ದಿನಕ್ಕೊಂದು ಕಥೆ 1096

*🌻ದಿನಕ್ಕೊಂದು ಕಥೆ🌻*
   *ಜೀವನ್ಮುಖಿ*

ಒಂದು ಪಟ್ಟಣದಲ್ಲಿ,  ಬೇರೆ, ಬೇರೆ  ಹುದ್ದೆಯಲ್ಲಿದ್ದು ನಿವೃತ್ತರಾದ, ಹಿರಿಯರೆಲ್ಲಾ ಸೇರಿಕೊಂಡು ಒಂದು ಸಂಘವನ್ನು ಮಾಡಿಕೊಂಡಿದ್ದರು. ಇವರ ಮಕ್ಕಳೆಲ್ಲ ದೊಡ್ಡವರಾಗಿ ಅವರವರ ಪಾಡಿಗೆ ಅವರವರ ಜೀವನ ನಡೆಸಿಕೊಂಡು ಹೋಗುತ್ತಿದ್ದರು. ಹಾಗಾಗಿ ಈ ಹಿರಿಯರಿಗೆಲ್ಲಾ ತಮ್ಮ ಮಕ್ಕಳ ಜವಾಬ್ದಾರಿ ಅಷ್ಟಾಗಿ ಇರಲಿಲ್ಲ. ಇವರುಗಳ ಆರೋಗ್ಯ ಸ್ಥಿತಿ ಉತ್ತಮವಾಗಿದ್ದುದರಿಂದ , ಸುಮ್ಮನೆ ಏನೂ ಕೆಲಸವಿಲ್ಲದೆ ಕೂರುವುದರ ಬದಲು , ಸಮಾಜಕ್ಕೆ ಏನಾದರೂ ಸಹಾಯ ಮಾಡಿ  ,ತಾವೂ ಕೂಡ ಚಟುವಟಿಕೆಯಿಂದ ಇರಬಹುದು ಎಂದುಕೊಂಡು, ಇವರೆಲ್ಲ ಸೇರಿ ಒಂದು ಸಂಘವನ್ನು ಮಾಡಿಕೊಂಡಿದ್ದರು.

   ಸಂಘಕ್ಕೆ ಒಂದು ಸ್ಥಳವನ್ನು ಗೊತ್ತು ಮಾಡಿಕೊಂಡಿದ್ದರು. ಪ್ರತಿದಿನ ಸಾಯಂಕಾಲ ಎಲ್ಲರೂ ಅಲ್ಲಿ ಸೇರಿ ಏನಾದರೂ ಚಿಂತನೆ ಮಾಡುತ್ತಿದ್ದರು. ಶಿಕ್ಷಕರಾಗಿ ನಿವೃತ್ತರಾದವರು, ಹತ್ತಿರದ ಕೊಳಗೇರಿಯಲ್ಲಿರುವ ಮಕ್ಕಳಿಗೆ ಆಗಾಗ ಪಾಠ ಹೇಳಿ ಕೊಡುವರು. ಇನ್ನೂ ಕೆಲವರು ಮನೆ,ಮನೆಗಳಿಗೆ ಹೋಗಿ, ನೈರ್ಮಲ್ಯದ ಬಗ್ಗೆ, ಮಾತನಾಡುತ್ತಾ  ಮನೆ ಮುಂದೆ ಕೊಳಕು ಹಾಕದಿರುವಂತೆ, ತಿಳುವಳಿಕೆ ನೀಡುತ್ತಿದ್ದರು. ಮತ್ತೆ ಕೆಲವರು ಯಾರಿಗಾದರೂ ಕಾಯಿದೆ,‌ ಕಾನೂನಿನ ವಿಷಯದಲ್ಲಿ, ಭೂ ವಿಚಾರದಲ್ಲಿ ಏನಾದರೂ ಮಾಹಿತಿ ಬೇಕಿದ್ದರೆ ಉಚಿತವಾಗಿ ಸಲಹೆ ನೀಡುತ್ತಿದ್ದರು. ಮಹಿಳೆಯರ ಸ್ವಸಹಾಯ ಗುಂಪುಗಳನ್ನು ಮಾಡಿಸಿ ಅವರನ್ನು ಸ್ವಾವಲಂಬಿಯಾಗುವಂತೆ ಮಾಡುತ್ತಿದ್ದರು. ಹೀಗೆ ಸಮಾಜದಲ್ಲಿ ಯಾವ ವಿಷಯದ ಬಗ್ಗೆ ಅವಶ್ಯಕತೆ , ಇತ್ತೊ, ಅವುಗಳಿಗೆ ಸಹಕಾರಿಯಾಗುವಂತೆ ಕಾರ್ಯ ನಿರ್ವಹಿಸುತ್ತಿದ್ದರು. ಇದರಿಂದ ಸಮಾಜಕ್ಕೂ ಎಷ್ಟೋ ಅನುಕೂಲವಾಗಿತ್ತು, ಹಾಗೂ ಈ ಹಿರಿಯರಿಗೂ, ತಮ್ಮ ಜೀವನದಲ್ಲಿ ಏನಾದರೂ ಒಂದು ಸಾರ್ಥಕ ಕಾರ್ಯ ಮಾಡಿದ ತೃಪ್ತಿ ದೊರಕುತ್ತಿತ್ತು.

