ದಿನಕ್ಕೊಂದು ಕಥೆ 1098

*🌻ದಿನಕ್ಕೊಂದು ಕಥೆ🌻*
*ಕಲಿತ  ಯಾವುದೇ ವಿದ್ಯೆಯೂ ಎಂದೂ ಅಪ್ರಯೋಜಕ ವಲ್ಲಾ.*

 ತರುಣನೊಬ್ಬ ಅಧ್ಯಾಪಕ ವೃತ್ತಿಗೆ ಹೊಸದಾಗಿ ಸೇರಿದ್ದ. ಮಕ್ಕಳಿಗೆ ಪಠ್ಯಪುಸ್ತಕದಲ್ಲಿರುವ ಪಾಠದ ಜೊತೆಗೆ ಬೇರೆ ಏನನ್ನಾದರೂ ಕಲಿಸಬೇಕೆನ್ನುವ ಹಂಬಲ ಅವನಿಗೆ. ಅವನ ಜೊತೆಯಲ್ಲಿರುವ ಅಧ್ಯಾಪಕರಿಗೆ, ತಮಗೆ ಕೊಟ್ಟ ಕೆಲಸ  ತಾವು ಮಾಡಿಕೊಂಡು ಹೋದರೆ ಸಾಕು , ಪಠ್ಯಪುಸ್ತಕದಲ್ಲಿ, ಇಲ್ಲದೇ ಇರುವುದನ್ನೆಲ್ಲ ಏಕೆ ಅಂಟಿಸಿಕೊಳ್ಳಬೇಕು ಎನ್ನುವ ಮನೋಭಾವ ಅವರದ್ದು.‌ಅವರು ಕೊಡುವ ಸಂಬಳಕ್ಕೆ  ಎಷ್ಟು ಮಾಡಬೇಕೊ ಅಷ್ಟು ಮಾಡಿದರೆ ಸಾಕು  , ಇಲ್ಲದೆ ಇರುವುದನ್ನು ಏಕೆ ಅಂಟಿಸಿಕೊಳ್ಳುತ್ತಿಯಾ ಎಂದು ಯುವ ಅಧ್ಯಾಪಕನಿಗೆ ಎಲ್ಲರೂ  ಬುದ್ಧಿ ಹೇಳುತ್ತಿದ್ದರು.

    ಆದರೂ ,ಈ ಹೊಸ ಅಧ್ಯಾಪಕ, ಪಠ್ಯ ಪುಸ್ತಕದಲ್ಲಿರುವ ಪಾಠದ‌ ಜೊತೆಗೆ  ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ತಕ್ಕ ಹಾಗೆ ಏನನ್ನಾದರೂ ಹೇಳಿಕೊಟ್ಟು ಅವರ ಪ್ರತಿಭೆಯನ್ನು ಹೊರ ತರಲು ಪ್ರಯತ್ನಿಸುತ್ತಿದ್ದ. ನಿಧಾನವಾಗಿ ಈ ಅಧ್ಯಾಪಕ ,ಎಲ್ಲಾ ಮಕ್ಕಳಿಗೂ ಅಚ್ಚುಮೆಚ್ಚಿನವನಾದ. ಪಠ್ಯಪುಸ್ತಕದಲ್ಲಿರುವ ಬೇಸರ ಬರುವಂತ ಸಂಗತಿಗಳಿಗಿಂತ, ತಮ್ಮೊಳಗಿರುವ ಉತ್ಸಾಹಕ್ಕೆ ನೀರೆರೆಯುವ ಮೇಷ್ಟ್ರು, ಅವರಿಗೆ ಬಹಳ ಪ್ರಿಯವಾಗಿ ಕಾಣತೊಡಗಿದರು.ಎಲ್ಲಾ ಮಕ್ಕಳ ಬಾಯಲ್ಲೂ ಯವ‌ ಅಧ್ಯಾಪಕರ ಹೆಸರೇ.

   ಈ ಅಧ್ಯಾಪಕರು ಗಿಡಮರಗಳನ್ನು ತೋರಿಸಿ, ‌ಅವುಗಳ  ಉಪಯೋಗದ‌ ಬಗ್ಗೆ ವಿವರಣೆ ‌ನೀಡಿ , ಪಶು ಪಕ್ಷಿಗಳನ್ನು ತೋರಿಸಿ,ಅವುಗಳ‌ ಚಲನ‌ವಲನದ ಬಗ್ಗೆ ವಿವರಣೆ ನೀಡಿ,  ಗಿಡ‌ಮರಗಳಿಂದ,ಪಶು ,ಪಕ್ಷಿಗಳಿಂದ ಏನನ್ನು ಕಲಿಯಬೇಕು,ಎಂದೆಲ್ಲಾ ಹೇಳಿಕೊಡುತ್ತಿದ್ದರು.ಇದರಿಂದ‌ ಮಕ್ಕಳಲ್ಲಿ ಕಲಿಯುವ ಉತ್ಸಾಹ ಜಾಸ್ತಿಯಾಯಿತು.

   ಇದನ್ನೆಲ್ಲಾ ನೋಡಿ ,ಬೇರೆ ಅಧ್ಯಾಪಕರುಗಳಿಗೆ ಇವನ ಬಗ್ಗೆ ಹೊಟ್ಟೆ ಕಿಚ್ಚು ಶುರುವಾಯಿತು. ಇವನಿಂದ ತಮ್ಮ ಅಸ್ತಿತ್ವಕ್ಕೆ ಬೆಲೆ ಇಲ್ಲದಂತಾಗುತ್ತದೆ, ಎಂದುಕೊಂಡು, ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು, ಅವುಗಳ ತಲೆಯಲ್ಲಿ  ಬೇಡದ ವಿಷಯವನ್ನು  ತುಂಬುತ್ತಾನೆ ಎಂದು ಮುಖ್ಯೋಪಾಧ್ಯಾಯರ ಬಳಿ ದೂರು ನೀಡಿದರು.

   ಮುಖ್ಯೋಪಾಧ್ಯಾಯರು, ಈ ಮೇಷ್ಟ್ರನ್ನು ಕರೆದು, ಪಾಠ ಮಾಡುವುದನ್ನು ಬಿಟ್ಟು, ನೀವು ಬೇರೇನೋ ಮಕ್ಕಳ ತಲೆಯಲ್ಲಿ ತುಂಬುತ್ತಿರುವಿರಿ‌ ,ಎಂದು  ನಿಮ್ಮ  ಬಗ್ಗೆ ‌ ನಮಗೆ ದೂರು ಬಂದಿದೆ, ಅದೇನು ಮಾಡುತ್ತಿರುವಿರಿ? ಎಂದು  ಕೇಳಿದರು.

  ಆಗ  ಯುವ ಉಪಾಧ್ಯಾಯ, ಸರ್ ದ್ರೋಣಾಚಾರ್ಯರು ಅರ್ಜುನನಿಗೆ ಬಿಲ್ಲು ವಿದ್ಯೆ ಹೇಳಿಕೊಡುವಾಗ, ಅನೇಕ ಅಸ್ತ್ರಗಳ ಬಗ್ಗೆ ‌ಕೂಡಾ ವಿವರಣೆ ಹೇಳುತ್ತಾರೆ,ಆಗ ಅರ್ಜುನ, ಗುರುಗಳೇ ,ಇಷ್ಟೊಂದು ಅಸ್ತ್ರಗಳನ್ನು ಹೇಗೆ ಉಪಯೋಗಿಸಬೇಕು ಎನ್ನುವುದನ್ನು ಹೇಳುತ್ತಿದ್ದೀರಿ, ಇದರಿಂದ ಏನು ಪ್ರಯೋಜನ, ಅವೆಲ್ಲವೂ ಕೂಡ ಸುಮ್ಮನೆ ನಮ್ಮ ಬತ್ತಳಿಕೆಯಲ್ಲಿರುತ್ತವೆ ಅಷ್ಟೇ. ಜೀವನದಲ್ಲಿ ಅದನ್ನು ಒಮ್ಮೆಯಾದರೂ ಬಳಸುತ್ತೇವೋ ಇಲ್ಲವೋ, ಎನ್ನುತ್ತಾನೆ.
ಆಗ ದ್ರೋಣಾಚಾರ್ಯರು, ಅರ್ಜುನ ಕಲಿಯುವಾಗ ಎಲ್ಲವನ್ನೂ ಕಲಿತುಕೋ, ಕಲಿಯುವುದರಲ್ಲಿ ತಪ್ಪೇನಿದೆ? ಅದರ ಉಪಯೋಗವನ್ನು ಕಾಲವೇ ನಿರ್ಧರಿಸುತ್ತದೆ ಎನ್ನುತ್ತಾರೆ. ಗುರುಗಳ 
ಈ ಮಾತನ್ನು ಅರ್ಜುನ ಮರೆತೇ‌ ಬಿಟ್ಟಿರುತ್ತಾನೆ.

