ದಿನಕ್ಕೊಂದು ಕಥೆ 1102

*🌻ದಿನಕ್ಕೊಂದು ಕಥೆ🌻*
*ಆತ್ಮ ಜ್ಞಾನದ ಅನುಭೂತಿ*

ಇದೊಂದು ಜೈನ ಶಾಸ್ತ್ರದಲ್ಲಿನ ಪ್ರಾಚೀನ ಕಥೆ.

  ಮಿಥಿಲಾದ ಮಹಾರಾಜ ನೇಮಿಯು ಯಾವತ್ತೂ  ಯಾವ ಶಾಸ್ತ್ರಗಳನ್ನು ಓದಲಿಲ್ಲ. ಎಂದೂ ಅವನಲ್ಲಿ ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಇರಲಿಲ್ಲ. ಅದೊಂದು ಕೊರತೆಯೆಂದು ಕೂಡ ಅವನಿಗೆ ಅನಿಸಿರಲೇ ಇಲ್ಲ.

   ಅವನು ಸ್ವಲ್ಪ  ಮಧ್ಯವಯಸ್ಕನಾಗುತ್ತಾ ‌ಬಂದ. ಒಂದು ಸಲ ಅವನಿಗೆ ಜೋರಾಗಿ ಜ್ವರ ಬಂತು. ಭಯಂಕರ ಜ್ವರದ ಯಾತನೆಯಲ್ಲಿ ನರಳುತ್ತಾ ಮಲಗಿದ್ದನು. ಅವನ ರಾಣಿಯರು  ಜ್ವರದ ತಾಪದಿಂದ ಅವನ ಶರೀರವನ್ನು ತಂಪಾಗಿಸಲಿಕ್ಕಾಗಿ, ಗಂಧ ಮತ್ತು ಕೇಸರಿಯ ಲೇಪ ಮಾಡ ತೊಡಗಿದರು. ರಾಣಿಯರ ಕೈಯಲ್ಲಿ ಬಂಗಾರದ ಬಳೆಗಳಿದ್ದವು. ಬಳೆಗಳಲ್ಲಿ ಮುತ್ತು ರತ್ನಗಳನ್ನು ಅಂಟಿಸಲಾಗಿತ್ತು. ಇವನಿಗೆ ಗಂಧ  ಲೇಪನ ಮಾಡುವ ಸಮಯದಲ್ಲಿ ಅವರ ಬಳೆಗಳು ಬಹಳವಾಗಿ ಸದ್ದು ಮಾಡುತ್ತಿದ್ದವು. ರಾಜನಿಗೆ ಆ ಬಳೆಗಳ ಸದ್ದಿನಿಂದ ವಿಪರೀತ ಕಿರಿ ಕಿರಿ ಯಾಗುತ್ತಿತ್ತು. ತೆಗೆದುಹಾಕಿ ಈ ಬಳೆಗಳನ್ನು, ನನಗೆ ಇವುಗಳ ಶಬ್ದವನ್ನು ತಡೆದುಕೊಳ್ಳಲಾಗುತ್ತಿಲ್ಲ ಎಂದು ಕಿರುಚಿದ.

     ‌ ಆ  ರಾಣಿಯರು, ಮಂಗಳಸೂತ್ರದ ಕಲ್ಪನೆಯಿಂದ ಬಳೆಯಿಲ್ಲದೆ ಬರೀ ಕೈನಲ್ಲಿ ಇರಬಾರದು ಎಂದುಕೊಂಡು, ಕೈನಲ್ಲಿ ಒಂದೊಂದು ಬಳೆಗಳನ್ನು ಇಟ್ಟುಕೊಂಡು ಉಳಿದಿದ್ದನ್ನು ತೆಗೆದು ಇಟ್ಟರು. ಬಳೆಯ ಸದ್ದೇನೊ ನಿಂತಿತು,  ಶ್ರೀಗಂಧದ ಲೇಪನ ನಡೆಯುತ್ತಿತ್ತು.