   ಹೀಗಿರುವಾಗ ಒಂದು ಸಂಜೆ ಸಂಘದ ಕಾರ್ಯದರ್ಶಿಯೊಬ್ಬರು ಸಂಘಕ್ಕೆ ಬರಲಿಲ್ಲ. ಅವರಿಗೇನೊ ತೊಂದರೆ ಆಗಿರಬೇಕೆಂದುಕೊಂಡರು ಉಳಿದ ಸದಸ್ಯರು. ಆದರೆ ,ಅದರ ಮುಂದಿನ ಮೂರು ನಾಲ್ಕು ದಿನವೂ ಅವರು  ಸಂಘಕ್ಕೆ ಬರಲಿಲ್ಲ. ಅವರೆಂದೂ ಈ ರೀತಿಯಾಗಿ ತಪ್ಪಿಸಿಕೊಂಡವರಲ್ಲ. ಸ್ವಲ್ಪ ತಡವಾಗಿ ಬರುವುದಿದ್ದರೂ ಹೇಳಿ ಕಳುಹಿಸುತ್ತಿದ್ದರು. ಸಂಘದ ಅಧ್ಯಕ್ಷರಿಗೆ ಚಿಂತೆಯಾಯಿತು. ಮತ್ತೊಬ್ಬ ಸದಸ್ಯರನ್ನು ಕರೆದು, ಕಾರ್ಯದರ್ಶಿ ಅವರ ಬಗ್ಗೆ ವಿಚಾರಿಸಿಕೊಂಡು ಬರಲು ಹೇಳಿದರು.

   ‌ ಆ ಸದಸ್ಯರು ಮರುದಿನ ಬಂದು, ಕಾರ್ಯದರ್ಶಿಗಳ ಮಗನಿಗೆ ಬೇರೆ ಊರಿಗೆ ವರ್ಗವಾಗಿದೆ. ಅವರೆಲ್ಲ ಬೇರೆ ಊರಿಗೆ ಹೋಗಿದ್ದಾರೆ. ಕಾರ್ಯದರ್ಶಿಗಳ ಹೆಂಡತಿ ಕಾಲವಾಗಿ ಮೂರು ವರ್ಷಗಳಾಗಿವೆ. ಹೀಗಾಗಿ ಮನೆಯಲ್ಲಿ ಇವರೊಬ್ಬರೇ.ಅವರಿಗೆ ತಾವು ಒಬ್ಬರೇ ‌ಎಂದು ಬೇಜಾರಾಗಿರಬೇಕು.ಹಾಗಾಗಿ ಇವರು ಮನೆ ಬಿಟ್ಟು ಎಲ್ಲೂ ಹೊರಗೆ ಬರುತ್ತಿಲ್ಲ. ಬಹುಶಃ ಏಕಾಂಗಿತನದಿಂದ ಅವರಿಗೆ ಖಿನ್ನತೆ ಉಂಟಾದಂತೆ ಕಾಣುತ್ತಿದೆ. ಎಂದು ಹೇಳಿದರು.