  ಕುರುಕ್ಷೇತ್ರ ರಣರಂಗದಲ್ಲಿ, ಅರ್ಜುನನ ಎಲ್ಲಾ ಬತ್ತಳಿಕೆಗಳೂ ಮುಗಿಯುತ್ತಾ ಬರುತ್ತದೆ. ಸಾಮಾನ್ಯ ಸೈನಿಕನೊಬ್ಬ, ಅವನ ಮೇಲೆ ಎರಗಲು ಬಂದಾಗ, ಬತ್ತಳಿಕೆಯಲ್ಲಿ  ಅತೀ ಸಾಮಾನ್ಯ ಎಂದುಕೊಂಡಿದ್ದ  ಒಂದು ಅಸ್ತೃ ಅವನಿಗೆ ಸಿಗುತ್ತದೆ. ಅದರಿಂದ ಅವನು ಆ ಸೈನಿಕನನ್ನು ಕೊಲ್ಲುತ್ತಾನೆ. ಆಗ ಅವನಿಗೆ ದ್ರೋಣರು ಹೇಳಿದ ಮಾತು ನೆನಪಿಗೆ ಬರುತ್ತದೆ. ಜಗತ್ತಿನಲ್ಲಿ ಯಾವುದೂ ಕೂಡಾ ವ್ಯರ್ಥವಲ್ಲಾ ಎಂಬುದು.

   ಈಗ ನೀವೇ ಹೇಳಿ ಸರ್,  ನಾನು ಈ ವಿದ್ಯಾರ್ಥಿಗಳಿಗೆ, ಹೇಳಿಕೊಡುತ್ತಿರುವ, ಈ ಎಲ್ಲಾ ಸಂಗತಿಗಳು, ಹೇಗೆ ವ್ಯರ್ಥವಾಗುತ್ತದೆ? ಈಗ ಇವರು ಮಕ್ಕಳು, ಭವಿಷ್ಯದಲ್ಲಿ ಇವರೇ ಇನ್ನೇನೋ ಆಗಬಲ್ಲ ಮಹಾಚೇತನಗಳು,   ಅವರು  ಕಲಿತದ್ದು ಈಗ  ಪ್ರಯೋಜನಕ್ಕೆ ಬರದೇ ಇರಬಹುದು. ಕಾಲ ಬಂದಾಗ, ಅವರಿಗೆ  ಇದರಿಂದ ಸಣ್ಣ ಆಸರೆ ಸಿಕ್ಕರೂ, ನಮ್ಮ ಪ್ರಯತ್ನ ಸಾರ್ಥಕವಾಂದತಲ್ಲವೇ? ಎಂದು ಕೇಳಿದರು.

    ಮುಖ್ಯೋಪಾಧ್ಯಾಯರಿಗೆ ತಮ್ಮ  ಇಡೀ ವೃತ್ತಿ ಜೀವನದಲ್ಲಿ ಬಹುದೊಡ್ಡ ಪಾಠವನ್ನು ಕಲಿತಂತಾಗಿ,ಆ ಯುವ ಉಪಾಧ್ಯಾಯನನ್ನು, ಪ್ರೀತಿಯಿಂದ ಅಪ್ಪಿಕೊಳ್ಳುತ್ತಾರೆ.ಅವನ ಬಗ್ಗೆ ಅವರಿಗೆ ಹೆಮ್ಮೆ ಎನಿಸುತ್ತದೆ. ನಿನ್ನ ಪ್ರಯತ್ನವನ್ನು ನೀನು ಹೀಗೇ, ಮುಂದುವರಿಸು, ಎಂದು ಯುವ ಅಧ್ಯಾಪಕರ ಬೆನ್ನು ತಟ್ಟುತ್ತಾರೆ.

     ಕಲಿತೆ ವಿಧ್ಯೆಯಾವುದೂ ಎಂದೂ ಅಪ್ರಯೋಜಕವಲ್ಲ. ಎಂದಾದರು ಒಂದಲ್ಲ ಒಂದು ಉಪಯೋಗಕ್ಕೆ ಬಂದೇ ಬರುತ್ತದೆ. ಮಾಡುವ  ಯಾವುದೇ ಕೆಲಸವಾಗಿರಲಿ, ಅದರಿಂದ ಸಿಗುವ ಪ್ರತಿಫಲವಷ್ಟನ್ನೇ, ಮನದಲ್ಲಿ ಇಟ್ಟುಕೊಂಡು, ಲೆಕ್ಕಾಚಾರದಂತೆ ಕೆಲಸ  ಮಾಡುವ ಬದಲು,ಅದನ್ನು ನಿಷ್ಠೆಯಿಂದ ,ಪ್ರೀತಿಯಿಂದ ಇನ್ನಷ್ಟು ಒಳ್ಳೆಯದಾಗುವಂತೆ ಮಾಡಿದರೆ,ಅದರಿಂದ ಇಂದಲ್ಲ ನಾಳೆ, ಯಾರಿಗಾದರೂ ಉಪಯೋಗವಾಗಬಹುದು ಎಂಬ  ಒಳ್ಳೆಯ ಮನಸ್ಥಿತಿ ಇರಬೇಕು. ಆಗಲೇ ನಾವು ಮಾಡಿದ ಕೆಲಸಕ್ಕೆ ಒಂದು ಸಾರ್ಥಕತೆ, ಘನತೆ  ಇರುವುದು.

 ಕೃಪೆ :ಸುವರ್ಣ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059