟ್ಟ ಹುಡುಗಿಯೊಂದು 
"ಅಜ್ಜಿ, ನಿಮಗೇಕೆ ಶ್ರಮ, ನೀವು ಅಲ್ಲಿಯೇ ಕೂತುಕೊಳ್ಳಿ, ನಾವೇ ಸಾಲಾಗಿ ಅಲ್ಲಿಗೇ ಬರುತ್ತೇವೆ...."
ಎಂದಾಗ, ಉಳಿದ ಮಕ್ಕಳು ಕೂಡ "ಹೌದು ಹೌದು" ಅಂತ ಒಕ್ಕೊರಲಿನಿಂದ ಕೂಗಿದವು.
ಅದನ್ನು ಕಂಡು ಅವರ ಕಣ್ಣು ತುಂಬಿಬಂತು.
"ಮೇಷ್ಟ್ರೇ! ನೀವು ಹೇಳಿದ ಹಾಗೆ ಈ ಎಲ್ಲ ಮಕ್ಕಳೂ ನಿಜಕ್ಕೂ ಬುದ್ದಿವಂತರೇ..." ಅಂತ ಮೇಷ್ಟ್ರ ಕಡೆ ತಿರುಗಿ ಹೇಳಿದಾಗ, ಅವರು ಕೂಡ ಅಭಿಮಾನದಿಂದ ತಲೆದೂಗಿದರು.

ಪಲ್ಯ ನೀಡಿದ ಮೇಲೆ, ಅನ್ನ ಸಾರು, ಅನ್ನ ಮೊಸರನ್ನು ತಾವೇ ಪಾತ್ರೆಯಲ್ಲಿ ಕಲೆಸಿ, ಕೈತುತ್ತು ನೀಡಿ ಎಲ್ಲವನ್ನೂ ಮುಗಿಸಿದರು. ಮಕ್ಕಳೆಲ್ಲ ರುಚಿಯಾದ ಊಟದಿಂದ, ಕೈತುತ್ತಿನ ಅನನ್ಯ ಅನುಭವದಿಂದ ತುಂಬಾ ಖುಷಿಯಾಗಿದ್ದರು. 

"ಮಕ್ಕಳೇ ಊಟ ಹೇಗಿತ್ತು?" ಅಂತ ಮೇಷ್ಟ್ರು ಕೇಳಿದ್ದೇ, "ಬೊಂಬಾಟಾಗಿತ್ತು ಸರ್, ತುಂಬಾ ಧನ್ಯವಾದಗಳು ಅಜ್ಜಿ" ಅಂತ ಒಟ್ಟಿಗೆ ಹೇಳಿದರು.
"ಸರಿ ಮಕ್ಕಳೇ, ಆಗಲೇ ನಾವು ಸಾಲಿನಲ್ಲಿ ಬಂದ ಹಾಗೆಯೇ ಶಾಲೆಗೆ ತಿರುಗಿ ಹೋಗಬೇಕು" ಎಂದಾಗ ಮಕ್ಕಳೆಲ್ಲ ಸಾಲಾಗಿ ಹೊರಟರು.

ತಾವು ಹೊರಡುವ ಮುನ್ನ ಮೇಷ್ಟ್ರು
"ಅಮ್ಮಾ, ಇವರೆಲ್ಲ ಬೇರೆ ಊರಿನಿಂದ ಗುಳೇ ಬಂದ ಕಟ್ಟಡ ಕೆಲಸಗಾರರ ಮಕ್ಕಳು, ದಿನವೆಲ್ಲ ದುಡಿಯುವ ಅವರ ಅಪ್ಪ ಅಮ್ಮನಿಗೆ, ಕೈತುತ್ತು ಕೊಡುವಷ್ಟು ಬಿಡುವಿರುವುದಿಲ್ಲ, ಅದಕ್ಕೆ ಮಕ್ಕಳೆಲ್ಲ ನಿಜಕ್ಕೂ ಖುಷಿಯಾಗಿದ್ದಾರೆ, ಅವರಿಗೆ ಅಂತದೊಂದು ಅನುಭವವನ್ನ ತುಂಬಾ ಪ್ರೀತಿಯಿಂದ ಕೊಟ್ಟ ನಿಮಗೆ ಧನ್ಯವಾದಗಳು.." ಅಂತ ಹೇಳಿ ಹೊರಡಲು ಅನುವಾದರು.

