ದಿನಕ್ಕೊಂದು ಕಥೆ 1101
*🌻ದಿನಕ್ಕೊಂದು ಕಥೆ🌻*
*ಆಕಸ್ಮಿಕ*
"ಅಮ್ಮಾ, ನಿಂದೆಲ್ಲಾ ಸಾಮಾನು ಪ್ಯಾಕ್ ಆಯ್ತಾ? ಲಗೂ ನಡಿ, ಮತ್ತ ಗಾಡಿ ತಪ್ಪಿದ್ರ ಸಮಸ್ಯೆ ಆಗ್ತದ" ಮಗ ರಾಜುನ ಧ್ವನಿ ಕೇಳಿ ಚೀಲದೊಂದಿಗೆ ಹೊರ ಬಂದ ಅಂಬುಜಮ್ಮ, " ನಾ ತಯಾರಾಗಿ ಭಾಳ ಹೊತ್ತಾತು. ನೀನೇ ಲಗೂ ಬರಲಿಲ್ಲ ನೋಡು". ಅಮ್ಮನ ಮಾತು ಕೇಳಿದ ಮಗ ,"ಆತು ನಡಿ ನಡಿ, ಆಟೋ ತಂದೀನಿ, ಹೋಗೂಣಂತ" ಅಂದ. ರಾಜು ತನ್ನ ಮತ್ತ ತನ್ನಮ್ಮನ ಚೀಲವನ್ನು ಹೊರಗಿಟ್ಟು ಮನೆ ಬಾಗಿಲು ಹಾಕಿ ಕೀಲಿ ಹಾಕಿ ಅಮ್ಮನ ಜೊತೆ ಆಟೋ ಹತ್ತಿದ. ಇನ್ನೂ ಐದು ನಿಮಿಷ ಇರುವಾಗಲೇ ರೈಲು ನಿಲ್ದಾಣಕ್ಕೆ ಬಂದ ಅಮ್ಮ ಮಗ ಅಲ್ಲೇ ಒಂದು ಜಾಗ ಹಿಡಿದು ಗಾಡಿಯ ಹಾದಿ ಕಾಯುತ್ತಾ ಕೂತರು. ಬೆವರು ಒರೆಸುತ್ತ ಅಂಬುಜಮ್ಮ ಮಗನ ಕಡೆ ಹೆಮ್ಮೆಯಿಂದ ನೋಡಿದರು. ತನ್ನ ಎಷ್ಟೋ ದಿನಗಳ ಕನಸು ನನಸು ಮಾಡಲು ಮಗ ತನ್ನನ್ನು ಕಾಶಿ ಯಾತ್ರೆಗೆ ಕರೆದುಕೊಂಡು ಹೊರಟಿದ್ದಾನೆ. ನಾನು ಎಷ್ಟು ಪುಣ್ಯವಂತಳು ಎಂದುಕೊಂಡು ಇಂಥಾ ಮುತ್ತಿನಂಥಾ ಮಗನನ್ನು ಕೊಟ್ಟ ದೇವರಿಗೆ ಮನದಲ್ಲೇ ಕೈ ಮುಗಿದರು.
