ದಿನಕ್ಕೊಂದು ಕಥೆ 1103
*🌻ದಿನಕ್ಕೊಂದು ಕಥೆ🌻*
*ಒಬ್ಬರಿಗೊಬ್ಬರ ಅವಹೇಳನ ಚಪ್ಪಡಿ ಎಳೆದುಕೊಂಡಂತೆ*
ಅದೊಂದು ದೊಡ್ಡ ಗ್ರಾಮ. ಅಲ್ಲಿ ಅನೇಕಾನೇಕ ವಿದ್ವಾಂಸರಗಳು, ಪಂಡಿತೋತ್ತಮರಿದ್ದರು. ಆಸುಪಾಸಿನ ಊರವರಿಗೆಲ್ಲ ಪಂಡಿತೋತ್ತಮರ ಊರು ಎಂದೇ ಪರಿಚಿತವಾಗಿತ್ತು. ಆ ಊರಿನ ಹತ್ತಿರ ಭಾರಿ ಶ್ರೀಮಂತ ಸೇಟು ಒಬ್ಬನಿದ್ದನು. ಬುದ್ಧಿವಂತ, ಹಾಗೂ ಧರ್ಮಿಷ್ಠನಾಗಿದ್ದನು. ಒಮ್ಮೆ ಅದೇ ಊರಿನ ಇಬ್ಬರು ವಿದ್ವಾಂಸರನ್ನು ತನ್ನ ಮನೆಗೆ ಆಹ್ವಾನಿಸಿದನು. ವಿದ್ವಾಂಸರಿಬ್ಬರು ಶ್ರೀಮಂತ ಸೇಟು ಬೇಕಾದಷ್ಟು ಕೊಡುತ್ತಾನೆಂಬ ಆಸೆಯಿಂದ ಅವನ ಮನೆಗೆ ಬಂದರು. ವಿದ್ವಾಂಸರು ಮನೆಗೆ ಬರುತ್ತಿದ್ದಂತೆ ಸೇಟು ಆದರದಿಂದ ಸ್ವಾಗತಿಸಿ, ಪ್ರಯಾಣ ಸುಖಕರವಾಗಿತ್ತೆ ಎಂದು ವಿಚಾರಿಸಿದನು. ಒಬ್ಬ ಪಂಡಿತ ತುಂಬಾ ಆರಾಮವಾಗಿ ಬಂದೆವು, ವಿಚಾರಿಸಿದ ನಿಮ್ಮ ಔದಾರ್ಯ ಬಹಳ ದೊಡ್ಡತನ ಎಂದನು. ಸೇಟು ಇಬ್ಬರಿಗೂ ಬಾಯಾರಿಕೆಗೆ ಆಸರೆ ಕೊಟ್ಟು, ನಂತರ ಬಿಸಿಲಲ್ಲಿ ಬಂದಿದ್ದೀರಿ ಸ್ನಾನ ಮಾಡಿ. ಭೋಜನದ ವ್ಯವಸ್ಥೆ ಮಾಡಿಸುತ್ತೇನೆ ಎಂದನು. ಒಬ್ಬ ಪಂಡಿತ ಎದ್ದು ಸ್ನಾನಕ್ಕೆ ಹೋದನು, ಇನ್ನೊಬ್ಬ ಪಂಡಿತ ಅವನು ಬಂದ ನಂತರ ಹೋಗಲು ಅಲ್ಲೇ ಕುಳಿತಿದ್ದನು.