"ನಾನೇ ನಿಮಗೆ ಧನ್ಯವಾದ ಹೇಳ್ಬೇಕು ಮೇಷ್ಟ್ರೇ, ಇಂತಹ ಮುದ್ದು ಮಕ್ಕಳನ್ನು ಕರೆತಂದಿದಕ್ಕೆ, ಅವರ ಒಗ್ಗಟ್ಟು ಮುರಿಯದೆ ಎಲ್ಲರನ್ನೂ ಕರೆ ತಂದಿದಕ್ಕೆ.... ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಗುರುತಿಸಿ ಅವರನ್ನ ಪ್ರೋತ್ಸಾಹಿಸುತ್ತಿದ್ದೀರಿ, ನಿಜಕ್ಕೂ ನಿಮ್ಮಂತಹ ಶಿಕ್ಷಕರನ್ನು ಪಡೆದ ಆ ಮಕ್ಕಳು ಧನ್ಯರು..." ಎನ್ನುತ್ತಾ ಭಾವುಕರಾದರು 

"ಒಂದೇ ಸಮಸ್ಯೆಯಾಯ್ತು ಈಗ, ಇದ್ದದೆಲ್ಲ ಮಕ್ಕಳಿಗೆ ಬಡಿಸಿಬಿಟ್ಟಿರಿ, ನಿಮ್ಮ ಊಟ?" ಅಂತ ಮೇಷ್ಟ್ರು ಕೇಳಿದಾಗ 
"ಅಯ್ಯೋ! ನನ್ನದು ಬಿಡಿ, ನಾನಿವತ್ತು ಉಪವಾಸ, ಆದ್ರೆ ಈ ಗಲಾಟೆಯಲ್ಲಿ ನಾನು ನಿಮ್ಮುನ್ನೆ ಮರೆತುಬಿಟ್ಟೆ, ದಯವಿಟ್ಟು ಕ್ಷಮಿಸಿ, ಹೀಗೇನ್ಮಾಡೋದು... "  ಅಂತ ಪೇಚಾಡುತ್ತಲೇ 
"ಒಂದ್ನಿಮಿಷ ಇರಿ " ಅಂದವರು, ಒಳಗಡೆ ಹೋಗಿ ಎರಡು ಬಾಳೆಹಣ್ಣು ತಂದರು.
"ಪೂಜೆಗೆ ಅಂತ ಇಟ್ಟಿದ್ದ ಬಾಳೆಹಣ್ಣು ತಂದು ಕೊಡ್ತಾ ಇದೀನಿ, ಏನೂ ಅಂದುಕೋಬೇಡಿ" ಅಂತ ಸಂಕೋಚದಿಂದಲೇ ಮೇಷ್ಟ್ರ ಕೈಗೆ ಕೊಟ್ಟರು
.
"ಅಮ್ಮಾ, ನೀವು ಏನೂ ಕೊಡದೆ ಇದ್ದಿದ್ರೂ ನನಗೇನೋ ಬೇಜಾರಿರಲಿಲ್ಲ, ನಾನೂ, ನಿಮ್ಮ ಹಾಗೆ ಯಜಮಾನ್ರನ್ನ ನೆನಪಿಸಿಕೊಳ್ಳುತ್ತ ಉಪವಾಸ ಮಾಡಿಬಿಡ್ತಿದ್ದೆ ಅಷ್ಟೇ...." ಎಂದಾಗ ಅವರ ಮುಖದಲ್ಲೂ ನಗೆ ಮೂಡಿತು.

✍️ಜಗದೀಶ್ ನಾಗರಾಜು ಇಡಗೂರು
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097