   ಇದನ್ನು ಕೇಳಿದ ಅಧ್ಯಕ್ಷರು ಮರುದಿನವೇ, ಕಾರ್ಯದರ್ಶಿಗಳ ಮನೆಗೆ ಹೋದರು. ಅಧ್ಯಕ್ಷರನ್ನು ನೋಡಿ ಕಾರ್ಯದರ್ಶಿಗಳು ಗಲಿಬಿಲಿ ಗೊಂಡರು. ಅವರಿಗೆ ಸಂಘಕ್ಕೆ ಬರಲು ಮನಸ್ಸಿಲ್ಲ, ಆದರೆ ಅಧ್ಯಕ್ಷರು ಬರಲು  ಹೇಳಿದರೆ ಏನು ಮಾಡುವುದೆಂಬ ಚಿಂತೆ. ಆದರೆ ಅಧ್ಯಕ್ಷರು ಯಾವ ಮಾತನ್ನೂ ಆಡಲೇ ಇಲ್ಲ. ಸುಮ್ಮನೆ ಒಳಗೆ ಬಂದು ಕುಳಿತುಕೊಂಡರು. ಚಳಿಗಾಲ ವಾಗಿದ್ದರಿಂದ, ಕಾರ್ಯದರ್ಶಿಗಳು  ಒಲೆಯ ಮುಂದೆ ಕುಳಿತು,ಒಲೆಯಲ್ಲಿ ಕಟ್ಟಿಗೆ ಹಾಕಿ ಬೆಂಕಿ ಮಾಡಿ ಮೈ ಕಾಯಿಸಿಕೊಳ್ಳುತ್ತಾ ಕೂತಿದ್ದರು. ಅಧ್ಯಕ್ಷರು ಅಲ್ಲಿಯೇ ಬಂದು ಚಾಪೆಯ ಮೇಲೆ ಕುಳಿತರು. ಒಲೆಯಲ್ಲಿ ಕೆಂಡ ನಿಗಿನಿಗಿ ಉರಿಯುತ್ತಿತ್ತು. ಏನೂ ಮಾತನಾಡದೇ, ಅಧ್ಯಕ್ಷರು, ಒಲೆಯ ಹತ್ತಿರ ಬಂದು ಚಿಮ್ಮಟಿಗೆಯಿಂದ ನಿಗಿನಿಗಿ ಎಂದು ಉರಿಯುತ್ತಿದ್ದ ಒಂದು ಕೆಂಡವನ್ನು ಎಳೆದು ಒಲೆಯ ಹೊರಗೆ ಇಟ್ಟರು. ಮತ್ತೆ ಬಂದು ಕುಳಿತುಕೊಂಡು ಅದನ್ನೇ ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ನಂತರ ಹೊರಗೆ ಇಟ್ಟ ಕೆಂಡ  ಆರಿ ಹೋಗಿ, ತಣ್ಣಗಾಗಿ, ಇದ್ದಿಲಾಯಿತು. ಅಧ್ಯಕ್ಷರು ಸರಿ ನಾನಿನ್ನು ಬರುತ್ತೇನೆ ಎಂದು ಎದ್ದು ಹೊರಟರು. ಆಗಲೂ ಸಂಘಕ್ಕೆ  ಯಾಕೆ ಬರುತ್ತಿಲ್ಲ  ಎಂದು ಅವರನ್ನು ಕೇಳಲಿಲ್ಲ . ಅಧ್ಯಕ್ಷರನ್ನು ಕಳುಹಿಸಲೆಂದು ಗೇಟಿನವರೆಗೆ ಬಂದ ಕಾರ್ಯದರ್ಶಿಗಳು, ಸ್ವಾಮಿ, ನಾಳೆಯಿಂದ ತಪ್ಪದೇ ಸಂಘಕ್ಕೆ ಬರುತ್ತೇನೆ. ಮಾತನಾಡದೇ, ನನಗೆ ಒಳ್ಳೆಯ ಪಾಠ ಕಲಿಸಿದ್ದೀರಿ., ಎಂದರು. ಹೌದಾ, ಅಂತದ್ದೇನು ಮಾಡಿದೆ ನಾನು? ಎನ್ನುತ್ತಾ ,ಹುಬ್ಬೇರಿಸಿದರು ಅಧ್ಯಕ್ಷರು.