ಆ ಸಮಯಕ್ಕೆ ಅಲ್ಲಿಗೆ ಬಂದ ಸೇಟು ಊರಿನ ಕಡೆಯೆಲ್ಲಾ ಚೆನ್ನಾಗಿದೆಯಾ ಎಂದು ವಿಚಾರಿಸುತ್ತಾ ,ನಿಮ್ಮ ಜೊತೆ ಬಂದಿರುವ ಪಂಡಿತರು ಬಹು ದೊಡ್ಡ ವಿದ್ವಾಂಸರೆಂದು ಸುತ್ತಮುತ್ತ ಹಳ್ಳಿಯವರು ಹೇಳುವುದನ್ನು ಕೇಳಿದ್ದೇನೆ ನನಗೆ ತುಂಬಾ ಸಂತೋಷವಾಯಿತು ಎಂದನು. ಇನ್ನೊಬ್ಬ ಪಂಡಿತನ ಹೊಗಳಿಕೆ ಕೇಳಿದ ಪಂಡಿತನಿಗೆ ಸಹಿಸಿಕೊಳ್ಳಲು ಆಗಲಿಲ್ಲ. ತಕ್ಷಣ ಮುಖ ಹಿಂಡಿಕೊಂಡು ಇಲ್ಲ ನೀವು ತಪ್ಪು ತಿಳಿದಿದ್ದೀರಿ ಅವನಿಗೆ ಪಾಂಡಿತ್ಯವೇ ಗೊತ್ತಿಲ್ಲ ಎಮ್ಮೆಜಾತಿ
ನಾಲಿಗೆ ದಪ್ಪ. ಇನ್ನು ಅವನೆಂಥ ವಿದ್ವಾಂಸ ಎಂದನು. ಇದನ್ನು ಕೇಳಿ ಸೇಟು ಸುಮ್ಮನಾದನು. ಅಷ್ಟು ಹೊತ್ತಿಗೆ ಸ್ನಾನಕ್ಕೆ ಹೋದ ಮೊದಲನೇ ವಿದ್ವಾಂಸ ಸ್ನಾನ ಮುಗಿಸಿ ಬಂದನು. ಈಗ ಎರಡನೇ ವಿದ್ವಾಂಸ ಸ್ನಾನಕ್ಕೆ ಹೋದನು. ಸ್ನಾನ ಮುಗಿಸಿ ಬಂದಿದ್ದ ವಿದ್ವಾಂಸನನ್ನು, ಸ್ನಾನದ ವ್ಯವಸ್ಥೆ ಚೆನ್ನಾಗಿತ್ತೆ ಎಂದು ಸೇಟು ವಿಚಾರಿಸುತ್ತಾ ಅದು-ಇದು ಮಾತನಾಡಿ, ಮೊದಲ ಪಂಡಿತನನ್ನು ಕೇಳಿದಂತೆ, ನಿಮ್ಮ ಜೊತೆ ಬಂದಿದ್ದಾರಲ್ಲ ಅವರು ಭಾರಿ ವಿದ್ವಾಂಸರೆಂದು ಸುತ್ತಮುತ್ತ ಜನರು ಹೇಳುವುದನ್ನು ಕೇಳಿದ್ದೇನೆ ಅದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು ಎಂದನು. ಜೊತೆಗಾರ ಪಂಡಿತನ ಹೊಗಳಿಕೆಯನ್ನು ಕೇಳಿ, ಇರಿಸು ಮೂರುಸಾಗಿ, ಇಲ್ಲ ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟಿದ್ದಾರೆ. ಅವನೇನು ಮಹಾ ವಿದ್ವಾಂಸನೇನು ಅಲ್ಲ. ಒಳ್ಳೆ ಕತ್ತೆಯ ತರಹ ಅರಚುತ್ತಾನೆ ಅಷ್ಟೇ, ಅವನಿಗ್ಯಾವ ಪಾಂಡಿತ್ಯವೂ ತಿಳಿಯದು. ಇನ್ನು ವಿದ್ವಾಂಸ ನಾಗುವುದು ಎಲ್ಲಿಂದ ಬಂತು ಎಂದನು.
ಸೇಟು ಇದಕ್ಕೂ ಏನು ಹೇಳಲಿಲ್ಲ.