  ‌ ಈ ಸಮಯದಲ್ಲಿ ನೇಮಿರಾಜನ ಒಳಗೆ ಒಂದು ಮಹಾ ಕ್ರಾಂತಿ ಘಟಿಸಿಬಿಟ್ಟಿತು. ಹತ್ತು ಬಳೆಗಳಿದ್ದರೆ, ಸದ್ದು ಮಾಡುತ್ತವೆ, ಒಂದೇ ಬಳೆ ಇದ್ದರೆ ಆಗ ಶಬ್ದಮಾಡುವುದಿಲ್ಲ,ಆಗ  ಶಾಂತಿ ಎಂದು ಅವನಿಗೆ ಗೊತ್ತಾಯಿತು. ಹೀಗೆ ಯೋಚಿಸುತ್ತಾ ಹೋದ ಅವನಿಗೆ, ಒಳಗೆ ಕಾಮ ಕ್ರೋಧ  ಮದ  ಮತ್ಸರ  ಹೀಗೆ ‌ಅನೇಕ ಆಸೆಗಳಿದ್ದರೆ  ವಿಪರೀತವಾಗಿ ಗಲಾಟೆ ಮಾಡುತ್ತವೆ ,ಒಂದೇ ಇದ್ದರೆ ಆಗ ಶಾಂತಿ. ಈ ರಾಜ ಎಂದೂ ಯಾವ  ಶಾಸ್ತ್ರವನ್ನು ಓದಿರಲಿಲ್ಲ, ಯಾವತ್ತೂ ಅಧ್ಯಾತ್ಮದಲ್ಲಿ ಕಿಂಚಿತ್ತೂ ಆಸಕ್ತಿಯನ್ನೂ ತೋರಿಸಿರಲಿಲ್ಲ. ಇದ್ದಕ್ಕಿದ್ದಂತೆ ಎದ್ದು ಕುಳಿತುಬಿಟ್ಟ.

    ತನ್ನ ರಾಣಿಯರಿಗೆ, ನನ್ನನ್ನು ಹೋಗಲು ಬಿಡಿ, ಇದು ಜ್ವರ ಅಲ್ಲ. ಇದು ನನ್ನ ಜೀವನದಲ್ಲಿ ಕ್ರಾಂತಿಯ ಒಂದು ಸಂದೇಶ . ಇದು ಜಾಗೃತಿಯನ್ನು ಹೊತ್ತು  ತಂದಿದೆ, ಇದು ಆ ಭಗವಂತನ  ನನ್ನ ಮೇಲಿನ ಅನುಕಂಪ, ಎಂದು ಹೇಳಿ ಎದ್ದು ಹೊರಟ.

     ರಾಣಿಯರು, ಅವನನ್ನು ಬಹಳವಾಗಿ ತಡೆಯಲು ಪ್ರಯತ್ನಿಸಿದರು. ಅವರಿಗನ್ನಿಸಿತು, ಜ್ವರದ ತೀವ್ರತೆಯಿಂದ, ಅವನಿಗೆ ಏನಾದರೂ ಬುದ್ಧಿಬ್ರಮಣೆ ಆಗಿರ ಬಹುದೇ? ಎಂದು. ಏಕೆಂದರೆ ಅವನೆಂದೂ, ಈ ರೀತಿಯ ಮಾತನ್ನೇ ಆಡುತ್ತಿರಲಿಲ್ಲ, ಅವರಿಗೆ ಅವನ ಭೋಗಿ ಜೀವನದ  ರೂಪ ಮಾತ್ರ ಗೊತ್ತಿತ್ತು. ಯೋಗಿಗಳನ್ನು ಅವನು ತನ್ನ ಬಳಿ ಸುಳಿಯಲು ಕೂಡಾ ಬಿಡುತ್ತಿರಲಿಲ್ಲ. ಅವನ ಜೀವನದಲ್ಲಿ ಇದ್ದದ್ದು ಬರೀ ಭೋಗವೇ. ಏನಾದರೂ ಸನ್ನಿಪಾತ ಆಗಿರಬಹುದು , ಎಂದು ಹೆದರಿ ಅವರು ಅವನನ್ನು ತಡೆಯುತ್ತಿದ್ದರು.