"ಹೊರಗೆ ತೆಗೆದ  ಕೆಂಡ ,ಒಲೆಯಲ್ಲಿ ಉಳಿದ ಕೆಂಡಗಳ ಜೊತೆಗೆ ಇದ್ದಾಗ ಪ್ರಖರತೆಯಿಂದ ಉರಿದು ಶಾಖ ,ಬೆಳಕು ಕೊಡುತ್ತಿತ್ತು. ಅದು ಒಂದೇ ಬೇರೆಯಾದಾಗ ಎಲ್ಲವನ್ನು ಕಳೆದುಕೊಂಡು ಇದ್ದಿಲಾಯಿತು. ನಾನು ಕೆಂಡದ ಹಾಗೆ ಪ್ರಕಾಶದಿಂದಿರಬೇಕು ,ಇದ್ದಿಲಾಗುವುದು ಬೇಡ"ಎಂದು ಕಣ್ಣೀರು ತಂದುಕೊಂಡರು. ಅಧ್ಯಕ್ಷರು ಅವರ ಬೆನ್ನು ತಟ್ಟಿ  ಸಮಾಧಾನ ಮಾಡಿದರು.

   ವ್ಯಕ್ತಿ ಸಮಾಜ ಮುಖಿಯಾದಾಗ ಅವನ ಶಕ್ತಿ ವರ್ಧನೆಯಾಗುತ್ತದೆ ಏಕಾಂಗಿ ಆದಾಗ ಅವನಲ್ಲಿರುವ ಶಕ್ತಿ ಕುಗ್ಗಿ,  ಬಲಹೀನವಾಗುತ್ತದೆ.ಯಾವುದೇ  ಕಾರ್ಯಮಾಡುತ್ತಿದ್ದರೆ, ಚೈತನ್ಯ  ಚಟುವಟಿಕೆಯಿಂದ ಹಿಗ್ಗುತ್ತದೆ, ಏಕಾಂಗಿಯಾಗಿ  ಏನೂ ಕೆಲಸವಿಲ್ಲದೆ ಇದ್ದಾಗ, ಇರುವ ನಮ್ಮ ಶಕ್ತಿಯೂ ಕುಗ್ಗಿ ಶಕ್ತಿ ಹೀನನ್ನನ್ನಾಗಿಸುತ್ತದೆ. ನಮ್ಮ ಚೈತನ್ಯ ಎಂದೂ ಕುಗ್ಗಬಾರದು.  ಇರುವಷ್ಟು ದಿನವೂ ಖುಷಿ ಖುಷಿಯಾಗಿ ಇರಬೇಕೆಂದರೆ  ಯಾವುದಾದರೂ ಒಳ್ಳೆಯ ಕೆಲಸದಲ್ಲಿ ‌ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು.

  ಕೃಪೆ:ಸುವರ್ಣೂ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097