ಅಷ್ಟು ಹೊತ್ತಿಗೆ ಇನ್ನೊಬ್ಬ ಪಂಡಿತನೂ ಸ್ನಾನ ಮುಗಿಸಿ ಬಂದನು. ಭೋಜನದ ಸಮಯವು ಆಗಿತ್ತು. ಎದ್ದೇಳಿ ಪಂಡಿತರೆ ಭೋಜನಕ್ಕೆ ಬನ್ನಿ ಎಂದು ಗೌರವದಿಂದ ಸೇಟು ಸ್ವಾಗತಿಸಿದನು. ಬಹಳ ಖುಷಿಯಿಂದ ಪಂಡಿತರಿದ್ದರು ಭೋಜನಕ್ಕೆ ಬಂದು ಕುಳಿತರು. ಸೇಟು ಅಡುಗೆಯವನಿಗೆ ಭೋಜನ ತರಲು ಹೇಳಿದನು. ಅಡಿಗೆಯವನು ಎರಡು ಬೆಳ್ಳಿತಟ್ಟೆ ಗಳನ್ನು ತಂದು ಪಂಡಿತರ ಮುಂದೆ ಇಟ್ಟನು. ಪಂಡಿತರು ನೋಡಿ ಗಾಬರಿಯಾದರು. ಏಕೆಂದರೆ ಒಂದು ತಟ್ಟೆಯಲ್ಲಿ 'ಹುಲ್ಲು', ಇನ್ನೊಂದು ತಟ್ಟೆಯಲ್ಲಿ 'ಬೂಸಾ' ಇತ್ತು. ಇದನ್ನು ಕಂಡು ಪಂಡಿತರಿಬ್ಬರು ಕೆಂಡಾಮಂಡಲವಾದರು, ಇಬ್ಬರೂ ಜೋರಾಗಿ ಏನು ಸೇಟ್ಜೀ ನಮ್ಮನ್ನು ಕರೆದು ಅವಮಾನ ಮಾಡುತ್ತಿರುವೆಯಾ? ನಿನಗೆ ಇದು ಶೋಭೆ ತರುವುದಿಲ್ಲ. ನಮ್ಮಂತಹ ಸತ್ಪಾತ್ರ ಪಂಡಿತರನ್ನು ಈ ರೀತಿ ಅವಮಾನ ಮಾಡಬೇಕೆಂದು ಕರೆದೆಯಾ? ನಾವು ಸಹಿಸುವುದಿಲ್ಲ ಎಂದು ಜೋರಾಗಿ ಕೂಗಿದರು. ಸೇಟು ವಿನಯದಿಂದ ಕೈಮುಗಿದು ನನ್ನನ್ನು ಕ್ಷಮಿಸಿ ಪಂಡಿತರೆ, ನಾನು ನಿಮಗೆ ಅವಮಾನ ಮಾಡುತ್ತಿಲ್ಲ ನಿಮ್ಮಲ್ಲಿ ಒಬ್ಬರಿಗೊಬ್ಬರನ್ನು ದೊಡ್ಡ ವಿದ್ವಾಂಸರಲ್ಲವೇ ಎಂದು ಕೇಳಿದಾಗ, ನೀವುಗಳೇ ಒಬ್ಬರನ್ನೊಬ್ಬರು ಎಮ್ಮೆ ಹಾಗೂ ಕತ್ತೆ ಎಂದು ಪರಿಚಯ ಮಾಡಿ ಕೊಂಡಿಲ್ಲವೇ? ಹೀಗಿರುವಾಗ, ಎಮ್ಮೆ, ಕತ್ತೆಗಳಿಗೆ ಹುಲ್ಲು, ಬೂಸಾ ಇಡದೆ ಸುಗ್ರಾಸ ಭೋಜನವನ್ನು ಕೊಡಲು ಸಾಧ್ಯವೇ ನೀವೇ ಹೇಳಿ ಇನ್ನೇನು ಕೊಡಬೇಕು ಹೇಳಿ ಇದರಲ್ಲಿ ನನ್ನದೇನು ತಪ್ಪಿದೆ. ನಾನು ನಿಮ್ಮ ಸುತ್ತಮುತ್ತ ಗ್ರಾಮಗಳಲ್ಲೆಲ್ಲಾ ವಿಚಾರಿಸಿ ನೀವಿಬ್ಬರೂ ಬಹಳ ದೊಡ್ಡ ವಿದ್ವಾಂಸರೆಂದು ಎಲ್ಲಾ ಕಡೆಗಳಿಂದಲೂ ಕೇಳಿ ತಿಳಿದು ನಿಮ್ಮನ್ನು ಸತ್ಕಾರಮಾಡಲು ಆಹ್ವಾನಿಸಿದ್ದೆ. ಆದರೆ ನೀವಿಬ್ಬರೂ ನಿಮ್ಮ ಬಗ್ಗೆ ನೀವುಗಳು ಏನೂಂತ ಹೇಳಿ ಕೊಂಡಿರಿ ಆದ್ದರಿಂದ ನಿಮ್ಮಿಬ್ಬರಿಗೆ ಈ ತರಹದ ಭೋಜನ ನೀಡಿದೆ ಎಂದನು.