 ‌‌ ರಾಜ ಹೇಳಿದ, ಯಾರು ಹೆದರಬೇಡಿ, ನನಗೇನು ಬುದ್ಧಿಬ್ರಮಣೆಯಾಗಿಲ್ಲ. ಅದು ಮೊದಲು ಇತ್ತು, ಈಗ  ಅದು ಬಿಟ್ಟು ಹೋಯಿತು. ಎಲ್ಲಾ ನಿಮ್ಮ ಬಳೆಗಳ ಕೃಪೆಯಿಂದ, ಎಂಥಾ ಜಾಗದಿಂದ ಪರಮಾತ್ಮ  ನನಗೆ ಬೆಳಕನ್ನು ತೋರಿಸಿಬಿಟ್ಟ, ಅವನ ಲೀಲೆ, ಇಂಥದ್ದೆಂದು ಹೇಳಲಾಗುವುದಿಲ್ಲ. ನೀವು ಜಾಸ್ತಿ ಬಳೆಗಳನ್ನು ತೊಟ್ಟಿದ್ದೀರಿ, ಅವು  ಬಹಳವಾಗಿ ಶಬ್ದ ಮಾಡುತ್ತಿದ್ದವು, ಯಾವಾಗ ಒಂದು ಮಾತ್ರ ಉಳಿಯಿತೋ, ಆಗ ಶಬ್ದವೆಲ್ಲ ನಿಂತಿತು,  ಶಾಂತಿಯ ಅನುಭೂತಿ ಆಯಿತು .ಅದರಿಂದ ನನಗೆ ಒಂದು ಭೋಧೆ ಆಯಿತು.

  ಎಲ್ಲಿಯವರೆಗೆ ಆಕಾಂಕ್ಷೆಗಳು ಇರುತ್ತವೋ ಅಲ್ಲಿಯವರೆಗೆ ಗಲಾಟೆ ಕೂಡ ಇರುತ್ತದೆ, ಯಾವಾಗ ಒಂದೇ ಆಯಿತೋ,  ಗಲಾಟೆಗಳೆಲ್ಲ ನಿಂತು ಮೌನ ‌ಶಾಂತಿ ಆವರಿಸುತ್ತದೆ.

    ನೇಮಿ , ಎದ್ದು ನಿಂತ .ಜ್ವರ ಬಿಟ್ಟು ಹೋಯಿತು ಕಾಡಿನ ಕಡೆಗೆ ಹೊರಟ. ಇವನು ಒಂದೂ ಶಾಸ್ತ್ರವನ್ನು ಓದಲಿಲ್ಲ, ‌ಅಥವಾ ಶಾಸ್ತ್ರಗಳ ಪರಿಚಯವೂ ಅವನಿಗೆ ಇಲ್ಲ. 

 ,ಶಾಸ್ತ್ರದ ಪ್ರಕಾರ  ಜೀವನದಲ್ಲಿ ಜಾಗರೂಕತೆಯ ಅಗತ್ಯ ಇದ್ದೇ ಇದೆ. ಜಾಗರೂಕರಾಗಬೇಕೆಂದಿದ್ದರೆ ಆಗ ಎಲ್ಲಿಂದಲಾದರೂ ಒಂದು ಸೂಚನೆ ಸಿಕ್ಕೇ ಬಿಡುತ್ತದೆ, ಇವನಿಗೆ ಬಳೆಗಳಿಂದ ಸನ್ಯಾಸದ ಸೂಚನೆ ಸಿಕ್ಕಿ ಬಿಟ್ಟಿತು.