ಅಮ್ಮ ಮಗ ಇಬ್ಬರೂ ಪವಿತ್ರವಾದ ಕಾಶಿ ಕ್ಷೇತ್ರಕ್ಕೆ ಬಂದಿಳಿದರು. ಮೊದಲು ಛತ್ರಕ್ಕೆ ಹೋಗಿ ಕೈ ಕಾಲು ತೊಳೆದು ಗಂಗಾಸ್ನಾನಕ್ಕಾಗಿ ನದಿಗೆ ಬಂದರು. ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನಕ್ಕೆ ಬಂದರು. ಕಾಶಿಯಲ್ಲಿ ಇಳಿದಾಗಿನಿಂದ ತಾಯಿ ಮಗನ ಮುಖವನ್ನೇ ಪ್ರೀತಿಯಿಂದ ನೋಡುತ್ತಿದ್ದರೆ, ಮಗನ ವಿಚಾರ ಲಹರಿಯೇ ಬೇರೆಯಾಗಿತ್ತು. ಇಲ್ಲಿಯೇ ಗದ್ದಲದ ಸ್ಥಳದಲ್ಲಿ ಅಮ್ಮನನ್ನು ಬಿಟ್ಟು ಊರು ಸೇರಿದರೆ ಸಾಕು ಎನ್ನುವ ಗಡಿಬಿಡಿಯಲ್ಲಿ ಅವನಿದ್ದ. ಕಾಶಿ ವಿಶ್ವನಾಥನ ದರ್ಶನ ಮಾಡಿ ಅಲ್ಲೇ ಕಟ್ಟೆಯ ಮೇಲೆ ಕುಳಿತ ಅಂಬುಜಮ್ಮ ಹಳೆಯ ನೆನಪಿಗೆ ಜಾರಿದರು. ರಾಜು ಚಿಕ್ಕವನಿದ್ದಾಗಲೇ ಗಂಡನನ್ನು ಕಳೆದುಕೊಂಡ ಅಂಬುಜಮ್ಮ ಬಂಧು ಬಳಗ ಯಾರ ಸಹಾಯವೂ ಇಲ್ಲದೇ ಅವರಿವರ ಮನೆ ಅಡುಗೆ ಕೆಲಸ ಮಾಡಿ ಮಗನನ್ನು ಸಾಕಿ ಬೆಳೆಸಿ ವಿದ್ಯಾವಂತನನ್ನಾಗಿ ಮಾಡಿದ್ದರು. ಈಗ ಒಂದು ಒಳ್ಳೆಯ ಕೆಲಸ ಹಿಡಿದ ಮಗ ಅಮ್ಮನ ಅಡುಗೆ ಕೆಲಸ ಬಿಡಿಸಿ ಮನೆಯಲ್ಲಿ ವಿಶ್ರಾಂತ ಜೀವನ ನಡೆಸಲು ಅನುಕೂಲ ಮಾಡಿ ಕೊಟ್ಟಿದ್ದ. ಈಗ ತಮ್ಮ ಬಹುದಿನದ ಕನಸಾದ ಕಾಶಿ ವಿಶ್ವನಾಥನ ದರ್ಶನಕ್ಕೆ ಕರೆದುಕೊಂಡು ಬಂದಿದ್ದ. ಇಂಥಾ ಮಗನನ್ನು ಪಡೆದ ತಾನು ಪುಣ್ಯವಂತೆ ಎಂದು ಅಂಬುಜಮ್ಮ ಬೀಗುತ್ತಿದ್ದರೆ, ಇತ್ತ ಮಗ ರಾಜುವಿನ ವಿಚಾರಧಾರೆಯೇ ಬೇರೆಯಾಗಿತ್ತು. ಮೊದಲಿನಿಂದಲೂ ಬಡತನವನ್ನೇ ಹಾಸಿ ಹೊದ್ದಿದ್ದ ಅವನಿಗೆ ತನ್ನ ಜೊತೆ ಕೆಲಸ ಮಾಡುತ್ತಿದ್ದ ರೇವತಿಯ ಸಿರಿತನ ಕಣ್ಣು ಕುಕ್ಕಿತ್ತು. ಅವಳನ್ನು ಪ್ರೀತಿಸುತ್ತಿದ್ದ ರಾಜು ಈಗ ಈ ವಿಷಯವನ್ನು ಅವಳ ಮುಂದೆ ಹೇಳಲು ಹಿಂಜರಿಯುತ್ತಿದ್ದ. ತನ್ನ ತಾಯಿ ಮತ್ತೊಬ್ಬರ ಮನೆಯಲ್ಲಿ ಅಡುಗೆ ಮಾಡಿ ತನ್ನನ್ನು ಬೆಳೆಸಿದ್ದು. ಅವನಿಗೆ ಮೊದ ಮೊದಲು ಅಮ್ಮನ ಬಗ್ಗೆ ಹೆಮ್ಮೆಯಿದ್ದರೂ ಈಗೀಗ ತಾನು ಅಡಿಗೆಯವಳ ಮಗನೆಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದ. ಅದಕ್ಕೇ ಯಾರಿಗೂ ಹೇಳದೇ ಇಂಥ ಒಂದು ಕೆಟ್ಟ ಸಾಹಸಕ್ಕೆ ಕೈ ಹಾಕಿದ್ದ. ತೀರ್ಥಯಾತ್ರೆಯ ನೆಪ ಮಾಡಿ ಅಮ್ಮನನ್ನು ಕರೆದುಕೊಂಡು ಬಂದು ಅವಳನ್ನು ಇಲ್ಲಿ ಗದ್ದಲದ ನಡುವೆ ಬಿಟ್ಟು ಹೋದರೆ, ಹಂಗೂ ಅಮ್ಮನಿಗೆ ಹಿಂದಿ ಭಾಷೆ ಬರುವುದಿಲ್ಲ, ಅವಳ ಹತ್ತಿರ ದುಡ್ಡೂ ಇಲ್ಲ, ಯಾರಾದರೂ ನೋಡಿದವರು ಒಂದು ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ. ಅಲ್ಲಿಗೆ ನಾನು ರೇವತಿಯನ್ನು ಮದುವೆಯಾಗಿ ಶ್ರೀಮಂತ ಮಾವನ ಮನೆ ಅಳಿಯನಾಗಿ ಇರಬಹುದೆಂದು ಆಲೋಚಿಸಿದ.ದರ್ಶನ ಪಡೆದ ಅಮ್ಮ ಮಗ ಇಬ್ಬರೂ ತಮ್ಮ ತಮ್ಮ ಆಲೋಚನೆಯಲ್ಲಿ ಮಗ್ನರಾಗಿದ್ದಾಗಲೇ ಅಲ್ಲಿ ಒಂದು ಕಡೆ ಪ್ರವಚನ ಕೇಳಿಸಿ, ಅಮ್ಮನ್ನು ಅಲ್ಲಿ ಕರೆದೊಯ್ದ ಮಗ. ತನಗೆ ಹಿಂದಿ ಬರುವುದಿಲ್ಲ, ತನಗೆ ಆ ಪ್ರವಚನ ತಿಳಿಯುವುದಿಲ್ಲವೆಂದರೂ ಬಿಡದೇ ಕರೆದೊಯ್ದು ಕೂಡಿಸಿ, ತಾನೂ ಕುಳಿತ. ಅಮ್ಮನ ಗಮನ ಬೇರೆಡೆಗೆ ಇದ್ದಾಗಲೇ ತಾನು ಅಲ್ಲಿಂದ ಎದ್ದು ಹೋಗಲು ಯೋಚಿಸಿ ಪ್ರವಚನ ಕೇಳುವಂತೆ ನಟಿಸುತ್ತ ಕುಳಿತ. ಕಾಟಾಚಾರಕ್ಕೆ ಪ್ರವಚನ ಕೇಳಲು ಕುಳಿತವನಿಗೆ ಅಲ್ಲಿದ್ದ ಪಂಡಿತರು ತಾಯಿಯ ಕುರಿತು ಪ್ರವಚನ ಹೇಳುತ್ತಿರುವುದು ಕಿವಿಗೆ ಬಿತ್ತು.
ಅದರ ಸಾರಾಂಶ ಹೀಗಿತ್ತು. "ಜಗತ್ತಿನಲ್ಲಿ ದೇವರ ನಂತರದ ಸ್ಥಾನವೇ ತಾಯಿಯದು. ದೇವರು ಎಲ್ಲ ಕಡೆ ಇರಲು ಸಾಧ್ಯವಿಲ್ಲವೆಂದೇ ತಾಯಿಯನ್ನು ನಮಗೆ ಕೊಟ್ಟಿದ್ದಾನೆ. ಒಂಭತ್ತು ತಿಂಗಳು ಹೊತ್ತು, ಹೆತ್ತು, ಸಾಕಿ ಸಲಹುವ ತಾಯಿ ಯಾವತ್ತೂ ಸ್ವಾರ್ಥಿಯಲ್ಲ. ತನ್ನ ಹೊಟ್ಟಿಗಿಲ್ಲದಿದ್ದರೂ ಮಕ್ಕಳ ಹೊಟ್ಟೆ ತುಂಬಿಸುವತ್ತ ಅವಳ ಗಮನ. ಅವಳ ಕೊನೆಗಾಲದಲ್ಲಿ ಅವಳನ್ನು ಸಂತೋಷವಾಗಿ ಸುಖವಾಗಿ ನೋಡಿಕೊಳ್ಳುವುದು ಮಕ್ಕಳಾದ ನಮ್ಮ ಕರ್ತವ್ಯ. ಹೆತ್ತ ತಾಯಿಯ ಋಣವನ್ನು ನಾವು ಎಷ್ಟು ಜನ್ಮ ಎತ್ತಿದರೂ ತೀರಿಸಲಾಗದು".