ಇದನ್ನು ಕೇಳಿದ ಪಂಡಿತರಿಗೆ ನಾಚಿಕೆಯಾಯಿತು. ಅವರು ತಮ್ಮನ್ನು ಕ್ಷಮಿಸ ಬೇಕೆಂದು ಕೇಳಿಕೊಂಡು, ಮತ್ತು ಯೋಚಿಸಿ, ಪಶ್ಚಾತಾಪದಿಂದ ಹೇಳಿದರು. ವಾಸ್ತವವಾಗಿ ನಮ್ಮ ಜೊತೆಯಲ್ಲಿರುವವರು ಬೆಳೆಯುವುದನ್ನು ನಮ್ಮಿಂದ ನೋಡಲಿಕ್ಕಾಗುವುದಿಲ್ಲವೋ, ಆವಾಗ ನಾವೂ ಬೆಳೆಯುವುದಿಲ್ಲ. ನಾವು ನಮ್ಮನ್ನು ಬೆಳೆಸಿಕೊಳ್ಳಬೇಕೆಂದರೆ ನಮ್ಮ ಜೊತೆಯಲ್ಲಿ ಇರುವವರನ್ನು ಬೆಳೆಸಬೇಕು ಆಗ ಮಾತ್ರ ನಮ್ಮ ಪ್ರತಿಷ್ಠೆ, ಶ್ರೇಷ್ಠತೆ, ಹೆಚ್ಚುತ್ತದೆ. ಇದನ್ನು ಎಲ್ಲರೂ ಅರಿಯಬೇಕು ಎಂದು ಹೇಳಿ ನಾಚಿಕೆಯಿಂದ ಕುಗ್ಗಿ ಹೋದರು. ಸೇಟುಗೆ ಕೈಮುಗಿದು ನಾವು ಈ ತರಹ ಒಬ್ಬರಿಗೊಬ್ಬರನ್ನು ದೂಷಿಸಿ ಕೊಳ್ಳಬಾರದಿತ್ತು ನಮ್ಮನ್ನು ನಾವೇ ಕಡೆಗಣಿಸಿ ಕೊಂಡೆವು. ಅನವಶ್ಯಕವಾಗಿ ನಿಮ್ಮ ಮೇಲೆ ಕೋಪ ಮಾಡಿಕೊಂಡಿದ್ದಕ್ಕೆ ನಮ್ಮನ್ನು ಕ್ಷಮಿಸಿ ಎಂದು ಕೇಳಿದರು. ಸೇಟು ವಿದ್ವಾಂಸರಿಗೆ ಕೈಮುಗಿದು ನನ್ನನ್ನು ನೀವು ಕ್ಷಮಿಸಬೇಕು. ಏಕೆಂದರೆ ನಿಮ್ಮನ್ನು ಅತಿಥಿಸತ್ಕಾರೆಂದು ಕರೆದು, ಒಬ್ಬರಿಗೆ ಗೊತ್ತಿಲ್ಲದಂತೆ ಇನ್ನೊಬ್ಬರನ್ನು ಪ್ರಶ್ನೆ ಕೇಳಿ ನಿಮ್ಮನ್ನು ಪರೀಕ್ಷಿಸಿ ಅವಮಾನ ಮಾಡಿದ ನನ್ನಿಂದಲೂ ದೊಡ್ಡ ತಪ್ಪಾಗಿದೆ. ವಿದ್ವಾಂಸರನ್ನು ಪರೀಕ್ಷಿಸಿದ ನನ್ನ ತಪ್ಪನ್ನು ಮನ್ನಿಸಿ ಎಂದು ಬೇಡಿಕೊಂಡು ಅವರಿಗೆ ಭೂರಿ ಭೋಜನವನ್ನೆ ಮಾಡಿಸಿ ಶಾಲು ಹೊದಿಸಿ ಸನ್ಮಾನ ಮಾಡಿ, ಫಲತಾಂಬೂಲ ಸಹಿತ ಕಾಣಿಕೆ ಕೊಟ್ಟು ಗೌರವದಿಂದ ಕಳಿಸಿಕೊಟ್ಟನು.
ಅಹಿಂಸಾ ಸತ್ಯ ಮಾಸ್ತೇಯಂ, ಶೌಚಮಿಂದ್ರಿಯ ನಿಗ್ರಹ !
ದಾನಂ ದಮೋ ದಯಾ ಕ್ಷಾಂತಿ, ಸರ್ವೇಶಾಂ ಧರ್ಮ ಸಾಧನಂ!
ಅಹಿಂಸೆ, ಸತ್ಯತೆ, ಅಪಹರಿಸದಿರುವುದು, ಶುಚಿತ್ವ, ಇಂದ್ರಿಯ ನಿಗ್ರಹ,
ದಾನ, ಮನೋನಿಗ್ರಹ, ದಯೆ, ತಾಳ್ಮೆ, ಎಲ್ಲರಿಗೂ ಧರ್ಮದ ಸಾಧನಗಳು!
ಬರಹ:- ಆಶಾ ನಾಗಭೂಷಣ.
ಸಂಗ್ರಹ:- ವೀರೇಶ್ ಅರಸೀಕೆರೆ.
Comments
Post a Comment