  ಇದನ್ನು ಯಾರು ಎಲ್ಲಿಯೂ , ಹೇಳಿಲ್ಲ ,ಕೇಳಿಲ್ಲ. ಹೀಗೆ ಬಳೆಗಳಿಂದ,ಜಾಗೃತವಾಗಬಹುದು ಎಂದು.  ಆದರೆ ‌ಭಗವಂತನ ಇಚ್ಛೆ ಇದ್ದರೆ,ಭೋದೆಯು ಯಾವುದೇ ಕ್ಷಣದಲ್ಲಿ, ಎಲ್ಲಿ ಬೇಕಾದರೂ, ಯಾವುದೇ  ರೂಪದಲ್ಲೂ ಕೂಡಾ ಆಗಬಹುದು . ಅದಕ್ಕೆ ಆಧ್ಯಾತ್ಮಿಕತೆಯ ಬಗ್ಗೆ ಅಧ್ಯಯನ ‌ಮಾಡಬೇಕೆಂದಾಗಲಿ, ಶಾಸ್ತ್ರಗಳನ್ನು ಓದಬೇಕೆಂದಾಗಲಿ, ಕಟ್ಟುಪಾಡುಗಳನ್ನು ಪಾಲಿಸಬೇಕೆಂದಾಗಲಿ  ಇಲ್ಲ . ಆದರೆ ಯಾರೇ  ಆಗಲಿ ಜಾಗರೂಕತೆಯಿಂದ ಇದ್ದ ಕ್ಷಣದಲ್ಲಿ, ಮೌನದ  ಮಹತ್ವದ ಅರಿವಾದಾಗ ,ಯಾವುದೇ ಕ್ಷಣದಲ್ಲಿ, ಯಾವುದೇ ಘಟನೆಯು ಕೂಡ  ಸಂಭವಿಸಬಹುದು.ಆಗ ಸಂಭುದತ್ವಕ್ಕೆ , ಉಪಲಬ್ಧವಾಗಬಹುದು. 

   ನಾವು ನಿದ್ದಿಸುತ್ತಿರುವಾಗ ಅಲರಾಂ ಗಡಿಯಾರ ಎಚ್ಚರಿಸುತ್ತದೆ ,ಪಕ್ಷಿಗಳ ಚಿಲಿಪಿಲಿ ಎಬ್ಬಿಸುತ್ತದೆ ,‌ ದಾರಿಯಲ್ಲಿ ‌ಹೋಗುವವರ ವಾಹನಗಳ ಧ್ವನಿ, ನಿದ್ರೆಯಿಂದ ಎಚ್ಚರಿಸುತ್ತದೆ ,ಅಷ್ಟೇ.   ಅದೇ ತರಹ  ಯಾರಾದರೂ  ನಮ್ಮನ್ನು ಜಾಗೃತಗೊಳಿಸಲಿ  ಎಂದು ನಾವು ಕಾದಾಗ ಜಾಗೃತರಾಗಲು ಸಾಧ್ಯವಿಲ್ಲ .  ಆದರೆ  ಜಾಗೃತ ರಾಗುವ ಕಲ್ಪನೆ ಕೂಡಾ ನಮ್ಮಲ್ಲಿ ಇಲ್ಲದೆ,ಯಾವುದೋ ಒಂದು ಕ್ಷಣ ನಮ್ಮಲ್ಲಿ ಜಾಗೃತ ಭಾವವನ್ನು  ಮೂಡಿಸಬಹುದು.ಒಂದು ಸಣ್ಣ ವಿಷಯವೂ ಕೂಡ  ನಮ್ಮಲ್ಲಿ ಏನೋ ಒಂದು ಘಟಿಸಲು ಕಾರಣವಾಗಬಹುದು.  
   ಇದನ್ನೇ ಆ ಭಗವಂತನ ಇಚ್ಛೆ ,ಅವನ ಕೃಪೆ ಎಂದು ಹೇಳುವುದು.

ಕೃಪೆ:ಸುವರ್ಣಾ ಮೂರ್ತಿ.
ಸಂಗ್ರಹ:ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059