ಪಂಡಿತರ ಈ ಮಾತು ಕೇಳಿದ ರಾಜುವಿನ ಮನಸ್ಸು ತುಂಬಿ ಬಂತು. ಪಂಡಿತರು ಹೇಳಿದ್ದು ಎಷ್ಟು ನಿಜ. ಹರೆಯದಲ್ಲಿಯೇ ಗಂಡನನ್ನು ಕಳೆದುಕೊಂಡ ಅಮ್ಮ, ನನ್ನನ್ನು ಬೆಳೆಸಲು, ಓದಿಸಲು, ಈ ಸ್ಥಿತಿಗೆ ನನ್ನನ್ನು ತಂದು ನಿಲ್ಲಿಸಲು ಎಷ್ಟು ಕಷ್ಟ ಪಟ್ಟಿದ್ದಾಳೆ. ತನಗೆ ತಿನ್ನಲು ಅರೆ ಹೊಟ್ಟೆಯಾದರೂ ನನಗೆ ಹೊಟ್ಟೆ ತುಂಬ ಊಟ ಹಾಕಿದ್ದಾಳೆ. ತಾನು ಹರಿದ ಸೀರೆಯನ್ನೇ ಮತ್ತೆ ಮತ್ತೆ ಹೊಲಿದು ಉಟ್ಟರೂ ತನಗಾಗಿ ಹೊಸ ಬಟ್ಟೆ ತರಲು ದುಡ್ಡು ಹೊಂದಿಸುತ್ತಿದ್ದಳು. ನನಗಾಗಿ, ನನ್ನ ಭವಿಷ್ಯಕ್ಕಾಗಿ, ನನ್ನ ಖುಷಿ, ಸಂತೋಷಕ್ಕಾಗಿ ಇಷ್ಟೆಲ್ಲ ತ್ಯಾಗ ಮಾಡಿದ ತಾಯಿಯನ್ನು ಬಿಟ್ಟು ನಶ್ವರವಾದ ಶ್ರೀಮಂತಿಕೆಯ ಹಿಂದೆ ಹೊರಟ್ಟಿದ್ದೆನಲ್ಲ ನಾನು!! ನಾನೆಂಥ ಮಗ. ದೇವರು ದೊಡ್ಡವನು, ಸಕಾಲದಲ್ಲಿ ನನ್ನ ಕಣ್ಣು ತೆರೆಸಿದ. ಆಕಸ್ಮಿಕವಾಗಿ ಪ್ರವಚನ ಕೇಳಲು ಬಂದು ದೊಡ್ಡದೊಂದು ಪಾಪ ಮಾಡುವುದನ್ನು ತಪ್ಪಿಸಿಕೊಂಡೆ. ತಿಳಿಯದಿದ್ದರೂ ಮಗ್ನಳಾಗಿ ಪಂಡಿತರನ್ನೇ ನೋಡುತ್ತ ಪ್ರವಚನ ಕೇಳುತ್ತಿದ್ದ ತಾಯಿಯನ್ನು ನೋಡಿ ಪ್ರೀತಿ ಉಕ್ಕಿ ಬಂತು ರಾಜುವಿಗೆ. ತಾಯಿಯೊಡನೆ ಎದ್ದು ಹೊರಗಡೆ ಬಂದು ಇನ್ನೊಮ್ಮೆ ವಿಶ್ವನಾಥನ ದರ್ಶನಕ್ಕೆ ಹೋಗೋಣ ಎಂದ. ಅಂಬುಜಮ್ಮನಿಗೆ ಖುಷಿ. ಹೋಗುವ ಮೊದಲು ಇನ್ನೊಮ್ಮೆ ದೇವರನ್ನು ಕಣ್ತುಂಬ ನೋಡಬಹುದಲ್ಲ ಎಂದು. ಇತ್ತ ರಾಜು ದೇವರ ಮುಂದೆ ಕೈ ಮುಗಿದು ತನ್ನ ಮನಸ್ಸಿನಲ್ಲಿ ಮೂಡಿದ ಈ ಕೆಟ್ಟ ವಿಚಾರಕ್ಕೆ ಪಶ್ಚಾತ್ತಾಪ ಪಟ್ಟು ಕ್ಷಮೆ ಯಾಚಿಸುತ್ತಿದ್ದ.
ಲೇಖಕರು:ಜಯಶ್ರೀ ಕುಲಕರ್ಣಿ
ಮಲಪ್ಪುರಂ, ಕೇರಳ
ಸಂಗ್ರಹ :ವೀರೇಶ್ ಅರಸೀಕೆರೆ.
Comments
Post a Comment